Homeಮುಖಪುಟಮಹಾರಾಣಿ ಕಾಲೇಜು: ಲೈಂಗಿಕ ಕಿರುಕುಳ ನಡೆಸಿದ ಆರೋಪಿಯ ಪರ ಬಿಜೆಪಿ ಶಾಸಕ ನಾಗೇಂದ್ರ ವಕಾಲತ್ತು..

ಮಹಾರಾಣಿ ಕಾಲೇಜು: ಲೈಂಗಿಕ ಕಿರುಕುಳ ನಡೆಸಿದ ಆರೋಪಿಯ ಪರ ಬಿಜೆಪಿ ಶಾಸಕ ನಾಗೇಂದ್ರ ವಕಾಲತ್ತು..

ಶಾಸಕರು ಕ್ಷೇತ್ರದಲ್ಲಿ ಮಾಡಬೇಕಾದ್ದ ನೂರಾರು ಕೆಲಸಗಳಿದ್ದರೂ ಸಹ ವಿದ್ಯಾರ್ಥಿನಿಗೆ ಅನ್ಯಾಯವೆಸಗಿದ ಆರೋಪಿಯ ರಕ್ಷಣೆಗೆ ನಿಂತಿರುವುದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

- Advertisement -
- Advertisement -

ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿಯೊರ್ವರಿಗೆ ಸತತ ಲೈಂಗಿಕ ಕಿರುಕುಳ ನೀಡದ ಆರೋಪದ ಮೇಲೆ ಅಮಾನತು ಆಗಿರುವ ಆರೋಪಿಯ ಪರ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ನಾಗೇಂದ್ರ ವಕಾಲತ್ತು ವಹಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನಲೆ

ದಿನಾಂಕ 18-10-2019 ರಂದು ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿಯೊಬ್ಬರು ಕಾಲೇಜಿನ ದ್ವೀತಿಯ ದರ್ಜೆ ಸಹಾಯಕ ಸಿಬ್ಬಂದಿ ಜಯರಾಮು ಎಂಬುವವರು ಅನುಚಿತವಾಗಿ ವರ್ತಿಸುವುದಲ್ಲದೇ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರಾಂಶುಪಾಲರಿಗೆ ದೂರು ನೀಡಿದ್ದರು.

ಅವರು ಪದೇ ಪದೇ ಫೋನ್ ಮಾಡಿ, ವಾಟ್ಸಾಪ್‌ ಮಾಡಿ ಪಾರ್ಟಿ ಕೊಡಿಸು, ನಿಮ್ಮ ತಂದೆ ತಾಯಿಯ ನಂಬರ್‌ ಕೊಡು ಎಂದು ಒತ್ತಾಯಿಸುತ್ತಾರೆ, ಇದರಿಂದ ನನಗೆ ತೀವ್ರ ಮಾನಸಿಕ ಒತ್ತಡ ಉಂಟಾಗಿದ್ದು ಓದಲು ತೊಂದರೆಯಾಗುತ್ತಿದೆ. ಹಾಗಾಗಿ ಕ್ರಮ ತೆಗೆದುಕೊಳ್ಳಬೇಕೆಂದು ವಿದ್ಯಾರ್ಥಿನಿ ಒತ್ತಾಯಿಸಿದ್ದರು.

ದೂರಿನ ಆಧಾರದಲ್ಲಿ ಕಾಲೇಜಿನಲ್ಲಿ ಆಂತರಿಕ ಮಹಿಳಾ ದೌರ್ಜನ್ಯ ತಡೆ ಸಮಿತಿಯು ಡಾ.ಪಿ.ಎಚ್‌ ತೇಜಸ್ವಿನಿಯವರ ನೇತೃತ್ವದಲ್ಲಿ 28-10-2019ರಿಂದ ಹಲವು ಸುತ್ತಿನ ಸಭೆ ಸೇರಿ ವಿಚಾರಣೆ ನಡೆಸಿತ್ತು. ದ್ವೀತಿಯ ದರ್ಜೆ ಸಹಾಯಕ ಸಿಬ್ಬಂದಿ ಜಯರಾಮುರವರು ಆ ವಿದ್ಯಾರ್ಥಿನಿಯೊಂದಿಗೆ ನಡೆಸಿದ ಫೋನ್‌ ಸಂಭಾಷಣೆಗಳ ರೆಕಾರ್ಡ್ ಇದ್ದುದರಿಂದ ಮೇಲ್ನೋಟದಲ್ಲಿಯೇ ಆತನ ತಪ್ಪು ನಡವಳಿಕೆ ಸಾಬೀತಾಗಿತ್ತು.

