Homeಮುಖಪುಟಬ್ರಾಹ್ಮಣ್ಯ ಶೋಷಣೆಯ ರೂಪದ ಹಿಂದೂ ಧರ್ಮ; ಜ್ಯೋತಿಬಾ ಫುಲೆ ಅವರ ಚಿಂತನೆ

ಬ್ರಾಹ್ಮಣ್ಯ ಶೋಷಣೆಯ ರೂಪದ ಹಿಂದೂ ಧರ್ಮ; ಜ್ಯೋತಿಬಾ ಫುಲೆ ಅವರ ಚಿಂತನೆ

- Advertisement -
- Advertisement -

ಭಾರತದ ಮಣ್ಣಿನ ಅತೀವ ಫಲವತ್ತತೆ, ಅಲ್ಲಿನ ಸಮೃದ್ಧ ಉತ್ಪನ್ನಗಳು, ದಂತಕತೆಯಾಗಿರುವ ಅಲ್ಲಿ ನೆಲದ ರಕ್ಷಕರು ಎಂದು ಅದರ ಅರ್ಥ. ಅವರುಗಳ ರೂಪ-ಆಕಾರಗಳ ಕುರಿತ ನಂಬಲಾಗದ ಮೂರ್ಖ ದಂತಕತೆಗಳೆಲ್ಲ ಕೇವಲ ಕಲ್ಪನೆಗಳಷ್ಟೇ. ಇವರುಗಳು ಆರ್ಯರಿಗಿಂತ ದೃಢವಾಗಿ ಗಟ್ಟಿಮುಟ್ಟಾಗಿದ್ದರು ಎನ್ನುವುದಷ್ಟೇ ವಾಸ್ತವ…. ಆರ್ಯರು ಭಾರತಕ್ಕೆ ಪ್ರವೇಶಿಸಿದ್ದು ಹಾಗೂ ಅವರು ಇಲ್ಲಿನ ಮೂಲನಿವಾಸಿಗಳನ್ನು ಅಡಿಯಾಳುಗಳಾಗಿ ಮಾಡಿಕೊಂಡಿದ್ದು ಯೂರೋಪಿಯನ್ನರು ಅಮೆರಿಕದಲ್ಲಿ ನೆಲೆಸಲು ಹೋದಾಗ ಅಲ್ಲಿನ ಮೂಲನಿವಾಸಿಗಳ ಮೇಲೆ ನಡೆಸಿದ ಕ್ರೌರ್ಯಗಳಿಗೆ ಸರಿಸಾಟಿಯಾಗಿತ್ತು…. ಇದು ಭಾರತದ ಮೇಲೆ ಬ್ರಾಹ್ಮಣರ ಡಾಮಿನೇಶನ್ನಿನ ಸಂಕ್ಷಿಪ್ತ ಚರಿತ್ರೆಯಾಗಿದೆ. ಮೊದಲು ಅವರು ಗಂಗಾ ಬಯಲಿನಲ್ಲಿ ನೆಲೆಸಿ ಕ್ರಮೇಣ ಇಡೀ ಭಾರತಕ್ಕೆ ವ್ಯಾಪಿಸಿದರು. ಆದರೆ ಇಲ್ಲಿನ ಜನತೆಯ ಮೇಲೆ ಬಿಗಿಯಾದ ಹತೋಟಿ ಹೊಂದಲಿಕ್ಕಾಗಿ ಅವರು ಸೃಷ್ಟಿಸಿದ ವಿಚಿತ್ರ ಪುರಾಣಗಳು, ’ಜಾತಿ ವ್ಯವಸ್ಥೆ ದೈವನಿರ್ಮಿತ’ ಎಂದು ಹಬ್ಬಿಸಿದ ನಂಬಿಕೆ, ಹಸಿಹಸಿಯಾದ ಅಮಾನವೀಯವಾದ ನೀತಿಸಂಹಿತೆಗಳು… ಇಂಥವು ಜಗತ್ತಿನ ಇನ್ಯಾವ ದೇಶದಲ್ಲೂ ಕಾಣಲು ಸಿಗುವುದಿಲ್ಲ.” (ಫುಲೆ, 1990, ಪುಟ 118-120)

