Homeಚಳವಳಿಭಾರತದ ಪ್ರಜಾಪ್ರಭುತ್ವವನ್ನು ತಲೆಕೆಳಗಾಗಿಸುತ್ತಿರುವುದು ಹೇಗೆ?: ತೀಸ್ತಾ ಸೆಟ್ಲ್‍ವಾಡ್

ಭಾರತದ ಪ್ರಜಾಪ್ರಭುತ್ವವನ್ನು ತಲೆಕೆಳಗಾಗಿಸುತ್ತಿರುವುದು ಹೇಗೆ?: ತೀಸ್ತಾ ಸೆಟ್ಲ್‍ವಾಡ್

- Advertisement -
- Advertisement -

ತೀಸ್ತಾ ಸೆಟಲ್‍ವಾಡ್ ಅವರು ಗುಜರಾತಿನ ಸೆಟಲ್‍ವಾದ್ ಕುಟುಂಬದ ಕುಡಿ. ಇವರ ತಾತ ಎಂ.ಸಿ.ಸೆಟಲ್‍ವಾಡ್ ಅವರು ಭಾರತದ ಮೊದಲ ಅಟಾರ್ನಿ ಜನರಲ್ ಆಗಿದ್ದವರು. ಅವರ ತಂದೆ ಜಲಿಯನ್‍ವಾಲಾಬಾಗ್‍ನ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಜನರಲ್ ಡೈಯರ್ ಅನ್ನು ಕಟಕಟೆಯಲ್ಲಿ ಪ್ರಶ್ನಿಸಿದ ವಕೀಲರು ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ತೀಸ್ತಾ ಭಾರತದ ಅತಿಪ್ರಮುಖ ಮಾನವ ಹಕ್ಕು ಹೋರಾಟಗಾರ್ತಿ. ನ್ಯಾಯ ಮತ್ತು ಶಾಂತಿಗಾಗಿ ನಾಗರಿಕರು ಸಂಘಟನೆಯ ಮೂಲಕ, ಗುಜರಾತಿನ ಕೋಮುಗಲಭೆಯ ಬಲಿಪಶುಗಳಿಗೆ ನ್ಯಾಯ ದೊರಕಿಸಲು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಗುಜರಾತಿನ ಪ್ರಮುಖ ಅನೇಕರಿಗೆ ಜೈಲು ಶಿಕ್ಷೆಯಾಗುವಲ್ಲಿ ಪಾತ್ರ ವಹಿಸಿದವರು. ಭಾರತದ ಎಲ್ಲ ಪ್ರಜಾತಾಂತ್ರಿಕ ಹೋರಾಟಗಳ ಒಡನಾಡಿಯಾದ ತೀಸ್ತಾ ಗೌರಿ ಲಂಕೇಶ್ ಅವರ ಆಪ್ತ ಗೆಳತಿಯಾಗಿದ್ದರು. ಇವರ ಈ ಲೇಖನವನ್ನು ರಾಜಶೇಖರ್ ಅಕ್ಕಿ ಕನ್ನಡಕ್ಕೆ ಅನುವಾದಿಸಿದ್ದಾರೆ.

2014ರ ಮೇ 26 ಮತ್ತು 2019ರ ಮೇ 30ರ ಕಾರ್ಯಕ್ರಮಗಳ ಸುತ್ತಲಿನ ಸಂಭ್ರಮಾಚರಣೆಗಳಲ್ಲಿ ಒಂದು ಸಣ್ಣ ವ್ಯತ್ಯಾಸ ಕಂಡುಬಂದಿತು. ಈ ಐದು ವರ್ಷಗಳ ಅಂತರದಲ್ಲಿ ನಡೆದ ಎರಡೂ ದಿನಾಂಕಗಳು ಭಾರಿ ಬಹುಮತದಿಂದ ಒಂದು ಪ್ರಾಬಲ್ಯವಾದಿ ಸರಕಾರದ ಪ್ರಮಾಣವಚನಕ್ಕೆ ಸಾಕ್ಷಿಯಾದವು. 2014ರ ವಿಜಯವು ತಾತ್ಕಾಲಿಕವಾಗಿದ್ದರೂ ವಿಜಯೋತ್ಸಾಹದಿಂದ ಕೂಡಿತ್ತು; ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರನ್ನು ಒಳಗೊಂಡು ದಕ್ಷಿಣ ಏಷಿಯಾದ ಅನೇಕ ನಾಯಕರನ್ನು ಮತ್ತು ಇತರರನ್ನು ಭಾಗವಹಿಸಲು ಆಹ್ವಾನಿಸುವ ಒಂದು ಕಥನ ಮತ್ತು ಪ್ರದರ್ಶನದ ಪ್ರಯತ್ನ ಮಾಡಲಾಯಿತು. ಭಾರತದ ಅತಿಗಣ್ಯರು ಮತ್ತು ಬಾಲಿವುಡ್‍ನ ಸ್ಟಾರ್‍ಗಳು ದೆಹಲಿಯ ರಾಷ್ಟ್ರಪತಿ ಭವನದ ವೇದಿಕೆ ಅಲಂಕರಿಸಿದಾಗ, ನೆರೆರಾಷ್ಟ್ರಗಳಿಗೆ ಭಾರತವು ದೊಡ್ಡಣ್ಣ ಎನ್ನುವ ಸಂದೇಶವನ್ನು ಬಿತ್ತರಿಸಲಾಯಿತು.

ಇತಿಹಾಸವನ್ನು ಸೃಷ್ಟಿಸುವ ಇರಾದೆ ಮತ್ತು ಕೆಲವು ಆರಂಭಿಕ ಅಡೆತಡೆಗಳನ್ನು ಮೀರಲು ಪ್ರಯತ್ನಿಸುತ್ತಿದ್ದ ಮೋದಿ ಎಂದಿಗೂ ಒಂದು ಭವ್ಯವಾದ ಕಥನವನ್ನು ಸೃಷ್ಟಿಸುವುದರಲ್ಲಿ ಮುಂದೆ ಇದ್ದವರು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಒಬ್ಬ ಸುಪರಿಚಿತ ಅಂತರರಾಷ್ಟ್ರೀಯವಾದಿಯಾಗಿದ್ದರು. ತಮ್ಮ ಸಮಾಜವಾದಿ ಬೇರುಗಳಿಂದ ಬಲಗೊಂಡ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೊಂದಿಗಿನ ಸಹಯೋಗದಲ್ಲಿ ಗಟ್ಟಿಯಾದ ನಂಬಿಕೆ ಹೊಂದಿದ್ದ ನೆಹರು, ಇತರ ಸಮಕಾಲೀನ ನಾಯಕರೊಂದಿಗೆ ನಾನ್ ಅಲೈನ್‍ಡ್ ಮೂವಮೆಂಟ್ ಹುಟ್ಟಿಬೆಳೆಯಲು ಕಾರಣರಾದರು. ಅದೆಲ್ಲ 90ರ ದಶಕದಲ್ಲಿ ಬದಲಾಗಲು ಪ್ರಾರಂಭಿಸಿತು.

