Homeಕರ್ನಾಟಕಆರ್‌ಎಸ್‌ಎಸ್ ಅಂತರಂಗ ತಿಳಿಯಲು ಕಾರಣವಾದ ’ಆರ್‌ಎಸ್‌ಎಸ್‌ನಿಂದ ಡಿಎಸ್‌ಎಸ್‌ಗೆ’ ಪತ್ರಿಕಾಗೋಷ್ಠಿ

ಆರ್‌ಎಸ್‌ಎಸ್ ಅಂತರಂಗ ತಿಳಿಯಲು ಕಾರಣವಾದ ’ಆರ್‌ಎಸ್‌ಎಸ್‌ನಿಂದ ಡಿಎಸ್‌ಎಸ್‌ಗೆ’ ಪತ್ರಿಕಾಗೋಷ್ಠಿ

- Advertisement -
- Advertisement -

ಚಿತ್ರದುರ್ಗದಲ್ಲಿ ಹುಟ್ಟಿ ಬೆಳೆದ ನನಗೆ ದುರ್ಗದ ಪ್ರತಿಯೊಂದು ಕಲ್ಲುಬಂಡೆಗಳನ್ನು ಗುರುತಿಸುವಷ್ಟು ನೆನಪಿದೆ. ದುರ್ಗದ ಬಗ್ಗೆ ಮಾತಾಡುವಾಗೆಲ್ಲ ನನಗರಿವಿಲ್ಲದೇ ಒಂದು ರೀತಿಯ ಭಾವುಕತೆಗೆ ಒಳಗಾಗುತ್ತೇನೆ. ನಾನು ಪ್ರೈಮರಿ ಸ್ಕೂಲಿನಲ್ಲಿ ಓದುವಾಗ ಪ್ರತೀ ಶನಿವಾರ, ಭಾನುವಾರ ಕೃಷ್ಣರಾಜೇಂದ್ರ ಲೈಬ್ರರಿಯ ಆವರಣದಲ್ಲಿದ್ದ ಪಾರ್ಕ್‌ನಲ್ಲಿ ಕೆಲವು ಗೆಳೆಯರೊಂದಿಗೆ ಆಡುವುದು ರೂಢಿಯಾಗಿಹೋಗಿತ್ತು. ಅಲ್ಲಿಯ ಕೊಳದಲ್ಲಿ ಪೇಪರ್‌ದೋಣಿ ಮಾಡಿಬಿಡುವುದು, ಸಣ್ಣಸಣ್ಣ ಕಪ್ಪೆಗಳನ್ನು ಹಿಡಿದು ಗಾಜಿನ ಬಾಟಲಿಯಲ್ಲಿ ಹಾಕಿ ಅವುಗಳ ಜೊತೆಗೆ ಕೆಲವು ಬಣ್ಣಬಣ್ಣದ ಹೂಗಳನ್ನೂ ಹಾಕಿ ಅವು ದೊಡ್ಡದಾಗಿ ಕಾಣುವುದನ್ನು ನೋಡುವುದು, ಒಮ್ಮೊಮ್ಮೆ ಅವುಗಳ ಹಿಂಗಾಲಿಗೆ ದಾರಕಟ್ಟಿ ನೀರಿನಲ್ಲಿ ಬಿಟ್ಟು ನಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಮತ್ತೆ ಎಳೆಯುವುದು, ಜಾರೋಬಂಡಿಯಲ್ಲಿ ಜಾರಿಜಾರಿ ಚಡ್ಡಿ ಹರಿದುಕೊಳ್ಳುವುದು, ಹೀಗೇ ಪ್ರತೀ ವಾರದ ಎರಡು ದಿನ ಸೃಜನಾತ್ಮಕವಾಗಿ ಆಟಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೆವು. ಪಾಪ ಆ ಕಪ್ಪೆಗಳು ನಮ್ಮ ಈ ಆಟದಲ್ಲಿ ನೊಂದುಬೆಂದು ಬಸವಳಿದುಹೋಗುತ್ತಿದ್ದವು.

