Homeಮುಖಪುಟವೈದಿಕರಿಂದ ’ಕೃಷ್ಣ’ನ ಅಪಹರಣ

ವೈದಿಕರಿಂದ ’ಕೃಷ್ಣ’ನ ಅಪಹರಣ

- Advertisement -
- Advertisement -

’ಶಿವ’ನನ್ನು ವೇದಪೂರ್ವ ಸಂಸ್ಕೃತಿಯಿಂದ ಅಪಹರಿಸಿ ವೈದಿಕ ದೇವತೆಯನ್ನಾಗಿ ಮಾಡಿಕೊಂಡ ಹಾಗೆಯೇ ವೈದಿಕ-ಆರ್ಯರು ವೈದಿಕನಲ್ಲದ ’ಕೃಷ್ಣ’ನನ್ನೂ ಅಪಹರಿಸಿ ಅವನನ್ನೂ ವೈದಿಕ ದೇವತೆಯನ್ನಾಗಿ ಮಾಡಿಕೊಂಡಿದ್ದಾರೆ.

ಕೃಷ್ಣ ಕಪ್ಪು ಬಣ್ಣದವ. ಆದುದರಿಂದ ಕೃಷ್ಣ ಶಬ್ದಕ್ಕೇ ಕಪ್ಪು ಎಂದು ಆರ್ಯರು ಅರ್ಥ ಕೊಟ್ಟಿರಬಹುದು. ಯಾಕೆಂದರೆ ಬ್ರಹ್ಮ ಕಪ್ಪು ಬಣ್ಣವನ್ನು ಶೂದ್ರರಿಗೆಂದೇ ನಿಗದಿ ಮಾಡಿದ್ದ. ಮಹಾಭಾರತದ ಶಾಂತಿ ಪರ್ವದಲ್ಲಿ (ಅಧ್ಯಾಯ 181, ಶ್ಲೋಕ 5) ಯುಧಿಷ್ಠಿರನಿಗೆ ಭೃಗು ಹೇಳುತ್ತಾನೆ: “ಬ್ರಾಹ್ಮಣಾನಾಂ ಸಿತೋ ವಣಃ ಕ್ಷತ್ರಿಯಾಣಾಂ ತು ಲೋಹಿತಃ, ವೈಶ್ಯಾನಾಂ ಪೀತಕೋ ವಣಃ ಶೂದ್ರಾಣಾಮಸಿತಸ್ತಥಾ”. ಬ್ರಾಹ್ಮಣರು ಪಡೆದ ಬಣ್ಣ ಬಿಳಿ, ಕ್ಷತ್ರಿಯರು ಪಡೆದ ಬಣ್ಣ ಕೆಂಪು, ವೈಶ್ಯರು ಪಡೆದ ಬಣ್ಣ ಹಳದಿ ಹಾಗೂ ಶೂದ್ರರು ಪಡೆದ ಬಣ್ಣ ಕಪ್ಪು. ವರ್ಣ ಶಬ್ದದ ಅರ್ಥವೂ ಬಣ್ಣ ಎಂದೇ ಅಲ್ಲವೇ? ಬ್ರಾಹ್ಮಣರು ಧರಿಸುವ ಯಜ್ಞೋಪವೀತ ಬೆಳ್ಳಗೆ ಇದ್ದರೆ ಉಚ್ಚ ವರ್ಣದವರು ಅಪ್ಪಿತಪ್ಪಿಯೂ ತಮ್ಮನ್ನು ಮುಟ್ಟಿ ದೂಷಿತವಾಗದಿರುವಂತೆ ಅಸ್ಪೃಶ್ಯರು ಕಪ್ಪು ಬಣ್ಣದ ದಾರವನ್ನು ತಮ್ಮ ಕೊರಳಲ್ಲಿ ಕಟ್ಟಿಕೊಳ್ಳಬೇಕಿತ್ತು ಎನ್ನುತ್ತಾರೆ ಡಾ. ಅಂಬೇಡ್ಕರ್.

