Homeಕರ್ನಾಟಕಲೋಕಸಭಾ ಚುನಾವಣೆಯ ಗೆಲವು ಸೋಲಿನಲ್ಲಿ ದಲಿತರು ಮತ್ತು ಹಿಂದುಳಿದವರ ಪಾತ್ರ

ಲೋಕಸಭಾ ಚುನಾವಣೆಯ ಗೆಲವು ಸೋಲಿನಲ್ಲಿ ದಲಿತರು ಮತ್ತು ಹಿಂದುಳಿದವರ ಪಾತ್ರ

- Advertisement -
- Advertisement -

2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಮೋದಿಯವರ 400 ಸೀಟುಗಳ (ಅಬ್ ಕೀ ಬಾರ್ ಚಾರ್ ಸೌ ಪಾರ್) ಕನಸಿಗೆ ಕೊಳ್ಳಿಯಿಟ್ಟ ಈ ದೇಶದ ಪ್ರಜ್ಞಾವಂತ ದಲಿತ ಮತದಾರರು ಈ ಚುನಾವಣೆಯಲ್ಲಿ ಫ್ಯಾಸಿಸ್ಟ್ ಶಕ್ತಿಗಳಿಗೆ ಹೇಗೆಲ್ಲಾ ಬುದ್ಧಿ ಕಲಿಸಿದರೆಂದು ವಿವರವಾಗಿ ತಿಳಿಯುವುದಕ್ಕೂ ಮುನ್ನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ಮನಸ್ಥಿತಿ ಬದಲಾದದ್ದು ಹೇಗೆ ಎಂಬುದನ್ನ ವಿಶ್ಲೇಷಿಸೋಣ.

ದೆಹಲಿಯ ಅಕ್ಬರ್ ರಸ್ತೆಯ ಕಾಂಗ್ರೆಸ್‌ನ ಕೇಂದ್ರ ಕಚೇರಿಯಲ್ಲಿ 2023ರ ಅಕ್ಟೋಬರ್ 9ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯು ರಾಹುಲ್ ಗಾಂಧಿ ಒತ್ತಾಸೆಯ ಕಾರಣಕ್ಕೂ, ಸೋನಿಯಾಗಾಂಧಿಯವರಿಂದ ಪ್ರಸ್ತಾಪವಾಗಿ ಜಾತಿಗಣತಿ ವಿಷಯವನ್ನು ಮರುಮಾತಿಲ್ಲದೇ ಅನುಮೋದಿಸಿತು.

ಹತ್ತು-ಹನ್ನೆರಡು ವರ್ಷಗಳ ಹಿಂದೆಯಷ್ಟೇ ರಾಹುಲ್ ಗಾಂಧಿ ಪ್ರತಿಪಾದಿಸುತ್ತಾ ಬಂದಿದ್ದ ಜಾತಿಗಣತಿಯ ಪರೋಕ್ಷ ಪ್ರಸ್ತಾವನೆಗೆ ಮತ್ತು ಮಾಡುತ್ತಿದ್ದ ಸಾರ್ವಜನಿಕ ಭಾಷಣಗಳಿಗೆ ತೀವ್ರವಾಗಿ ಪ್ರತಿರೋಧ ದಾಖಲಿಸಿದ್ದ ಬಹುತೇಕ ಬ್ರಾಹ್ಮಣರು, ಮುಂದುವರಿದ ಜಾತಿಗಳ ಜನರೇ ತುಂಬಿಹೋಗಿರುವ ಕಾಂಗ್ರೆಸ್‌ನ ಸಿಡಬ್ಲ್ಯುಸಿ ಸಮಿತಿಯು ಕೇವಲ ಒಂದು ದಶಕದ ಅಂತರದೊಳಗೆ ಭಾರತದ ರಾಜಕೀಯ ಚರಿತ್ರೆಯ ಗೇಮ್ ಚೇಂಜರ್ ಪ್ರಸ್ತಾವನೆಯನ್ನ ದುಸರಾ ಮಾತಿಲ್ಲದೇ ಒಪ್ಪಿಕೊಂಡು ಇತಿಹಾಸದ ಮತ್ತೊಂದು ಮಗ್ಗುಲಿಗೆ ಹೊರಳಿಕೊಂಡಿತು.

ಏತನ್ಮಧ್ಯೆ ನಾಲ್ಕು ಗೋಡೆಗಳ ಒಳಗೆ ಸಿಡಬ್ಲ್ಯುಸಿಯ ನಿರ್ಣಯ ಅನುಮೋದನೆಯಾದ ಬೆನ್ನಿಗೆ, ಹೊರಜಗತ್ತಿಗೆ ಈ ಸಂಗತಿಯನ್ನು ತಿಳಿಸಲು ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ರಾಹುಲ್ ಗಾಂಧಿ ಅಂದು ಅತ್ಯಂತ ಉತ್ಸುಕರಾಗಿ ಹಾಗೂ ಪೊರೆ ಕಳಚಿದ ನಿರಾಳತೆಯಲ್ಲಿ ಮಾತನಾಡುತ್ತಾ ಹೋದರು. ಮಾತುಗಳ ಮಧ್ಯೆ ಜಾತಿಗಣತಿಯು ನಮ್ಮ ಪಕ್ಷದ ಮೊದಲ ಆದ್ಯತೆಯಾಗಿದೆ, ನನ್ನ ಜೀವಮಾನದ ಬದ್ಧತೆಯೂ ಆಗಿದೆಯೆಂದು ರಾಹುಲ್ ಹೇಳಿದ್ದನ್ನು ಕೇಳಿಸಿಕೊಂಡವರು ಆ ಕ್ಷಣಗಳನ್ನು ಈಗಲೂ ಜೀವಿಸುತ್ತಿರಬಹುದು. ಕಾರಣ, ಇತಿಹಾಸದುದ್ದಕ್ಕೂ ಕಾಂಗ್ರೆಸ್ ಪಕ್ಷದೊಳಗೆ ಗಾಂಧೀಜಿ-ನೆಹರೂ-ಇಂದಿರಾ-ರಾಜೀವ್ ಹಾಗೂ ತನ್ನ ಅಮ್ಮ ಸೋನಿಯಾ ಕೂಡ ಮಾಡಲಾಗದೆ ಹೋದ ಇಂತಹ ಕ್ರಾಂತಿಕಾರಿ ಪರಿವರ್ತನೆಯನ್ನ ರಾಹುಲ್ ಗಾಂಧಿ ಮಾಡಿದರೇ……?!

ಇತಿಹಾಸ ಬಲ್ಲವರು ಮೇಲಿನ ಪ್ರಶ್ನೆಗೆ ಹೌದು ಅನ್ನಲೇಬೇಕಾಗುತ್ತದೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಜಾತಿ-ಮತ-ಧರ್ಮಗಳ ಐಡೆಂಟಿಟಿಗಳನ್ನ ಕಲೆಸಿಹಾಕಿ ರಾಷ್ಟ್ರೀಯತೆಯ ಭಾವುಕ ನೆಲೆಗಳನ್ನು ದೇಶಾದ್ಯಂತ ಬಡಿದೆಬ್ಬಿಸಿ ಬ್ರಿಟಿಷರನ್ನ ದೇಶಬಿಟ್ಟು ಹೋಗುವಂತೆ ಮಾಡಿದ್ದ ಗಾಂಧೀಜಿ ನೇತೃತ್ವದ ಕಾಂಗ್ರೆಸ್ ಸ್ವಾತಂತ್ರ್ಯದ ನಂತರ ಸಂವಿಧಾನ ಜಾರಿಯಾದ ಮೇಲೂ ರಾಷ್ಟ್ರೀಯತೆಯ ಸನ್ನಿಯಿಂದ ಹೊರಗೆ ಬರದೇ ಮೈಮರೆಯಿತು. ಸಂವಿಧಾನದ ಮೂಲಕ ಭಾರತೀಯ ಸಮಾಜದ ಸಂಕೀರ್ಣ ಸಂರಚನೆಯ ಗೋಜಲುಗಳನ್ನು, ಕಠೋರ ವಾಸ್ತವಗಳನ್ನು ಜಾತಿ ಅಸಮಾನತೆ ಮತ್ತು ಶ್ರೇಣಿಕರಣದ ಏರುಪೇರುಗಳನ್ನು ಅತ್ಯಂತ ಮನೋಜ್ಞವಾಗಿ ವಿಶ್ಲೇಷಿಸಿದ್ದ ಬಾಬಾಸಾಹೇಬ್ ಅಂಬೇಡ್ಕರರ ಸಾಂವಿಧಾನಿಕ ಕಾಣ್ಕೆಗಳಿಗೆ ಕಾಂಗ್ರೆಸ್ ಕುರುಡಾಗುತ್ತಲೇ ದಶಕಗಳ ಕಾಲ ಅಧಿಕಾರ ರಾಜಕಾರಣವನ್ನು ನಿಭಾಯಿಸಿಕೊಂಡು ಬಂದಿತು.

ನೆಹರೂ, ಇಂದಿರಾರ ವೈಯಕ್ತಿಕ ವರ್ಚಸ್ಸು, ಅಗ್ಗದ ಜನಕಲ್ಯಾಣ ಜನಪ್ರಿಯ ಕಾರ್ಯಕ್ರಮಗಳಲ್ಲೇ ದಶಕಗಳ ಕಾಲ ತೇಲಿದ ಕಾಂಗ್ರೆಸ್ ಫ್ಯೂಡಲ್ ವ್ಯವಸ್ಥೆಯನ್ನು ಪೋಷಿಸಿದ್ದಲ್ಲದೇ ಕೋಮುವಾದಿಗಳ ಹುಟ್ಟು, ಬೆಳವಣಿಗೆ, ಯಶಸ್ಸಿಗೆ ತನಗೇ ಗೊತ್ತಿಲ್ಲದಂತೆ ಭೂಮಿಕೆ ನಿರ್ಮಿಸುತ್ತಾ ಹೋಯಿತು.

ಆದರೆ ಇದೆಲ್ಲ ಗೊತ್ತಾಗುವ ಹೊತ್ತಿಗೆ 1980ರಲ್ಲಿ ಭಾರತೀಯ ಜನತಾ ಪಕ್ಷ ಜನ್ಮ ತಳೆಯಿತು. ಅದಾದ ನಾಲ್ಕು ವರ್ಷಗಳ ತರುವಾಯ ಇಂದಿರಾಗಾಂಧಿಯ ಹತ್ಯೆಯ ಬೆನ್ನಿಗೆ ನಡೆದ 1984ರ ಲೋಕಸಭಾ ಚುನಾವಣೆಯಲ್ಲಿ 404 ಪಾರ್ಲಿಮೆಂಟ್ ಕ್ಷೇತ್ರಗಳನ್ನು ಗೆದ್ದು, ಬಿಜೆಪಿಗೆ ಕೇವಲ ಒಂದಂಕಿಯನ್ನ ಮಾತ್ರ ಬಿಟ್ಟುಕೊಟ್ಟಿತ್ತು. ಅದಾಗಿ 30 ವರ್ಷಗಳಿಗೆ ಸರಿಯಾಗಿ ಭಾರತದ ಪುರಾತನ ಮತ್ತು ವೈಭವದ ಇತಿಹಾಸವುಳ್ಳ ಕಾಂಗ್ರೆಸ್ 2014ರಲ್ಲಿ ಅದೇ ಬಿಜೆಪಿಯ ಎದುರು ಕೇವಲ 44 ಸ್ಥಾನಗಳಿಗೆ ಕುಸಿದುಬಿದ್ದು ವಿಪಕ್ಷದ ಸ್ಥಾನಮಾನವನ್ನೂ ಉಳಿಸಿಕೊಳ್ಳದೇಹೋದದ್ದು ನಮಗೆಲ್ಲ ಗೊತ್ತಿರುವ ಇತಿಹಾಸ.

ಅಂದರೇ ಆರೇಳು ದಶಕಗಳ ಕಾಲ ಜಾತಿ ವ್ಯವಸ್ಥೆಯ ವಾಸ್ತವಗಳಿಗೆ ಕಣ್ಣು ತೆರೆಯದೇ ಫ್ಯೂಡಲ್‌ಗಳ ಸಖ್ಯ ಮತ್ತು ಅವರುಗಳ ಹಿತಕಾಯುವ ನೀತಿ ನಿರೂಪಣೆಗಳನ್ನೇ ಅನುಸರಿಸುತ್ತಾ ಬಂದಿದ್ದ ಕಾಂಗ್ರೆಸ್ ತನ್ನ ಎಪ್ಪತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಒಮ್ಮೆಯೂ ಜಾತಿಗಣತಿಯ ಸೊಲ್ಲೆತ್ತದೆ, ಕೇವಲ ಜನಗಣತಿಯನ್ನ ನಡೆಸಿ ಕೈತೊಳೆದುಕೊಂಡಿತ್ತು. ಈ ಹೊತ್ತಿಗೂ 1931ರಲ್ಲಿ ಬ್ರಿಟಿಷ್ ಸರ್ಕಾರ ನಡೆಸಿದ್ದ ಜಾತಿಗಣತಿಯ ಡೇಟಾ ಬಿಟ್ಟರೆ ಭಾರತ ಸರ್ಕಾರದ ಬಳಿ ಸಾಸಿವೆ ಕಾಳಿನಷ್ಟೂ ಹೊಸ ಅಂಕಿಅಂಶಗಳಿಲ್ಲವೆನ್ನುವುದು ಈ ದೇಶವನ್ನು ಆಳಿದ ಎಲ್ಲ ಪಕ್ಷಗಳ, ಮುಖ್ಯವಾಗಿ ಕಾಂಗ್ರೆಸ್‌ನ ಮನಸ್ಥಿತಿಯನ್ನ ಪ್ರತಿಬಿಂಬಿಸುತ್ತದೆ.

ಕಾಂಗ್ರೆಸ್ ಪಕ್ಷದ ಈ ಎಲ್ಲಾ ಬಗೆಯ ಐತಿಹಾಸಿಕ ಬ್ಲಂಡರ್‌ಗಳನ್ನು ಆಳವಾಗಿ ಮನಗಂಡಿದ್ದ ರಾಹುಲ್ ಗಾಂಧಿ ಕಳೆದ ವರ್ಷದ ಅಕ್ಟೋಬರ್ 9ರ ಸುದ್ದಿಗೋಷ್ಠಿಯಲ್ಲಿ ಜಾತಿಗಣತಿ ಮಾಡುವುದು ಕಾಂಗ್ರೆಸ್‌ನ ಧ್ಯೇಯ ಎಂದು ಹೇಳಿದ್ದಲ್ಲದೇ ಇದುವರೆಗೆ ತಾನು ಅಧಿಕಾರದಲ್ಲಿ ಇದ್ದ ಅಷ್ಟೂ ವರ್ಷಗಳ ಕಾಲ ಜಾತಿಗಣತಿ ಮಾಡದೇ ಸುಮ್ಮನಿದ್ದುದೇ ಪಕ್ಷದ ದೊಡ್ಡ ಪ್ರಮಾದ ಎಂಬುದನ್ನು ಕಟುವಾದ ಮಾತುಗಳಲ್ಲಿ ಖಂಡಿಸಿ ತನ್ನ ಪಕ್ಷದ ಇತಿಹಾಸದ ಬಹುದೊಡ್ಡ ಎರರ್‌ನ ಮಿರರ್ ಮಾಡುವುದನ್ನ ಮರೆಯಲಿಲ್ಲ.

