ನಮ್ಮ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಕೇಂದ್ರ ಸರ್ಕಾರ ಯಾವ ಕಂಟಕವೂ ಇಲ್ಲದೆ ಎಂಟು ವರ್ಷ ಪೂರೈಸಿರುವ ಹುಮ್ಮಸ್ಸಿನಲ್ಲಿದೆ. ಜೊತೆಗೆ ಕಳೆದ ಆಗಸ್ಟ್ 15ರ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನೂ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಉಮೇದು ಮೆರೆದಿದೆ. ರಾಜಧಾನಿಯ ಕೆಂಪು ಕೋಟೆಯ ಮೇಲೆ ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜ ಹಾರಾಡಿದ್ದನ್ನು ನೋಡಿ ಜನ ಕಣ್ ತುಂಬಿಕೊಂಡಿದ್ದು ಆಯಿತು. ಆದರೆ ಅಂದು ಧ್ವಜಾರೋಹಣ ಮಾಡಿ ಪ್ರಧಾನಿಯವರು ಮಾಡಿದ ಭಾಷಣ ಮಾತ್ರ ನೀರಸವೆಂಬಂತಿತ್ತು. ಅವರ ಭಾಷಣದಲ್ಲಿ ಪರೋಕ್ಷವಾಗಿ ದೇಶವನ್ನು ಉದ್ಧರಿಸಬೇಕಾದರೆ ಇನ್ನೂ ನನಗೆ 25 ವರ್ಷ ಎಂದರೆ ಸ್ವಾತಂತ್ರ್ಯದ ನೂರನೇ ಹಬ್ಬವನ್ನು ಆಚರಿಸುವವರೆಗೆ ಅವಕಾಶ ಕೊಡಿ ಎಂದು ಪ್ರಚಾರ ಮಾಡಿದಂತೆಯೂ ಆಯಿತು. ಆದರೆ ಕಳೆದ ಎಂಟು ವರ್ಷಗಳಿಂದಲೂ ಅವರು ಆಗಸ್ಟ್ 15ರಂದು ಧ್ವಜ ಹಾರಿಸಿ ಮಾಡಿದ ಭಾಷಣಗಳ ಆಗು-ಹೋಗುಗಳ ಬಗ್ಗೆ ಸಿಂಹಾವಲೋಕನ ಮಾಡಿಕೊಳ್ಳಬಹುದಿತ್ತು. ಆದರೆ ಆ ಬಗ್ಗೆ ಜಾಣ ಮರವು ಎಂಬಂತೆ ’ಚಕಾರ’ ಎತ್ತಲಿಲ್ಲ.
ಭಾರತವನ್ನು ’ವಿಶ್ವಗುರು’ ಪಟ್ಟಕ್ಕೇರಿಸುವ ಉಪದೇಶಾತ್ಮಕ ಮಾತುಗಳನ್ನು ಮಾತ್ರ ತಪ್ಪದೆ ಪಠಿಸಿದರು. ’ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಘೋಷಿಸುತ್ತಾ ಸರ್ಕಾರ ನಡೆಸುವ ಪ್ರಧಾನಿಯವರು ಆಡುವ ನುಡಿಗೂ ಕಾರ್ಯತಃ ಅವರ ನಡೆಗೂ ತಾಳಮೇಳವೇ ಕಾಣದು. ಅವುಗಳಲ್ಲಿ ಕೆಲವನ್ನಿಲ್ಲಿ ಪ್ರಸ್ತಾಪಿಸಬಹುದು.
ಮೊಟ್ಟಮೊದಲಿಗೆ (2014) ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಭಾರತೀಯ ಪ್ರಜೆಯ ಅಕೌಂಟಿಗೆ 15 ಲಕ್ಷ ವಿದೇಶಿ ಹಣವನ್ನು ತಂದು ಜಮಾ ಮಾಡಲಾಗುತ್ತದೆ ಎಂದಿದ್ದರು (ವಿದೇಶಗಳಲ್ಲಿರುವ ಅಷ್ಟು ದೊಡ್ಡ ಮಟ್ಟದಲ್ಲಿರುವ ಕಪ್ಪು ಹಣವನ್ನು ವಾಪಸ್ ತಂದರೆ ಇಷ್ಟು ಹಣ ಪ್ರತಿ ನಾಗರಿಕನಿಗೂ ಸಿಗುತ್ತದೆ ಎನ್ನುವ ಅರ್ಥದಲ್ಲಿ). ಆದರೆ ಯಾರ ಅಕೌಂಟಿಗೂ ಆ ವಿದೇಶಿ ಹಣ ಜಮಾ ಆದದ್ದು ಕಂಡುಬರಲಿಲ್ಲ. ಮತ್ತು ಸ್ವಿಸ್ ಬ್ಯಾಂಕುಗಳಲ್ಲಿ ಹಣ ಇಟ್ಟು ಬಡ್ಡಿ ಬೆಳೆಸುವ ಶ್ರೀಮಂತರು ಮಾತ್ರ ಆರಾಮಾಗಿದ್ದಾರೆ ಮತ್ತು ಹೆಚ್ಚಳಗೊಂಡಿದ್ದಾರೆ.
