Homeಮುಖಪುಟರಾಜಕೀಯ ಪಕ್ಷಗಳ ಬೆಂಬಲವಿಲ್ಲದೇ ರೈತರ ಹೋರಾಟ ಯಶಸ್ಸು ಕಂಡದ್ದು ಹೇಗೆ?

ರಾಜಕೀಯ ಪಕ್ಷಗಳ ಬೆಂಬಲವಿಲ್ಲದೇ ರೈತರ ಹೋರಾಟ ಯಶಸ್ಸು ಕಂಡದ್ದು ಹೇಗೆ?

- Advertisement -
- Advertisement -

ಆದೈತ್ಯ ರಾಕ್ಷಸನ ಇಡಿಯ ಆಕಾರ ನಮಗಿಲ್ಲೂ ಗೊತ್ತಿಲ್ಲ, ಅದಕ್ಕೀಗ ಗಾಯವಾಗಿದೆ ಎಂಬುದು ಗೊತ್ತಾಗಿದೆ ಆದರೆ ಆ ಗಾಯದ ಆಳ ಎಷ್ಟು ಎಂಬುದು ನಮಗಿನ್ನೂ ತಿಳಿದಿಲ್ಲ. ಅದನ್ನು ಭವಿಷ್ಯವೇ ಹೇಳಬಲ್ಲದು. ಭಾರತೀಯ ಬಹುಸಂಖ್ಯಾತವಾದಿ ಪ್ರಜಾಪ್ರಭುತ್ವ ಯಾವುದೇ ಅಂಕೆಯಿಲ್ಲದೆ ಅಡ್ಡಾದಿಡ್ಡಿ ದಾರಿ ಹಿಡಿದ ಪರಿಣಾಮವೇ ಈ ದೈತ್ಯನ ಸೃಷ್ಟಿ ಎಂದು ಹೇಳಲಾಗುತ್ತದೆ. ನಮ್ಮ ಸಂವಿಧಾನವನ್ನು ಕೆಲವೊಮ್ಮೆ ನ್ಯಾಯಸಮ್ಮತವಾದ ಮತ್ತೆ ಕೆಲವೊಮ್ಮೆ ಮೋಸದಿಂದ, ಸಾಂವಿಧಾನಿಕವಾದ ಹಾಗೂ ಅಸಂವಿಧಾನಾತ್ಮಕವಾದ ದಾರಿಗಳಿಂದ ತಿರುಚಿ ಹಾಳುಗೆಡವಲು ಪದೇಪದೇ ಮಾಡಿದ ಪ್ರಯತ್ನಗಳ ಸೃಷ್ಟಿ ಈ ದೈತ್ಯ ಎಂದು ಕೂಡ ಕೆಲವರು ಹೇಳುತ್ತಾರೆ. ಈ ದೈತ್ಯ ತನ್ನ ಆಕಾರವನ್ನು ಬದಲಿಸುತ್ತಲೇ ಬಂದಿದೆ. ಇದು ಸತ್ಯಕ್ಕೆ ದೂರವಾದ ಕಾನೂನಾತ್ಮಕ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಆಂತರಿಕ ಮತ್ತು ಬಾಹ್ಯ ಭಯೋತ್ಪಾದಕರ ಅಕ್ರಮ ಚಟುವಟಿಕೆಗಳಿಂದ ನಮ್ಮ ನಾಡನ್ನು ರಕ್ಷಿಸಲು ಬೇಕಾಗುವ ಕಾನೂನು-ಕಾಯಿದೆಗಳಂತೆ ಇದನ್ನು ಪ್ರಸ್ತುತಪಡಿಸಲಾಯಿತು. ಎಲ್ಲಾ ವಿರೋಧವನ್ನು, ಎಲ್ಲಾ ಭಿನ್ನಮತವನ್ನು ಹಾಗೂ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಅಗತ್ಯ ಬಿದ್ದರೆ ಬಲಪ್ರಯೋಗದಿಂದ ಅಳಿಸಿಹಾಕುವ ಅತಿಯಾದ ರಾಷ್ಟ್ರೀಯತೆಯ ಒಂದು ಬಗೆಯನ್ನು ಈ ದೈತ್ಯವು ಪ್ರಚಾರ ಮಾಡಿತು. ಅದೇ ಸಮಯದಲ್ಲಿ ಅದರ ಉಪಸ್ಥಿತಿ ದೇಶಾದ್ಯಂತ ಭಾಸವಾಯಿತು, ಅದು ಆರ್ಥಿಕ ಅಭಿವೃದ್ಧಿಯ ಹೆಸರಿನಲ್ಲಿ, ಕಪ್ಪು ಹಣವನ್ನು ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಹೆಸರಿನಲ್ಲಿ ಜನರ ಜೀವನೋಪಾಯಗಳನ್ನು ನಾಶಮಾಡುವ ಮೂಲಕ ತನ್ನ ಉಪಸ್ಥಿತಿಯನ್ನು ಪ್ರದರ್ಶಿಸಿತು. ವಾಸ್ತವ/ಸತ್ಯ ಇರಬೇಕಾದ್ದಲ್ಲಿ ಎಲೆಕ್ಟ್ರಾನಿಕ್ ಆಕೃತಿಗಳು, ಸುದ್ದಿ ಇರಬೇಕಾದ್ದಲ್ಲಿ ಜಾಹೀರಾತುಗಳು ಹಾಗೂ ನಿಜವಾದ ಸುದ್ದಿಯು ವಿಧ್ವಂಸಕವಾಗಿರುವ ಸಮಯದಲ್ಲಿ ಬಹುಪಕ್ಷೀಯ ಪ್ರಜಾಪ್ರಭುತ್ವದ ನಾಡಿನಲ್ಲಿಯೇ ಈ ದೈತ್ಯ ತನ್ನ ಕಾರ್ಯನಿರ್ವಹಿಸುತ್ತಿದೆ.