ಆನಂತರ ಆ ವಿದ್ಯಾರ್ಥಿನಿಯ ನಡುವೆ ಸಮಿತಿಯು ಆಪ್ತಸಮಾಲೋಚನೆ ನಡೆಸಿದಾಗ ಆತ ಪದೇ ಪದೇ ಕರೆ ಮಾಡುತ್ತಿದ್ದುದು, ವಾಟ್ಸಾಪ್‌ ಸಂದೇಶಗಳನ್ನು ಕಳಿಸುತ್ತಿದ್ದುದು, ಪಾರ್ಟಿ ಕೊಡಿಸು, ಇಲ್ಲವಾದರೆ ನಿನಗೆ ಪರೀಕ್ಷೆ ಬರೆಯದಂತೆ ತಡೆಹಿಡಿಯುತ್ತೇನೆ, ನಿಮ್ಮ ತಂದೆಯವರಿಗೆ ಕಂಪ್ಲೈಟ್‌ ಮಾಡುತ್ತೇನೆ, ನಿಮ್ಮ ತಾಯಿಯೊಂದಿಗೆ ಮಾತಾಡುತ್ತೇನೆ ಎಂದೆಲ್ಲಾ ಅಶ್ಲೀಲವಾಗಿ ಮಾತನಾಡಿ ಆಕೆಗೆ ಮಾನಸಿಕ ಕಿರುಕುಳಕೊಟ್ಟಿರುವುದು ಕಂಡುಬಂದಿದೆ. ಇದೆಲ್ಲವರನ್ನು ಆಧರಿಸಿ ಅದು 25-11-2019ರಂದು ತನ್ನ ವರದಿಯನ್ನು ಪ್ರಾಂಶುಪಾಲರಿಗೆ ಸಲ್ಲಿಸಿತ್ತು.

ಜಯರಾಮು ಎಂಬುವವನ ಕೃತ್ಯಗಳಿಗೆ ಸೂಕ್ತ ಸಾಕ್ಷಿಗಳು ಸಹ ಲಭ್ಯವಿದ್ದುದರಿಂದ ಪ್ರಾಂಶುಪಾಲರು ಆಯುಕ್ತರ ಗಮನಕ್ಕೆ ತಂದಿದ್ದು, ಆಯುಕ್ತರು ದಿನಾಂಕ 12-12-2019ರಂದು ವಿಚಾರಣೆ ಕಾಯ್ದಿರಿಸಿ ಆತನನ್ನು ಸೇವೆಯಿಂದ ಅಮಾನತ್ತು ಮಾಡಿರುತ್ತಾರೆ.

ಶಾಸಕರ ಎಂಟ್ರಿ..

ಇದಾದ ನಾಲ್ಕೇ ದಿನದಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ನಾಗೇಂದ್ರರವರು ಉನ್ನತ ಶಿಕ್ಷಣ ಸಚಿವರು ಮತ್ತು ಉಪಮುಖ್ಯಮಂತ್ರಿಗಳಾದ ಅಶ್ವಥನಾರಾಯಣರವರಿಗೆ ಪತ್ರ ಬರೆದಿದ್ದು ಅದರಲ್ಲಿ ಆರೋಪಿ ಜಯರಾಮುರವರ ಅಮಾನತ್ತು ಆದೇಶವನ್ನು ರದ್ದುಗೊಳಿಸಿ, ಕೆಲಸಕ್ಕೆ ನಿಯುಕ್ತಿ ಮಾಡಬೇಕೆಂದು ವಕಾಲತ್ತು ವಹಿಸಿದ್ದಾರೆ.

