Homeಮುಖಪುಟಮೋದಿ ಗೆಲುವು: ಈ ಪ್ರಶ್ನೆಗಳನ್ನು ಕೇಳದೆ ಇರಲಾದೀತೇ? - ಎ.ನಾರಾಯಣ್ ಲೇಖನ

ಮೋದಿ ಗೆಲುವು: ಈ ಪ್ರಶ್ನೆಗಳನ್ನು ಕೇಳದೆ ಇರಲಾದೀತೇ? – ಎ.ನಾರಾಯಣ್ ಲೇಖನ

ಮೋದಿ ಸಾಧನೆಯ ಬಲದಿಂದ ಗೆದ್ದರೋ ಅಥವಾ ತಂತ್ರ ಹೂಡಿ ಗೆದ್ದರೋ, ಮೋದಿ ಜನರನ್ನು ಮೋಡಿ ಮಾಡಿದ ನಾಯಕತ್ವದ ಗುಣಾವಗುಣಗಳೇನು? ಇಂತಹ ತಂತ್ರದ ಮೂಲಕ ಗೆಲ್ಲುವ ಇಂತಹ ನಾಯಕತ್ವದ ಮಾದರಿ ಭಾರತೀಯ ಪ್ರಜಾತಂತ್ರವನ್ನು ಯಾವ ದಾರಿಯಲ್ಲಿ ಮುನ್ನಡೆಸೀತು? ಈ ಪ್ರಶ್ನೆಗಳೆಲ್ಲಾ ಮುಖ್ಯವಾದರೂ ಅವುಗಳನ್ನು ಕೇಳುವ ವ್ಯವಧಾನವಾಗಲೀ, ಉತ್ಸಾಹವಾಗಲೀ ಸದ್ಯಕ್ಕೆ ಕಂಡು ಬರಲಾರದು

- Advertisement -
- Advertisement -

| ಎ.ನಾರಾಯಣ್ |

ಬಿಜೆಪಿ ನೇತೃತ್ವದ ಎನ್.ಡಿ.ಎ. 2019ರ ಲೋಕಸಭಾ ಚುನಾವಣೆಯಲ್ಲಿ ನಿಚ್ಚಳ ಬಹುಮತ ಗಳಿಸಿದೆ. ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. ಈ ಗೆಲುವಿನಿಂದಾಗಿ ಭಾರತದ ರಾಜಕೀಯದಲ್ಲಿ ನಿಜಕ್ಕೂ ಏನು ಗೆದ್ದಿತು, ಏನು ಸೋತಿತು ಎನ್ನುವ ಪ್ರಶ್ನೆ ಸದ್ಯಕ್ಕೆ ಯಾರೂ ಕೇಳಲಾರರು. ಆದರೆ ಈ ಇಡೀ ಚುನಾವಣೆಯಲ್ಲಿ ಪ್ರಸ್ತುತವಾಗುವ ಪ್ರಶ್ನೆ ಅಂತ ಒಂದಿದ್ದರೆ ಅದು ಮಾತ್ರ.