‘ನಿಯಂತ್ರಣಕ್ಕೊಳಗಾದ ಆರ್ಥಿಕತೆಯಿಂದ ಭಾರತವನ್ನು ಮುಕ್ತಗೊಳಿಸಲು’ ಬದ್ಧವಾದ ಅಂದಿನ ಕಾಂಗ್ರೆಸ್ ನಾಯಕತ್ವವು ನವಉದಾರೀಕರಣದ ಆರ್ಥಿಕತೆಯ ದಾರಿಯನ್ನು ಆಯ್ಕೆ ಮಾಡಿತು, ಅದರೊಂದಿಗೆ ಅಮೆರಿಕದೊಂದಿಗೆ ನಿಕಟ ಸಂಬಂಧ ಪ್ರಾರಂಭವಾಯಿತು. ಹಿಂದೂ ಪ್ರಾಬಲ್ಯವಾದಿಗಳ ಎನ್‍ಡಿಎ-1 ಆಡಳಿತದ ಸಮಯದಲ್ಲಿ, ಪ್ಯಾಲೆಸ್ಟೇನ್‍ನ ಪ್ರಶ್ನೆಯಿಂದಾಗಿ ಜೊತೆಗೆ ಸೇರಿಸಿಕೊಳ್ಳಲಾಗದ ಇಸ್ರೇಲ್ ಕೂಡ ಶತ್ರುವಿನಿಂದ ಮಿತ್ರರಾಷ್ಟ್ರವಾಗಿ ಬದಲಾಯಿತು.

ಮೋದಿಯ ಮೊದಲ ಗೆಲುವಿಗೆ ಕಾರಣವೆಂದರೆ ಉಗ್ರ ಪ್ರಚಾರ, ಮುಚ್ಚುಮರೆಯಿಲ್ಲದ ಛೂಬಿಟ್ಟ ಹಿಂಸೆ, ‘ನಾವು’ ವರ್ಸಸ್ ‘ಅವರು’ ಎನ್ನುವ ಕಥನ. ಇಲ್ಲಿ ‘ನಾವು’ ಎಂದರೆ ‘ಹಿಂದೂ ಭಾರತ’ (ಈ ಪದದೊಂದಿಗೆ ಬರುವ ಜಾತಿಯ ತೊಡಕುಗಳೊಂದಿಗೆ ಬರುವ ವಿಂಗಡನೆಗಳನ್ನು ನಿರ್ಲಕ್ಷಿಸುವ). ತನ್ನ ಚುನಾವಣಾ ಗೆಲುವಿನ ವೈಭವವನ್ನು ಹಂಚಿಕೊಳ್ಳಲು ‘ಶತ್ರುರಾಷ್ಟ್ರ’ ಪಾಕಿಸ್ತಾನವನ್ನು ಆಹ್ವಾನಿಸಿದ್ದು, ಇವೆಲ್ಲವುಗಳನ್ನು ಭಾರತದ ಆಡಳಿತದ ಕಥನದಲ್ಲಿ ಆಗಬಹುದಾದ ಬದಲಾವಣೆ ಎಂದು ಅನೇಕರಿಂದ ತಪ್ಪಾಗಿ ಬಿಂಬಿಸಲಾಯಿತು. ಕೆಳವರ್ಗದಿಂದ ಬಂದ ‘ಟೀ ಮಾರುವವ’ ಎಂದು ಬಿಂಬಿಸಿ, ಅದೇ ವ್ಯಕ್ತಿ 10 ಲಕ್ಷ ರೂಪಾಯಿಗಳ ಸೂಟನ್ನು ತೊಟ್ಟು, ಒಂದು ಲಕ್ಷ ರೂಪಾಯಿಗಳ ಮಾಂಟ್‍ಬ್ಲಾಂಕ್ ಲೇಖನಿಯನ್ನು ಹಿಡಿದು ಸಹಿ ಮಾಡುವ ಮಟ್ಟಿಗೆ ವೈಯಕ್ತಿಕ ಆಸ್ತಿಯನ್ನು ಪ್ರದರ್ಶಿಸಿದರೂ ಆ ವ್ಯಕ್ತಿಯ ಹಿಂಬಾಲಕರಿಗೆ ಯಾವುದೇ ಮುಜುಗರವಿರಲಿಲ್ಲ.

ಆ ಆಳ್ವಿಕೆಯ ಮೊದಲ ಐದು ವರ್ಷಗಳು ಮುಂಬರುವ ದಿನಗಳ ಲಕ್ಷಣಗಳನ್ನು ತೋರಿಸಿದ್ದವು. ಅಧಿಕಾರದ ಅತಿಯಾದ ಕೇಂದ್ರೀಕರಣ, ವಿಶ್ವವಿದ್ಯಾಲಯಗಳ ಮೇಲೆ ದಾಳಿ, (ಅದರಲ್ಲೂ ವಿಶೇಷವಾಗಿ ಮೋದಿಯನ್ನು ತನ್ನ ಹದಿವಯಸ್ಸಿನಿಂದ ಪೋಷಿಸಿದ ಫ್ಯಾಸಿಸ್ಟ್ ಸಿದ್ಧಾಂತವನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ), ರೈತರ ಮತ್ತು ಕಾರ್ಮಿಕರ ಹಕ್ಕುಗಳ ಕಡಿತ, ಹೋರಾಟಗಾರರು ಮತ್ತು ವಕೀಲರ ಬಂಧನ ಹಾಗೂ ಒಂದು ‘ಆದರ್ಶ’ ಭಾರತೀಯನ ವ್ಯಾಖ್ಯಾನದ ಅಡಿಯೊಳಗೆ ಬರದ ಭಾರತೀಯರ ಮೇಲೆ ನಡೆದ ಗುಂಪುಹಲ್ಲೆ, ಕೊಲೆಗಳು – ಅಂದರೆ ಮುಸ್ಲಿಮರ, ದಲಿತರ, ಕ್ರಿಶ್ಚಿಯನ್ನರ, ಕಮ್ಯೂನಿಸ್ಟರ (ಭಿನ್ನ ಧ್ವನಿಯನ್ನು ಹೊಂದಿದವರು) ಕಗ್ಗೊಲೆಗಳು ಕಂಡುಬಂದವು. ಉಗ್ರ ಬಲಪಂಥೀಯರಿಂದ ಆದ ವಿಚಾರವಾದಿಗಳಾದ ನರೇಂದ್ರ ಧಾಬೋಲ್ಕರ್, ಗೋವಿಂದ್ ಪಾನ್ಸಾರೆ, ಎಮ್.ಎಮ್.ಕಲಬುರ್ಗಿ ಮತ್ತು ಗೌರಿ ಲಂಕೇಶ್‍ರ ಕೊಲೆಗಳನ್ನೂ ಭಾರತವು ಮುಂಚೆ ಕಂಡಿದ್ದಿಲ್ಲ.

