ಉತ್ತರ ಪ್ರದೇಶದ ಕಾನ್ಪುರದ ದೇವಸ್ಥಾನವೊಂದಕ್ಕೆ ಸಮಾಜವಾದಿ ಪಕ್ಷದ ಮುಸ್ಲಿಂ ನಾಯಕಿ ಭೇಟಿ ನೀಡಿದ ಬಳಿಕ, ಅಲ್ಲಿನ ಅರ್ಚಕರು ಸೇರಿ ಶುದ್ದೀಕರಣ ನಡೆಸಿದ್ದಾರೆ ಎಂದು ವರದಿಯಾಗಿದೆ.
ನವೆಂಬರ್ 20ರಂದು ಉಪಚುನಾವಣೆ ನಡೆಯಲಿರುವ ಉತ್ತರ ಪ್ರದೇಶದ ಸಿಶಾಮೌ ಕ್ಷೇತ್ರಕ್ಕೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿರುವ ನಸೀಮ್ ಸೋಲಂಕಿ, ಕಳೆದ ಶನಿವಾರ ದೀಪಾವಳಿಯಂದು ಪ್ರಚಾರದ ಭಾಗವಾಗಿ ಕಾನ್ಪುರದ ವನ-ಖಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, ಸಂಘ ಪರಿವಾರ ಮತ್ತು ದೇವಸ್ಥಾನದ ಅರ್ಚಕರು, 1 ಸಾವಿರ ಲೀಟರ್ ಗಂಗಾಜಲ ಬಳಸಿ ದೇವಸ್ಥಾವನ್ನು ಶುದ್ದೀಕರಣ ಮಾಡಿದ್ದಾರೆ ಎಂದು ವರದಿಯಾಗಿದೆ.
Kanpur, Uttar Pradesh: SP Candidate from Sishamau Assembly constituency Naseem Solanki performed Jalabhishek and Deepdaan at a temple on Diwali. Following this, the temple was later purified with Gangajal by devotees and committee members. pic.twitter.com/6RI63gTOJC
— IANS (@ians_india) November 2, 2024
ಈ ಕುರಿತು ಪ್ರತಿಕ್ರಿಯಿಸಿರುವ ನಸೀಮ್ ಸೋಲಂಕಿ “ನನ್ನ ಹಿಂದೂ ಬೆಂಬಲಿಗರ ಭಾವನೆಗಳನ್ನು ಗೌರವಿಸಿ ನಾನು ವನ-ಖಂಡೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೆ. ದೇವರು ಯಾರ ಸ್ವತ್ತೂ ಅಲ್ಲ; ಯಾರು ಬೇಕಾದರು ಆಶಿರ್ವಾದ ಪಡೆಯಬಹುದು” ಎಂದಿದ್ದಾರೆ.
ದೇವಸ್ಥಾನದ ಮುಖ್ಯ ಅರ್ಚಕ ರಾಮ್ ನರೇಶ್ ಮಿಶ್ರಾ ಮಾತನಾಡಿ, “ನಸೀಮ್ ಸೋಲಂಕಿ ಭೇಟಿ ನೀಡಿದ್ದಕ್ಕೆ 1 ಸಾವಿರ ಲೀಟರ್ ಗಂಗಾಜಲ ಬಳಸಿ ದೇವಸ್ಥಾನ ಶುಚಿಗೊಳಿಸಿದ್ದೇವೆ. ಏಕೆಂದರೆ, ಆಕೆಯ ನಡವಳಿಕೆಯನ್ನು ಹಿಂದೂಗಳು ಇಷ್ಟಪಡುವುದಿಲ್ಲ” ಎಂದು ಹೇಳಿದ್ದಾರೆ.
“ನಸೀಮ್ ಸೋಲಂಕಿ ಹಿಂದೂ ಮತಗಳನ್ನು ಸೆಳೆಯಲು ‘ರಾಜಕೀಯ ಕಸರತ್ತು’ ಮಾಡುತ್ತಿದ್ದಾರೆ. ಸಮಾಜವಾದಿ ಪಕ್ಷಕ್ಕೆ ಚುನಾವಣೆ ಬರುವಾಗ ಹಿಂದೂ ದೇವಸ್ಥಾನಗಳು ನೆನಪಾಗುತ್ತವೆ” ಎಂದು ಬಿಜೆಪಿ ಶಾಸಕ ಸುರೇಂದ್ರ ಮೈತಾನಿ ವಾಗ್ದಾಳಿ ನಡೆಸಿದ್ದಾರೆ.
ಈ ನಡುವೆ, ಅಖಿಲ ಭಾರತ ಮುಸ್ಲಿಂ ಜಮಾತ್ ನಸೀಮ್ ಸೋಲಂಕಿ ವಿರುದ್ಧ ಫತ್ವಾ ಹೊರಡಿಸಿದ್ದು, ‘ವಿಗ್ರಹಾರಾಧನೆ ಷರಿಯಾ ಕಾನೂನಿನಡಿ ಅಪರಾಧ’ ಎಂದು ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.
ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಮಾಜಿ ಶಾಸಕ ಇರ್ಫಾನ್ ಸೋಲಂಕಿ ಜೈಲು ಪಾಲಾದ ಹಿನ್ನೆಲೆ, ಅವರಿಂದ ತೆರವಾದ ಸ್ಥಾನಕ್ಕೆ ಪತ್ನಿ ನಸೀಮ್ ಸೋಲಂಕಿಯನ್ನು ಕಣಕ್ಕಿಳಿಸಲಾಗಿದೆ. ಈ ಬಾರಿ ಉಪಚುನಾವಣೆ ನಡೆಯಲಿರುವ ಉತ್ತರ ಪ್ರದೇಶದ ಒಂಬತ್ತು ಕ್ಷೇತ್ರಗಳ ಪೈಕಿ
ಸಿಶಾಮೌ ಕೂಡ ಒಂದು.
ಇದನ್ನೂ ಓದಿ : ಯುಎಪಿಎ ಪ್ರಕರಣ | ಪತ್ರಕರ್ತ ಸಿದ್ದಿಕ್ ಕಪ್ಪನ್ ಜಾಮೀನು ಷರತ್ತು ಸಡಿಲಿಸಿದ ಸುಪ್ರೀಂಕೋರ್ಟ್