ಕೃಷ್ಣ ಗೊಲ್ಲ. ಅಂದರೆ ಶೂದ್ರನೇ ಆಗಿರಬೇಕು. ಅಥವಾ ಭಾಗವತ ಪುರಾಣ ಹೇಳುವಂತೆ ಅರಣ್ಯಕನೋ? ವೈದಿಕರ ಮೂಲ ಗ್ರಂಥವಾದ ಋಗ್ವೇದದಲ್ಲಿ ಕೃಷ್ಣನ ಪ್ರಸ್ತಾಪವೇ ಇಲ್ಲ. ’ಕೃಷ್ಣ’ ಎಂಬ ಶಬ್ದ ಕೂಡ ಬಹುಶಃ ಒಂದೇ ಬಾರಿ ಬರುತ್ತದೆ. ಋಗ್ವೇದದ 9ನೆಯ ಮಂಡಲದ 41ನೆಯ ಸೂಕ್ತದ ಮೊದಲ ಋಕ್ಕು “ಪ್ರ ಯೆ ಗಾವೋ ನ ಭೂರ್ಣಯಸ್ತ್ವೇಷಾ ಅಯಾಸೋ ಅಕ್ರಮುಃ, ಘ್ನಂತಃ ಕೃಷ್ಣಾಮಯ ತ್ವಚಮ್” ಎಂದು ಹೇಳುತ್ತದೆ. ಋಗ್ವೇದವನ್ನು ಕನ್ನಡಕ್ಕೆ ಅನುವಾದಿಸಿ ಭಾಷ್ಯ ಬರೆದಿರುವ ಎಚ್.ಪಿ.ವೆಂಕಟರಾಯರು ಈ ಋಕ್ಕನ್ನು ಹೀಗೆ ಅನುವಾದಿಸಿದ್ದಾರೆ: “ಎಲೈ, ಋತ್ವಿಕ ಜನರೇ, ವೇಗವಾಗಿ ಹರಿಯುವ ಸ್ವಭಾವವುಳ್ಳ ಹಿಂಡಲ್ಪಟ್ಟ ಈ ಸೋಮರಸಗಳು ತಗ್ಗಾದ ಪ್ರದೇಶಕ್ಕೆ ಹರಿಯುವ ನೀರು ಬೇಗನೇ ನುಗ್ಗಿ ಹರಿಯುವಂತೆ ಅಥವಾ ಗೋವುಗಳು ತಮ್ಮ ಕೊಟ್ಟಿಗೆಯೊಳಗೆ ಬೇಗನೇ ಪ್ರವೇಶಿಸುವಂತೆ ಅಥವಾ ಸ್ತುತಿ ವಾಕ್ಯಗಳು ಉದ್ದಿಷ್ಟ ದೇವತೆಯನ್ನು ಬೇಗನೇ ಸಮೀಪಿಸುವಂತೆ, ಕಪ್ಪು ಜನರನ್ನು ಕೊಲ್ಲುತ್ತಾ ವೇಗವಾಗಿ ಪ್ರವಹಿಸುತ್ತವೆ. ಅಂತಹ ಈ ಸೋಮರಸಗಳನ್ನು ಸ್ತೋತ್ರಮಾಡಿರಿ”. ಅಂದರೆ ಇಲ್ಲಿ ಕೃಷ್ಣ ಶಬ್ದವನ್ನು ಕಪ್ಪು ಬಣ್ಣವನ್ನು ಸೂಚಿಸಲು ಪ್ರಯೋಗಿಸಲಾಗಿದೆಯೇ ಹೊರತು ’ಕೃಷ್ಣ’ನನ್ನಲ್ಲ. ಜೊತೆಗೆ ಇಲ್ಲಿ ಕಪ್ಪು ಜನರನ್ನು ಕೊಲ್ಲುವ ಬಗೆಗೆ ಹೇಳಲಾಗಿದೆ.

ಇಂತಹುದೇ ಇನ್ನೊಂದು ಪ್ರಸ್ತಾಪ ಋಗ್ವೇದದ 9ನೆಯ ಮಂಡಲದ ಇನ್ನೊಂದು ಸೂಕ್ತದಲ್ಲಿ ಬರುತ್ತದೆ. ಋಗ್ವೇದದ 9ನೆಯ ಮಂಡಲದ 73ನೆಯ ಸೂಕ್ತದ 5ನೆಯ ಋಕ್ಕು “ಪಿತುರ್ಮಾತುರಧ್ಯಾ ಯೆ ಸಮಸ್ವರನ್ನೃಚಾ ಶೋಚನ್ತಃ ಸಂದಹಂತೋ ಅವ್ರತಾನ್, ಇಂದ್ರದ್ವಿಷ್ಟಾಮಪ ಧಮಂತಿ ಮಾಯಯಾ ತ್ವಚಮಸಿಕ್ನೀಂ ಭೂಮನೋ ದಿವಸ್ಪರಿ” ಎಂದು ಹೇಳುತ್ತದೆ. ಇದನ್ನು ವೆಂಕಟರಾಯರು ಹೀಗೆ ಅನುವಾದಿಸಿದ್ದಾರೆ: “ಜಗತ್ತಿಗೆ ಮಾತಾಪಿತೃಗಳಾದ ಪೃಥಿವೀ ಮತ್ತು ದ್ಯುಲೋಕಗಳಿಂದ ಯಾವ ಸೋಮರಸಗಳು ಅತ್ಯಧಿಕವಾಗಿ ಉತ್ಪನ್ನವಾದವೋ ಅವು ಸ್ತುತಿಗಳೊಡನೆ ಕೂಡಿ, ಪ್ರಕಾಶಿಸುತ್ತಲೂ ಕರ್ಮರಹಿತರನ್ನು ದಹಿಸುತ್ತಲೂ ಇಂದ್ರನಿಗೆ ಅಪ್ರಿಯವಾದ ರಾತ್ರಿಯಂತಿರುವ ಅಂಧಕಾರಮಯವಾದ ರಾಕ್ಷಸನನ್ನು ತಮ್ಮ ಪ್ರಜ್ಞೆಯಿಂದ ಭೂಲೋಕದಿಂದಲೂ ದ್ಯುಲೋಕದಿಂದಲೂ ಓಡಿಸುತ್ತವೆ”. ಇಲ್ಲಿ ಕೂಡ ಕಪ್ಪು ಚರ್ಮದ ಬಗ್ಗೆ, ಕಪ್ಪು ರಾಕ್ಷಸರ ಬಗ್ಗೆ ಹೇಳಲಾಗಿದೆಯೇ ಹೊರತು ’ಕೃಷ್ಣ’ನ ಬಗ್ಗೆ ಅಲ್ಲ.

