ದಬ್ಬಾಳಿಕೆ, ದೌರ್ಜನ್ಯದಿಂದ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು ಶಸಸ್ತ್ರ ಹೋರಾಟದ ಹಾದಿ ಹಿಡಿದಿದ್ದ 6 ಮಂದಿ ನಕ್ಸಲರು, ತಮ್ಮ ಪಥ ಬದಲಿಸಿ ಪ್ರಜಾತಾಂತ್ರಿಕ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಜನವರಿ 8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಬಂದಿದ್ದಾರೆ
ಹಲವು ವರ್ಷಗಳಿಂದ ಕಾಡನ್ನೇ ತಮ್ಮ ಹೋರಾಟದ ಕೇಂದ್ರವಾಗಿಸಿದ್ದ ಈ 6 ಮಂದಿಯನ್ನು ಮನವೊಲಿಸಿ ಅಲ್ಲಿಂದ ಹೊರ ಕರೆತರುವಲ್ಲಿ ರಾಜ್ಯ ಸರ್ಕಾರದ ಗೃಹ ಇಲಾಖೆ, ಚಿಕ್ಕಮಗಳೂರು ಜಿಲ್ಲಾಡಳಿತ, ಗುಪ್ತಚರ ಇಲಾಖೆ, ನಕ್ಸಲ್ ಪುನರ್ವಸತಿ ಸಮಿತಿ ಮತ್ತು ಶಾಂತಿಗಾಗಿ ನಾಗರಿಕ ವೇದಿಕೆ ಸೇರಿದಂತೆ ಹಲವರು ಸುಮಾರು 40 ದಿನಗಳ ಕಾಲ ಜಂಟಿ ಪ್ರಯತ್ನ ನಡೆಸಿದ್ದರು.
“ಮಿಷನ್ ಪ್ರಜಾತಾಂತ್ರಿಕ ಮುಖ್ಯವಾಹಿನಿ” ಎಂಬ ಶೀರ್ಷಿಕೆಯಲ್ಲಿ ನಡೆದ ಈ ಕಾರ್ಯಾಚರಣೆಯ ಕುರಿತು ಶಾಂತಿಗಾಗಿ ನಾಗರಿಕ ವೇದಿಕೆಯ ನೂರ್ ಶ್ರೀಧರ್ ಅವರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅದು ಹೀಗಿದೆ..(ಅವರದ್ದೇ ಮಾತಿನಲ್ಲಿ)..
• ನವೆಂಬರ್ 20,2024ರಂದು ‘ಶಾಂತಿಗಾಗಿ ನಾಗರಿಕ ವೇದಿಕೆ’ ಪತ್ರಿಕಾಗೋಷ್ಠಿ ನಡೆಸಿ ವಿಕ್ರಂ ಗೌಡ ಹತ್ಯೆಯನ್ನು ಖಂಡಿಸುತ್ತದೆ, ತನಿಖೆಗೆ ಆಗ್ರಹಿಸುತ್ತದೆ. ಮುಖ್ಯವಾಹಿನಿಗೆ ಬರುವಂತೆ ಉಳಿದ ನಕ್ಸಲರಿಗೆ ಮನವಿ ಮಾಡಿಕೊಳ್ಳುತ್ತದೆ.
• ಡಿಸೆಂಬರ್ 1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಿಯೋಗ ಕೂಂಬಿಂಗ್ ಕಾರ್ಯಾಚರಣೆ ನಿಲ್ಲಿಸಲು ಒತ್ತಾಯಿಸುತ್ತದೆ ಮತ್ತು ಸರ್ಕಾರ ಸರಿಯಾಗಿ ಸ್ಪಂದಿಸಿದಲ್ಲಿ ನಕ್ಸಲರನ್ನು ಸಂಪರ್ಕಿಸಿ ಮನವೊಲಿಸುತ್ತೇವೆ ಎಂದು ತಿಳಿಸಲಾಗುತ್ತದೆ. ಮುಖ್ಯಮಂತ್ರಿ “ಮಾಡಿ, ನಮ್ಮ ಸಂಪೂರ್ಣ ಸಹಕಾರವಿರುತ್ತದೆ” ಎನ್ನುತ್ತಾರೆ.
