ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ ಹೋರಾಟ ನಡೆಸಿದ ಕಾರಣಕ್ಕೆ ಇಂದು ಬೆಳಿಗ್ಗೆ ಬಂಧಿಸಿರುವ ನೂರಾರು ಹೋರಾಟಗಾರರನ್ನು ಬಿಡುಗಡೆಗೊಳಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಟೌನ್ ಹಾಲ್ ಬಳಿ ಜಮಾಯಿಸಿರುವ ಸಾವಿರಾರು ಪ್ರತಿಭಟನಾಕಾರರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಟೌನ್ ಹಾಲ್ ಬಳಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನ ಸೇರಿ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಜೆ.ಸಿ ರಸ್ತೆ, ಕಾರ್ಪೋರೇಷನ್ ರಸ್ತೆ, ಮಾರ್ಕೆಟ್ ರಸ್ತೆ ಬೆಳಿಗ್ಗೆಯಿಂದಲೂ ಸಂಪೂರ್ಣ ಸ್ಥಬ್ತಗೊಂಡಿವೆ. ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿ ಪೊಲೀಸರಿಗೆ ತಲೆನೋವಾಗಿದೆ.
ಪೊಲೀಸರು ಪ್ರತಭಟನಾಕಾರರ ಬಳಿ ಪ್ರತಿಭಟನೆ ನಿಲ್ಲಿಸಲು ಮನವಿ ಮಾಡಿದಾಗ, ಮೊದಲು ಬಂಧಿತರನ್ನು ಬಿಡುಗಡೆ ಮಾಡಿ. ನಾವು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೆವೆ, ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳುವುದು ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ.
ಟೌನ್‌ಹಾಲ್ ಬಳಿಯ ಪ್ರತಿಭಟನಾನಿರತರ ಆಗ್ರಹಕ್ಕೆ ಮಣಿದ ಪೊಲೀಸರು ಬೆಳಿಗ್ಗೆ ರಾಮಚಂದ್ರ ಗುಹಾ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸಿದೆ. ಅವರು ಟೌನ್ ಹಾಲ್ ಬಳಿ ಬಂದ ನಂತರವಷ್ಟೇ ಪ್ರತಿಭಟನೆ ಇಂದಿಗೆ ತಾತ್ಕಾಲಿಕವಾಗಿ ನಿಲ್ಲಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಬೆಳಿಗ್ಗೆಯಿಂದ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದು ಪೊಲೀಸರೇ ಅತಿರೇಕದಿಂದ ವರ್ತಿಸಿದ್ದರು ಮಾತ್ರವಲ್ಲ ಹಲವರಿಗೆ ಹಲ್ಲೆ ಸಹ ನಡೆಸಿ ಬಂಧಿಸಿದ್ದರು. ನಂತರ ಭುಗಿಲೆದ್ದ ಪ್ರತಿಭಟನೆಗೆ ಬೆದರಿದ ಪೊಲೀಸರು ಕೊನೆಗೂ ಎಲ್ಲಾ ಬಂಧಿತರನ್ನು ಬಿಡುಗಡೆ ಮಾಡಿದ್ದಾರೆ.

ಇದೇ ಮಾದರಿಯ ಹೋರಾಟ ದೆಹಲಿಯಲ್ಲಿಯೂ ಸಹ ವರದಿಯಾಗಿದೆ. ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಸೇರಿದಂತೆ ಹಲವು ಹೋರಾಟಗಾರರನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಕ್ರೋಧಗೊಂಡಿರುವ ಸಾವಿರಾರು ಹೋರಾಟಗಾರರು ಧರಣಿ ನಡೆಸುತ್ತಿದ್ದು ಬಂಧಿತರ ಬಿಡುಗಡೆಗೆ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಪೌರತ್ವ ಕಾಯ್ದೆಯ ವಿರುದ್ಧದ ಹೋರಾಟ ದಿನೇ ದಿನೇ ಗಟ್ಟಿಗೊಳ್ಳುತ್ತಿದೆ.



ಜಯ ದೊರಕುವವರೆಗೂ ಈ ಹೋರಾಟದ ಕಾವು ಆರದಿರಲಿ.