ಈ ಆಳ್ವಿಕೆಯ ವಿಚಾರಧಾರೆ/ಸಿದ್ಧಾಂತದ ಚಿಲುಮೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‍ಎಸ್‍ಎಸ್). 1925ರಲ್ಲಿ ಸ್ಥಾಪನೆಯಾದ ಈ ಸಂಘಟನೆಯ ಮೂಲತತ್ವ, ಭಾರತ ಒಂದು ಪ್ರಜಾಪ್ರಭುತ್ವ ಆಗಿರಬಾರದು, ಇದೊಂದು ಹಿಂದೂ ರಾಷ್ಟ್ರ (ಥಿಯಕ್ರಸಿ) ಎನ್ನುವುದು. ಈ ಸಂಘಟನೆ ಅಸಮಾನ ಮತ್ತು ತಾರತಮ್ಯ ಹೊಂದಿದ ಪೌರತ್ವವನ್ನು ಪ್ರತಿಪಾದಿಸುತ್ತದೆ. (ಮುಸೊಲಿನಿ ಮತ್ತು ಹಿಟ್ಲರ್ ಮಾಡಿದಂತೆ) ಹಾಗೂ ಈ ಸಂಘಟನೆಯು (ಲಿಖಿತ ಬರಹಗಳಲ್ಲಿ ಹೇಳಲಾದಂತೆ) ಭಾರತದ ಸಂವಿಧಾನವನ್ನು ಕಿತ್ತೆಸೆಯಬೇಕೆಂದು ಹೇಳುತ್ತದೆ. 2014ರಿಂದ 2019ರವರೆಗೆ ನಡೆದ ಹಿಂಸೆ, ಆತಂಕ ಮತ್ತು ಲಿಂಚಿಂಗ್‍ಗಳ ಕರಾಳಸತ್ಯವನ್ನು ರಾಷ್ಟ್ರದ ಮಹಿಮೆಯ ಮತ್ತು ‘ಅಭಿವೃದ್ಧಿ’ಯ ಸುತ್ತಲಿನ ಪ್ರಚಾರವು ಮರೆಮಾಚಿತು. ಏಕಪಕ್ಷೀಯ ಮತ್ತು ನಾಚಿಕೆಗಟ್ಟ ನೋಟುರದ್ದತಿಯ ಕ್ರಮವು ಬಳಲಿದ ಭಾರತದ ಆರ್ಥಿಕತೆಯ ಬೆನ್ನೆಲುಬನ್ನು ಮುರಿದು, ಅಸಂಘಟಿತ ವಲಯವನ್ನು ಕೊಂದೇಬಿಟ್ಟಿತು. ಆಡಳಿತ ಪಕ್ಷದ ಬೊಕ್ಕಸದ ಸಮಸ್ಯೆ ಉಲ್ಬಣಗೊಳ್ಳುವ ವರದಿಗಳು ಬಂದರೂ ಪಕ್ಷದ ಮುಖಂಡರು ಆ ವರದಿಗಳನ್ನು ತಿರಸ್ಕರಿಸಿದರು ಹಾಗೂ ವಾಸ್ತವವನ್ನು ನೋಡಲು ತಯಾರಿದ್ದಿಲ್ಲ. ಈಗ ಅದೇ ವ್ಯಕ್ತಿಗಳು ಅಧಿಕಾರದ ಮುಂಚೂಣಿಯಲ್ಲಿದ್ದಾರೆ.

‘ಈ ಸರಕಾರವು ತನ್ನದೇ ಜನರ ವಿರುದ್ಧ ಸಮರ ಸಾರಿದೆ’ ಎಂದು ನಾನು ಕೆಲವು ತಿಂಗಳ ಹಿಂದೆ ಹೇಳಿದ್ದೆ. 2019ರ ಚುನಾವಣೆಗಳ ಫಲಿತಾಂಶಕ್ಕೆ ಮುಂಚೆಯೇ ಇದನ್ನು ಹೇಳಿದ್ದೆ. 2019ರ ಪ್ರಚಂಡ ಗೆಲುವು ಈ ಸಮರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ, ಪಾರ್ಲಿಮೆಂಟರಿ ಚರ್ಚೆ ಮತ್ತು ಸರ್ವಪಕ್ಷಗಳ ಚರ್ಚೆಯ ಅಣಕ ಮಾಡಿದೆ.