ಹೀಗೆ ನಮ್ಮ ಪ್ರತೀ ವಾರದ ಎರಡು ದಿನದ ರೊಟೀನ್ ಬೋರ್ ಹೊಡೆದು ಕೃಷ್ಣ ರಾಜೇಂದ್ರ ಲೈಬ್ರರಿಯೊಳಗೆ ನುಸುಳಿದೆವು. ಹೊರಗೆ ಕೇಕೆಹಾಕಿ, ನಕ್ಕುನಗಿಸಿ ಕೂಗಾಡುತ್ತಿದ್ದ ನಾವು ಒಳಗಿನ ನಿಶಬ್ದಕ್ಕೆ ತತ್ತರಿಸಿಹೋದೆವು. ಲೈಬ್ರರಿಯಲ್ಲಿ ಮಕ್ಕಳ ವಿಭಾಗವೂ ಇದ್ದು, ಅಲ್ಲಿ ಕೆಲವು ಕಾನ್ವೆಂಟ್ ಮಕ್ಕಳು ಘನ ಗಾಂಭೀರ್ಯದಲ್ಲಿ ಕಾಲಮೇಲೆ ಕಾಲುಹಾಕಿ ಅಂಗೈಯನ್ನು ಗದ್ದಕ್ಕೆ ಆನಿಸಿ ತಮ್ಮ ತಲೆಗಳನ್ನು ಪುಸ್ತಕಗಳಲ್ಲಿ ಹುದುಗಿಸಿರುತ್ತಿದ್ದರು. ನಮಗೆ ಇದೆಲ್ಲಾ ಹೊಸದು. ಕೈಗೆ ಸಿಕ್ಕ ಪುಸ್ತಕಗಳನ್ನು ರ್‍ಯಾಕಿನಿಂದ ಎಳೆದುತಂದು ಟೇಬಲ್ ಮೇಲೆ ಹರಡಿಕೊಂಡು ಅದರಲ್ಲಿನ ಚಿತ್ರಗಳನ್ನು (illustrations) ನೋಡಲಾರಂಭಿಸಿದೆವು. ಹೆಚ್ಚಿನ ಪುಸ್ತಕಗಳು ಇಂಗ್ಲಿಷ್ ಭಾಷೆಯವಾಗಿದ್ದವು. ಆ ರೀತಿಯ ಇಲ್ಲಸ್ಟ್ರೇಶೇನ್‌ಗಳನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಅವುಗಳ ಗುಣಮಟ್ಟ ಅಷ್ಟು ಉತ್ಕೃಷ್ಟವಾಗಿತ್ತು. ಆ ರೀತಿಯ ಚಿತ್ರಗಳನ್ನು ನಾನು ಇತ್ತೀಚಿನ ಮಕ್ಕಳ ಪುಸ್ತಕಗಳಲ್ಲಿ ಕಂಡೇಇಲ್ಲ. ಅದಕ್ಕೆ ಕಾರಣ ಈಗಿನ ಡಿಜಿಟಲೀಕರಣವೂ ಇರಬಹುದು. ಅವುಗಳನ್ನು ನೋಡುವುದಷ್ಟೇ ಅಲ್ಲ ಆ ಚಿತ್ರಗಳನ್ನು ಹರಿದುತಂದು ನಕಲು ಮಾಡುತ್ತಿದ್ದೆ. ಲೈಬ್ರರಿ ಪುಸ್ತಕಗಳನ್ನು ಹರಿಯುವುದು ಅಷ್ಟು ಸುಲಭದ ಮಾತಲ್ಲ, ಅದೂ ನಿಶಬ್ದದಲ್ಲಿ ಹರಿಯುವುದೆಂದರೆ ಸುಮ್ಮನೆಯೇ? ಸುಮ್ಮನೆ ಪಿಸುಗುಟ್ಟುತ್ತಾ ಇಷ್ಟಿಷ್ಟೇ ಹರಿಯುತ್ತಾ ಹೋಗಬೇಕು, ಪೂರ್ಣ ಕೈಗೆ ದಕ್ಕಿದ ನಂತರ ಟೇಬಲ್ ಕೆಳಗೆ ಮಡಿಸಿ ಕಿಸೆಗೆ ಇಳಿಸಬೇಕು. ಹೀಗೆ ರಷ್ಯ, ಫ್ರಾನ್ಸ್, ಜರ್ಮನ್ ದೇಶದ ಚಿತ್ರಕಾರರ ಚಿತ್ರದ ಪ್ರತಿಗಳನ್ನು ಪುಸ್ತಕಗಳಿಂದ ಕದ್ದು ನಕಲು ಮಾಡಿ, ಚಿತ್ರಕಲೆಯ ಅಭ್ಯಾಸವನ್ನು ನನಗೆ ಗೊತ್ತಿಲ್ಲದೇ ಎಂದೋ ಆರಂಭಿಸಿಬಿಟ್ಟಿದ್ದೆ. ಆ ಲೈಬ್ರ್ರರಿಯಲ್ಲೇ ನಾನು ಗಾಂಧಿಯವರ ಬದುಕು ಮತ್ತು ಹೋರಾಟಗಳ ಬಗ್ಗೆ ಸಚಿತ್ರ ಬರಹಗಳನ್ನು ಓದಿದ್ದು ಮತ್ತು ಪ್ರಭಾವಿತನಾಗಿದ್ದು.