ವೈದಿಕರ ಮೊದಲ ಮಹಾಕಾವ್ಯ ವಾಲ್ಮೀಕಿಯ ರಾಮಾಯಣದಲ್ಲಿಯೂ ಕೃಷ್ಣನ ಪ್ರಸ್ತಾಪವಿಲ್ಲ, ಆದರೆ ಕಪ್ಪು ಬಣ್ಣದ ಬಗ್ಗೆ ತುಚ್ಛ ಭಾವನೆ ಕಂಡುಬರುತ್ತದೆ. ಉದಾಹರಣೆಗೆ ವಶಿಷ್ಠ ಋಷಿಯ ಮಕ್ಕಳು ತ್ರಿಶಂಕುವಿಗೆ ಶಾಪ ಕೊಟ್ಟಿದ್ದರಿಂದ ಅವನು ಕಪ್ಪು ಬಣ್ಣದವನಾಗುತ್ತಾನೆ. “ನೀಲವಸ್ತ್ರಧರೋ ನೀಲಃ ಪರುಷೋ ಧ್ವಸ್ತಮೂರ್ಧಜಃ, ಚಿತ್ಯಮಾಲ್ಯಾನುಲೇಪಶ್ಚ ಆಯಸಾಭರಣೋಭವತ್”, ಅಂದರೆ “ಅವನ ಬಟ್ಟೆ ಈಗ ಕಪ್ಪಗಾಗಿತ್ತು, ಅವನ ಮೈ ಬಣ್ಣವೂ ಕಪ್ಪಗಾಗಿತ್ತು…” ಆದರೆ ರಾಮನ ಬಗ್ಗೆ ಹೇಳುವಾಗ ಆತ ’ಶ್ಯಾಮ’ ಬಣ್ಣದವನಾಗಿದ್ದ ಎಂದು ರಾಮಾಯಣ ಹೇಳುತ್ತದೆ. ಉದಾಹರಣೆಗೆ ಅಯೋಧ್ಯಾ ಕಾಂಡದ ಅಧ್ಯಾಯ 34ರಲ್ಲಿ ರಾಮನ ಬಣ್ಣದ ಬಗ್ಗೆ “ತತಃಕಮಲಪತ್ರಾಕ್ಷಃ ಶ್ಯಾಮೋ ನಿರುಪಮೋ ಮಹಾನ್…” ಎಂದು ಹೇಳಲಾಗಿದೆ. ಸೀತೆಯನ್ನು ಹುಡುಕುತ್ತ ಹನುಮಂತ ಲಂಕೆಯ ಅಶೋಕವನವನ್ನು ಪ್ರವೇಶಿಸಿದಾಗ ಅಲ್ಲಿ ’ಕಪ್ಪು’ ಬಣ್ಣದ ರಾಕ್ಷಸಿಯರನ್ನು ನೋಡುತ್ತಾನೆ. “ವಿಕೃತಾ ಪಿಂಗಲಾಃ ಕಾಲೀಃ” (ವಾಲ್ಮೀಕಿ ರಾಮಾಯಣ 5.17.09).

ಪುರಾಣಗಳಲ್ಲಿಯೂ ಕಪ್ಪು ಬಣ್ಣದ ಬಗ್ಗೆ ತಾತ್ಸಾರವಿದೆ. ಉದಾಹರಣೆಗೆ ಪಾರ್ವತಿಯನ್ನು ಕಪ್ಪು ಬಣ್ಣದವಳೆಂದು ಶಿವ ಮೂದಲಿಸಿದ್ದಕ್ಕೆ ಪಾರ್ವತಿ ಕೋಪಿಸಿಕೊಂಡು ತಪಸ್ಸು ಮಾಡಿ ಬ್ರಹ್ಮ ಪ್ರತ್ಯಕ್ಷನಾದಾಗ ತನ್ನನ್ನು ಬಿಳಿ ಬಣ್ಣದವಳನ್ನಾಗಿ ಮಾಡಬೇಕೆಂದು ವರ ಕೇಳಿ ಪಡೆದು ’ಗೌರಿ’ಯಾಗಿದ್ದ ಪ್ರಸಂಗ ಸ್ಕಂದಪುರಾಣದಲ್ಲಿ ಬರುತ್ತದೆ.

ಋಗ್ವೇದದಲ್ಲಿ, ರಾಮಾಯಣದಲ್ಲಿ, ನಂತರ ಹಲವು ಪುರಾಣಗಳಲ್ಲೂ ಕಪ್ಪು ಬಣ್ಣದವರ ಬಗ್ಗೆ ಇಷ್ಟೊಂದು ಕೆಟ್ಟದಾಗಿ ಹೇಳುವ ವೈದಿಕರು ನಂತರ ಕಪ್ಪು ಬಣ್ಣದ ಕೃಷ್ಣನನ್ನು ಹೇಗೆ ಒಬ್ಬ ಪ್ರಮುಖ ದೇವತೆಯಾಗಿ ಒಪ್ಪಿಕೊಂಡರು? ಬರಿ ಒಪ್ಪಿಕೊಳ್ಳುವುದಲ್ಲ, ಋಗ್ವೇದದ ಪ್ರಮುಖ ದೇವತೆಯಾದ ಇಂದ್ರನನ್ನು ಮೀರುವಂತೆ ಮಾಡಿ ಅವನನ್ನು ವಿಷ್ಣುವಿನ ಒಂದು ಅವತಾರವನ್ನಾಗಿಸಿದರು?