ಎರಡನೆಯದಾಗಿ, ’ನೋಟು ರದ್ದತಿ’ ಮಾಡಿ ಕಪ್ಪು ಹಣವನ್ನು ಹೊರಗೆ ತಂದು ಶ್ರೀಮಂತರನ್ನು ಬಗ್ಗುಬಡಿಯಲಾಗುತ್ತದೆ ಎಂದು ಘೋಷಿಸಿದರು. ’ನೋಟು ರದ್ದತಿ’ ಆರ್ಡಿನೆನ್ಸ್ ಜಾರಿಗೊಂಡದ್ದೇನೋ ನಿಜ. ಆದರೆ ಕೂಲಿನಾಲಿ ಮಾಡಿ ಜೀವನ ಮಾಡುತ್ತಿದ್ದವರು ಬ್ಯಾಂಕುಗಳ ಬಾಗಿಲಲ್ಲಿ ಕ್ಯೂ ನಿಂತು ಅಂದಿನ ಕೂಲಿಯನ್ನೂ ಕಳೆದುಕೊಂಡದ್ದು ಮಾತ್ರ ಇದರ ನಿಜ ಸಾಧನೆ. ಆದರೆ ಯಾವ ಕಪ್ಪು ಹಣವೂ ಹೊರಗೆ ಬರಲಿಲ್ಲ. ಕಪ್ಪು ಹಣದ ಖದೀಮರೆಲ್ಲಾ ಬ್ಯಾಂಕು, ಟ್ರೆಶರಿಗಳ ಹಿಂಬಾಗಿಲಲ್ಲಿ ವ್ಯವಹಾರ ಮುಗಿಸಿಕೊಂಡಿದ್ದಾರೆಂಬ ವರದಿ ಮೂಡಿಬಂದವು. ಇದರಿಂದ ದೇಶ ಭಾರೀ ಆರ್ಥಿಕ ಹಿನ್ನಡೆ ಸಾಧಿಸಿತು. ಅಲ್ಲದೆ ’ನೋಟು ರದ್ದತಿ’ ದೇಶಕಂಡ ದೊಡ್ಡ ಹಗರಣವೆಂದು ದಾಖಲಾಯಿತು. ಇದಕ್ಕೂ ಪ್ರಧಾನಿಗಳು ಮೌನ ಮುರಿಯಲಿಲ್ಲ.
ಮೂರನೆಯದಾಗಿ, ಭ್ರಷ್ಟಾಚಾರದಲ್ಲಿ ಬಿಜೆಪಿಯು ದೇಶದ ಮತ್ತ್ಯಾವುದೇ ಪಕ್ಷಕ್ಕಿಂತ ಒಂದು ಕೈ ಮೇಲಿದೆ ಎಂಬುದನ್ನು ಕೇವಲ ಎಂಟು ವರ್ಷದಲ್ಲಿ ಇದು ಅತ್ಯಂತ ಶ್ರೀಮಂತ ಪಕ್ಷವಾಗಿದೆ ಎಂಬ ಸಮೀಕ್ಷೆ ಹೇಳುತ್ತದೆ. ’ಭ್ರಷ್ಟಾಚಾರ’ ಇಲ್ಲವಾಗಿದ್ದರೆ ಇಷ್ಟು ಶೀಘ್ರ ಗತಿಯಲ್ಲಿ ಕಾಂಗ್ರೆಸ್ಸನ್ನೂ ಮೀರಿ ಶ್ರೀಮಂತ ಪಕ್ಷವಾಗಿ ಹೊಮ್ಮಲು ಏನು ಪವಾಡ ನಡೆಯಿತು ಎಂಬುದನ್ನು ಈಗ ಜನರು ತಿಳಿಯಬಯಸಿದರೆ ತಪ್ಪೇನಿದೆ? ಭ್ರಷ್ಟಾಚಾರವನ್ನು ನಿಗ್ರಹಿಸಬೇಕಾದ ಸ್ವತಂತ್ರ ತನಿಖಾ ಸಂಸ್ಥೆಗಳ ತನಿಖಾಧಿಕಾರಿಗಳನ್ನು (ಸಿಬಿಐ, ಇ.ಡಿ, ತೆರಿಗೆ ಇಲಾಖೆ) ’ಹಲ್ಲುಗುರು’ ಮೊಂಡ ಮಾಡಿರುವ ಸರ್ಕಾರ ಬಿಜೆಪಿ ಹೊರತುಪಡಿಸಿ ಇತರ ಪಕ್ಷದ ನಾಯಕರತ್ತ ’ಛೂ’ ಬಿಡುತ್ತಿರುವುದು ಮಾತ್ರ ದಿನನಿತ್ಯದ ಮಾತಾಗಿದೆ. ಹಾಗಾದರೆ ಬಿಜೆಪಿಯಲ್ಲಿರುವ ಎಲ್ಲಾ ನಾಯಕರೂ ’ಸತ್ಯಹರಿಶ್ಚಂದ್ರ’ರು ಎಂದಂತಾಯಿತು. ಇಲ್ಲವಾಗಿದ್ದರೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲುಗೊಂಡು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಮಾಹಾರಾಷ್ಟ್ರ, ದೆಹಲಿ ವಿರೋಧ ಪಕ್ಷದ ನಾಯಕರನ್ನು ಮಾತ್ರ ಗುರಿಮಾಡಿ ಸಿಬಿಐ ತನಿಖಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೆ? ಆಳುವ ಪಕ್ಷದ ನಾಯಕರಿಗೆ ಭ್ರಷ್ಟಾಚಾರದ ತನಿಖಾ ಸಂಸ್ಥೆಗಳೇ ರಕ್ಷಣೆ ನೀಡುತ್ತಿರುವುದು ಸುಳ್ಳೇ? ಇಂಥ ಇಬ್ಬಂದಿ ನೀತಿಯಿಂದ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಧ್ಯವೆ? ಪ್ರಧಾನಿಗಳೇ ಸ್ಪಷ್ಟಪಡಿಸಬಹುದಲ್ಲವೇ?.
ನಾಲ್ಕನೆಯದಾಗಿ, ಪ್ರಧಾನಿಗಳು ತಮ್ಮ ಭಾಷಣದಲ್ಲಿ ಯಾವತ್ತಿನಿಂದಲೂ ’ಭೇಟಿ ಪಡಾವೋ, ಭೇಟಿ ಬಚಾವೋ’ (ಹೆಣ್ಣು ಮಗುವನ್ನು ಓದಿಸಿ, ಹೆಣ್ಣು ಮಗುವನ್ನು ಉಳಿಸಿ) ನುಡಿಮುತ್ತುಗಳನ್ನು ಉದುರಿಸುತ್ತಲೇ ಬಂದಿದ್ದಾರೆ. ಇದೇ ಮಾತನ್ನು ಮೊನ್ನೆ 15ರಂದು ಕೂಡ ಪ್ರಸ್ತಾಪಿಸಿದರು. ಆದರೆ ಆ ಮರುದಿನವೇ ಇವರು ಸಿ.ಎಂ ಆಗಿದ್ದ ಅವಧಿಯಲ್ಲಿ ನಡೆದ ಗುಜರಾತ್ ಹತ್ಯಾಕಾಂಡದ(2002) ಸಂದರ್ಭದಲ್ಲಿ ಬಿಲ್ಕಿಸ್‌ಬಾನು ಎಂಬ ಮಹಿಳೆ ಮೇಲೆ ಬರ್ಬರ ಅತ್ಯಾಚಾರವೆಸಗಿದ್ದ ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಮಂದಿ ಆರೋಪಿಗಳನ್ನು ’ಸನ್ನಡತೆ’ ಎಂಬ ರಿಯಾಯಿತಿ ಮೇರೆಗೆ ಗುಜರಾತ್ ಸರ್ಕಾರ ಜೀವಾವಧಿ ಶಿಕ್ಷೆಯನ್ನು ಮಾಫ್ ಮಾಡಿ 15ವರ್ಷಕ್ಕೇ ಬಿಡುಗಡೆಮಾಡಿದೆ! ಹತ್ಯಾಕಾಂಡದ ಆರೋಪಿಗಳು ಜೈಲಿನಿಂದ ಬಿಡುಗಡೆಯಾದಾಗ ಬಿಜೆಪಿ ಕಾರ್ಯಕರ್ತರು ಅದೂ ಹೆಣ್ಣು ಮಕ್ಕಳಾದಿಯಾಗಿ ಅವರಿಗೆ ವೀರೋಚಿತ ಸ್ವಾಗತ ನೀಡುತ್ತಾರೆ. ಬಿಲ್ಕಿಸ್ ಬಾನು ಜಾಗದಲ್ಲಿ ಒಬ್ಬ ಹಿಂದೂ ಮಹಿಳೆ ಯಾರಾದರೂ ಹೀಗೆ ಅತ್ಯಾಚಾರ ಸಂತ್ರಸ್ತೆಯಾಗಿದ್ದರೆ ಆ ಆರೋಪಿಗಳನ್ನು ’ಸನ್ನಡತೆ’ಯ ರಿಯಾಯಿತಿಯಲ್ಲಿ ಬಿಡುಗಡೆ ಮಾಡಲಾಗುತ್ತಿತ್ತೇ? ಎಂಬ ಸೂಕ್ಷ್ಮ ಪ್ರಶ್ನೆ ಎದುರಾಗುತ್ತದೆ. ಹಾಗಾದರೆ ಮುಸ್ಲಿಮ್ ಮಹಿಳೆಯರು, ದಲಿತ ಮಹಿಳೆಯರು ಈ ದೇಶದ ಪ್ರಜೆಗಳಲ್ಲವೆ? ಅವರ ಮಾನಕ್ಕೆ ಪ್ರಾಣಕ್ಕೆ ಬೆಲೆ ಇಲ್ಲವೆ? ಇದೇಯೇನು ಪ್ರಧಾನಿಯವರ ’ಭೇಟಿ ಬಚಾವೋ’ ಘೋಷಣೆಯ ಸಂದೇಶ? ಇದು ಜಾಗತಿಕ ನಾಚಿಕೆಗೇಡಿನ ಅಸಹ್ಯ ಸಂಗತಿ ಅನ್ನಿಸುವುದಿಲ್ಲವೆ? ಇದೇ ಏನು ಭಾರತವನ್ನು ಗುಜರಾತ್ ಮಾದರಿ ಮಾಡುವುದೆಂದರೆ ಅರ್ಥ? ಇದೇಯೇನು ’ವಿಶ್ವಗುರು’ ಸ್ಥಾನಕ್ಕೇರುವ ಭಾರತದ ಲಕ್ಷಣ?
ಐದನೆಯದಾಗಿ, ಕಳೆದ ಜುಲೈ ತಿಂಗಳಲ್ಲಿ ಅಸ್ಪೃಶ್ಯತೆಯ ಆಚರಣೆಯಿಂದಾಗಿ ರಾಜಸ್ಥಾನದಲ್ಲಿ ಮೇಲ್ಜಾತಿ ಹುಡುಗರು ಬಳಸುವ ಮಡಕೆಯ ನೀರು ಮುಟ್ಟಿದನೆಂಬ ಕಾರಣಕ್ಕೆ 9 ವರ್ಷದ ದಲಿತ ಬಾಲಕನನ್ನು ಶಿಕ್ಷಕನೊಬ್ಬ ಕಪಾಳಕ್ಕೆ ಹೊಡೆದ. ಆ ಬಾಲಕ ಆಸ್ಪತ್ರೆಯಲ್ಲಿ ಅಸುನೀಗಿದ. ಶತಮಾನಗಳ ಅಸ್ಪೃಶ್ಯತೆಯ ಆಚರಣೆಯ ಕ್ರೌರ್ಯದ ಒಂದು ಪ್ರಾತಿನಿಧಿಕ ಘಟನೆ ಇದು. ಇಂಥ ಮನಃಸ್ಥಿತಿ ಹಾಗೂ ಭಯಂಕರ ಕ್ರೌರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಾತ್ರ ನಡೆದದ್ದಲ್ಲ. ಮನುಮಹರ್ಷಿ ಬರೆದ ಸನಾತನ ಭಾರತದ ಅನಧಿಕೃತ ಶಾಸನ ಮನುಧರ್ಮಶಾಸ್ತ್ರದ ಕಾಲದಿಂದಲೂ ನಡೆದುಬಂದ ಚಾತುರ್ವರ್ಣ ತಾರತಮ್ಯ. ಅದರ ಆಧುನಿಕ ಸ್ವರೂಪ ಇದು. ಅಸ್ಪೃಶ್ಯತೆ ಸಂಬಂಧವಾಗಿ ಡಾ. ಬಿ.ಆರ್. ಅಂಬೇಡ್ಕರ್ ಮೊದಲುಗೊಂಡು ಅನೇಕ ದಲಿತರು ಅವಮಾನ ಹಾಗೂ ಅಮಾನವೀಯ ದೌರ್ಜನ್ಯಕ್ಕೆ ಒಳಗಾಗಿರುವುದು ಐತಿಹಾಸಿಕ ಸತ್ಯ.