ಇದೇ ಗೆಳೆಯರ ಗುಂಪು ಹಾಗೆಯೇ ಬೆಟ್ಟಕ್ಕೆ ಹೋಗುವುದು, ಚಿಕ್ಕದೊಡ್ಡ ಗುಡ್ಡಗಳನ್ನು ಹತ್ತುವುದು, ಜೋಗಿಮಟ್ಟಿ ಒಣಕಾಡಿನಲ್ಲಿ ಅಲೆಯುವುದು, ಇವೆಲ್ಲಾ ಹೊಸ ಆವಿಷ್ಕಾರಗಳಾದವು. ನಮ್ಮ ಸಾಹಸಗಳಲ್ಲಿ ಇಂತಹ ಸೃಜನಶೀಲತೆಯನ್ನೂ ರೂಢಿಸಿಕೊಂಡೆವು. ಅದೇ ಗುಂಪಿಗೆ ಹೊಸಬನೊಬ್ಬನ ಎಂಟ್ರಿ ಆಯಿತು. ಅವನೇ ನಮಗೆ ಮೊದಲ ಬಾರಿಗೆ ಆರ್‌ಎಸ್‌ಎಸ್‌ಅನ್ನು ಪರಿಚಯಿಸಿದ್ದು. “ಏ ನೀವೆಲ್ಲಾ ದಿಕ್ಕು-ದೆಸೆ ಇಲ್ಲದೇ ಸುಮ್ಮನೇ ಅಲೆದುಕೊಂಡಿದ್ದೀರಲ್ಲ, ಈ ದೇಶಕ್ಕೆ ನಿಮ್ಮ ಅವಶ್ಯಕತೆ ಇದೆ, ದೇಶಕ್ಕಾಗಿ ನಮ್ಮ ಪ್ರಾಣವನ್ನೂ ಕೊಡಲು ಸಿದ್ದರಾಗಬೇಕು, ದೇಹ ನಶ್ವರವೆಂದು, ದೇಶ ಶಾಶ್ವತವೆಂದು, ನಶ್ವರವು ಶಾಶ್ವತಕೆ ಮುಡಿಪಾಗಲೆಂದು” ಹೀಗೆ ಏನೇನೋ ದೇಶಭಕ್ತಿಯ ಉನ್ಮಾದವನ್ನು ನಮ್ಮ ತಲೆಯೊಳಗೆ ತುಂಬಲು ಶುರುಮಾಡಿದ. ನಾವೂ ಆ ಕಾಲಕ್ಕಾಗಲೇ ದೇಶಭಕ್ತರ ಚಿಕ್ಕಚಿಕ್ಕ ಕಾಮಿಕ್ಸ್ ಪುಸ್ತಕಗಳನ್ನು ಓದಿಕೊಂಡಿದ್ದೆವು. ಅವನ ನಶೆ ನಮ್ಮ ತಲೆಗೇರಲು ಅಷ್ಟೇನು ಸಮಯ ಹಿಡಿಯಲಿಲ್ಲ. ಬಹುಬೇಗನೇ ಅವನ ವಶೀಕರಣಕ್ಕೆ ಒಳಗಾಗಿದ್ದೆವು. ಇದೆಲ್ಲಕ್ಕಿಂತಾ ಮುಂಚಿತವಾಗಿಯೇ ಆತ ಆರ್‌ಎಸ್‌ಎಸ್ ಶಾಖೆಯನ್ನು ನಮಗೆ ಪರಿಚಯಿಸಿದ್ದ. ಅಲ್ಲಿ ಆಟವಾಡಿ ಖುಷಿಪಟ್ಟಿದ್ದೆವು, ಅದು ಬೇರೆಯೇ ಪ್ರಪಂಚದಂತೆ ಗೋಚರಿಸಲು ಶುರುವಾಗಿತ್ತು.