ಇಲ್ಲಿ ಮತ್ತೊಂದು ಸ್ವಾರಸ್ಯಕರ ಸಂಗತಿ ಏನೆಂದರೆ 2010ರಲ್ಲಿ ಅಂದಿನ ಯುಪಿಎ ಒಕ್ಕೂಟ ಸರ್ಕಾರದ ಕಾನೂನು ಸಚಿವರಾಗಿದ್ದ ವೀರಪ್ಪ ಮೊಯ್ಲಿಯವರು 2011ರ ಜನಗಣತಿಯ ವೇಳೆ ಆಯಾ ಜಾತಿಗಳ ಅಂಕಿಅಂಶಗಳ ಮಾಹಿತಿಯನ್ನೂ ಸಂಗ್ರಹಿಸುವುದು ಒಳಿತು ಎಂಬಂತಹ ಹೇಳಿಕೆ ಕೊಟ್ಟಿದ್ದರು. ಆದರೆ ಮೊಯ್ಲಿಯವರ ಈ ನಿಲುವನ್ನ ಅತ್ಯಂತ ’ತರ್ಕಬದ್ಧ’ವಾಗಿ ಕೌಂಟರ್ ಮಾಡಿದ್ದ ಆಗಿನ ಯುಪಿಎ ಸರ್ಕಾರದ ಮತ್ತೋರ್ವ ಸಚಿವ ಪಿ.ಚಿದಂಬರಂ ಜಾತಿಗಣತಿ ಪ್ರಸ್ತಾವವನ್ನ ಸಾರಾಸಗಟಾಗಿ ತಳ್ಳಿಹಾಕಿದ್ದರು. ಮೊಯ್ಲಿಯವರ ನಿಲುವನ್ನು ಕೌಂಟರ್ ಮಾಡುವ ಭರದಲ್ಲಿ ಹಿಂದುಳಿದ ವರ್ಗಗಳು ರಾಜ್ಯಪಟ್ಟಿ-ಕೇಂದ್ರ ಪಟ್ಟಿಗಳಲ್ಲಿ ಅದಲುಬದಲಾಗುವ ವ್ಯತ್ಯಾಸಗಳನ್ನು ಉಲ್ಲೇಖಿಸಿ, ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದವರು ದೇಶದ ವಿವಿಧ ರಾಜ್ಯಗಳಲ್ಲಿ ಹೊಂದಿರುವ ಸ್ಥಾನಮಾನಗಳಲ್ಲಿನ ಗೊಂದಲಗಳತ್ತ ಬೊಟ್ಟು ಮಾಡಿ ತೋರಿಸಿದ್ದ ಸಚಿವ ಚಿದಂಬರಂ ಬುಡಕಟ್ಟುಗಳ ಮಾಹಿತಿ ಸಂಗ್ರಹಣೆ, ಅಂತರ್ಜಾತಿ ವಿವಾಹಿತರನ್ನ ಗುರುತಿಸುವುದೂ ಸೇರಿದಂತೆ ಸಣ್ಣಸಣ್ಣ ತಾಂತ್ರಿಕ ಸಮಸ್ಯೆಗಳನ್ನೇ ದೊಡ್ಡ ತೊಡಕುಗಳೆಂದು ಬಿಂಬಿಸಿ, ಜಾತಿಗಣತಿಯ ದತ್ತಾಂಶಗಳ ಕ್ರೋಢೀಕರಣಕ್ಕೆ ಯುಪಿಎ ಸರ್ಕಾರ ಮುಂದಾಗದಂತೆ ನೋಡಿಕೊಂಡಿದ್ದರು. ವಿಪರ್ಯಾಸವೆಂದರೆ ಅಧಿಕಾರವಿದ್ದಾಗ ಮಾಡಬಹುದಾಗಿದ್ದ ಜಾತಿಗಣತಿಯ ಕೆಲಸಕ್ಕೆ ಕಲ್ಲುಹಾಕಿದ್ದ ಇದೇ ಚಿದಂಬರಂರಿಗೆ ನಂತರದ ಹತ್ತು ವರ್ಷಗಳ ಚುನಾವಣಾ ರಾಜಕೀಯ ಇನ್ನಿಲ್ಲದಂತೆ ಪಾಠ ಹೇಳಿದ್ದರಿಂದ ಜ್ಞಾನೋದಯವಾಯಿತೆನಿಸುತ್ತದೆ. ಹಾಗಾಗಿ 2023ರ ಅಕ್ಟೋಬರ್ 9ರ ಸಿಡಬ್ಲ್ಯುಸಿ ಸಭೆಯಲ್ಲಿ ಪ್ರಸ್ತಾಪವಾದ ಜಾತಿಗಣತಿಯ ನಿರ್ಣಯಕ್ಕೆ ಮೊದಲು ಕೈಎತ್ತಿ ಬೆಂಬಲಿಸಿದ್ದು ಇದೇ ಚಿದಂಬರಂ ಎಂದು ಹೇಳಲಾಗುತ್ತದೆ.

ಇದೆಲ್ಲ ಪ್ರಹಸನಗಳು ಮುಗಿದಾಗ್ಯೂ ಚುನಾವಣೆಯು ರಂಗೇರಿದ್ದ ಹೊತ್ತಲ್ಲೇ ಆನಂದ್ ಶರ್ಮಾ ಎಂಬ ಕಾಂಗ್ರೆಸ್ಸಿನ ಹಿರಿಯ ನಾಯಕ ಜಾತಿಗಣತಿ ಪರವಾದ ಕಾಂಗ್ರೆಸ್ ನಿಲುವನ್ನು ವಿರೋಧಿಸಿ ಪತ್ರಿಕಾಗೋಷ್ಠಿ ನಡೆಸಿದ ಪ್ರಸಂಗವೂ ಸಹ ಇನ್ನೂ ಹಸಿರಾಗಿದೆ.

ಇರಲಿ…

***

2014ರಿಂದ ಕ್ರಮೇಣ ದಲಿತ-ಹಿಂದುಳಿದ ಆದಿವಾಸಿಗಳನ್ನ ಆಪೋಷನಗೈಯುತ್ತಾ 2024ರ ಹೊತ್ತಿಗೆ ಚಾರ್ ಸೌ ಪಾರ್ ಎಂದು ಬೊಬ್ಬಿರಿಯುತ್ತಿದ್ದ ಬಿಜೆಪಿಯ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದು ಮಾತ್ರ ನಿಸ್ಸಂಶಯವಾಗಿ ದಲಿತರು.

ಇದು ಹೇಗೆ? ನೋಡೋಣ ಬನ್ನಿ

***

ಮತಕ್ಷೇತ್ರಗಳ ಲೆಕ್ಕಾಚಾರದ ಮೂಲಕವೇ ಎನ್‌ಡಿಎ ಕೂಟಕ್ಕೆ, ವಿಶೇಷವಾಗಿ ಬಿಜೆಪಿಯ ಹಿನ್ನಡೆಗೆ ಕಾರಣವಾದ ಚುನಾವಣೆಯ ನರೆಟಿವ್ ಒಳಕ್ಕೆ ಪ್ರವೇಶಿಸುವುದಾದರೇ 131 ಮೀಸಲು (ಎಸ್‌ಸಿ-ಎಸ್‌ಟಿ) ಕ್ಷೇತ್ರಗಳ ಪೈಕಿ ಈ ಹಿಂದೆ ಬಿಜೆಪಿ 77 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಅದು ಈ ಚುನಾವಣೆಯಲ್ಲಿ 52 ಕ್ಕೆ ಕುಸಿದಿದೆ.

ಪರಿಶಿಷ್ಟ ಜಾತಿಯ ಮತಕ್ಷೇತ್ರಗಳನ್ನ ಪ್ರತ್ಯೇಕವಾಗಿ ಲೆಕ್ಕ ಹಾಕುವುದಾದರೇ ಒಟ್ಟು 84 ಕ್ಷೇತ್ರಗಳ ಪೈಕಿ ಕಳೆದ ಸಲ 46 ಗೆದ್ದುಕೊಂಡಿದ್ದ ಬಿಜೆಪಿ ಈ ಬಾರಿ 29ಕ್ಕೆ ಕುಸಿದಿದೆ.

ಈ ಲೆಕ್ಕಾಚಾರ ಬಿಜೆಪಿ ತೆಕ್ಕೆಯಿಂದ ಹೊರಬಂದ ಮೀಸಲು ಕ್ಷೇತ್ರಗಳದ್ದಾದರೇ ಎನ್‌ಡಿಎ ವಿರುದ್ಧ ಇಂಡಿಯಾ ಒಕ್ಕೂಟವನ್ನು ದೇಶಾದ್ಯಂತ ಕೈಹಿಡಿದ ದಲಿತ ಮತದಾರರ ಲೆಕ್ಕವೂ ಮತ್ತಷ್ಟೂ ನಿರ್ಣಾಯಕವಾಗಿದೆ.

ಇಂಡಿಯಾ ಒಕ್ಕೂಟದ ಯಶೋಗಾಥೆಯ ಮುನ್ನುಡಿಯಾಗಿ ರಾಮನ ಅಯೋಧ್ಯೆಯನ್ನ ಒಳಗೊಂಡ ಫೈಜಾಬಾದ್ ಕ್ಷೇತ್ರದಿಂದಲೇ ಶುರುಮಾಡುವಾ..

ಫೈಜಾಬಾದ್ ಹಿಂದೂಗಳಿಂದಲೇ ತುಂಬಿಹೋಗಿರುವ ಸಾಮಾನ್ಯ ಮತಕ್ಷೇತ್ರ. ಹಾಗೆಯೇ ಇಲ್ಲಿ ಶೇಕಡ 24ರಷ್ಟು ದಲಿತ ಮತದಾರರಿದ್ದಾರೆ. ಇದು ಸಾಮಾನ್ಯರಿಗೆ ಮೀಸಲಾಗಿದ್ದ ಕ್ಷೇತ್ರ. ಆದರೆ ಸಮಾಜವಾದಿ ಪಕ್ಷವು ತನ್ನ ಪಕ್ಷದ ಹಿರಿಯ ದಲಿತ ರಾಜಕಾರಣಿ ಅವಧೇಶ್ ಪ್ರಸಾದ್‌ರನ್ನ ಕಣಕ್ಕಿಳಿಸುತ್ತದೆ. ಅವಧೇಶ್ ಪ್ರಸಾದರು ಪರಿಶಿಷ್ಟರ (ಅಸ್ಪೃಶ್ಯರೆಂದು ಕರೆಯಲ್ಪಡುವ) ಪಾಸಿ ಜಾತಿಗೆ ಸೇರಿದವರಾಗಿದ್ದಾರೆ. ಪಾಸಿ ಸಮುದಾಯವು ಉತ್ತರ ಪ್ರದೇಶದ ದಲಿತರಲ್ಲಿ ಎರಡನೇ ಅತಿದೊಡ್ಡ ಪರಿಶಿಷ್ಟ ಜಾತಿ ಎನ್ನಲಾಗುತ್ತದೆ. ಯುಪಿಯ ಪರಿಶಿಷ್ಟರ ಪೈಕಿ ಜಾದವ್‌ಗಳು ಶೇಕಡ 52 ಪಾಲು ಹೊಂದಿದ್ದರೆ, ಆ ನಂತರದಲ್ಲಿ ಪಾಸಿಗಳು ಶೇಕಡ 16ರಷ್ಟು ಇದ್ದಾರೆಂದು ಅಂಕಿ ಅಂಶಗಳು ಹೇಳುತ್ತವೆ.

ಒಟ್ಟಾರೆ ಫೈಜಾಬಾದ್ ರಣಾಂಗಣದ ಹಣಾಹಣಿಯಲ್ಲಿ ಪರಿಶಿಷ್ಟ ಜಾತಿಯ ಅವಧೇಶ್ ಪ್ರಸಾದ್ ಪಾಸಿ ಹಿಂದುತ್ವದ ಫೈರ್‌ಬ್ರಾಂಡ್ ಆದ ಪ್ರತಿಸ್ಪರ್ಧಿ ಲಲ್ಲು ಸಿಂಗ್‌ರನ್ನ ನೇರ ಪೈಪೋಟಿಯಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ವಿಶಿಷ್ಟ ಇತಿಹಾಸ ಬರೆಯುತ್ತಾರೆ.

ಬಿಜೆಪಿ ಪಕ್ಷವು ಅಯೋಧ್ಯೆಯ ನಂತರ ಕೋಮುವಾದದ ದಳ್ಳುರಿಗೆ ನೂಕಲು ಮಥುರಾ ಮತ್ತು ಕಾಶಿ ಕ್ಷೇತ್ರಗಳ ವಿವಾದಗಳನ್ನ ಕೌಂಟರ್ ಮಾಡುವ ಸಮಾಜವಾದಿ ಪಕ್ಷವು ಫೈಜಾಬಾದ್ ಮತಕ್ಷೇತ್ರದ ಚುನಾವಣೆಯಲ್ಲಿ “ನಾ ಮಥುರಾ ನಾ ಕಾಸಿ ಅಬ್ಕ್ ಬಾರ್ ಅವಧೇಶ್ ಪಾಸಿ” ಎಂಬ ಘೋಷವಾಕ್ಯದ ಮೂಲಕವೇ ಬಿಜೆಪಿ ಲಲ್ಲುಸಿಂಗ್‌ನ ಎದುರಿಸಿ ಗೆಲ್ಲುತ್ತದೆ.

ಈ ಲಲ್ಲುಸಿಂಗ್ ಮತ್ಯಾರೂ ಅಲ್ಲ ಜೆಪಿಗೆ 400 ಸೀಟು ಬಂದರೇ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿಕೆ ಕೊಟ್ಟು ದೇಶಾದ್ಯಂತ ತಲ್ಲಣ ಸೃಷ್ಟಿಸಿದ ಭೂಪ.

ಈ ಕ್ಷೇತ್ರದ ಮತ್ತೂ ವಿಶೇಷವೆಂದರೇ ಇಲ್ಲಿ ಮುಸಲ್ಮಾಲರು, ಹಿಂದುಳಿದವರು, ಮಂದಿರಕ್ಕಾಗಿ ಮನೆ ಮಠ ವ್ಯಾಪಾರ ವಹಿವಾಟುಗಳನ್ನು ನಡೆಸಿ ಭೂಮಿಯನ್ನು ಕಳೆದುಕೊಂಡಿದ್ದವರಾಗಿದ್ದಾರೆ. ಅವರ ಜೊತೆಗೆ ದಲಿತರ ನಾಲ್ಕು ಲಕ್ಷ ಮತಗಳೂ ಸಹ ಬೇರೆಡೆ ಪೋಲಾಗದೇ ಸಮಾಜವಾದಿ ಪಕ್ಷದ ಗಲ್ಲಾಪೆಟ್ಟಿಗೆಗೆ ಬಿದ್ದ ಕಾರಣಕ್ಕೆ ರಾಮನ ಸನ್ನಿಧಿಯಲ್ಲಿಯೇ ಬಿಜೆಪಿಯನ್ನ ಕೆಡವಿ ಮಣಿಸಲು ಸಮಾಜವಾದಿ ಪಕ್ಷಕ್ಕೆ ಸಾಧ್ಯವಾಗುತ್ತದೆ.