ಉದಾಹರಣೆಗೆ ದಲಿತ ನಾಯಕ ಮಾಜಿ ಉಪಪ್ರಧಾನಿಯವರ ಮಗಳು ಮಾಜಿ ಲೋಕಸಭಾ ಸ್ಪೀಕರ್ ಮೀರಾಕುಮಾರ್ ಅವರೂ ಸಹ ಹೊರತಲ್ಲ. ’ನನ್ನ ಬದುಕಿನಲ್ಲೂ ಅಸ್ಪೃಶ್ಯತೆಯ ತಾರತಮ್ಯ ಅನುಭವಿಸಿದ್ದೇವೆ’ ಎಂದಿದ್ದಾರೆ ಮೀರಾ. ಸಂಸತ್ ಭವನದಲ್ಲಿ ಅಸ್ಪೃಶ್ಯರಿಗೆಂದೇ ಪ್ರತ್ಯೇಕ ನೀರಿನ ಮಡಿಕೆಗಳನ್ನಿರಿಸುತ್ತಿದ್ದರೆಂಬುದನ್ನು ಜಗಜೀವನ್ ರಾಮ್ ಅವರೇ ಹೇಳಿಕೊಂಡಿದ್ದಾರೆ. ಮತ್ತು 1978ರಲ್ಲಿ ಅವರು ಉಪಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂಪೂರ್ಣಾನಂದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಬಂದಮೇಲೆ, ಅವರು ’ಚಮರ್’ [ಜಾತಿ ಸೂಚಕ ಪದ] ಎಂದು ರಾಂ ಅವರು ಅನಾವರಣ ಮಾಡಿದ ಪ್ರತಿಮೆಯನ್ನು ಗಂಗಾಜಲದಿಂದ ಸ್ವಚ್ಛಗೊಳಿಸಲಾಯಿತು. ಹಾಗಾದರೆ ಭಾರತ ಒಂದೇ ದೇಶ, ಒಂದೇ ಜನಾಂಗ ಹೇಗಾಗುತ್ತದೆ?
ಜಾತಿ ವ್ಯವಸ್ಥೆ ಎಂಬುದು ಮಾಯಾವಿಯಂತೆ ಎಲ್ಲಿ ಯಾವಾಗ ಯಾವ ರೂಪ ಸ್ವರೂಪದಲ್ಲಿ ದಲಿತರನ್ನು ಹಾಗೂ ಶೂದ್ರರನ್ನು ಬಲಿತೆಗೆದುಕೊಳ್ಳುತ್ತದೋ ಹೇಳಬಲ್ಲವರಾರು? ಉದಾಹರಣೆಗೆ ’ಕಾಶ್ಮೀರಿ ಫೈಲ್ಸ್’ ಎಂಬ ಸಿನಿಮಾದ ಕಥಾವಸ್ತು ಕಾಶ್ಮೀರೀ ಪಂಡಿತರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದು; ಈ ಚಿತ್ರಕ್ಕೆ ಬಿಜೆಪಿ ಪಕ್ಷ ಸಾಕಷ್ಟು ಪ್ರೋತ್ಸಾಹ ನೀಡಿತು. ಪುಕ್ಕಟೆ ಶೋಗಳು ನಡೆದವು. ಆದರೆ ಅದೇ ರೀತಿ ವಿವಿಧ ಜಾತಿ ಜನಾಂಗೀಯರ ಹತ್ಯೆಗಳೂ ನಡೆದಿವೆ. ಅದರಲ್ಲೂ ದಲಿತರ, ಅಲ್ಪಸಂಖ್ಯಾತರ ಹತ್ಯಾಕಾಂಡಗಳೇ ಹೆಚ್ಚು. ಈ ಸಂಬಂಧವಾಗಿ ’ಸಿಖ್‌ಫೈಲ್ಸ್’ (ದೆಹಲಿ), ’ಮುಸ್ಲಿಮ್ ಫೈಲ್ಸ್’ (ಗುಜರಾತ್), ’ಚುಂಡೂರು ಫೈಲ್ಸ್’ (ಆಂಧ್ರಪ್ರದೇಶ) ’ಕಂಬಾಲಪಲ್ಲಿ ಫೈಲ್ಸ್’ (ಕರ್ನಾಟಕ) ’ಖೈರ್ಲಾಂಜಿ ಫೈಲ್ಸ್’ (ಮಹಾರಾಷ್ಟ್ರ) ’ರೋಹಿತ್ ವೇಮುಲ ಫೈಲ್’ (ತೆಲಂಗಾಣ), ’ಊನಾ ಫೈಲ್ಸ್’ (ಗುಜರಾತ್) ಇತ್ಯಾದಿ ಸಿನಿಮಾಗಳೇಕೆ ಬರಲಿಲ್ಲ? ಮತ್ತು ಉತ್ತೇಜನವೇಕೆ ದೊರೆತಿಲ್ಲ ಎಂದು ಕೇಳಿದರೆ ಸರ್ಕಾರದ ವಕ್ತಾರರಲ್ಲಿ ಏನು ಉತ್ತರ ಉಂಟು?