ಫುಲೆಯವರು ಮರಾಠಿಯಲ್ಲಿ ರಚಿಸಿದ, ಇಂಗ್ಲಿಷ್ ಪ್ರಸ್ತಾವನೆಯಿರುವ ’ಗುಲಾಮಗಿರಿ’ ಕೃತಿಯು ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯ ವರ್ಷವಾದ 1885ರಲ್ಲಿ ಪ್ರಕಟವಾಯಿತು. ಆಗಿನ್ನೂ ಹಿಂದೂ ರಾಷ್ಟ್ರೀಯವಾದವು ಪೂರ್ಣ ಪ್ರಮಾಣದಲ್ಲಿ ಮುನ್ನೆಲೆಗೆ ಬಂದಿರಲಿಲ್ಲ; ಉಗ್ರ ರಾಷ್ಟ್ರೀಯವಾದದ ಪ್ರಧಾನ ಪ್ರತಿಪಾದಕ ಬಾಲ ಗಂಗಾಧರ ತಿಲಕ್ ಇನ್ನೂ ಸಾಮಾಜಿಕ ಸಾಂಪ್ರದಾಯಿಕತೆಯ ಹೆಗ್ಗುರುತಾಗಿ ಕಾಣಿಸಿಕೊಂಡಿರಲಿಲ್ಲ. ಫುಲೆಯವರು ಕಟುವಾಗಿ ದಾಳಿಗೀಡು ಮಾಡಿರುವ ಬ್ರಾಹ್ಮಣರಲ್ಲಿ ಸಂಪ್ರದಾಯಸ್ಥರು ಮಾತ್ರವಲ್ಲದೆ ’ಮಧ್ಯಮಾರ್ಗಿ'(ಮಿತವಾದಿ)ಗಳು, ಉದಾರವಾದಿಗಳು ಹಾಗೂ ಸುಧಾರಣಾವಾದಿಗಳೂ ಇದ್ದರು; ಅವರೆಲ್ಲ ಪ್ರಾರ್ಥನಾ ಸಮಾಜ, ಬ್ರಹ್ಮ ಸಮಾಜ, ಸಾರ್ವಜನಿಕ ಸಭಾ ಹಾಗೂ ಕಾಂಗ್ರೆಸ್‌ನೊಳಗೆ ಬೆರೆತುಹೋಗಿದ್ದರು. ಇವೆಲ್ಲವೂ ಜನಸಾಮಾನ್ಯರನ್ನು ವಂಚಿಸಿ, ಮೇಲ್ಜಾತಿ ಯಾಜಮಾನ್ಯವನ್ನು ಸ್ಥಾಪಿಸಲು ರೂಪಿಸಲಾದ ಪ್ರತಿಷ್ಠಿತರ ಪ್ರಯತ್ನಗಳೆಂದು ಫುಲೆ ಪರಿಭಾವಿಸಿದರು. ಅವರ ದೃಷ್ಟಿಯಲ್ಲಿ ಜಾತಿಯು ಅಮೆರಿಕದಲ್ಲಿ ಆಫ್ರಿಕನ್ನರನ್ನು ಗುಲಾಮರನ್ನಾಗಿ ಮಾಡಿಕೊಂಡಷ್ಟೇ ನೀಚವೂ ಅಮಾನವೀಯವೂ ಆಗಿತ್ತು; ಆದರೆ ಭಾರತದಲ್ಲಿ ಅದು ಕೇವಲ ನೇರವಾದ ಗೆಲುವು ಮತ್ತು ಅಧೀನಗೊಳಿಸುವಿಕೆ ಮಾತ್ರವಲ್ಲದೆ ವಂಚನೆ ಮತ್ತು ಧಾರ್ಮಿಕ ಭ್ರಮೆಯನ್ನೂ ಆಧರಿಸಿತ್ತು. ಕಪಟತನವು ಉಚ್ಚ ಜಾತಿಗಳು ’ಹಿಂದೂ ಧರ್ಮ’ ಎಂದು ಕರೆದುದರ ತಿರುಳು ಎಂದು ಫುಲೆ ಸಾರಿದರು.