• ಶಾಂತಿಗಾಗಿ ನಾಗರಿಕ ವೇದಿಕೆಯು ಮಲೆನಾಡಿನ ಆದಿವಾಸಿ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ಜನಪರ ಸಂಘಟನೆಗಳ ಮಿತ್ರರ ಜೊತೆ ಮಾತನಾಡಿ, ನಿಮ್ಮ ಯಾವುದೇ ಕಾರ್ಯಕರ್ತರ ಸಂಪರ್ಕಕ್ಕೆ ನಕ್ಸಲಿಯರು ಬಂದರೂ, ಅವರ ಜೊತೆ ಮಾತನಾಡಲು ಹೇಳಿ, ಸಂಪರ್ಕ ಉಳಿಸಿಕೊಳ್ಳಲು ಹೇಳಿ, ನಮ್ಮನ್ನು ಸಂಪರ್ಕಿಸಲು ಹೇಳಿ ಎಂದು ಮನವಿ ಮಾಡಿಕೊಳ್ಳುತ್ತೇವೆ. ಅವರೆಲ್ಲರೂ ಸಹ ಕಾಳಜಿಯೊಂದಿಗೆ ಪ್ರತಿಕ್ರಿಯಿಸುತ್ತಾರೆ.

• ಡಿಸೆಂಬರ್ ಮೊದಲ ವಾರದಲ್ಲಿ ನಕ್ಸಲ್ ತಂಡದವರು ಹಳ್ಳಿಯೊಂದಕ್ಕೆ ಬಂದಾಗ, ಅಲ್ಲಿನ ಜನಪರ ಕಾರ್ಯಕರ್ತರು ಶಾಂತಿಗಾಗಿ ನಾಗರಿಕರ ವೇದಿಕೆಯ ನಿಲುವನ್ನು ಅವರ ಗಮನಕ್ಕೆ ತರುತ್ತಾರೆ. “ದಯವಿಟ್ಟು ಆಲೋಚಿಸಿ ಮರ‍್ರೇ” ಎಂದು ಕೇಳಿಕೊಳ್ಳುತ್ತಾರೆ. “ಇದೆಲ್ಲ ಅಷ್ಟು ಸುಲಭವಿಲ್ಲ, ನಮ್ಮ ಷರತ್ತುಗಳಿಗೆ ಸರ್ಕಾರ ಒಪ್ಪಲು ಸಾಧ್ಯವಿಲ್ಲ. ತಲೆತಗ್ಗಿಸಿ ನಿಲ್ಲಲು ಅಥವಾ ಜೈಲಲ್ಲಿ ಕೂರಲು ನಾವು ಸಿದ್ಧರಿಲ್ಲ” ಎಂದು ಅವರು ಹೇಳುತ್ತಾರೆ. ಪ್ರಯತ್ನ ಮಾಡುವುದರಲ್ಲಿ ತಪ್ಪೇನು ಎಂದು ಕಾರ್ಯಕರ್ತರು ಪ್ರಶ್ನಿಸಿ ಚರ್ಚೆ ಮಾಡುತ್ತಾರೆ. ನೋಡೋಣ ಎಂದು ಅವರು ಹೇಳುವ ಮೂಲಕ ಚರ್ಚೆ ಮುಕ್ತಾಯವಾಗುತ್ತದೆ.