ಆರನೆಯದಾಗಿ, ಭಾರತದಲ್ಲಿ ಮಲ ಬಾಚುವ ಕಾರ್ಮಿಕರ ಸಂಖ್ಯೆ 88,000ದಷ್ಟಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಮಲ ಬಾಚುವ ಕರ್ಮಚಾರಿಗಳು ಸೆಪ್ಟಿಕ್ ಟ್ಯಾಂಕ್‌ಗಳಲ್ಲಿಳಿದು ಅನೇಕ ಜನ ಉಸಿರುಕಟ್ಟಿ ಅಸುನೀಗಿದ್ದಾರೆ. ಒಂದು ಸಮೀಕ್ಷೆ ಪ್ರಕಾರ, ದೆಹಲಿ (20), ಮಹಾರಾಷ್ಟ್ರ (23), ತಮಿಳುನಾಡು (32) ಉತ್ತರ ಪ್ರದೇಶ (30) ಮುಂತಾದ ರಾಜ್ಯಗಳಲ್ಲಿ ಈ ಕಾರ್ಮಿಕರು ಸತ್ತಿದ್ದಾರೆ. ಬಯಲು ಮುಕ್ತ ಶೌಚಾಲಯ ವ್ಯವಸ್ಥೆ ಇನ್ನೂ ದೂರದ ಮಾತೇ ಆಗಿತು. ’ಸ್ವಚ್ಛ ಭಾರತ್ ಅಭಿಯಾನ್’ ಎಂದು ಪ್ರತಿವರ್ಷ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಕಸಬರಿಕೆ ಹಿಡಿದ ಪ್ರಧಾನಿಯ ಭಾವಚಿತ್ರಗಳು ಮಾತ್ರ ರಾರಾಜಿಸುತ್ತವೆ! ಇದು ನಮ್ಮ ಸ್ವಚ್ಛಭಾರತ ಅಭಿಯಾನದ ವೈಖರಿ!
ಏಳನೆಯದಾಗಿ, ’ಸಾಕ್ಷರ ಅಭಿಯಾನ’ಕ್ಕೆ ಬಂದರೆ ಅಂಕಿಅಂಶದ ಪ್ರಕಾರ ರಾಷ್ಟ್ರಮಟ್ಟದಲ್ಲಿ ಶೇ.85 ಮಂದಿ ಮಾತ್ರ ಓದುಬರಹ ಬಲ್ಲವರು. ಉಳಿದವರಿನ್ನೂ ಅನಕ್ಷರಸ್ಥರು. ಈ ಕ್ಷೇತ್ರದಲ್ಲಿ ನೂರಕ್ಕೆನೂರು ಕಲಿಕೆ ಬಹಳ ದೂರವೇ ಇದೆ. ಬಹುಶಃ ಸ್ವಾತಂತ್ರ್ಯದ ನೂರರ ಹಬ್ಬಕ್ಕೆ ಇದು ನೆರವೇರಬಹುದೆ?