ಜ್ಯೋತಿಬಾ ಫುಲೆ (1826-1890) ಸ್ವತಃ ದಲಿತರಾಗಿರಲಿಲ್ಲ; ಸಾಂಪ್ರದಾಯಿಕವಾಗಿ ಹೂ ಬೆಳೆಸುವ ವೃತ್ತಿಯ ’ಮಾಲಿ’ ಜಾತಿಗೆ ಸೇರಿದ್ದರು. ಈ ಜಾತಿ ಮರಾಠಾ-ಕುಣಬಿಗಳಿಗೆ ಸಮಾನವಾದ ಮಧ್ಯಮ ಸ್ತರದ್ದಾಗಿದ್ದು ’ಪ್ರಭಾವಿ ಓಬಿಸಿ’ ಎನ್ನಿಸಿದೆ. ಅವರಿಗೆ ಪ್ರಬಲವಾದ ದಲಿತ ಅನುಯಾಯಿ ಸಮೂಹ ಬೆಳೆಯಿತಾದರೂ, ಅವರು ಬಹುಮುಖ್ಯ ಸಂಘಟನಾ ಕೆಲಸ ಮಾಡಿದ್ದು ಮಹಾರಾಷ್ಟ್ರದ ಮಧ್ಯಮ ಸ್ತರದಿಂದ ಕೆಳಗಿನ, ಸಾಂಪ್ರದಾಯಿಕವಾಗಿ ’ಶೂದ್ರ’ರೆಂದು ವರ್ಗೀಕರಿಸಲ್ಪಟ್ಟ ಹಾಗೂ ಇಂದಿಗೂ ಬಹುಜನ ಸಮಾಜ ಎಂದು ಕರೆಯಲ್ಪಡುವ ಬ್ರಾಹ್ಮಣೇತರ ಸಮುದಾಯಗಳ ನಡುವೆ. ಆರಂಭದಲ್ಲಿ ಅವರೊಬ್ಬ ಸಮಾಜ ಸುಧಾರಕರಾಗಿದ್ದರು; ಎಲ್ಲಾ ಹೆಣ್ಣುಮಕ್ಕಳಿಗಾಗಿ ಮತ್ತು ದಲಿತ ಮಕ್ಕಳಿಗಾಗಿ ಶಾಲೆಗಳನ್ನು ಸ್ಥಾಪಿಸಿದರು; ಹಾಗೂ ಅಬ್ರಾಹ್ಮಣರನ್ನು ಸಂಘಟಿಸಿ ಅವರ ನಡುವೆ ವೈಚಾರಿಕತೆ, ಧಾರ್ಮಿಕ ಆಚರಣೆಗಳಲ್ಲಿ ಬ್ರಾಹ್ಮಣ ಪುರೋಹಿತರನ್ನು ಕರೆಯದಿರುವುದು, ಹೆಣ್ಣು-ಗಂಡು ಮಕ್ಕಳಿಬ್ಬರಿಗೂ ಶಿಕ್ಷಣ ಕೊಡಿಸುವುದು – ಇವುಗಳ ಪ್ರಸಾರಕ್ಕಾಗಿ 1875ರಲ್ಲಿ ’ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿದರು. ಅವರ ಪ್ರಮುಖ ಬರಹಗಳಲ್ಲಿ ನಾಟಕಗಳು, ಬ್ರಾಹ್ಮಣರನ್ನು ಖಂಡಿಸುವ ಕವನಗಳು, ಶಿವಾಜಿಯನ್ನು ಕುರಿತ ಒಂದು ಲಾವಣಿ, ಹಾಗೂ ವೈಚಾರಿಕ ಜಿಜ್ಞಾಸೆಯ ಕೃತಿಗಳು, ಅಲ್ಲದೆ ಮೂರು ಪುಸ್ತಕಗಳು ಸೇರಿವೆ; ಅವುಗಳೆಂದರೆ: ಪ್ರಮುಖವಾಗಿ ಜಾತಿ ವ್ಯವಸ್ಥೆ ಕುರಿತ ’ಗುಲಾಮಗಿರಿ’, ರೈತಾಪಿಯ ಶೋಷಣೆ ಕುರಿತ ’ಶೇತ್ಕರಿಯಾ ಆಸೂದ್’ ಹಾಗೂ ಒಂದು ಹೊಸ, ಆಧ್ಯಾತ್ಮಕ, ಸಮಾನತಾವಾದಿಯಾದ ಧರ್ಮದ ರೂಪುರೇಷೆಗಳನ್ನು ಮುಂದಿಡುವ ’ಸತ್ಯ ಧರ್ಮ’.