ಋಗ್ವೇದದಲ್ಲಿ ಕೃಷ್ಣನ ಪ್ರಸ್ತಾಪವಿಲ್ಲದಿದ್ದರೂ, ನಂತರ ಕೃಷ್ಣನನ್ನು ಯಾವ ವಿಷ್ಣುವಿನ ಅವತಾರವೆಂದು ವೈಭವೀಕರಿಸಲಾಯಿತೋ ಆ ವಿಷ್ಣುವಿನ ಕುರಿತು ಸುಮಾರು ಐದು ಸೂಕ್ತಗಳಿವೆ. “ಋಗ್ವೇದದಲ್ಲಿ ವಿಷ್ಣು ಪರವಾದ ಸೂಕ್ತಗಳು ಕೇವಲ ಐದು ಮಾತ್ರ ಇವೆ. ಇದಲ್ಲದೇ ಅನೇಕ ಕಡೆ ಇತರ ದೇವತೆಗಳೊಡನೆ ಮುಖ್ಯವಾಗಿ ಇಂದ್ರನೊಡನೆ ವಿಷ್ಣುವಿನ ಹೆಸರು ಅಲ್ಲಲ್ಲಿ ಸೂಚಿತವಾಗಿದೆ” ಎನ್ನುತ್ತಾರೆ ಋಗ್ವೇದವನ್ನು ಕನ್ನಡಕ್ಕೆ ಅನುವಾದಿಸಿ ಅದರ ಮೇಲೆ ಸುದೀರ್ಘವಾದ ಭಾಷ್ಯವನ್ನು ಬರೆದಿರುವ ಎಚ್.ಪಿ.ವೆಂಕಟರಾಯರು.

ಋಗ್ವೇದ 1.22.19 “ವಿಷ್ಣೋಃ ಕರ್ಮಾಣಿ ಪಶ್ಯತ ಯತೋ ವ್ರತಾನಿ ಪಸ್ಪಶೇ, ಇಂದ್ರಸ್ಯ ಯುಜ್ಯಃ ಸಖಾ” ಎಂದು ಹೇಳುತ್ತದೆ. ಅಂದರೆ “ವಿಷ್ಣುವು ಇಂದ್ರನಿಗೆ ಜತೆಯಲ್ಲಿರುವ ಪರಮಮಿತ್ರನಾಗಿರುವನು” ಎನ್ನುತ್ತಾರೆ ವೆಂಕಟರಾಯರು. ಈ ಸಂದರ್ಭದಲ್ಲಿ ಸಾಯಣರು ತೈತ್ತರೀಯ ಸಂಹಿತೆಯನ್ನು (2.4.122) ಉದಾಹರಿಸಿ ವೃತ್ರನಿಂದ ಹೆದರಿ ಇಂದ್ರ ವಿಷ್ಣುವಿನ ಮೊರೆಹೋಗುವುದನ್ನೂ, ವಜ್ರಾಯುಧವನ್ನು ಎತ್ತಲು ಅಶಕ್ತನಾದ ಇಂದ್ರನಿಗೆ ಅದನ್ನು ಎತ್ತಲು ವಿಷ್ಣು ಸಹಾಯ ಮಾಡಿದ ಘಟನೆಯನ್ನು ವಿವರಿಸುತ್ತಾರೆ. ಕೊನೆಗೆ ಋಗ್ವೇದದ 6.20.2 ಇಂದ್ರ ಮತ್ತು ವಿಷ್ಣುಗಳಿಬ್ಬರೂ ಸೇರಿ ವೃತ್ರನನ್ನು ಸಂಹರಿಸಿದ್ದಾಗಿ ಹೇಳುತ್ತದೆ. “ದಿವೋ ನ ತುಭ್ಯಮನ್ವಿಂದ್ರ ಸತ್ರಾಸುರ್ಯಂ ದೇವೇಭಿರ್ದಾಯಿ ವಿಶ್ವಂ, ಅಹಿಂ ಯದ್ವಋತ್ರಮಪೋ ವವ್ರಿವಾಂಸಂ ಹನ್ನೃಜೀಷಿನ್ವಿಷ್ಣುನಾ ಸಚಾನಃ”.

ತಮಾಷೆ ಎಂದರೆ ಭಾಗವತ ಮಹಾಪುರಾಣದ ಪ್ರಕಾರ ವೃತ್ರ ವಿಷ್ಣುವಿನ ಭಕ್ತ. ಇಂದ್ರನೊಡನೆ ನಡೆದ ಕಾಳಗದಲ್ಲಿ ಆತ “ಅಹಂ ಹರೆ ತವ ಪಾದೈಕಮೂಲ ದಾಸಾನುದಾಸೋ ಭವಿತಾಸ್ಮಿ ಭೂಯಃ, ಮನಃ ಸ್ಮರೇತಾಸುಪತೆರ್ಗುಣಾಂಸ್ತೆ ಗೃಣೀತ ವಾಕ್ಕರ್ಮ ಕರೋತು ಕಾಯಃ (ಭಾಗವತ ಮಹಾ ಪುರಾಣ 6.11.24) – ಓ ಹರಿಯೇ ನಿನ್ನ ಪಾದಗಳೇ ಸಂಪೂರ್ಣ ಆಶ್ರಯವಾಗಿರುವ ನಿನ್ನ ಭಕ್ತರ ದಾಸರ ದಾಸ ನಾನು. ನನ್ನ ಬದುಕಿನ ಪ್ರಭುವಾದ ನಿನ್ನ ಶ್ರೇಷ್ಠತೆಯಲ್ಲಿ ನನ್ನ ಮನಸ್ಸು ತೊಡಗಿಕೊಂಡಿರಲಿ, ನನ್ನ ವಾಣಿ ಅದನ್ನು ಶ್ಲಾಘಿಸುತ್ತಿರಲಿ, ನನ್ನ ದೇಹ ನಿನ್ನ ಸೇವೆ ಮಾಡುತ್ತಿರಲಿ” ಎಂದು ತನ್ನನ್ನು ಕೊಲ್ಲಲು ಇಂದ್ರನಿಗೆ ಸಹಾಯ ಮಾಡಿದ ವಿಷ್ಣುವನ್ನು ಪ್ರಾರ್ಥಿಸುತ್ತಾನೆ. ಅಷ್ಟಾದರೂ ಇಂದ್ರ ವೃತ್ರನನ್ನು ಕೊಲ್ಲುತ್ತಾನೆ.

