Homeಮುಖಪುಟಕೃಷಿಗೆ ಸ್ವಾತಂತ್ರ್ಯಾನಂತರದ ರಕ್ಷಣೆ, ಹಸಿರುಕ್ರಾಂತಿ, ಬೆಂಬಲ ಬೆಲೆ ಪದ್ಧತಿ

ಕೃಷಿಗೆ ಸ್ವಾತಂತ್ರ್ಯಾನಂತರದ ರಕ್ಷಣೆ, ಹಸಿರುಕ್ರಾಂತಿ, ಬೆಂಬಲ ಬೆಲೆ ಪದ್ಧತಿ

- Advertisement -
- Advertisement -

ಬ್ರಿಟಿಷ್ ವಸಾಹತುಶಾಹಿ ದಬ್ಬಾಳಿಕೆಯಲ್ಲಿ ಕೃಷಿ ಫಸಲುಗಳ ಬೆಲೆಗಳು ಒಂದು ಕಡೆ ಬ್ರಿಟಿಷ್ ಕೈಗಾರಿಕೆಗಳ ಲಾಭದ ದೃಷ್ಟಿಯಿಂದ ನಿಯಂತ್ರಿಸಲ್ಪಡುತ್ತಿದ್ದವು. ರೈತರು ತಮ್ಮ ಉತ್ಪನ್ನವನ್ನು ಅತ್ಯಂತ ಕಡಿಮೆ ಬೆಲೆಗೆ ಮಾರುವ ಅನಿವಾರ್ಯತೆ ಸೃಷ್ಟಿಸುವ ಕಂದಾಯ, ಭೂಮಾಲಕರ ಗೇಣಿ, ಬಡ್ಡಿ ಸಾಹುಕಾರರ ಸಾಲ ಪಾವತಿಗಳ ಒತ್ತಡ ನೀತಿಯನ್ನು ಅನುಸರಿಸಲಾಗುತ್ತಿತ್ತು. ಮತ್ತೊಂದು ಕಡೆ ವಿಶ್ವದ ಬೇರೆ ಬೇರೆ ವಸಾಹತುಗಳಲ್ಲಿನ ಹಾಗೂ ಅಮೆರಿಕದಂತಹ ದೇಶಗಳ ಕಪ್ಪು ವರ್ಣೀಯರ ಗುಲಾಮರ ಅಗ್ಗದ ದುಡಿಮೆಯಿಂದ ಬೆಳೆದ ಬೆಳೆಗಳ ಜೊತೆಗೆ ಅಸಮಾನ ಮತ್ತು ಅನಾರೋಗ್ಯಕರ ಸ್ಪರ್ಧೆಗೆ ಭಾರತದ ಗೇಣೀದಾರ ರೈತರನ್ನು ಒಡ್ಡುವ ಮೂಲಕ ಅವರನ್ನು ನಷ್ಟಕ್ಕೀಡು ಮಾಡಲಾಗುತ್ತಿತ್ತು. ಭಾರತದ ಕೈಗಾರಿಕೆಗಳೂ, ಕುಶಲ ಕರ್ಮಿಗಳೂ ಇಂತಹ ಅಹಿತಕರ ಸ್ಫರ್ಧೆಗೆ ಒಳಗಾಗಿದ್ದರು. ಇದರ ಫಲವಾಗಿ ’ಸುಡು ಸುಡು ಪರದೇಶೀಯರ ವಸ್ತ್ರವ’ ಎಂಬ ಸ್ವದೇಶಿ ಘೋಷಣೆ ಭಾರತದ ಸ್ವಾತಂತ್ರ್ಯ ಚಳವಳಿಯ ಮುಖ್ಯ ಸಾರವಾಗಿತ್ತು.

ಈ ಹಿನ್ನೆಲೆಯಲ್ಲಿ ಭಾರತದ ರೈತ ಸ್ವಾತಂತ್ರ್ಯ ಚಳವಳಿಗಳಲ್ಲಿ ಬೃಹತ್ ಪ್ರಮಾಣದಲ್ಲಿ ಭಾಗವಹಿಸಿದುದಲ್ಲದೆ ರೈತ ಚಳುವಳಿಗಳ ಮೂಲಕವೂ ದನಿ ಎತ್ತಿದ್ದ.

ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಬಂದ ತರುಣದಲ್ಲಿಯೇ ಭಾರತದ ಕೃಷಿ ಮತ್ತು ಕೈಗಾರಿಕೆಗಳನ್ನು ರಕ್ಷಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿತು. ಅದರಲ್ಲಿ ಭಾರತದ ಕೃಷಿಯನ್ನು ರಕ್ಷಿಸಲು ಮೂರು ಸುತ್ತಿನ ಕೋಟೆ ಕಟ್ಟಲಾಯಿತು.