ಸೈದ್ಧಾಂತಿಕ ಸ್ತರದಲ್ಲಿ ಸಹ ಫುಲೆಯವರು ಶೂದ್ರ (ಅಬ್ರಾಹ್ಮಣ) ಮತ್ತು ಅತಿಶೂದ್ರ(ದಲಿತ)ರನ್ನು ಒಂದುಗೂಡಿಸಲು ಪ್ರಯತ್ನಿಸಿದರು. ದಲಿತರು ಅತಿಹೆಚ್ಚು ದಮನಕ್ಕೆ ಗುರಿಯಾಗಿರುವುದು ಮಾತ್ರವಲ್ಲ, ಹಿಂದಿನ ಕಾಲದಲ್ಲಿ ಬ್ರಾಹ್ಮಣ ಡಾಮಿನೇಶನ್ ವಿರುದ್ಧದ ಸಂಘರ್ಷದಲ್ಲಿನ ಅವರ ಪರಾಕ್ರಮದ ಕಾರಣಕ್ಕೆ ಅವರನ್ನು ಕೀಳಾಗಿ ಕಾಣಲಾಗಿದೆ ಎಂದು ಅವರು ವಾದಿಸಿದರು. ಬಹು ಮುಖ್ಯವಾಗಿ, ಶೂದ್ರ ಮತ್ತು ಅತಿಶೂದ್ರರು ಒಟ್ಟಿಗೆ ದಮನಿತ-ಶೋಷಿತ ಸಮೂಹವಾಗಿದ್ದಾರೆಂದು ಪ್ರತಿಪಾದಿಸಿದ ಅವರು, ಈ ಸಮೂಹವನ್ನು ಅಮೆರಿಕದ ಮೂಲನಿವಾಸಿಗಳು ಮತ್ತು ಕರಿಯರ ಪರಾಧೀನತೆಗೆ ಸಮನಾಗಿ ಪರಿಗಣಿಸಿದರು. ಅವರ ಈ ಕಟು ಟೀಕೆಗಳು ವಾಸ್ತವವಾಗಿ ಕೇವಲ ಧಾರ್ಮಿಕ ಪರಾಧೀನತೆ ಮತ್ತು ಪರಾಜಯದ್ದಷ್ಟೇ ಅಲ್ಲದೆ ಶೋಷಣೆಯ ಸಿದ್ಧಾಂತದ ಅಭಿವ್ಯಕ್ತಿಯೂ ಆಗಿವೆ.

ಅವರ ಕಾಲದಲ್ಲಿ ಜಾತಿ ಮತ್ತು ಭಾರತೀಯ ಸಮಾಜ ಕುರಿತ ಪ್ರಧಾನ ವ್ಯಾಖ್ಯಾನವಾಗಿದ್ದ ಆರ್ಯನ್ ಜನಾಂಗ ಸಿದ್ಧಾಂತವು ಫುಲೆಯವರ ಸಿದ್ಧಾಂತಕ್ಕೆ ಚೌಕಟ್ಟನ್ನು ಒದಗಿಸಿತು. ಯೂರೋಪಿನ ಪೌರ್ವಾತ್ಯ ವಿಚಾರಗಳ ವಿದ್ವಾಂಸರು, ಬ್ರಿಟಿಷ್ ಆಡಳಿತಗಾರರು ಹಾಗೂ ತಾವು ಆಳುತ್ತಿದ್ದ ಸಮಾಜವನ್ನು ವರ್ಗೀಕರಿಸಿದ ಗಣತಿದಾರರು – ಇವರುಗಳ ಚರ್ಚೆಗಳಲ್ಲಿ ಈ ಸಿದ್ಧಾಂತವು ಕೇಂದ್ರ ವಿಚಾರವಾಗಿತ್ತು. ವೇದಗಳು ಯೂರೋಪಿಯನ್ನರು ಮತ್ತು ಭಾರತೀಯರ ನಡುವೆ ಪ್ರಾಚೀನ ಆಧ್ಯಾತ್ಮಿಕ ಕೊಂಡಿ ಎಂದು ಪೌರ್ವಾತ್ಯ ವಿದ್ವಾಂಸರು ಪ್ರತಿಪಾದಿಸಿದರು. ಮತ್ತೊಂದೆಡೆ, ತಿಲಕರಂಥ ಭಾರತೀಯ ಪ್ರತಿಷ್ಠಿತ ವರ್ಗದ ಜನರು ಬ್ರಾಹ್ಮಣ ಮೇಲ್ಮೆ(ಸುಪೀರಿಯಾರಿಟಿ)ಯನ್ನು ಸಮರ್ಥಿಸಲು ಇದನ್ನು ಬಳಸಿದರು.