ಹಲವಾರು ತಲೆಗಳನ್ನು ಹೊಂದಿರುವ ಈ ದೈತ್ಯಕ್ಕೆ ಬಿದ್ದಿರುವ ಈ ಗಂಭೀರ ಪೆಟ್ಟು ಅಚಾನಕ್ಕಾಗಿ ಆಗಿದ್ದಲ್ಲ. ಈ ಏಟನ್ನು ನೀಡಲು ಬೇಕಿರುವ ಶಕ್ತಿಯನ್ನು ಅತಿದೊಡ್ಡ ಸಂಖ್ಯೆಯಲ್ಲಿ ದೆಹಲಿಯ ಗಡಿಗಳಲ್ಲಿ ಪ್ರತಿಭಟಿಸಲು ಸೇರಿದ ಭಾರತೀಯ ರೈತರ ಸಮೂಹ ತಮ್ಮ ದೃಢತೆಯಿಂದ ಮತ್ತು ಅಸಾಧಾರಣವಾದ ಧೈರ್ಯದಿಂದ ಪಡೆದುಕೊಂಡಿತ್ತು. ಈ ರೈತರು ದೆಹಲಿಯ ಗಡಿಗಳಲ್ಲಿ ತಾತ್ಕಾಲಿಕ ಟೆಂಟ್‌ಗಳಲ್ಲಿ, ಟ್ರ್ಯಾಕ್ಟರ್‌ಗಳಲ್ಲಿ ಮತ್ತು ಟ್ರಾಲಿಗಳಲ್ಲಿ ಇದ್ದುಕೊಂಡು, ಕೊರೆಯುವ ಚಳಿಯಿರಲಿ, ಮಳೆಯಿರಲಿ ಹಾಗೂ ಸುಡುಬಿಸಿಲಿರಲಿ, ತಮ್ಮ ದೃಢ ಸಂಕಲ್ಪವನ್ನು ತೊರೆಯಲೇ ಇಲ್ಲ.