• ಡಿಸೆಂಬರ್ 15ರಂದು ನಕ್ಸಲಿಯರು ಆದಿವಾಸಿ ಹಿರಿಯ ಮಹಿಳೆಯೊಬ್ಬರ ಮೂಲಕ ಒಂದು ಸಣ್ಣ ಚೀಟಿಯನ್ನು ಅಲ್ಲಿನ ಸಂಘಟನೆಯ ಕಾರ್ಯಕರ್ತರೊಬ್ಬರಿಗೆ ಕಳಿಸಿಕೊಡುತ್ತಾರೆ. ಅದರಲ್ಲಿ “ಒಂದು ವೇಳೆ ಸರ್ಕಾರ ನಮ್ಮ ಷರತ್ತುಗಳಿಗೆ ಒಪ್ಪುವುದಾದರೆ ನಾವು ತೀರ್ಮಾನ ತೆಗೆದುಕೊಳ್ಳಲು ಸಿದ್ಧರಿದ್ದೇವೆ” ಎಂದು ಬರೆದಿರುತ್ತದೆ. ಸಾಧ್ಯತೆ ಇದ್ದಲ್ಲಿ ಈ ಆದಿವಾಸಿ ಹಿರಿಯ ಮಹಿಳೆಯೊಬ್ಬರ ಮೂಲಕ ಸುದ್ದಿ ಕಳಿಸಿದರೆ ತಮಗೆ ತಲುಪುತ್ತದೆ ಎಂಬ ಸೂಚನೆಯನ್ನು ಕೊಡುತ್ತಾರೆ. ಈ ಮಾಹಿತಿಯನ್ನು ಕಾರ್ಯಕರ್ತರು ಕೂಡಲೇ ಶಾಂತಿಗಾಗಿ ನಾಗರಿಕ ವೇದಿಕೆಗೆ ತಿಳಿಸುತ್ತಾರೆ.

• ಡಿಸೆಂಬರ್ 18ರಂದು ವೇದಿಕೆಯ ತಂಡ ಇಂಟಲಿಜೆನ್ಸ್ ವಿಭಾಗದ ಮುಖ್ಯಸ್ಥರಾದ ಹೇಮಂತ್ ನಿಂಬಾಳ್ಕರ್ ಅವರನ್ನು ಭೇಟಿಯಾಗುತ್ತದೆ. ನಮಗೆ ಹೀಗೊಂದು ಸಕರಾತ್ಮಕ ಪ್ರತಿಕ್ರಿಯೆ ಬಂದಿದೆ. ನಾವು ಕಾಡಿಗೆ ಹೋಗಿ ಬರಲು ಸಿದ್ಧರಿದ್ದೇವೆ. ನಾವು ಕಾಡಿಗೆ ಹೋಗಬೇಕಾದರೆ ಎಎನ್ಎಫ್ ಕಾರ್ಯಾಚರಣೆ ನಿಲ್ಲಬೇಕು, ನಮ್ಮ ಸುರಕ್ಷತೆ ಖಾತ್ರಿಯಾಗಬೇಕು ಮತ್ತು ಒಂದು ವೇಳೆ ಅವರು ಕಾಡಿನಿಂದ ಹೊರಬಂದಲ್ಲಿ ಅವರು ಜೈಲಲ್ಲಿ ಕೊಳೆಯುವಂತೆ ಮಾಡುವುದಿಲ್ಲ ಎಂಬ ಖಚಿತ ಭರವಸೆ ನಮಗೆ ಸಿಗಬೇಕು ಎಂದು ಕೇಳುತ್ತೇವೆ. ಸಾಕಷ್ಟು ಚರ್ಚೆ ನಡೆಯುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ನಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡೋಣ. ನೀವು ಅವರನ್ನು ಮನವೊಲಿಸಿ ಎಂದು ಅವರು (ನಿಂಬಾಳ್ಕರ್) ತಿಳಿಸುತ್ತಾರೆ.