ಜುಲೈನಲ್ಲಿ ಬಜೆಟ್‍ಅನ್ನು ಜಾರಿಗೊಳಿಸಲು ಲೋಕಸಭೆಯು ಸೇರಿದಾಗ ಹಾಗೂ ತರುವಾಯ ಪಾರ್ಲಿಮೆಂಟರಿ ಸಮಿತಿಗಳಿಗೆ ತಮ್ಮ ಪ್ರತಿಕ್ರಿಯೆ ಅಥವಾ ಸಮಾಲೋಚನೆಗಾಗಿ ಕಳುಹಿಸದೇ ಶಾಸನಗಳನ್ನು ಜಾರಿ ಮಾಡಲಾಗಿದೆ. ಈ ಎರಡನೇ ಆಳ್ವಿಕೆಯು ಒಂದು ನಿರ್ದಿಷ್ಟವಾದ ಗಡಿಬಿಡಿಯಲ್ಲಿರುವುದಷ್ಟೇ ಅಲ್ಲ, ಮೇ 30ರ ಪ್ರಮಾಣವಚನ ಸಮಾರಂಭ ತೋರಿಸಿದಂತೆ, (ಈ ಸಲ ಸಮಾರಂಭದಲ್ಲಿ 800 ಅತಿಥಿಗಳು ಉಪಸ್ಥಿತರಿದ್ದರು, 2014ಕ್ಕಿಂತ ದುಪ್ಪಟ್ಟು) ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಸಂದೇಶಗಳನ್ನು ಸಾರುವ ಅಗತ್ಯ ಅಥವಾ ಇಚ್ಛೆ ಕಾಣಿಸಲಿಲ್ಲ. ಜಗತ್ತಿನ ಆರು ಜನರಲ್ಲಿ ಒಬ್ಬ ಭಾರತದಲ್ಲಿ ಇರುತ್ತಾನೆ ಹಾಗೂ ಆ ಕೋಟ್ಯಾಂತರ ಜನರ ಏಕೈಕ ಪ್ರತಿನಿಧಿಯಾಗಿ ಆಡಳಿತ ನಡೆಸುವ ಮೋದಿ 2.0 ಆಳ್ವಿಕೆಗೆ ಯಾವುದೇ ಕಾಳಜಿಗಳನ್ನು ತಣಿಸುವ ಅವಶ್ಯಕತೆ ಕಾಣಲಿಲ್ಲ.

ಲೋಕಸಭೆಯ ಮೊದಲ ಸದನವು ಯುಎಪಿಎ ಮಸೂದೆಯನ್ನು ಇನ್ನಷ್ಟು ಬಲಪಡಿಸಿತು. ಈ ಮಸೂದೆಗೆ ಕಾಂಗ್ರೆಸ್‍ನ ಯುಪಿಎ ಆಳ್ವಿಕೆಯಲ್ಲಿ ತಿದ್ದುಪಡಿ ತರಲಾಗಿತ್ತು. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಗಂಭೀರ ಸವಾಲುಗಳನ್ನು ಹೊಂದಿದ್ದ ಕಾನೂನನ್ನು ಊರ್ಜಿತಗೊಳಿಸುವುದಕ್ಕೆ ಎಡಪಕ್ಷ ಮಾತ್ರ ವಿರೋಧಿಸಿತ್ತು. ಆದರೆ ಆ ತಿದ್ದುಪಡಿಗಳನ್ನು ಬಿಜೆಪಿ ಬೆಂಬಲಿಸಿತ್ತು. ಇದಕ್ಕೆ ಮುನ್ನ 10 ವರ್ಷದ ಕಾಂಗ್ರೆಸ್ ಆಳ್ವಿಕೆಯಲ್ಲೂ ತಿದ್ದುಪಡಿಯಾದ ಯುಎಪಿಎದ ಕಠಿಣ ಅವಕಾಶಗಳನ್ನು ಅಲ್ಪಸಂಖ್ಯಾತ ಯುವಕರನ್ನು ಗುರಿಯಾಗಿಸಲು ಬಳಸಲಾಗಿತ್ತು. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು ‘ಭಯೋತ್ಪಾದನೆ’ಯ ಪ್ರಕರಣಗಳಾಗಿ ಬಲವಂತದಿಂದ ರಚಿಸಲಾಗಿದೆ ಎಂದು ನ್ಯಾಯಾಲಯಗಳು ತೀರ್ಪು ನೀಡಿದ್ದವು. ನೆನಪಿಡಿ, ಯುಪಿಎನ 10 ವರ್ಷದಲ್ಲಿ ಹಲವಾರು ಒಳ್ಳೆಯ ಮಸೂದೆಗಳನ್ನು (ಮಾಹಿತಿ ಹಕ್ಕು ಕಾಯಿದೆ, ಗ್ರಾಮೀಣ ಅಭಿವೃದ್ಧಿ, ಉದ್ಯೋಗ ಖಾತ್ರಿ, ಆಹಾರ ಭದ್ರತೆಯ ಹಕ್ಕು, ಅರಣ್ಯವಾಸಿಗಳು/ಆದಿವಾಸಿಗಳ ಹಕ್ಕು ಮುಂತಾದವು) ತರಲಾದ ಸಮಯದಲ್ಲಿಯೇ ಇದು ಕೂಡ ಆಗುತ್ತಲೇ ಇತ್ತು.

ಈಗ ಯುಎಪಿಎದ ಕಠಿಣ ತಿದ್ದುಪಡಿಗಳು ಇನ್ನೊಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ. ಮೋದಿ 2.0 ಆಳ್ವಿಕೆಯಲ್ಲಿ ಒಂದು ಹೊಸ ತಿದ್ದುಪಡಿಯನ್ನು ತರಲಾಗಿದೆ. ಅದರ ಅಡಿಯಲ್ಲಿ ಯಾವುದೇ ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಏಕಪಕ್ಷೀಯವಾಗಿ ಘೋಷಿಸಬಹುದಾಗಿದೆ- ಹಾಗೆ ಮಾಡಲು ನ್ಯಾಯಾಂಗದ ಪರಿಶೀಲನೆ ಬೇಕಿಲ್ಲ ಹಾಗೂ ಕೇವಲ ಸರಕಾರದ ಆಡಳಿತಾತ್ಮಕ ನಿರ್ಣಯದಿಂದ ಆ ವ್ಯಕ್ತಿಯ ಆಸ್ತಿಪಾಸ್ತಿಯನ್ನು ವಶಪಡಿಸಿಕೊಳ್ಳಬಹುದಾಗಿದೆ. ಈ ತಿದ್ದುಪಡಿಗಳು ಸಾಕಾಗಲಿಲ್ಲ ಎಂಬಂತೆ, ಭಾರತದ ಸಂವಿಧಾನದ ಆರ್ಟಿಕಲ್ 370ಅನ್ನು ಸಂಪೂರ್ಣ ಏಕಪಕ್ಷೀಯವಾಗಿ ಹಾಗೂ ಅಸಂವಿಧಾನಾತ್ಮಕವಾಗಿ ರದ್ದುಗೊಳಿಸಲಾಯಿತು. ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತೆಸೆಯಲಾಯಿತು. ಕಾನೂನು, ನೈತಿಕತೆ, ಸಭ್ಯತೆ ಮತ್ತು ಸಂವಿಧಾನಗಳನ್ನು ಉಲ್ಲಂಘಿಸಿ ಆಗಸ್ಟ್ 5ರಂದು ತೆಗೆದುಕೊಂಡ ಈ ನಿರ್ಣಯ ಮೋದಿ ಆಳ್ವಿಕೆ 2.0 ನಡೆಸುತ್ತಿರುವ ದಬ್ಬಾಳಿಕೆಗೆ ಸಾಕ್ಷಿಯಾಗಿದೆ.