ಆದರೆ, ಇದು ನಮ್ಮ ಕಾಲದ ಅತ್ಯಂತ ಪ್ರಮುಖ ಪ್ರಶ್ನೆಯನ್ನೂ ನಮ್ಮ ಮುಂದೆ ಅನಾವರಣಗೊಳಿಸುತ್ತದೆ. ಲಕ್ಷಾಂತರ ಜನರು ತಮ್ಮೊಳಗೆ ಹಂಚಿಕೊಳ್ಳಬಹುದಾದ ಜೀವನಾನುಭವದಿಂದ ಹುಟ್ಟಿದ ಚಳವಳಿಗಳು ರಾಜಕೀಯ ಪಕ್ಷಗಳನ್ನು ಬದಲಿಸಬಹುದೇ ಹಾಗೂ ಆ ನಿರ್ದಿಷ್ಟ ಚಳವಳಿಗೆ ಪ್ರಸ್ತುತವಾದ ತತ್ವಗಳೊಂದಿಗೆ ಜನಪರವಾಗಿರುವ, ಸಾಮರ್ಥ್ಯವುಳ್ಳ, ಜೀವಂತವಾಗಿರುವ ಮತ್ತು ತನ್ನನ್ನು ತಾನು ಬದಲಾಯಿಸಿಕೊಳ್ಳಬಹುದಾದ ಸಿದ್ಧಾಂತದ ಜೊತೆಗಿನ ರಾಜಕೀಯವನ್ನು ಹುಟ್ಟುಹಾಕಬಲ್ಲವೇ? ತಮ್ಮ ಅಸಮರ್ಥತೆಯನ್ನು ರಾಜಕೀಯ ಪಕ್ಷಗಳು ಪದೇಪದೇ ತೋರಿಸಿವೆ. ಹಣ ನಿರ್ಣಾಯಕ ಪಾತ್ರ ವಹಿಸುವ ಸ್ಪರ್ಧಾತ್ಮಕ ಚುನಾವಣಾ ರಾಜಕೀಯದ ಆಟದಲ್ಲಿ ಅವುಗಳಿವೆ; ಸಾರ್ವಜನಿಕರ ಪೂರ್ವಾಗ್ರಹದ ಅಭಿಪ್ರಾಯಗಳಿಗೆ ಮನ್ನಣೆ ಹಾಕುವುದು ಅವುಗಳಿಗೆ ಅನಿವಾರ್ಯ; ಇದ್ದದ್ದನ್ನು ಇದ್ದ ಹಾಗೆ ನಿಷ್ಠುರವಾಗಿ ಹೇಳಲು ಆಗುವುದಿಲ್ಲ ಏಕೆಂದರೆ ಪ್ರಾತಿನಿಧಿಕ ರಾಜಕಾರಣದಲ್ಲಿ ಇಮೇಜ್ ಎಂಬುದು ವಾಸ್ತವಕ್ಕಿಂತ ಮುಖ್ಯವಾಗಿದೆ, ಸಾರ್ವಜನಿಕರನ್ನು ಮರಳು ಮಾಡಿ, ಒಂದು ಸಮೂಹಸನ್ನಿ ಅಥವಾ ಭ್ರಾಂತಿಯನ್ನು ಸೃಷ್ಟಿಸುವ ಸಾಮರ್ಥ್ಯ ಅವಕ್ಕಿವೆ ಮತ್ತು ಅದರಿಂದ ಎದುರಿಗಿರುವ ಕ್ರೂರ ಸತ್ಯವನ್ನು ಕಾಣದ ಹಾಗೆ ಮಾಡುವುದೇ ಈ ಆಟದ ಗುರಿಯಾಗಿದೆ.

