ನಿಮ್ಮ ಶತ್ರುವನ್ನು ಗೆಲ್ಲುವುದು ಸಾಧ್ಯವಾಗದಿದ್ದರೆ ಅವನೊಡನೆಯೇ ಸೇರಿಕೊಳ್ಳಿ ಎನ್ನುವ ಒಂದು ಗಾದೆ ಮಾತಿದೆ. ಇದನ್ನು ತುಸು ಬದಲಿಸಿ ಶತ್ರುವನ್ನು ನಿಮ್ಮೊಳಗೆಯೇ ಸೇರಿಸಿಕೊಳ್ಳಿ ಎಂದೂ ಹೇಳಬಹುದು. ಇಲ್ಲಿ ಪ್ರಾಚೀನಕಾಲದಿಂದ ಇಂದಿನವರೆಗೂ ಇದೇ ವರಸೆಯನ್ನು ವೈದಿಕ ಪರಂಪರೆ ಬಳಸುತ್ತ ಬಂದಿದೆ. ಉದಾಹರಣೆಗೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದಂತೆ ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ಈ ಸಂಘಪರಿವಾರದ (ಇವರನ್ನು ಹಿಂದೂ ಮತಾಂಧರೂ ಎನ್ನಬಹುದು) ಒಂದು ನಾಯಿಯೂ ಭಾಗವಹಿಸದೇ ಇದ್ದುದರಿಂದ ಮುಜುಗರ ಪಡುತ್ತಿರುವ ಇವರು ಕಾಂಗ್ರೆಸ್ಸಿನ ಹಲವು ನಾಯಕರನ್ನು ಅಪಹರಿಸಲು ಪ್ರಯತ್ನಿಸುತ್ತಿದ್ದಾರೆ. ನೆಹರೂ ವಿರುದ್ಧ ವಲ್ಲಭಭಾಯಿ ಪಟೇಲರನ್ನು ಎತ್ತಿಕಟ್ಟಿ ಅವರನ್ನು ಅಪಹರಿಸಲು ಪ್ರಯತ್ನಿಸಿದ ಇವರು ಈಗ ಸುಭಾಷಚಂದ್ರ ಬೋಸರನ್ನು ಎತ್ತಿಕಟ್ಟಿ ಅವರನ್ನೂ ಅಪಹರಿಸಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಬೇರೆಯವರನ್ನು ಅಪಹರಿಸಿ ತನ್ನವರನ್ನಾಗಿಸಿಕೊಳ್ಳುತ್ತಿದ್ದಾರೆ. ಹೀಗೆ ಮಾಡಿಯೇ ಹಲವಾರು ರಾಜ್ಯಗಳಲ್ಲಿ ಬೇರೆ ಪಕ್ಷಗಳ ಚುನಾಯಿತ ಸರಕಾರಗಳನ್ನು ಬೀಳಿಸಿ ತಮ್ಮ ಸರಕಾರಗಳನ್ನು ರಚಿಸಿಕೊಂಡಿದ್ದಾರೆ.
ಅಪಹರಿಸುವ ಈ ಬುದ್ಧಿ ವೈದಿಕರ, ತಮ್ಮನ್ನು ಸನಾತನಿಗಳೆಂದು ಕರೆದುಕೊಳ್ಳುತ್ತಿರುವ ಹಿಂದೂ ಮತಾಂಧರ ಜನ್ಮಜಾತ ಸ್ವಭಾವವಾಗಿದೆ. ಪ್ರಾಚೀನ ಕಾಲದಿಂದಲೂ ಅವರು ಈ ವರಸೆಯಲ್ಲಿ ಪಳಗಿಹೋಗಿದ್ದಾರೆ. ಪ್ರಾಚೀನಕಾಲದಲ್ಲಿ ಇವರಿಂದ ಸಂಪೂರ್ಣವಾಗಿ ಭಿನ್ನರಾಗಿದ್ದ ’ಶಿವ’ನನ್ನು, ’ಕೃಷ್ಣ’ನನ್ನು ನಂತರ ’ಗೌತಮ ಬುದ್ಧ’ನನ್ನು ಇತ್ತೀಚೆಗೆ ಸಾಯೀಬಾಬಾನನ್ನು ಇದೇ ರೀತಿ ಅಪಹರಿಸಿ ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ.
ಶಿವ ಖಂಡಿತವಾಗಿಯೂ ವೇದ-ಪೂರ್ವ ಕಾಲದ ದೇವತೆ. ಕ್ರಿಸ್ತ ಪೂರ್ವ 10000 ವರ್ಷ ಹಳೆಯದೆಂದು ಹೇಳಲಾಗುತ್ತಿರುವ ಭೀಮ್ಬೆಟ್ಕಾದ ಚಿತ್ರಗಳಲ್ಲಿ ಎರಡು ಚಿತ್ರಗಳನ್ನು ನಂದಿಯ ಜೊತೆಗೆ ತ್ರಿಶೂಲಧಾರಿಯ ಚಿತ್ರ ಎಂದು ಭೀಮ್ಬೆಟ್ಕಾದ ಅಧ್ಯಯನ ಮಾಡಿದ ವಾಕನ್ಕರ್ ಹಾಗೂ ಎರ್ವಿನ್ ನೂಮಾಯೇರ್ ವ್ಯಾಖ್ಯಾನ ಮಾಡುತ್ತಾರೆ. “ಶಿವ ಮತ್ತು ಉಮೆ ಇವರು ಮೂಲಭೂತವಾಗಿ ದ್ರಾವಿಡರ ಮೂಲದ ದೇವತೆಗಳಾಗಿದ್ದರು” ಎನ್ನುತ್ತಾರೆ ಭಾರತದ ಇತಿಹಾಸವನ್ನು ಬ್ರಿಟಿಷರ ಜೇಮ್ಸ ಮಿಲ್ ಹಾಗೆಯೇ ಹಿಂದೂ-ಮುಸ್ಲಿಮ್ ಕನ್ನಡಕ ಹಾಕಿ ನೋಡುವ ಇತಿಹಾಸಕಾರ ಡಾ. ಆರ್.ಸಿ.ಮಜುಮದಾರ, ಭಾರತೀಯ ವಿದ್ಯಾ ಭವನ ಪ್ರಕಟಿಸಿರುವ ’ಭಾರತದ ಜನರ ಇತಿಹಾಸ ಹಾಗೂ ಸಂಸ್ಕೃತಿ’ ಎಂಬ ಬೃಹತ್ ಇತಿಹಾಸದ ಮೊದಲ ಸಂಪುಟ ’ದ ವೇದಿಕ್ ಏಜ್’ನ ಪುಟ 164ರಲ್ಲಿ.
