Homeಮುಖಪುಟಹಿಂದೂ ಕೋಮುವಾದದ ವಿರುದ್ಧವಿದ್ದ ಸ್ವಾಮಿ ವಿವೇಕಾನಂದ

ಹಿಂದೂ ಕೋಮುವಾದದ ವಿರುದ್ಧವಿದ್ದ ಸ್ವಾಮಿ ವಿವೇಕಾನಂದ

- Advertisement -
- Advertisement -

1893ರ ಸೆಪ್ಟೆಂಬರ್ 11ರಂದು ಶಿಕಾಗೋದಲ್ಲಿ ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣವನ್ನು ನೆನಪಿಸಿಕೊಂಡರೆ ಪ್ರತಿಯೊಬ್ಬ ಹಿಂದೂ ಮತ್ತು ಪ್ರತಿಯೊಬ್ಬ ಭಾರತೀಯನ ಎದೆ ಹೆಮ್ಮೆಯಿಂದ ತುಂಬಿಕೊಳ್ಳುತ್ತದೆ. ಆ ಭಾಷಣವನ್ನು ಜಾಗತಿಕ ಮಟ್ಟದಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಉದ್ಘೋಷಣೆಯ ರೂಪದಲ್ಲಿ ನೆನಪಿಟ್ಟುಕೊಳ್ಳಲಾಗಿದೆ. ಆದರೆ ಅವರು ಶಿಕಾಗೋದಲ್ಲಿ ಹಿಂದೂ ಧರ್ಮದ ಗೌರವದಲ್ಲಿ ನಿಜವಾಗಿ ಏನು ಹೇಳಿದರು ಎಂದು ತಿಳಿದುಕೊಂಡ ಜನ ಅತ್ಯಂತ ಕಡಿಮೆ.

ತಮ್ಮ ಐತಿಹಾಸಿಕ ಭಾಷಣದ ಆರಂಭದಲ್ಲಿಯೇ ಸ್ವಾಮೀಜಿ ಹೀಗೆ ಹೇಳುತ್ತಾರೆ: “ಅದರಲ್ಲಿ ವಿಶ್ವಕ್ಕೆ ಸಹಿಷ್ಣುತೆ ಮತ್ತು ಸಾರ್ವಭೌಮ ಸ್ವೀಕೃತಿಯ ಎರಡನ್ನೂ ಕಲಿಸಿದಂತಹ ಧರ್ಮದ ಅನುಯಾಯಿ ಆಗಿರುವ ಹೆಮ್ಮೆ ಪಡುತ್ತೇನೆ. ನಾವು ಎಲ್ಲಾ ಧರ್ಮಗಳ ಬಗ್ಗೆ ಸಹಿಷ್ಣುತೆಯಲ್ಲಿ ಭರವಸೆ ಇಡುವುದಷ್ಟೇ ಅಲ್ಲದೇ, ಸಮಸ್ತ ಧರ್ಮಗಳನ್ನು ನಿಜವಾದ ಧರ್ಮಗಳು ಎಂದು ನಂಬಿ ಸ್ವೀಕರಿಸುತ್ತೇವೆ. ಈ ಭೂಮಿಯ ಎಲ್ಲಾ ಧರ್ಮಗಳ ಮತ್ತು ದೇಶಗಳ ಶೋಷಣೆಗೆ ಒಳಗಾದವರಿಗೆ ಮತ್ತು ನಿರಾಶ್ರಿತರಿಗೆ ಆಶ್ರಯ ನೀಡಿದ ದೇಶದವನು ಎಂಬುದಕ್ಕೆ ನನಗೆ ಹೆಮ್ಮೆಯಿದೆ.”