ಋಗ್ವೇದದಲ್ಲಿ ಇಷ್ಟರಮಟ್ಟಿಗೆ ಇದ್ದ ವಿಷ್ಣು ಮತ್ತು ಇಂದ್ರರ ಗೆಳೆತನವನ್ನು ಬೇಧಿಸಿ ಯಾವಾಗ ಕೃಷ್ಣ ಋಗ್ವೇದದ ಇಂದ್ರನನ್ನು, ಬೇರೆ ಮಹಾರಥಿಗಳನ್ನು ಸೋಲಿಸಿ ಆರ್ಯರ ಸೊಕ್ಕನ್ನಡಗಿಸಿದನೋ ಬಹುಶಃ ಅಂದಿನಿಂದಲೇ ಪ್ರಾರಂಭವಾಗಿರಬೇಕು ಆರ್ಯರಿಂದ ಕೃಷ್ಣನ ಅಪಹರಣ.

ಮಹಾಭಾರತದಲ್ಲಿ ಕೃಷ್ಣ ಆರ್ಯದೇವತೆಗಳನ್ನು ಸೋಲಿಸಿದ ಪ್ರಸ್ತಾಪಗಳಿವೆ. ಇಂದ್ರನ ಕೋಪದಿಂದಾಗಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದ ಹಸುಗಳನ್ನು, ವೃಂದಾವನದ ಜನರನ್ನು ರಕ್ಷಿಸಲು ಕೃಷ್ಣ ಒಂದು ವಾರ ಇರುವೆಗಳ ಗೂಡಿನಂತಿದ್ದ ಗೋವರ್ಧನ ಪರ್ವತವನ್ನು ತನ್ನ ’ಕಿರುಬೆರಳಿ’ನಲ್ಲಿ ಕೊಡೆಯಂತೆ ಎತ್ತಿ ಹಿಡಿದದ್ದು ಏನು ಮಹಾ ಕೆಲಸ ಎಂದು ಶಿಶುಪಾಲ ಮೂದಲಿಸುತ್ತಾನೆ. ವಲ್ಮೀಕಮಾತ್ರಃ ಸಪ್ತಾಹಂ ಯದ್ಧನೇನ ಧೃತೋಚಲಃ ತದಾ ಗೋವರ್ಧನೊ ಭೀಷ್ಮ ನ ತಚ್ಚಿತ್ರಂ ಮತಂ ಮಮ. (ಮಹಾಭಾರತ 2.38.9).

ಕೃಷ್ಣನನ್ನು ಬಂಧಿಸಬೇಕೆಂದು ದುರ್ಯೋಧನ ಹೊಂಚುಹಾಕುತ್ತಿದ್ದ ಸಂದರ್ಭದಲ್ಲಿ, “ಕೃಷ್ಣ ಮಗುವಾಗಿದ್ದಾಗಲೇ ಪೂತನೆಯನ್ನೂ, ಪಕ್ಷಿಗಳ ರೂಪ ಧರಿಸಿದ ಇಬ್ಬರು ಅಸುರರನ್ನೂ ಕೊಂದಿದ್ದ, ಹಸುಗಳನ್ನು ರಕ್ಷಿಸಲು ಗೋವರ್ಧನ ಪರ್ವತವನ್ನು ಎತ್ತಿ ಹಿಡಿದಿದ್ದ… ಅತ್ಯಂತ ಬಲಶಾಲಿಯಾದ ಆತ ವರುಣನನ್ನೂ, ಅಗ್ನಿಯನ್ನೂ ಹಾಗೂ ಪಾರಿಜಾತ ಪುಷ್ಪವನ್ನು ತರುವಾಗ ಸ್ವತಃ ಇಂದ್ರನನ್ನೇ ಸೋಲಿಸಿದ್ದ” ಎಂದು ವಿದುರ ದುರ್ಯೋಧನನಿಗೆ ಹೇಳುತ್ತಾನೆ. ಅನೇನ ಹಿ ಹತಾ ಬಾಲ್ಯೆ ಪೂತನಾ ಶಿಶುನಾ ತಥಾ, ಗೋವರ್ಧನೋ ಧಾರಿತಶ್ಚ ಗವಾರ್ಥೆ ಭರತರ್ಷಭ. ವರುಣೊ ನಿರ್ಜಿತೊ ರಾಜಾ ಪಾವಕಶ್ಚಾಮಿತೌಜಸಾ, ಪಾರಿಜಾತಂ ಚ ಹರತಾ ಜಿತಃ ಸಾಕ್ಷಾಚ್ಛಚೀಪತಿಃ. (ಮಹಾಭಾರತ 5.128.45 ಮತ್ತು 48).

ಇದನ್ನೂ ಓದಿ: ವೈದಿಕರಿಂದ ’ಶಿವ’ನ ಅಪಹರಣವಾದದ್ದು ಹೇಗೆ?