ರಾಹುಲ್-ಅಖಿಲೇಶ್ ಬೆನ್ನಿಗೆ ನಿಂತ ಯುಪಿ ದಲಿತರು

ನಗೀನಾ ಕ್ಷೇತ್ರದಲ್ಲಿ ಅವತರಿಸಿದ ಧ್ರುವತಾರೆ ಎಂದೇ ಹೇಳಲಾಗುತ್ತಿರುವ ಕಾನ್ಶಿರಾಂ ರಾಜಕೀಯ ಪ್ರಯೋಗಗಳ ಭವಿಷ್ಯದ ವಾರಸುದಾರನೆಂದು ಖ್ಯಾತಿ ಪಡೆದಿರುವ ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ತಾನೇ ಒಂದು ಸ್ವಂತ ಪಕ್ಷ ಕಟ್ಟಿ ಅದರ ಮೂಲಕವೇ ಎನ್‌ಡಿಎ-ಇಂಡಿಯಾ ಒಕ್ಕೂಟಗಳ ಅಭ್ಯರ್ಥಿ ಹಾಗೂ ಮಾಯಾವತಿಯವರ ಬಿಎಸ್‌ಪಿಯನ್ನೂ ಎದುರುಹಾಕಿಕೊಳ್ಳುವ ಚಂದ್ರಶೇಖರ್ ಆಜಾದ್ 1.5 ಲಕ್ಷ ಮತಗಳ ಅಂತರದಿಂದ ಗೆದ್ದು ಬರುತ್ತಾರೆ.

ಭೀಮ್ ಆರ್ಮಿಯ ಮೂಲಕ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ದೆಹಲಿಯ ಅನೇಕ ಹಿಂಸಾಚಾರ ವಿರೋಧಿ ಚಳವಳಿಗಳಲ್ಲಿ ಹಾಗೂ ದಲಿತ-ಅಲ್ಪಸಂಖ್ಯಾತ ಹಾಗೂ ಹಿಂದುಳಿದ-ಆದಿವಾಸಿಗಳ ಪರವಾಗಿ ಕಾದಾಡುವ ಚಂದ್ರಶೇಖರ್ ಆಜಾದ್ ಈಗ ಯುಪಿಯ ರಾಜಕಾರಣದ ದಿಕ್ಕುದೆಸೆ ಬದಲಿಸುವ ಭರವಸೆಯ ಚುನಾವಣಾ ಪಂಟರ್ ಆಗಿ ಹೊರಹೊಮ್ಮಿದ್ದಾರೆ.

ಭಾರತದ ಸಂವಿಧಾನದ ರಕ್ಷಣೆ ಕುರಿತು ತಾನು ಹೋದೆಡೆಯಲ್ಲೆಲ್ಲಾ ಘರ್ಜಿಸುವ, ನೂರಾರು ಉಚಿತ ಶಾಲೆಗಳನ್ನು ನಡೆಸುವ, ದಲಿತ ರಾಜಕಾರಣದ ಒಳಗೊಳ್ಳುವಿಕೆಯ ನೆಲೆಗಟ್ಟನ್ನು ಮರುರೂಪಿಸುತ್ತಿರುವ ಆಜಾದ್, ಇಂಡಿಯಾ ಒಕ್ಕೂಟದ ಜೊತೆ ನಿರ್ದಿಷ್ಟ ಕ್ಷೇತ್ರಗಳನ್ನ ಕೇಳಿ ಪಡೆದುಕೊಳ್ಳುವ ವಿಚಾರದಲ್ಲಿ ಮಾತುಕತೆ ಮುರಿದುಬಿದ್ದು ಮೈತ್ರಿ ಮಾಡಿಕೊಳ್ಳದೇ ಹೋದರೂ ಉತ್ತರಪ್ರದೇಶದಲ್ಲಿ ಆಜಾದ್‌ನ ಇಂಪಾಕ್ಟ್ ಇಂಡಿಯಾ ಒಕ್ಕೂಟಕ್ಕೆ ದೊಡ್ಡಮಟ್ಟದಲ್ಲಿ ಲಾಭ ತಂದುಕೊಟ್ಟಿದೆಯೆಂಬುದನ್ನ ಯಾರೂ ಅಲ್ಲಗಳೆಯುತ್ತಿಲ್ಲ.

ಯಾದವ-ಮುಸ್ಲಿಂ ಕಾಂಬಿನೇಶನ್ ಹ್ಯಾಂಗೋವರ್‌ನಿಂದ ಹೊರಬಂದ ಎಸ್‌ಪಿಯ ಗೆಲುವಿಗೆ ಚಿಮ್ಮುಹಲಗೆಯಾದ ದಲಿತ ಮತಬ್ಯಾಂಕ್ 1993ರಿಂದಲೂ ಬಿಎಸ್‌ಪಿ ಪಕ್ಷದ ವಶದಲ್ಲಿದ್ದ ಉತ್ತರಪ್ರದೇಶದ ದಲಿತ ಮತದಾರರು ಮೊದಲ ಬಾರಿಗೆ ತನ್ನ ಕೇಡರ್ ಬೇಸ್ ತೊರೆದು ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್‌ನತ್ತ ಹೊರಳಿದ್ದು ಐತಿಹಾಸಿಕ ನಡೆ ಎನ್ನಬಹುದು.

ಸಂವಿಧಾನ ಬದಲಿಸುವ ಬಿಜೆಪಿ ಹೇಳಿಕೆಯಿಂದಷ್ಟೇ ಅಲ್ಲದೇ ಇಂಡಿಯಾ ಒಕ್ಕೂಟದ ಜಾತಿಗಣತಿಯ ಭರವಸೆ ಹಾಗೂ ಸಮಾಜವಾದಿ ಪಕ್ಷದ ಟಿಕೆಟ್ ಹಂಚಿಕೆಯಲ್ಲಾದ ಕ್ರಾಂತಿಕಾರಕ ನಡೆಗಳು ಯುಪಿಯ ದಲಿತರಲ್ಲಿ ಮೊದಲಬಾರಿಗೆ ಸಮಾಜವಾದಿ ಪಕ್ಷದೆಡೆಗೆ ನಂಬಿಕೆ ಮೂಡಲು ಕಾರಣವಾಯಿತು.

2019ರಲ್ಲಿ ಸ್ವತಹ ಮಾಯಾವತಿ-ಅಖಿಲೇಶ್ ಮೈತ್ರಿ ಮಾಡಿಕೊಂಡರೂ ಬಿಎಸ್‌ಪಿಗೆ 10 ಸೀಟು ಎಸ್‌ಪಿಗೆ 5 ಸೀಟು ಬಂದಿದ್ದವು. ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಿ 1 ಸೀಟು ಗೆದ್ದಿತ್ತು. ಅಂದರೆ ಆಗ ಬಿಎಸ್‌ಪಿ-ಎಸ್‌ಪಿ ಮೈತ್ರಿ ವರ್ಕ್‌ಔಟ್ ಆಗದೆ ಬಿಜೆಪಿ ಮತ್ತೆ 62 ಸೀಟುಗಳ ಗಡಿದಾಟಿತ್ತು. ಆದರೆ ಈ ಬಾರಿ ಮಾಯಾವತಿಯವರ ನಿಷ್ಕ್ರಿಯ ನಡೆಯಿಂದ ಬಿಜೆಪಿ ಕೊಬ್ಬುತ್ತಲೇ ಇರುವುದನ್ನ ಕಂಡಿದ್ದ ದಲಿತ ಮತದಾರರು ಇಂಡಿಯಾ ಒಕ್ಕೂಟದತ್ತ ದಾಪುಗಾಲು ಹಾಕುವಂತೆ ಮಾಡಿತು.

ಅಖಿಲೇಶ್‌ರ ಪಿಡಿಎ(ಪಿಚ್ಡೆ, ದಲಿತ್, ಅಲ್ಪಸಂಖ್ಯಾತ್) ಪರಿಕಲ್ಪನೆಯಡಿ ನಡೆದ ಮತಯಾಚನೆ ಕರ್ನಾಟಕದ ಅಹಿಂದದ ಸ್ವರೂಪದಲ್ಲಿ ರಿವಾಜಿನಲ್ಲಿಯೇ ಯುಪಿಯಲ್ಲಿ ಮತಬ್ಯಾಂಕನ್ನು ಭದ್ರಗೊಳಿಸಿತು. ಅದಲ್ಲದೇ ಯುಪಿಯಂತಹ ದೊಡ್ಡ ರಾಜ್ಯದಲ್ಲಿ ಸಂಖ್ಯಾಬಾಹುಳ್ಯ ಇರುವ ಯಾದವರಿಗೆ ಕೇವಲ 5 ಟಿಕೆಟ್ ನೀಡಿದ ಅಖಿಲೇಶ್ ನಡೆ ಉಳಿದವರಲ್ಲಿ ಭಾರಿ ಭರವಸೆ ಮೂಡಿಸಿತು. ಮುಸಲ್ಮಾನರಿಗೂ ಪರಿಸ್ಥಿತಿ ಅರ್ಥ ಮಾಡಿಸಿ ಟಿಕೆಟ್ ನೀಡಿಕೆಯಲ್ಲಿ ಸಂಖ್ಯೆಯನ್ನ ಕಡಿತ ಮಾಡಿದ್ದೂ ಸಹ ಉಳಿದವರ ಇಬಿಸಿ ಮತಬೇಟೆಗೆ ಸಹಕಾರಿಯಾಯಿತು. ವಿಶೇಷವಾಗಿ ಬಿಎಸ್‌ಪಿ ತೆಕ್ಕೆಯಲ್ಲಿದ್ದ ರಾಜ್ಯದ ಶೇಕಡ 20ರಷ್ಟು ಮತಬ್ಯಾಂಕ್ ರಾತ್ರೋರಾತ್ರಿ ಕರಗಿ ಶೇಕಡ 9ಕ್ಕೆ ಇಳಿಯಲು ಈ ನಡೆ ಪ್ರಮುಖವಾಗಿ ಕೆಲಸ ಮಾಡಿತು. ಶೇಕಡ 10ಕ್ಕಿಂತ ಹೆಚ್ಚು ದಲಿತರು ಬಿಎಸ್‌ಪಿ ತೊರೆದು ಇಂಡಿಯಾ ಒಕ್ಕೂಟಕ್ಕೆ ಬಲ ತುಂಬಿದರು.

ಒಂದುವೇಳೆ ಈ ಬಾರಿ ಮಾಯಾವತಿಯವರೂ ಇಂಡಿಯಾ ಒಕ್ಕೂಟದ ಮೈತ್ರಿಯ ಭಾಗವಾಗಿದ್ದಿದ್ದರೇ ಬಿಜೆಪಿಯು ಯುಪಿಯಲ್ಲಿ ಅಕ್ಷರಶಃ ಧೂಳಿಪಟವಾಗುತ್ತಿತ್ತು. ಸಾಕ್ಷಿಯಾಗಿ, ಈಗ ಬಿಜೆಪಿ ಗೆದ್ದಿರುವ ಸುಮಾರು 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಾಯಾವತಿಯವರ ಬಿಎಸ್‌ಪಿ ಪಕ್ಷದ ಅಳಿದುಳಿದ ಮತಗಳೇ ಇಂಡಿಯಾ ಒಕ್ಕೂಟದ ಗೆಲುವಿಗೆ ಅಡ್ಡ ನಿಂತು ಬಿಜೆಪಿಯನ್ನು ಗೆಲ್ಲಿಸಿದೆಯೆಂಬುದು ಫಲಿತಾಂಶದ ಅಂಕಿಅಂಶಗಳಲ್ಲಿ ಹೊರಬಿದ್ದಿದೆ.

ಒಂದುವೇಳೆ ಬಿಎಸ್‌ಪಿಯ ಪ್ರಜ್ಞಾವಂತ ದಲಿತ ಮತಬ್ಯಾಂಕ್ ಏನಾದರೂ ಮಿಸುಕಾಡದೇ ಬಿಎಸ್‌ಪಿಯಲ್ಲಿಯೇ ಉಳಿದುಬಿಟ್ಟಿದ್ದರೆ ಈ ಬಾರಿಯೂ ಬಿಜೆಪಿಯ ನಾಗಾಲೋಟಕ್ಕೆ ತಡೆ ಒಡ್ಡಲು ಸಾಧ್ಯವಿರುತ್ತಿರಲಿಲ್ಲವೆಂಬುದನ್ನ ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳ ಗೆಲುವಿನ ಅಂತರವು ಸಾರಿಸಾರಿ ಹೇಳುತ್ತಿದೆ.

ಅಂದರೆ ಉಳಿದೆಲ್ಲ ಪ್ರಯೋಗಗಳಾಚೆಗೆ ಬಲಪಂಥೀಯ ಪಕ್ಷಗಳ ಹೆಡೆಮುರಿ ಕಟ್ಟಲು ದಲಿತರ ಮತಗಳು ಹೇಗೆ ಗೇಮ್ ಚೇಂಜರ್ ಆಗಬಲ್ಲವು ಎಂಬುದಕ್ಕೆ ಇಂಡಿಯಾ ಒಕ್ಕೂಟ ಯುಪಿಯಂತಹ ರಾಜ್ಯಗಳಲ್ಲಿ ಬಿಜೆಪಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿರುವುದೇ ಸಾಕ್ಷಿಯಾಗಿದೆ.

ಅಖಿಲೇಶ್‌ರ ಎಲ್ಲ ಲೆಕ್ಕಾಚಾರಗಳ ಆಚೆಗೆ ರಾಹುಲ್ ಗಾಂಧಿ ದೇಶದೆಲ್ಲೆಡೆ ಪಾಕೆಟ್ ಸಂವಿಧಾನವನ್ನು ಕೈಯ್ಯಲ್ಲಿಡಿದು ಚುನಾವಣಾ ರ್‍ಯಾಲಿಗಳಲ್ಲಿ ಸಂವಿಧಾನ ರಕ್ಷಿಸಲು ಇಂಡಿಯಾ ಒಕ್ಕೂಟಕ್ಕೆ ಮತಯಾಚನೆ ಮಾಡಿದ ಮ್ಯಾಜಿಕ್‌ಅನ್ನು ಕೂಡ ಯಾರೂ ಮರೆಯುವಂತಿಲ್ಲ. ಅಪ್ಪಟ ದಲಿತ ಆಕ್ಟಿವಿಸ್ಟ್‌ನಂತೆ ಸಂವಿಧಾನ, ಜಾತಿಗಣತಿ, ಮೀಸಲಾತಿ, ಪ್ರಾತಿನಿಧ್ಯ, ಸಂಪತ್ತಿನ ಮರುಹಂಚಿಕೆ ಮೊದಲಾದ ಜನಪರ ಹಾಗೂ ಶೋಷಿತರ ಪರವಾಗಿದ್ದುಕೊಂಡು ರಾಹುಲ್ ಹೃದಯಸ್ಪರ್ಶಿಯಾಗಿ ಕೈಗೊಂಡ ಮತಪ್ರಚಾರ ಅಭಿಯಾನವು ದಲಿತರನ್ನ ಇಂಡಿಯಾ ಒಕ್ಕೂಟದ ಮೇಲೆ ಭರವಸೆ ಇಡಲು ಇನ್ನಿಲ್ಲದಂತೆ ಪ್ರೇರೇಪಿಸಿದವು.

ಬಿಹಾರದಲ್ಲಿ ದಲಿತರೆಂದರೇ ಯಾರ್‍ಯಾರು?!

ದಲಿತರು ಎಂಬ ಪರಿಕಲ್ಪನೆಯನ್ನು ಇಡೀ ಭಾರತವೇ ಒಂದು ದಿಕ್ಕಿನಲ್ಲಿ ಆಲೋಚಿಸಿದರೇ ಬಿಹಾರ ಮಾತ್ರ ಭಿನ್ನ ಬಗೆಯಲ್ಲಿ ದಲಿತ ಪರಿಕಲ್ಪನೆಯನ್ನ ರೀ-ಡಿಫೈನ್ ಮಾಡಿಕೊಂಡು ಎರಡು ದಶಕಗಳಾಗುತ್ತಾ ಬಂದಿದೆ. ಅದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿ.