ಲ್ಯಾಂಡ್‍ಲೈನ್ ಫೋನ್ ಸಂಪರ್ಕಗಳೂ ಸೇರಿ ಅಂತರ್ಜಾಲ ಮತ್ತು ಇತರ ಎಲ್ಲವನ್ನು ನಿರ್ಬಂಧಿಸುವುದರ ಮೂಲಕ ಕಾಶ್ಮೀರ ಕಣಿವೆಗೂ ಜಗತ್ತಿಗೂ ಇದ್ದ ಸಂಪರ್ಕಗಳನ್ನು ಕಿತ್ತೆಸೆಯಲಾಗಿದೆ. ಭಾರತದ ಸಂಸ್ಥೆಗಳ ನಿರ್ಣಾಯಕ ಹುದ್ದೆಗಳಲ್ಲಿ ಸಮಾನತೆಯ ಮತ್ತು ತಾರತಮ್ಯವಿಲ್ಲದ ಪರಿಕಲ್ಪನೆಗೆ ಯಾವುದೇ ಗೌರವ ನೀಡದ ವ್ಯಕ್ತಿಗಳನ್ನು ತಂದಿರಿಸಿ ಆ ಸಂಸ್ಥೆಗಳನ್ನು ಮಟ್ಟಹಾಕುವುದಕ್ಕೆ, ವಿಕೃತಗೊಳಿಸುವುದಕ್ಕೆ ಮೋದಿ ಆಳ್ವಿಕೆ 1.0 ಅನ್ನು ಗುರುತಿಸಬಹುದಾದರೆ, ಮೋದಿ ಆಳ್ವಿಕೆ 2.0 ಅನ್ನು ಭಾರತೀಯ ಗಣರಾಜ್ಯ (ಫೆಡರಲಿಸಂ)ವನ್ನು ಗುರಿ ಮಾಡುವುದಕ್ಕೆ ಗುರುತಿಸಲಾಗುವುದು. ಈ ಸುಲಿಗೆಯ ಕೈಗಳಿಂದ ಯಾವ ಭಾರತೀಯ ರಾಜ್ಯವೂ ಈಗ ಸುರಕ್ಷಿತವಿಲ್ಲ.

ಇಂತಹ ಅದ್ಭುತ ಗೆಲುವನ್ನು ಮೋದಿ ಆಳ್ವಿಕೆ 2.0 ಹೇಗೆ ಸಾಧಿಸಿತು?

2019ರ ಫಲಿತಾಂಶ ಹೊರಬೀಳುವ ತನಕ ಬಿಜೆಪಿ ತಾನಾಗಿ 180-200 ಸ್ಥಾನಗಳನ್ನು ಗೆಲ್ಲುವುದೆಂದೂ ಹಾಗೂ ಎನ್‍ಡಿಎ ಒಟ್ಟಾರೆ 542 ಸ್ಥಾನಗಳಲ್ಲಿ 220 ಅಥವಾ 240 ಸ್ಥಾನಗಳು ಸಿಗಬಹುದೆಂದು ನಮ್ಮೆಲ್ಲರ ಎಣಿಕೆಯಾಗಿತ್ತು. ಈಗ ಈ 80ರಿಂದ 100 ಹೆಚ್ಚಿನ ಸ್ಥಾನಗಳು ಮತ್ತು ಕೆಲವು ಸ್ಥಾನಗಳಲ್ಲಿ ಗೆಲುವಿನ ಅತಿದೊಡ್ಡ ಅಂತರಗಳು ಒಂದು ಸಂದೇಶವನ್ನು ರವಾನಿಸಲು ತಿರುಚಲಾಗಿದೆ ಎಂದು ಕಾಣಿಸಿತು. ಭಾರತೀಯ ಚುನಾವಣಾ ಆಯೋಗವು ಚುನಾವಣೆಗಳ ಒಟ್ಟಾರೆ 7 ಹಂತಗಳಲ್ಲೂ ನಡೆದುಕೊಂಡ ರೀತಿಯು ಅನೇಕರು ಹುಬ್ಬೇರಿಸುವಂತೆ ಮಾಡಿತು. ಆಡಳಿತ ಪಕ್ಷದಿಂದ ಬಳಸಲಾದ ದೊಡ್ಡ ಪ್ರಮಾಣದ ಹಣದ (ಕಾನೂನಿನ ಮಿತಿಯನ್ನು ಮೀರಿದ) ಪ್ರದರ್ಶನವನ್ನು ಪ್ರಶ್ನಿಸದಂತೆ ಮಾಡಲು ಪ್ರಯತ್ನ ಮಾಡಲಾಯಿತು ಹಾಗೂ ಚುನಾವಣಾ ನಿಯಮಗಳ ಉಲ್ಲಂಘನೆಗಳನ್ನೂ ಪ್ರಶ್ನಿಸದಂತೆ ತಡೆಯಲಾಯಿತು. ಅಧಿಕೃತ ಸ್ಥಾನದ ದುರ್ಬಳಕೆ ಅಥವಾ ಸಂವಿಧಾನಾತ್ಮಕ ನಿಯಮಗಳನ್ನು ಉಲ್ಲಂಘಿಸಿ ಮಾಡಿದ ಭಾಷಣಗಳು (ದ್ವೇಷದ ಕಿಡಿ ಹಚ್ಚಿಸುವ ಮಾತುಗಳು) ಯಾವುದೇ ಅಡ್ಡಿಗೊಳಗಾಗಲಿಲ್ಲ. ಈ ಚುನಾವಣೆಯಲ್ಲಿ ಖರ್ಚು ಮಾಡಿದ ಹಣ ಎಷ್ಟಿತ್ತೆಂದರೆ, ಅದು ಅಮೆರಿಕದ ಇಡೀ ಚುನಾವಣಾ ಖರ್ಚನ್ನೂ ಮೀರಿಸಿತ್ತು. ಒಟ್ಟು 6 ಶತಕೋಟಿ ಡಾಲರ್‍ಗಳು! ಅದರಲ್ಲಿ ಆಡಳಿತ ಪಕ್ಷ ಬಿಜೆಪಿಯವದ್ದೇ ಸಿಂಹಪಾಲು; 80%. ಅವರುಗಳು ತಮ್ಮ ಕಳೆದ ಅವಧಿಯಲ್ಲಿ ತಂದ ಒಂದು ಪಾರದರ್ಶಕವಲ್ಲದ ಕಾನೂನು (ಎಲೆಕ್ಟೋರಲ್ ಬಾಂಡ್ಸ್), ಅವರು ದೊಡ್ಡ ಮೊತ್ತದ ಹಣ ಹೊಂದಿರಲು ಹಾಗೂ ಹಣದ ಮೂಲವನ್ನು ತೋರಿಸದೇ ಇರಲು ಕೆಲಸ ಮಾಡಿತು. ಭಾರತೀಯ ಚುನಾವಣಾ ಆಯೋಗವಾಗಲೀ ಅಥವಾ ಭಾರತದ ಉಚ್ಚ ನ್ಯಾಯಾಲಯವಾಗಲೀ ಈ ದುರ್ಬಳಕೆಯನ್ನು ತಡೆಯಲು ಪರಿಣಾಮಕಾರಿಯಾದದ್ದೇನೂ ಮಾಡಲಿಲ್ಲ. ಇದು ನಮ್ಮ ದೇಶದ ಮೂಲ ಸಂವಿಧಾನಾತ್ಮಕ ತತ್ವಗಳನ್ನು ಎತ್ತಿಹಿಡಿಯಬೇಕಾದ ನಮ್ಮ ಸಂಸ್ಥೆಗಳ ಸವೆತವನ್ನು (ಸಂಪೂರ್ಣವಾಗಿ ಸ್ವಾಧೀನಪಡಿಸಲು ಆಗದಿದ್ದರೂ) ತೋರಿಸುತ್ತವೆ.