ಮೂರು ಸುತ್ತಿನ ಕೋಟೆ

ಈ ಕೋಟೆಯ ಮೊದಲ ಸುತ್ತು ಕ್ವಾಂಟಿಟೇಟಿವ್ ರಿಸ್ಟ್ರಿಕ್ಷನ್ಸ್ ಎಂದು ಕರೆಯಲಾಗುವ ಪರಿಮಾಣಾತ್ಮಕ ನಿರ್ಬಂಧಗಳು. ಭಾರತ ಸರ್ಕಾರವೇ ನಮ್ಮ ದೇಶದೊಳಗೆ ಕೊರತೆ ಉಂಟಾದ ಸಂದರ್ಭದಲ್ಲಿ, ಯಾವುದನ್ನು ಎಷ್ಟು ಆಮದು ಮಾಡಿಕೊಳ್ಳಬೇಕು ಎಂದು ತೀರ್ಮಾನಿಸದ ಹೊರತು, ನಮ್ಮ ದೇಶದೊಳಕ್ಕೆ ಬೇರೆ ಯಾವುದೇ ದೇಶದಿಂದ ಯಾವುದೇ ಕೃಷಿ ಫಸಲು ಪ್ರವೇಶ ಮಾಡಲು ಅವಕಾಶವಿಲ್ಲ ಎಂಬ ನೀತಿ.

ಎರಡನೆಯ ಕೋಟೆ: ದೇಶದಲ್ಲಿ ಉದ್ಭವವಾಗುವ ಕೊರತೆ, ಬೆಲೆ ಏರಿಕೆ, ಇತರ ತುರ್ತುಗಳಿಗನುಸಾರವಾಗಿ ಮೇಲೆ ಹೇಳಿದಂತೆ ಸರ್ಕಾರದ ತೀರ್ಮಾನಕ್ಕನುಗುಣವಾಗಿ ಭಾರತದೊಳಕ್ಕೆ ಕೃಷಿ ಫಸಲುಗಳನ್ನು ಆಮದು ಮಾಡಿಕೊಳ್ಳಲು ಹೆಚ್ಚಾಗಿ ಸರ್ಕಾರದ ಒಡೆತನದ ಕಂಪನಿಗಳು ಅಥವಾ ಸರ್ಕಾರದ ಲೈಸೆನ್ಸ್ ಪಡೆದ ಸಂಸ್ಥೆಗಳು ಮಾತ್ರ ಅವಕಾಶ ನೀಡುವುದು. ಅದೇ ರೀತಿ ಕೃಷಿ ರಫ್ತನ್ನೂ ಕೂಡ ಭಾರತದಲ್ಲಿ ಫಸಲುಗಳ ಉತ್ಪಾದನೆಗೆ ಅನುಗುಣವಾಗಿ ಮೇಲಿನಂತೆಯೇ ಸರ್ಕಾರದ ತೀರ್ಮಾನಕ್ಕೊಳಪಡಿಸಲಾಯಿತು.

ಸ್ಟೇಟ್ ಟ್ರೇಡಿಂಗ್ ಕಾರ್ಪೊರೇಷನ್ (ಎಸ್‌ಟಿಸಿ) ಎಂಬ ಸಂಸ್ಥೆಯನ್ನು ಭಾರತ ಸರ್ಕಾರದ ಒಡೆತನದಲ್ಲಿ 1956ರಲ್ಲಿ ಹಲವು ಸಾಮಾನ್ಯ ವಸ್ತುಗಳ ಆಮದು, ರಫ್ತು ಕೈಗೊಳ್ಳಲು ಸ್ಥಾಪಿಸಲಾಯಿತು. ಕೃಷಿ ಫಸಲುಗಳಾದ ಹತ್ತಿ, ಬೇಳೆಕಾಳುಗಳು, ಅಡುಗೆ ಎಣ್ಣೆ, ಈರುಳ್ಳಿ, ಗೋಧಿ ಮೊದಲಾದವನ್ನು ಆಮದು ಮಾಡಿಕೊಂಡು ಮಾರುಕಟ್ಟೆಗೆ ಒದಗಿಸುವುದು, ಹೆಚ್ಚಳವಾದ ಫಸಲುಗಳನ್ನು ರಫ್ತು ಕೂಡ ಮಾಡುವುದು ಇದರ ಮುಖ್ಯ ಕೆಲಸಗಳಾಗಿದೆ. ಅದರ ಜೊತೆಗೆ ಬೇರೆ ಬೇರೆ ಕಾಲಘಟ್ಟದಲ್ಲಿ ಕಾಫಿ ಬೋರ್ಡ್, ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾ, ಏಲಕ್ಕಿ ಸೇರಿದಂತೆ ಐವತ್ತೆರಡು ಸಾಂಬಾರ ಪದಾರ್ಥಗಳ ಉತ್ಪಾದನೆ, ರಫ್ತು ನಿರ್ವಹಣೆಗೆ ಸ್ಪೈಸಸ್ ಬೋರ್ಡ್ ಮೊದಲಾದ ಸಂಸ್ಥೆಗಳನ್ನು ಸ್ಥಾಪಿಸಲಾಯಿತು.