ಜಾತಿಗಣತಿಯನ್ನ ಮಾಡಿ ಮುಗಿಸಿ ಪಾಟ್ನಾ ಹೈಕೋರ್ಟ್‌ನ ಇಶಾರೆ ಪಡೆದು ವರದಿಯನ್ನು ಲೋಕಾರ್ಪಣೆಗೊಳಿಸಿದ ಮೊದಲ ಶ್ರೇಯಸ್ಸು ಬಿಹಾರದ ಮುಖ್ಯಮಂತ್ರಿ ನಿತೀಶ್‌ರಿಗೆ ಸಲ್ಲಬೇಕು, ನಿಜ.

ಹಾಗೆಯೇ ಮಂಡಲ್ ಚಾಂಪಿಯನ್‌ಗಳಾದ ಒಬಿಸಿ ಬಹುಸಂಖ್ಯಾತರುಗಳು ಹಾಗೂ ಕಮಂಡಲದ ಸೂತ್ರಧಾರರಾದ ಮುಂದುವರಿದ ಜಾತಿಗಳ ನಡುವೆ ಸದ್ದಿಲ್ಲದೇ ಅವತರಿಸಿದ ಇಬಿಸಿ (ಎಕ್‌ಸ್ಟ್ರೀಮ್ ಬ್ಯಾಕ್‌ವರ್ಡ್ ಕ್ಲಾಸ್) ರಾಜಕಾರಣದ ಜನಕ ನಿತೀಶ್ ಎಂದರೇ ತಪ್ಪಾಗಲಾರದು.

ಬಿಹಾರದ ಜನಸಂಖ್ಯೆಯಲ್ಲಿ ಶೇಕಡ 14ರಷ್ಟಿರುವ ಯಾದವರು, 17ರಷ್ಟಿರುವ ಮುಸ್ಲಿಂ ಕಾಂಬಿನೇಶನ್‌ನ ದಶಕಗಳ ಕಾಲ ಚಾಲ್ತಿಯಲ್ಲಿದ್ದ ಪಾಲಿಟಿಕ್ಸ್‌ಅನ್ನು ಮುರಿದು ಕಟ್ಟಿದ ನಿತೀಶ್ 2006 ರಲ್ಲಿಯೇ ಪಸ್ಮಂಡಾ ಮುಸ್ಲಿಮರ (ಪಸ್ಮಂಡ ಮುಸ್ಲಿಂ ಮಹಾಜ್) ಸಂಘಟನೆಗೆ ಬಲ ತುಂಬಿ ಮುಸ್ಲಿಮರೊಳಗಿನ ದಲಿತರು ಮತ್ತು ಹಿಂದುಳಿದವರಿಗೆ ಎಸ್‌ಸಿ ಅಥವಾ ಇಬಿಸಿ ವರ್ಗದಲ್ಲಿ ವಿಶೇಷ ಮೀಸಲಾತಿ ಕಲ್ಪಿಸಬೇಕೆಂಬ ಹೋರಾಟಕ್ಕೆ ಒತ್ತಾಸೆಯಾಗಿ ನಿಂತರು.

2006ರಿಂದ ಶುರುವಾದ ಈ ಅಭಿಯಾನಕ್ಕೆ 2023ರಲ್ಲಿ ಜಾತಿಗಣತಿ ಸಮೀಕ್ಷೆಯ ಬಿಡುಗಡೆಯ ಮೂಲಕ ತಾರ್ಕಿಕ ಅಂತ್ಯ ಕಾಣಿಸಿದ ನಿತೀಶ್ ಪಸ್ಮಂಡ ಮುಸ್ಲಿಮರನ್ನು ಬಹುತೇಕ ಇಬಿಸಿಗಳನ್ನಾಗಿ ಹಣೆಪಟ್ಟಿ ಹಚ್ಚಿ ಕೂರಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಬಿಹಾರದಲ್ಲಿ ಲಾಲೂ ಪ್ರಸಾದರ ಕುಟುಂಬಕ್ಕೆ ಇರುವಷ್ಟೇ ಮುಸ್ಲಿಂ ಮತಬ್ಯಾಂಕ್ ನಿತೀಶರೊಟ್ಟಿಗೂ ಇದೆಯೆನ್ನುವುದು ನಿರ್ವಿವಾದದ ಸಂಗತಿ.

ಈ ಹಿನ್ನೆಲೆಯಲ್ಲಿ ಒಂದೆಡೆ ಪ್ರಮುಖವಾಗಿ ರವಿದಾಸಿಯಾ ಮತ್ತು ಪಾಸ್ವಾನ್ ಸಮುದಾಯಗಳು ಕ್ರಮವಾಗಿ ತಲಾ 5 ರಿಂದ 6 ಪರ್ಸೆಂಟ್ ಸಂಖ್ಯಾಬಾಹುಳ್ಯದ ಜೊತೆಗೆ ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ ದಲಿತರು ಶೇಕಡ 19ರಷ್ಟು ಪಾಲು ಹೊಂದಿದ್ದರೆ ಮತ್ತೊಂದೆಡೆ ಇಬಿಸಿಯಲ್ಲಿ ಸೇರಿಹೋಗಿರುವ ದಲಿತ ಮುಸ್ಲಿಮರ ಸಂಖ್ಯೆಯೂ ಗಮನಾರ್ಹವಾಗಿದೆಯೆಂಬುದನ್ನ ಇಲ್ಲಿ ನೆನಪಿಟ್ಟುಕೊಳ್ಳಬೇಕಾಗುತ್ತದೆ. ಮೀಸಲಾತಿ, ಸಂವಿಧಾನದ ಹಕ್ಕುಭಾದ್ಯತೆಗಳ ಅರಿವು ದಲಿತ ಮುಸ್ಲಿಮರಲ್ಲೂ ಅಷ್ಟೇ ಗಾಢವಾಗಿ ಬೇರೂರಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಲಾಲೂ ಪ್ರಸಾದರ ಪುತ್ರ ತೇಜಸ್ವಿ ಯಾದವ್‌ರ ಹಿಂದೆ ಭಾರಿ ಜನಸ್ತೋಮ ಇದ್ದಂತೆ ಕಂಡುಬಂದರೂ ಕ್ಯಾಟಗಾರಿಕಲಿ ವ್ಯವಸ್ಥಿತ ತಂತ್ರಗಾರಿಕೆ ಮಾಡಿದ ನಿತೀಶ್ ಹೆಚ್ಚು ಸೀಟುಗಳನ್ನು ತಾನು ಕಬ್ಜಾ ಮಾಡಿಕೊಂಡಿದ್ದಲ್ಲದೇ ಬಿಜೆಪಿಗೂ ತನ್ನ ಯಶಸ್ಸಿನ ಪಾಲು ದಕ್ಕುವಂತೆ ನೋಡಿಕೊಂಡರು.

ನಿತೀಶ್ ಕುಮಾರ್

ಉತ್ತರಪ್ರದೇಶದಲ್ಲಿ ಯಾದವ ಲೀಡರ್‌ಗಳನ್ನ ಹಾಗೂ ಸಮುದಾಯವನ್ನು ಬ್ಯಾಕ್ ಸೀಟಿನಲ್ಲಿ ಕೂರಿಸಿಕೊಂಡು ಡ್ರೈವಿಂಗ್ ಸೀಟಲ್ಲಿ ದಲಿತರು, ಅತಿ ಹಿಂದುಳಿದವರನ್ನ ಮುಂದೆಬಿಟ್ಟು ಟಿಕೆಟ್ ಹಂಚಿಕೆಯಲ್ಲಿ ಅಖಿಲೇಶ್ ಮಾಡಿದ ಸಣ್ಣಸಣ್ಣ ತ್ಯಾಗಗಳ ಟ್ಯಾಕ್ಟಿಕಲ್ ನಡೆಯನ್ನ ತೇಜಸ್ವಿ ಕೂಡ ಅನುಸರಿಸಿದ್ದರೆ ಬಿಹಾರದಲ್ಲಿ ಬಿಜೆಪಿಯ ಹಣೆಬರಹವನ್ನು ಬೇರೆಯದೇ ರೀತಿಯಲ್ಲಿ ತಿದ್ದಿಬರೆಯುವ ಅವಕಾಶ ಅವರಿಗೆ ಸಿಕ್ಕುತ್ತಿತ್ತು.

ಇನ್ನು ಮೂಲದಲ್ಲಿ ಕಾಂಗ್ರೆಸ್ ಜೊತೆಗಿದ್ದು ನಂತರ ಬಿಎಸ್‌ಪಿ ವಶಕ್ಕೆ ಹೋಗಿ ಆನಂತರ ಬಿಜೆಪಿ ಪಾಲಾಗಿದ್ದ ಪರಿಶಿಷ್ಟ ಜಾತಿಯಾದ ರವಿದಾಸಿಯಾ ಸಮುದಾಯವು ಮತ್ತೆ ಕಾಂಗ್ರೆಸ್ ಹಾಗೂ ಸಿಪಿಐ(ಎಂಎಲ್)ಗೆ ಘರ್ ವಾಪ್ಸಿ ಮಾಡಿದ ಕಾರಣಕ್ಕೆ- ಸತತ ಎರಡು ಚುನಾವಣೆಗಳಲ್ಲಿಯೂ ಬಿಜೆಪಿಯ ಪಾಲಾಗಿದ್ದ ದಲಿತ ವರ್ಗದ ಮೇರುನಾಯಕ ಬಾಬೂ ಜಗಜೀವನರಾಂ ಮತ್ತವರ ಮಗಳು ಮೀರಾಕುಮಾರ್ ಪ್ರತಿನಿಧಿಸುತ್ತಿದ್ದ ಸಸರಾಂ ಮೀಸಲು ಲೋಕಸಭಾ ಕ್ಷೇತ್ರವನ್ನ ಹತ್ತು ವರ್ಷಗಳ ನಂತರ ಕಾಂಗ್ರೆಸ್ ಮತ್ತೆ ಗೆದ್ದುಕೊಳ್ಳಲು ಸಾಧ್ಯವಾಯಿತು.

ಹಾಗೂ ಬಿಹಾರದಲ್ಲೂ ಕಾಂಗ್ರೆಸ್ ಕಮಾಲ್ ಮಾಡಲು ದಲಿತ ಮತಗಳು ನೆರವಾದವು. 2019ರಲ್ಲಿ 1.70 ಸಾವಿರ ಮತಗಳ ಅಂತರದಲ್ಲಿ ಸೋತಿದ್ದ ಜಗಜೀವನರಾಂರ ಪುತ್ರಿ ಮೀರಾಕುಮಾರ್ ಈ ಬಾರಿ ಸಸರಾಂ ಕ್ಷೇತ್ರವನ್ನೇ ತೊರೆದುಹೋಗಿದ್ದರು. ಅವರು ಬಿಟ್ಟುಕೊಟ್ಟ ಕಣದಲ್ಲಿ ಕಾಂಗ್ರೆಸ್‌ನ ಡಾರ್ಕ್‌ಹಾರ್ಸ್‌ನಂತೆ ಬಂದ ಮನೋಜ್‌ಕುಮಾರ್ ಎಂಬ ಅಭ್ಯರ್ಥಿ ಫೋಟೋ ಫಿನಿಷ್ ಫಲಿತಾಂಶದಲ್ಲಿ ರೇಸ್‌ಅನ್ನು ಗೆದ್ದುಕೊಂಡರು.

ಈ ಕ್ಷೇತ್ರದಲ್ಲಿ ನಾಲ್ಕು ಲಕ್ಷದಷ್ಟು ದಲಿತ ಮತಗಳು ಹಾಗೂ 1.70 ಲಕ್ಷದಷ್ಟು ಮುಸ್ಲಿಂ ಮತಗಳು ಇಂಡಿಯಾ ಒಕ್ಕೂಟವನ್ನ ಸಾಲಿಡ್ಡಾಗಿ ಕೈಹಿಡಿದದ್ದರಿಂದ ಬಿಜೆಪಿಗೆ ಇಲ್ಲಿ ಸೋಲಾಯಿತು. ಆದಾಗ್ಯೂ ಮಾಯಾವತಿಯವರ ಬಿಎಸ್‌ಪಿ ಪಕ್ಷ 50 ಸಾವಿರದಷ್ಟು ಮತಗಳನ್ನು ಬೇಟೆಯಾಡಿತು. ಬಿಎಸ್‌ಪಿಯ ಮತಬೇಟೆಯ ಅಂತರ ಇನ್ನು ಹತ್ತು-ಹದಿನೈದು ಸಾವಿರ ಹೆಚ್ಚಾಗಿದ್ದರೂ ಅದು ಬಿಜೆಪಿಗೆ ಲಾಭವಾಗುತ್ತಿತ್ತು. ಆದರೆ ಎಚ್ಚೆತ್ತ ದಲಿತರು ಇಂಡಿಯಾ ಒಕ್ಕೂಟವನ್ನ ಗೆಲ್ಲಿಸಿ ಬಿಜೆಪಿಗೆ ಸಂವಿಧಾನ ಬದಲಾವಣೆಯ ತಂಟೆಗೆ ಹೋಗದಿರಲು ಎಚ್ಚರಿಕೆ ನೀಡಿದರೆಂದೇ ಫಲಿತಾಂಶವನ್ನು ವಿಶ್ಲೇಷಿಸಲಾಗುತ್ತಿದೆ.

ಇನ್ನು ಚಿರಾಗ್ ಪಾಸ್ವಾನ್ ತನಗೆ ಎನ್‌ಡಿಎ ಬಾಬ್ತಿನಲ್ಲಿ ಹಂಚಿಕೆಯಾಗಿದ್ದ ಅಷ್ಟೂ ಕ್ಷೇತ್ರಗಳನ್ನು ಗೆದ್ದು ತನ್ನ ಪಾಸ್ವಾನ್-ದುಸ್ಸಾದ್ ಮತಬ್ಯಾಂಕ್‌ನ ಐಡೆಂಟಿಟಿಯನ್ನ ಮತ್ತಷ್ಟು ಭದ್ರಪಡಿಸಿಕೊಂಡದ್ದು ಬಿಟ್ಟರೇ ಬಿಹಾರದ ದಲಿತ ಸಮುದಾಯಗಳ ಚೌಕಾಶಿ ಆಟ ಯಾರನ್ನೂ ಗೆಲ್ಲಿಸದೇ ಯಾರನ್ನೂ ಸೋಲಿಸದೇ ಸಂವಿಧಾನದ ವಿರೋಧಿಗಳಿಗೆ ನೇರ ಸಂದೇಶವನ್ನಂತೂ ರವಾನೆ ಮಾಡಿದೆಯೆಂಬುದು ಸ್ಪಷ್ಟವಾಗಿ ಹೇಳಬಹುದು.

ಮಹಾರಾಷ್ಟ್ರದ ಕಥೆ

ಮಹಾರಾಷ್ಟ್ರದ ದಲಿತ ಮತದಾರರ ಪಾತ್ರವನ್ನು ಈ ಚುನಾವಣೆಯಲ್ಲಿ ವಿಶೇಷವಾಗಿ ವಿವರಿಸಬೇಕಿಲ್ಲ. ಇಲ್ಲಿ ಇಂಡಿಯಾ ಮೈತ್ರಿಕೂಟದೊಂದಿಗೆ ಮರಾಠ-ಮುಸ್ಲಿಂ-ದಲಿತ್ ಕಾಂಬಿನೇಶನ್‌ಅನ್ನು ವ್ಯವಸ್ಥಿತವಾಗಿ ಕಟ್ಟಲಾಗಿತ್ತು.

ಈ ನಡುವೆ ’ವಂಚಿತ್ ಬಹುಜನ್ ಆಘಾಡಿ’ ಪಾರ್ಟಿಯ ಪ್ರಕಾಶ್ ಅಂಬೇಡ್ಕರ್‌ರನ್ನು ಮೈತ್ರಿಗೆ ಆಹ್ವಾನಿಸಲಾಗಿತ್ತು. ಆದರೆ ಸೀಟು ಹಂಚಿಕೆಯಲ್ಲಿ ಮಾತುಕತೆ ಮುರಿದುಬಿದ್ದುದರಿಂದ ಪ್ರಕಾಶ್ ಅಂಬೇಡ್ಕರ್ ಪಾರ್ಟಿಯು ವಿವಿಧ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತು.