ಆರ್ಯರ ಮೂಲಗ್ರಂಥವಾದ ಋಗ್ವೇದದಲ್ಲಿ ಶಿವನ ಸುಳಿವೇ ಇಲ್ಲ. 10552 ಋಕ್ಕುಗಳಿರುವ ಋಗ್ವೇದದಲ್ಲಿ ಇಂದ್ರನನ್ನು 2911 ಬಾರಿ, ರುದ್ರನನ್ನು 155 ಬಾರಿ ಬ್ರಹ್ಮನನ್ನು 119 ಬಾರಿ ಹಾಗೂ ವಿಷ್ಣುವನ್ನು 1 ಬಾರಿ ಉಲ್ಲೇಖಿಸಲಾಗಿದೆ. ಆದರೆ ಶಿವನ ಉಲ್ಲೇಖ ಒಂದು ಬಾರಿಯೂ ಬರುವುದಿಲ್ಲ. ಋಗ್ವೇದ ಕಾಲದಲ್ಲಿ ಶಿವ ಆರ್ಯರ ದೈವವೇ ಆಗಿರಲಿಲ್ಲ. ಆದರೆ ಇಂದು ಸನಾತನಿಗಳಿಂದ ಶಿವ ಅಪಹೃತನಾಗಿ ನಂತರ ಋಗ್ವೇದದ ಇಂದ್ರಾದಿ ದೇವತೆಗಳನ್ನೆಲ್ಲ ಮೂಲೆಗೊತ್ತಿ ಹಿಂದೂಗಳ ಬ್ರಹ್ಮ-ವಿಷ್ಣು-ಮಹೇಶ್ವರರ ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದಾನೆ.
’ಶಿವ’ ಶಬ್ದವನ್ನು ಋಗ್ವೇದದಲ್ಲಿ ಸುಮಾರು ಮೂರು ಕಡೆ ಬಳಸಲಾಗಿದೆ. “ಸ ನೋ ಯುವೇನ್ದ್ರೋ ಜೋಹೂತ್ರಃ ಸಖಾ ಶಿವೋ ನರಾಮಸ್ತು ಪಾತಾ, ಯಃ ಶಂಸನ್ತಂ ಯಃ ಶಶಮಾನಮೂತೀ ಪಚನ್ತಂ ಚ ಸ್ತುವನ್ತಂ ಚ ಪ್ರಣೇಷತ್” (ಋಗ್ವೇದ 2.20.30), “ಯೋ ಗೃಣತಾಮಿದಾಸಿಥಾಪಿರೂತೀ ಶಿವಃ ಸಖಾ, ಸ ತ್ವಂ ನ ಇಂದ್ರ ಮೃಳಯ”, (ಋಗ್ವೇದ 6.45.7), ಹಾಗೂ “ಸ ನ ಇಂದ್ರಃ ಶಿವಃ ಸಖಾಶ್ವಾವದ್ಗೋಮದ್ಯವಮತ್, ಉರುಧಾರೇವ ದೋಹತೇ” (ಋಗ್ವೇದ 8.93.30). ಆದರೆ ಈ ಸೂಕ್ತಗಳೆಲ್ಲ ಇಂದ್ರನನ್ನು ಕುರಿತಾದ ಸೂಕ್ತಗಳು. ಋಗ್ವೇದವನ್ನು ಕನ್ನಡಕ್ಕೆ ಅನುವಾದ ಮಾಡಿ ಸುದೀರ್ಘ ಭಾಷ್ಯ ಬರೆದಿರುವ ಎಚ್.ಪಿ.ವೆಂಕಟರಾಯರು ಈ ಸೂಕ್ತಗಳಲ್ಲಿ ಬರುವ ’ಶಿವ’ ಶಬ್ದವನ್ನು “ಸುಖಕರನೂ ಆದ” ಹಾಗೂ “ಮಂಗಳಕರನೂ ಆದ” ಎಂದು ಇಂದ್ರನ ವಿಶೇಷಣವಾಗಿ ಬಳಸಲಾಗಿದೆ ಎಂದು ವ್ಯಾಖ್ಯಾನಿಸುತ್ತಾರೆ.
ಹಾಗೆಯೇ ಶಿವನ ವಾಹನವಾದ ಎತ್ತನ್ನು ಋಗ್ವೇದದಲ್ಲಿ ಸುಮಾರು 260ಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಉಲ್ಲೇಖಿಸಲಾಗಿದೆಯಾದರೂ ಒಂದು ಸಲವೂ ಅದನ್ನು ರುದ್ರನ ವಾಹನದ ರೂಪದಲ್ಲಿ ಉಲ್ಲೇಖಿಸಲಾಗಿಲ್ಲ. ಶಿವನ ಪ್ರಸ್ತಾಪವೇ ಇಲ್ಲದಿರುವುದರಿಂದ ಎತ್ತನ್ನು ಶಿವನ ವಾಹನವನ್ನಾಗಿ ಉಲ್ಲೇಖಿಸುವ ಪ್ರಶ್ನೆಯೇ ಬರುವುದಿಲ್ಲ.
ಅಪಹರಣದ ಈ ಅಪವಾದದಿಂದ ತಪ್ಪಿಸಿಕೊಳ್ಳಲು ಋಗ್ವೇದದಲ್ಲಿ ನಮೂದಾಗಿರುವ ರುದ್ರನೇ ಶಿವ ಎಂದು ಹಲವು ವೈದಿಕರು ವಾದಿಸುತ್ತಾರೆ. ಹಾಗೆಯೇ ನಂತರ ವೇದೋತ್ತರ ಕಾಲದಲ್ಲಿ, ವೈದಿಕ ಸಾಹಿತ್ಯದಲ್ಲಿ ರುದ್ರ ಹಾಗೂ ಶಿವ ಶಬ್ದಗಳನ್ನು ಪರ್ಯಾಯಗಳಾಗಿ ಬಳಸಲು ಪ್ರಾರಂಭಿಸುತ್ತಾರೆ. ಆದರೆ ಋಗ್ವೇದ 11 ರುದ್ರರು ಇರುವುದಾಗಿ ಹೇಳುತ್ತದೆ. ಆದುದರಿಂದ ಅದು ರುದ್ರ ಶಬ್ದವನ್ನು ಹೆಚ್ಚಾಗಿ ಬಹುವಚನದಲ್ಲಿ ಉಪಯೋಗಿಸುತ್ತದೆ (ಋಗ್ವೇದ 1.39.7, 1.45.1, 1.58.3 ಇತ್ಯಾದಿ). ಈ ರುದ್ರನ ಮಕ್ಕಳು ಗಣೇಶ ಹಾಗೂ ಕುಮಾರರು ಅಲ್ಲ, ಇಬ್ಬರು ಮರುತ್‌ಗಳು ರುದ್ರನ ಮಕ್ಕಳೆಂದು ಹೇಳುತ್ತದೆ (ಋಗ್ವೇದ 5.60.5). ಗಣೇಶ ಹಾಗೂ ಕುಮಾರರು ಶಿವನ ಮಕ್ಕಳೆಂದು ವೇದೋತ್ತರ ಗ್ರಂಥಗಳು ಹೇಳುತ್ತವೆ.