ಬಿಜೆಪಿ ನೇತೃತ್ವದ ಎನ್.ಡಿ.ಎ. ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವ ಅಭಿಪ್ರಾಯ ಎಲ್ಲೆಡೆ ಹೆಚ್ಚು ಕಡಿಮೆ ಚುನಾವಣಾ ಘೋಷಣೆಗೆ ಮೊದಲೇ ತಲೆದೋರಿತ್ತು. ಪುಲ್ವಾಮ ಘಟನೆಯ ಬಳಿಕ ಬಿಜೆಪಿ ದೇಶರಕ್ಷಣೆ, ಸೈನ್ಯ ಇತ್ಯಾದಿ ವಿಚಾರಗಳನ್ನೆಲ್ಲಾ ಚುನಾವಣಾ ಕಣಕ್ಕೆ ಎಳೆದುತಂದ ನಂತರ ಈ ಸಾಧ್ಯತೆ ಮತ್ತೂ ನಿಚ್ಚಳವಾಗಿತ್ತು. ಆದರೆ ಇಷ್ಟೆಲ್ಲಾ ಆದರೂ ಬಿಜೆಪಿ ಹೋದ ಚುನಾವಣೆಯಲ್ಲಿ ಗೆದ್ದಷ್ಟು ಸ್ಥಾನಗಳನ್ನು ಗೆಲ್ಲಲಾರದು ಎನ್ನುವ ಅಭಿಪ್ರಾಯ ಮೂಡಿತ್ತು. ಹೋದ ಬಾರಿ ಬಿಜೆಪಿಗೆ 282 ಸ್ಥಾನಗಳು ಬಂದಿದ್ದವು. ಸ್ವಂತ ಬಲದಲ್ಲಿ ಸರಕಾರ ರಚಿಸಲು ಬೇಕಾಗಿರುವುದು 272 ಸ್ಥಾನಗಳು. ಬಿಜೆಪಿ ಸ್ವಂತ ಬಲದಿಂದ ಸರಕಾರ ರಚಿಸಬಹುದಾಗಿದ್ದರೂ ಎನ್.ಡಿ.ಎ. ಮಿತ್ರಕೂಟದ ಸರಕಾರವನ್ನೇ ರಚಿಸಿತ್ತು. ಕೆಲವರು ಇದನ್ನು ಮಿಗತೆ ಮೈತ್ರಿಕೂಟ (surplus coalition) ಎಂದು ಬಣ್ಣಿಸಿದ್ದರು. ಈ ಬಾರಿ ಮಿಗತೆ ಮೈತ್ರಿಕೂಟ ಹೋಗಿ ಕೊರತೆ ಮೈತ್ರಿಕೂಟ ಅಧಿಕಾರಕ್ಕೆ ಬಂದೀತು ಎನ್ನುವುದು ಲೆಕ್ಕಾಚಾರವಾಗಿತ್ತು.

ಅಂದರೆ, ಬಿಜೆಪಿಗೆ ಸ್ವಂತ ಬಲದಿಂದ ಸರಕಾರ ರಚಿಸುವಷ್ಟು ಸ್ಥಾನಗಳು ಸಿಗದೇ ಅದು ಮೈತ್ರಿಕೂಟದ ಇತರ ಪಕ್ಷಗಳ ಬಲದ ಮೇಲೆ ಅವಲಂಬಿಸಬೇಕಾದೀತು. ಅಷ್ಟರಮಟ್ಟಿಗೆ ಮೋದಿಯ ಪ್ರಾಬಲ್ಯ ಕುಸಿದೀತು ಎನ್ನುವ ಅಭಿಪ್ರಾಯ ಇತ್ತು. ಈ ಲೆಕ್ಕಾಚಾರಕ್ಕೆ ಕಾರಣವೂ ಇತ್ತು. ಮುಖ್ಯವಾಗಿ ಹಿಂದಿ ರಾಜ್ಯಗಳಾದ ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ 2014ರ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಪಡೆದುಕೊಂಡ ಕಾರಣ ಈ ರಾಜ್ಯಗಳಲ್ಲಿ ಈ ಬಾರಿ ಹಿನ್ನಡೆ ಅನುಭವಿಸುತ್ತದೆ. ಒಟ್ಟು ಸುಮಾರು 150 ಸ್ಥಾನಗಳನ್ನು ಹೊಂದಿರುವ ಈ ರಾಜ್ಯಗಳಲ್ಲಿ ಹಿನ್ನಡೆ ಅನುಭವಿಸುವ ಕಾರಣ ಬಿಜೆಪಿ ಗೆಲ್ಲುವ ಸ್ಥಾನಗಳ ಸಂಖ್ಯೆ ಗಣನೀಯವಾಗಿ ಕುಸಿಯಬಹುದು ಮತ್ತು ಈ ಇಳಿಕೆಯನ್ನು ಇತರೆಡೆ ಅದು ಗೆಲ್ಲಬಹುದಾದ ಹೆಚ್ಚುವರಿ ಸೀಟುಗಳು ಸರಿದೂಗಿಸಲಾರವು ಎಂದು ಲೆಕ್ಕಹಾಕಲಾಗಿತ್ತು.