ಬಿಜೆಪಿಯ ಚುನಾವಣಾ ಯಂತ್ರದ ಬೆನ್ನೆಲುಬಾದ ಆರ್‌ಎಸ್‍ಎಸ್ ಅನೇಕ ದಶಕಗಳಿಂದ ಗಟ್ಟಿಯಾದ ಸಾಂಸ್ಕೃತಿಕ ಮತ್ತು ಸಾಮಾಜಿಕ ಉಪಸ್ಥಿತಿಯನ್ನು ಹೊಂದಿರುವುದು ವಾಸ್ತವ. ಈ ಸಂಘವು ವಿದೇಶದಿಂದ ಮುಕ್ತವಾಗಿ ಹರಿದು ಬಂದ ಹಣವನ್ನು ತನ್ನ ಹಲವಾರು ಗುಂಪುಗಳಿಗೆ ವರ್ಗಾಯಿಸಿ ಬಿಜೆಪಿಯ ಗೆಲುವನ್ನು ಸುಲಭವಾಗಿಸಿತು. ಈ ಆರ್‍ಎಸ್‍ಎಸ್ ಶಿಕ್ಷಣದ ಮೇಲೆ ಕೆಲಸ ಮಾಡಲಿ ಅಥವಾ ಚಾರಿಟಿಯ ಕೆಲಸ ಮಾಡಲಿ, ಅದರ ಮೂಲ ಅಂಶ ಅದರ ಸೈದ್ಧಾಂತಿಕ ಒಲವು. ಒಂದು ಪ್ರಾಬಲ್ಯವಾದಿ ಪುರುಷ ಹಿಂದೂ ವರ್ಗಶ್ರೇಣಿಯನ್ನು ಶೌರ್ಯತೆ ಎಂದು ತೋರಿಸುವ ಹಾಗೂ ಅದನ್ನು ಮಾನ್ಯಗೊಳಿಸುವ ಪ್ರಶ್ನಾತೀತ ಸರ್ವಾಧಿಕಾರದ ಕಡೆಗೆ ಭಾರತೀಯ ಮನಸ್ಸುಗಳನ್ನು ಕೊಂಡೊಯ್ಯುವುದೇ ಆರ್‍ಎಸ್‍ಎಸ್‍ನ ಸೈದ್ಧಾಂತಿಕ ಒಲವು. ನೋಟು ರದ್ದತಿ ಮತ್ತು ಎಲೆಕ್ಟೋರಲ್ ಬಾಂಡ್ಸ್ ಜಾರಿಗೆ ಬಂದನಂತರ ಬಿಜೆಪಿಗೆ ನಿಧಿಯನ್ನು ನೀಡುವವರ ಸಂಖ್ಯೆ ಹೆಚ್ಚಾಗಿದೆ ಹಾಗೂ ಆರ್‍ಎಸ್‍ಎಸ್‍ನಂತಹ ಎಲ್ಲೆಡೆ ತನ್ನ ಬಾಹುಗಳನ್ನು ಚಾಚಿದ ಸಂಘಟನೆಯೊಂದಿಗೂ ಸ್ಪರ್ಧಿಸುವಂತಹ ಚುನಾವಣಾ ಯಂತ್ರವು ಬಿಜೆಪಿ ಬಳಿಯಿದೆ.