ಶಿವ ಮತ್ತು ರುದ್ರರ ವರ್ಣನೆಯಲ್ಲಿಯೂ ವ್ಯತ್ಯಾಸವಿದೆ. ಋಗ್ವೇದ 1.43.4. ರುದ್ರನನ್ನು ಗಾಥಪತಿಂ ಅಂದರೆ ಸ್ತೋತ್ರಪಾಲಕನೆಂದೂ, ಮೇಧಪತಿಂ ಅಂದರೆ ಯಜ್ಞಗಳ ಪಾಲಕನೆಂದೂ, ಭೇಷಜಂ ಅಂದರೆ ಔಷಧಿ ಕೊಡುವವನೆಂದೂ, 1.114.4 ಅವನನ್ನು ಯಜ್ಞಸಾಧಂ ಅಂದರೆ ಯಜ್ಞ ಸಾಧಕನೆಂದೂ, 1.144.1 ಕಪರ್ದಿನೇ ಅಂದರೆ ಹೆಣೆಯಲ್ಪಟ್ಟ ಜಟೆಯನ್ನು ಧರಿಸಿದವನೆಂದೂ ವರ್ಣಿಸುತ್ತವೆ. ಇವೆಲ್ಲಕ್ಕಿಂತ ಹೆಚ್ಚಾಗಿ 2.1.6. ರುದ್ರನನ್ನು ಅಸುರನೆಂದು ಕರೆಯುತ್ತದೆ. ಆದರೆ ಈ ಅಸುರ ಶಬ್ದವನ್ನು ಅ-ಸುರ ಎಂದು ಬಿಡಿಸದೇ ಅಸು-ರ ಎಂದು ಬಿಡಿಸಿ ಬೇರೆ ಅರ್ಥವನ್ನು ನೀಡಲಾಗಿದೆ. ಸಾಯಣರು ರುದ್ರ ಶಬ್ದಕ್ಕೆ ಆರು ವಿಭಿನ್ನ ಅರ್ಥಗಳನ್ನು ಕೊಟ್ಟಿದ್ದರೂ ಅವುಗಳಲ್ಲಿ ಯಾವವೂ ನಂತರ ’ಶಿವ’ ಶಬ್ದಕ್ಕೆ ನೀಡಲಾದ ಅರ್ಥದ ಹತ್ತಿರವೂ ಸುಳಿಯುವುದಿಲ್ಲ. ಯಾರು ಈ ರುದ್ರರು ಎಂಬ ಪ್ರಶ್ನೆಗೆ ಬೃಹದಾರಣ್ಯಕ ಉಪನಿಷತ್ 3.9.4. ಹೀಗೆ ಉತ್ತರಿಸುತ್ತದೆ: “ಮಾನವ ದೇಹದಲ್ಲಿ ಹತ್ತು ಅಂಗಗಳಿವೆ, ಮನಸ್ಸು ಹನ್ನೊಂದನೇ ಸ್ಥಾನದಲ್ಲಿದೆ. ಅವು ಈ ನಶ್ವರ ದೇಹದಿಂದ ನಿರ್ಗಮಿಸಿದಾಗ, ಅವರ ಸಂಬಂಧಿಕರು ಅಳುವಂತೆ ಮಾಡುತ್ತವೆ. ಆದ್ದರಿಂದ ಅವರನ್ನು ರುದ್ರರು ಎಂದು ಕರೆಯಲಾಗುತ್ತದೆ.”
ವೈದಿಕ ಗ್ರಂಥಗಳಲ್ಲಿ ವರ್ಣಿಸಲ್ಪಟ್ಟ ರುದ್ರನಿಗೆ ತದ್ವಿರುದ್ಧವಾಗಿ ಶಿವ ಯಜ್ಞಗಳ ನಾಷಕನಾಗಿದ್ದ. ಆತ ದಕ್ಷನ ಯಜ್ಞವನ್ನು ನಷ್ಟಪಡಿಸಿದ್ದ. ಆತ ತ್ರಿಶೂಲಧಾರಿ, ತ್ರಿನೇತ್ರಿ, ವ್ಯಾಘ್ರಚರ್ಮಧಾರಿ, ಶ್ಮಶಾನದ ಬೂದಿ ಬಳಿದುಕೊಳ್ಳುತ್ತಿದ್ದವ, ಕತ್ತಲ್ಲಿ ಹಾವನ್ನು ಧರಿಸಿದವ ಇತ್ಯಾದಿ. ಹಾಗಾದರೆ ಋಗ್ವೇದದ ರುದ್ರ ವೇದೋತ್ತರ ಗ್ರಂಥಗಳಲ್ಲಿ ಪುರಾಣಗಳಲ್ಲಿ ಶಿವನಾಗಿದ್ದು ಹೇಗೆ?