ಇದನ್ನು ಫುಲೆಯವರು ತಲೆಕೆಳಗು ಮಾಡಿದರು: ಹೆಗೆಲ್ಲನ ಗತಿತರ್ಕವನ್ನು ಮಾರ್ಕ್ಸ್ ತಲೆಕೆಳಗು ಮಾಡಿದಂತೆ. ಅದರ ಜಾಗದಲ್ಲಿ ಅವರು ಶೋಷಣೆ ಮತ್ತು ವೈರುಧ್ಯಗಳ ಸಿದ್ಧಾಂತವನ್ನು ಮಂಡಿಸಿದರು. ಅವರ ಪ್ರಕಾರ: ಬ್ರಾಹ್ಮಣರು ವಿಜಯಶಾಲಿ ಇಂಡೋ-ಯೂರೋಪಿಯನ್ ಜನರ ಸಂತತಿ ಖಂಡಿತಾ ನಿಜ; ಆದರೆ ಅವರು ಶ್ರೇಷ್ಠರಲ್ಲ, ಬದಲಿಗೆ, ಮೊದಲೇ ಸಮೃದ್ಧವಾಗಿ ಅರಳಿ ನಿಂತಿದ್ದ ಸಮಾನತಾ ಸಮಾಜವನ್ನು ಎಲ್ಲಾ ರೀತಿಯ ಕಪಟ ಮತ್ತು ಹಿಂಸೆಯ ಮೂಲಕ ಮೂಲೋತ್ಪಾಟನೆ ಮಾಡಿದ ಕ್ರೂರಿ, ಹಿಂಸಾತ್ಮಕ ದಾಳಿಕೋರರಾಗಿದ್ದಾರೆ; ಇದಕ್ಕಾಗಿ ಅವರು ಸೃಷ್ಟಿಸಿದ ಪುರಾಣಗಳು ಮೂಲಭೂತವಾಗಿ ಅಸಮಾನತೆಯನ್ನು ಆಧರಿಸಿದ್ದು, ಸೋತ ಜನತೆಗೆ ತಮ್ಮ ಗ್ರಂಥಗಳನ್ನು ಓದುವ ಅವಕಾಶವನ್ನೂ ನಿರಾಕರಿಸಿದ್ದವು, ಆ ರೀತಿಯಲ್ಲಿ ಅವು ಮಿಕ್ಕೆಲ್ಲಾ ಪುರಾಣಗಳಿಗಿಂತಲೂ ಅತ್ಯಂತ ನಿಕೃಷ್ಟವಾಗಿವೆ.

ಸಾಂಪ್ರದಾಯಿಕ ಆರ್ಯನ್ ಸಿದ್ಧಾಂತವನ್ನು ತಿರುವುಮುರುವು ಮಾಡುವ ಮೂಲಕ ಫುಲೆಯವರು ಬ್ರಾಹ್ಮಣವಾದ ಮತ್ತು ಜಾತಿ ಕುರಿತ ತಮ್ಮ ವಿಮರ್ಶೆಗಳನ್ನು ಜನಸಮೂಹದ ಸ್ತರಕ್ಕೆ ಒಯ್ದರು. ಪುರಾಣಗಳನ್ನು ತಳಮಟ್ಟದಿಂದ ಪುನರ್ ವ್ಯಾಖ್ಯಾನ ಮಾಡಿ, ವಿಷ್ಣುವಿನ ವಿವಿಧ ಅವತಾರಗಳನ್ನು ಭಾರತದ ಮೇಲಿನ ಆರ್ಯರ ವಿಜಯದ ವಿವಿಧ ಕಾಲಘಟ್ಟಗಳೆಂದೂ, ರಾಕ್ಷಸರನ್ನು ಜನತೆಯ ಹೀರೋಗಳೆಂದೂ ವಿವರಿಸಿದರು. ಬಲಿ ರಾಜನ ಕಥೆ ಈ ಕಥಾನಕಗಳ ಕೇಂದ್ರ ಬಿಂದುವಾಗಿದೆ. ಬಲಿ ರಾಜನು ಪ್ರಜಾ ಕ್ಷೇಮ, ಜಾತಿರಹಿತತೆ ಮತ್ತು ಸಮೃದ್ಧಿಯಿಂದ ಕೂಡಿದ್ದ ಆದರ್ಶ ರಾಜ್ಯವನ್ನಾಳುತ್ತಿದ್ದ ಮಹಾರಾಷ್ಟ್ರದ ಮೂಲ ರಾಜನಾಗಿದ್ದನು; ಆ ಪ್ರದೇಶದ ಇತರ ಜಾನಪದ ದೇವತೆಗಳಾದ ಖಂಡೋಬಾ, ಜೋತಿಬಾ, ನಾಯಕಬಾ ಮುಂತಾದವರು ಆತನ ಅಧಿಕಾರಿಗಳಾಗಿದ್ದರು. ಬಲಿಯಿಂದ ಮೂರು ವರಗಳನ್ನು ಬೇಡಿ, ನಂತರ ಆತನ ಎದೆಯ ಮೇಲೆ ಕಾಲಿಟ್ಟು ನರಕಕ್ಕೆ ತುಳಿದ ಬಾಲಕ ವಾಮನನ ಪುರಾಣ ಕಥೆಯು ದಾಳಿಕೋರ ಆರ್ಯರ ವಂಚನೆ ಮತ್ತು ವಿಜಯದ
ಕಥೆಯಾಗಿದೆ ಎಂದು ಫುಲೆಯವರು ವಿವರಿಸಿದರು.