2019ರ ಚುನಾವಣೆಗಳಿಗೆ ಕೆಲವು ತಿಂಗಳ ಮುಂಚೆ, ಹದಗೆಟ್ಟ ಆರ್ಥಿಕ ಪರಿಸ್ಥಿತಿಗಳು, ರೈತರ ಪ್ರತಿಭಟನೆಗಳು ಮರುಜೀವ ಪಡೆದುಕೊಂಡವು. ಯುದ್ಧಕ್ಕೆ ಅಣಿಯಾದಂತೆ ಎಚ್ಚೆತ್ತುಕೊಂಡ ವಿರೋಧಪಕ್ಷ, ರಾಫೇಲ್ ಹಗರಣದಲ್ಲಿ ಆಗಿದೆ ಎನ್ನಲಾದ ಭ್ರಷ್ಟಾಚಾರದ ಆರೋಪಗಳು, ಇವೆಲ್ಲವೂ ಬಿಜೆಪಿಯ ರಾಜಕೀಯ ವ್ಯವಸ್ಥೆಯನ್ನು ನಿದ್ದೆಗೆಡಿಸಲು ಪ್ರಾರಂಭಿಸಿದ್ದವು. ಆಗ ಬಂತು ಫೆಬ್ರವರಿ. ಕಾಶ್ಮೀರ ಕಣಿವೆಯಲ್ಲಿ ಸಿಆರ್‍ಪಿಎಫ್ ಯೋಧರ ಮೇಲಾದ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆಯಿತು. ಗೂಢಚರ್ಯೆಯ ವಿಫಲತೆ ಮತ್ತು ಆಡಳಿತದ ವಿಫಲತೆಯಿಂದ ಆದ ಈ ಘಟನೆಯನ್ನು ಬಹುಬೇಗ ರಾಷ್ಟ್ರೀಯವಾದದ ಪುರುಷತ್ವ ಪ್ರದರ್ಶನದ ಎದೆಬಡಿದುಕೊಳ್ಳುವಂತಹ ನಾಟಕವನ್ನಾಗಿ ಪರಿವರ್ತಿಸಲಾಯಿತು. ಪುಲ್ವಾಮಾ ಘಟನೆಯಾದ ಒಂದು ವಾರದೊಳಗೆ ಪಾಕಿಸ್ತಾನದ ಬಾಲಾಕೋಟ್ ಮೇಲೆ ಒಂದು ‘ಪ್ರದರ್ಶನಯೋಗ್ಯ’ ದಾಳಿ ನಡೆಸಲಾಯಿತು. ಈ ದಾಳಿಯ ಫಲಪ್ರದತೆ, ದಕ್ಷತೆ ಮತ್ತು ವಾಸ್ತವದ ಬಗ್ಗೆ ಗಂಭೀರ ಪ್ರಶ್ನೆಗಳಿದ್ದರೂ ಸಹ ಈ ದಾಳಿಯು ಮೋದಿಯನ್ನು ಅನ್ಯಾಯದ ವಿರುದ್ಧ ನಿಂತಿರುವ, ಭಾರತಕ್ಕೆ ಅತ್ಯಗತ್ಯವಾಗಿರುವ ವ್ಯಕ್ತಿ ಎಂದು ಮರುಸ್ಥಾಪಿಸಲು ಬೇಕಾದ ಮೇವನ್ನು (ಅದೆಷ್ಟೇ ಚಿಕ್ಕದಾಗಿದ್ದರೂ) ಒದಗಿಸಿತು.

ಕೊನೆಯದಾಗಿ, ಇವಿಎಮ್ ತಿರುಚುವಿಕೆ ಬಗ್ಗೆ ಗಂಭೀರ ಪ್ರಶ್ನೆಗಳೂ ಬಂದಿವೆ; ಆ ಪ್ರಶ್ನೆಗಳನ್ನು ಕಡೆಗಣಿಸಲಾಗುವುದಿಲ್ಲ. ಈಗ ಮಾಡಲೇಬೇಕಾದ ಹೋರಾಟವು ಮೇಲೆ ಹೇಳಿದ ಎಲ್ಲ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಮುಚ್ಚುಮರೆಯಿಲ್ಲದೇ ಮುಸ್ಲಿಮರನ್ನು ಇತರರನ್ನಾಗಿಸಿ ಅತ್ಯಂತ ಚಾಣಾಕ್ಷತನದಿಂದ ರಚಿಸಿ ಸಾರುವ ಸಂದೇಶಗಳು, ಆಕ್ರಮಣಕಾರಿಯಾದ ಹುಸಿ ರಾಷ್ಟ್ರೀಯವಾದ, ಸರಕಾರಿ ಯೋಜನೆಗಳನ್ನು ಉತ್ಪ್ರೇಕ್ಷಿಸಿ ಬಿತ್ತರಿಸಲಾಗುವ ಸಂದೇಶಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ನಿಭಾಯಿಸಲು ಉಪಾಯ ಕಂಡುಕೊಳ್ಳಬೇಕಿದೆ. ಹಾಗೂ ಅದರೊಂದಿಗೆ ವಿರೋಧಪಕ್ಷಗಳ ಅತ್ಯಂತ ನಾಚಿಕೆಗೇಡು ಅವಹೇಳನವೂ ತ್ವರಿತಗತಿಯಲ್ಲಿ ನಡೆಯುತ್ತಿದೆ, ಅಲ್ಲಿ ವಾಸ್ತವಕ್ಕೆ ಅಥವಾ ಸತ್ಯಕ್ಕೆ ಯಾವುದೇ ಮನ್ನಣೆಯಿಲ್ಲದೇ ಆಗುತ್ತಿದೆ. ಸುಳ್ಳುಸುದ್ದಿಯ ಈ ಬಲಶಾಲಿಯಾದ ಹಾಗೂ ಸುವ್ಯವಸ್ಥಿತವಾಗಿ ನಡೆಯುತ್ತಿರುವ ಸಂಘಟನೆಯನ್ನು ನಾವು ಸಾಮೂಹಿಕವಾಗಿ ಎದುರಿಸಬೇಕಿದೆ.