ಶಾಖೆ ಮುಗಿದ ನಂತರ ಕಾರ್ಯಾಲಯಕ್ಕೆ ಹೋಗಿ ಅಲ್ಲಿ ಧ್ವಜ ಮತ್ತು ಇತರೆ ಪರಿಕರಗಳನ್ನು ಇಟ್ಟು ಬರುತ್ತಿದ್ದೆವು, ಅಲ್ಲಿ ಕೆಲವೇ ಕೆಲವು ಪುಸ್ತಕಗಳು ಮಾತ್ರ ಇರುತ್ತಿದ್ದವು, ಅವುಗಳಲ್ಲಿ ಹೆಚ್ಚಿನವು ಕ್ರಾಂತಿಕಾರಿ ದೇಶಭಕ್ತರ ಜೀವನಚರಿತ್ರೆಗಳು, ರಾಮಾಯಣ, ಮಹಾಭಾರತ ಹೀಗೆ ಸೀಮಿತವಾಗಿದ್ದವು. ಇಷ್ಟನ್ನು ಬಿಟ್ಟು ಕಲೆ, ಸಾಹಿತ್ಯ, ಇತಿಹಾಸ, ರಾಜಕೀಯ, ಸಮಾಜಶಾಸ್ತ್ರ, ತತ್ವಶಾಸ್ತ್ರ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಲೋಹಿಯಾ, ಈ ಯಾವುದರ ಗಂಧಗಾಳಿಯೂ ಅಲ್ಲಿ ಸುಳಿಯುತ್ತಿರಲಿಲ್ಲ. ವ್ಯವಸ್ಥಿತವಾಗಿ ಇವೆಲ್ಲದರಿಂದ ಯುವಕರನ್ನು ದೂರ ಇಡಲಾಗುತ್ತಿದೆ ಎಂದು ಎಷ್ಟೋ ನಂತರದ ದಿನಗಳಲ್ಲಿ ನನಗೆ ಮನವರಿಕೆಯಾಯಿತು. ಚಿತ್ರಕಲೆಯಲ್ಲಿ ಆಗಲೇ ಆಸಕ್ತಿ ಬೆಳೆಸಿಕೊಂಡಿದ್ದ ನನ್ನನ್ನು ಬೇರೇಬೇರೇ ಸಂದರ್ಭಗಳಲ್ಲಿ ಬಳಸಿಕೊಂಡರು, ನಾನೂ ಅಷ್ಟೇ ಉತ್ಸುಕತೆಯಿಂದ ಬ್ಯಾನರ್‌ಗಳನ್ನು ಬರೆಯುವುದು, ಪೋಸ್ಟರ್‌ಗಳನ್ನು ರಚಿಸುವುದು. ರಾತ್ರೋರಾತ್ರಿ ಗೋಡೆ ಬರಹಗಳನ್ನು ಬರೆಯುವುದು, ಎಲೆಕ್ಟ್ರಿಕ್ ಕಂಬಗಳನ್ನು ಹತ್ತಿ ಬಟಿಂಗ್‌ಗಳನ್ನು ಕಟ್ಟುವುದು ಹೀಗೆ ಸಾಗಿತು. ನಾವು ನಿಜ ಅರ್ಥದಲ್ಲಿ ಅಪ್ಪಟ ದೇಶಭಕ್ತರಾಗಿದ್ದೇವೆ ಎಂದು ನಮ್ಮೊಳಗೇ ನಾವು ಅಂದುಕೊಳ್ಳುವುದು, ಅವ್ಯಕ್ತ ತೃಪ್ತಿ ಅನುಭವಿಸುವುದು ಹೀಗೇ ಮುಂದುವರೆದಿತ್ತು ಆರ್‌ಎಸ್‌ಎಸ್ ಒಡನಾಟ.

ನಾನು ಇದಕ್ಕೆ ಒಂದು ಸೃಜನಶೀಲ ಸ್ಪರ್ಶಕೊಡುವ ಒಂದು ಪ್ಲಾನ್ ಮಾಡಿದೆ – ಅದೇನೆಂದರೆ ಸ್ವತಂತ್ರ ದಿನಾಚರಣೆಯ ಹಿಂದಿನ ದಿನ ಸಂಜೆ ಗೆಳೆಯರ ಗುಂಪು ಕಟ್ಟಿಕೊಂಡು ಚಿತ್ರದುರ್ಗದ ಶಾಲೆಗಳಿಗೆ ಹೋಗಿ, ಶಾಲೆಯ ಆವರಣದಲ್ಲಿ ಒಂದು ಕಬ್ಬಿಣದ ರಾಡಿನ ಸಹಾಯದಿಂದ ದೊಡ್ಡದೊಂದು ಭಾರತದ ನಕ್ಷೆಯನ್ನು ಕೊರೆದು ರಚಿಸುವುದು. ನಾನು ಕಣ್ಣು ಮುಚ್ಚಿಕೊಂಡು ಬರೆದರೂ ಪೆರ್ಫೆಕ್ಟ್ ಭಾರತದ ನಕ್ಷೆ ಸಿದ್ಧವಾಗುತ್ತಿತ್ತು. ಅಷ್ಟರಮಟ್ಟಿಗೆ ನಕ್ಷೆ ರಚಿಸುವುದರಲ್ಲಿ ಪೆರ್ಫೆಕ್ಟ್ ಆಗಿದ್ದೆ. ನಾನು ಆ ರೀತಿ ಕೊರೆದು ಮುಂದಿನ ಶಾಲೆ ಹುಡುಕಿಕೊಂಡು ಹೋಗುತ್ತಿದ್ದೆ. ಉಳಿದವರು ಜೆಲ್ಲಿ ಕಲ್ಲುಗಳಿಂದ ನಾನು ಕೊರೆದ ನಕ್ಷೆಯನ್ನು ತುಂಬುತಿದ್ದರು. ಇದೆಲ್ಲಾ ಮಾಡಿದ ನಂತರ ಸ್ವಲ್ಪ ಅಂತರದಿಂದ ನೋಡಿದರೆ ಸುಂದರವಾದ ಭಾರತದ ಭೂಪಟ ಮೂಡಿರುತ್ತಿತ್ತು. ಹೀಗೆ ಒಂದು ಶಾಲೆ ಮುಗಿಸಿದ ನಂತರ ಇನ್ನೊಂದು ಶಾಲೆ, ಇನ್ನೊಂದು ಮುಗಿದ ನಂತರ ಮತ್ತೊಂದು, ಸುಮಾರು ಹತ್ತು ಹನ್ನೆರಡು ಶಾಲೆಗಳನ್ನು ಮುಗಿಸಿಯೇ ಮನೆ ಸೇರುತ್ತಿದ್ದುದು. ಸ್ವತಂತ್ರ ದಿನಾಚರಣೆಯ ದಿನ ಬೇಗನೇ ಎದ್ದು ನಾವು ನಕ್ಷೆ ರಚಿಸಿದ ಶಾಲೆಗಳಿಗೆ ಹೋಗಿ ಮರೆಯಲ್ಲಿ ನಿಂತು ನೋಡುತ್ತಿದ್ದೆವು.