ಶೇತ್ಕರಿಯಾ ಆಸೂದ್, ಗುಲಾಮಗಿರಿ

ಈ ಪುನರ್ ವ್ಯಾಖ್ಯಾನವು ಜನಜನಿತ ಸಂಸ್ಕೃತಿಯೊಂದಿಗೆ ಗಾಢವಾಗಿ ಹೊಂದಿಕೆಯಾಗುತ್ತದೆ. ಯಾಕೆಂದರೆ ಮಹಾರಾಷ್ಟ್ರದಲ್ಲಿ ಬಲಿಯನ್ನು ನಿಜವಾಗಿಯೂ ಒಬ್ಬ ’ರೈತಾಪಿ’ ರಾಜನೆಂದು ನೋಡಲಾಗುತ್ತದೆ, ಅವನ ಹಬ್ಬದ ದಿನ “ಪೀಡೆ-ದುಃಖಗಳೆಲ್ಲ ತೊಲಗಲಿ, ಬಲಿಯ ರಾಜ್ಯ ಬರಲಿ” ಎಂದು ಮರಾಠಿಯಲ್ಲಿ ಕರೆ ನೀಡಲಾಗುತ್ತದೆ. ಹಾಗೂ ದಕ್ಷಿಣ ಭಾರತದ ಇತರ ಭಾಗಗಳಲ್ಲೂ ಇಂಥದೇ ಪದ್ಧತಿಗಳಿವೆ. ಹಾಗೆಯೇ ಗ್ರಾಮೀಣ ಪ್ರದೇಶಗಳ ಜನಪದ ಧಾರ್ಮಿಕ ಹಬ್ಬಗಳೆಲ್ಲವೂ ಅವೈದಿಕ ದೇವತೆಗಳನ್ನು ಕುರಿತ ಜಾತ್ರೆಗಳಾಗಿವೆ, ಅವೆಲ್ಲದರಲ್ಲೂ (ತುಂಬಾ ವ್ಯಾಪಕವಾಗಿರುವ ವಿಠೋಬಾ ಹೊರತುಪಡಿಸಿ) ಇಂದಿಗೂ ಅಬ್ರಾಹ್ಮಣ ಪೂಜಾರಿಗಳೇ ಇರುತ್ತಾರೆ. ಬಲಿ ರಾಜನ ಸುತ್ತ ಫುಲೆಯವರು ಹೆಣೆದ ಪರ್ಯಾಯ ಪುರಾಣ ಕಥಾನಕವು ಒಂದು ರೈತಾಪಿ ಸಮುದಾಯದ ಚಿತ್ರಣವನ್ನು ಕಟ್ಟಿಕೊಟ್ಟಿತು, ಅವರ ವೈದಿಕ-ವಿರೋಧಿ, ಆರ್ಯ-ವಿರೋಧಿ, ಜಾತಿ-ವಿರೋಧಿ ಸಮಾನತಾ ಸಂದೇಶವು ಕವಿತೆ-ಸಂವಾದ-ನಾಟಕಗಳಿಂದ ಕೂಡಿ, ಅಬ್ರಾಹ್ಮಣರ ನಡುವೆ ವಿದ್ಯಾವಂತ ಮೇಲುವರ್ಗದಾಚೆಗೆ ವಿಶಾಲ ಜನತೆಯವರೆಗೂ ತಲುಪಿತು.