ತಮ್ಮ ’ಹಿಂದೂ ಮಿಥ್ಸ್’ ಎಂಬ ಪುಸ್ತಕದಲ್ಲಿ ವೆಂಡಿ ಡೊನಿಗರ್, “ರಾಮನಂತೆ ಕೃಷ್ಣನು ’ಮಹಾನ್ ವ್ಯಕ್ತಿ’ ಮತ್ತು ಎರಡು ಅರ್ಥಗಳಲ್ಲಿ ಆತ ಮಹಾನ್ ವ್ಯಕ್ತಿಯಾಗಿದ್ದಾನೆ. ಆತ ಸಂಸ್ಕೃತದ ಎರಡು ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಕಾಣಿಸಿಕೊಳ್ಳುತ್ತಾನೆ, ಮತ್ತು ಆತ ಒಬ್ಬ ಮಹಾನ್ ವೀರ ಮತ್ತು ಯೋಧ ಮತ್ತು ರಾಜ ಆಗದ್ದಾನೆ. ಅವನು ರಾಮನಂತೆ ಒಬ್ಬ ಅಮರ ಯೋಧ, ಆದರೆ ರಾಮನಂತೆ ಮಹಾಕಾವ್ಯದ ಕೇಂದ್ರವಲ್ಲ. ಆತ ಅನೇಕರಲ್ಲಿ ಒಬ್ಬ ಮಾತ್ರ. ವಿಷ್ಣುವಿನೊಂದಿಗೆ ಅವನ ಗುರುತಿಸುವಿಕೆ ಮಹಾಕಾವ್ಯದ ನಂತರದ ಭಾಗಗಳಲ್ಲಿ ಮಾತ್ರ ಕಂಡುಬರಲು ಪ್ರಾರಂಭಿಸುತ್ತದೆ” ಎನ್ನುತ್ತಾರೆ. (ಪುಟ 204) ಅನುಶಾಸನ ಪರ್ವದಲ್ಲಿ ವಿಷ್ಣುವಿನ ಸಾವಿರ ಹೆಸರುಗಳನ್ನು ಯುಧಿಷ್ಠಿರನಿಗೆ ಹೇಳುವಾಗ ಭೀಷ್ಮ ಕೃಷ್ಣ ಹಾಗೂ ವಿಷ್ಣುಗಳನ್ನು ಏಕೀಭವಿಸಿ ಈ ಸಾವಿರ ಹೆಸರುಗಳನ್ನು ಹೇಳುತ್ತಾನೆ.

ಆದರೆ ವಿಷ್ಣುವಿನೊಂದಿಗಿನ ಈ ಗುರುತಿಸಿಕೊಳ್ಳುವಿಕೆಯನ್ನು ಪುರಾಣಗಳ ಹೊತ್ತಿಗೆ ಕೃಷ್ಣ ಮೀರುತ್ತಾನೆ, ತನ್ನ ಸ್ವತಂತ್ರ ಅಸ್ತಿತ್ವ ಸ್ಥಾಪಿಸಿಕೊಳ್ಳುತ್ತಾನೆ. 12ನೆಯ ಶತಮಾನದ ಹೊತ್ತಿಗೆ ತನ್ನ ಗೀತ ಗೋವಿಂದದಲ್ಲಿ, ಕವಿ ಜಯದೇವ, ವಿಷ್ಣುವನ್ನಲ್ಲ, ಕೃಷ್ಣನನ್ನೇ ದಶಾವತಾರಗಳ ಮೂಲ ಎಂದು ಬಿಂಬಿಸುತ್ತಾನೆ.

ಭಾಗವತ ಮಹಾಪುರಾಣದ ಪ್ರಕಾರ ವೃತ್ರ ವಿಷ್ಣುವಿನ ಭಕ್ತ. ಇಂದ್ರನೊಡನೆ ನಡೆದ ಕಾಳಗದಲ್ಲಿ ಆತ “ಅಹಂ ಹರೆ ತವ ಪಾದೈಕಮೂಲ ದಾಸಾನುದಾಸೋ ಭವಿತಾಸ್ಮಿ ಭೂಯಃ, ಮನಃ ಸ್ಮರೇತಾಸುಪತೆರ್ಗುಣಾಂಸ್ತೆ ಗೃಣೀತ ವಾಕ್ಕರ್ಮ ಕರೋತು ಕಾಯಃ” – ಓ ಹರಿಯೇ ನಿನ್ನ ಪಾದಗಳೇ ಸಂಪೂರ್ಣ ಆಶ್ರಯವಾಗಿರುವ ನಿನ್ನ ಭಕ್ತರ ದಾಸರ ದಾಸ ನಾನು. ನನ್ನ ಬದುಕಿನ ಪ್ರಭುವಾದ ನಿನ್ನ ಶ್ರೇಷ್ಠತೆಯಲ್ಲಿ ನನ್ನ ಮನಸ್ಸು ತೊಡಗಿಕೊಂಡಿರಲಿ, ನನ್ನ ವಾಣಿ ಅದನ್ನು ಶ್ಲಾಘಿಸುತ್ತಿರಲಿ, ನನ್ನ ದೇಹ ನಿನ್ನ ಸೇವೆ ಮಾಡುತ್ತಿರಲಿ” ಎಂದು ತನ್ನನ್ನು ಕೊಲ್ಲಲು ಇಂದ್ರನಿಗೆ ಸಹಾಯ ಮಾಡಿದ ವಿಷ್ಣುವನ್ನು ಪ್ರಾರ್ಥಿಸುತ್ತಾನೆ. ಅಷ್ಟಾದರೂ ಇಂದ್ರ ವೃತ್ರನನ್ನು ಕೊಲ್ಲುತ್ತಾನೆ.

