Homeಮುಖಪುಟಸ್ಟ್ಯಾನ್‌ ಸ್ವಾಮಿ ನಿಧನಕ್ಕೆ ಕಾರಣರಾದವರನ್ನು ಇತಿಹಾಸ ಕ್ಷಮಿಸುವುದಿಲ್ಲ

ಸ್ಟ್ಯಾನ್‌ ಸ್ವಾಮಿ ನಿಧನಕ್ಕೆ ಕಾರಣರಾದವರನ್ನು ಇತಿಹಾಸ ಕ್ಷಮಿಸುವುದಿಲ್ಲ

ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ನಾಗರೀಕರಿಗೆ ಸಲ್ಲಬೇಕಾದ ಹೋರಾಟದ ಅವಕಾಶಗಳನ್ನು ಕುಗ್ಗಿಸುವುದು ಭಾರತದ ಪ್ರಜಾಸತ್ತೆಗೆ ಮಾರಕಪ್ರಾಯವಾಗಿದೆ.

- Advertisement -
- Advertisement -

ಭೀಮಾ ಕೊರೆಗಾಂವ್ ಯುದ್ಧ ಭಾರತದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿದೆ. ಜನವರಿ 01, 1818ರಲ್ಲಿ ಪೇಶ್ವೆ ಬಾಜಿರಾವ್-2 ಮತ್ತು ಈಸ್ಟ್ ಇಂಡಿಯಾ ಕಂಪನಿಯ ಮಹರ್ ಸೇನೆಗಳ ನಡುವೆ ನಡೆದ ಯುದ್ಧದಲ್ಲಿ ಸುಮಾರು 28 ಸಾವಿರ ಸೈನ್ಯಬಲವನ್ನು ಹೊಂದಿದ್ದ ಪ್ರಭುತ್ವವಾದಿ ಪೇಶ್ವೆ ಬಾಜಿರಾವ್ ಸ್ವಾಭಿಮಾನಿ ದಲಿತ ಮಹರ್ ಸೇನೆಯ 800 ವೀರ ಯೋಧರ ಮುಂದೆ ಸೋಲುಂಡಂತಹ ಘಟನೆ ಐತಿಹಾಸಿಕವಾಗಿ ವಿಶೇಷ ಮಹತ್ವ ಹೊಂದಿದೆ. ಮಹಾರಾಷ್ಟ್ರದ ಪುಣೆ ಬಳಿಯ ಕೋರೆಗಾಂವ್ ಎಂಬಲ್ಲಿ ವಿಜಯದ ಸಂಕೇತವಾಗಿ ಯುದ್ಧ ಸ್ಮಾರಕವನ್ನು ಬ್ರಿಟಿಷರು ಅಂದು ನಿರ್ಮಿಸಿದ್ದರು. ಸುಮಾರು 49 ಜನ ವೀರ ಮಹರ್ ಯೋಧರು ಹುತಾತ್ಮರಾಗಿ ಪ್ರಭುತ್ವದ ವಿರುದ್ಧ ತಮ್ಮ ಶೌರ್ಯವನ್ನು ದಾಖಲಿಸಿದ್ದಾರೆ. ಸ್ಮಾರಕದಲ್ಲಿ ಸಿದನಾಯಕ ಸೇರಿದಂತೆ ಸುಮಾರು 22 ವೀರಯೋಧರ ಹೆಸರನ್ನು ಅಭಿಮಾನಪೂರ್ವಕವಾಗಿ ಮಂಡಿಸಲಾಗಿದೆ. ದಲಿತರ ಸಾಮಾಜಿಕ ನ್ಯಾಯಪರ ಹೋರಾಟಕ್ಕೆ ಕೋರೆಗಾಂವ್ ಯುದ್ಧದ ಗೆಲುವು ಸ್ಪೂರ್ತಿಯೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಬಣ್ಣಿಸಿದ್ದಾರೆ. ಅವರು ಬದುಕಿರುವ ತನಕ ಪ್ರತಿ ವರ್ಷ ಜನವರಿ 01 ರಂದು ಕೋರೆಗಾಂವ್‌ಗೆ ತೆರಳಿ ಸ್ಮಾರಕಕ್ಕೆ ನಮಿಸುತ್ತಿದ್ದರು. ಅಂದಿನಿಂದ ದೇಶದ ಎಲ್ಲೆಡೆ ಸ್ವಾಭಿಮಾನಿ ದಲಿತರು ಕೋರೆಗಾಂವ್ ಗೆಲುವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅಲ್ಲದೆ ದೇಶದ ಬಹಳಷ್ಟು ಕಡೆ ಕೋರೆಗಾಂವ್ ಯುದ್ಧ ಸ್ಮಾರಕಗಳನ್ನು ಪ್ರೀತಿಪೂರ್ವಕವಾಗಿ ದಲಿತರು ನಿರ್ಮಿಸಿದ್ದಾರೆ. ಐತಿಹಾಸಿಕ ಮೈಸೂರು ನಗರದ ಅಶೋಕಪುರಂನಲ್ಲಿಯೂ ಕೂಡ ಇಂತಹದೇ ಒಂದು ಸ್ಮಾರಕವಿದ್ದು ಪ್ರತಿವರ್ಷ ಜನವರಿ 01ರಂದು ಸಾವಿರಾರು ದಲಿತರು ಕೋರೆಗಾಂವ್ ಗೆಲುವಿನ ರೂವಾರಿಗಳು ಮತ್ತು ಹುತಾತ್ಮರಿಗೆ ನುಡಿನಮನ ಸಲ್ಲಿಸುತ್ತಾರೆ.