ಮೂರನೆಯ ಕೋಟೆ: ಆಮದು ಸುಂಕಗಳು – ಭಾರತದ ರೈತರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ವಿದೇಶಗಳಿಂದ ಕೃಷಿ ಫಸಲುಗಳನ್ನು ತಂದು ಸುರಿಯಲ್ಪಡುವುದನ್ನು ತಪ್ಪಿಸಲು ಅಗತ್ಯ ಬಿದ್ದರೆ ಅಂತಾರಾಷ್ಟ್ರೀಯ ಬೆಲೆಗಳಿಗಿಂತ ಎರಡು ಮೂರು ಪಟ್ಟು ಆಮದು ಸುಂಕಗಳನ್ನು ಹೇರಿ ಆಮದಿನ ಪ್ರಮಾಣವನ್ನು ನಿಯಂತ್ರಿಸುವುದು.

ಈ ಮೂರೂ ಕೋಟೆಗಳ ಕೃಷಿ ರಕ್ಷಣಾ ನೀತಿಯ ಪರಿಣಾಮವಾಗಿ, ಒಂದು ಅಧ್ಯಯನದ ಪ್ರಕಾರ, 1991ರವರೆಗೆ ಭಾರತದ ಕೃಷಿ ಫಸಲುಗಳಲ್ಲಿ ಶೇ.93ರಷ್ಟು ವಿದೇಶಿ ವಾಣಿಜ್ಯದಿಂದ ರಕ್ಷಣೆಗೊಳಪಟ್ಟಿದ್ದವು. ಆದರೆ, 1992ರಲ್ಲಿ ಬಾಬರಿ ಮಸೀದಿಯನ್ನು ಒಡೆಯುವ ಮೂಲಕ ದೇಶದ ಸಂವಿಧಾನದ ರಕ್ಷಣೆಯ ಕೋಟೆಗೆ ಧಕ್ಕೆ ತರುವ ಮೊದಲೇ ಕೃಷಿ ರಕ್ಷಣಾ ಕೋಟೆಗಳನ್ನು ಒಡೆಯುವ ಕೆಲಸ ಆರಂಭವಾಯಿತು ಎಂಬುದು ಕಾಕತಾಳೀಯವಲ್ಲ. ಈ ಎರಡರ ನಡುವಣ ಅಂತರ್‌ಸಂಬಂಧದ ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ.

ಬರಗಾಲ, ಹಸಿರು ಕ್ರಾಂತಿ

ಬ್ರಿಟಿಷರ ಆಡಳಿತದಲ್ಲಿ ಪದೇಪದೇ ಬರಗಾಲ, ಲಕ್ಷಾಂತರ ಜನರ ಹಸಿವಿನ ಸಾವುಗಳು ಸರಿಸುಮಾರು ಪ್ರತಿ ವರ್ಷದ ಮಾತಾಗಿತ್ತು. ಅದನ್ನು ತಪ್ಪಿಸಲು ಮತ್ತು ಬೆಳೆಯುತ್ತಿರುವ ಕೈಗಾರಿಕೆಗಳಿಗೆ ಅಗತ್ಯವಾದ ಕಚ್ಚಾ ವಸ್ತುಗಳನ್ನು ಒದಗಿಸಲು ಆಹಾರ ಮತ್ತಿತರ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುವ ಜರೂರು ಉಂಟಾಗಿತ್ತು.

ಆದ್ದರಿಂದ ಸ್ವಾತಂತ್ರ್ಯಬಂದನಂತರದ ಕೆಲ ವರ್ಷಗಳಲ್ಲಿ ನೀರಾವರಿ ಸೌಲಭ್ಯ ಹೆಚ್ಚಿಸಲು ಬೃಹತ್ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಯಿತು. ದೆಹಲಿ ಗಡಿಗಳಲ್ಲಿ ದಿಟ್ಟತನದ ಹೋರಾಟ ಮಾಡಿದ ಪಂಜಾಬ್, ಹರ್ಯಾಣಗಳ ರೈತರ ಹೊಲಗಳಿಗೆ ಹಾಗೂ ರಾಜಾಸ್ಥಾನದ ಕೆಲ ಭಾಗಗಳಿಗೆ ನೀರುಣಿಸುವ ಭಾಕ್ರಾ ನಂಗಲ್, ಪೂರ್ವದಲ್ಲಿ ದಾಮೋದರ ಕಣಿವೆ, ಹಿರಾಕುಡ್, ದಕ್ಷಿಣದಲ್ಲಿ ತುಂಗಭದ್ರಾ ಹೀಗೆ ಮೊದಲಾದ ನೀರಾವರಿ ಯೋಜನೆಗಳು ಬೆಳಕು ಕಂಡವು.

