ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ‘ಚಡ್ಡಿ’ ಗದ್ದಲ ಹೆಚ್ಚಾಗುತ್ತಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಾಲಾ ಪಠ್ಯಪುಸ್ತಕಗಳ ಕೇಸರಿಕರಣವನ್ನು ವಿರೋಧಿಸಿ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI)ನ ಕಾರ್ಯಕರ್ತರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ನಿವಾಸದ ಹೊರಗೆ ಚಡ್ಡಿಗಳನ್ನು ಸುಟ್ಟುಹಾಕಿದ ನಂತರ ಚಡ್ಡಿ ಗದ್ದಲ ಹೆಚ್ಚಾಗಿದೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಸಂಚಾಲಕರ ಹುದ್ದೆಯಲ್ಲಿ ದಲಿತ ಅಥವಾ ಇತರ ಹಿಂದುಳಿದ ಜಾತಿಗಳು ಏಕಿಲ್ಲ ಎಂದು ಕಿಡಿಕಾರಿದ್ದಾರೆ.
“ಆರ್‌ಎಸ್‌ಎಸ್ ಒಂದು ಜಾತ್ಯತೀತವಲ್ಲದ ಸಂಘಟನೆ ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ದಲಿತ, ಒಬಿಸಿ ಅಥವಾ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಎಂದಾದರೂ ಸರಸಂಚಾಲಕ ಆಗಿದ್ದಾರೆಯೇ..? ನನ್ನ ಆರೋಪ ಸತ್ಯವಾಗಿರುವುದರಿಂದ ಅವರು ಸುಮ್ಮನಿದ್ದಾರೆ” ಎಂದರು.
ಇದನ್ನೂ ಓದಿ: ಶಿಕ್ಷಣ ಸಚಿವರನ್ನು ತಕ್ಷಣ ಕಿತ್ತು ಹಾಕಿ- ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪತ್ರ
ಆರೆಸ್ಸೆಸ್ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಕಳುಹಿಸಲು ಚಡ್ಡಿಗಳನ್ನು ಸಂಗ್ರಹಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ, “ಆರ್‌ಎಸ್‌ಎಸ್ ವಿರುದ್ಧ ಮಾತನಾಡಿದಾಗೆಲ್ಲಾ ನಾನು ಭಸ್ಮ ಆಗುತ್ತೇನೆ ಎನ್ನುತ್ತಾರೆ. ಆದರೆ, ನಾನು ಚೆನ್ನಾಗಿಯೇ ಇದ್ದೇನೆ. ಚಡ್ಡಿಗಳು ಇನ್ನೇನು ಮಾಡಬಹುದು..? ಅವರಿಗೆ ಬೇರೆ ಕೆಲಸ ಏನಿದೆ. ಜನರ ಕೆಲಸ, ಬಡವರ ಕೆಲಸ ಮಾಡಲ್ಲ, ದಲಿತರ ಕೆಲಸ ಮಾಡಲ್ಲ. ಚಡ್ಡಿಗಳು ಚಡ್ಡಿ ಕೆಲಸ ಮಾಡುತ್ತಾರೆ” ಎಂದಿದ್ದಾರೆ.
ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳ ಕೇಸರಿಕರಣದ ಆರೋಪದ ಮೇಲೆ ಆರ್‌ಎಸ್‌ಎಸ್ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ‘ಚಡ್ಡಿಗಳನ್ನು’ ಸುಡಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಹೇಳಿದ್ದರು.
ಸಿದ್ದರಾಮಯ್ಯ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾಂಗ್ರೆಸ್ ನಾಯಕರು ರಾಜ್ಯದ ಅಭಿವೃದ್ಧಿ ಮತ್ತು ಭವಿಷ್ಯದ ಬಗ್ಗೆ ಮಾತನಾಡಬೇಕು ಎಂದು ಮಂಗಳವಾರ ಹೇಳಿದ್ದಾರೆ.
“ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಬೇರೆ ವಿಷಯವಿಲ್ಲ, ಆದ್ದರಿಂದ ಅವರು ಇಂತಹ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದ ಜನರು ಎಲ್ಲವನ್ನು ನೋಡುತ್ತಿದ್ದಾರೆ. ಅವರು ರಾಜ್ಯದ ಅಭಿವೃದ್ಧಿ ಮತ್ತು ಭವಿಷ್ಯದ ಬಗ್ಗೆ ಮಾತನಾಡಬೇಕು” ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ‘ನಮ್ಮ ಹುಡುಗರು ಚಡ್ಡಿ ಸುಟ್ಟಿದ್ದಾರೆಯೇ ಹೊರತು ರಾಷ್ಟ್ರಧ್ವಜವನ್ನಲ್ಲ’ – ಡಿಕೆ ಶಿವಕುಮಾರ್