ಪ್ರಕಾಶ್ ಅಂಬೇಡ್ಕರ್

ಉತ್ತರ ಪ್ರದೇಶದಲ್ಲಿನ ಬಿಎಸ್‌ಪಿಯಂತೆ ಮಹಾರಾಷ್ಟ್ರದಲ್ಲಿ ಪ್ರಕಾಶ್ ಅಂಬೇಡ್ಕರರ ವಿಬಿಎ ಪಕ್ಷ ಇಂಡಿಯಾ ಮೈತ್ರಿಕೂಟದ ಗೆಲುವಿಗೆ ಅಡ್ಡಿಯಾಗಬಹುದೆಂಬ ಆತಂಕ ಎದುರಾಗಿತ್ತು. ಆದರೆ ಜಾಣ ದಲಿತ ಮತದಾರರು ಈ ಬಾರಿ ಪ್ರಕಾಶ್ ಅಂಬೇಡ್ಕರ್‌ರ ಪಕ್ಷ ತೊರೆದು ಇಂಡಿಯಾ ಒಕ್ಕೂಟದತ್ತ ನಿರ್ಣಾಯಕವಾಗಿ ವಾಲಿದ್ದರಿಂದ ಬಿಜೆಪಿ ಅನೇಕ ಕ್ಷೇತ್ರಗಳಲ್ಲಿ ಮುಖಭಂಗ ಅನುಭವಿಸಿದ್ದಲ್ಲದೇ ಸ್ವತಃ ಪ್ರಕಾಶ್ ಅಂಬೇಡ್ಕರ್‌ರ ಪಕ್ಷವು ಈ ಹಿಂದಿನ ಚುನಾವಣೆಗಿಂತ ಶೇಕಡ 4ರಷ್ಟು ಪ್ರಮಾಣದ ಮತವನ್ನು ಈ ಸಲದ ಚುನಾವಣೆಯಲ್ಲಿ ಕಳೆದುಕೊಂಡು ತನ್ನ ನಷ್ಟದ ಬಾಬ್ತನ್ನು ಇಂಡಿಯಾ ಒಕ್ಕೂಟಕ್ಕೆ ಲಾಭದ ರೀತಿಯಲ್ಲಿ ವರ್ಗಾಯಿಸಿತು.

ಪಂಜಾಬ್-ಹರಿಯಾಣದಲ್ಲಿ ಪುಟಿದ ಕಾಂಗ್ರೆಸ್

ಪಂಜಾಬ್‌ನಲ್ಲಿ ಈ ಬಾರಿ ಮತಗಳಿಕೆಯ ಪ್ರಮಾಣದ ಸರಾಸರಿ ಕುಸಿತದ ನಡುವೆಯೂ ಮಾಜಿ (ದಲಿತ) ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ನೇತೃತ್ವದಲ್ಲಿ ದೊಡ್ಡಮಟ್ಟದಲ್ಲಿ ಕಾಂಗ್ರೆಸ್ಸನ್ನು ಕೈಹಿಡಿದ ದಲಿತ ಮತದಾರರು ಏಳು ಕ್ಷೇತ್ರಗಳಲ್ಲಿ ಕೈ ಪಕ್ಷದ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಿದರು.

ಆಪ್ ಪಕ್ಷದ ವಿಧಾನಸಭಾ ಚುನಾವಣೆಯ ಜಯಭೇರಿಯ ಬೆನ್ನಿಗೆ ನಡೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಹಿಂಜರಿಕೆಯಿಂದಲೇ ಕಣಕ್ಕಿಳಿದಿತ್ತು. ಆದರೆ ಪಂಜಾಬ್ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್ ನಿರೀಕ್ಷೆಗಿಂತ ತುಸು ಹೆಚ್ಚು ಪ್ರಮಾಣದ ಮತಗಳು ಹಾಗೂ ಸ್ಥಾನಗಳನ್ನ ತನ್ನದಾಗಿಸಿಕೊಳ್ಳಲು ಪ್ರಮುಖವಾಗಿ ದಲಿತ್ ಓಟ್ ಬ್ಯಾಂಕ್ ಭರ್ಜರಿಯಾಗಿ ಕೆಲಸ ಮಾಡಿರುವುದನ್ನ ಆಯಾ ರಾಜ್ಯಗಳ ಚುನಾವಣಾ ಫಲಿತಾಂಶಗಳ ಅಂಕಿಅಂಶಗಳೇ ಸಾರಿ ಹೇಳುತ್ತಿವೆ.

ತಮಿಳುನಾಡಿನ ಅನ್‌ಸಂಗ್ ಹೀರೋಗಳು ಹಾಗೂ ಫೈರ್ ಬ್ರಾಂಡ್‌ಗಳು

ತಮಿಳುನಾಡು ಎಂದಾಕ್ಷಣ ಡಿಎಂಕೆ ಪಕ್ಷದಲ್ಲಿನ ಪೆರಿಯಾರ್‌ರ ಪ್ರಖರ ಸಿದ್ಧಾಂತ, ವೈಚಾರಿಕತೆಯನ್ನ ಅಣ್ಣಾದೊರೈ, ಕರುಣಾನಿಧಿಯವರ ಲೆಗಸಿಯನ್ನ ಹಾಡಿಹೊಗಳಲಾಗುತ್ತದೆ.

ಬಿಜೆಪಿಯ ಅಶ್ವಮೇಧ ಕುದುರೆಯನ್ನು ಡಿಎಂಕೆ ಏಕಾಂಗಿಯಾಗಿ ಕಟ್ಟಿಹಾಕುತ್ತದೆ, ಕಾಂಗ್ರೆಸ್ ಡಿಎಂಕೆಯ ಸಾಥ್ ಪಡೆದು ತನ್ನ ನೆಲೆ ಗಟ್ಟಿಮಾಡಿಕೊಳ್ಳುತ್ತದೆ ಎಂಬುದು ಇಲ್ಲೀತನಕ ಕಟ್ಟಲಾಗಿರುವ ನರೆಟಿವ್. ಆದರೆ ಡಿಎಂಕೆ ಕೂಡ ನಿಯೋ ಫ್ಯೂಡಲ್‌ಗಳಂತೆ ಹೆಚ್ಚು ಅಗ್ರೆಸ್ಸಿವ್ ಆಗಿ ಫ್ಯಾಸಿಸ್ಟರನ್ನು ಎದುರುಗೊಳ್ಳುವುದಿಲ್ಲ. ಸಂವಿಧಾನ ವಿರೋಧಿಗಳ ವಿರುದ್ಧ ದಲಿತರಂತೆ ಅಗ್ರೆಸಿವ್ ನರೆಟಿವ್ ಕಟ್ಟುವುದಿಲ್ಲವೆಂಬ ಆರೋಪವಂತೂ ಚಾಲ್ತಿಯಲ್ಲಿದೆ.

ಹಾಗಾದರೇ ಕೋಮುವಾದದ ವಿರುದ್ಧ, ಸಂವಿಧಾನ ವಿರೋಧಿಗಳ ಎದುರಾಗಿ ಅಗ್ರೆಸ್ಸಿವ್ ಆಟಗಳನ್ನ ಕೌಂಟರ್ ಮಾಡುವವರು ಯಾರು ಎಂದರೇ ಅಲ್ಲಿ ಅನ್ ಸಂಗ್ ಹೀರೋಗಳು ಕಾಣಸಿಗುತ್ತಾರೆ.

’ವಿದುತಲೈ ಚಿರುತೈಗಲ್ ಕಚ್ಚಿ’ (ವಿಸಿಕೆ) ಪಕ್ಷದ ತೋಲ್ ತಿರುಮಾಳವನ್ ಹಾಗೂ ಡಿ.ರವಿಕುಮಾರ್ ಇಬ್ಬರೂ ಸೇರಿ ದೇಶಂ ಕಪ್ಪೋಂ (ದೇಶವನ್ನ ಉಳಿಸಿಕೊಳ್ಳುವಾ) ಎಂಬ ಅಭಿಯಾನದ ಮೂಲಕ ದಲಿತ್ ಅಸೆರ್ಟಿವ್ ಪಾಲಿಟಿಕ್ಸ್‌ಅನ್ನು ಸಾಕಾರಗೊಳಿಸಿದ್ದಾರೆ. ಈ ಇಬ್ಬರು ಫೈರ್ ಬ್ರಾಂಡ್ ನಾಯಕರು ತಮ್ಮದೇ ಪಕ್ಷವಾದ ವಿಸಿಕೆ ಪಾರ್ಟಿಯ ಮಡಿಕೆ ಗುರುತಿನ ಮೇಲೆ ಚುನಾವಣೆ ಆಡಿ ಎರಡು ಪಾರ್ಲಿಮೆಂಟ್ ಕ್ಷೇತ್ರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಡಿಎಂಕೆ ಪಕ್ಷದ ಮಿತ್ರಪಕ್ಷವಾಗಿಯೇ ರಾಜಕೀಯ ಹಾದಿ ಸಾಗಿಸಿರುವ ವಿಸಿಕೆ ತನ್ನ ಐಡೆಂಟಿಟಿಯನ್ನ ಮಾತ್ರ ಡಿಎಂಕೆಯಲ್ಲಿ ವಿಲೀನಗೊಳಿಸಿಕೊಳ್ಳಲು ಹೋಗಿಲ್ಲ ಎನ್ನುವುದು ವಿಶಿಷ್ಟ ಅಂಶವಾಗಿದೆ.

ಕಳೆದ ಬಾರಿ ವಿಸಿಕೆ ಪಕ್ಷದ ನಾಯಕ ರವಿಕುಮಾರ್ ಡಿಎಂಕೆ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿ ಗೆದ್ದರೂ ಈ ಬಾರಿ ತಮ್ಮದೇ ಪಕ್ಷದ ಮಡಿಕೆ ಗುರುತಿನಡಿ ನಿಂತು ಲಕ್ಷಕ್ಕೂ ಅಧಿಕ ಮತಗಳಿಂದ ವಿಜೇತರಾಗಿದ್ದಾರೆ. ಚಿದಂಬರಂ ಕ್ಷೇತ್ರದಲ್ಲಿ ತೋಲ್ ತಿರುಮಾಳವನ್ ಸಂಸದರಾದರೆ ವಿಲ್ಲುಪುರಂನ ಸಂಸದನಾಗಿ ರವಿಕುಮಾರ್ ಗೆದ್ದಿದ್ದಾರೆ.

ತೋಲ್ ತಿರುಮಾಳವನ್ ಹಾಗೂ ಡಿ.ರವಿಕುಮಾರ್

ತಾವು ಹಾಗೂ ತಮ್ಮ ವಿಸಿಕೆ ಪಕ್ಷವನ್ನ ತಮಿಳುನಾಡಿನಲ್ಲಿ ಗೆಲ್ಲಿಸಿಕೊಂಡು ’ರಾಜ್ಯಪಕ್ಷ’ದ ಸ್ಥಾನಮಾನ ಗಿಟ್ಟಿಸಿಕೊಂಡಿದ್ದಲ್ಲದೇ ಡಿಎಂಕೆ, ಕಾಂಗ್ರೆಸ್, ಎಡಪಕ್ಷಗಳೊಟ್ಟಿಗೆ ಹಿಂದುತ್ವದ ರಾಜಕಾರಣಕ್ಕೆ ಸೆಡ್ಡು ಹೊಡೆದು ರಾಜ್ಯಾದ್ಯಂತ ಇಂಡಿಯಾ ಒಕ್ಕೂಟದ ಪರವಾಗಿ ದಲಿತ ಮತಗಳ ಕ್ರೋಢೀಕರಣಕ್ಕೆ ದೊಡ್ಡ ಪಾತ್ರವನ್ನೇ ನಿರ್ವಹಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಚಂದ್ರಶೇಖರ್ ಆಜಾದ್ ಯಾವ ರೀತಿ ಇಂಪ್ಯಾಕ್ಟ್ ಮಾಡಿದರೋ ಅದೇರೀತಿ ತಮಿಳುನಾಡಿನ ರಾಜಕಾರಣವನ್ನ ಪ್ರಭಾವಿಸಿರುವ ಈ ಜೋಡಿ ಸ್ಪಷ್ಟವಾದ ಅಂಬೇಡ್ಕರೈಟ್ ದೃಷ್ಟಿಕೋನದ ರಾಜಕಾರಣಕ್ಕೆ ಸ್ಪಷ್ಟ ತಳಹದಿಯನ್ನು ನಿರ್ಮಿಸಿಕೊಂಡಿದೆ. ವಿಶೇಷವೆಂದರೇ ಈ ಜೋಡಿಯ ವಿಸಿಕೆ ಪಕ್ಷವು ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ನಾಲ್ಕನ್ನು ಗೆದ್ದುಕೊಂಡಿತ್ತು. ನಾಲ್ಕರಲ್ಲಿ ಎರಡು ಸಾಮಾನ್ಯ ಕ್ಷೇತ್ರಗಳಾಗಿದ್ದವು.

ದಲಿತ್ ಐಡೆಂಟಿಟಿ ರಾಜಕಾರಣದ ಜೊತೆಜೊತೆಗೆ ಬಹುಜನರನ್ನು ಒಳಗೊಳ್ಳುವ ಇನ್‌ಕ್ಲೂಸಿವ್ ಪಾಲಿಟಿಕ್ಸ್‌ನೆಡೆಗೆ ವಿಸಿಕೆ ಪಕ್ಷ ಹೊರಳಿಕೊಂಡಿದೆಯೆಂಬುದು ಈಗಾಗಲೇ ಸಾಬೀತಾಗಿದೆ.

ಸ್ವತಃ ಪ್ರಧಾನಿಯೇ ನೇರವಾಗಿ ಬಿಟ್ಟಿದ್ದ ಒಳಮೀಸಲಾತಿ ಹುಸಿ ಬಾಣವನ್ನು ತಿರುಗುಬಾಣವಾಗಿಸಿದ ತೆಲಂಗಾಣದ ದಲಿತರು

ಒಳಮೀಸಲಾತಿ ಸಂಘರ್ಷ ಭುಗಿಲೆದ್ದು ಮೂರು ದಶಕಗಳಾಗುತ್ತಿದೆ. ಒಳಮೀಸಲಾತಿಯ ಕಾರಣಕ್ಕೆ ಮಾದಿಗ-ಮಾಲಾ ಜಾತಿಗಳ ನಡುವಿನ ರಾಜಕೀಯ ಸೌಹಾರ್ದತೆಯು ತೀರಾ ಹಾಳಾಗುತ್ತ ಬಂದಿದೆ. ಈ ಇಬ್ಬರ ನಡುವಿನ ಒಡಕನ್ನ ಕಾಂಗ್ರೆಸ್-ಬಿಆರ್‌ಎಸ್-ಬಿಜೆಪಿ ಕಾಲಕಾಲಕ್ಕೆ ತಮಗೆ ಬೇಕಾದಂತೆ ಬಳಸಿಕೊಂಡಿವೆ.