ಆದರೆ ಇವುಗಳ ಸಹಾಯದಿಂದಾದ ಉತ್ಪಾದನೆ ಕೆಲ ವರ್ಷಗಳ ನಂತರ ಭಾರತದ ಆಹಾರದ ಅಗತ್ಯಗಳಿಗೆ ಸಾಲದಾಯಿತು. ಮುಂದೆ ಅದೇ ವೇಗದಲ್ಲಿ ನೀರಾವರಿ ಯೋಜನೆಗಳ ಕಾರ್ಯರೂಪಕ್ಕೆ ಅಗತ್ಯವಾದ ಹಣ ಒದಗಿಸಿಕೊಳ್ಳುವ ಸಲುವಾಗಿ, ಅಂದಿನ ಪ್ರಧಾನಿ ನೆಹರೂ ಅವರ ಸರ್ಕಾರ ದೊಡ್ಡ ಕೈಗಾರಿಕೋದ್ಯಮಿಗಳು ಪಡೆಯುತ್ತಿದ್ದ ಲಾಭ ಮತ್ತು ದೊಡ್ಡ ಜಮೀನುದಾರರ ಮೇಲೆ ತೆರಿಗೆ ಹಾಕುವ ಧೈರ್ಯ ತೋರಲಿಲ್ಲ. ಭಾರತದ ಭೂಮಿಯ ಬಹುಭಾಗದ ಒಡೆತನ ಹೊಂದಿದ್ದ ನಗರ ಕೇಂದ್ರಿತ ಜಮೀನುದಾರರ, ಬಡ್ಡಿ ಸಾಹುಕಾರರ ಸುಲಿಗೆಯಿಂದ ಗೇಣೀದಾರ ಹಾಗೂ ಸ್ವತಂತ್ರ ರೈತರನ್ನು ರಕ್ಷಿಸುವ ಬಗ್ಗೆ ಕೇವಲ ಮಾತುಗಳ ಸುರಿಮಳೆಯಾಯಿತೇ ಹೊರತು ಕಾರ್ಯರೂಪಕ್ಕೆ ಬರಲಿಲ್ಲ.

ಇವೆಲ್ಲದರ ಫಲವಾಗಿ 1960ರ ದಶಕದ ಮಧ್ಯ ಭಾಗದಲ್ಲಿ ಕ್ಷಾಮ ಡಾಮರುಗಳು ತಲೆದೋರಿದವು. ಆಹಾರದ ದೊಡ್ಡ ಕೊರತೆಯುಂಟಾಯಿತು. ಇವುಗಳ ಜೊತೆಗೆ ಎರಡು ಯುದ್ಧಗಳನ್ನು ಭಾರತ ಎದುರಿಸಬೇಕಾಯಿತು. ಈ ಹಿನ್ನೆಲೆಯಲ್ಲಿಯೇ ಜೈಜವಾನ್, ಜೈಕಿಸಾನ್ ಘೋಷಣೆ ಜನಪ್ರಿಯವಾಯಿತು. ಆದರೇನು ಉಳುವವನೇ ಒಡೆಯನಾಗದೆ, ಕೃಷಿಗೆ ಅಗತ್ಯ ಸೌಲಭ್ಯ-ನೆರವು ಸಿಗದೆ ಕೃಷಿ ಉತ್ಪಾದನೆ ಹೆಚ್ಚಾಗಲಿಲ್ಲ. ಒಂದೆರಡು ಕೇಜಿ ಅಕ್ಕಿ, ರಾಗಿಗಾಗಿ ಗಂಟೆಗಟ್ಟಲೆ ಅಂಗಡಿಗಳ ಮುಂದೆ ನಿಂತು
ಒಣಗಿದರೂ ಸಿಕ್ಕದೆ ಬರಿಗೈಯಿಂದ ಮನೆಗೆ ಬರುವುದು ಸಾಮಾನ್ಯವಾಯಿತು. ಆಗಲೇ ರೇಷನ್ ಅಂಗಡಿಗಳ ಮೂಲಕ ನಗರಗಳಲ್ಲಿ ಸೀಮಿತ ಪ್ರಮಾಣದಲ್ಲಿ ಧಾನ್ಯಗಳ ಮಾರಾಟದ ಪದ್ದತಿ ಆರಂಭವಾಯಿತು.