ಯಾವ ಧರ್ಮ ಸಭೆಯಲ್ಲಿ ಇತರ ಧರ್ಮಗಳ ಗುರುಗಳು ಬೇರೆ ಧರ್ಮಗಳಿಗಿಂತ ತಮ್ಮ ಧರ್ಮ ಶ್ರೇಷ್ಠ ಹೇಗೆ ಎಂದು ಸಾಬೀತುಪಡಿಸುವ ಪ್ರಯತ್ನ ಮಾಡುತ್ತಿದ್ದಾಗ, ಅಲ್ಲಿಯೇ ಸ್ವಾಮೀಜಿಯವರು ಎಲ್ಲಾ ಧರ್ಮಗಳ ಸತ್ಯವನ್ನು ಸ್ವೀಕರಿಸುವುದೇ ಹಿಂದೂ ಧರ್ಮದ ವಿಶಿಷ್ಟತೆ ಎಂದು ಹೇಳಿ ತಮ್ಮ ಸಂಸ್ಕೃತಿಯನ್ನು ಈ ಸ್ಪರ್ಧೆಯನ್ನು ಮೀರಿಸಿ ನಿಲ್ಲಿಸಿದರು. ಜಗತ್ತಿನ ಎಲ್ಲಾ ಧರ್ಮಗಳ ಮರ್ಮವನ್ನು ಜೋಡಿಸುವ ಒಂದು ಸೂತ್ರವನ್ನು ನೀಡಿದ್ದರು. ಇದು ಸ್ವಾಮಿ ವಿವೇಕಾನಂದರ ಜಾದೂವಿನ ರಹಸ್ಯವಾಗಿತ್ತು.

ಇಂತಹ ಒಬ್ಬ ಚಿಂತಕರ ಪರಂಪರೆಯನ್ನು ಎರಡು ವೈಚಾರಿಕ ಮತ್ತು ರಾಜಕೀಯ ಬಣಗಳಲ್ಲಿ, ತಮ್ಮ ಅಜ್ಞಾನ ಮತ್ತು ಚಾಲಾಕಿತನದಿಂದ ಸರ್ವನಾಶ ಮಾಡಿದ್ದನ್ನು ಭಾರತದ ದೌರ್ಭಾಗ್ಯವೆಂದೇ ಕರೆಯಬಹುದು. ಒಂದೆಡೆ ತಮ್ಮನ್ನು ತಾವು ಆಧುನಿಕ ಮತ್ತು ಸೆಕ್ಯುಲರ್ ಎಂದು ಕರೆದುಕೊಳ್ಳುವ ಬಣವು (ಅಂದಹಾಗೆ ನೆಹರು ಇದಕ್ಕೆ ಅಪವಾದವಾಗಿದ್ದರು) ಸ್ವಾಮೀಜಿ ಹಿಂದೂ ಧರ್ಮದ ವಾಹಕರಾಗಿದ್ದರು ಮತ್ತು ನಿಸ್ಸಂಕೋಚದಿಂದ ಹಿಂದೂ ಧರ್ಮದ ತತ್ವಶಾಸ್ತ್ರ ಮತ್ತು ಸಂಸ್ಕೃತಿಯ ಪ್ರಚಾರ ಮತ್ತು ಪ್ರಸಾರ ಮಾಡುತ್ತಿದ್ದರು ಎಂಬ ಕಾರಣಕ್ಕಾಗಿ ವಿವೇಕಾನಂದರ ಪರಂಪರೆಯನ್ನೇ ಪರಿಗಣಿಸದೆ ತಪ್ಪಿಸಿಕೊಂಡರು. ಇನ್ನೊಂದು ಕಡೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ಸೇರಿ ಸಂಘಪರಿವಾರದ ಎಲ್ಲಾ ಸಂಘಟನೆಗಳು ಸ್ವಾಮಿ ವಿವೇಕಾನಂದರ ಪರಂಪರೆಯ ಮೇಲೆ ಅನೈತಿಕ ಕಬ್ಜಾ ಮಾಡಿಕೊಂಡು, ಅವರ ವಿಚಾರಗಳನ್ನು ತಮ್ಮ ಕೀಳು ಕೋಮುವಾದದ ರಾಜಕೀಯಕ್ಕೆ ಬಳಸಿಕೊಂಡರು. ಹಿಂದೂ ಧರ್ಮದ ವಿಶಿಷ್ಟತೆಯನ್ನು ಹಿಂದೂ ಧರ್ಮದ ಶ್ರೇಷ್ಠತೆ ಎಂದು ಹೇಳಿ ಬೇರೆ ಧರ್ಮದವರ ಮೇಲೆ ದಾದಾಗಿರಿ ಮಾಡುವ ರಾಜಕೀಯಕ್ಕೆ ಸ್ವಾಮಿ ವಿವೇಕಾನಂದರನ್ನು ಗುರಾಣಿಯನ್ನಾಗಿ ಬಳಸಲು ಶುರುಮಾಡಲಾಯಿತು.