ಫಲಿತಾಂಶ ಈ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿದೆ. ಮೊದಲನೆಯದಾಗಿ ಹಿಂದಿ ಪ್ರದೇಶದಲ್ಲಿ ಬಿಜೆಪಿಯ ಸ್ಥಾನಗಳು ದೊಡ್ಡಮಟ್ಟದಲ್ಲಿ ಕುಸಿದಿಲ್ಲ. ಹೆಚ್ಚು ಕಡಿಮೆ ಈ ರಾಜ್ಯಗಳಲ್ಲಿ 2014ರಲ್ಲಿ ಗಳಿಸಿದಷ್ಟೇ ಸ್ಥಾನಗಳನ್ನು ಮತ್ತೆ ಗಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಮಾತ್ರವಲ್ಲ. ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳಲ್ಲಿ, ಮುಖ್ಯವಾಗಿ ಪೂರ್ವ ಭಾರತದ ರಾಜ್ಯಗಳಾದ ಪಶ್ಚಿಮಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿ ಹೆಚ್ಚುವರಿಯಾಗಿ ಗಳಿಸಿದ ಸ್ಥಾನಗಳು ಅದು ಹಿಂದಿ ಪ್ರದೇಶದಲ್ಲಿ ಕಳೆದುಕೊಂಡ ಸ್ಥಾನಗಳಿಗಿಂತ ಅಧಿಕವಾಗಿದೆ. ಅಂತಿಮ ಲೆಕ್ಕಾಚಾರದ ಪ್ರಕಾರ ಬಿಜೆಪಿ ಸುಮಾರು 300ರಷ್ಟು ಮತ್ತು ಎನ್.ಡಿ.ಎ. ಮಿತ್ರಕೂಟ ಪಡೆಯುವ ಸ್ಥಾನಗಳ ಸಂಖ್ಯೆ 350 ಸಮೀಪಿಸುವ ಸಾಧ್ಯತೆ ಇದೆ. ಮತ್ತೆ ಮಿಗತೆ ಮೈತ್ರಿಕೂಟ ಬಂದಿದೆ. ಮೋದಿಯ ಬಲ ಪಕ್ಷದೊಳಗೆ, ದೇಶದೊಳಗೆ ಹೆಚ್ಚಿದೆ.

ಮೋದಿ ಭಕ್ತರು ಹಿಂದೆಂದಿಗಿಂತಲೂ ಹೆಚ್ಚು ನಿರ್ಭೀತಿಯಿಂದ ತಮ್ಮ ಕಾರ್ಯಸೂಚಿಯನ್ನು ದೇಶದ ಮೇಲೆ ಹೇರುವ ಸಾಧ್ಯತೆ ಇದೆ. ಇದೇ ವೇಳೆ ಕಾಂಗ್ರೆಸ್ ಪಕ್ಷ ಪಡೆದ ಸ್ಥಾನಗಳ ಸಂಖ್ಯೆ 50 ದಾಟುವ ಹಾಗೆ ಕಾಣಿಸುತ್ತಿಲ್ಲ. ಅದಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ಲಭಿಸಲಾರದು. ಕೇರಳ ಮತ್ತು ಪಂಜಾಬ್ ರಾಜ್ಯಗಳನ್ನು ಬಿಟ್ಟರೆ ಕರ್ನಾಟಕವೂ ಸೇರಿದಂತೆ ಎಲ್ಲೆಡೆ ಕಾಂಗ್ರೆಸ್ ಧೂಳೀಪಟವಾಗಿದೆ.

ಸ್ವತಃ ರಾಹುಲ್ ಗಾಂಧಿಯವರು ತಮ್ಮ ಕುಟುಂಬದ ಭದ್ರಕೋಟೆ ಎಂದೆನಿಸಿದ್ದ ಅಮೇಠಿಯಲ್ಲಿ ಸೋತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಪರಿಣಾಮ ಏನಾಗಬಹುದು? ಯಾವ ಪರ್ಯಾಯ ಧ್ವನಿಗಳು, ಹೇಗೆ ಹುಟ್ಟಿಕೊಳ್ಳಬಹುದು ಎನ್ನುವುದು ಸದ್ಯದ ಕುತೂಹಲ.
ಈ ಗೆಲುವನ್ನು ಹೇಗೆ ಅರ್ಥೈಸಿಕೊಳ್ಳುವುದು?