• ಡಿಸೆಂಬರ್ 19 ರಂದು ನಾವು ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತೇವೆ. ವಿಚಾರ ತಿಳಿಸಿ, “ನೀವು ನಮಗೆ ಸಂಪೂರ್ಣ ವಿಶ್ವಾಸ ನೀಡಿದರೆ ಮಾತ್ರ ನಾವು ಕಾಡಿಗೆ ಹೋಗಿ ನಕ್ಸಲರಿಗೆ ವಿಶ್ವಾಸ ನೀಡುತ್ತೇವೆ” ಎನ್ನುತ್ತೇವೆ. ಅವರು ನಮ್ಮ ಕಡೆಯಿಂದ ಖಂಡಿತ ಸಂಪೂರ್ಣ ಸಹಕಾರವಿರುತ್ತದೆ ಎಂದು ಹೇಳುತ್ತಾರೆ. ಆದರೂ, ಇದು ಸರ್ಕಾರವಾಗಿ ತೆಗೆದುಕೊಳ್ಳಬೇಕಾದ ತೀರ್ಮಾನವಾದ್ದರಿಂದ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರ ಇಬ್ಬರ ಗಮನಕ್ಕೂ ತಂದು ಖಚಿತ ಅಭಿಪ್ರಾಯ ತಿಳಿಸುತ್ತೇನೆ ಎನ್ನುತ್ತಾರೆ.
• ಡಿಸೆಂಬರ್ 28ರಂದು “ಮಾತನಾಡಿದ್ದೇನೆ, ಮುಂದುವರೆಯಿರಿ” ಎಂಬ ಸಂದೇಶವನ್ನೂ ಮುಖ್ಯಮಂತ್ರಿಗಳು ಕಳಿಸುತ್ತಾರೆ. ಡಿಸೆಂಬರ್ 29ರಂದು ಪತ್ರಿಕಾ ಹೇಳಿಕೆಯನ್ನೂ ಕೊಟ್ಟು ನಕ್ಸಲಿಯರಿಗೆ ಮುಖ್ಯವಾಹಿನಿಗೆ ಬರುವಂತೆ ಆಹ್ವಾನಿಸುತ್ತಾರೆ.

• ಜನವರಿ 1ರಂದು ಅದೇ ಆದಿವಾಸಿ ಹಿರಿಯ ಮಹಿಳೆ ಮೂಲಕ ನಕ್ಸಲಿಯರು ನಮ್ಮವರನ್ನು ಸಂಪರ್ಕಿಸುತ್ತಾರೆ. “ಮುಖ್ಯಮಂತ್ರಿಯವರ ಹೇಳಿಕೆ ನೋಡಿದೆವು. ನೀವು ಬರುವುದಾದರೆ ನಾವು ಸಿಗುತ್ತೇವೆ” ಎಂದು ತಿಳಿಸುತ್ತಾರೆ. ಜನವರಿ 2ರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ ಬಂದ ಜನಪರ ಸಂಘಟನೆ ಕಾರ್ಯಕರ್ತರು ಈ ವಿಷಯವನ್ನು ಶಾಂತಿಗಾಗಿ ನಾಗರಿಕ ವೇದಿಕೆಗೆ ಮುಟ್ಟಿಸುತ್ತಾರೆ.
• ಜನವರಿ 2ರ ರಾತ್ರಿಯೆಲ್ಲ ಪ್ರಯಾಣ ಮಾಡಿ ಜನವರಿ 3ರ ಮುಂಜಾನೆ ನಸುಗತ್ತಲಲ್ಲಿ ನಾವು ಕಾಡಿನ ಅಂಚಿಗೆ ತಲುಪುತ್ತೇವೆ. ಅಲ್ಲಿಂದ ಒಳಗೆ ನಡೆದು ನಕ್ಸಲ್ ತಂಡವನ್ನು ಭೇಟಿಯಾಗುತ್ತೇವೆ. ಈ ಇಡೀ ದಿನ ಬೆಳಿಗ್ಗೆ 8ರಿಂದ ಪ್ರಾರಂಭವಾಗಿ ಸಂಜೆ 7ರ ತನಕ ಅವಿರತ ಚರ್ಚೆಗಳು ನಡೆಯುತ್ತವೆ. ಸಾರಾಂಶದಲ್ಲಿ ಅವರು ಕೆಲ ವಿಚಾರಗಳನ್ನು ಒಂದು ರೀತಿಯ ಷರತ್ತಿನ ರೂಪದಲ್ಲಿ ನಮ್ಮ ಮುಂದಿಡುತ್ತಾರೆ.