ಎಂಟನೆಯದಾಗಿ, ಕಳೆದ ವರ್ಷ ಪ್ರಧಾನಿಯವರು ’ಅಮೃತ ಮಹೋತ್ಸವ ಆಚರಣೆಯ ಹೊತ್ತಿಗೆ ನಮ್ಮ ದೇಶದಲ್ಲಿ ಎಲ್ಲರೂ ಮನೆಗಳನ್ನು ಹೊಂದಿರುತ್ತಾರೆ’ ಎಂದು ಭರವಸೆಯನ್ನು ಬಿತ್ತಿದರು. ಆದರೆ ಇದು ಭರವಸೆಯಾಗಿಯೇ ಉಳಿದಿದೆ. ಈಗಲೂ ಕೋಟ್ಯಂತರ ಜನ ನಿರ್ವಸಿತರಾಗಿಯೇ ಇದ್ದಾರೆ. ಆದರೆ ಕೆಲವೇ ಕೆಲವು ಶ್ರೀಮಂತರು ಹಾಗೂ ಕಾರ್ಪೊರೇಟ್ ಕಂಪನಿ ಮಾಲೀಕರು, ಮಂತ್ರಿಗಳು, ರಾಜಕಾರಣಿಗಳು, ಹಿರಿಯ ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರು ಮಾತ್ರ ಇಂದ್ರನ ಅಮರಾವತಿಯಂಥ ಸ್ವರ್ಗಧಾಮಗಳಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಇದಕಂಡು ಕುವೆಂಪು ಕವಿವಾಣಿ ಉದ್ಘರಿಸುತ್ತದೆ:
ಧನಿಕರ ಮನೆಗಳು ಒಂದೆಡೆ ನಿಂತಿವೆ,
ಬಡವರ ಗುಡಿಸಲು ಒಂದೆಡೆ ನಿಂತಿವೆ
ಕತ್ತಿ ಯಾವುದಾದರೇನು? ನಮ್ಮವರೆ ಹದ ಹಾಕಿ ತಿವಿದರದು ಹೂವೆ? ಎಂಬಂತೆ ಸದ್ಯ ನಮ್ಮವರೆ ಹದ ಹಾಕಿ ತಿವಿಯುತ್ತಲೇ ಇದ್ದಾರೆ! ಆದಾಯಕ್ಕೆ ಮಿತಿ ಹಾಕದಿದ್ದರೆ, ಜಾತಿ ವಿನಾಶ ಆಗದಿದ್ದರೆ ಭವ್ಯ ಭಾರತದ ಗತಿ? ಈ ಹತ್ಯಾಕಾಂಡಗಳಿಗೆ ವಿದಾಯ ಹೇಳದಿದ್ದರೆ, ಜೀತ ಪದ್ಧತಿ, ಜಾತಿವಿನಾಶ ಆಗದಿದ್ದರೆ ಭವ್ಯ ಭಾರತದ ಹೆಸರು ಉಳಿದೀತೆ?
ಒಂಬತ್ತನೆಯದಾಗಿ, ಮೊನ್ನೆ ಕೆಂಪುಕೋಟೆಯ ಮೇಲಿನಿಂದ ಪ್ರಧಾನಿಯವರು ದೇಶದಲ್ಲಿ ಗುಲಾಮಗಿರಿ ಕುರುಹುಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದಾಗಿ ಸಂಕಲ್ಪವನ್ನು ವ್ಯಕ್ತಪಡಿಸಿದ್ದಾರೆ. ಆದರೆ ರಾಜಸ್ಥಾನದ ನ್ಯಾಯಾಲಯದ ಸಮ್ಮುಖದಲ್ಲೇ ಚಾತುರ್ವಣ್ಯ ವ್ಯವಸ್ಥೆಯ ಪ್ರತಿಪಾದಕ, ಹಿಂದೂ ಧರ್ಮದ ಅನಧಿಕೃತ ಶಾಸನಕರ್ತೃ ಮನು ಮಹರ್ಷಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದು ಸನಾತನ ಗುಲಾಮಗಿರಿಯ ಸಂಕೇತ. ಸಂವಿಧಾನಶಿಲ್ಪಿ ಅಂಬೇಡ್ಕರ್ ಮನುಧರ್ಮಶಾಸ್ತ್ರವನ್ನು ಸುಟ್ಟು ಹಾಕಿದ್ದರು. ದೇಶದ ಜಾತಿವ್ಯವಸ್ಥೆಗೆ ಕಾರಣನು ಈ ಮನು ಮಹರ್ಷಿ. ಪ್ರಧಾನಿಗಳು ಅವನ ಪ್ರತಿಮೆಯನ್ನು ತೆರವುಗೊಳಿಸುವ ಪ್ರಯತ್ನವನ್ನೇನಾದರೂ ಮಾಡಿದ್ದರೆ ಅವರಾಡುವ ಮಾತಿಗೆ ಕಿಮ್ಮತ್ತು ಬರುತ್ತಿತ್ತು.