ದ್ವೀತಿಯ ದರ್ಜೆ ಸಹಾಯಕ ಜಯರಾಮು ಮಾಡಿರುವ ದೃಷ್ಕೃತ್ಯಗಳಿಗೆ ಎಲ್ಲಾ ರೀತಿಯ ಸಾಕ್ಷಿಗಳಿದ್ದು ಅವು ನಾನುಗೌರಿ.ಕಾಂಗೂ ಕೂಡ ಲಭ್ಯವಾಗಿವೆ. ವಿದ್ಯಾರ್ಥಿನಿಯ ದೂರು, ಮಹಿಳಾ ದೌರ್ಜನ್ಯ ತಡೆ ಸಮಿತಿಯ ಸಭೆಯ ನಿರ್ಣಯಗಳು, ಆತ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ಮಾತನಾಡಿರುವ ಆಡಿಯೋ ಕ್ಲಿಪ್‌ಗಳು ಸಿಕ್ಕಿದ್ದು ಅವುಗಳನ್ನು ನೋಡಿದರೆ ಆತನ ತಪ್ಪು ಎಂಥವರಿಗೂ ಅರಿವಾಗುತ್ತದೆ. ಅಂತದ್ದರಲ್ಲಿ ಈ ಬಿಜೆಪಿ ಶಾಸಕರು ಮಾತ್ರ ಏಕೆ ಆತನ ಪರ ನಿಂತಿದ್ದಾರೆ ಎಂಬುದು ಆಶ್ಚರ್‍ಯವಾಗಿದೆ.

ಶಾಸಕರು ಕ್ಷೇತ್ರದಲ್ಲಿ ಮಾಡಬೇಕಾದ್ದ ನೂರಾರು ಕೆಲಸಗಳಿದ್ದರೂ ಸಹ ವಿದ್ಯಾರ್ಥಿನಿಗೆ ಅನ್ಯಾಯವೆಸಗಿದ ಆರೋಪಿಯ ರಕ್ಷಣೆಗೆ ನಿಂತಿರುವುದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ವಿದ್ಯಾರ್ಥಿನಿ ಮತ್ತು ಆಕೆಯ ತಂದೆಗೆ ಒತ್ತಡ:

ದೂರು ನೀಡಿದ ಕೆಲವೇ ದಿನಗಳಲ್ಲಿ ವಿಷಯ ತಿಳಿದ ಕೂಡಲೇ ಆರೋಪಿ ಜಯರಾಮು ಹಲವು ಮೂಲಗಳಿಂದ ವಿದ್ಯಾರ್ಥಿನಿ ಮತ್ತು ಆಕೆಯ ತಂದೆಯೇ ಮೇಲೆ ದೂರು ವಾಪಸ್‌ ತೆಗೆದುಕೊಳ್ಳಲು ಒತ್ತಡ ತಂದಿದ್ದಾನೆ. ವಿದ್ಯಾರ್ಥಿನಿಯ ಬಳಿ ಬಂದು ಇನ್ನು ಎರಡು ವರ್ಷ ಮಾತ್ರ ನನ್ನ ಸರ್ವಿಸ್‌ ಇದೆ. ನೀವು ಕೇಳಿದ್ದು ಕೊಡುತ್ತೇನೆ, ನಿಮ್ಮ ಕಾಲಿಗೆ ಬೀಳುತ್ತೇನೆ ದಯವಿಟ್ಟು ದೂರು ವಾಪಸ್‌ ತಗೊಳ್ಳಿ ಎಂದು ಗೋಗೆರಿದ್ದಾನೆ.