ಮೊನ್ನೆ ಕೆಲ ಮತಗಟ್ಟೆ ಸಮೀಕ್ಷೆಗಳು ಹೆಚ್ಚು ಕಡಿಮೆ ಹೋದ ಬಾರಿ ಗೆದ್ದಷ್ಟೇ ಸ್ಥಾನಗಳನ್ನು ಬಿಜೆಪಿಗೆ ನೀಡಿದಾಗ ದೆಹಲಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ ಶಿವಂ ವಿಜ್ ಬಹಳ ಗಂಭೀರ ವಿಷಯವೊಂದನ್ನು ತಮಾಷೆಯ ರೂಪದಲ್ಲಿ ಬರೆದರು. ಅವರ ಪ್ರಕಾರ ಇಲ್ಲಿ ಮುಖ್ಯವಾದ ಪ್ರಶ್ನೆ ಬಿಜೆಪಿ ಹೋದ ಬಾರಿ ಗೆದ್ದಷ್ಟೇ ಸ್ಥಾನಗಳನ್ನು ಅಥವಾ ಅದಕ್ಕಿಂತ ಕೆಲವು ಹೆಚ್ಚು ಸ್ಥಾನಗಳನ್ನು ಹೇಗೆ ಗೆದ್ದಿದೆ ಎನ್ನುವುದಲ್ಲ. ಮೋದಿಯ ಬಿಜೆಪಿ ದೇಶದಲ್ಲಿರುವ ಒಟ್ಟು 542 ಲೋಕಸಭಾ ಸ್ಥಾನಗಳ ಪೈಕಿ 542 ಸ್ಥಾನಗಳನ್ನೂ ಯಾಕೆ ಗೆದ್ದಿಲ್ಲ ಎನ್ನುವುದು ಚೋದ್ಯದ ಪ್ರಶ್ನೆ.

ಯಾಕೆಂದರೆ ಈ ಚುನಾವಣೆ ಹೇಗಿತ್ತು ಎಂದರೆ ಭಾರತದ ಚುನಾವಣಾ ಚರಿತ್ರೆಯಲ್ಲೇ ಈ ಬಾರಿ ಅತ್ಯಂತ ದುರ್ಬಲವಾದ ಪ್ರತಿಪಕ್ಷಗಳಿದ್ದವು. ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಕೆಲ ಪ್ರತಿಪಕ್ಷಗಳು ಮೈತ್ರಿ ಮಾಡಿಕೊಂಡಲ್ಲೆಲ್ಲಾ ಇತರ ಬಿಜೆಪಿ ವಿರೋಧಿ ಪಕ್ಷಗಳು ಕೂಡಾ ಸ್ಪರ್ಧಿಸಿ ಮೈತ್ರಿಕೂಟವನ್ನು ದುರ್ಬಲಗೊಳಿಸಿದವು. ಉದಾಹರಣೆಗೆ ಉತ್ತರಪ್ರದೇಶದಲ್ಲಿ ಎಸ್.ಪಿ.-ಬಿಎಸ್ಪಿ ಮೈತ್ರಿಕೂಟದ ವಿರುದ್ಧ ಕಾಂಗ್ರೆಸ್ ಸ್ಪರ್ಧಿಸಿದ್ದು. ಕನ್ನಯ್ಯ ಕುಮಾರ್ ವಿರುದ್ಧ ಆರ್‍ಜೆಡಿ ಸ್ಪರ್ಧಿಸಿದ್ದು, ಕರ್ನಾಟಕದಲ್ಲಿ ಮೈತ್ರಿಕೂಟ ರಚಿಸಿಕೊಂಡ ಪಕ್ಷಗಳು ಪರಸ್ಪರ ಕಾಲೆಳೆಯುವ ಕೆಲಸ ಮಾಡಿದ್ದು ಇತ್ಯಾದಿ.