ಹೇಗೆ, ಎನ್ನುವುದು ನಮ್ಮೆದುರಿಗಿನ ಪ್ರಶ್ನೆ. ಇದನ್ನು ಯಾರು ಮಾಡಬೇಕು? ವಿರೋಧಪಕ್ಷದ ರಾಜಕೀಯ ಪಕ್ಷಗಳು ಮರಣಾವಸ್ಥೆಯಲ್ಲಿ ಇರುವಂತೆ ಕಾಣುತ್ತಿವೆ; ಇವುಗಳನ್ನು ಎದ್ದೇಳಿಸಬೇಕಿದೆ. ಇನ್ನೊಂದು ನೆನಪಿಡಬೇಕಾದ ಅಂಶವೆಂದರೆ, ಈ ಬಾರಿ (2014ರ ಫಲಿತಾಂಶವು ಆಘಾತಕಾರಿಯಾಗಿದ್ದರೂ, ನಂಬಲರ್ಹವಾಗಿದ್ದವು) ಸರಕಾರದ ಅಧಿಕಾರವನ್ನು ಫೇಸ್‍ಬುಕ್ ಮತ್ತು ಇತರ ವೇದಿಕೆಗಳಿಂದ ದತ್ತಾಂಶವನ್ನು ಪಡೆದು (ಕಾನೂನುಬಾಹಿರವಾಗಿ) ಒಂದು ರಾಜಕೀಯ ಪಕ್ಷದ ಸೇವೆಗಾಗಿ ಬಳಸಲಾಗಿದೆ; ವಾಟ್ಸಾಪ್ ಗುಂಪುಗಳು ಮತ್ತು ಫೇಸ್‍ಬುಕ್ ಸಂದೇಶಗಳನ್ನು ತಮ್ಮ ಪ್ರಚಾರದ ಸಂದೇಶಗಳನ್ನು ಬಿತ್ತರಿಸಲು ಬಳಸಲಾಗಿದೆ. ಮತದಾರರ ಕೆಲವು ವರ್ಗಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಡಲಾದಂತಹ ಗಂಭೀರ ಸಮಸ್ಯೆಗಳಿವೆ, ಇವುಗಳನ್ನು ಸರಿಪಡಿಸುವುದು ಹೇಗೆ? ಹಾಗೂ ಮತದಾರರನ್ನು ಮತ ಹಾಕಲು ಕರೆಯುವುದು, ಅದನ್ನು ಹೇಗೆ ಮಾಡುವುದು?

ರಾಜಕೀಯ ಶಿಕ್ಷಣ ಮತ್ತು ಸಾಂಸ್ಕೃತಿಕ ಸಂದೇಶದ ಒಂದು ಕರಾರುವಾಕ್ಕಾದ ಮತ್ತು ಖಚಿತವಾದ ಯೋಜನೆಯ ಅಗತ್ಯವಿದೆ. ಆ ಶಿಕ್ಷಣ ಸಂವಿಧಾನದ ತತ್ವಗಳ ಪ್ರಸ್ತುತತೆ ಹಾಗೂ ಇತಿಹಾಸವನ್ನು ಒಳಗೊಂಡಿರಬೇಕು. ಈ ಯೋಜನೆಯನ್ನು ಕೇವಲ ಸೃಷ್ಟಿಸಿ, ಪ್ರಸಾರ ಮಾಡಿದರೆ ಸಾಲದು, ಇದನ್ನು ವ್ಯವಸ್ಥಿತವಾಗಿ ಸಂಘಟಿಸಬೇಕಿದೆ. ಪ್ರತಿಯೊಂದು ಸ್ಥಳ, ಶಾಲೆ, ಕಾಲೇಜು, ಕಛೇರಿ, ಗ್ರಾಮಪಂಚಾಯತಿಗಳನ್ನು ಒಳಗೊಳ್ಳಬೇಕಿದೆ. ಈ ಅಭಿಯಾನವು ಸುಸ್ಥಿರವಾದ, ಹಲವಾರು ಪದರಗಳುಳ್ಳ, ಸ್ವಾರಸ್ಯಕರವೂ ಆದ ಸಾರ ಹೊಂದಿರಬೇಕು. ಇತಿಹಾಸದ ಅರಿವಿದ್ದು, ಇಂದೂ ಪ್ರಸ್ತುತವಾಗಿರುವ ನಿಜವಾದ ಗ್ರಹಿಕೆಗಳನ್ನು ಸೃಷ್ಟಿಸುವ ಈ ಅಭಿಯಾನವು ದ್ವೇಷಪೂರಿತ ಪ್ರಚಾರದಿಂದ ಆದ ಅಪಾಯವನ್ನು ಸರಿತೂಗಿಸಬೇಕು.

ಎರಡು ಸಂಗತಿಗಳು ನನಗೆ ಭರವಸೆ ನೀಡುತ್ತವೆ. ಮೊದಲನೆಯದು ಮೊನ್ನೆ ಆಗಿದ್ದು; ಪರಿಚ್ಛೇದ 370 ಅನ್ನು ತೆಗೆದುಹಾಕಿದ್ದರ ವಿರುದ್ಧ ಮುಂಬಯಿಯ ಆಝಾದ್ ಮೈದಾನದಲ್ಲಿ ಎಡಪಕ್ಷಗಳು ಪ್ರತಿಭಟನೆ ಹಮ್ಮಿಕೊಂಡಿದ್ದರು. ಅಲ್ಲಿ ಸೇರಿದ್ದ ಅನೇಕರು ಮುಂಬಯಿಯ ಪ್ರಯಾಣಿಕರೊಂದಿಗೆ ಬೆರೆಯುವುದು, ಅವರೊಂದಿಗೆ ಮಾತನಾಡುವುದು ಉಪಯುಕ್ತ ಎಂದು ಭಾವಿಸಿದರು; ತಪ್ಪುಮಾಹಿತಿಯ ನಡುವೆಯೇ ಕುತೂಹಲವೂ ಕಾಣಿಸಿಕೊಂಡಿತು. ಇದೇ ನಮಗೆ ಮೊದಲ ಪಾಠವಾಗಬಹುದು; ನಮ್ಮ ದೇಶದ, ಸಮುದಾಯಗಳ ಹೊಸ ಪ್ರಜ್ಞೆಯನ್ನು ಸೃಷ್ಟಿಸಿ ಪ್ರತಿರೋಧದ ಪ್ರಜ್ಞೆಯನ್ನು ಮರುಸೃಷ್ಟಿಸಲು ನಾವು ನಮ್ಮ ಶಕ್ತಿ, ಚೈತನ್ಯಗಳನ್ನು ಹೇಗೆ ಬಳಸಬಹುದು?

ಎರಡನೆಯದ್ದು; ಲೋಕಸಭೆಯಲ್ಲಿ ವಿರೋಧಪಕ್ಷ ದುರ್ಬಲವಾಗಿರಬಹುದು. ಆದರೆ, ಭಾರತದ ಬೀದಿಗಳಲ್ಲಿ ಒಂದು ಬಲಶಾಲಿಯಾದ ಒಗ್ಗಟ್ಟಿನ ವಿರೋಧಪಕ್ಷವನ್ನು ರಚಿಸಲು ಭಾರತೀಯರು ಸೃಜನಶೀಲ ಯೋಜನೆಯೊಂದನ್ನು ರೂಪಿಸಲು ಶಕ್ತರಾಗಿದ್ದಾರೆ ಎಂಬುದು ನನ್ನ ಬಲವಾದ ನಂಬಿಕೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...