ಲೋಕಸಭಾ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವಾಗ್ಗೆ ಮಾದಿಗ ದಂಡೋರ ನಾಯಕ ಮಂದಕೃಷ್ಣ ಮಾದಿಗರ ನೇತೃತ್ವದಲ್ಲಿ ಒಳಮೀಸಲಾತಿಗೆ ಆಗ್ರಹಿಸಲು ಆಯೋಜಿಸಿದ್ದ ಬೃಹತ್ ರ್‍ಯಾಲಿಗೆ ಸ್ವತಃ ಪ್ರಧಾನಿಯೇ ಬಂದದ್ದು ರಾಜ್ಯದ ದಲಿತರಲ್ಲಿ ಶೇಕಡ ಅರ್ಧದಷ್ಟಿರುವ ಮಾದಿಗ ಮತದಾರರಲ್ಲಿ ರೋಮಾಂಚನ ಮೂಡಿಸಿತ್ತು. ಆದರೆ ರ್‍ಯಾಲಿಗೆ ಬಂದ ಪ್ರಧಾನಿ ಆರ್ಟಿಕಲ್ 341 ತಿದ್ದುಪಡಿಯ ಬಗ್ಗೆ ಸೊಲ್ಲೆತ್ತದೆ, ಒಳಮೀಸಲಾತಿಗೆ ತಾರ್ಕಿಕ ಪರಿಹಾರದ ಭರವಸೆ ನೀಡದೇ ಒಂದು ಕಮೀಷನ್ ನೇಮಕ ಮಾಡುವ ಭರವಸೆ ನೀಡಿ ಮಾದಿಗರ ಮೂಗಿಗೆ ತುಪ್ಪ ಸವರಿ ಹೋಗಿದ್ದು ಸಹಜವಾಗಿ ಮಾದಿಗರನ್ನು ಕೆರಳಿಸಿತ್ತು.

ಚುನಾವಣೆಗೆ ಮುನ್ನ ಸುಪ್ರೀಂಕೋರ್ಟಿನಲ್ಲಿ ನಡೆದ ಮೂರು ದಿನಗಳ ಮ್ಯಾರಾಥಾನ್ ವಿಚಾರ-ವಿನಿಮಯಗಳ ನಂತರವೂ ಒಳಮೀಸಲಾತಿ ನೀಡುವ ಅಧಿಕಾರವು ರಾಜ್ಯಗಳಿಗೆ ದತ್ತವಾಗುತ್ತದೆಯೇ ಇಲ್ಲವೇ ಎಂಬ ವರ್ಡಿಕ್ಟ್‌ಅನ್ನು ಕಾಯ್ದಿರಿಸಲಾಗಿತ್ತು.

ಈ ಎಲ್ಲ ಬೆಳವಣಿಗೆಗಳಿಂದ ಹೋರಾಟಗಾರರು ಅಲ್ಪಸ್ವಲ್ಪ ಖುಷಿಯಾಗಿದ್ದು ಬಿಟ್ಟರೇ ಸಮುದಾಯವನ್ನು ಮಾತ್ರ ಸಂಪೂರ್ಣ ನಿರಾಶೆಯ ಕೂಪಕ್ಕೆ ತಳ್ಳಿದಂತಾಗಿತ್ತು. ಈ ನಡುವೆ ಗಾಯದ ಮೇಲೆ ಬರೆ ಎಳೆಯುವಂತೆ ತೆಲಂಗಾಣದ ಕಾಂಗ್ರೆಸ್ ಘಟಕ ಮೂರೂ ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿಯೂ ಮಾದಿಗರಿಗೆ ಟಿಕೆಟ್ ನೀಡದೆ ತಾರತಮ್ಯ ಎಸಗಿತ್ತು.

ಮಂದಕೃಷ್ಣ ಮಾದಿಗರ

ಈ ಎಲ್ಲ ನಿರಾಶೆಗಳ ಕಾರ್ಮೋಡದ ನಡುವೆಯೂ ಚಾರ್ ಸೌ ಪಾರ್ ಎಫೆಕ್ಟ್‌ನ ಬಿಸಿ ತೆಲಂಗಾಣದ ದಲಿತ ಮತದಾರರಲ್ಲೂ ಅವ್ಯಕ್ತ ಭಯ ಮೂಡಿಸಿತ್ತು. ಮೊದಲು ಸಂವಿಧಾನ ಉಳಿಸಿಕೊಡಲು ಮೇಲಷ್ಟೇ ಮೀಸಲಾತಿ-ಒಳಮೀಸಲಾತಿ ಕೇಳಲು-ಪಡೆಯಲು ಸಾಧ್ಯ ಎಂದರಿತ ಮಾದಿಗ-ಮಾಲಾ ಸಮುದಾಯಗಳು ಒಗ್ಗೂಡಿ ಕಾಂಗ್ರೆಸ್‌ಗೆ ಮತ ಹಾಕಿದ್ದರಿಂದ ಮೂರೂ ಎಸ್‌ಸಿ ಮೀಸಲು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತು.

ಆದರೆ ಎರಡು ಎಸ್‌ಟಿ ಕ್ಷೇತ್ರಗಳಲ್ಲಿ ಒಂದನ್ನ ಬಿಜೆಪಿಗೆ ಬಿಟ್ಟುಕೊಟ್ಟು ಮತ್ತೊಂದನ್ನ ಕೈವಶ ಮಾಡಿಕೊಂಡಿದೆ. ಇಷ್ಟಾದರೂ ಬಿಜೆಪಿಯ ಮತಗಳಿಕೆ ಪ್ರಮಾಣ ಹೆಚ್ಚಿರುವುದು 16ರಲ್ಲಿ 8 ಲೋಕಸಭಾ ಕ್ಷೇತ್ರಗಳು ಆ ಪಕ್ಷದ ಪಾಲಾಗಿರುವುದು ಕಾಂಗ್ರೆಸ್‌ಗೆ ಮತ್ತಷ್ಟು ಆತ್ಮಾವಲೋಕನ ಮಾಡಿಕೊಳ್ಳಲು ದಲಿತರು ನೀಡಿದ ಸೂಚನೆಯಾಗಿದೆ.

ಬಿಆರ್‌ಎಸ್ ಕಾಂಗ್ರೆಸ್‌ನ ನೆಲೆಯನ್ನು ಬಿಜೆಪಿ ಕಬಳಿಸಿದೆ ಎಂದು ಸುಮ್ಮನಿರುವಂತಿಲ್ಲ, ಒಳಮೀಸಲಾತಿ, ಜಾತಿಗಣತಿಯ ಪರವಾಗಿ ಸ್ಪಷ್ಟವಾದ ನಿಲುವ ತಳೆಯುವ ಹೊಣೆಗಾರಿಕೆ ಈಗ ತೆಲಂಗಾಣ ಕಾಂಗ್ರೆಸ್ ಹೆಗಲೇರಿದೆ.

ಈ ನಡುವೆ ಕರ್ನಾಟಕ ಕಾಂಗ್ರೆಸ್‌ನಲ್ಲಾದಂತೆಯೇ ಮುಖ್ಯಮಂತ್ರಿ ರೇವಂತ್ ರೆಡ್ಡಿ ತನ್ನ ಜಾತಿ ಹಿತಾಸಕ್ತಿ ಕಾಯಲು ಹೋಗಿ ಎಡವಟ್ಟು ಮಾಡಿಕೊಂಡು ಗೆಲ್ಲಬಹುದಾಗಿದ್ದ ಎರಡು ಮೂರು ಕ್ಷೇತ್ರಗಳನ್ನು ಬಿಜೆಪಿಗೆ ಸಲೀಸಾಗಿ ಬಿಟ್ಟುಕೊಟ್ಟಿದ್ದಾರೆಂಬುದು ಈಗ ಗುಟ್ಟಾಗಿ ಉಳಿದಿಲ್ಲ.

ದೇಶಾದ್ಯಂತ ಸಂಚಲನ ಮೂಡಿಸಿ ಹೊಸ ಬಗೆಯ ಚರ್ಚೆ-ವಿವಾದ-ಹೋರಾಟಗಳಿಗೆ ಜನ್ಮ ನೀಡಿದ್ದ ಹೈದರಾಬಾದ್ ವಿವಿಯ ಸಂಶೋಧನಾ ವಿದ್ಯಾರ್ಥಿಯ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯಿದೆಯ ಕೇಸನ್ನು ಮುಕ್ತಾಯಗೊಳಿಸಿದ ತೆಲಂಗಾಣ ಪೊಲೀಸರು ನ್ಯಾಯಾಲಯಕ್ಕೆ ಕ್ಲೋಶರ್ ರಿಪೋರ್ಟ್ ನೀಡಿದರು ಹಾಗೂ ಮುಕ್ತಾಯ ವರದಿಯಲ್ಲಿ ಹೈದರಾಬಾದ ವಿವಿಯ ಮಾಜಿ ಉಪಕುಲಪತಿ ಮತ್ತು ಬಿಜೆಪಿ ಮುಖಂಡರು, ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರಿಗೆ ಕ್ಲೀನ್‌ಚಿಟ್ ಕೊಟ್ಟು ರೋಹಿತ್ ವೇಮುಲಾ ದಲಿತನೇ ಅಲ್ಲ, ಆತ ಸತ್ತಿದ್ದು ಜಾತಿ ಕಿರುಕುಳದಿಂದ ಅಲ್ಲ, ಬದಲಾಗಿ ತಾನು ದಲಿತನಲ್ಲ ಎಂಬ ತನ್ನ ಜಾತಿಯ ಮೂಲ ಎಲ್ಲಿ ಬಹಿರಂಗಗೊಳ್ಳುತ್ತದೋ ಎಂಬ ಆತಂಕದಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಷರಾ ಬರೆದಿದ್ದರು.

ಇಡೀ ತನಿಖೆ ಬಿಎಸ್‌ಆರ್ ಪಕ್ಷ ಆಡಳಿತದಲ್ಲಿದ್ದಾಗ ನಡೆದಿದ್ದರೂ ಮುಕ್ತಾಯ ವರದಿ ಸಲ್ಲಿಕೆಯಾಗಿದ್ದು ಮಾತ್ರ ಲೋಕಸಭಾ ಚುನಾವಣೆಗೆ ಎಂಟತ್ತ ದಿನಗಳು ಬಾಕಿಯಿರುವಾಗ ಮತ್ತು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವಾಗ ಎಂಬ ಅಂಶವು ರೇವಂತ್ ರೆಡ್ಡಿ ಸರ್ಕಾರದ ಮತಬೇಟೆಯ ಅಭಿಯಾನಕ್ಕೆ ಮುಳುವಾಯಿತೆಂದೇ ವಿಶ್ಲೇಷಿಸಲಾಗುತ್ತಿದೆ.

ಕರ್ನಾಟಕದ ಕಥೆ-ವ್ಯಥೆ

2023 ಅಸೆಂಬ್ಲಿ ಚುನಾವಣೆಯಲ್ಲಿ ಭಾರಿ ಬಹುಮತ ಮತ್ತು ಸ್ಪಷ್ಟ ಜನಾದೇಶ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು; ಇಡೀ ದೇಶದಲ್ಲಿ ಕಾಂಗ್ರೆಸ್‌ಗೆ ಈ ರೀತಿಯ ಸ್ಪಷ್ಟ ಮತ್ತು ಸ್ಥಿರ ಜನಾದೇಶ ಸಿಕ್ಕಿದ್ದು ಕರ್ನಾಟಕದಲ್ಲಿ ಮಾತ್ರವೇ ಅನ್ನಬಹುದು.

ಈ ಹಿಂದಿನ ಬಿಜೆಪಿಯ ಸರ್ಕಾರದ ವಿರುದ್ಧ ಎದ್ದ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದ ಆರೋಪಗಳ ಕಾರಣಕ್ಕೆ ಹಾಗೂ ಕಾಂಗ್ರೆಸ್ ಪಕ್ಷ ನೀಡಿದ್ದ ಪಂಚ ಗ್ಯಾರಂಟಿಗಳ ಭರವಸೆಯಿಂದಾಗಿ 2023ರ ಅಸೆಂಬ್ಲಿಯಲ್ಲಿ ಹುಚ್ಚುಹುಚ್ಚು ಲೀಡ್ ಮಾರ್ಜಿನ್‌ಗಳ ಮೂಲಕ ಕಾಂಗ್ರೆಸ್ ಪಕ್ಷದ 135 ಶಾಸಕರು ಚುನಾಯಿತರಾಗಿದ್ದರು.

ಕಾಂಗ್ರೆಸ್ಸಿನ ಈ ಅಭೂತಪೂರ್ವ ಯಶಸ್ಸು ಇಡೀ ದೇಶದಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಲ್ಲಿ ಭಾರಿ ಸಂಚಲನ ಮೂಡಿಸಿ 2024ರ ಲೋಕಸಭಾ ಚುನಾವಣೆಗೆ ಹೊಸ ಹುರುಪು, ಆತ್ಮವಿಶ್ವಾಸವನ್ನು ತುಂಬಿತ್ತು. ಬಿಜೆಪಿಯನ್ನು ಕಟ್ಟಿಹಾಕುವುದು ಹೇಗೆ ಎಂದು ಚಿಂತಾಕ್ರಾಂತರಾಗಿದ್ದ ವೇಳೆಯಲ್ಲಿ ಕರ್ನಾಟಕ ಕಾಂಗ್ರೆಸ್‌ನ ಸಂಘಟಿತ ಹೋರಾಟ ಲೋಕಸಭೆಯ ಮತಬೇಟೆಯ ಅಭಿಯಾನಕ್ಕೆ ದಿಕ್ಸೂಚಿಯಾಯಿತೆಂದೇ ಎಲ್ಲರೂ ಭಾವಿಸಿದರು.

ವಿಪರ್‍ಯಾಸವೆಂದರೇ ಇಂತಹ ಭಾರಿ ಬಹುಮತದ ಕಾಂಗ್ರೆಸ್ ಸರ್ಕಾರ ತನ್ನ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಎರಡಂಕಿಯನ್ನೂ ಮುಟ್ಟದೇ ತನ್ನ ಕಾಲಕೆಳಗೇ ಕುಸಿದು ಕೂತದ್ದು ಹೇಗೆ ಎಂಬುದರ ಬಗ್ಗೆ ಈಗ ಥರಾವರಿ ವಿಶ್ಲೇಷಣೆಗಳನ್ನು ಮಾಡಲಾಗುತ್ತಿದೆ.

ಕಾಂಗ್ರೆಸ್‌ನ ಹಿನ್ನಡೆಗೆ ಕಾರಣ ಹುಡುಕುವುದಾದರೆ ಮೊದಲನೆಯದಾಗಿ ಕರ್ನಾಟಕದ ಜನ ತಮಗೆ ಮತ ನೀಡಿದ್ದು ಬಿಜೆಪಿ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯಿಂದಾಗಿ ಎಂಬ ಪ್ರಾಥಮಿಕ ಸಂಗತಿಯನ್ನು ಹೊಸ ಸರ್ಕಾರ ಮರೆತು ಒಂದು ವರ್ಷದ ಹಾದಿ ಸವೆಸಿತ್ತು. ಈ ಹಿಂದಿನ ಬಿಜೆಪಿ ಸರ್ಕಾರವು ನಿಸ್ಸೀಮ ಭ್ರಷ್ಟಾಚಾರದಲ್ಲಿ ಮುಳುಗಿ, ಕೆಟ್ಟ ಆಡಳಿತ ಮೂಲಕ ಕೋವಿಡ್ ಸಮಸ್ಯೆಯನ್ನ ನಿಭಾಯಿಸಿದ ರೀತಿಯಿಂದ ಜನ ನೊಂದಿದ್ದರು.