ಪಿ.ಎಲ್.480 ಗೋಧಿ, ಹಸಿರುಕ್ರಾಂತಿಯ ತುರ್ತು, ಬೆಂಬಲ ಬೆಲೆ ಪದ್ಧತಿ

ಜನರು ಹಸಿವಿನಿಂದ ಸಾಯುವುದನ್ನು ತಪ್ಪಿಸಲು ಸರ್ಕಾರ ಅಮೆರಿಕದ ಕಡೆಗೆ ಕೈ ಚಾಚಿತು. ಆಗ 70ರ ದಶಕದಲ್ಲಿ, ಅಮೆರಿಕದಿಂದ, ಪಬ್ಲಿಕ್ ಲಾ 480 ಎಂಬ ಕಾನೂನಿನಡಿಯಲ್ಲಿ ಗೋಧಿ, ಮುಸುಕಿನ ಜೋಳ ಪಡೆಯಲಾಯಿತು. ದಕ್ಷಿಣ ಕರ್ನಾಟಕ, ಕರಾವಳಿಯ ಜನರು ಮೊತ್ತಮೊದಲ ಬಾರಿಗೆ ಚಪಾತಿ ಎಂಬ ಹೆಸರು ಕೇಳಿದರು. ಮುಸುಕಿನಜೋಳದ ರವೆಯಿಂದ ಮಾಡಿದ ಉಪ್ಪಿಟ್ಟನ್ನು ಕಷ್ಟಪಟ್ಟು ತಿಂದರು.

ಆದರೆ ಅದೇ ಸಮಯದಲ್ಲಿ ಈ ಗೋಧಿ ನೆರವು ನೀಡಲು ಅಮೆರಿಕ ಬಹು ಕಠಿಣ ಷರತ್ತುಗಳನ್ನು ವಿಧಿಸಲಾರಂಭಿಸಿತು. ಗೋಧಿ ಹೊತ್ತ ಒಂದೊಂದು ಹಡಗು ಅಮೆರಿಕದ ಬಂದರುಗಳಿಂದ ಹೊರಡುವ ಮೊದಲು ಅದು ವಿಧಿಸಿದ ಷರತ್ತುಗಳನ್ನು ಒಪ್ಪಿದರೆ ಮಾತ್ರ ಹಡಗು ಅಲ್ಲಿಂದ ಹೊರಡುತ್ತಿತ್ತು. ಅಲ್ಲಿಯ ಅಧ್ಯಕ್ಷ ಲಿಂಡನ್ ಜಾನ್ಸನ್ ವಿಧಿಸಿದ ಷರತ್ತುಗಳಿಂದ ಅಂದು ಅಮೆರಿಕಕ್ಕೆ ಭೇಟಿ ನೀಡಿದ್ದ ಇಂದಿರಾ ಗಾಂಧಿಯವರ ಗೋಣು ತಿರುಚಲಾಯಿತು ಎಂದು ಪತ್ರಿಕೆಗಳು ಬರೆಯುವಂತಾಯಿತು.

ಈ ಹಿನ್ನೆಲೆಯಲ್ಲಿ ಅಂದು ಮೆಕ್ಸಿಕೋದ ಹಾಗೂ ಫಿಲಿಪೈನ್ಸ್ ದೇಶದ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರಗಳಲ್ಲಿ ರೂಪಿಸಿದ ಗೋಧಿ, ಭತ್ತದ ಹೆಚ್ಚು ಇಳುವರಿ ತಳಿಗಳು, ಮುಸುಕಿನ ಜೋಳ, ಜೋಳದ ಹೈಬ್ರಿಡ್ ತಳಿಗಳನ್ನು ಪಡೆದು ಆಹಾರದ ಉತ್ಪಾದನೆ ಹೆಚ್ಚಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳಲಾಯಿತು.

ಅಂದು ನೀರಾವರಿಗೊಳಗಾಗಿದ್ದ ಹೊಲ ಗದ್ದೆಗಳಲ್ಲಿ ಹೊಸ ತಳಿಗಳ ಬೀಜ, ಹೆಚ್ಚು ರಸಗೊಬ್ಬರ, ಕೀಟನಾಶಕಗಳ ಉಪಯೋಗ ಒಂದು ಕಡೆಯಾದರೆ, ಇವುಗಳನ್ನು ರೈತರಿಗೆ ಕಡಿಮೆ ಬೆಲೆಯಲ್ಲಿ ಒದಗಿಸಲು ಸರ್ಕಾರ ಸಬ್ಸಿಡಿಗಳೆಂಬ ಸಹಾಯಧನ ನೀಡತೊಡಗಿತು.