ಗೋವಿಂದ ಕೃಷ್ಣ

ಇತ್ತೀಚಿಗೆ ಸ್ವಾಮಿ ವಿವೇಕಾನಂದರ ತತ್ವಗಳ ಬಗ್ಗೆ ಒಂದು ಪುಸ್ತಕ ಪ್ರಕಟವಾಗಿದೆ, ಅದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಅದರಲ್ಲಿ ವಿವೇಕಾನಂದರ ಪರಂಪರೆಯನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಖಂಡಿಸಲಾಗಿದೆ. ಒಬ್ಬ ಯುವ ಲೇಖಕ ಗೋವಿಂದ ಕೃಷ್ಣ ಅವರ ಪುಸ್ತಕ ’ವಿವೇಕಾನಂದ: ದಿ ಫಿಲಾಸಫರ್ ಆಫ್ ಫ್ರೀಡಂ’ (ಮುಕ್ತಿಯ ತತ್ವಜ್ಞಾನಿ ವಿವೇಕಾನಂದ)ದ ಮೂಲ ಪ್ರಮೇಯವನ್ನು ಮುಖಪುಟದಲ್ಲಿಯೇ ಬರೆಯಲಾಗಿದೆ; “ಸಂಘಪರಿವಾರದ ಪರಮೋಚ್ಛ ಐಕಾನ್ ಆಗಿದ್ದವರೇ ಅವರ ಅತಿ ದೊಡ್ಡ ಶತ್ರು (ನೆಮೆಸಿಸ್) ಆಗಿದ್ದಾರೆ”. ಅಂದರೆ ಯಾವ ಸ್ವಾಮಿ ವಿವೇಕಾನಂದರನ್ನು ಸಂಘ ಪರಿವಾರ ’ಹಿಂದುತ್ವ’ದ ಪ್ರತೀಕವಾಗಿ ಬಿಂಬಿಸುತ್ತದೆಯೋ, ಅವರ ವಿಚಾರಗಳೇ ಸಂಘ ಪರಿವಾರದ ವಿರುದ್ಧ ಹೋರಾಟಕ್ಕೆ ಅತ್ಯಂತ ಪ್ರಬಲ ಅಸ್ತ್ರಗಳಾಗಿವೆ, ದ್ವೇಷದ ರಾಜಕೀಯಕ್ಕೆ ಅತ್ಯಂತ ಪರಿಣಾಮಕಾರಿಯಾದ ತಡೆಗೋಡೆಯಾಗಿವೆ.

485 ಪುಟಗಳ ಈ ಪುಸ್ತಕದಲ್ಲಿ ಲೇಖಕರು ಬಹಳ ವಿಸ್ತಾರವಾಗಿ ಹಾಗೂ ನಾಜೂಕಿನಿಂದ ಸ್ವಾಮಿ ವಿವೇಕಾನಂದರ ಜೀವನ, ಸಿದ್ಧಾಂತ ಹಾಗೂ ಅವರ ಐತಿಹಾಸಿಕ ಸಂದರ್ಭವನ್ನು ವಿಶ್ಲೇಷಿಸುತ್ತ ಇಂದು “ಹಿಂದುತ್ವ” ಹೆಸರಿನಲ್ಲಿ ಏನೆಲ್ಲ ಆಗುತ್ತಿದೆಯೋ, ಅದಕ್ಕೆ ಸ್ವಾಮಿ ವಿವೇಕಾನಂದರಿಗೆ ಮೂಲದಲ್ಲಿಯೇ ಅಸಮ್ಮತಿ ಇತ್ತು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸರ್ಕಾರ RSS ಅಂಗಸಂಸ್ಥೆಗೆ ಭೂಮಿ ನೀಡಿದ್ದ ಆದೇಶಕ್ಕೆ ತಡೆ: ಸಚಿವ ಕೃಷ್ಣಭೈರೇಗೌಡ