ಜತೆಗೆ ಮೋದಿ ದೇಶದ ರಕ್ಷಣೆಯ ಮತ್ತು ಸೈನ್ಯದ ವಿಚಾರಗಳನ್ನು ನೇರವಾಗಿ ಚುನಾವಣಾ ಕಣಕ್ಕೆ ಎಳೆದು ತಂದಿದ್ದರು. ಬಿಜೆಪಿಗೆ ಓಟು ಹಾಕದೆ ಹೋದರೆ ದೇಶ ಉಳಿಯುವುದೇ ಕಷ್ಟ ಅಂತ ಸಾಮಾನ್ಯ ಜನರನ್ನು ನಂಬಿಸಿದರು. ಹೋದ ಚುನಾವಣೆಯ ವೇಳೆ ನೀಡಿದ ಭರವಸೆಗಳೆಲ್ಲಾ ಈಡೇರಿಲ್ಲ ಎಂಬ ಅಂಶ ಜನರಿಗೆ ಮರೆತೇ ಹೋಗುವಂತೆ ದೇಶರಕ್ಷಣೆ, ಭಯೋತ್ಪಾದನೆ, ಪಾಕಿಸ್ತಾನ ಮತ್ತು ಬಹುಸಂಖ್ಯಾತ ಹಿಂದುಗಳಲ್ಲಿ ಯಾವತೂ ಮನೆಮಾಡಿದ್ದ ಸುಪ್ತ ಮುಸ್ಲಿಂ ವಿರೋಧಿ ಭಾವನೆಗಳನ್ನೆಲ್ಲಾ ಒತ್ತಟ್ಟಿಗೆ ತಂದು ಅದ್ಭುತವಾದ ಚುನಾವಣಾ ಸಂಕಥನ ಒಂದನ್ನು ಮತದಾರರಿಗೆ ಮಾರಿದರು. ಪ್ರತಿಪಕ್ಷಗಳ ಬಳಿ ಇದಕ್ಕೆ ಸರಿಸಾಟಿಯಾದ ಸಮಾನವಾದ ಯಾವುದೇ ಸಂಕಥನ ಇರಲಿಲ್ಲ.

ಅಷ್ಟು ಮಾತ್ರವಲ್ಲ, ಯಾವತ್ತೂ ನಿಷ್ಪಕ್ಷಪಾತವಾಗಿ ಕಾರ್ಯವೆಸಗುವುದಕ್ಕೆ ಹೆಸರಾಗಿದ್ದ ಚುನಾವಣಾ ಆಯೋಗ ಕೂಡಾ ವರಸೆ ಬದಲಿಸಿ ಈ ಬಾರಿ ಮೋದಿಯ ಬೆಂಬಲಕ್ಕೆ ನಿಂತಿತು. ಇನ್ನು ಕೆಲವು ಕಡೆ ಮತದಾರರ ಮೇಲೆ ಪ್ರಭಾವ ಬೀರಬಲ್ಲ ಸ್ವಾಮೀಜಿಗಳು, ಮಠಾಧೀಶರು, ಧರ್ಮಾಧಿಕಾರಿಗಳು, ಪಟ್ಟಾಧಿಕಾರಿಗಳು ಎಲ್ಲಾ ಹೇಗೂ ಮೋದಿ ಜತೆ… ಸುಪ್ರೀಂ ಕೋರ್ಟೂ ಕೂಡಾ ಅವರತ್ತಲೇ ವಾಲಿದ ಹಾಗಿತ್ತು. ಬಹುತೇಕ ಮಾಧ್ಯಮಗಳು ಮೋದಿಪರ ಬರೆಯುವುದೇ ಪತ್ರಿಕಾಧರ್ಮ ಎಂದುಕೊಂಡ ಸ್ಥಿತಿ ಇತ್ತು, ಜತೆಗೆ ಯಾರಿಗೂ ಇಲ್ಲದಷ್ಟು ಹಣಬಲವಿತ್ತು. ಇಷ್ಟೆಲ್ಲಾ ಇದ್ದ ಮೇಲೆ ಮೋದಿ ಚುನಾವಣೆ ನಡೆದ 542 ಸ್ಥಾನಗಳನ್ನೂ ಗೆಲ್ಲಬೇಕಾಗಿರುವುದು ಸಹಜವಲ್ಲವೇ ಅಂತ ವಿಜಿ ಕೇಳುತ್ತಾರೆ. ವ್ಯಂಗ್ಯದಿಂದ ಕೂಡಿದರೂ ಈ ಪಶ್ನೆಯಲ್ಲಿ ಈ ಚುನಾವಣೆಯನ್ನು ಬಿಜೆಪಿ ಹೇಗೆ ಗೆದ್ದಿತು ಎನ್ನುವ ಪ್ರಶ್ನೆಗೆ ಉತ್ತರವಿದೆ. ಜತೆಗೆ ಈ ಚುನಾವಣೆಯಲ್ಲಿ ಯಾವ ಮೌಲ್ಯಗಳು ಗೆದ್ದವು ಎನ್ನುವುದಕ್ಕೂ ಉತ್ತರವಿದೆ.