ಕೃಷ್ಣನ ಮಹಿಮೆಯನ್ನೇ ವಿವರಿಸಲು ರಚಿಸಲಾದ ಭಾಗವತ ಮಹಾಪುರಾಣ ಕೃಷ್ಣ ಹೇಗೆ ಋಗ್ವೇದದಲ್ಲಿ ದೇವೇಂದ್ರನಾಗಿ ಮೆರೆದ ಇಂದ್ರನನ್ನು ಅವಮಾನಗೊಳಿಸಿ, ಸೋಲಿಸಿ ತನ್ನ ವರ್ಚಸ್ಸನ್ನು ಬೆಳೆಸಿಕೊಳ್ಳುತ್ತಾನೆ, ಇಂದ್ರಾದಿಗಳನ್ನು ಮೀರಿ ಹಿಂದೂಗಳ ಆರಾಧ್ಯ ದೈವವಾಗಿ ಬೆಳೆಯುತ್ತಾನೆ ಎನ್ನುವುದನ್ನು ವಿವರಿಸುತ್ತದೆ. ಇಂತಹುದೇ ವಿವರಣೆಯನ್ನು ವಿಷ್ಣು ಪುರಾಣ ಹಾಗೂ ಹರಿವಂಶಗಳಲ್ಲೂ ಕೊಡಲಾಗಿದೆ.

ವ್ರಜಭೂಮಿಯ ಗೋಪರು ಇಂದ್ರನನ್ನು ಓಲೈಸಲು ಯಜ್ಞವನ್ನು ಮಾಡಲು ಸಿದ್ಧತೆಗಳನ್ನು ನಡೆಸಿದಾಗ ಕೃಷ್ಣ ತನ್ನ ತಂದೆಗೆ “ನ ನಃ ಪುರೋ ಜನಪದಾ ನ ಗ್ರಾಮಾ ನ ಗೃಹಾ ವಯಮ್, ನಿತ್ಯಂ ಚನೌಕಸಸ್ತಾತ ವನಶೈಲನಿವಾಸಿನಃ” (ಭಾಗವತ ಮಹಾಪುರಾಣ 10.24.24). ಅಂದರೆ “ತಂದೆಯವರೇ, ನಮ್ಮ ಅಧೀನದಲ್ಲಿ ಯಾವುದೇ ರಾಜ್ಯವಾಗಲೀ, ಪಟ್ಟಣವಾಗಲೀ, ಊರಾಗಲೀ ಹಳ್ಳಿಯಾಗಲೀ ಇರುವುದಿಲ್ಲ. ನಮಗೆ ಮನೆ-ಮಠಗಳು ಇಲ್ಲ, ನಾವಾದರೋ ವನವಾಸಿಗಳು, ವನ ಮತ್ತು ಪರ್ವತವೇ ನಮ್ಮ ಮನೆಯಾಗಿದೆ. ಹಾಗಿದ್ದಲ್ಲಿ ನಾವು ಪರ್ವತವನ್ನು ಪೂಜಿಸಬೇಕೇ ಹೊರತು ಅನ್ಯ ದೇವತೆಗಳನ್ನಲ್ಲ” ಎನ್ನುವ ಮೂಲಕ ಇಂದ್ರನನ್ನು ಪರೋಕ್ಷವಾಗಿ ಧಿಕ್ಕರಿಸುತ್ತಾನೆ. ಇಷ್ಟಕ್ಕೆ ನಿಲ್ಲದೇ ಇನ್ನೂ ಕಟುವಾಗಿ “ಅಜೀವೈಕತರಂ ಭಾವಂ ಯಸ್ತ್ವನ್ಯಮುಪಜೀವತಿ, ನ ತಸ್ಮಾದ್ವಿಂದತೇ ಕ್ಷೇಮಂ ಜಾರಂ ನಾರ್ಯಸತೀ ಯಥಾ” ಎನ್ನುತ್ತಾನೆ. (ಭಾಗವತ ಮಹಾಪುರಾಣ – 10.24.19). ಅಂದರೆ “ತನ್ನ ವಿವಾಹಿತ ಪತಿಯನ್ನು ತೊರೆದು ಜಾರರನ್ನು ಸೇವಿಸುವ ವ್ಯಭಿಚಾರಿಣಿ ಸ್ತ್ರೀಯು ಎಂದಿಗೂ ಶಾಂತಿಯನ್ನು ಪಡೆಯಲಾರಳು, ಹಾಗೆಯೇ ತನ್ನ ಜೀವನ ನಿರ್ವಾಹ ನಡೆಸುವ ಒಂದು ದೇವತೆಯನ್ನು ಬಿಟ್ಟು ಬೇರೆ ದೇವರನ್ನು ಉಪಾಸಿಸುವ ಮನುಷ್ಯನಿಗೆ ಎಂದಿಗೂ ಸುಖವು ಸಿಗಲಾರದು” ಎಂದೂ ಮೂದಲಿಸುತ್ತಾನೆ. ಅವನ ಮಾತನ್ನು ಕೇಳಿ ಗೋಪರು ಇಂದ್ರನನ್ನು ಓಲೈಸುವ ಬದಲು ಗೋವರ್ಧನವನ್ನು ಪೂಜಿಸಲು ಪ್ರಾರಂಭಿಸಿದಾಗ ಕೋಪಗೊಂಡ ಇಂದ್ರನು ಧಾರಾಕಾರವಾಗಿ ಮಳೆ ಸುರಿಸಿ ಗೋಪರ ಬದುಕನ್ನು ಗೋಳಿಗೀಡು ಮಾಡುತ್ತಾನೆ. ಆಗ ಕೃಷ್ಣ ಗೋವರ್ಧನ ಪರ್ವತವನ್ನೇ ಕಿತ್ತು ಕೊಡೆಯಂತೆ ಎತ್ತಿ ಹಿಡಿದು ಅದರಡಿ ಗೋಪರನ್ನು, ಹಸುಗಳನ್ನೂ ಬರಹೇಳಿ ಮಳೆಯಿಂದ ಕಾಪಾಡುತ್ತಾನೆ. ಇದರಿಂದಾಗಿ ಇಂದ್ರನ ಗರ್ವಭಂಗವಾಗುತ್ತದೆ.