ನಮ್ಮ ದೇಶ ನಿಜವಾಗಿಯೂ ’ವಿಶ್ವಗುರು’ ಆಗಬಹುದು. ಯಾವಾಗೆಂದರೆ ನೆಹರೂ ಅವರು 1964ರ ಮೇ 27ರಂದು ಕೊನೆಯುಸಿರೆಳೆದ ಬಳಿಕ ಅಟಲ್‌ಜಿ ಮಾಡಿದ ಶ್ರದ್ಧಾಂಜಲಿ ಭಾಷಣದ ನುಡಿಮುತ್ತುಗಳನ್ನು ನಾವು ಆಲಿಸಿ ಅನುಸರಿಸಿದಾಗ ಮಾತ್ರ. ಅವರ ಶ್ರದ್ಧಾಂಜಲಿ ನುಡಿಯ ಕೊನೆಯ ಮಾತು ಹೀಗಿತ್ತು: “ಐಕ್ಯತೆ, ಶಿಸ್ತು ಮತ್ತು ಆತ್ಮವಿಶ್ವಾಸದಿಂದ ನಾವು ನಮ್ಮ ಗಣರಾಜ್ಯವನ್ನು ಪ್ರವರ್ಧಮಾನಕ್ಕೆ ತರಬೇಕಿದೆ”. ಇದು ನೆಹರೂ ಅವರಿಗೆ ಮಾಜಿ ಪ್ರಧಾನಿ ಅಟಲ್‌ಜೀ ಅವರು ತೋರಿದ ಘನಗೌರವ. ಕೋಮು ಗಲಭೆಗಳಿಂದ ತತ್ತರಿಸಿ ಹತ್ತಿಉರಿಯುತ್ತಿರುವ ಇಂದಿನ ಭಾರತ ಅನುಸರಿಸಬೇಕಾದ ಸೌಹಾರ್ದ ನಡೆ ಅದು. ಅಂತಹ ಆದರ್ಶ ಪುನಃ ಸಂಸ್ಥಾಪನೆಗೊಂಡರೆ ಮಾತ್ರ ಭಾರತ ’ವಿಶ್ವಗುರು’ ಸ್ಥಾನಕ್ಕೆ ಅಡಿಯಿಡಬಹದು.
ಇನ್ನು ನೂರಾಡಿ ಫಲವೇನು? ’ನುಡಿಯಲ್ಲಿ ಆಗಿ ನಡೆಯಲ್ಲಿ ತಪ್ಪಿದರೆ ಮೆಚ್ಚುವನೆ ನಮ್ಮ ಮತದಾರ ಪ್ರಭು’? ವಿಚಾರದಕ್ಷರು ವೈಷಮ್ಯವನ್ನುಳಿದು ಈ ವಿಚಾರವನ್ನು ಪರಾಂಬರಿಸಬೇಕೆಂದು ವಿನಂತಿ.?

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.
ಇದನ್ನೂ ಓದಿ: ‘ಜನಮರ್ದನ’ ಅಲ್ಲಲ್ಲ, ‘ಜನಸ್ಪಂದನ’: ಬೊಮ್ಮಾಯಿ ಭಾಷಣಕ್ಕೆ ಸಿದ್ದರಾಮಯ್ಯ ಕುಹಕ



ಗುಲಾಮಗೀರಿ ತರ ಬೇಕು ಅಂತ ಕಲ್ಪನೆ ಸಂಕಲ್ಪ ಆಗಿದೆ ಅದಕ್ಕೆ ಪ್ರದಾನ ಮಾಂತ್ರಿ ಹೇಳಿದ್ದಾರೆ ಮುಂಚ್ಚೆ ಶ್ರೀಮಾಂತರ ಕಪ್ಪು ಹಣ ಸ್ವೀಸ್ ಬ್ಯಾಂಕ್ ನಲ್ಲಿ ಇರುವುದು ಪತ್ತೆ ಮಾಡುತ್ತಿನಿ ಅಂತಾ ಹೋಗಿ ಬಡವರ ದುಡ್ಡು ಬರಿದು ಮಾಡಿ ಮತ್ತೆ ಬಡವರು ಕಡು ಬಡವರದರು ದೇಶದ ಅಭಿವೃದ್ಧಿಗೆ ಬೇಕಾದ ಙ್ನಾನದ ಕೋರತೆ ಈ ದೇಶಕ್ಕೆ ಇದೆ ಈ ಜಾತಿ ತಾರತಮ್ಯದ ಹೋಗುವರಿಗು ಈ ದೇಶ ಅಭಿವೃದ್ಧಿ ಆಗಲ್ಲಾ