ಶಿವನ ಸಂಕೇತವಾದ ’ಲಿಂಗ’ವನ್ನು ಋಗ್ವೇದ ತನ್ನ ಶತ್ರುವನ್ನಾಗಿ ಪರಿಗಣಿಸುತ್ತದೆ. ಶಿವನನ್ನು ’ಶಿಶ್ನದೇವ’ ಎಂದು ಹೀಯಾಳಿಸುತ್ತದೆ. ಅವನ ಅನುಯಾಯಿಗಳನ್ನು ಯಜ್ಞಗಳಿಂದ ದೂರ ಇಡುವಂತೆಯೂ, ಅವರನ್ನು ನಾಶಪಡಿಸುವಂತೆಯೂ ತನ್ನ ದೈವಗಳನ್ನು ಕೋರುತ್ತದೆ. 7ನೆಯ ಮಂಡಲದ 21ನೆಯ ಸೂಕ್ತದ 5ನೆಯ ಮಂತ್ರ “ನ ಯಾತವ ಇಂದ್ರ ಜೂಜುವುರ್ನೋ ನ ವಂದನಾ ಶವಿಷ್ಠ ವೇಧ್ಯಾಭಿಃ, ಸ ಶರ್ಧದರ್ಯೋ ವಿಷುಣಸ್ಯ ಜಂತೋರ್ಮಾ ಶಿಶ್ನದೇವಾ ಅಪಿ ಗುಋತಂ ನಃ” ಎಂದು ಹೇಳುತ್ತದೆ. ಈ ಮಂತ್ರವನ್ನು ಸರಳವಾಗಿ ಕನ್ನಡದಲ್ಲಿ “ಇಂದ್ರನೇ, ಯಾವುದೇ ದುಷ್ಟಶಕ್ತಿಗಳು ಅಥವಾ ರಾಕ್ಷಸರು ತಮ್ಮ ಸಾಧನಗಳಿಂದ ನಮ್ಮನ್ನು ಪ್ರೇರೇಪಿಸಲಿಲ್ಲ, ಓ ಪ್ರಬಲ ದೇವರೇ, ನಮ್ಮ ನಿಜವಾದ ದೇವರು ಪ್ರತಿಕೂಲವಾದ ಕ್ಷುದ್ರ ಸಮೂಹಗಳನ್ನು ನಿಗ್ರಹಿಸಲಿ: ಅಶ್ಲೀಲರು ನಮ್ಮ ಪವಿತ್ರ ಆರಾಧನೆಯನ್ನು ಸಮೀಪಿಸದಿರಲಿ” ಎಂದು ಹೇಳಬಹುದು. ಈ ಮಂತ್ರವನ್ನು ವಿವರಿಸುತ್ತ ಯಾಸ್ಕರ ನಿರುಕ್ತವನ್ನು ಉದ್ಧರಿಸಿ ಎಚ್.ಪಿ.ವೆಂಕಟರಾಯರು ಹೀಗೆ ಹೇಳುತ್ತಾರೆ: “ಶಿಶ್ನದೇವಾ ಎಂದರೆ ಬ್ರಹ್ಮಚರ್ಯಾದಿ ನಿಯಮವಿಲ್ಲದೇ ಅಗಮ್ಯಾಗಮನ ಅಕ್ರಮ ಸ್ತ್ರೀಸಂಗ ಮೊದಲಾದ ದುಷ್ಟ ಕಾರ್ಯಗಳಲ್ಲಿ ಪ್ರವೃತ್ತರಾಗಿರುವವರು, ನೀತಿಬಾಹಿರರು, ಅಥವಾ ಇಂದ್ರಾದಿ ದೇವತೆಗಳನ್ನು ಪೂಜಿಸದೇ ಪುರುಷ ಲಿಂಗವನ್ನೇ ದೇವರೆಂದು ಭಾವಿಸಿ ಅಕ್ರಮವೂ ನೀತಿಬಾಹಿರವೂ ಆದ ಕ್ರೀಡೆಗಳಲ್ಲಿ ಆಸಕ್ತರಾಗಿರುವ ದುಷ್ಟರು ಎಂದೂ ಅರ್ಥವನ್ನು ಹೇಳಬಹುದು” ಎನ್ನುತ್ತಾರೆ. ಋಗ್ವೇದಕ್ಕೆ ಹಿಂದೀ ಭಾಷೆಯಲ್ಲಿ ’ಸುಬೋಧ ಭಾಷ್ಯ’ ಬರೆದಿರುವ ಪದ್ಮ ವಿಭೂಷಣ ಡಾ. ಶ್ರೀಪಾದ ದಾಮೋದರ ಸಾತವಲೇಕರ ಅವರೂ ಹೀಗೆಯೇ ಅರ್ಥೈಸುತ್ತಾರೆ: “ಶಿಶ್ನ ಪೂಜಕರು ನಮ್ಮ ಯಜ್ಞಗಳ ಹತ್ತಿರ ಬರದಂತಿರಲಿ” ಎನ್ನುತ್ತಾರೆ.
ಋಗ್ವೇದದ 10ನೆಯ ಮಂಡಲದ 99ನೆಯ ಸೂಕ್ತದ 3ನೆಯ ಮಂತ್ರವೂ ಇದೇ ರಾಗ ಹಾಡುತ್ತದೆ. “ಸ ವಾಜಂ ಯಾತಾಪದುಷ್ಪದ ಯನ್ವ್ಸರ್ಷಾತಾ ಪರಿ ಷದತ್ಸನಿಷ್ಯನ್, ಅನರ್ವಾ ಯಚ್ಛತದುರಸ್ಯ ವೇದೋ ಘ್ನಚ್ಛಿಶ್ನದೇವಾಂ ಅಭಿ ವರ್ಪಸಾ ಭೂತ್”. ಎಚ್.ಪಿ.ವೆಂಕಟರಾಯರು ಈ ಮಂತ್ರವನ್ನು ಹೀಗೆ ಅರ್ಥೈಸುತ್ತಾರೆ: “ಯುದ್ಧಕ್ಕೆ ಹೋಗುವ ಇಂದ್ರನು ಶುದ್ಧವಾದ ಗಮನವುಳ್ಳವನಾಗಿ ಹೋಗುತ್ತಲೂ, ಶತ್ರು ಧನವನ್ನು ಪಡೆಯಲಿಚ್ಛಿಸುತ್ತಲೂ ಯುದ್ಧಕ್ಕೆ ಹೋಗಿ ಭಾಗವಹಿಸುತ್ತಾನೆ. ಯುದ್ಧದಲ್ಲಿ ಅಪ್ರತಿಹತನಾದ ಇಂದ್ರನು ಪುರುಷಾಂಗವನ್ನು ಪೂಜಿಸುವ ಅಸುರರನ್ನು ನಾಶಪಡಿಸುತ್ತಾ ನೂರಾರು ಬಾಗಿಲುಗಳುಳ್ಳ ಶತ್ರು ಪಟ್ಟಣಗಳಲ್ಲಿ ಗುಪ್ತವಾಗಿರುವ ಧನವನ್ನು ತನ್ನ ವ್ಯಾಪಕವಾದ ಶಕ್ತಿಯಿಂದ ವಶಪಡಿಸಿಕೊಳ್ಳುತ್ತಾನೆ”. ಹಾಗಾದರೆ ಋಗ್ವೇದದಲ್ಲಿ ಹೀಗಳೆಯಲ್ಪಟ್ಟು ಶತ್ರುವೆಂದು ಪರಿಗಣಿಸಲಾಗಿದ್ದ ಶಿವ ನಂತರ ಹಿಂದೂಗಳ ತ್ರಿಮೂರ್ತಿಗಳಲ್ಲಿ ಒಬ್ಬನಾದದ್ದು ಹೇಗೆ?