- ನಮ್ಮನ್ನು ಘನತೆಯಿಂದ ಹೋರಾಟಗಾರರಂತೆ ನಡೆಸಿಕೊಳ್ಳಬೇಕು. ಅಪರಾಧಿಗಳಂತಲ್ಲ.
- ನಂಬಿ ಬರುವ ನಮಗೆ ಜೈಲಲ್ಲಿ ಕೊಳೆಯುವಂತೆ ಮಾಡಬಾರದು.
- ಜೈಲಿಂದ ಹೊರಬಂದ ಮೇಲೆ ಸಾಮಾಜಿಕ ಚಳವಳಿಗಳಲ್ಲಿ ತೊಡಗಿಸಿಕೊಳ್ಳಲು ನಮಗೆ ಪೂರ್ಣ ಸ್ವಾತಂತ್ರ್ಯ ಇರಬೇಕು.
- ಈಗಾಗಲೇ ಮುಖ್ಯವಾಹಿನಿಗೆ ಹೋಗಿರುವವರ ಕಷ್ಟಗಳನ್ನು ಕೂಡಲೇ ಪರಿಹರಿಸಬೇಕು ಮತ್ತು ಜೈಲಿನಲ್ಲಿರುವ ಎಲ್ಲ ಸಂಗಾತಿಗಳ ಕುರಿತು ಮೃದು ನಿಲುವು ತಾಳಬೇಕು.
- ನಾವು ಕಣ್ಣಾರೆ ಕಂಡಿರುವ ಜನರ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಪ್ರಯತ್ನ ಮಾಡುವುದಾಗಿ ಮಾತು ಕೊಡಬೇಕು. (18 ಹಕ್ಕೊತ್ತಾಯಗಳ ಪಟ್ಟಿಯನ್ನೂ ನಮಗೆ ನೀಡುತ್ತಾರೆ.
- ವಿಕ್ರಂ ಗೌಡರ ಹತ್ಯೆಯ ಕುರಿತು ನ್ಯಾಯಂಗ ತನಿಖೆ ನಡೆಸಿ, ನಮಗೆ ನ್ಯಾಯ ದೊರಕಿಸಿಕೊಡಬೇಕು.
• ಅಲ್ಲಿಂದ ಇಡೀ ರಾತ್ರಿ ಪ್ರಯಾಣ ಮಾಡಿ ಜನವರಿ 4ರ ಬೆಳಿಗ್ಗೆ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಜೊತೆ ಪಾಯಿಂಟ್ ಬೈ ಪಾಯಿಂಟ್ ಚರ್ಚೆ ನಡೆಯುತ್ತದೆ. ಅಧಿಕಾರಿಗಳು ಬಹುಪಾಲು ಅಂಶಗಳನ್ನು ವಿಶ್ವಾಸದ ಜೊತೆ ಉತ್ತರಿಸಿ “ಮಾಡೋಣ” ಎನ್ನುತ್ತಾರೆ. ಕೆಲವನ್ನು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ತಿಳಿಸುವುದಾಗಿ ಹೇಳುತ್ತಾರೆ. ಅಂತೂ ಇಂತೂ ಜನವರಿ 6ರ ಸಾಯಂಕಾಲದ ಹೊತ್ತಿಗೆ ಕೆಲವು ವಿಚಾರಗಳಲ್ಲಿ ಅನಿಶ್ಚಿತತೆ ಉಳಿದರೂ ಬಹುಪಾಲು ವಿಚಾರಗಳಲ್ಲಿ ವಿಶ್ವಾಸಾರ್ಹ ಉತ್ತರ ಸಿಗುತ್ತದೆ.