ಹೆಚ್ಚಿನ ಶಾಲೆಯವರು ನಾವು ರಚಿಸಿದ ಭಾರತದ ಭೂಪಟವನ್ನು ಬಳಸಿಕೊಂಡು ಅದರ ಮಧ್ಯ ಭಾಗಕ್ಕೆ ಸರಿಯಾಗಿ ಧ್ವಜಸ್ತಂಭವನ್ನು ನೆಟ್ಟಿರುತ್ತಿದ್ದರು. ಅದೇ ನಮ್ಮೊಳಗೆ ಒಂದು ರೀತಿಯ ರೋಮಾಂಚನವನ್ನುಂಟುಮಾಡುತ್ತಿತ್ತು. ಹೇಳಿಕೊಳ್ಳಲಾರದ ತೃಪ್ತಿ ನಮ್ಮನ್ನು ಆವರಿಸುತ್ತಿತ್ತು. ದೇಶಭಕ್ತರಾದೆವು ಎಂದು ಬೀಗುತ್ತಿದ್ದೆವು. ಸುಮಾರು ವರ್ಷಗಳ ಕಾಲ ಈ ರಿಚುವಲ್‌ಅನ್ನು ನಡೆಸಿದವು. ಆರ್‌ಎಸ್‌ಎಸ್‌ನ ತತ್ವ-ಸಿದ್ಧಾಂತಗಳನ್ನು ಹೇಳೋಣವೆಂದರೆ ಅಲ್ಲಿ ಅಂತಹದ್ದೇನು ಇರಲಿಲ್ಲ. ಅಲ್ಲಿರುವ ಜಿಲ್ಲಾ ಮತ್ತು ರಾಜ್ಯ ಮಟ್ಟದ ಮುಖಂಡರಲ್ಲೂ ತುಂಬಾ ಗೊಂದಲಗಳಿದ್ದವು. ಆಶ್ಚರ್ಯದ ಸಂಗತಿಯೆಂದರೆ ಅವರಿಗೆ ಅದು ಗೊಂದಲವೆನಿಸಿರಲಿಲ್ಲ. ಏಕೆಂದರೆ ಅಲ್ಲಿ ಯಾರಿಗೂ ಸ್ವಂತವಾಗಿ ಯೋಚಿಸುವ, ಚಿಂತಿಸುವ ಅವಕಾಶವೇ ಇರುವುದಿಲ್ಲ. ಯಾರಾದರೊಬ್ಬ ಸ್ವಯಂಸೇವಕನನ್ನು ಹಿಡಿದು ನಿಲ್ಲಿಸಿ ನಿಮ್ಮ ಸಂಘದ ತತ್ವ ಸಿದ್ಧಾಂತಗಳೇನು ಅಂತ ಕೇಳಿ, ಉತ್ತರಿಸಲು ಅವನಿಗೆ ತಿಳಿದೇ ಇರುವುದಿಲ್ಲ. ಇದು ಎಂಥಾ ವಿಷವರ್ತುಲವೆಂದರೆ ನೀವು ಒಮ್ಮೆ ಒಳಹೊಕ್ಕರೆ ಹೊರಬರುವುದು ಕಷ್ಟ. ಸಾಧ್ಯ ಆದರೆ ಯಾವಾಗ ಅಂದರೆ, ನಿಮ್ಮ ಆಳವಾದ ಓದು, ವಿಶಾಲವಾದ ವಿಚಾರ ಅಧ್ಯಯನ, ಪ್ರಪಂಚದ ವಿವಿಧ ತತ್ವಜ್ಞಾನಿಗಳ, ದಾರ್ಶನಿಕರ ದರ್ಶನವಾದಾಗ ಮಾತ್ರ ನಿಮಗೆ ಅಲ್ಲಿಂದ ಬಿಡುಗಡೆ ಸಾಧ್ಯ. ಇಲ್ಲದಿದ್ದರೆ ಕೂಪಮಂಟೂಕಗಳಾಗಬೇಕಾಗುತ್ತದೆ.