ಡಿಸೆಂಬರ್ 31, 2017ರಂದು ಪುಣೆಯಲ್ಲಿ ಭೀಮಾ ಕೋರೆಗಾಂವ್ ಯುದ್ಧದ ಸ್ಮರಣಾರ್ಥವಾಗಿ ಎಲ್ಗಾರ್ ಪರಿಷತ್ ಎಂಬ ಸ್ವಾಭಿಮಾನಿ ದಲಿತರ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 260ಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸಿದ್ದವು. ಲಕ್ಷಾಂತರ ಜನ ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಮಾವೇಶದಲ್ಲಿ ಆನಂದ ತೇಲ್‌ತುಂಬ್ಡೆ, ಗೌತಮ್ ನೌಲಖ, ಸ್ಟ್ಯಾನ್‌ಸ್ವಾಮಿ ಮೊದಲಾದ ಸುಮಾರು 15 ಮಂದಿ ಸಮಾನತೆಯ ಹರಿಕಾರರು ಭಾಗವಹಿಸಿ ಬುದ್ಧ, ಫುಲೆ, ಅಂಬೇಡ್ಕರ್, ಪೆರಿಯಾರ್ ಮೊದಲಾದ ಮಹಾತ್ಮರು ಕಂಡ ಪ್ರಬುದ್ಧ ಭಾರತ ಕನಸನ್ನು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನನಸು ಮಾಡಬೇಕೆಂದು ಕರೆ ನೀಡಿದರು. ಇದರಿಂದ ಕುಪಿತಗೊಂಡ ಸಂಘ ಪರಿವಾರಿಗಳು ಕೋರೆಗಾಂವ್ ಯುದ್ಧದ ಐತಿಹಾಸಿಕ ಮಹತ್ವಕ್ಕೆ ಕಳಂಕ ತರಲು ದುರುದ್ದೇಶ ಪೂರ್ವಕವಾಗಿ ಹಿಂಸಾಚಾರ ನಡೆಸಿದರು. ತದನಂತರ ಪ್ರಬಲರು ಮತ್ತು ದಲಿತರ ನಡುವಣ ಸಂಘರ್ಷದಲ್ಲಿ ಅನೇಕ ಜನ ಮುಗ್ಧ ದಲಿತರು ಪ್ರಾಣ ಕಳೆದುಕೊಂಡಿದ್ದರು. ಅಂದು ಕೇಂದ್ರ ಹಾಗೂ ಮಹಾರಾಷ್ಟ್ರಗಳಲ್ಲಿ ಆಡಳಿತ ನಡೆಸುತ್ತಿದ್ದ ಸಂಘ ಪರಿವಾರಿಗಳ ನೇತೃತ್ವದ ಸರ್ಕಾರಗಳು ಬಲಾಢ್ಯರ ಪರವಾಗಿ ನಿಂತು ದಲಿತರನ್ನು ಹೀನಾಯವಾಗಿ ಕಡೆಗಣಿಸಿದರು. ಈ ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೊಳಗಾಗಿ ಭಾರತವು ಮಾನವ ಹಕ್ಕುಗಳ ಉಲ್ಲಂಘನೆಯ ದೇಶವೆಂಬ ಕಳಂಕ ಹೊಂದಲು ಕಾರಣವಾಯಿತು.