ಕಾರ್ಯೋನ್ಮುಖವಾಗುವುದಕ್ಕಿಂತ ಚೆನ್ನಾಗಿ ಮಾತನಾಡುವುದು ಮುಖ್ಯವಾಗಿದೆ. ವಾಸ್ತವವನ್ನು ಮರೆಮಾಚಿ ಆ ಜಾಗದಲ್ಲಿ ಇಮೇಜ್‌ಅನ್ನು ಬದಲಿಸುವುದಕ್ಕೆ ಮಾಧ್ಯಮಗಳು ಮತ್ತು ಜಾಹೀರಾತುಗಳು ನಿರ್ಣಾಯಕ ಸಾಧನಗಳಾಗಿವೆ ಹಾಗೂ ದೊಡ್ಡದೊಡ್ಡ ಕೈಗಾರಿಕೋದ್ಯಮಿಗಳ ಹಣದ ಬೆಂಬಲ ಇಲ್ಲದೇ ಈ ಆಟ ನಡೆಯುವುದಿಲ್ಲ. ಇಂಥ ಪಕ್ಷವನ್ನು ಒಗ್ಗಟ್ಟಾಗಿ ಹಿಡಿದಿಟ್ಟುಕೊಳ್ಳಲು, ಮೇಲಿನಿಂದ ಕೆಳಕ್ಕೆ ಹೇರಲಾಗುವ ಸಾಂಸ್ಥಿಕ ಶಿಸ್ತು ಬೇಕಾಗುತ್ತದೆ; ಕೇಂದ್ರೀಯ ನಾಯಕತ್ವವು ಗೆರೆ ಹಾಕುತ್ತದೆ ಹಾಗೂ ಅದನ್ನು ಹಿಂಬಾಲಕರು/ಕಾರ್ಯಕರ್ತರು ಪಾಲಿಸುತ್ತಾರೆ. ಈಗ ನಮಗೆ ತಿಳಿದಿರುವ ಹಾಗೆ ಧರ್ಮ ಮತ್ತು ಜಾತಿಯನ್ನು ಬಳಸಿಕೊಂಡು ಮತಬ್ಯಾಂಕ್‌ಗಳನ್ನು ಸೃಷ್ಟಿಸಿ, ಅದರಿಂದ ಒಂದು ರೀತಿಯ ಮೆಜಾರಿಟಿಯನ್ನು ಸೃಷ್ಟಿಸುವುದು ಈಗಿನ ಪ್ರಜಾತಾಂತ್ರಿಕ ಚುನಾವಣೆಗಳು ಮೂಲವಾಗಿದೆ. ರೈತರ ಚಳವಳಿಯು ತೋರಿಸಿದ್ದೇನೆಂದರೆ, ಈ ತಿರುಚುವಿಕೆಗಳನ್ನು ಬಹಳಷ್ಟು ಮಟ್ಟಿಗೆ ಸರಿಪಡಿಸಬಹುದು ಹಾಗೂ ಒಂದು ಚಳವಳಿಯ ಪ್ರಕ್ರಿಯೆಯಲ್ಲಿ ಅವುಗಳನ್ನು ಹಿಮ್ಮೆಟ್ಟಿಸಬಹುದು ಎಂದು.

ರೈತರು ಈ ವಿರೋದ ಪಕ್ಷಕ್ಕೆ ಮತ ಹಾಕಿ ಅಥವಾ ಆ ಪಕ್ಷಕ್ಕೆ ಮತ ಹಾಕಿ ಎಂದು ಜನರಿಗೆ ಹೇಳಲಿಲ್ಲ. ಅವರು ಬಿಜೆಪಿಯ ರೈತವಿರೋಧಿ ನೀತಿಗಳನ್ನು ವಿರೋಧಿಸಿದರು, ಮೋದಿಯ ಸಾಮ್ರಾಜ್ಯಶಾಹಿ ದುರಹಂಕಾರದಿಂದ ಬೇಸತ್ತಿದ್ದರು, ಧಾರ್ಮಿಕ ಒಡಕುಗಳನ್ನು ಸೃಷ್ಟಿಸುವ ಅವರ ರಾಜಕೀಯದಿಂದ ದೂರವಾಗಿದ್ದರು, ಹಾಗೂ ರೈತರೊಂದಿಗೆ ವ್ಯವಹರಿಸುವಾಗ ಅವರಿಗೆ ಇರಬೇಕಾಗಿದ್ದ ಸಭ್ಯತೆಯ ಕೊರತೆಯನ್ನು ಮನಗಂಡಿದ್ದರು. ಪ್ರಧಾನಿ ಮೋದಿ, ಒಮ್ಮೆಯೂ ಪ್ರತಿಭಟನೆಯಲ್ಲಿ ಮಡಿದ 670 ಜನರ ಸಾವಿಗೆ ವಿಷಾದ ವ್ಯಕ್ತಪಡಿಸಲಿಲ್ಲ; ತನ್ನ ಕಾರಿನ ಅಡಿಯಲ್ಲಿ ಸಿಲುಕಿಸಿ ನಾಲ್ಕು ಜನರನ್ನು ಕೊಂದದ್ದರ ಬಗ್ಗೆ, ಆ ಪ್ರಕರಣದ ಆರೋಪಿತ ಸಚಿವನ ಮಗನ ಬಗ್ಗೆ ಸಂಪೂರ್ಣ ಮೌನ ತಾಳಿದರು, ಆ ಸಚಿವನೇ ಖುದ್ದಾಗಿ ಒಂದು ಸಾರ್ವಜನಿಕ ಸಭೆಯಲ್ಲಿ ಬಹಿರಂಗವಾಗಿ ಬೆದರಿಕೆ ಹಾಕಿದ್ದರೂ, ಅದರ ಬಗ್ಗೆ ಪ್ರಧಾನಿಗಳು ಚಕಾರವೆತ್ತಲಿಲ್ಲ.