ನನ್ನ ತಂದೆ ಆರ್‌ಎಸ್‌ಎಸ್ ವಿರೋಧಿಯಾಗಿದ್ದರು, ಇಂದಿರಾ ಗಾಂಧಿಯವರ ಕೆಲಸಕಾರ್ಯಗಳನ್ನು ಶ್ಲಾಘಿಸುತ್ತಿದ್ದರು. ನಾನು ಶಾಖೆಗೆ ಹೋಗುವಾಗ ನನ್ನ ತಂದೆಗೆ ಗೊತ್ತಾಗದಿರಲೆಂದು ಸಂಘದ ಖಾಕಿ ಚೆಡ್ಡಿಯನ್ನು ಕಾಣದಂತೆ ಅಂಗಿಯ ಒಳಗೆ ಹುದುಗಿಸಿಕೊಂಡು ಹೋಗುತ್ತಿದ್ದೆ. ತಂದೆ ಎರಡು ಮೂರು ಬಾರಿ ಎಚ್ಚರಿಕೆಯನ್ನೂ ಕೊಟ್ಟಿದ್ದರು. ನನ್ನ ತಂದೆಯವರ ವಿಚಾರಕ್ಕೆ ತದ್ವಿರುದ್ಧವಾಗಿ ಸಂಘದಲ್ಲಿ ನಮಗೆ ಹೇಳಿಕೊಳ್ಳುತ್ತಿದ್ದರು. ಗಾಂಧಿ ಮತ್ತು ನೆಹರು ಅವರ ವಿಚಾರಧಾರೆಗಳನ್ನು ವಿರೋಧಿಸುವಂತೆ ಪ್ರೇರೇಪಿಸುತ್ತಿದ್ದರು. ಈ ದೇಶಕ್ಕೆ ಅಹಿಂಸೆಯಿಂದ ಸ್ವಾತಂತ್ರ್ಯ ಬರಲು ಸಾಧ್ಯವೇ ಇಲ್ಲ, ಕ್ರಾಂತಿಕಾರಿಗಳೇ ನಮ್ಮ ನಿಜವಾದ ಸ್ವಾತಂತ್ರ್ಯ ಸಂಗ್ರಾಮದ ಯೋಧರು, ಇತಿಹಾಸವನ್ನೆಲ್ಲಾ ತಿರುಚಿ ಗಾಂಧಿಯ ಸತ್ಯಾಗ್ರಹ ಚಳವಳಿಯಿಂದ ನಮಗೆ ಸ್ವಾತಂತ್ರ್ಯ ಬಂದಿದೆ ಎಂದು ಬಿಂಬಿಸಲಾಗುತ್ತಿದೆ ಅಂತೆಲ್ಲಾ ನಮ್ಮ ತಲೆಯೊಳಗೆ ತುಂಬಲು ಶುರುಮಾಡಿದರು. ಸಂಘದ ಬೈಠಕ್‌ಗಳಲ್ಲಿ ಈ ರೀತಿಯ ವಿಷಯಗಳನ್ನು ದಂಡಿದಂಡಿಯಾಗಿ ಮಂಡಿಸುತ್ತಿದ್ದರು, ನಾವು ಸುಮ್ಮನೆ ಕುಳಿತು ಕೇಳಿಸಿಕೊಳ್ಳಬೇಕು, ಪ್ರಶ್ನೆಗಳಿಗೆ ಅವಕಾಶವಿಲ್ಲ. ಪ್ರಶ್ನೆಗಳನ್ನು ಕೇಳಿದರೂ ಅವಕ್ಕೆ ಸೂಕ್ತವಾದ ಉತ್ತರಗಳನ್ನು ರೆಡಿ ಮಾಡಿ ಇಟ್ಟುಕೊಂಡಿರುತ್ತಾರೆ, ಮತ್ತೆಮತ್ತೆ ಅವನ್ನೇ ಹರಿಯಬಿಡುತ್ತಾರೆ.