PC : The Print

ಫಾದರ್ ಸ್ಟ್ಯಾನ್‌ಸ್ವಾಮಿ ಆದಿವಾಸಿಗಳ ಮಾನವ ಹಕ್ಕುಗಳ ಅಪ್ರತಿಮ ಹೋರಾಟಗಾರರೆಂದು ಭಾರತದ ಇತಿಹಾಸದಲ್ಲಿ ಗೌರವಿಸಲ್ಪಟ್ಟಿದ್ದಾರೆ. ಆದಿವಾಸಿಗಳ ಭೂಮಿಯ ಹಕ್ಕು, ಶಿಕ್ಷಣ ಹಕ್ಕು, ಆರೋಗ್ಯ ಹಕ್ಕು, ಉದ್ಯೋಗ ಹಕ್ಕು, ಸಾಮಾಜಿಕ ಸುರಕ್ಷತೆ, ಒಳಗೊಳ್ಳುವ ಅಭಿವೃದ್ಧಿ ಮೊದಲಾದ ಮಹತ್ವದ ವಿಷಯಗಳನ್ನು ಕೈಗೊಂಡು ಉತ್ತರ ಭಾರತದಲ್ಲಿ ಇವರು ನಡೆಸಿದ ಹೋರಾಟ ಅಪ್ರತಿಮವಾದುದು. ಇವರು ಬದುಕಿನುದ್ದಕ್ಕೂ ಮಾನವತಾವಾದಿಯಾಗಿ ಆದಿವಾಸಿಗಳ ಹಕ್ಕುಗಳಿಗಾಗಿ ಮಹಾಶ್ವೇತಾದೇವಿಯವರ ಜೊತೆಗೆ ಕೈಜೋಡಿಸಿ ಅಹರ್ನಿಸಿ ದುಡಿದರು. ಇವರ ಬದುಕು, ಹೋರಾಟ ಮತ್ತು ಕೊಡುಗೆಗಳು ತೆರೆದ ಪುಸ್ತಕವೆಂದೇ ನಿರ್ಭಿಡೆಯಿಂದ ಹೇಳಬಹುದು. ಇವರು 2017ರಲ್ಲಿ ಕೋರೆಗಾಂವ್ ಯುದ್ಧದ ಸ್ಮರಣಾರ್ಥ ಎಲ್ಗಾರ್ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ದಲಿತರು, ಆದಿವಾಸಿಗಳು ಮತ್ತು ಶೋಷಿತ ವರ್ಗಗಳಲ್ಲಿ ಜನಜಾಗೃತಿ ಮೂಡಿಸಿದರೇ ಹೊರತಾಗಿ ಯಾವುದೇ ರೀತಿಯ ಹಿಂಸಾಚಾರಕ್ಕೆ ಪ್ರೇರಣೆ ನೀಡಲಿಲ್ಲ. ಆದಿವಾಸಿಗಳು ಇಂದಿಗೂ ಇವರನ್ನು ಮಹಾನ್ ಶಾಂತಿಧೂತ ಮತ್ತು ಮಾನವತಾವಾದಿಯೆಂದು ಗೌರವಿಸುತ್ತಾರೆ.

ಫಾದರ್ ಸ್ಟ್ಯಾನ್‌ಸ್ವಾಮಿ ವಿರುದ್ಧ ಆಗಸ್ಟ್ 22, 2018ರಂದು ಪುಣೆ ಪೊಲೀಸರು ಭಯೋತ್ಪಾದನೆಗೆ ಪ್ರೇರಣೆ ನೀಡಿದರೆಂದು ಎಫ್‌ಐಆರ್ ದಾಖಲಿಸಿದರು. ಅಕ್ಟೋಬರ್ 26, 2018ರಂದು ಮಹಾರಾಷ್ಟ್ರ ಉಚ್ಛನ್ಯಾಯಾಲಯ ಇವರನ್ನು ಬಂಧಿಸಬಾರದೆಂದು ತೀರ್ಪು ನೀಡಿತು. ಅಕ್ಟೋಬರ್ 08, 2020ರಂದು ಭಾರತ ಸರ್ಕಾರದ ಎನ್‌ಐಎ ಬಂಧಿಸಿ ಅವರನ್ನು ತಾಲೋಜ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿತು. ಅಕ್ಟೋಬರ್ 23, 2020ರಂದು ಎನ್‌ಐಎ ವಿಶೇಷ ನ್ಯಾಯಾಲಯ ಆರೋಗ್ಯ ಕಾರಣದ ಹಿನ್ನೆಲೆಯಲ್ಲಿ ಜಾಮೀನು ನಿರಾಕರಿಸಿತು. ನವೆಂಬರ್ 06, 2020ರಂದು ಅವರು ಮಾನವೀಯ ನೆಲೆಗಟ್ಟಿನಲ್ಲಿ ತನಗೆ ಒಣಹುಲ್ಲಿನ ಹಾಸಿಗೆ ಮತ್ತು ವೈದ್ಯಕೀಯ ಪರಿಕರಗಳನ್ನು ಒದಗಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಆದರೆ ನವೆಂಬರ್ 26, 2020ರಂದು ಎನ್‌ಐಎ ತನ್ನ ಬಳಿ ಇಂತಹ ಸೌಲಭ್ಯಗಳಿಲ್ಲವೆಂದು ನಿರಾಕರಿಸಿತು. ಆದಾಗ್ಯೂ ಡಿಸೆಂಬರ್ 04, 2020ರಂದು ಈ ಸೌಲಭ್ಯಗಳು ಪ್ರಜ್ಞಾವಂತರ ಹಸ್ತಕ್ಷೇಪದಿಂದಾಗಿ ಲಭಿಸಿದವು.