ಈ ತೀವ್ರ ಬೇಸಾಯಕ್ಕೆ ಅಗತ್ಯವಾದ ಬಂಡವಾಳವನ್ನು ಒದಗಿಸಲು ಬ್ಯಾಂಕುಗಳನ್ನು ರಾಷ್ಟ್ರೀಕೃತಗೊಳಿಸಲಾಯಿತು. ಬ್ಯಾಂಕುಗಳ ಶಾಖೆಗಳನ್ನು ಹಳ್ಳಿಹಳ್ಳಿಗಳಲ್ಲಿ ಆರಂಭಿಸಲಾಯಿತು. (ಈ ಕ್ರಮ ರೈತರಿಗೆ ಸಾಲ ಒದಗಿಸಲು ಉಪಯುಕ್ತವಾದುದಕ್ಕಿಂತ ಹೆಚ್ಚಾಗಿ ಹಳ್ಳಿಗಳ ಉಳಿತಾಯವನ್ನು ಕ್ರೋಢೀಕರಿಸಿ ನಗರಗಳ ಉದ್ದಿಮೆಗಳಿಗೆ ಸಾಲ ಒದಗಿಸಲು ಪ್ರಯೋಜನವಾಯಿತೆಂಬುದೂ ಸತ್ಯ.) ಸಹಕಾರಿ ಸಂಘಗಳ ಜಾಲವನ್ನು ವಿಸ್ತರಿಸಿ ಬ್ಯಾಂಕ್ ಬಂಡವಾಳವನ್ನು ಒದಗಿಸಲಾಯಿತು.

ಈ ಎಲ್ಲ ಕ್ರಮಗಳಿಗಿಂತ ಹೆಚ್ಚಾಗಿ ದೊಡ್ಡ ಜಮೀನುದಾರರು, ಅದರಲ್ಲೂ ತಮ್ಮ ಭೂಮಿಯ ಬಳಿ ವಾಸವಿಲ್ಲದೆ ನಗರಗಳಿಂದ ಗೇಣಿದಾರರುಗಳಿಗೆ ಕೃಷಿಯ ಸೂಚನೆ ನೀಡುವ ಗೈರುಹಾಜರಿ ಜಮೀನುದಾರರ ಹಿಡಿತದಲ್ಲಿ, ಹಸಿರುಕ್ರಾಂತಿಯ ತೀವ್ರ ಬೇಸಾಯಕ್ಕೆ ಗಮನ ನೀಡುವುದು ಸಾಧ್ಯವಿರಲಿಲ್ಲ. ಅವರ ಒಡೆತನದಲ್ಲಿ ಭೂಮಿ ಇರುವವರೆಗೂ ಕೃಷಿ ಉತ್ಪಾದನೆ ಹೆಚ್ಚಾಗುವುದು ಸಾಧ್ಯವಿರಲಿಲ್ಲ. ಇದುಉಳುವವನೇ ಹೊಲದೊಡೆಯ ಎಂಬ ಆಶಯವನ್ನು ಮತ್ತೆ ನೆನಪಿಸಿತು. ನೆಹರೂ ಕಾಲದ ಭೂಸುಧಾರಣೆಯ ಬುರುಗು ಘೋಷಣೆ ನೆಲಕ್ಕಿಳಿಯಬೇಕಾದ ತುರ್ತು ಉಂಟಾಯಿತು. ಅದೇ ರೀತಿ ಸಾವಿರಾರು ವರ್ಷಗಳ ಕಾಲದ ಜೀತಗಾರಿಕೆಯ ದುಡಿಮೆಯೂ ಹಸಿರು ಕ್ರಾಂತಿಯ ಬೇಸಾಯಕ್ಕೆ ಒಗ್ಗುವುದಾಗಿರಲಿಲ್ಲ. ಹಳೆಯ ಭೂಸಂಬಂಧಗಳನ್ನು ಮಾರ್ಪಡಿಸದೇ ಕೃಷಿ ಉತ್ಪಾದನೆ ಹೆಚ್ಚುವುದು ಸಾಧ್ಯವಿರಲಿಲ್ಲ. ಆದ್ದರಿಂದ ಜೀತ ವಿಮುಕ್ತಿಯ ಕ್ರಮಗಳನ್ನೂ ಕೈಗೊಳ್ಳಲಾಯಿತು.