ಗಾಯದ ಮೇಲೆ ಬರೆ ಎಳೆಯುವಂತೆ ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿದ್ದು, ಪರಿಶಿಷ್ಟರ ಒಳಮೀಸಲಾತಿಯ ಬಗ್ಗೆ ಗೊಂದಲಕಾರಿ ವರ್ತನೆ, ಪರಿಶಿಷ್ಟ ವರ್ಗಕ್ಕೆ 7.5% ಮೀಸಲಾತಿಯ ನಿರಾಕರಣೆ, ಹಿಂದುಳಿದವರ ಮೀಸಲಾತಿಯಲ್ಲಿ ಒಬ್ಬರದನ್ನು ಕಿತ್ತು ಮತ್ತೊಬ್ಬರಿಗೆ ಕೊಟ್ಟದ್ದು, ಒಕ್ಕಲಿಗ, ಲಿಂಗಾಯತರಿಗೆ ಹೊಸ ಮೀಸಲಾತಿ ವರ್ಗವನ್ನು ಸೃಷ್ಟಿಸಿದ್ದು ಸೇರಿದಂತೆ ಮೀಸಲಾತಿ-ಒಳಮೀಸಲಾತಿ ಹಂಚಿಕೆಯ ಅಪರಾತಪರಾಗಳನ್ನು ಯಾವ ತಜ್ಞ ಸಮಿತಿಗಳ ನೆರವಿಲ್ಲದೇ ಕೇವಲ ಕ್ಯಾಬಿನೆಟ್ ಸಬ್ ಕಮಿಟಿಯ ಮೂಲಕ ಮನಬಂದಂತೆ ಮಾಡಿದ ಬಿಜೆಪಿ ಸರ್ಕಾರ ಎಲ್ಲ ಜನಸಮುದಾಯಗಳ ಕೆಂಗಣ್ಣಿಗೆ ತುತ್ತಾಗಿತ್ತು. ದಕ್ಷಿಣ ಭಾರತದ ಕೋಮುವಾದದ ಹೊಸ ಪ್ರಯೋಗಶಾಲೆಯನ್ನಾಗಿ ರೂಪಿಸಲು ಇನ್ನಿಲ್ಲದ ಆಟಗಳನ್ನು ಬಿಜೆಪಿ ಸರ್ಕಾರ ಕಟ್ಟಿತ್ತು.

ಇದರ ಜೊತೆಗೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನ ವಿಶ್ವಾಸಾರ್ಹತೆಯು ಕುಸಿದುಬಿದ್ದಿತ್ತು. ಮೇಲೆಮೇಲೆ ನಡೆದ ಆಪರೇಷನ್ ಕಮಲದಿಂದ ಸ್ಥಿರ ಸರ್ಕಾರದ ಭರವಸೆಯೇ ಇಲ್ಲವಾಗಿತ್ತು. ಇದೆಲ್ಲದರ ಪರಿಣಾಮವಾಗಿ ಪ್ರತಿ ಊರು, ಗ್ರಾಮ, ಪಟ್ಟಣ, ನಗರಗಳಲ್ಲಿ ಮನೆಗೊಬ್ಬರು ಇಬ್ಬರೆಂಬಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಹೊರಬಿದ್ದು ಚುನಾವಣೆಯಲ್ಲಿ ಕೆಲಸ ಮಾಡಿದ್ದರು.

ಮುಖ್ಯವಾಹಿನಿ ಮಾಧ್ಯಮಗಳು ಕೋಮುವಾದಿಗಳ ಜಾತಿವಾದಿಗಳ ತುತ್ತೂರಿಗಳಾಗಿಯೇ ಉಳಿದರೂ ಪರ್ಯಾಯ ಜನಪರ ಮಾಧ್ಯಮಗಳು ಹಗಲುರಾತ್ರಿ ಕಾಂಗ್ರೆಸ್‌ನ ಪರವಾಗಿ ಜನಾಭಿಪ್ರಾಯ ರೂಪಿಸಿದ್ದವು. ಸೋಷಿಯಲ್ ಮೀಡಿಯಾಗಳಲ್ಲಿ ವಾಲಂಟಿಯರ್ ವಾರಿಯರ್‌ಗಳು ಬಿಜೆಪಿ ವಿರುದ್ಧ ಕಾಂಗ್ರೆಸ್ ಪರವಾದ ಮತಾಂದೋಲನವನ್ನ ಮುನ್ನಡೆಸಿದ್ದರು. ಕೆಪಿಸಿಸಿ ಸೋಷಿಯಲ್ ಮೀಡಿಯಾ ಕೂಡ ಹೊಸ ರಿವಾಜಿನಲ್ಲಿ ಕೆಲಸ ಮಾಡಿ ನರೇಟಿವ್ ಕಟ್ಟಿತ್ತು.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಅಸೆಂಬ್ಲಿ ಚುನಾವಣೆಗೆ ಪಕ್ಷವನ್ನ ಮತ್ತಷ್ಟು ಬೂಸ್ಟ್ ಮಾಡಿತ್ತು. ಇದೆಲ್ಲದರ ಒಟ್ಟಿಗೆ ಪಂಚ ಗ್ಯಾರಂಟಿಗಳ ಭರವಸೆಯ ಕಾರ್ಡ್‌ಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ಹೋಗಿ ಹಂಚಿ, ಪಕ್ಷಕ್ಕೆ ಮತಯಾಚನೆ ಮಾಡಿದ್ದರು. ಇಷ್ಟು ಕೆಲಸಕ್ಕೆ ಫಲವೆಂಬಂತೆ ರಾಷ್ಟ್ರೀಯ ಹಾಗೂ ಸ್ಥಳೀಯ ಮುಖ್ಯವಾಹಿನಿ ಮಾಧ್ಯಮಗಳ ಸಮೀಕ್ಷೆ ಲೆಕ್ಕಾಚಾರಗಳನ್ನ ತಲೆಕಳಗಾಗಿಸಿದ ಕರ್ನಾಟಕದ ಜನ ಸುಭದ್ರ ಸರ್ಕಾರವನ್ನ ಅಸ್ತಿತ್ವಕ್ಕೆ ತಂದು ಇಡೀ ದೇಶಕ್ಕೆ ಹೊಸ ಸಂದೇಶವನ್ನು ರವಾನಿಸಿದ್ದರು.

ವಿಪರ್ಯಾಸವೆಂದರೇ ಒಂದೇ ವರ್ಷದ ಅಂತರದಲ್ಲಿ ಜನರ-ಕಾರ್ಯಕರ್ತರ ಈ ಎಲ್ಲ ಹುರುಪು-ಚಟುವಟಿಕೆಗಳು ಸ್ಥಗಿತಗೊಂಡ ಸ್ಥಿತಿಯಲ್ಲಿ 2024 ಪಾರ್ಲಿಮೆಂಟ್ ಚುನಾವಣೆಯನ್ನ ಕಾಂಗ್ರೆಸ್ ಎದುರಿಸಿತು. ಗೆಲ್ಲಬಹುದಾಗಿದ್ದ ಕ್ಷೇತ್ರಗಳನ್ನ ಸಣ್ಣ ಅಂತರಗಳಲ್ಲಿ ಕಳೆದುಕೊಂಡಿತು. ಸೆಣಸಬೇಕಾಗಿದ್ದ ಅಖಾಡಗಳಲ್ಲಿ ಸಂಪೂರ್ಣ ಕೈಚೆಲ್ಲಿ ಕುಳಿತಿತು.

ಲೋಕಸಭಾ ಚುನಾವಣೆಗೆ ಮುನ್ನ ಕರ್ನಾಟಕ ಕಾಂಗ್ರೆಸ್‌ನ ಸಿಎಂ-ಡಿಸಿಎಂಗಳೇ ಕಾಂಗ್ರೆಸ್‌ನ ಹೈಕಮಾಂಡ್‌ಗಳೇನೋ ಎಂಬಷ್ಟರಮಟ್ಟಿಗೆ ಚಟುವಟಿಕೆಗಳು ಕಂಡು ಬರುತ್ತಿದ್ದವು. ಸಿಎಂ ಸಿದ್ಧರಾಮಯ್ಯ-ಡಿಸಿಎಂ ಡಿ.ಕೆ.ಶಿವಕುಮಾರ್‌ರ ಎಲ್ಲ ಮಾತು, ನಿಲುವು ಮತ್ತು ಟಿಕೆಟ್ ನೀಡಿಕೆ ತೀರ್ಮಾನಗಳಿಗೆ ಹೈಕಮಾಂಡ್ ದೂಸರಾ ಮಾತಿಲ್ಲದೇ ಮಣೆ ಹಾಕಿತು. ಆದರೂ ಚುನಾವಣೆಯನ್ನು ಕೈಚೆಲ್ಲಿದ್ದು ಯಾಕೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.

ಗ್ಯಾರಂಟಿಗಳನ್ನು ಕೊಟ್ಟು ಪಕ್ಷ ಮತ್ತು ಮತದಾರರ ನಡುವೆ ನೇರ ಸಂಪರ್ಕ ಸಾಧಿಸಿಯಾಗಿದೆ; ಚುನಾವಣೆಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ಪಾತ್ರ ಇನ್ನು ನಗಣ್ಯ ಎಂದು ಭಾವಿಸಿದ ಕರ್ನಾಟಕ ಕಾಂಗ್ರೆಸ್ ತನ್ನದೇ ಪಕ್ಷದ ಕಾರ್ಯಕರ್ತರು-ಮುಖಂಡರು-ಮತದಾರರನ್ನ ನಡುವಿನ ಸಂಪರ್ಕ ಕೊಂಡಿಯನ್ನ ಸ್ವತಹ ಬ್ರೇಕ್ ಮಾಡಿಕೊಂಡದ್ದು ಮಾತ್ರ ಸುಳ್ಳಲ್ಲ. ಇಲ್ಲದಿದ್ದರೆ ಒಂದು ವರ್ಷದ ಹಿಂದೆ 135+1 ಅಸೆಂಬ್ಲಿ ಕ್ಷೇತ್ರಗಳನ್ನ ದೊಡ್ಡ ಅಂತರದಲ್ಲಿ ಗೆದ್ದು ಇನ್ನೂ ಇಪ್ಪತ್ತು ಮೂವತ್ತ ಕ್ಷೇತ್ರಗಳನ್ನ ಸಣ್ಣ ಅಂತರದಲ್ಲಿ ಸೋತಿದ್ದ ಪಕ್ಷ ಏಕಾಏಕಿ 142 ಅಸೆಂಬ್ಲಿ ಕ್ಷೇತ್ರಗಳಲ್ಲಿ ಹಿನ್ನಡೆಯನ್ನ ಅನುಭವಿಸುತ್ತದೆಯೆಂದರೇ ಈ ಸೋಲಿಗೆ ಕೇವಲ ಬಿಜೆಪಿ-ಜೆಡಿಎಸ್‌ಗಳ ಮೈತ್ರಿ ಕಾರಣವೆಂದು ಹೇಳಿ ಪಲಾಯನವಾದ ಹೂಡಲಾಗುವುದಿಲ್ಲ.

ಬಡವರು, ಶೋಷಿತರಷ್ಟೇ ಸಮನಾಗಿ ಉಳ್ಳವರಿಗೂ ಗ್ಯಾರಂಟಿಗಳನ್ನ ಧಾರಾಳವಾಗಿ ಧಾರೆಯೆರೆದು ಉಳಿದೆಲ್ಲ ಸಂಗತಿಗಳನ್ನ ನಿರ್ಲಕ್ಷಿಸಿ ಚುನಾವಣೆಗೆ ಹೋದ ಪರಿಣಾಮ ಈ ಸೋಲು ಎಂಬುದನ್ನ ಕರ್ನಾಟಕ ಕಾಂಗ್ರೆಸ್ ಇನ್ನೂ ಆತ್ಮಾವಲೋಕನ ಮಾಡಿಕೊಂಡಂತೆ ಕಾಣುತ್ತಿಲ್ಲ.

ದೇಶಾದ್ಯಂತ ಸಂವಿಧಾನ, ಜಾತಿಗಣತಿ, ಕೋಮುವಾದಿ ವಿರೋಧದ ವಿರೋಧ ಪಕ್ಷಗಳು ಚುನಾವಣೆಗಳನ್ನು ನಡೆಸಿದರೆ, ಈ ಯಾವುದೇ ಮಹತ್ವದ ಅಂಶಗಳನ್ನು ಜನಮಾನಸದಲ್ಲಿಟ್ಟು ಮತ ಕೇಳುವ ಕೆಲಸವನ್ನು ಕಾಂಗ್ರೆಸ್ ಇಲ್ಲಿ ಮಾಡಲಿಲ್ಲ. ಅದು ಬಿಟ್ಟು ಕೇವಲ ಗ್ಯಾರಂಟಿಗಳೇ ನಮಗೆ ಮತ ತಂದು ಕೊಡುತ್ತವೆಯೆಂದು ಭಾವಿಸಿದ್ದು ಕಾಂಗ್ರೆಸ್‌ಗೆ ಮುಳುವಾಯಿತು.

ಅಹಿಂದ ಫ್ಯಾಕ್ಟರ್ ಮೂಲಕವೇ ಅಸ್ತಿತ್ವ ಕಂಡುಕೊಂಡಿದ್ದ ಈ ಸರ್ಕಾರ ಅಹಿಂದದವರನ್ನು ಬಿಟ್ಟು ಫ್ಯೂಡಲ್‌ಗಳ ಓಲೈಕೆಗೆ ನಿಂತದ್ದೂ ಪಕ್ಷಕ್ಕೆ ಎರವಾದ ಮತ್ತೊಂದು ಪ್ರಮುಖ ಅಂಶ.

ಸಿಎಂ-ಡಿಸಿಎಂ ಇಬ್ಬರೂ ಹಳೇ ಮೈಸೂರಿನ ತಮ್ಮತಮ್ಮ ಟೆರಿಟರಿಯನ್ನ ಭದ್ರ ಮಾಡಿಕೊಂಡು ಲೋಕಸಭಾ ಚುನಾವಣೋತ್ತರದಲ್ಲಿ ಸಿಎಂ ಗಾದಿಯನ್ನ ಮತ್ತೆ ಕ್ಲೇಮ್ ಮಾಡುವುದರತ್ತ ಹೆಚ್ಚು ಗಮನ ಹರಿಸಿದ ಪರಿಣಾಮ ಹಳೇ ಮೈಸೂರಿನ ಜೊತೆಜೊತೆಗೆ ಮಧ್ಯ ಕರ್ನಾಟಕದಲ್ಲಿ ಗೆಲ್ಲುವ ಎಲ್ಲ ನಿಚ್ಚಳ ಸಾಧ್ಯತೆಯಿದ್ದ ಕ್ಷೇತ್ರಗಳೂ ಸಹ ಸಲೀಸಾಗಿ ಬಿಜೆಪಿ ಪಾಲಾಗಲು ಕಾರಣವಾಯ್ತು.

ಜಾತಿಗಣತಿಯ ವರದಿಯ ವಿರುದ್ಧ ಸ್ವತಹ ಡಿಸಿಎಂ ಆದಿಯಾಗಿ ಒಕ್ಕಲಿಗ-ಲಿಂಗಾಯತ ಹಿರಿಯ ನಾಯಕರೆಲ್ಲ ಹೂಂಕರಿಸಿದ್ದರು. ಇಡೀ ದೇಶದಲ್ಲಿ ರಾಹುಲ್ ಬೆನ್ನಿಗೆ ನಿಂತು ಜಾತಿಗಣತಿಯನ್ನು ಬೆಂಬಲಿಸಿ, ಬಹುಸಂಖ್ಯಾತ ಶೋಷಿತರ, ಹಿಂದುಳಿದ, ಅಲ್ಪಸಂಖ್ಯಾತರ ಪರವಾದ ರಾಜಕಾರಣದ ನರೇಟಿವ್ ಕಟ್ಟುತ್ತಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಸಂಸತ್ತಿನಲ್ಲಿ ಸ್ವತಹ ತನ್ನ ಪಕ್ಷದ ರಾಜ್ಯವೊಂದರ ಡಿಸಿಎಂ ವಿರುದ್ಧ ಗುಡುಗಿ ಜಾತಿಗಣತಿಯ ವಿರುದ್ಧ ದೇಶದ ಬಲಿಷ್ಠರೆಲ್ಲ ಒಂದಾಗಿದ್ದಾರೆಂದು ಹೇಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಲೋಕಸಭಾ ಚುನಾವಣೆಗೆ ಮುಂಚೆ ವರದಿ ಮಂಡಿಸುವುದಿರಲಿ, ಸ್ವೀಕರಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತನ್ನದೇ ಪಕ್ಷದ ಬಲಿಷ್ಠರು ಅನ್ಯಪಕ್ಷದವರ ಜೊತೆ ಸೇರಿ ಬಹಿರಂಗವಾಗಿ ಬ್ಲಾಕ್‌ಮೇಲ್ ಮಾಡುತ್ತ ಕಟ್ಟಿಹಾಕಿದ್ದರು.