ಕೊಟ್ಟೂರು ಶ್ರೀನಿವಾಸ್

ನಾನು ಎಂಟನೇ ತರಗತಿಯಲ್ಲಿದ್ದೆ ಅಂತಾ ಕಾಣತ್ತೆ, ಆ ಸಮಯದಲ್ಲಿ ನನ್ನ ತಂದೆಯವರಿಗೆ
ಒಂದು ಹಳ್ಳಿಗೆ ವರ್ಗವಾಯಿತು. ನನ್ನನ್ನು ದಾವಣಗೆರೆಯ ಸರ್ಕಾರಿ ಹೈಸ್ಕೂಲಿಗೆ ಸೇರಿಸಿದರು.
ಚಿತ್ರದುರ್ಗದಲ್ಲಿದ್ದ ಸಂಘದ ಸಂಪರ್ಕದಿಂದಾಗಿ ಬಹುಬೇಗ ದಾವಣಗೆರೆಯಲ್ಲಿ ಸಂಘದ ಚಟುವಟಿಕೆಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡೆ. ಇದೇ ಸಂದರ್ಭದಲ್ಲೇ ನನಗೆ ಎಬಿವಿಪಿ ಸಂಪರ್ಕವೂ ಬಂತು. ಕಾರ್ಯಾಲಯಕ್ಕೆ ನಿರಂತರವಾಗಿ ಹೋಗುತ್ತಿದ್ದೆ. ಹೆಚ್ಚಿನ ಸಮಯವನ್ನು ಅಲ್ಲಿಯೇ ಕಳೆಯಲಾರಂಭಿಸಿದೆ. ಇದರಿಂದಾಗಿ ಆರ್‌ಎಸ್‌ಎಸ್‌ನ ಅಂತರಂಗವನ್ನು ಅರಿಯಲು ಅನುಕೂಲವಾಯಿತು. ಆರ್‌ಎಸ್‌ಎಸ್ ಮೂಲವಾದರೆ, ವಯೋವೃಧ್ದರಿಗಾಗಿ ವಿಶ್ವ ಹಿಂದೂ ಪರಿಷತ್, ಕಾಲೇಜು ವಿದ್ಯಾರ್ಥಿಗಳಿಗಾಗಿ ಎಬಿವಿಪಿ (ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್), ಮಹಿಳೆಯರಿಗಾಗಿ ರಾಷ್ಟ್ರಯ ಸೇವಿಕಾ ಸಮಿತಿ, ರೈತರಿಗಾಗಿ ಕಿಸಾನ್ ಮಂಚ್, ಕಾರ್ಮಿಕರಿಗಾಗಿ ಮಸ್ದೂರ್ ಮಂಚ್, ರಾಜಕೀಯಕ್ಕಾಗಿ ಬಿಜೆಪಿ (ಭಾರತೀಯ ಜನತಾ ಪಾರ್ಟಿ) ಹೀಗೆ ನಾನಾ ವೇಶಗಳಲ್ಲಿ ಆರ್‌ಎಸ್‌ಎಸ್‌ಅನ್ನು ಗುರುತಿಸಬಹುದು. ಏನಾದರೂ ವಿವಾದಗಳು ಸೃಷ್ಟಿಯಾದರೆ ನಮಗೂ ಅದಕ್ಕೂ ಸಂಬಂಧವಿಲ್ಲ, ಅದು ಬೇರೆಯೇ ಸಂಸ್ಥೆ ಎಂದು ಮುಲಾಜಿಲ್ಲದೆ ಜಾರಿಕೊಳ್ಳುತ್ತಾರೆ.

ನಾನು ದಾವಣಗೆರೆಗೆ ಬಂದ ಹೊಸತರಲ್ಲಿ ಆರ್‌ಎಸ್‌ಎಸ್‌ನವರು ಚಿಕ್ಕದಾದ ಬಾಡಿಗೆ ಮನೆಯನ್ನೆ ಆಫೀಸ್ ಮಾಡಿಕೊಂಡಿದ್ದರು. ನಾನು ಎಸ್‌ಎಸ್‌ಎಲ್‌ಸಿಗೆ ಬರುವಷ್ಟರಲ್ಲಿ ತಮ್ಮದೇ ಸ್ವಂತ ಬೃಹತ್ ಕಟ್ಟಡ ಕಟ್ಟಲು ಶುರುಮಾಡಿದರು. ನಮ್ಮನ್ನೆಲ್ಲಾ ಅದರ ಮೇಲ್ವಿಚಾರಣೆಗೆ ಬಿಡುತ್ತಿದ್ದರು. ಕ್ಯೂರಿಂಗ್ ಮಾಡುವುದು, ಮರಳು ಒಟ್ಟುಮಾಡುವುದು, ಸಣ್ಣ ಪುಟ್ಟ ಕೆಲಸಗಳನ್ನೆಲ್ಲಾ ಮಾಡಿಕೊಂಡಿದ್ದೆವು. ಅದೇ ಸಮಯಕ್ಕೆ ಕೊಟ್ಟೂರ್ ಶ್ರೀನಿವಾಸ್ ಅಂತ ಒಬ್ಬರು ಜಿಲ್ಲಾ ಪ್ರಚಾರಕ್ಕೆ ಆಗಿ ಬಂದರು. ಈಗಾಗಲೇ ಅವರು ಸುಮಾರು ಕಡೆ ಆರ್‌ಎಸ್‌ಎಸ್ ಪ್ರಮುಖರಾಗಿ ಕೆಲಸ ಮಾಡಿ ಬಂದಿದ್ದರು. ಅವರ ಚಲನವಲನಗಳು ಕ್ರಮೇಣ ಭಿನ್ನವಾಗುತ್ತಾ ಸಾಗಿದ್ದವು, ನನಗೂ ಅವರ ಬಗ್ಗೆ ಒಂದು ರೀತಿಯ ಕುತೂಹಲ ಆರಂಭವಾಗಿತ್ತು. ಈ ಅನುಮಾನಕ್ಕೆ ತೆರೆ ಬಿದ್ದಂತೆ ಅವರು ಒಂದು ದಿನ ಪ್ರೆಸ್ ಕಾನ್ಫರೆನ್ಸ್ ಕರೆದರು. ಮಾರನೇ ದಿನ ಎಲ್ಲಾ ಪತ್ರಿಕೆಗಳಲ್ಲೂ ಇವರದೇ ಸುದ್ದಿ: “ಆರ್‌ಎಸ್‌ಎಸ್‌ನಿಂದ ಡಿಎಸ್‌ಎಸ್‌ಗೆ” ಅಂತ ಹೆಡ್‌ಲೈನ್. ಇದು ನನಗೆ ಸಿಕ್ಕ ಮೊದಲ ಶಾಕ್. ಅವರು ಯಾಕೆ ಆರ್‌ಎಸ್‌ಎಸ್ ಬಿಟ್ಟಿದ್ದು, ಕಾರಣಗಳನ್ನು ಹುಡುಕುತ್ತಾ ಹೋದೆ, ಅಷ್ಟರಲ್ಲಿ ದಾವಣಗೆರೆಯ ಸಮುದಾಯ ತಂಡದ ಸಂಪರ್ಕ ಶುರುವಾಗಿತ್ತು.