ಇದನ್ನೂ ಓದಿ: ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ನಿಷಿದ್ಧ ಯೌನ ಸಂಬಂಧಗಳು; ಕೊನೆಯ ಭಾಗ
ನಂತರ ರಾಮಾಯಣದ ರಚನೆಯ ಹೊತ್ತಿಗೆ ವೈದಿಕರು ಶಿವನನ್ನು ವೈದಿಕ ದೇವತೆ ಎಂದು ಒಪ್ಪಿಕೊಳ್ಳಲು ಪ್ರಾರಂಭಿಸಿದ್ದರು ಎಂದು ತೋರುತ್ತದೆ. ರಾಮನ ಪೂರ್ವಜ ಭಗೀರಥ ಗಂಗೆಯನ್ನು ಆಕಾಶದಿಂದ ಭೂಮಿಗೆ ತರುವ ಸಂದರ್ಭದಲ್ಲಿ ರಾಮಾಯಣದಲ್ಲಿ ಶಿವ ಪ್ರತ್ಯಕ್ಷನಾಗುತ್ತಾನೆ. ರಾಮಾಯಣದಲ್ಲಿ ಶಿವನಿಗೆ ಸ್ಥಾಣು, ಹರ, ಪಶುಪತಿ, ಉಮಾಪತಿ, ಶಿವ, ಶಂಕರ, ತ್ರಿನಯನ, ರುದ್ರ, ಭವ ಎಂಬ ಹೆಸರುಗಳನ್ನು ಬಳಸಲಾಗಿದೆ. ರಾಮಾಯಣದಲ್ಲಿ ಪೂಜೆ ಎಂಬ ಶಬ್ದವನ್ನು ಹಲವಾರು ಬಾರಿ ಬಳಸಲಾಗಿದ್ದರೂ ಬಹುಶಃ ದೇವಾಲಯಗಳು ಇನ್ನೂ ಪ್ರಚಲಿತವಾಗಿರಲಿಲ್ಲ ಎಂದು ತೋರುತ್ತದೆ. ರಾಮಾಯಣದಲ್ಲಿ ಹಲವಾರು ಯಜ್ಞಗಳ ಉಲ್ಲೇಖಗಳಿವೆಯೇ ಹೊರತು ದೇವಾಲಯಗಳ ಉಲ್ಲೇಖವಿಲ್ಲ, ರಾಮನಾಗಲೀ, ಬೇರೆ ಯಾರೇ ಆಗಲಿ ದೇವಾಲಯಕ್ಕೆ ಹೋಗಿರುವ ಪ್ರಸ್ತಾಪವಿಲ್ಲ. ರಾಮ ಶಿವನಿಗಾಗಿ ದೇವಾಲಯವನ್ನು ಕಟ್ಟಿದ ಪ್ರಸ್ತಾಪ ಪದ್ಮ ಪುರಾಣದ ಪಾತಾಳ ಖಂಡದ 112ನೆಯ ಅಧ್ಯಾಯದಲ್ಲಿ ಬರುತ್ತದೆ, ರಾಮಾಯಣದಲ್ಲಲ್ಲ. ಅಲ್ಲಿ ಕೂಡ ’ಶಿವಾಲಯ’ ಎಂಬ ಶಬ್ದವನ್ನು ಬಳಸಲಾಗಿದೆ. ಸನಾತನ ಹಿಂದೂಗಳ ಎಲ್ಲಾ ಗ್ರಂಥಗಳು ಕಲಬೆರಕೆಯಾಗಿರುವುದರಿಂದ ರಾಮಾಯಣದಲ್ಲಿ ಶಿವನ ಬಗೆಗಿನ ಈ ಪ್ರಸ್ತಾಪಗಳು ವೈದಿಕರು ಶಿವನನ್ನು ಅಪಹರಿಸಿದ ನಂತರ ಸೇರಿಸಿದ ಪ್ರಸ್ತಾಪಗಳೇ ಎನ್ನುವುದು ಒಂದು ಉತ್ತಮ ಸಂಶೋಧನೆಯ ವಿಷಯವಾಗಬಹುದು.
ರಾಮಾಯಣದ ಮೂಲಕ ವೈದಿಕ ಗ್ರಂಥಗಳಲ್ಲಿ ಪ್ರವೇಶ ಪಡೆದ ಶಿವ, ಮಹಾಭಾರತದಲ್ಲಿ ಸಾಕಷ್ಟು ಮಹತ್ವ ಪಡೆಯುತ್ತಾನೆ. ದಕ್ಷ ತನ್ನ ಯಜ್ಞದಲ್ಲಿ ಶಿವನಿಗೆ ಹವಿಸ್ಸಿನ ಭಾಗವನ್ನು ಕೊಡಲು ನಿರಾಕರಿಸುವುದಕ್ಕಾಗಿಯೇ ಅವನನ್ನು ಆಹ್ವಾನಿಸುವುದಿಲ್ಲ. ಶಿವನ ಹೆಂಡತಿ ಸತಿಯ ಕಾರಣದಿಂದ ಶಿವ ದಕ್ಷನ ಯಜ್ಞವನ್ನು ನಾಶಪಡಿಸುತ್ತಾನೆ. ಆದರೆ ನಂತರ ಶಿವನ ಭೀಕರತೆಗೆ ಹೆದರಿದ ದೇವತೆಗಳು ಅವನಿಗೆ ಯಜ್ಞದ ಹವಿಸ್ಸನ್ನು ಕೊಟ್ಟು ಅವನನ್ನು ಸಮಾಧಾನ ಪಡಿಸುತ್ತಾರೆ. ಆಗ ಶಿವ ಯಜ್ಞವನ್ನು ’ಪುನರ್‌ಸ್ಥಾಪಿಸುತ್ತಾನೆ’. ಮಹಾಭಾರತದ ದ್ರೋಣ ಪರ್ವದ ಅಧ್ಯಾಯ 173, ;ಮಹಾದೇವ’ ದಕ್ಷನ ಯಜ್ಞವನ್ನು ನಾಶಪಡಿಸಿದನೆಂದು ಹೇಳುತ್ತಲೂ ಹವಿಸ್ಸಿನ ಭಾಗವನ್ನು ದೇವತೆಗಳು ’ರುದ್ರ’ನಿಗೆ ಕೊಟ್ಟು ಅವನನ್ನು ಸಮಾಧಾನಪಡಿಸಿದರು ಎಂದು ಹೇಳುತ್ತದೆ. “ರುದ್ರಸ್ಯ ಯಜ್ಞಭಾಗಂ ಚ ವಿಶಿಷ್ಟಂ ತೆ ನ್ವಕಲ್ಪಯನ್, ಭಯೇನ ತ್ರಿದಶಾ ರಾಜಂಶರಣಂ ಚ ಪ್ರಪೆದಿರೆ. ತೇನ ಚೈವಾತಿಕೊಪೇನ ಸ ಯಜ್ಞಃ ಸನ್ಧಿಸ್ತದಾ, ಯತ್ತಾಶ್ಚಾಪಿ ಸುರಾ ಆಸನ್ಯತ್ತಾಶ್ಚಾದ್ಯಪಿ ತಂ ಪ್ರತಿ”. ಈ ಬಗ್ಗೆ ತಮ್ಮ ಪುಸ್ತಕ ’ಹಿಂದೂ ಮಿಥ್ಸ್ನ ಪುಟ 116ರಲ್ಲಿ ವೆಂಡಿ ಡೊನೇಗರ್, “ಮಹಾಕಾವ್ಯಗಳ ನಂತರದ ಸಮಯದಲ್ಲಿ ಶಿವ ಒಬ್ಬ ದೊಡ್ಡ ಪಂಥೀಯ ಹಿಂದೂ ದೇವತೆಯಾಗಿ ರೂಪಗೊಳ್ಳುತ್ತಾನೆ. ಈ ಸಮಯದಲ್ಲಿ ಅವನ ಅರಾಧನೆಯು ಮುಖ್ಯವಾಗಿ ಲಿಂಗದ ಆರಾಧನೆ ಮತ್ತು ತಪಸ್ವಿ ಆರಾಧನೆಯ ವೈದೇತರ ಅಭ್ಯಾಸಗಳಿಂದ ನಿರೂಪಿಸಲ್ಪಟ್ಟಿತು. ರುದ್ರ-ಶಿವ ಅವರ ಆರಂಭಿಕ ಮಿಥಕವು, ಹೊರಗಿನ ಕಪ್ಪು ಬಣ್ಣದವರನ್ನು ವೈದಿಕ ಆಚರಣೆಯಲ್ಲಿ ಸೇರ್ಪಡಿಸಿಕೊಳ್ಳುವ ಪ್ರಕ್ರಿಯೆಯ ಪ್ರಾರಂಭವನ್ನು ಸೂಚಿಸುತ್ತದೆ. ಆದರೆ ಆಗಲೂ ಅವನನ್ನು ಭಯದಿಂದ ಪೂಜಿಸಲಾಗುತ್ತಿತ್ತೇ ಹೊರತು, ನಂತರ ಅವನ ಬಗ್ಗೆ ಚಾಲನೆಗೆ ಬಂದ ಭಕ್ತಿಯ ಮನೋಭಾವದಿಂದಲ್ಲ ಎನ್ನುತ್ತಾರೆ.
ಮಹಾಭಾರತದ ಅನುಶಾಸನಪರ್ವದ 17ನೆಯ ಅಧ್ಯಾಯದಲ್ಲಿ ಕೃಷ್ಣ ಯುಧಿಷ್ಠಿರನಿಗೆ ಶಿವನ ಸಾವಿರ ಹೆಸರುಗಳನ್ನು ಹೇಳುತ್ತಾನೆ. ಅವುಗಳಲ್ಲಿ ಹಲವನ್ನು ಬ್ರಹ್ಮ ಹೇಳಿರುವುದಾಗಿಯೂ ಹಲವು ’ವೇದಗಳಲ್ಲಿ ವೇದಾಂಗಗಳಲ್ಲಿ’ ಇರುವುದಾಗಿಯೂ ಹೇಳುತ್ತಾನೆ. ವೈದಿಕರ ಮೂಲಗ್ರಂಥ ಋಗ್ವೇದದಲ್ಲಿ ಶಿಶ್ನದೇವ ಎಂದು ಕರೆಸಿಕೊಂಡು ಹೀಗಳೆಯಲ್ಪಟ್ಟ ಶಿವನ ಬಗ್ಗೆ ಈ ಅಧ್ಯಾಯ “ಮಹಾದೇವನ ಬಗ್ಗೆ ಯಾರು ದ್ವೇಷಪೂರ್ಣ ಭಾವನೆ ಹೊಂದಿರುತ್ತಾರೋ ಅವರು ಖಂಡಿತವಾಗಿಯೂ ತಮ್ಮ ಪೂರ್ವಜರೊಂದಿಗೆ ಹಾಗೂ ತಮ್ಮ ಸಂತತಿಯೊಂದಿಗೆ ನರಕಕ್ಕೆ ಹೋಗುತ್ತಾರೆ” ಎಂದು ಹೇಳುತ್ತದೆ. ಶಿವನನ್ನು ’ಯಜ್ಞಾನಾಮಪಿ ಯೊ ಯಜ್ಞಃ’ ಹಾಗೂ ’ರುದ್ರಾಣಾಮಪಿ ಯೊ ರುದ್ರಃ’ ಅಂದರೆ ಎಲ್ಲಾ ಯಜ್ಞಗಳ ಯಜ್ಞ, ಎಲ್ಲಾ ರುದ್ರರ ರುದ್ರ ಎಂದು ಹೊಗಳುತ್ತದೆ.
ಮಹಾಭಾರತದ ಶಾಂತಿಪರ್ವದಲ್ಲಿಯೂ ಈ ಸಹಸ್ರನಾಮ ಇದೆ. ಇದರ ಹಲವು ಭಾಗಗಳು ಶಿವ ಪುರಾಣ, ಲಿಂಗ ಪುರಾಣ, ವಾಯು ಪುರಾಣ ಹಾಗೂ ಬ್ರಹ್ಮಾಂಡ ಪುರಾಣಗಳಲ್ಲಿಯೂ ದೊರಕುತ್ತವೆ. ಅನುಶಾಸನ ಪರ್ವದ 18ನೆಯ ಅಧ್ಯಾಯದ ಹೆಸರೇ ಶಿವಸ್ತುತಿಮಾಹಾತ್ಮ್ಯ. ಇದರಲ್ಲಿ ಕೃಷ್ಣದ್ವೈಪಾಯನ, ವೈಶಂಪಾಯನ, ವಾಲ್ಮೀಕಿ, ಚತುಃಶೀರ್ಷ, ಪರಶುರಾಮ, ದೇವಲ ಇನ್ನೂ ಹಲವಾರು ಋಷಿ-ಮುನಿಗಳು ಶಿವನ ಮಹಿಮೆಯನ್ನು ಕೊಂಡಾಡಿ ಶಿವನನ್ನು ಸ್ತುತಿಸಲು ಯುಧಿಷ್ಠಿರನಿಗೆ ಹೇಳುತ್ತಾರೆ. ಮೊದಲಿಗೆ ಬರಿ 8000 ಶ್ಲೋಕಗಳಿಂದ ’ಜಯ’ ಹೆಸರಿನಲ್ಲಿ ಪ್ರಾರಂಭವಾದ ಮಹಾಭಾರತ, ನಂತರ 24000 ಶ್ಲೋಕಗಳ ’ಭಾರತ’ವಾಗಿ, ತದನಂತರ 1 ಲಕ್ಷ ಶ್ಲೋಕಗಳ ಮಹಾಭಾರತವಾಗಿದ್ದು ಅದರಲ್ಲಿ ಎಷ್ಟು ಶ್ಲೋಕಗಳನ್ನು ನಂತರ ಸೇರಿಸಲಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಶಿವನ ಬಗೆಗಿನ ಈ ಶ್ಲೋಕಗಳನ್ನೂ, ವೈದಿಕರು ಶಿವನನ್ನು ಅಪಹರಿಸಿದ ನಂತರ ಮಹಾಭಾರತದಲ್ಲಿ ಸೇರಿಸಿದರೇ ಎನ್ನುವುದೂ ಇನ್ನೂ ಒಂದು ಉತ್ತಮ ಸಂಶೋಧನೆಯ ವಿಷಯವಾಗಬಹುದು.