• ಜನವರಿ 6ರ ರಾತ್ರಿಯೇ ನಾವುಗಳು ಹೊರಟು ಜನವರಿ 7ರ ಬೆಳಿಗ್ಗೆ ಎರಡನೇ ಸುತ್ತಿನ ಮಾತುಕತೆಗಾಗಿ ಕಾಡನ್ನು ಸೇರಿಕೊಳ್ಳುತ್ತೇವೆ. ಸರ್ಕಾರ ಪಾಯಿಂಟ್ ಬೈ ಪಾಯಿಂಟ್ ಉತ್ತರಿಸಿರುವ ವೈಖರಿಯನ್ನು ಕಂಡು ನಕ್ಸಲ್ ಸಂಗಾತಿಗಳು ದಂಗಾಗುತ್ತಾರೆ. “ನಾವು ಇಂತಹ ಉತ್ತರವನ್ನು ನಿರೀಕ್ಷಿಸಿಯೇ ಇರಲಿಲ್ಲ. ಹೀಗೂ ಸಾಧ್ಯವೇ ಎಂಬುದನ್ನು ನಂಬಲು ಅಗುತ್ತಿಲ್ಲ. ಇಷ್ಟು ಸಾಕು. ಮಿಕ್ಕಂತೆ ನೀವಿದ್ದೀರಿ, ಜನರಿದ್ದಾರೆ, ಕರ್ನಾಟಕದ ಚಳವಳಿಗಾರರಿದ್ದಾರೆ, ಅದೇನೆ ಬರಲಿ, ನಾವು ಸಿದ್ಧ” ಎಂಬ ಖಚಿತ ಅಭಿಪ್ರಾಯ ತಿಳಿಸುತ್ತಾರೆ. ಮಾತುಕತೆ ಎರಡೇ ಗಂಟೆಯಲ್ಲಿ ಮುಕ್ತಾಯವಾಗುತ್ತದೆ. ನಾವು ಮಧ್ಯಾಹ್ನ 12 ಗಂಟೆ ಹೊತ್ತಿಗೆ ನೆಟ್ವರ್ಕ್ ಏರಿಯಾಗೆ ಬಂದು “ನಕ್ಸಲರಿಂದ ಗ್ರೀನ್ ಸಿಗ್ನಲ್” ಎಂಬ ಸಂದೇಶ ಕಳಿಸುತ್ತೇವೆ.
• ಜನವರಿ 7ರ ಸಂಜೆ ಬಾಳೆಹೊನ್ನೂರಿಗೆ ವಾಪಾಸ್ ಬಂದು ಅಧಿಕಾರಿಗಳನ್ನು ಭೇಟಿಯಾಗುತ್ತೇವೆ. ಅಷ್ಟು ಹೊತ್ತಿಗೆ ನಕ್ಸಲ್ ಪುನರ್ವಸತಿ ಸಮಿತಿಯ ಇತರೆ ಸದಸ್ಯರೂ ಬಂದು ಸೇರಿಕೊಳ್ಳುತ್ತಾರೆ. ಮರುದಿನವೇ ಅಂದರೆ ಜನವರಿ 8ರ ಮುಂಜಾನೆ ಕಾಡನ್ನು ಬಿಟ್ಟು 11 ಗಂಟೆ ಹೊತ್ತಿಗೆ ಚಿಕ್ಕಮಗಳೂರು ಐಬಿ ತಲುಪುವುದು. ಅಲ್ಲಿ ಸಂಕ್ಷಿಪ್ತ ರೀತಿಯಲ್ಲಿ ನಾಗರಿಕ ಸ್ವಾಗತ ಮುಗಿಸಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಬಂದು ಮಾಧ್ಯಮಗಳ ಮುಂದೆ ಇದನ್ನು ಸಮಾರೋಪಗೊಳಿಸಿಕೊಳ್ಳಬೇಕು ಎಂದು ತೀರ್ಮಾನವಾಗುತ್ತದೆ.