“ಗೋವರ್ಧನೇ ಧೃತೇ ಶೈಲ ಆಸಾರಾದ್ರಕ್ಷಿತೇ ವ್ರಜೇ, ಗೋಲೋಕಾದಾವ್ರಜತ್ ಕೃಷ್ಣಂ ಸುರಭಿಃ ಶಕ್ರ ಏವ ಚ. ವಿವಿಕ್ತ ಉಪಸಂಗಮ್ಯ ವ್ರೀಡಿತಃ ಕ್ಥೇಲನಃ, ಪಸ್ಪರ್ಷ ಪಾದಯೋರೇನಂ ಕಿರೀಟೆನಾರ್ಕವರ್ಚಸಾ. (ಭಾಗವತ ಮಹಾಪುರಾಣ. 10.27.1 ಮತ್ತು 2). “ಭಗವಾನ್ ಶ್ರೀಕೃಷ್ಣನು ಗಿರಿರಾಜ ಗೋವರ್ಧನವನ್ನು ಎತ್ತಿ ಹಿಡಿದು ಮುಸಲಾಧಾರ ವರ್ಷದಿಂದ ವ್ರಜವನ್ನು ಕಾಪಾಡಿದಾಗ ಗೋಲೋಕದಿಂದ ಕಾಮಧೇನುವು ಅವನನ್ನು ಅಭಿನಂದಿಸಲಿಕ್ಕಾಗಿ ಮತ್ತು ಸ್ವರ್ಗಲೋಕದಿಂದ ದೇವೇಂದ್ರನು ಕ್ಷಮಾಪಣೆಯನ್ನು ಯಾಚಿಸಲು ಶ್ರೀಕೃಷ್ಣನ ಬಳಿಗೆ ಬಂದರು. ಭಗವಂತನನ್ನು ತಿರಸ್ಕರಿಸಿದ್ದರಿಂದ ಇಂದ್ರನು ಬಹಳ ಲಜ್ಜಿತನಾಗಿದ್ದನು. ಅದಕ್ಕಾಗಿ ಅವನು ಏಕಾಂತದಲ್ಲಿ ಭಗವಂತನ ಬಳಿಗೆ ಹೋಗಿ ಸೂರ್ಯನಂತೆ ತೇಜಸ್ವಿಯಾದ ತನ್ನ ಮುಕುಟದಿಂದ ಅವನ ಚರಣಗಳನ್ನು ಸ್ಪರ್ಶಿಸಿದನು”. ನಂತರ ಇಂದ್ರಾದಿ ದೇವತೆಗಳು ಕೃಷ್ಣನ ಅಭಿಷೇಕ ಮಾಡಿ ಅವನಿಗೆ ಪಟ್ಟಕಟ್ಟುತ್ತಾರೆ. (ಭಾಗವತ ಮಹಾಪುರಾಣದ ಶ್ಲೋಕಗಳ ಕನ್ನಡ ಅನುವಾದವನ್ನು ಪಂಡಿತ ಅಳಸಿಂಗಾಚಾರ್ಯ ಮಾಡಿದ್ದಾರೆ).

“ಇಂದ್ರ ಗೋಪಾಲಕರನ್ನು ಶಿಕ್ಷಿಸಲು ಸತತವಾಗಿ ಮಳೆ ಸುರಿಸಿ ಮಾಡಿದ ಪ್ರಯತ್ನ ಮತ್ತು ಕೃಷ್ಣ ಗೋವರ್ಧನ ಪರ್ವತವನ್ನು ಕೊಡೆಯಂತೆ ಎತ್ತಿ ಹಿಡಿದು ಮಾಡಿದ ಅವರ ರಕ್ಷಣೆ ವೈದಿಕ ಧರ್ಮದ ಹಿಂಜರಿತ ಮತ್ತು ಕೃಷ್ಣಪಂಥದ ಪ್ರಗತಿಯನ್ನು ಸೂಚಿಸುತ್ತದೆ” ಎನ್ನುತ್ತಾರೆ ಭಾಗವತ ಮಹಾಪುರಾಣವೂ ಸೇರಿದಂತೆ ಹಲವಾರು ಪುರಾಣಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿದ ಜಿ.ವಿ.ಟಗರೆಯವರು.

ಹೀಗೆ ವೈದಿಕ-ಆರ್ಯರು ವೈದಿಕನಲ್ಲದ ’ಕೃಷ್ಣ’ನನ್ನೂ ಅಪಹರಿಸಿ ವೈದಿಕ ದೇವತೆಯನ್ನಾಗಿಸಿಕೊಂಡಿದ್ದಕ್ಕೆ ಹಲವು ಉದಾಹರಣೆಗಳು ಪುರಾಣಗಳಲ್ಲಿ ದೊರಕುತ್ತವೆ.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ? ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...