ಸಮಸ್ಯೆ ಏನೆಂದರೆ ಭಗವಾಧಾರಿ ಹಿಂದೂ ಸ್ವಾಮಿಯ ಚಿತ್ರ ನೋಡುತ್ತಲೇ ನಮ್ಮ ಮನದಲ್ಲಿ ಒಂದು ಚಿತ್ರಣ ಮೂಡುತ್ತದೆ. ಆದರೆ ಈ ಪುಸ್ತಕ ಹೇಳುವುದೇನೆಂದರೆ ಸ್ವಾಮಿ ವಿವೇಕಾನಂದರ ಜೀವನ ಮತ್ತು ಆಚರಣೆ ಆ ಚಿತ್ರಣದೊಂದಿಗೆ ಹೊಂದಾಣಿಕೆ ಆಗುವುದಿಲ್ಲ ಎಂದು. ಒಬ್ಬ ಸನ್ಯಾಸಿ ಆಗಿದ್ದರಿಂದ ಸ್ವಾಮೀಜಿ ಬ್ರಹ್ಮಚರ್ಯ ವ್ರತವನ್ನು ಹಾಗೂ ಹಣ-ಆಸ್ತಿಯಿಂದ ಮುಕ್ತರಾಗಿರಬೇಕೆನ್ನುವ ಕರ್ತವ್ಯವನ್ನು ಸಂಪೂರ್ಣವಾಗಿ ನಿಭಾಯಿಸಿದ್ದರು. ಆದರೆ ಅವರಿಗೆ ಜೀವನವನ್ನು ಸವಿಯುವುದರಲ್ಲಿ ಯಾವುದೇ ಹಿಂಜರಿಕೆಯಿರಲಿಲ್ಲ ಅಥವಾ ಅದು ವರ್ಜ್ಯವಾಗಿರಲಿಲ್ಲ. ಸ್ವಾಮಿ ವಿವೇಕಾನಂದರು ಕದ್ದುಮುಚ್ಚಿ ಅಲ್ಲದೇ ಬಹಿರಂಗವಾಗಿಯೇ ಹುಕ್ಕಾ ಮತ್ತು ಸಿಗರೇಟ್ ಸೇದುತ್ತಿದ್ದರು, ಮಾಂಸಾಹಾರವನ್ನು ಖುಷಿಯಿಂದ ಸೇವಿಸುತ್ತಿದ್ದರು ಹಾಗೂ ತಾವೇ ಬೇಯಿಸಿ ಇತರರಿಗೂ ತಿನ್ನಿಸುತ್ತಿದ್ದರು. ಗೋರಕ್ಷಕ ಸಭೆ ನಡೆಸುವವರು ಅವರ ಬಳಿ ಬಂದಾಗ ಸ್ವಾಮೀಜಿ ಅವರ ಸಮರ್ಥನೆಗೆ ನಿಲ್ಲುವುದಕ್ಕೆ ಸ್ಪಷ್ಟವಾಗಿ ನಿರಾಕರಿಸಿದರು ಹಾಗೂ ಕ್ಷಾಮದಿಂದ ಸಾಯುತ್ತಿರುವವರ ಸೇವೆ ಮಾಡಿ ಮೊದಲು ಎಂದು ಹೇಳಿದರು. ಹಿಂದೂ ಧರ್ಮದ ಕರ್ಮಕಾಂಡ ಹಾಗೂ ಪುರೋಹಿತ ಪಂಡಿತರಿಂದ ಸ್ವಾಮೀಜಿಯವರ ಮೇಲೆ ತೀವ್ರ ದ್ವೇಷವಿತ್ತು. ಈ ಕರ್ಮಕಾಂಡ, ಪುರೋಹಿತ ಪರಂಪರೆಗಳಿಂದ ಬೇಸತ್ತು ಸ್ವಾಮೀಜಿಯು ಹೇಳಿದ್ದೇನೆಂದರೆ, “ನಮ್ಮ ಎಲ್ಲಾ ಧರ್ಮಗ್ರಂಥಗಳನ್ನು ಗಂಗೆಗೆ ಎಸೆದುಬಿಡಿ ಹಾಗೂ ಮೊದಲು ಜನರಿಗೆ ಆಹಾರ ಮತ್ತು ಬಟ್ಟೆಯನ್ನು ಪಡೆಯುವ ವಿಧಾನವನ್ನು ಕಲಿಸಿ” ಎಂದು.