ಅದಕ್ಕೆ ಕಾರಣವಾದವರು ಇತ್ತೀಚಿಗೆ ತೀರಿಕೊಂಡ ಗುರುಗಳಾದ ಸೊಲಬಕ್ಕನವರ್ ಮತ್ತು ಕರಿರಾಜು.
ಕಾರ್ಲ್ ಮಾರ್ಕ್ಸ್, ಹೆಗೆಲ್, ಮತ್ತು ಇತರೆ ತತ್ವಶಾಸ್ತ್ರಜ್ಞರ, ಸಾಹಿತ್ಯ, ಕಲೆಗೆ ಸಂಬಂಧಿಸಿದ ಪುಸ್ತಕಗಳ ಓದು ನನ್ನನ್ನು ಆ ಕೂಪದಿಂದ ಬಿಡುಗಡೆಗೊಳಿಸಿತು ಅಂತ ಕಾಣತ್ತೆ.

ಕಳೆದ ವರ್ಷ ಅಚಾನಕ್ ಒಂದು ದೂರವಾಣಿ ಕರೆ ಬಂತು, ನೋಡಿದರೆ ಕೊಟ್ಟೂರು ಶ್ರೀನಿವಾಸ್ ಅವರದ್ದು. ಅವರು ಆಗಲೇ ರಾಜ್ಯ ರೈತ ಸಂಘದ ಮುಖಂಡರಾಗಿ ಹಾಸನ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆ ದೂರವಾಣಿ ಕರೆ ಸುಮಾರು ಮೂವತೈದು ವರ್ಷಗಳ ನಂತರ ನಮ್ಮಿಬ್ಬರನ್ನು ಒಂದು ಮಾಡಿತ್ತು. ಆದರೆ
ಆ ಮಾತುಕತೆ ಕೊನೆಯ ಮಾತುಕತೆ ಎಂದು ತಿಳಿದಿರಲಿಲ್ಲ.

ಎಂ.ಎಸ್. ಪ್ರಕಾಶ್ ಬಾಬು

ಎಂ.ಎಸ್. ಪ್ರಕಾಶ್ ಬಾಬು
ಕಲಾವಿದ ಪ್ರಕಾಶ್ ಬಾಬು ಹಲವು ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದು, ಸದ್ಯಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಿನಿಮಾ ಶಿಕ್ಷಣದ ತರಬೇತಿ ನೀಡುತ್ತಿದ್ದಾರೆ. ಅವರು ನಿರ್ದೇಶಿಸಿದ ’ಅತ್ತಿಹಣ್ಣು ಮತ್ತು ಕಣಜ’ ಹಲವು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.


ಇದನ್ನೂ ಓದಿ: ನಾನೇಕೆ ಆರ್ ಎಸ್ ಎಸ್ ತೊರೆದೆ ಸರಣಿ; ದೇಶಕ್ಕಾಗಿ ಸಂಘದ ಸಖ್ಯ ಬಿಟ್ಟೆ!

ಇದನ್ನೂ ಓದಿ: ಆರ್.ಎಸ್.ಎಸ್ ಸಖ್ಯಕ್ಕೆ ಬಂದದ್ದು ಮತ್ತು ಪ್ರಶ್ನಿಸಿ ಹೊರಬಂದದ್ದು..

ಇದನ್ನೂ ಓದಿ: ‘ಸತಿ’ ಹೋದ ರೂಪ್ ಕನ್ವರ್‌ ದೇಗುಲಕ್ಕೆ ಆರೆಸ್ಸೆಸ್ ಬೆಂಬಲ ಮತ್ತು ನಾನು ಆರೆಸ್ಸೆಸ್ ತೊರೆದದ್ದು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. RSS ಸಂಘಟನೆಯಲ್ಲಿ ಇರಬೇಕಾದರೆ ಯಾವುದೋ ಅಲಕೆಟ್ಟ ಕೆಲಸ ಮಾಡಿರಬೇಕು ಹಾಗಾಗಿ ಸಂಘಟನೆ ಯಿಂದ ಹೊರಗೆ ಹಾಕಿರಬೇಕು .RSS ನಲ್ಲಿ ಇರೋಕು ಪುಣ್ಯ ಮಾಡಿರಬೇಕು .

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...