ವಿದ್ಯಾರ್ಥಿನಿಯ ತಂದೆಯವರೊಡನೆಯು ಸಹ ಮಾತನಾಡಿ ದೂರನ್ನು ವಾಪಸ್‌ ಪಡೆಯುವಂತೆ ಒತ್ತಡ ತಂದಿದ್ದಾನೆ. ಹಾಗಾಗಿ ನವೆಂಬರ್‌ 07ರಂದು ವಿದ್ಯಾರ್ಥಿನಿಯ ತಂದೆಯು ದೂರನ್ನು ವಾಪಸ್‌ ಪಡೆಯುವ ಕುರಿತು ಪತ್ರವೊಂದನ್ನು ಬರೆದು ಅದಕ್ಕೆ ವಿದ್ಯಾರ್ಥಿನಿಯ ಸಹಿ ಹಾಕಿಸಿ ಪ್ರಾಂಶುಪಾಲರಿಗೆ ತಲುಪಿಸಿದ್ದಾರೆ. ಆದರೆ ಇದೆಲ್ಲವೂ ನಮ್ಮ ಮೇಲೆ ಒತ್ತಡ ತಂದು ಹೀಗೆ ಮಾಡಿಸಿದ್ದಾರೆ. ಆತನಿಗೆ ಶಿಕ್ಷೆಯಾಗಬೇಕೆಂದು ವಿದ್ಯಾರ್ಥಿನಿಯು ದೌರ್ಜನ್ಯ ತಡೆ ಸಮಿತಿಯ ಮುಂದೆ ಮಾತನ್ನಾಡಿರುವುದು ಆಡಿಯೋದಲ್ಲಿ ರೆಕಾರ್ಡ್‌ ಆಗಿದೆ.

ಅಂದರೆ ಜಯರಾಮು ತಪ್ಪು ಮಾಡಿದ್ದಲ್ಲದೇ ದೂರು ವಾಪಸ್‌ ಪಡೆಯುವಂತೆಯೂ ಸಹ ತನಗಿರುವ ಶಕ್ತಿ ಸಾಮರ್ಥ್ಯ ಬಳಿಸಿ ಒತ್ತಡ ತಂದಿರುವುದು ಸ್ಪಷ್ಟವಾಗಿದೆ. ಇನ್ನು ಮುಂದುವರೆದು ಅಮಾನತ್ತು ರದ್ದುಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಶಾಸಕರಿಂದ ಆಯಕ್ತರಿಗೆ ಪತ್ರ ಬರೆಸಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಆತನ ಅಮಾನತ್ತು ರದ್ದಗೊಂಡರೂ ಅಚ್ಚರಿಪಡಬೇಕಾಗಿಲ್ಲ..

ಹೀಗಾದರೆ ನ್ಯಾಯದ ಕಥೆಯೇನು?

ದೇಶಾದ್ಯಂತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಭೇಟಿ ಪಡಾವೋ, ಭೇಟಿ ಬಚಾಚೊ ಎಂದು ಘೋಷಣೆಯಲ್ಲಿ ಮಾತ್ರ ಹೇಳುವ ಸರ್ಕಾರಗಳು ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗುತ್ತಿಲ್ಲ. ಇದರಿಂದ ಅನ್ಯಾಯಕ್ಕೊಳಗಾದವರು ಸಹ ದೂರು ಕೊಡಲು ಹೆದರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೂರು ನೀಡಿದ ವಿದ್ಯಾರ್ಥಿನಿಯ ಬಾಯಿ ಮುಚ್ಚಿಸುವ ಹುನ್ನಾರ ಮೈಸೂರಿನಲ್ಲಿ ನಡೆಯುತ್ತಿದೆ. ತನ್ನನ್ನು ಆರಿಸಿದ ಜನರ ಹಿತಕಾಯಬೇಕಾದ ಶಾಸಕರೆ ಆರೋಪಿಗಳ ಪರ ನಿಂತಿರುವುದು ದುರದೃಷ್ಟಕರವಾಗಿದೆ.

ಈ ವಿಷಯದಲ್ಲಿ ಶಿಕ್ಷಣ ಇಲಾಖೆ ಯಾವುದೇ ಕಾರಣಕ್ಕೂ ಅಮಾನತ್ತು ರದ್ದುಗೊಳಸಬಾರದು. ಆದಷ್ಟು ಬೇಗ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು. ಇದು ಉಳಿದವರಿಗೂ ಪಾಠವಾಗಬೇಕು. ಆಮೂಲಕ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಿಲ್ಲಬೇಕು ಎಂಬುದು ನಮ್ಮ ಆಶಯವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...