ಸ್ವಾಮಿ ವಿವೇಕಾನಂದರನ್ನು ಬಳಸಿಕೊಂಡು ಹಿಂದೂಗಳಲ್ಲದ, ವಿಶೇಷವಾಗಿ ಕ್ರಿಶ್ಚಿಯನ್ನರು ಮತ್ತು ಮುಸಲ್ಮಾನರ ವಿರುದ್ಧ ದ್ವೇಷದ ಪ್ರಚಾರ ಮಾಡುವವರಿಗೆ ಸ್ವಾಮೀಜಿಗೆ ಸ್ವತಃ ಕ್ರಿಶ್ಚಿಯನ್ ಧರ್ಮದ ಬಗ್ಗೆ ಅಪಾರ ಪ್ರೀತಿ ಹಾಗೂ ಏಸುಕ್ರಿಸ್ತನ ಬಗೆಗೆ ಅವರಿಗೆ ಅತೀವ ನಂಬಿಕೆ ಇತ್ತು ಎಂದು ಈ ಪುಸ್ತಕ ನೆನಪಿಸುತ್ತದೆ. ಒಬ್ಬ ಭಿಕ್ಷುವಾಗಿ ದೇಶ ಸುತ್ತುತ್ತಿದ್ದ ಸಮಯದಲ್ಲಿ ಸ್ವಾಮೀಜಿ ಬಳಿ ಕೇವಲ ಎರಡೇ ಪುಸ್ತಕಗಳಿದ್ದವು: ಭಗವದ್ಗೀತೆ ಮತ್ತು “ಇಮಿಟೇಷನ್ ಆಫ್ ಕ್ರೈಸ್ಟ್”. ಏಸು ಕ್ರಿಸ್ತನ ಬಗ್ಗೆ ಅವರು ಹೇಳಿದ್ದೇನೆಂದರೆ, “ಒಂದು ವೇಳೆ ನಾನು ಏಸುಕ್ರಿಸ್ತನ ಸಮಯದಲ್ಲಿ ಬದುಕಿದ್ದರೆ, ನಾನು ನನ್ನ ಕಣ್ಣೀರಿನಿಂದಷ್ಟೇ ಅಲ್ಲ, ನನ್ನ ಹೃದಯದ ರಕ್ತದಿಂದ ಅವರ ಪಾದಗಳನ್ನು ತೊಳೆಯುತ್ತಿದ್ದೆ” ಎಂದು.

ಸ್ವಾಮಿ ವಿವೇಕಾನಂದರು ಪದೇಪದೇ ಇಸ್ಲಾಂ ಬಗ್ಗೆ ಆಳವಾದ ಗೌರವ ವ್ಯಕ್ತಪಡಿಸಿದ್ದಾರೆ. ಭಾರತೀಯ ನಾಗರಿಕತೆಯ ಅವನತಿಗೆ ಮುಸ್ಲಿಂ ಆಕ್ರಮಣ ಕಾರಣ ಎಂಬ ಆಲೋಚನೆಯನ್ನು ಖಂಡಿಸಿದ್ದಾರೆ. ಸ್ವಾಮೀಜಿಯವರ ಪ್ರಕಾರ ಭಾರತೀಯ ನಾಗರಿಕತೆಯ ಅವನತಿ ಮುಸ್ಲಿಮರ ಆಳ್ವಿಕೆ ಶುರುವಾಗುವುದಕ್ಕೆ ಮುನ್ನವೇ, ಹಿಂದೂ ಸಮಾಜದ ಮೇಲು ಕೀಳು ಮತ್ತು ಅಂತರ್ಮುಖಿ ಪ್ರವೃತ್ತಿಯ ಕಾರಣದಿಂದ ಆಗಿತ್ತು. ಅವರು ಹೇಳುವುದೇನೆಂದರೆ ಯಾವ ದಿನ ’ಮ್ಲೇಚ್ಛ’ ಎಂಬ ಪದವನ್ನು ಸೃಷ್ಟಿಸುವದರ ಮೂಲಕ ಹೊರಗಿನವರೊಂದಿಗೆ ಸಂವಹನ ನಿಲ್ಲಿಸಲಾಯಿತೋ ಆ ದಿನವೇ ಭಾರತೀಯ ಸಮಾಜದ ಅವನತಿ ತೀರ್ಮಾನವಾಗಿತ್ತು ಎಂದು. ಇಸ್ಲಾಂನಲ್ಲಿರುವ ಭ್ರಾತೃತ್ವ ಮತ್ತು ಕ್ಷಮತೆಯನ್ನು ಪ್ರಶಂಸಿಸುತ್ತ ಸ್ವಾಮೀಜಿ ಹಿಂದೂಗಳಿಗೆ ದ್ವೈತ ಮತ್ತು ಅದ್ವೈತದ ತನಕ ತಲುಪುವ ಕೀರ್ತಿ ನೀಡಬಹುದು ಆದರೆ ವ್ಯವಹಾರದಲ್ಲಿ ಹಿಂದೂಗಳು ಅದ್ವೈತ ತತ್ವದ ಪಾಲನೆ ಎಂದೂ ಮಾಡಲಿಲ್ಲ ಎಂದು ಹೇಳಿದ್ದರು. ಒಂದು ವೇಳೆ ಜಗತ್ತಿನಲ್ಲಿ ಅದ್ವೈತ ತತ್ವದ ಸಮಾನತೆಯ ಆದರ್ಶದ ಹತ್ತಿರವಾದ ಧರ್ಮ ಇದೆಯೆಂದರೆ ಅದು ಇಸ್ಲಾಂ ಮಾತ್ರ.