ಫಾದರ್ ಸ್ಟ್ಯಾನ್‌ಸ್ವಾಮಿ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಮಾರ್ಚ್ 22, 2021ರಂದು ಎನ್‌ಐಎ ನ್ಯಾಯಾಲಯ ಇವರ ಆರೋಗ್ಯ ಕೇಂದ್ರಿತ ಜಾಮೀನು ಮನವಿಯನ್ನು ಸಮರ್ಪಕ ಪರಿಶೀಲನಗೆ ಒಳಪಡಿಸದೇ ತಿರಸ್ಕರಿಸಿತು. ಏಪ್ರಿಲ್ 26, 2021ರಂದು ತಾಲೋಜ ಸೆರೆಮನೆಗೆ ತೆರಳಿದ ನಂತರ ಅವಶ್ಯಕ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಇವರ ಅನಾರೋಗ್ಯ ಮತ್ತಷ್ಟು ಹೆಚ್ಚಾದ ಕಾರಣ ತಮಗೆ ಜಾಮೀನು ನೀಡಬೇಕೆಂದು ಮುಂಬಯಿ ಉಚ್ಛನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಮೇ 21, 2021ರಂದು ಮುಂಬಯಿನ ಜೆಜೆ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಇವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಇವರಿಗೆ ಕಾಲುಗಳು ಸ್ವಾಧೀನವಿಲ್ಲದೆ ನಡುಗುತ್ತವೆ, ಎರಡೂ ಕಿವಿಗಳು ಕೇಳಿಸುವುದಿಲ್ಲ, ದೈಹಿಕವಾಗಿ ಅಶಕ್ತರು, ಆಗಾಗ್ಗೆ ಬೇಧಿ ಉಂಟಾಗುವುದು, ತೀವ್ರ ಬೆನ್ನು ನೋವು ಮೊದಲಾದ ಗಂಭೀರ ಆರೋಗ್ಯ ಸಮಸ್ಯೆಗಳಿರುವುದನ್ನು ವರದಿ ಮಾಡಿತು. ಇವರಿಗೆ ಸೆರೆಮನೆಯಲ್ಲಿ ನಡೆದಾಡಲು ಊರುಗೋಲು, ಸಹಾಯಕರು, ಗಾಲಿಕುರ್ಚಿ ಮೊದಲಾದವುಗಳನ್ನು ಒದಗಿಸಬೇಕೆಂದು ತಿಳಿಸಿತು.