ಇವುಗಳ ಜೊತೆಗೆ ಹಸಿರು ಕ್ರಾಂತಿಯ ಪರಿಕರಗಳನ್ನು ಒದಗಿಸಲು ರಾಷ್ಟ್ರೀಯ ಬೀಜ ನಿಗಮ, ಹೊಸ ತಳಿಗಳ ಶೋಧನೆಗೆ ಕೃಷಿ ವಿಶ್ವ ವಿದ್ಯಾನಿಲಯ ಹಾಗೂ ಸಂಶೋಧನಾ ಕೇಂದ್ರಗಳ ಬೃಹತ್ ಜಾಲವನ್ನು ಸ್ಥಾಪಿಸಲಾಯಿತು. ರಸಗೊಬ್ಬರಗಳ ತಯಾರಿಕೆಗೆ ಸರ್ಕಾರಿ, ಅರೆ ಸರ್ಕಾರಿ ರಸಗೊಬ್ಬರ ಹಾಗೂ ಕೀಟನಾಶಕ, ರೋಗನಾಶಕ ರಾಸಾಯನಿಕ ಕೈಗಾರಿಕೆಗಳು ಸ್ಥಾಪನೆಗೊಂಡವು.

ಬೆಳೆಯುವ ವೆಚ್ಚ ಏರುತ್ತಿರುವಾಗ ಬೆಳೆಗಳಿಗೆ ಬೆಂಬಲ ಬೆಲೆಯ ಖಾತರಿ ನೀಡದೆ ರೈತರು ನಷ್ಟಕ್ಕೊಳಗಾಗುವ ಕೃಷಿಯನ್ನು ಕೈಗೊಳ್ಳುವ ಸಾಧ್ಯತೆ ಇರಲಿಲ್ಲ. ಆದ್ದರಿಂದ 1965ರಲ್ಲಿ ಕೃಷಿ ಬೆಲೆ ಆಯೋಗದ ಮೂಲಕ ಬೆಂಬಲ ಬೆಲೆ ಘೋಷಿಸುವ ಪದ್ಧತಿಯನ್ನು ಆರಂಭಿಸಲಾಯಿತು.

ಹೀಗೆ ಹಸಿರುಕ್ರಾಂತಿ, ಭೂಸುಧಾರಣೆ, ಜೀತ ವಿಮುಕ್ತಿ, ಬ್ಯಾಂಕ್ ರಾಷ್ಟ್ರೀಕರಣ, ಸಾರ್ವಜನಿಕ ಕೈಗಾರಿಕೆಗಳು, ಬೆಂಬಲ ಬೆಲೆ ಎಂಬ ಸಂಯುಕ್ತ ಹಾಗೂ ಸಂಕೀರ್ಣ ಕ್ರಮಗಳ ಒಟ್ಟು ಫಲವಾಗಿ ಕೃಷಿ ಉತ್ಪಾದನೆ ಆಹಾರದ ಹಾಗೂ ಕೈಗಾರಿಕೆಗಳ ಸದ್ಯದ ಅಗತ್ಯಗಳನ್ನು ಪೂರೈಸುವಷ್ಟು ಸಮರ್ಥವಾಯಿತು. ಪಿ.ಎಲ್.480ಅನ್ನು ನಿಲ್ಲಿಸಲಾಯಿತು. ಅಮೆರಿಕದ ಮುಷ್ಟಿಯ ನೇರ ಹಿಡಿತದಿಂದ ಸ್ವಲ್ಪ ಬಿಡಿಸಿಕೊಳ್ಳಲು ಸಾಧ್ಯವಾಯಿತು.

ಅದರ ಫಲ, ಬಾಂಗ್ಲಾದೇಶದ ವಿಮೋಚನೆಯ ಸಮರದಲ್ಲಿ ಅಮೆರಿಕದ ಆಜ್ಞೆ, ಬೆದರಿಕೆಗಳನ್ನು ಧಿಕ್ಕರಿಸಿ ವಿಮೋಚನೆಗೊಳಿಸಲು ಸಾಧ್ಯವಾಯಿತು.