• ಜನವರಿ 8ರ ಬೆಳಿಗ್ಗೆ 5 ಗಂಟೆ ಹೊತ್ತಿಗೆ ಶಾಂತಿಗಾಗಿ ನಾಗರಿಕರ ವೇದಿಕೆ ಮತ್ತು ಪುನರ್ವಸತಿ ಸಮಿತಿಯ ತಂಡ ಅವರನ್ನು ಕರೆದುಕೊಂಡು ಬರಲು ಮತ್ತೆ ಕಾಡೊಳಗೆ ಹೋಗುತ್ತದೆ. ಮನದೊಳಗಿನ ಕೆಲವು ಮಾತುಗಳನ್ನು ಹಂಚಿಕೊಂಡು, ಸ್ಥಳೀಯರು ಸಿದ್ಧಪಡಿಸಿದ್ದ ತಿಂಡಿಯನ್ನು ತಿಂದು, ಒಂದು ಗಂಟೆಗಳ ಕಾಲ ನಡೆದು 9 ಗಂಟೆಯ ಹೊತ್ತಿಗೆ ರಸ್ತೆಯೊಂದಕ್ಕೆ ಬಂದು ತಲುಪುತ್ತೇವೆ. ವೇದಿಕೆಯ ಮತ್ತು ಪೋಲೀಸರ ವಾಹನಗಳು ಕಾದಿರುತ್ತವೆ. ಅಧಿಕಾರಿಗಳು ಪರಿಶೀಲನೆಯ ಪ್ರಕ್ರಿಯೆಯನ್ನು ಮುಗಿಸಿಕೊಳ್ಳುತ್ತಾರೆ. ವಾಹನಗಳ ಕಾರವಾನ್ ಕಾಡಿಂದ ಚಿಕ್ಕಮಗಳೂರು ಕಡೆ ಹೊರಡುತ್ತಾರೆ.
• ವಾಹನಗಳು ಬಾಳೆಹೊನ್ನೂರು ಸಮೀಪಿಸುತ್ತಿರುವಾಗ ಮುಖ್ಯಮಂತ್ರಿಗಳು ನೇರವಾಗಿ ಬೆಂಗಳೂರಿಗೆ ಬರಲು ಸೂಚಿಸಿದ್ದಾರೆ ಎಂದು ತಿಳಿಸುತ್ತಾರೆ. ನಾವು ಚಿಕ್ಕಮಗಳೂರಿಗೆ ಹೋಗಿಯೇ ಹೋಗಬೇಕು. ಅಲ್ಲಿ ಜನಪರ ಹೋರಾಟಗಾರರು, ಸಂಬಂಧಿಕರು, ಮಾಧ್ಯಮದವರು ಕಾಯುತ್ತಿದ್ದಾರೆ. ಅವರನ್ನು ಅಲ್ಲಿ ಕಾಯಲು ಬಿಟ್ಟು ನಾವು ಹೀಗೇ ಬೆಂಗಳೂರಿಗೆ ಹೋಗಲು ತಯಾರಿಲ್ಲ ಎಂದು ಹಠ ಹಿಡಿಯುತ್ತೇವೆ. ಇಲ್ಲಿ ಕೆಲವು ಸೂಕ್ಷ್ಮ ವಿಚಾರಳಿವೆ. ದಯವಿಟ್ಟು ಬೇಡ. ಯಾರೆಲ್ಲಾ ಬರಲು ಸಿದ್ಧರಿದ್ದಾರೋ ಅವರೆಲ್ಲರನ್ನೂ ನಾವೇ ಬೆಂಗಳೂರಿಗೆ ಕರೆತರುವ ವ್ಯವಸ್ಥೆ ಮಾಡುತ್ತೇವೆ ಎಂದು ಪೋಲೀಸರು ಹೇಳುತ್ತಾರೆ. ಈ ವಿಚಾರ ಇನ್ನು ಹೆಚ್ಚು ಎಳೆದಾಡುವುದು ಬೇಡ ಎಂದು ನಾವು ಒಪ್ಪುತ್ತೇವೆ. ಇಡೀ ದಿನ ಶರವೇಗದಲ್ಲಿ ಪ್ರಯಾಣ ಮಾಡಿ ಸಂಜೆ ಹೊತ್ತಿಗೆ ಮುಖ್ಯಮಂತ್ರಿಯವರ ಕಚೇರಿಗೆ ಬಂದು ತಲುಪುತ್ತೇವೆ.