ತಮ್ಮೆಲ್ಲರ ಸಾಮಾನ್ಯ ಅನುಭವದ ಆಧಾರದ ಮೇಲೆ ಮತ ಹಾಕಬೇಕೆಂದು ಜನರನ್ನು ಆಹ್ವಾನಿಸಲಾಗಿದೆ. ಕಾರ್ಪೊರೆಟ್ ಹಿತಾಸಕ್ತಿಗಳನ್ನು ಬೆಂಬಲಿಸುವ ನೀತಿಗಳನ್ನು ವಿಮರ್ಶಿಸಿ ತೀರ್ಮಾನಿಸಲು ಅವರನ್ನು ಆಹ್ವಾನಿಸಲಾಗಿದೆ. ಈ ಸರಕಾರದ ಪ್ರಜಾಪ್ರಭುತ್ವವಿರೋಧಿ ಹಾಗೂ ಸಂವಿಧಾನವಿರೋಧಿ ಆಶಯಗಳ ಬಗ್ಗೆ ಅರಿವು ಮೂಡಿಸಲಾಗಿದೆ. ಚಳವಳಿಗಳು ಈ ಮುಂಚೆಯೂ ರಾಜಕೀಯ ಪಕ್ಷಗಳನ್ನು ಅಧಿಕಾರದಿಂದ ಕೆಳಗಿಳಿಸಿವೆ ಹಾಗೂ ಅಧಿಕಾರಕ್ಕೆ ತಂದಿವೆ. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯು, ಯಾವುದೇ ಸೈದ್ಧಾಂತಿಕ ನಿಲುವು ಇಲ್ಲ ಎಂಬುದರ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಿದ್ದ ಅಣ್ಣಾ ಹಜಾರೆಯ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಯ ಬೆಂಬಲ ಮಾತ್ರದಿಂದ ಅಧಿಕಾರಕ್ಕೆ ಬಂದಿತು. ಆಗಿನಿಂದ ಅದು ಯಾವುದೇ ಮಾರ್ಗದಿಂದಾಗಲೀ ಅಧಿಕಾರ ಉಳಿಸಿಕೊಳ್ಳುವುದನ್ನೇ ತನ್ನ ಸಿದ್ಧಾಂತವನ್ನಾಗಿಸಿಕೊಂಡಿದೆ. ಒಂದು ಸಮಯದಲ್ಲಿ ಬಲಶಾಲಿಯಾಗಿದ್ದ, ತನ್ನ ಮಾರ್ಕ್ಸ್‌ವಾದಿ ಸಿದ್ಧಾಂತದ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಿದ್ದ ಸಿಪಿಎಂ (ಕಮ್ಯೂನಿಸ್ಟ್ ಪಾರ್ಟಿ ಮಾರ್ಕ್ಸಿಸ್ಟ್) ಪಕ್ಷವು ಜನಸಾಮಾನ್ಯರ, ರೈತರ ಜೀವನ್ಮರಣವನ್ನು ಕಡೆಗಣಿಸುವಷ್ಟು ಅಹಂಕಾರಿಯಾಗಿಬಿಟ್ಟಿತ್ತು. ಆಗ ನಾಗರಿಕ ಸಮಾಜವು ರೈತರೊಂದಿಗೆ ಗಟ್ಟಿಯಾಗಿ ನಿಂತುಕೊಂಡಿತು ಹಾಗೂ ಆ ಜನಪ್ರಿಯ ಅಲೆಯನ್ನು ಕಬಳಿಸಿ, ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು.