ಫಲಿತಾಂಶವನ್ನು ಆಳಕ್ಕಿಳಿದು ವಿಶ್ಲೇಷಿಸಿದರೆ ಬೆಚ್ಚಿಬೀಳಿಸುವ ಹಲವು ಸತ್ಯಗಳು ಗೋಚರಿಸಬಹುದು. ಈಗಾಗಲೇ ಕಾಣಿಸುವಂತೆ ಯಾವುದೇ ಲಂಗುಲಗಾಮು ಇಲ್ಲದೆ ತಮ್ಮ ಮಾತುಗಳ ಮೂಲಕ ದ್ವೇಷ ಬಿತ್ತುವ ಉತ್ತರ ಕನ್ನಡದ ಅನಂತ ಕುಮಾರ ಹೆಗಡೆ, ಮಂಗಳೂರಿನ ನಳಿನ್ ಕುಮಾರ್ ಕಟೀಲ, ಭೋಪಾಲದ ಪ್ರಜ್ಞಾ ಸಿಂಗ್ ಠಾಕೂರ್ ಮುಂತಾದವರು ಭಾರೀ ಅಂತರದಲ್ಲಿ ಗೆದ್ದಿದ್ದಾರೆ. ಚುನಾವಣೆಗೆ ಕೆಲವೇ ದಿನಗಳ ಮುನ್ನ ಆಪರೇಷನ್ ಕಮಲಕ್ಕೆ ಬಲಿಯಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಉಮೇಶ್ ಜಾಧವ್ ಗೆದ್ದಿದ್ದಾರೆ. ಸಾಲದ್ದಕ್ಕೆ ವಿಧಾನಸಭಾ ಉಪಚುನಾವಣೆಯಲ್ಲಿ ಅವರ ಮಗನನ್ನೇ ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದಾರೆ. ಅನಂತ ಕುಮಾರ ಹೆಗಡೆಯ ವಿರುದ್ದ ಸಮರ್ಥ ಅಭ್ಯರ್ಥಿ ಇರಲಿಲ್ಲ ಎನ್ನೋಣ. ಆದರೆ ಪ್ರಜ್ಞಾ ಸಿಂಗ್ ವಿರುದ್ದ ಸಮರ್ಥ ಎದುರಾಳಿಯಾಗಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯಸಿಂಗ್ ಸ್ಪರ್ಧಿಸಿದ್ದರು. ಜಾಧವ್ ವಿರುದ್ದ ಕಾಂಗ್ರೆಸ್ಸಿನ ಪ್ರಬಲ ನಾಯಕ ಮತ್ತು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿ ಹೆಸರು ಗಳಿಸಿರುವ ಮಲ್ಲಿಕಾರ್ಜುನ ಖರ್ಗೆ ಪ್ರತಿಸ್ಪರ್ಧಿಯಾಗಿದ್ದರು. ಕಟೀಲ್ ವಿರುದ್ಧ ಪ್ರಬಲ ಅಭ್ಯರ್ಥಿಯೇ ಇದ್ದರು.