ಇಂತಹ ವಿಶ್ವಮಾನ್ಯ ತತ್ವಜ್ಞಾನಿಯನ್ನು ಕೇವಲ ಒಂದು ಸಂಪ್ರದಾಯದ ಮಹಾಪುರುಷನನ್ನಾಗಿ ಮಾಡುವುದು ಹಾಗೂ ಅವರ ಹೆಸರಿನಲ್ಲಿ ಇತರ ಧಾರ್ಮಿಕ ಸಂಪ್ರದಾಯಗಳ ವಿರುದ್ಧ ಧರ್ಮಾಂಧತೆಯ ರಾಜಕೀಯ ಮಾಡುವುದು ಸ್ವಾಮಿ ವಿವೇಕಾನಂದರ ಪರಂಪರೆಗೆ ಮಾಡುವ ಅವಮಾನ. ಒಂದು ವೇಳೆ ಸ್ವಾಮೀಜಿ ಇಂದು ನಮ್ಮೊಂದಿಗೆ ಇದ್ದಿದ್ದರೆ ಹಾಗೂ ಹಿಂದೂ ಧರ್ಮದ ಹೆಸರಿನಲ್ಲಿ ಲಿಂಚಿಂಗ್, ಬುಲ್‌ಡೋಜರ್ ಬಿಡುವುದು, ಅನ್ಯ ಧರ್ಮೀಯರ ಮೇಲೆ ದಬ್ಬಾಳಿಕೆ ಹಾಗೂ ಬಹುಮತದ ದಾದಾಗಿರಿ ನೋಡುತ್ತಿದ್ದರೆ ಖಂಡಿತವಾಗಿಯೂ ಅದರ ವಿರುದ್ಧ ಎದ್ದು ನಿಂತು ಶಿಕಾಗೋದಲ್ಲಿ ಏನು ಹೇಳಿದ್ದರೋ ಅದನ್ನೇ ಹೇಳುತ್ತಿದ್ದರು: “ಕೋಮುವಾದ, ಧರ್ಮಾಂಧತೆ ಹಾಗೂ ಅವುಗಳ ಅಸಹ್ಯಕರವಾದ ಪರಂಪರಾಗತ ಮತಾಂಧತೆಯು ಈ ಸುಂದರವಾದ ಭೂಮಿಯನ್ನು ದೀರ್ಘಕಾಲದವರೆಗೆ ಆಳಿದೆ. ಆದರೆ ಈಗ ಅವುಗಳ ಅಂತ್ಯ ಬಂದಿದೆ ಹಾಗೂ ನಾನು ಹೃದಯದಿಂದ ಬಯಸುವುದೇನೆಂದರೆ ಎಲ್ಲಾ ರೀತಿಯ ಧರ್ಮಾಂಧತೆಯ ಖಡ್ಗ ಅಥವಾ ಲೇಖನಿಯ ಮೂಲಕ ಆಗುವ ಎಲ್ಲಾ ಶೋಷಣೆಯ ಹಾಗೂ ಮಾನವರ ಪರಸ್ಪರ ಕಹಿಯ ಸಾವು ಖಚಿತವಾಗಿರಲಿ.”

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. OK,thanks God you and gopal krishna are not against swami Vivekananda else many of your peer pragatipara guys were against swamiji too. Firstly as you mentioned swamiji never were infavor of christianity but appreciated jesus as he was totally emptied of the future happenings.He was utterly against the conversion by either forcefully or by the freebies.
    As ge was equally criticised Islam for its very origins and how barbarically killed the subjects who refused to convert into Islam by mohammad.
    You just go through his complete works in 8 volumes in kannada and 10 in English. albeit he was against so many superstitious practices in Hinduism. By this phenomenon he was never ever placed against singh pariwar.
    He clearly proffessed that when Hindu(sanatan) dharma,going to be vanished from planet then it would be the last day for the planet.Don’t ever mis interpret the conjunction and be of conviction.
    Perhaps too long opinion but I’m not stretched words but tried to put
    RAITHARA regarding

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...