• ಜನವರಿ 8ರ ಸಂಜೆ ಮಾಧ್ಯಮಗೋಷ್ಟಿಗೂ ಮುನ್ನ ಇಡೀ ಮಂತ್ರಿಮಂಡಲ ಮತ್ತು ಅಧಿಕಾರಿ ವರ್ಗಕ್ಕೆ ನಕ್ಸಲ್ ಕಾರ್ಯಕರ್ತರುಗಳನ್ನು ಅವರ ಹಿನ್ನೆಲೆ ಮತ್ತು ಹೋರಾಟಗಳ ಜೊತೆ ಪರಿಚಯ ಮಾಡಿಕೊಡಲಾಗುತ್ತದೆ. ತಂಡದ ಪರವಾಗಿ ಕಮಾಂಡರ್ ಲತಾ ಸುದೀರ್ಘವಾಗಿ ಮಾತನಾಡುತ್ತಾರೆ. ಅದರಲ್ಲಿ ನಾಲ್ಕು ವಿಚಾರಗಳನ್ನು ಅವರು ಸರ್ಕಾರದ ಗಮನಕ್ಕೆ ತರುತ್ತಾರೆ.
1. ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಅದೇ ಹೊತ್ತಿನಲ್ಲಿ ನಾವು ಹೋರಾಟದ ಮಾರ್ಗ ಮಾತ್ರ ಬದಲಾಯಿಸುತ್ತಿದ್ದೇವೆ. ಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರೆಸುತ್ತೇವೆ ಎಂದು ಒತ್ತಿ ಹೇಳುತ್ತಾರೆ.
2. ಸಮಾಜ ಎಷ್ಟೇ ಅಭಿವೃದ್ಧಿಗೊಂಡಿದೆ ಎಂದು ಹೇಳಿದರೂ ಕಾಡಿನ ಜನರ, ಅದರಲ್ಲೂ ಅಲ್ಲಿನ ಆದಿವಾಸಿ, ದಲಿತ, ಕೂಲಿ-ಕಾರ್ಮಿಕ, ಮಹಿಳೆ ಮತ್ತು ರೈತರ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂಬುದನ್ನು ಮನದಟ್ಟುವ ಉದಾಹರಣೆಗಳ ಮೂಲಕ ವಿವರಿಸುತ್ತಾರೆ.
3. ಕಷ್ಟದಲ್ಲಿರುವ ಮತ್ತು ಜೈಲುಗಳಲ್ಲಿರುವ ನಮ್ಮ ಸಂಗಾತಿಗಳ ಬಗ್ಗೆ ಮೃದುಧೋರಣೆ ತಾಳಬೇಕು ಎಂದು ಮನವಿ ಮಾಡಿಕೊಳ್ಳುತ್ತಾರೆ.
4. ವಿಕ್ರಂ ಗೌಡ ಅವರ ವಿಚಾರದಲ್ಲಿ ತನಿಖೆ ನಡೆಸಿ ನೀವು ಸತ್ಯ ಏನೆಂಬುದನ್ನು ತಿಳಿದುಕೊಳ್ಳಲೇಬೇಕು ಎಂದು ಒತ್ತಾಯಿಸುತ್ತಾರೆ. ಮುಖ್ಯಮಂತ್ರಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿ ಮಾತನಾಡುತ್ತಾರೆ, ಭರವಸೆ ನೀಡುತ್ತಾರೆ.
• ನಂತರ ಪತ್ರಿಕಾಗೋಷ್ಟಿ ನಡೆಯುತ್ತದೆ. ಮರುದಿನ ಕಾನೂನು ಪ್ರಕ್ರಿಯೆ ನಡೆಯುತ್ತದೆ. ಈಗ ಸಂಗಾತಿಗಳು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾರೆ.



