ಹೊನ್ನಾವರದ ಕಾಸರಕೋಡಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿವಾದಿತ ಖಾಸಗಿ ಬಂದರು ಯೋಜನಾ ಪ್ರದೇಶದಲ್ಲಿ ಅಪರೂಪದ ಕಡಲಾಮೆಗಳು ಸಮುದ್ರ ತೀರದಲ್ಲಿ ಮೊಟ್ಟೆಯಿಟ್ಟಿರುವುದು ಭಾನುವಾರ ಕಂಡುಬಂದಿದೆ. ಇದರಿಂದ ಬಂದರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಮೀನುಗಾರರ ಅವಲೋಕನ, ವಾದಕ್ಕೆ ಸಮರ್ಥನೆ ಸಿಕ್ಕಂತಾಗಿದೆ ಎಂದು ಹೋರಾಟಗಾರರು ಹೇಳಿದ್ದಾರೆ.

ಕಾಸರಕೋಡು ಸಮುದ್ರ ದಂಡೆಯಲ್ಲಿ 2-3 ಕಡಲಾಮೆ ನೂರರು ಮೊಟ್ಟೆ ಹಾಕಿವೆ. ಇದರಿಂದ ಚೆನ್ನೈನ ಎನ್‌ಸಿಎಸ್‌ಸಿಎಮ್ ಸಂಶೋಧನಾ ಸಂಸ್ಥೆ ಈ ಪ್ರದೇಶದಲ್ಲಿ ಕಡಲಾಮೆಗಳ ವಾಸ ಸ್ಥಳಗಳಿಲ್ಲವೆಂಬ ಸುಳ್ಳು ವರದಿ ತಯಾರಿಸಿರುವುದನ್ನು ಖಾತ್ರಿ ಪಡಿಸುತ್ತದೆಂದು ಪರಿಸರ ವಿಜ್ಞಾನಿ ಡಾ.ಪ್ರಕಾಶ್ ಮೇಸ್ತ ಅಭಿಪ್ರಾಯ ಪಟ್ಟಿದ್ದಾರೆ. ಕಡಲಾಮೆಗಳಂಥ ಅಪರೂಪದ ಜೀವ ವೈವಿದ್ಯ ತಾಣವಾದ ಕಾಸರಕೋಡು ಟೊಂಕದಲ್ಲಿ ವಾಣಿಜ್ಯ ಬಂದರು ಸ್ಥಾಪನೆ ಸಲ್ಲದೆಂದು ಸ್ಥಳೀಯರು ಹಾಗೂ ಪರಿಸರ ವಿಜ್ಞಾನಿಗಳು ಈ ಹಿಂದೆ ಆಗ್ರಹಿಸಿದ್ದರು.
ಕಡಲಾಮೆ ಇರುವಿಕೆ ಬಗ್ಗೆ ಚೆನ್ನೈನ ಎನ್‌ಸಿಎಸ್‌ಸಿಎಮ್ ಎಂಬ ಸಂಸ್ಥೆಯಿಂದ ಸಂಶೋಧನೆ ಮಾಡಿಸಲಾಗಿತ್ತು. ಈ ಸಂಸ್ಥೆ ಖಾಸಗಿ ಬಂದರು ಕಟ್ಟಲಾಗುತ್ತಿರುವ ಪ್ರದೇಶದಲ್ಲಿ ಕಡಲಾಮೆಗಳ ವಾಸವಿಲ್ಲವೆಂದು ಹೈಕೋರ್ಟಿಗೆ ವರದಿ ಸಲ್ಲಿಸಿತ್ತು. ಈ ಆಧಾರದಲ್ಲಿ ನ್ಯಾಯಾಲಯ ಖಾಸಗಿ ಬಂದರು ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿತ್ತೆಂದು ಹೋರಾಟಗಾರರು ದೂರಿದ್ದಾರೆ. ಬಂದರು ನಿರ್ಮಾಣದ ಪರವಿರುವ ಆಡಳಿತ ವರ್ಗ ಮತ್ತು ಉದ್ಯಮಿಗಳು ನ್ಯಾಯಾಲಯವನ್ನು ದಿಕ್ಕು ತಪ್ಪಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಈಗ ಕಡಲಾಮೆಗಳು ಮೊಟ್ಟೆಯನ್ನು ಬಂದರು ಯೋಜನೆ ಸ್ಥಳದಲ್ಲೇ ಹಾಕಿ ಪ್ರಾದೇಶಿಕತೆ ಸಾಬೀತು ಪಡಿಸಿವೆ. ಅಪರೂಪದ ಜೀವ ವೈವಿದ್ಯವಾದ ಕಡಲಾಮೆ ಸಂತತಿ ಸಂರಕ್ಷಿಸುವಂತೆ ಹೈಕೋರ್ಟ್ ಹಿಂದೆ ಹೇಳಿದೆ. ಹೀಗಾಗಿ ಕಾಸರಕೋಡು ಕಡಲತಡಿಯ ಕಡಲಾಮೆಗಳ ಕಾಪಾಡುವ ಹೊಣೆಗಾರಿಕೆ ಯಾರದು ಎಂಬ ಪ್ರಶ್ನೆ ಉದ್ಭವಿಸಿದೆ.

ಖಾಸಗಿ ಬಂದರು ನಿರ್ಮಾಣಕ್ಕೆ ಹಠ ತೊಟ್ಟಿರುವ ಬಂಡವಾಳಶಾಹಿಗಳು ಹಾಗೂ ಆವರಿಗೆ ಒತ್ತಾಸೆಯಾಗಿ ನಿಂತಿರುವ ಆಳುವ ವರ್ಗ ಸಿಕ್ಕಿರುವ ಕಡಲಾಮೆ ಮೊಟ್ಟೆಗಳನ್ನು ನಾಶಮಾಡಿ ಚೆನ್ನೈನ ಸಂಶೋಧನಾ ಸಂಸ್ಥೆ ಕಾಸರಕೋಡು ಕಡಲ ಪ್ರದೇಶದಲ್ಲಿ ಕಡಲಾಮೆಗಳಿಲ್ಲವೆಂದು ಕೊಟ್ಟಿರುವ ಖೋಟಾ ವರದಿಯೆ ನಿಜವೆಂದು ಬಿಂಬಿಸಿ ಬಂದರು ನಿರ್ಮಾಣಕ್ಕೆ ನ್ಯಾಯಾಲಯದಿಂದ ಪಡೆದಿರುವ ಒಪ್ಪಿಗೆ ಕಾಪಾಡಿಕೋಳ್ಳಲು ಹುನ್ನಾರ ನಡೆಸುವ ಸಾಧ್ಯತೆಯಿದೆಯೆಂದು ಸ್ಥಳಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕಾಸರಕೋಡಲ್ಲಿ ದೊರೆತಿರುವ ಕಡಲಾಮೆ ಮೊಟ್ಟೆಗಳನ್ನು ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಾರವಾರದಲ್ಲಿ ಹವಳ ದ್ವೀಪದ ಗಿಡುಗ ಕಡಲಾಮೆ ಕಳೇಬರ ಪತ್ತೆ!


