ಪಂಜಾಬ್‌ನ ಅಮೃತಸರದ ಮಜಿತಾ ಪ್ರದೇಶದಲ್ಲಿ ನಕಲಿ ವಿಷಪೂರಿತ ಮದ್ಯ ಸೇವಿಸಿ ಸಾವಿಗೀಡಾದವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಸುಮಾರು 10 ಜನರು ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಕಳೆದ ಭಾನುವಾರ ಸಂಜೆ ಮಜಿತಾ ಪ್ರದೇಶದ ಸುಮಾರು ಐದು ಹಳ್ಳಿಗಳ ಜನರು ನಕಲಿ ಮದ್ಯ ಸೇವಿಸಿದ್ದಾರೆ. ಈ ಬೆನ್ನಲ್ಲೇ ಹಲವರು ಅಸ್ವಸ್ಥಗೊಂಡಿದ್ದು, ಈ ಪೈಕಿ ಕೆಲವರು ಸೋಮವಾರ ಬೆಳಿಗ್ಗೆ ಸಾವಿಗೀಡಾಗಿದ್ದಾರೆ. ಆದರೆ, ಈ ವಿಚಾರವನ್ನು ಮುಚ್ಚಿಟ್ಟಿದ್ದ ಗ್ರಾಮಸ್ಥರು, ಮೃತರ ಅಂತ್ಯ ಸಂಸ್ಕಾರ ಮುಗಿಸಿದ್ದರು.
ಸೋಮವಾರ ಸಂಜೆಯ ವೇಳೆ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು, ತಕ್ಷಣ ವೈದ್ಯರ ತಂಡವೊಂದನ್ನು ಹಳ್ಳಿಗಳಿಗೆ ಕಳಿಸಿದ್ದರು. ವೈದ್ಯರು ಮನೆ ಮನೆಗೆ ಹೋಗಿ ನಕಲಿ ಮದ್ಯ ಕುಡಿದವರನ್ನು ತಪಾಸಣೆ ನಡೆಸಿದ್ದರು ಮತ್ತು ಗಂಭೀರ ಸ್ಥಿತಿಯಲ್ಲಿದ್ದ ಕೆಲವರನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೂ, ಮಂಗಳವಾರ ಸಂಜೆಯ ವೇಳೆ ಸಾವಿನ ಸಂಖ್ಯೆ 15 ಆಗಿತ್ತು. ಇಂದು ಮುಂಜಾನೆ ಅದು 21ಕ್ಕೆ ತಲುಪಿದೆ.
ಘಟನೆ ಸಂಬಂಧ 10 ಜನರನ್ನು ಬಂಧಿಸಲಾಗಿದೆ. ಮಜಿತಾ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಮತ್ತು ಸ್ಥಳೀಯ ಅಬಕಾರಿ ಮತ್ತು ತೆರಿಗೆ ಅಧಿಕಾರಿ (ಇಟಿಒ) ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಮಂಗಳವಾರ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಸಾವಿಗೀಡಾದವರು ಮತ್ತು ಸೋಮವಾರದಿಂದ ಆಸ್ಪತ್ರೆಗೆ ದಾಖಲಾದ ಹೆಚ್ಚಿನ ಜನರು ದಿನಗೂಲಿ ಕಾರ್ಮಿಕರು. ಅಮೃತಸರದ ಗುರುನಾನಕ್ ದೇವ್ ಆಸ್ಪತ್ರೆಗೆ ದಾಖಲಾಗಿರುವ 10 ಜನರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಅಮೃತಸರ ಉಪ ಆಯುಕ್ತ ಸಾಕ್ಷಿ ಸಾಹ್ನಿ ಹೇಳಿದ್ದಾರೆ.
ಮಜಿಥಿಯಾದ ಭಂಗಲಿ, ಪಾತಾಳಪುರಿ, ಮರಾರಿ ಕಲನ್ ಮತ್ತು ಥೆರೆವಾಲ್ ಗ್ರಾಮಗಳಲ್ಲಿ ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೆಥನಾಲ್ ಎಂಬ ಅಗ್ಗದ ಕೈಗಾರಿಕಾ ಮದ್ಯವು ಸಣ್ಣ ಪ್ರಮಾಣದಲ್ಲಿಯೂ ಸಹ ಮಾರಕವಾಗಿದ್ದು, ಅದನ್ನು ಅಕ್ರಮ ಮದ್ಯವನ್ನು ತಯಾರಿಸಲು ಆನ್‌ಲೈನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಖರೀದಿಸಲಾಗಿದೆ ಎಂದು ತಿಳಿದುಬಂದಿದೆ.
ಜನ ಪ್ರತಿನಿಧಿಗಳು, ಪೊಲೀಸ್ ಮತ್ತು ಇತರ ಇಲಾಖೆಗಳ ಹಿರಿಯ ಅಧಿಕಾರಿಗಳು ದುರಂತ ಸಂಭವಿಸಿದ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ವೈದ್ಯಕೀಯ ತಂಡವೊಂದನ್ನು ಗ್ರಾಮಗಳಲ್ಲಿ ನೇಮಿಸಲಾಗಿದೆ. ಅವರು ಯಾವುದೇ ಅನಾರೋಗ್ಯ ಲಕ್ಷಣ ಇಲ್ಲದಿದ್ದವರೂ ಸೇರಿದಂತೆ, ನಕಲಿ ಮದ್ಯ ಸೇವಿಸಿದ ಪ್ರತಿಯೊಬ್ಬರನ್ನು ಪರೀಕ್ಷೆ ನಡೆಸಿ ಆಸ್ಪತ್ರೆ ಸೇರಿಸುತ್ತಿದ್ದಾರೆ.
ದುರಂತ ಸ್ಥಳಕ್ಕೆ ಸಿಎಂ ಭೇಟಿ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮದ್ಯ ದುರಂತ ಸಂಭವಿಸಿದ ಗ್ರಾಮಗಳಿಗೆ ತೆರಳಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವವರ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಮೃತ ಕುಟುಂಬಗಳಿಗೆ ಸರ್ಕಾರದಿಂದ ತಲಾ 10 ಲಕ್ಷ ರೂಪಾಯಿ ಆರ್ಥಿಕ ಸಹಾಯ ಘೋಷಿಸಿದ್ದಾರೆ. ಸರ್ಕಾರದಿಂದ ಎಲ್ಲಾ ರೀತಿಯ ಬೆಂಬಲ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
ಘಟನೆಗೆ ಕಾರಣರಾದವರನ್ನು ಬಂಧಿಸಲಾಗಿದೆ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಪ್ರಕರಣದ ಹಿಂದೆ ಎಷ್ಟೇ ದೊಡ್ಡ ಪ್ರಭಾವಿಗಳು ಇದ್ದರೂ, ಅವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.