ಆದರೆ ಈ ವೈದಿಕರು ’ಶಿವ’ನನ್ನು ಮಹಾಭಾರತದಲ್ಲಿ ಈ ರೀತಿ ಹೊಗಳಿದರೂ ವೇದೋತ್ತರ ಹಿಂದೂ ಗ್ರಂಥಗಳಲ್ಲಿ ಅವನಿಗೆ ’ನಷ್ಟ’ಪಡಿಸುವ ’ಹೀನ’ ಕೆಲಸಗಳನ್ನೇ ಕೊಡುತ್ತಾರೆ. ಅವನು ವಿಷವನ್ನು ಕುಡಿಯುವಂತೆ, ಹೆಂಗಸರ ಮುಂದೆ ಬೆತ್ತಲೆ ಕುಣಿಯುವಂತೆ ಮಾಡುತ್ತಾರೆ. ತ್ರಿಮೂರ್ತಿಗಳಲ್ಲೂ ಬ್ರಹ್ಮನಿಗೆ ಸೃಷ್ಟಿಯ, ವಿಷ್ಣುವಿಗೆ ಸ್ಥಿತಿಯ ಕೆಲಸ ಕೊಟ್ಟು ಶಿವನಿಗೆ ಎಲ್ಲವನ್ನೂ ನಷ್ಟ ಮಾಡುವ ’ಲಯ’ದ ಕೆಲಸ ಕೊಡುತ್ತಾರೆ. ಶತಪಥ ಬ್ರಾಹ್ಮಣದ 1.7.4ರ 1ರಿಂದ 4ನೆಯ ಶ್ಲೋಕಗಳು ಹಾಗೂ ಐತರೇಯ ಬ್ರಾಹ್ಮಣದ ಅಧ್ಯಾಯ 13ರ 8ನೆಯ ಶ್ಲೋಕಗಳು, ಬ್ರಹ್ಮ ತನ್ನ ಮಗಳನ್ನೇ ಕಾಮಿಸಿದಾಗ ವೈದಿಕರು ರಾಕ್ಷಸರನ್ನು ಶಿಕ್ಷಿಸಲು ಪ್ರತಿಸಲದಂತೆ ವಿಷ್ಣುವನ್ನು ಕರೆಯದೇ ಬ್ರಹ್ಮನನ್ನು ಶಿಕ್ಷಿಸಲು ’ರುದ್ರ’ನನ್ನು ಕರೆಯುತ್ತಾರೆ. ರುದ್ರನು ಅವನನ್ನು ಇರಿದಾಗ ಬ್ರಹ್ಮನ ಅರ್ಧ ಬೀಜ ಭೂಮಿಯ ಮೇಲೆ ಬಿದ್ದಿತು ಎಂದು ಹೇಳಲಾಗಿದೆ. ಶಿವಪುರಾಣದ ಕೋಟಿ ರುದ್ರಸಂಹಿತೆಯ 12ನೆಯ ಅಧ್ಯಾಯದಲ್ಲಿ ಶಿವನನ್ನು ತನ್ನದೇ ಭಕ್ತರ ಹೆಂಡತಿಯರ ಮುಂದೆ ತನ್ನ ಜನನಾಂಗವನ್ನು ಕೈಯಲ್ಲಿ ಹಿಡಿದುಕೊಂಡು ಅಸಹ್ಯವಾಗಿ ಕುಣಿಯುವಂತೆ ಮಾಡಲಾಗಿದೆ.
ಭಾರತೀಯ ವಿದ್ಯಾ ಭವನ ಪ್ರಕಟಿಸಿದ “ದ ಹಿಸ್ಟರಿ ಎಂಡ್ ಕಲ್ಚರ್ ಆಫ್ ಇಂಡಿಯನ್ ಪೀಪಲ್” (ಭಾರತದ ಜನರ ಇತಿಹಾಸ ಮತ್ತು ಸಂಸ್ಕೃತಿ) ಎಂಬ ಪುಸ್ತಕದ ಮೊದಲ ಸಂಪುಟ ’ದ ವೇದಿಕ್ ಏಜ್’ನಲ್ಲಿ ’ದ ಆರ್ಯನ್ ಪ್ರಾಬ್ಲಮ್’ ಎಂಬ ಅಧ್ಯಾಯವನ್ನು ಬರೆಯುತ್ತ ಕೊಲ್ಕತ್ತ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದ ಅಧ್ಯಾಪಕರಾಗಿದ್ದ ಡಾ. ಬಿ.ಕೆ.ಘೋಷ್ ಅವರು ’ಶಿವ’ನ ಪರಿಕಲ್ಪನೆಯನ್ನು ವೈದಿಕರು ಸಿಂಧೂ ಸಂಸ್ಕೃತಿಯಿಂದ ಎರವಲು ಪಡೆದ ಬಗ್ಗೆ ಹೀಗೆ ಬರೆದಿದ್ದಾರೆ: “ಮೊಹೆಂಜೊ-ದಾರೊದಲ್ಲಿ ಪತ್ತೆಯಾದ ಒಂದು ಫಲಕದ ಅಧಾರದ ಮೇಲೆ ಸರ್ ಜಾನ್ ಮಾರ್ಷಲ್ ಅವರು ಶಿವ-ಪಶುಪತಿ (= ರುದ್ರ)ನ ಆರಾಧನೆಯನ್ನು ಮೊಹೆಂಜೊ-ದಾರೊ ಸಂಸ್ಕೃತಿಯಿಂದ ವೈದಿಕ ಆರ್ಯರು ಎರವಲು ಪಡೆದಿದ್ದಾರೆ ಎಂದು ಘೋಷಿಸಿದರು. ಈ ರುದ್ರನನ್ನು ಹೊರತುಪಡಿಸಿ ಬೇರೆ ಯಾವುದೇ ದೇವತೆಯನ್ನು, ವೈದಿಕ ಆರಾಧನೆ ಮತ್ತು ಧರ್ಮದಲ್ಲಿ ದುಷ್ಟ ಪ್ರಭಾವಗಳನ್ನು ಅಥವಾ ದುರದೃಷ್ಟವನ್ನು ತಪ್ಪಿಸುವ ಶಕ್ತಿಯನ್ನು ಹೊಂದಿದ, ಆರಾಧನಾಯೋಗ್ಯನಲ್ಲದ ಆದರೆ ಭಯಪಡಬೇಕಾದಂತಹ ತಿರಸ್ಕಾರಯೋಗ್ಯ ದೇವರು ಎಂದು ಪರಿಗಣಿಸಲಾಗಿಲ್ಲ. ಇತರ ಎಲ್ಲ ದೇವರುಗಳಿಗೆ ಯಜ್ಞಗಳಲ್ಲಿ ಅರ್ಪಣೆಗಳನ್ನು ಅಗ್ನಿಯಲ್ಲಿ ಆಹುತಿ ಮಾಡಲಾಗುತ್ತದೆ ಆದರೆ ರುದ್ರ ಮತ್ತು ಅವನ ಸೇವಕರಾದ ರುದ್ರಿಯರಿಗೆ ಆಹುತಿಗಳನ್ನು ಕೇವಲ ಅಡ್ಡ-ರಸ್ತೆಗಳಲ್ಲಿ ಅಥವಾ ನಿಷೇಧಿಸಲಾದ ಸ್ಥಳಗಳಲ್ಲಿ ಇಡಲಾಗುತ್ತದೆ. ಹ॒ಳೆಯ ಆಚರಣೆಯ ಪಠ್ಯಗಳಲ್ಲಿ ಈ ಭಯಾನಕ ದೇವರ ಹೆಸರನ್ನು ನೇರವಾಗಿ ನಮೂದಿಸದಂತೆ ಪ್ರತಿ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ಅವನನ್ನು ಪರೋಕ್ಷವಾಗಿ “ಈ ದೇವರು” ಅಥವಾ “ಭೂತ ಅಥವಾ ಪೋಸಿ” (ಅಂದರೆ, ಭೂತಪತಿ, ಪಶುಪತಿ) ಎಂಬ ಪದವನ್ನು ಹೊಂದಿರುವ ದೇವರು ಎಂದು ಕರೆಯಲಾಗುತ್ತದೆ. ಋಗ್ವೇದ2.3.1ರಲ್ಲಿ ಈ ಹೆಸರನ್ನು ಉದ್ದೇಶಪೂರ್ವಕವಾಗಿ ರುದ್ರೀಯ (ಐತರೇಯ ಬ್ರಾಹ್ಮಣ 3.9-10 ಅನಾರೋಗ್ಯ) ಎಂದು ಉಚ್ಚರಿಸಲಾಗುತ್ತದೆ. ಐತರೇಯ ಬ್ರಾಹ್ಮಣದಲ್ಲಿ (3.3.10) ಮಾಡಿದ ಕುತೂಹಲಕಾರಿ ವಿವರಣೆಯಿಂದ ಋಗ್ವೇದ 2.3.1ದಲ್ಲಿ ಮೂಲತಃ ಅಭಿ ವಃ ಇದ್ದದ್ದನ್ನು ನಂತರ ರುದ್ರನಿಗೆ ಯಜ್ಞದ ಸ್ಥಳಕ್ಕೆ ಧಾವಿಸದಿರುವಂತೆ ಬದಲಾಯಿಸಲಾಯಿತು.
ಹೀಗೆ ಎರವಲು ಪಡೆಯುವ ಮೂಲಕ ವೈದಿಕರು ದ್ರಾವಿಡ ದೇವರೊಬ್ಬನ ಮೇಲೆ ವಿಜಯ ಸಾಧಿಸಿದರು ಎನ್ನುವ ರೀತಿ ಘೋಷ್ ಅವರು ಹೇಳಿದ್ದರೆ, ಇದು ವೈದಿಕ ಆರ್ಯರ ಮೇಲೆ ಹರಪ್ಪಾ-ದ್ರಾವಿಡರು ಸಾಧಿಸಿದ ವಿಜಯ ಎಂದು ಭಾರತಜ್ಞ ಎರಿಕ್ ಡಿ. ಮೀಯರ್ ಅರ್ಥೈಸುತ್ತಾರೆ. “ಹರಪ್ಪದ ಸಿಂಧೂ ಕಣಿವೆಯ ನಾಗರಿಕತೆಯ ಮೇಲೆ ಋಗ್ವೇದೀ ಆರ್ಯರು ಸಾಧಿಸಿದ ವಿಜಯದ ಸಂದರ್ಭದಲ್ಲಿ ಏನಾಗಿರಬಹುದು ಎಂದರೆ ವೈದಿಕ-ಆರ್ಯರು ಮೊದಮೊದಲು ತಮ್ಮ ಬ್ರಾಹ್ಮಣ ಧರ್ಮ ಮತ್ತು ಸಂಸ್ಕೃತ ಭಾಷೆಯನ್ನು ಹೇರುವಲ್ಲಿ ಯಶಸ್ವಿಯಾಗಿರಬಹುದು ಆದರೆ ಸಿಂಧೂ ಕಣಿವೆಯ ಜನರು ಋಗ್ವೇದ-ಪೂರ್ವದ ಬಲಿ ಕೊಡುವ ತಮ್ಮ ಪರಂಪರೆಗಳನ್ನು ಉಪ-ಸಂಸ್ಕೃತಿಯನ್ನು ಸಂರಕ್ಷಿಸಿಕೊಂಡಿರಬಹುದು ಹಾಗೂ ಸುಮಾರು ಒಂದು ಸಾವಿರ ವರ್ಷಗಳ ನಂತರ ಆ ಪರಂಪರೆಗಳು ಹಾಗೂ ಉಪ-ಸಂಸ್ಕೃತಿ ಆತ್ಯಂತಿಕವಾಗಿ ಬ್ರಾಹ್ಮಣ-ಹಿಂದೂ ಧರ್ಮದ ಪ್ರಬಲ ಸಂಸ್ಕೃತಿಯಾಗಿ ಪುನರುಜ್ಜೀವನಗೊಂಡು ಹೊರಮೂಡಿರಬಹುದು” ಎನ್ನುತ್ತಾರೆ ಆಸ್ಕೊ ಪರ್ಪೋಲಾ ಅವರ ಪುಸ್ತಕ ’ರೂಟ್ಸ ಆಫ್ ಹಿಂದುಇಜಂ – ದ ಅರ್ಲಿ ಆರ್ಯನ್ಸ್ ಎಂಡ್ ದ ಇಂಡಸ್ ಸಿವಿಲೈಜೇಶನ್’ದ ವಿಮರ್ಶೆಯಲ್ಲಿ ಎರಿಕ್ ಡಿ. ಮೀಯರ್.

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ? ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.