ಮೇ 28, 2021ರಂದು ಮುಂಬಯಿ ಉಚ್ಛನ್ಯಾಯಾಲಯದ ಎಸ್.ಜೆ.ಕಥಾವಲ್ಲ ಮತ್ತು ಎಸ್.ಪಿ.ಥಾವಡೆ ವಿಭಾಗೀಯ ಪೀಠ ಫಾದರ್ ಸ್ಟ್ಯಾನ್‌ಸ್ವಾಮಿಯವರು ದೈಹಿಕವಾಗಿ ತುಂಬಾ ದುರ್ಬಲರು ಮತ್ತು ಕಿವಿಗಳು ಸರಿಯಾಗಿ ಕೇಳಿಸದ ಕಾರಣ ಅವರನ್ನು ಒಂದು ಒಳ್ಳೆಯ ಆಸ್ಪತ್ರೆಗೆ ಸೇರಿಸಬೇಕೆಂದು ಸೂಚಿಸಿತು. ಇವರು ಯಾವುದೋ ಒಂದು ನಾಮ್ ಕೆ ವಾಸ್ತೆ ಆಸ್ಪತ್ರೆಯಲ್ಲಿ ಸಾಯುವುದಕ್ಕಿಂತ ಸೆರೆಮನೆಯಲ್ಲಿ ಸಾಯುವುದೇ ಲೇಸು ಎಂದು ನ್ಯಾಯಾಲಯಕ್ಕೆ ಮಂಡಿಸಿದರು. ಆದಾಗ್ಯೂ ಇವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಉತ್ತಮ ಚಿಕಿತ್ಸೆಗಾಗಿ ಸೇರಿಸಬೇಕೆಂದು ಉಚ್ಛನ್ಯಾಯಾಲಯ ತೀರ್ಮಾನಿಸಿತು. ಮೇ 30, 2021ರಂದು ಇವರು ಕೋವಿಡ್-19 ಸೋಂಕಿಗೆ ಗುರಿಯಾದರು. ಜೂನ್ 17, 2021ರಂದು ಉಚ್ಛನ್ಯಾಯಾಲಯ ಇವರನ್ನು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆಗಾಗಿ ಉಳಿಸಬೇಕೆಂಬ ತೀರ್ಪು ನೀಡಿತು. ಜುಲೈ 04, 2021ರಂದು ಇವರಿಗೆ ತೀವ್ರ ಹೃದಯಾಘಾತವಾದ ಕಾರಣ ಇವರನ್ನು ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಸೌಲಭ್ಯದಲ್ಲಿ ಇಡಲಾಯಿತು. ಜುಲೈ 05, 2021ರಂದು ಇವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ಈ ಘಟನೆಗಳಿಂದ 84 ವಯಸ್ಸಿನ ವಯೋವೃದ್ಧ ಮತ್ತು ಅಪ್ರತಿಮ ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್‌ಸ್ವಾಮಿ ಜೈಲುವಾಸ, ಅವರು ಜೈಲಿನಲ್ಲಿ ಅನುಭವಿಸಿದ ಯಾತನೆ, ಅವರಿಗೆ ಜಾಮೀನು ನಿರಾಕರಣೆಯಿಂದ ಉಂಟಾದ ಆರೋಗ್ಯ ಸಮಸ್ಯೆ ಮತ್ತು ಅವರು ಲೋಕಕ್ಕೆ ವಿದಾಯ ಹೇಳಿದ ಅಮಾನವೀಯ ಪರಿಸರ ಸ್ಪಷ್ಟವಾಗಿ ತಿಳಿದು ಬರುತ್ತದೆ.

PC : Asia News

ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಶೇಷ ಪ್ರತಿನಿಧಿಗಳಾದ ಮೇರಿ ಲಾಲರ್ ಮತ್ತು ಇಮಾನ್ ಗಿಲ್ಮೋರ್ ಎಂಬುವರು ಫಾದರ್ ಸ್ಟ್ಯಾನ್‌ಸ್ವಾಮಿ ಅವರನ್ನು ಭಯೋತ್ಪಾದನೆಯ ಸುಳ್ಳು ಅಪಾದನೆ ಮೇರೆಗೆ ಸ್ಥಾಪಿತ ಹಿತಾಸಕ್ತಿಗಳು ಅಮಾನುಷವಾಗಿ ಸೆರೆಮನೆಗೆ ದಬ್ಬಿದವು ಎಂದು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿ ಇತಿಹಾಸದ ಬಗ್ಗೆ ಜನಜಾಗೃತಿ ಮೂಡಿಸಿದ ವ್ಯಕ್ತಿಗೆ ಇಂತಹ ಸ್ಥಿತಿ ಬರಬಾರದಾಗಿತ್ತು. ಇವರನ್ನು ಅಮಾನುಷವಾಗಿ ನಡೆಸಿಕೊಂಡು ಕೊಂದವರೇ ನಿಜವಾದ ಅರ್ಥದಲ್ಲಿ ಭಯೋತ್ಪಾದಕರು. ಇವರನ್ನು ಇತಿಹಾಸ ಖಂಡಿತ ಕ್ಷಮಿಸುವುದಿಲ್ಲ.

