ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಹ್ಮಾರ್-ಕುಕಿ-ಝೋಮಿ ಬುಡಕಟ್ಟು ಜನಾಂಗದವರು ನಡೆಸುತ್ತಿದ್ದ ನಾಲ್ಕು ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ನಂತರ ಜಿರಿಬಾಮ್‌ನಲ್ಲಿ ಉದ್ವಿಗ್ನತೆ ಉಂಟಾಗಿದೆ.
ಬುಡಕಟ್ಟುಗಳ ನಾಗರಿಕ ಸಮಾಜದ ಗುಂಪು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿದೆ. ಸ್ಥಳೀಯ ಬುಡಕಟ್ಟು ಅಡ್ವೊಕಸಿ ಕಮಿಟಿ (ಐಟಿಎಸಿ) ಹೇಳಿಕೆಯಲ್ಲಿ “ಅಧಿಕಾರಿಗಳು ತಕ್ಷಣವೇ ಅಪರಾಧಿಗಳನ್ನು ಬಂಧಿಸಿ ಮತ್ತು ಕಾನೂನಿನ ಪ್ರಕಾರ ಅವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು” ಎಂದು ಆಗ್ರಹಿಸಿದೆ.
ಮೈತೇಯಿ ಸಶಸ್ತ್ರ ಗುಂಪು ಅರಂಬೈ ತೆಂಗೋಲ್ ಅಂಗಡಿಗಳಿಗೆ ಬೆಂಕಿ ಹಚ್ಚಿದೆ ಎಂದು ಐಟಿಎಸಿ ಆರೋಪಿಸಿದೆ. “ಮನೆಗಳು ಮತ್ತು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಹ್ಮಾರ್ ವೆಂಗ್, ಕಾಲಿನಗರ, ಜಿರಿಬಾಮ್, ಮೈತಿ ಲೈಕೈ ಪ್ರದೇಶದಲ್ಲಿ ಅಂಗಡಿ ಮನೆಗಳು ಸುಟ್ಟು ಕರಕಲಾಗಿವೆ” ಎಂದು ಐಟಿಎಸಿ ಹೇಳಿಕೆಯಲ್ಲಿ ತಿಳಿಸಿದೆ.
ಕಾಳಿನಗರ, ಹ್ಮಾರ್ ವೆಂಗ್, ಐಬಿ ಲೈಕೈ, ಕರೋಂಗ್, ರಾನಿನ್ ವೆಂಗ್, ಮಿಷನ್ ಕಾಂಪೌಂಡ್, ವೆಂಗ್ನುಮ್, ಬಾಬುಪಾರ ವಾರ್ಡ್ ನಂ. 4 (ಬಜಾರ್) ಮತ್ತು ಉಚಾಥೋಲ್‌ನಲ್ಲಿ 24 ಗಂಟೆಗಳ ರಕ್ಷಣೆ ಅಗತ್ಯವಿದೆ ಎಂದು ಹೇಳಿದೆ.
“ಜಿರಿಬಾಮ್‌ನ ಸ್ಥಳೀಯ ಬುಡಕಟ್ಟು ಜನಾಂಗದ ಹ್ಮಾರ್, ಕುಕಿ ಮತ್ತು ಝೋಮಿ ವಾಸಿಸುವ ಪ್ರದೇಶಗಳಲ್ಲಿ ಮೈತೇಯಿ ದುಷ್ಕರ್ಮಿಗಳು ಆಸ್ತಿಗಳು ಮತ್ತು ವಸ್ತುಗಳನ್ನು ನಾಶಪಡಿಸುವುದನ್ನು, ಕದಿಯುವುದನ್ನು ತಡೆಯಲು ಕೇಂದ್ರ ಪಡೆಗಳಿಂದ 24 ಗಂಟೆಗಳ ರಕ್ಷಣೆ, ಗಸ್ತು ತಿರುಗುವಿಕೆ ತಕ್ಷಣವೇ ಆರಂಭಿಸಬೇಕು ಎಂದು ನಾವು ಅಧಿಕಾರಿಗಳಿಗೆ ಒತ್ತಾಯಿಸುತ್ತೇವೆ” ಎಂದು ಐಟಿಎಸಿ ತಿಳಿಸಿದೆ.
ಜಿರಿಬಾಮ್‌ನಲ್ಲಿ ಹ್ಮಾರ್-ಕುಕಿ-ಝೋಮಿ ಬುಡಕಟ್ಟು ಜನಾಂಗದವರ 45 ಮನೆಗಳನ್ನು ಸುಟ್ಟು ಹಾಕಲಾಗಿದೆ. ಕಳೆದ ಶನಿವಾರದಂದು ಮೈತೇಯಿ ಗುಂಪೊಂದು ಬೆಂಕಿ ಹಚ್ಚಿತ್ತು. ಆದರೆ, ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸುವ ಮುನ್ನ ಬೆಂಕಿ ನಂದಿಸಲಾಗಿದೆ ಎಂದು ಐಟಿಎಸಿ ಹೇಳಿದೆ.
40 ವರ್ಷದ ಎಲ್ ಲಾಲಿಯನ್‌ಮುವಾಂಗ್ ಎಂಬವರನ್ನು ಅವರ ಮನೆಯಿಂದ ಅರಂಬೈ ತೆಂಗೋಲ್ ಸದಸ್ಯರು ಅಪಹರಿಸಿದ್ದಾರೆ. ಈಗ ಲಾಲಿಯನ್‌ಮುವಾಂಗ್ ಕಾಣೆಯಾಗಿದ್ದಾರೆ ಎಂದು ಕೂಡ ಆರೋಪಿಸಿದೆ.
ಇದನ್ನೂ ಓದಿ : ಗ್ರಹಾಂ ಸ್ಟೇನ್ಸ್ ಮತ್ತು ಮಕ್ಕಳ ಮರ್ಡರ್ ಕೇಸ್: ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲಿ ವಿವಾದದಲ್ಲಿ ಒಡಿಶಾದ ನೂತನ ಸಿಎಂ