ಫುಲೆಯವರು ಸಿದ್ಧಾಂತ ಮತ್ತು ಸಂಸ್ಕೃತಿಯ ಮೇಲೆ ಮಾತ್ರವೇ ಫೋಕಸ್ ಮಾಡಲಿಲ್ಲ; ಚರಿತ್ರೆಯಲ್ಲಿನ ಹಿಂಸೆ ಮತ್ತು ದಂಡಯಾತ್ರೆಗಳಂತಹ ಅಂಶಗಳಿಗೂ ಒತ್ತು ಕೊಟ್ಟರಲ್ಲದೆ, (ಮಾರ್ಕ್ಸ್ ಇವುಗಳನ್ನು “ಆರಂಭಿಕ ಬಂಡವಾಳ ಕ್ರೋಢೀಕರಣ”ದ ವ್ಯಾಪ್ತಿಗೆ ಸೇರಿಸಿ ಗೌಣಗೊಳಿಸಿದ್ದಾನೆ) ರೈತಾಪಿ ಸಮುದಾಯವನ್ನು ತಮ್ಮ ಕೇಂದ್ರ ವಿಷಯವಾಗಿ ಮಾಡಿಕೊಂಡರು. ಅವರ ಪ್ರಕಾರ: ಹಿಂಸೆ ಮತ್ತು ಬಲಪ್ರಯೋಗಗಳು ಎಲ್ಲಾ ಚಾರಿತ್ರಿಕ ಪ್ರಕ್ರಿಯೆಗಳಲ್ಲೂ ಎದ್ದುಕಾಣುವ ವಾಸ್ತವಗಳಾಗಿವೆ; ’ಆರ್ಯರ ಆಕ್ರಮಣ’ವು ಭಾರತ ಉಪಖಂಡದ ಮೇಲಿನ ಸಾಲುಸಾಲು ದಂಡಯಾತ್ರೆಗಳಲ್ಲಿ ಮೊದಲಿನದಾಗಿತ್ತು; ಮುಸ್ಲಿಮರ ಮತ್ತು ಬ್ರಿಟಿಷರ ಆಕ್ರಮಣಗಳು ಇನ್ನೆರಡು ಬಹುಮುಖ್ಯವಾದುವು. ಆರ್ಯರ ಆಕ್ರಮಣವು ಇತರ ದಾಳಿಗಳಿಗಿಂತಲೂ ಬಹು ಕೆಟ್ಟದ್ದಾಗಿದ್ದುದು ಜನಾಂಗೀಯ ಕಾರಣಕ್ಕಲ್ಲ, ಬದಲಿಗೆ, ’ಇರಾನಿ ಆರ್ಯಭಟ್ಟ’ರುಗಳು ಒಂದು ಶ್ರೇಣೀಕೃತವಾದ, ಅಸಮಾನತೆಯ ಧಾರ್ಮಿಕ ಸಿದ್ಧಾಂತವನ್ನಾಧರಿಸಿ ತಮ್ಮ ಅಧಿಕಾರವನ್ನು ಗಟ್ಟಿಗೊಳಿಸಿಕೊಂಡ ಕಾರಣಕ್ಕೆ.

ಬ್ರಾಹ್ಮಣ ಆಳ್ವಿಕೆ ಅಥವಾ ’ಭಟ್‌ಶಾಹಿ’ಯು ಶೋಷಣೆಯನ್ನು ಖಾಯಂ ಆಗಿ ಉಳಿಸಿಕೊಳ್ಳಲು ಪ್ರಭುತ್ವಾಧಿಕಾರ ಮತ್ತು ಧಾರ್ಮಿಕ ಯಾಜಮಾನ್ಯವನ್ನು ಬಳಸಿಕೊಂಡಿತು. ಪ್ರಧಾನ ಶೋಷಿತ ವರ್ಗ/ಸಮುದಾಯವು ರೈತಾಪಿಯಾಗಿದ್ದು, ಅಧಿಕಾರಶಾಹಿಯು ಪ್ರಧಾನ ಶೋಷಕನಾಗಿತ್ತು; ಇದರ ಮೇಲೆ ಬ್ರಾಹ್ಮಣರು ವಸಾಹತುಶಾಹಿ ಆಳ್ವಿಕೆಯಲ್ಲೂ ಡಾಮಿನೇಶನ್ ಹೊಂದಿದ್ದರು. ತೆರಿಗೆ, ಸುಂಕ ಹಾಗೂ ರೈತಾಪಿಯ ಜಮೀನನ್ನು ವಶಪಡಿಸಿಕೊಳ್ಳುವುದು – ಇವು ಹೆಚ್ಚುವರಿಯನ್ನು ಕಬಳಿಸುವ ಬಹುಮುಖ್ಯ ತಂತ್ರಗಳಾಗಿದ್ದವು; ಬಡ್ಡಿ ಸಾಲ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಹಣ ಸುಲಿಗೆ – ಇವು ಪೂರಕ ವಿಧಾನಗಳಾಗಿದ್ದವು. ಫುಲೆಯವರು ರೈತಾಪಿ ವರ್ಗದ ಬಡತನದ ಕುರಿತು ನೀಡುವ ಕಣ್ಣಿಗೆ ಕಟ್ಟುವಂಥ ಚಿತ್ರಣ, ಬರಗಾಲ ಮತ್ತು ಭೂ ಬಳಕೆ ಬಗೆಗಿನ ಅವರ ಸಂವೇದನಾಶೀಲತೆ, ಇಂದಿನ ದಿನಗಳಲ್ಲಿ ಪ್ರಚಲಿತದಲ್ಲಿರುವ ಜಲಾನಯನ ಅಭಿವೃದ್ಧಿಯ ಬಗೆಗೆ ಆಗಲೇ ಅವರು ತೋರಿದ್ದ ಕಳಕಳಿ, ಹಾಗೂ ಅರಣ್ಯ ಅಧಿಕಾರಶಾಹಿಯ ಕಟು ಖಂಡನೆ, ಇವೆಲ್ಲವೂ ಅವರನ್ನು ಅನೇಕ ರೀತಿಗಳಲ್ಲಿ ಒಬ್ಬ ಖಚಿತವಾದ ಆಧುನಿಕರನ್ನಾಗಿ ಚಿತ್ರಿಸುತ್ತವೆ.