ಇತ್ತ ಮುಸ್ಲಿಮರು, ಪರಿಶಿಷ್ಟ ಜಾತಿ-ವರ್ಗಗಳು, ಹಿಂದುಳಿದವರು ಕಾಂಗ್ರೆಸ್‌ನ ಗಲ್ಲಾಪೆಟ್ಟಿಗೆ ತುಂಬಿಸಿ ಅಧಿಕಾರಕ್ಕೆ ತಂದು ಕೂರಿಸಿದರೆ, ಸರ್ಕಾರದ ಎಲ್ಲ ಇಲಾಖೆ, ಕಾರ್ಯಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮತ ನೀಡದೇ ಇದ್ದ ಮುಂದುವರಿದ ಸಮುದಾಯಗಳ ಪ್ರತಿನಿಧಿಗಳು ಬಂದುಕೂತು, ಅವರ ಆಟಾಟೋಪಗಳನ್ನ ನೋಡುತ್ತಾ ಕೂರುವ ಪರಿಸ್ಥಿತಿ ಉದ್ಬವವಾಗಿದ್ದೂ ಕೂಡ ಕಾಂಗ್ರೆಸ್ ಹಿನ್ನಡೆಗೆ ಪ್ರಮುಖ ಕಾರಣ.

ನಿಗಮ ಮಂಡಳಿಗಳ ನೇಮಕಾತಿ ವಿಚಾರದಲ್ಲೂ ಸಿಎಂ-ಡಿಸಿಎಂ ಇಬ್ಬರೇ ಏಕಪಕ್ಷೀಯ ತೀರ್ಮಾನಗಳನ್ನ ಕೈಗೊಂಡಿದ್ದರ ಜೊತೆಗೆ ಬಹುತೇಕ ವಿಚಾರಗಳಲ್ಲಿ ಸರ್ಕಾರದ ಉಳಿದ ವಿವಿಧ ಜಾತಿಯ ಮಂತ್ರಿಗಳ ಮಾತುಗಳು ಅಷ್ಟಾಗಿ ನಡೆಯದ ಕಾರಣಕ್ಕೆ ಅವರೆಲ್ಲ ಪಾರ್ಲಿಮೆಂಟ್ ಚುನಾವಣೆಗಳಲ್ಲಿ ಕಾಟಾಚಾರಕ್ಕೆ ಕೆಲಸ ಮಾಡಿದರೆಂಬುದು ಈಗ ಗೊತ್ತಾಗುತ್ತಿರುವ ಸಂಗತಿಯಾಗಿದೆ.

ಬಹುತೇಕ ಟಿಕೆಟ್‌ಗಳು ಮಂತ್ರಿಗಳ ಕುಟುಂಬದ ಪಾಲಾಗಿದ್ದು, ಶಿವಮೊಗ್ಗ, ಹಾವೇರಿ ಮೊದಲಾದ ಕಡೆ ಫ್ರೆಂಡ್ಲಿ ಮ್ಯಾಚಾಡಲು ದುರ್ಬಲ ಅಭ್ಯರ್ಥಿಗಳನ್ನು ಹಾಕಲಾಗಿದೆಯೆಂಬ ಒಳ ಆರೋಪಗಳೂ ಕೂಡ ಈಗ ಚುನಾವಣೆಯ ನಂತರ ಬಹಿರಂಗವಾಗಿ ಸದ್ದು ಮಾಡುತ್ತಿವೆ.

ದೇಶದ ಯಶಸ್ವಿ ಅಹಿಂದ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಹೊತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಮಾಡಿದ ಪ್ರಯೋಗಗಳಲ್ಲಿ ಅರ್ಧದಷ್ಟನ್ನಾದರೂ ಮಾಡಿ ಸರ್ಕಾರದ ಪಾಲುದಾರಿಕೆ ಹಾಗೂ ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಅಹಿಂದ ವರ್ಗಕ್ಕೆ ಹೆಚ್ಚು ಮಣೆ ಹಾಕಿದ್ದರೇ ಚಿತ್ರಣವೇ ಬದಲಾಗುವ ಸಾಧ್ಯತೆಯಿತ್ತು. ಆದರೆ ಗ್ಯಾರಂಟಿಗಳನ್ನ ಪಡೆದಿರುವ ಫ್ಯೂಡಲ್ ಸಮುದಾಯಗಳ ಜನರೂ ಕೈಹಿಡಿಯುತ್ತಾರೆಂಬ ಹುಂಬ ಭರವಸೆ, ಅಹಿಂದ ವರ್ಗ ಕಾಂಗ್ರೆಸ್‌ಅನ್ನು ಬಿಟ್ಟು ಇನ್ನೆಲ್ಲಿ ಹೋಗಬಲ್ಲದು ಎಂಬ ಅತಿ ಆತ್ಮವಿಶ್ವಾಸ, ಹಿಂದುಳಿದ ವರ್ಗಗಳಲ್ಲಿ ಅತೀ ಹಿಂದುಳಿದ ಸಮುದಾಯಗಳಲ್ಲಿ ಎದ್ದ ಪ್ರಾತಿನಿಧ್ಯ-ಪಾಲುದಾರಿಕೆ ಸಿಗದ ಅಸಮಾಧಾನದ ಬೆಂಕಿಯನ್ನು ಆರಿಸದೇ ನಿರ್ಲಕ್ಷಿಸಿದ್ದೂ ಸೇರಿದಂತೆ ಅನೇಕ ಅಂಶಗಳು ಕಾಂಗ್ರೆಸ್‌ನ ಮತಗಳು ಮೈತ್ರಿಗೆ ಕ್ರಾಸ್ ಆಗಲು ಕಾರಣವಾದವು.

ಬಿಜೆಪಿ-ಜೆಡಿಎಸ್ ಮೈತ್ರಿಗೆ ಲಿಂಗಾಯತ-ಒಕ್ಕಲಿಗರು ಮಾತ್ರವೇ ಅಲ್ಲ, ಹಳ್ಳಿಗಾಡಿನಹಿಂದುಳಿದವರು, ನಗರ ಪ್ರದೇಶಗಳ ಮೈಕ್ರೋ ಒಬಿಸಿಗಳೂ ಸಾಥ್ ನೀಡಿದ್ದಾರೆ ಎಂಬ ಸಂಗತಿ ಈ ಚುನಾವಣೆಯಲ್ಲಿ ಬಟಾಬಯಲಾಗಿದೆ.

ಪರಿಶಿಷ್ಟ ಜಾತಿಗಳು ಅದರಲ್ಲೂ ಈ ಚುನಾವಣೆ ಸಂವಿಧಾನದ ಅಳಿವು ಉಳಿವಿನ ಪ್ರಶ್ನೆಯನ್ನಾಗಿಸಿಕೊಂಡವರು, ಮುಸ್ಲಿಂ ಮತದಾರರು, ಹಿಂದುಳಿದವರಲ್ಲಿ ಕುರುಬ ಸಮುದಾಯದವರು, ಗ್ಯಾರಂಟಿ ಯೋಜನೆಗಳನ್ನು ’ಋಣ’ವೆಂದು ಬಗೆದು ಆ ಪ್ರಜ್ಞೆಯನ್ನು ಮೈಗೂಡಿಸಿಕೊಂಡ ಬಡಕುಟುಂಬಗಳ ಮಹಿಳೆಯರು ಕಾಂಗ್ರೆಸ್‌ಅನ್ನು ನಿರ್ಣಾಯಕವಾಗಿ ಕೈಹಿಡಿಯದೇ ಹೋಗಿದ್ದರೇ 2019 ಫಲಿತಾಂಶ ಮರುಕಳಿಸಿ ರಾಜ್ಯ ಕಾಂಗ್ರೆಸ್ ನಾಯಕರು ಮುಖ ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಉದ್ಭವವಾಗುತ್ತಿತ್ತು.

ಈ ಚುನಾವಣೆಯ ಬಹುದೊಡ್ಡ ವಿಪರ್ಯಾಸವೆಂದರೇ ಹಳೇ ಮೈಸೂರನ್ನು ಪ್ರತಿನಿಧಿಸಿ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ಸಿಎಂ-ಡಿಸಿಎಂಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆಲ್ಲಿಸಿಕೊಟ್ಟರೆ- ಹೈದ್ರಾಬಾದ್-ಕಲ್ಯಾಣ ಕರ್ನಾಟಕದ ಎಲ್ಲ ಅಹಿಂದ ಮತದಾರರು, ಬಡವರು, ಮಹಿಳೆಯರು ಸ್ವಯಂಪ್ರೇರಿತರಾಗಿ ಕಾಂಗ್ರೆಸ್‌ಅನ್ನ ಗೆಲ್ಲಿಸಿ ಪಕ್ಷದ ಮರ್ಯಾದೆ ಉಳಿಸಿದ್ದಲ್ಲದೇ ಎಐಸಿಸಿ ಅಧ್ಯಕ್ಷ ಖರ್ಗೆಯವರ ಚರಿಷ್ಮಾವನ್ನ ತಕ್ಕಮಟ್ಟಿಗೆ ಹೊಳೆಯುವಂತೆ ಮಾಡಿದರು.

ಐದು ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ಚಿತ್ರದುರ್ಗ-ಬಿಜಾಪುರ-ಕೋಲಾರವನ್ನ ಸ್ವತಹ ಕಾಂಗ್ರೆಸ್ಸಿಗರೇ ಬಿಜೆಪಿ-ಜೆಡಿಎಸ್ ಮೈತ್ರಿಗೆ ಕಡಿಮೆ ಅಂತರದಲ್ಲಿ ಬಿಟ್ಟುಕೊಟ್ಟರು.

ಈ ಎಲ್ಲಾ ಕ್ಷೇತ್ರಗಳಲ್ಲಿ ದಲಿತರು-ಮುಸ್ಲಿಮರು-ಕುರುಬರು ಒಗ್ಗೂಡಿದರೇ?

ಅತೀ ಹಿಂದುಳಿದವರು ಲಿಂಗಾಯತ-ಒಕ್ಕಲಿಗರ ಜೊತೆ ಹೋದದ್ದರಿಂದ ಕಡೇ ಗಳಿಗೆಯಲ್ಲಿ ಕಾಂಗ್ರೆಸ್ ಸ್ಥಾನಗಳನ್ನ ಕಳೆದುಕೊಂಡಿತು. ಚಿತ್ರದುರ್ಗದಂತಹ ಕ್ಷೇತ್ರದಲ್ಲಿ ಪ್ರತಿ ಬೂತ್‌ನಲ್ಲಿ ಐದರಿಂದ ಹತ್ತು ಹೆಚ್ಚುವರಿ ಮತಗಳನ್ನ ಹಾಕಿಸುವ ಪ್ರಯತ್ನವನ್ನ ಕಾಂಗ್ರೆಸ್‌ನ ಶಾಸಕರು, ಮಂತ್ರಿಗಳು ಮಾಡಿದ್ದರೇ ಕೆಲಸ ಮುಗಿದುಹೋಗುತ್ತಿತ್ತು.

ಕೋಲಾರದಲ್ಲಿ ಒಳಜಗಳದ ಕಾರಣಕ್ಕೆ, ಕಾಂಗ್ರೆಸ್‌ನ ಹಿರಿಯ ತಲೆಗಳೇ ಕೋಲಾರ ಮೀಸಲು ಕ್ಷೇತ್ರದ ಜೊತೆಗೆ ಚಿಕ್ಕಬಳ್ಳಾಪುರ ಕ್ಷೇತ್ರವನ್ನೂ ಬಿಜೆಪಿ-ಜೆಡಿಎಸ್ ಮೈತ್ರಿಗೆ ಉಡುಗೊರೆಯ ರೂಪದಲ್ಲಿ ಬಿಟ್ಟುಕೊಟ್ಟಂತಾಯಿತು.

ಒಟ್ಟಾರೆಯಾಗಿ, ಅಹಿಂದ ಮುಖ್ಯಮಂತ್ರಿಗಳು ಅಹಿಂದ ವರ್ಗವನ್ನು ಮರೆತದ್ದರಿಂದ, ಒಕ್ಕಲಿಗ ಡಿಸಿಎಂ ತನ್ನ ಸಮುದಾಯವನ್ನಷ್ಟೇ ತಲೆಗೆ ತುಂಬಿಕೊಂಡದ್ದರಿಂದ ಕಾಂಗ್ರೆಸ್‌ನ ಎಐಸಿಸಿ ನಾಯಕರ ಶ್ರಮ, ಬದ್ಧತೆ, ಹೋರಾಟದ ಕೆಚ್ಚನ್ನು ಸ್ಥಳೀಯ ನಾಯಕರು ಕಳೆದುಕೊಂಡದ್ದರಿಂದ ತನಗೆ ಮತ ನೀಡುವ ಸಮುದಾಯಗಳ ಮೀಸಲು ಪ್ರಾತಿನಿಧ್ಯ ಹಾಗೂ ಸಂವಿಧಾನದ ಮೂಲಪಾಠಗಳ ಬಗ್ಗೆ ಪಕ್ಷದೊಳಗೆ ಸಣ್ಣ ಚರ್ಚೆ, ಸಂವಾದಗಳೂ ನಡೆಯದೇ ಕಾರ್ಯಕರ್ತರನ್ನು ಎಜುಕೇಟ್ ಮಾಡದೇ ಹೋದದ್ದರಿಂದ ಇಡೀ ದೇಶದಲ್ಲಿದ್ದ ಬಿಜೆಪಿ ವಿರೋಧಿ ಅಲೆಯ ನಡುವೆಯೂ ಕರ್ನಾಟಕದ ಕಾಂಗ್ರೆಸ್ ತಾನು ನಿಂತ ಜಾಗದಲ್ಲಿ ಕುಸಿತ ಕಾಣಲು ಕಾರಣವಾಗಿವೆಯೆಂದಷ್ಟೇ ಹೇಳಬಹುದಾಗಿದೆ.

ಸಂತೋಷ್ ಕೋಡಿಹಳ್ಳಿ

ಸಂತೋಷ್ ಕೋಡಿಹಳ್ಳಿ
ಚಿತ್ರದುರ್ಗದ ಕೋಡಿಹಳ್ಳಿಯವರಾದ ಸಂತೋಷ್ ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರು. ಪ್ರಖರ ಅಂಬೇಡ್ಕರೈಟ್ ದೃಷ್ಟಿಕೋನದಿಂದ ಆಗು-ಹೋಗುಗಳನ್ನು ವಿಶ್ಲೇಷಿಸುವ ಸಂತೋಷ್ ಜನಪರ ಚಳವಳಿಗಳು ಮತ್ತು ರಾಜಕೀಯದ ಬಗ್ಗೆ ಹಲವು ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿ ಬರೆಯುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...