ಆದರೆ ನಮ್ಮನ್ನಾಳುವ ವರ್ಗದ ಸರ್ಕಾರಗಳಿಗೆ ಅಷ್ಟೇ ಸಾಕಾಯಿತು. ಅದಕ್ಕೆಷ್ಟು ಬೇಕೋ ಅಷ್ಟೇ ಭೂಸುಧಾರಣೆ, ಅಷ್ಟೇ ಜೀತವಿಮುಕ್ತಿ, ಅಷ್ಟೇ ಬ್ಯಾಂಕ್ ಸುಧಾರಣೆ, ಅಷ್ಟೇ ಬೀಜ ಉತ್ಪಾದನೆ, ಕೃಷಿ ಸಂಶೋಧನೆ, ಅಷ್ಟೇ ಬೆಂಬಲ ಬೆಲೆ ಎಂಬ ಕುದುರೆಯ ಕಣ್ಕಟ್ಟಿನ ಸಂಕುಚಿತ ನೀತಿಗಳಿಗೆ ಇಂದಿರಾಗಾಂಧಿ, ರಾಜೀವ್ ಗಾಂಧಿ ಒಕ್ಕೂಟ ಸರ್ಕಾರಗಳು ಸೀಮಿತಗೊಂಡಿತು. ನಂತರ ಬಂದ ಜನತಾ ಪಕ್ಷ ಹಾಗೂ ಸಮ್ಮಿಶ್ರ ಸರ್ಕಾರಗಳೂ ಕೂಡಾ ಅದಕ್ಕಿಂತ ಹೆಚ್ಚೇನು ಮುಂದುವರೆಯಲಿಲ್ಲ.

ಭಾರತದ ಜನರೆಲ್ಲರ ಹಸಿವು ನೀಗಿಸುವ, ಅವರ ದುರ್ಬಲ ಬಡಕಲು ಶರೀರಗಳ ರಕ್ತ ಹೀನತೆಯನ್ನು ತೊಡೆದು ಹಾಕುವಷ್ಟು ಪೋಷಕಾಂಶಗಳ ಆಹಾರ ಒದಗಿಸುವುದು ಎಂದೂ ಅವರ ಗುರಿಯಾಗಲಿಲ್ಲ.

ರೈತರಿಗೆ ಬೆಂಬಲ ಬೆಲೆ ಎಂಬುದು ಕೇವಲ 70ರ ದಶಕದ ಕೊನೆಯ ಹಾಗೂ 80ರ ದಶಕದ ಆರಂಭದ ನಾಲ್ಕಾರು ವರ್ಷಗಳಿಗೆ ಸೀಮಿತವಾಯಿತು. ಕೃಷಿ ಹೆಚ್ಚು ಹೆಚ್ಚು ಕಾರ್ಪೊರೆಟ್‌ಗಳ ದುರ್ಲಾಭದ ದುರಾಸೆಗೆ ಬಲಿಯಾಯಿತು. ಅದರ ಫಲವಾಗಿ ಮುಂದಿನ ವರ್ಷಗಳಲ್ಲಿ ಬೆಂಬಲ ಬೆಲೆ ಎಂಬುದು ಕೇವಲ ಭಾಷಣ, ಭರವಸೆಗಳ ಒಣ ಚರ್ಚೆಗಳಿಗೆ ಸೀಮಿತವಾಯಿತು.

ಒಂದು ಕಡೆ ಬೆಂಬಲ ಬೆಲೆ ದಕ್ಕಲಿಲ್ಲ ಮತ್ತೊಂದು ಕಡೆ ಕೃಷಿ ಪರಿಕರಗಳ ತಯಾರಿಕೆ ಹಾಗೂ ಸರಬರಾಜಿನಲ್ಲಿ ಸರ್ಕಾರದ ಪಾತ್ರ ಕುಗ್ಗುತ್ತಾ ಹೋಗಿ, ಹೆಚ್ಚುಹೆಚ್ಚು ಖಾಸಗಿ ಕಂಪನಿಗಳ ವಶವಾಯಿತು. ಅದರಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪಾತ್ರ ಪ್ರಧಾನವಾಗುತ್ತಾ ಬಂದಿತು.

ಇವುಗಳ ಫಲವಾಗಿ ರೈತ ಮತ್ತೆ ನಷ್ಟದ ಕೃಷಿ, ಸಾಲದ ಸುಳಿಗೆ ಸಿಕ್ಕಿ ನರಳುವಂತಾಯಿತು.
ಹೀಗೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ರೈತ 80ರ ದಶಕದಲ್ಲಿ ನರಗುಂದ ನವಲಗುಂದ ರೈತ ಬಂಡಾಯದಿಂದ ಆರಂಭವಾಗಿ ರಾಜ್ಯಾದ್ಯಂತ, ದೇಶಾದ್ಯಂತ ಸಿಡಿದೆದ್ದು ಪ್ರತಿಭಟಿಸಿದ.

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ


ಇದನ್ನೂ ಓದಿ: ಮಂಡ್ಯ: ನೆತ್ತಿಯ ಮೇಲಿನ ಸೂರಿಗಾಗಿ, ಭೂಮಿಯ ಹಕ್ಕಿಗಾಗಿ ಶ್ರಮಿಕರ ಪಟ್ಟುಬಿಡದ ಹೋರಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...