ಅದು ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಸಿಪಿಎಂಅನ್ನು ಈಗ ಸಂಪೂರ್ಣವಾಗಿ ಅಳಿಸಿಹಾಕಿದೆ ಎನ್ನಬಹುದು ಹಾಗೂ ಕಳೆದ ಚುನಾವಣೆಯಲ್ಲಿ ಬಿಜೆಪಿಯನ್ನೂ ಛಿದ್ರಗೊಳಿಸಿದೆ. ಮಾಹಿತಿ ಹಕ್ಕು ಕಾಯಿದೆಯನ್ನು ಹಾಗೂ ರಾಷ್ಟ್ರವ್ಯಾಪಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಿ, 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜನಪ್ರಿಯ ಬೆಂಬಲವನ್ನು ಗಳಿಸಿತು. ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕಿ, ಮತ್ತೆ ಅಧಿಕಾರಕ್ಕೆ ಬಂದಿತು. ಆದರೆ ಆಗಿನಿಂದ ಸ್ಪಷ್ಟವಾಗುತ್ತಲೇ ಬಂದ ವಿಷಯವೇನೆಂದರೆ, ಕಾಂಗ್ರೆಸ್ ಪಕ್ಷ ತನ್ನ ಕುಟುಂಬ ರಾಜಕಾರಣವು ತೊಂದರೆಗೀಡಾಗದಿರುವ ತನಕ ಮಾತ್ರ ಜಾತ್ಯತೀತ ಉದಾರವಾದಿ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿರಿಸುತ್ತದೆ ಎಂಬುದು. ಇತ್ತ ಬಿಜೆಪಿಯು, ಚುನಾವಣೆಗಳಲ್ಲಿ ಹಿಂದೂ-ಮುಸ್ಲಿಂ ಒಡಕು ಸೃಷ್ಟಿಸಿ, ಅದನ್ನು ಅನುಕೂಲಕ್ಕೆ ಬಳಸಿಕೊಳ್ಳುವುದರ ಮೂಲಕ ಜಯ ಸಾಧಿಸುವೆವು ಎಂಬ ತನ್ನ ನಂಬಿಕೆಯ ಬಗ್ಗೆ ಅಹಂಕಾರದ ಧೋರಣೆ ತಳೆದಿದೆ. ಹಾಗೂ ಹಿಂದೂ ಜಾತಿ ಸಮಾಜದ, ದಲಿತರ, ಪರಿಶಿಷ್ಟ ಜಾತಿಯ ಶೋಷಣೆಯ ಹಾಗೂ ಆದಿವಾಸಿ ಜನರ ಹಕ್ಕುಗಳ ದಮನವನ್ನು, ಈ ವಿಷಯಗಳ ಕ್ರೂರ ವಾಸ್ತವವನ್ನು ಮರೆಮಾಚಿ ತನ್ನ ಜಾಣತನವನ್ನು ಪ್ರದರ್ಶಿಸುವ ಪ್ರಯತ್ನ ಮಾಡುತ್ತದೆ.

ಇಲ್ಲಿಯವರೆಗೆ ಈ ರೈತರ ಚಳವಳಿ, ಪ್ರಜಾತಾಂತ್ರಿಕ ಭಾರತದಲ್ಲಿ ರಾಜಕೀಯ ಪಕ್ಷಗಳು ಬಳಲುತ್ತಿರುವ ಇಂತಹ ಅನೇಕ ರೋಗಗಳಿಗೆ ಮದ್ದಾಗಿ ಕಾರ್ಯನಿರ್ವಹಿಸಿದೆ. ನಿರುದ್ಯೋಗವು ಒಂದು ಗಂಭೀರ ವಿಷಯವಾಗಿದ್ದರೂ ಚುನಾವಣೆ ಸಮಯದಲ್ಲಿ ಮಾತ್ರ ಅದರ ಬಗ್ಗೆ ಒಂದಿಷ್ಟು ಮಾತುಗಳು ಕೇಳಿಸುತ್ತವೆ. ಯಾವ ರಾಜಕೀಯ ಪಕ್ಷವೂ ಈ ಸಮಸ್ಯೆಯನ್ನು ಬಗೆಹರಿಸಲು ಗಂಭೀರವಾದ ಯೋಜನೆಯನ್ನು ಮುಂದಿಟ್ಟಿಲ್ಲ. ಬಡತನ, ಮಕ್ಕಳ ಅಪೌಷ್ಟಿಕತೆ, ಆರ್ಥಿಕ ಅಭಿವೃದ್ಧಿಯ ಹೆಸರಿನಲ್ಲಿ ಆಗುವ ಜೀವನೋಪಾಯ ಮತ್ತು ಪರಿಸರ ನಾಶ ಮುಂತಾದ ವಿಷಯಗಳೂ ಚುನಾವಣೆಯ ಸಮಯದಲ್ಲಿಯೇ ಮುನ್ನೆಲೆಗೆ ಬರುತ್ತವೆ. ಅಧಿಕಾರದಲ್ಲಿದ್ದಾಗ ಎಲ್ಲಾ ಪಕ್ಷಗಳು ಈ ಅಸಹ್ಯಕರ ಪ್ರವೃತ್ತಿಗೆ ಕೊಡುಗೆ ನೀಡುತ್ತವೆ ಹಾಗೂ ವಿರೋಧಪಕ್ಷದ ಸ್ಥಾನದಲ್ಲಿದ್ದಾಗ ವಿರೋಧಿಸುತ್ತವೆ.

ಈ ರೈತರ ಚಳವಳಿಯು ಆಟದ ಹೆಸರನ್ನು ತುಂಬಾ ಸ್ಪಷ್ಟವಾಗಿ ಅರ್ಥಮಾಡಿಸಿವೆ. ದೇಶದ ಆರ್ಥಿಕ ನಿಯಂತ್ರಣವನ್ನು ಕೆಲವೇ ಕೆಲವು ಅತಿದೊಡ್ಡ ಕಾರ್ಪೊರೆಟ್ ಶಕ್ತಿಗಳಿಗೆ ಹಸ್ತಾಂತರಿಸಿ ಹಾಗೂ ಬಡವರಿಗೆ ಆಗೊಮ್ಮೆ ಈಗೊಮ್ಮೆ ಒಂದಿಷ್ಟು ದಾನ ನೀಡಿ, ಅವರು ಯಾವುದೇ ಬೇಡಿಕೆ ಇಡದಂತೆ, ವಿಧೇಯರನ್ನಾಗಿ ಮಾಡುವದು ಈ ಕೃಷಿ ಕಾನೂನುಗಳ ಸ್ಪಷ್ಟ ಉದ್ದೇಶವಾಗಿತ್ತು.

ಅದರಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಇದ್ದರೂ, ಅವುಗಳು ಯಾವ ಮಟ್ಟಕ್ಕೆ ಈ ಸಮಸ್ಯೆಗಳು ಕಾಡಬಹುದು ಎಂಬುದರ ತೀವ್ರತೆಯ ಭಿನ್ನಾಭಿಪ್ರಾಯವಷ್ಟೇ. ಪ್ರಧಾನಿ ಮೋದಿ, ಈ ಸಿದ್ಧಾಂತವನ್ನು ಆಚರಿಸುವಲ್ಲಿ ಅತ್ಯಂತ ನಿರ್ದಯವಾಗಿ, ಸಂಪೂರ್ಣ ಭಕ್ತಿಯಿಂದ ಎಲ್ಲರನ್ನೂ ಹಿಂದಿಕ್ಕಿದ್ದಾರೆ. ಈ ರೈತರ ಚಳವಳಿಯು ಈ ಪ್ರಕ್ರಿಯೆಯನ್ನು ಸಾರ್ವಜನಿಕರ ಎದುರಿಗೆ ತೆರೆದಿಟ್ಟಿದೆ. ಹೌದು ಎಲ್ಲಾ ವಿರೋಧಾಭಾಸಗಳನ್ನು ಈ ಚಳವಳಿಯು ಪರಿಹರಿಸಿಲ್ಲ ಆದರೆ ಭಾರತದ ರೈತರ ತಿಳಿವಳಿಕೆಯ ಕಾರಣದಿಂದ ಒಂದು ಹೊಸ ಅಧ್ಯಾಯ ಶುರುವಾಗಿದೆ. ಅದಕ್ಕಿಂತ ಮಿಗಿಲಾಗಿ, ಜನರು, ಸಾಮಾನ್ಯ ಬಡಜನರು ತಾವು ಅರ್ಥ ಮಾಡಿಕೊಂಡು, ಒಗ್ಗಟ್ಟಾಗಿ ಮತ್ತು ದೃಢತೆಯಿಂದ ಮುಂದುವರೆದರೆ ಅವರೂ ದೇಶವನ್ನು ಬದಲಿಸಬಹುದು ಎಂಬ ವಿಶ್ವಾಸವನ್ನು ಈ ಚಳವಳಿ ನೀಡಿದೆ. ಒಂದರ್ಥದಲ್ಲಿ ಈ ಚಳವಳಿ ಇಡೀ ರಾಜಕೀಯ ವರ್ಗಕ್ಕೆ ಆತಂಕಕಾರಿಯಾಗಿದೆ ಏಕೆಂದರೆ ಇದು ಸಾಮಾನ್ಯವಾಗಿ ಆಗಿಹೋಗುವ ವಿಷಯವಲ್ಲ. ಒಂದು ನಿಷ್ಕ್ರಿಯ ಪ್ರಜಾಪ್ರಭುತ್ವದ ಚರ್ವಿತಚರ್ವಣ ರಾಜಕೀಯ ಮಾತುಗಾರಿಕೆಯನ್ನು ಮೀರಿ ಹೊಸದಾಗಿ ಕಂಡುಕೊಂಡ ವಾಸ್ತವ ಇದೆಂದು ರೈತರ ಚಳವಳಿಯು ಸಾಬೀತುಪಡಿಸಿದೆ.

ಅಮಿತ್ ಬಾಧುರಿ

ಅಮಿತ್ ಬಾಧುರಿ
ಸಂಶೋಧಕರು ಮತ್ತು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಅರ್ಥಶಾಸ್ತ್ರ ಪ್ರಾಧ್ಯಾಪಕ; ಇಟಲಿಯ ಪಾವಿಯಾ ವಿಶ್ವವಿದ್ಯಾಲಯದ ’ಕ್ಲಿಯರ್ ಫೇಮ್’ ಪ್ರಾಧ್ಯಾಪಕ. ಜೆಎನ್‌ಯು ಕ್ಯಾಂಪಸ್‌ನಲ್ಲಿ ಭಿನ್ನಾಭಿಪ್ರಾಯ, ಭಿನ್ನಮತ ಹತ್ತಿಕ್ಕುವ ವಿದ್ಯಮಾನ ಸಂಭವಿಸಿದಾಗ ಅವರು 2020ರಲ್ಲಿ ಜೆಎನ್‌ಯುಗೆ ರಾಜೀನಾಮೆ ನೀಡಿದರು.


ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ ಪೂರ್ವಯೋಜಿತವಾದುದು: SIT

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರದ 47 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಕಾಂಗ್ರೆಸ್ ಆಗ್ರಹ

0
ಮಣಿಪುರದ 47 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಕಾಂಗ್ರೆಸ್ ಪಕ್ಷ ಆಗ್ರಹಿಸಿದ್ದು, ಮತದಾನದ ವೇಳೆ ಮತ ಗಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರವೆಸಗಲಾಗಿದೆ ಎಂದು ಆರೋಪಿಸಿದೆ. "ನಾವು ಭಾರತೀಯ ಚುನಾವಣಾ ಆಯೋಗ, ಮಣಿಪುರದ ಮುಖ್ಯ ಚುನಾವಣಾ ಅಧಿಕಾರಿ ಮತ್ತು...