ಫಾದರ್ ಸ್ಟ್ಯಾನ್‌ಸ್ವಾಮಿ ಅಮಾನುಷ ಸಾವಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮೈಕೆಲ್ ಬ್ಯಾಚೆಲೆಟ್ ಕೋರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎಲ್ಲ 15 ಮಂದಿ ಪ್ರಗತಿಪರ ಚಿಂತಕರು ಮತ್ತು ಮಾನವ ಹಕ್ಕುಗಳ ಹೋರಾಟಗಾರರನ್ನು ಪೂರ್ವ ವಿಚಾರಣೆಯ ಬಂಧನದಿಂದ ಬಿಡುಗಡೆ ಮಾಡಬೇಕೆಂದು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ವ್ಯವಸ್ಥೆಯ ಲೋಪದೋಷಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಪ್ರವೃತ್ತಿಗಳನ್ನು ವಿಶ್ಲೇಷಿಸುವ ಮತ್ತು ವಿರೋಧಿಸುವ ಪ್ರಜ್ಞಾವಂತರ ವಿರುದ್ಧ ದೇಶದ್ರೋಹ ಕಾಯ್ದೆಯನ್ವಯ ಸುಳ್ಳು ಕೇಸುಗಳನ್ನು ದಾಖಲಿಸಿ ಸೆರೆಮನೆಗೆ ದಬ್ಬುವುದು ಸಾಮಾನ್ಯವಾಗಿದೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮತ್ತು ನಾಗರೀಕರಿಗೆ ಸಲ್ಲಬೇಕಾದ ಹೋರಾಟದ ಅವಕಾಶಗಳನ್ನು ಕುಗ್ಗಿಸುವುದು ಭಾರತದ ಪ್ರಜಾಸತ್ತೆಗೆ ಮಾರಕಪ್ರಾಯವಾಗಿದೆ. ಇಡೀ ವಿಶ್ವ ಭಾರತದಲ್ಲಿ ಕೋವಿಡ್-19 ಸಂಕಷ್ಟದ ಬೇಜವಾಬ್ದಾರಿಯುತ ನಿರ್ವಹಣೆ, ಲಕ್ಷಾಂತರ ವಲಸೆಗಾರರ ಗೋಳು, ವೈದ್ಯಕೀಯ ಸೌಲಭ್ಯವಿಲ್ಲದೆ ಅಮಾಯಕರ ಸಾವು, ಹಸಿವು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಹೆಚ್ಚುತ್ತಿರುವ ಬೆಲೆ ಏರಿಕೆ ಮತ್ತು ಶ್ರೀಸಾಮಾನ್ಯರ ಸಂಕಷ್ಟಗಳನ್ನು ಗಂಭೀರವಾಗಿ ಗಮನಿಸುತ್ತಿದೆ. ಮಾನವ ಹಕ್ಕುಗಳಿಗಾಗಿ ಬದುಕಿನುದ್ದಕ್ಕೂ ಹೋರಾಡುವ ಫಾದರ್ ಸ್ಟ್ಯಾನ್‌ಸ್ವಾಮಿ ಅಂಥವರಿಗೆ ಭಾರತದಲ್ಲಿ ಲಭಿಸುತ್ತಿರುವ ಸಾವು-ನೋವು ಭಾರತ ಗಣತಂತ್ರದ ಘನತೆಯನ್ನು ತಗ್ಗಿಸಿದೆ. ಮತ್ತೊಂದು ಅಹಿಂಸಾತ್ಮಕ ಹಾಗೂ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರಜ್ಞಾವಂತ ಭಾರತೀಯರು ಸಜ್ಜುಗೊಳ್ಳಬೇಕಾಗಿದೆ.

  • ಡಾ.ಬಿ.ಪಿ.ಮಹೇಶ ಚಂದ್ರ ಗುರು

(ಲೇಖಕರು ವಿಶ್ರಾಂತ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಮೈಸೂರು ವಿಶ್ವವಿದ್ಯಾಲಯ. ಅಭಿಪ್ರಾಯಗಳು ಲೇಖಕರವು)


ಇದನ್ನೂ ಓದಿ: ಬಹುಜನ ಭಾರತ; ಸ್ಟ್ಯಾನ್ ಸ್ವಾಮಿಯವರ ಬಲಿ ಪಡೆದದ್ದು ಬಲಪಂಥೀಯ ಸೈದ್ಧಾಂತಿಕ ದ್ವೇಷ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...