ಆದರೂ, ಪ್ರಜ್ಞಾಸಿಂಗ್, ಕಟೀಲ್, ಜಾಧವ್ ಅಂತವರೆಲ್ಲಾ ಮೋದಿಯ ಬಲದಿಂದ ಗೆದ್ದರೆ? ಹೌದಾದರೆ ಮೋದಿ ಎಂತವರನ್ನು ನಿಲ್ಲಿಸಿದರೂ ಜನಮತ ನೀಡುತ್ತಾರೆಯೇ? ಮೋದಿಯ ಬಲದಿಂದ ಗೆಲ್ಲದೇ, ಇವರುಗಳೆಲ್ಲಾ ಸ್ಥಳೀಯ ಲೆಕ್ಕಾಚಾರದಲ್ಲೂ ಅಥವಾ ಜಾತಿ ಲೆಕ್ಕಾಚಾರದಲ್ಲೋ ಗೆದ್ದರೆ? ಹಾಗಿದ್ದರೆ ಇವರನ್ನೆಲ್ಲಾ ಪ್ರಚಂಡವಾಗಿ ಬೆಂಬಲಿಸುವ ಮತದಾರರ ಸ್ಥಳೀಯ ಲೆಕ್ಕಾಚಾರ ಎಂತಹದ್ದು? ಅಥವಾ ಒಟ್ಟಿನಲ್ಲಿ ಇವರನ್ನು ಗೆಲ್ಲಿಸುವುದರ ಮೂಲಕ ಮತದಾರರು ಯಾವ ತರದ ಮೌಲ್ಯಗಳನ್ನು ಬೆಂಬಲಿಸಿದರು? ಇಂತಹ ಪ್ರಶ್ನೆಗಳನ್ನೆಲ್ಲಾ ಕೇಳುವಂತಿಲ್ಲ.

ಮತದಾರರ ತೀರ್ಪು ಪವಿತ್ರ. ಭಾರತ ಗೆದ್ದವರನ್ನು ಆರಾಧಿಸುವ ದೇಶ. ಅಧಿಕಾರದ ಮುಂದೆ ಮಕಾಡೆ ಮಲಗುವ ಜಾಯಮಾನ ಭಾರತೀಯ ಸಂಸ್ಕೃತಿಯ ಭಾಗ. ಹಾಗಿರುವಾಗ ಮುಂದಿನ ದಿನಗಳಲ್ಲಿ ಮೋದಿ ಎರಡನೆಯ ಬಾರಿ ಗೆದ್ದದ್ದೇ ಚರ್ಚೆಯ ವಿಷಯವಾದೀತೇ ಹೊರತು, ಆ ಗೆಲುವು ಯಾವ ರೀತಿಯಲ್ಲಿ ಸಾಧ್ಯವಾಯಿತು ಎನ್ನುವ ಪ್ರಶ್ನೆಯನ್ನು ಯಾರೂ ಕೇಳಲಾರರು. ಮೋದಿ ಸಾಧನೆಯ ಬಲದಿಂದ ಗೆದ್ದರೋ ಅಥವಾ ತಂತ್ರ ಹೂಡಿ ಗೆದ್ದರೋ, ಮೋದಿ ಜನರನ್ನು ಮೋಡಿ ಮಾಡಿದ ನಾಯಕತ್ವದ ಗುಣಾವಗುಣಗಳೇನು? ಇಂತಹ ತಂತ್ರದ ಮೂಲಕ ಗೆಲ್ಲುವ ಇಂತಹ ನಾಯಕತ್ವದ ಮಾದರಿ ಭಾರತೀಯ ಪ್ರಜಾತಂತ್ರವನ್ನು ಯಾವ ದಾರಿಯಲ್ಲಿ ಮುನ್ನಡೆಸೀತು? ಈ ಪ್ರಶ್ನೆಗಳೆಲ್ಲಾ ಮುಖ್ಯವಾದರೂ ಅವುಗಳನ್ನು ಕೇಳುವ ವ್ಯವಧಾನವಾಗಲೀ, ಉತ್ಸಾಹವಾಗಲೀ ಸದ್ಯಕ್ಕೆ ಕಂಡು ಬರಲಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...