ಫುಲೆಯವರ ಸಿದ್ಧಾಂತವನ್ನು ಆರ್ಥಿಕ ಶೋಷಣೆ ಮತ್ತು ಸಾಂಸ್ಕೃತಿಕ ಮೇಲಾಧಿಪತ್ಯವನ್ನು ಹೆಣೆದಿರುವ ಒಂದು ವಿಧದ ಆರಂಭಿಕ ಹಂತದ ಚಾರಿತ್ರಿಕ ಭೌತಿಕವಾದವನ್ನಾಗಿ ನೋಡಬಹುದು. ವರ್ಗ ಸಿದ್ಧಾಂತಕ್ಕೆ ಎದುರಾಗಿ, ಜನಸಮುದಾಯಗಳು ವೈರುಧ್ಯಗಳಿಗೆ ತಳಹದಿಯಾಗುತ್ತವೆ (ಶೂದ್ರ-ಅತಿಶೂದ್ರ ರೈತಾಪಿ ವರ್ಸಸ್ ಬ್ರಾಹ್ಮಣ ಅಧಿಕಾರಶಾಹಿ ಮತ್ತು ಧಾರ್ಮಿಕ ವ್ಯವಸ್ಥೆ); ಬದಲಾಗುವ ಆಸ್ತಿ ಸಂಬಂಧಗಳ ಬದಲಿಗೆ ದಂಡಯಾತ್ರೆಗಳು, ಬಲಪ್ರಯೋಗ, ಪ್ರಭುತ್ವಾಧಿಕಾರ ಹಾಗೂ ಸಿದ್ಧಾಂತ ಇವುಗಳನ್ನು ಚಾಲಕ ಶಕ್ತಿಗಳಾಗಿ ಅದು ನೋಡುತ್ತದೆ.

ಅನುವಾದ: ಸಿರಿಮನೆ ನಾಗರಾಜ್

ಗೇಲ್ ಓಮ್ವೆಟ್

ಗೇಲ್ ಓಮ್ವೆಟ್
ಖ್ಯಾತ ಅಂಬೇಡ್ಕರೈಟ್ ಚಿಂತಕಿ, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಡಾ. ಅಂಬೇಡ್ಕರ್ ಚೇರ್ ಫಾರ್ ಸೋಷಿಯಲ್ ಚೇಂಜ್ ಅಂಡ್ ಡೆವಲಪ್‌ಮೆಂಟ್‌ನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದ ಗೇಲ್ ಓಮ್ವೆಟ್ ಅವರ ’ಅಂಡರ್‌ಸ್ಟಾಂಡಿಂಗ್ ಕ್ಯಾಸ್ಟ್’ ಪುಸ್ತಕದ ಒಂದು ಅಧ್ಯಾಯದ ಆಯ್ದ ಭಾಗ ಇದು. ಗೇಲ್ ಅವರು 25 ಆಗಸ್ಟ್ 2021ರಂದು ನಮ್ಮನ್ನಗಲಿದರು


ಇದನ್ನೂ ಓದಿ: ಮಹಿಷಾಸುರ ಯಾರು? ಕೋಣನ ಬಲಿಯ ಮೇಲೆ ಮಹಿಷ ಮರ್ಧನ ಪುರಾಣದ ಹೇರಿಕೆಯೇ?

ಇದನ್ನೂ ಓದಿ: ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ವಿವಾದ ಮತ್ತು …

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. This is a baseless and funny article. With relavent proofs Historians have already proved that Aryan Invasion theory is conspiracy and written by the people to show India down/inferior and make Indians feel inferior.

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...