Homeಮುಖಪುಟಆಲ್ಬರ್ಟ್ ಐನ್‌ಸ್ಟೈನ್‌ರಿಗೆ ಸಂದ ನೊಬೆಲ್‌ಗೆ ನೂರು ವರ್ಷ - ಇದು 'ಆಲ್ಬರ್ಟನ ಪ್ರಪಂಚ'!

ಆಲ್ಬರ್ಟ್ ಐನ್‌ಸ್ಟೈನ್‌ರಿಗೆ ಸಂದ ನೊಬೆಲ್‌ಗೆ ನೂರು ವರ್ಷ – ಇದು ‘ಆಲ್ಬರ್ಟನ ಪ್ರಪಂಚ’!

- Advertisement -

ಆಲ್ಬರ್ಟ್ ಐನ್‌ಸ್ಟೈನ್‌ರಿಗೆ 1921ರಲ್ಲಿ ನೊಬೆಲ್ ಪ್ರಶಸ್ತಿ ಬಂದದ್ದರ ನೆನಪಿಗೆ ಈ ವರ್ಷ -2021, ಆ ಘಟನೆಯ ಶತಾಬ್ದಿ ಎಂದು ಆಚರಣೆ ನಡೆಯುತ್ತಿದೆ. ಇದು ಸ್ವಲ್ಪ ತಮಾಷೆಯ ವಿಷಯ; ಏಕೆಂದರೆ ಈ ನೊಬೆಲ್ ಪ್ರಶಸ್ತಿ ಅವರ ಜೀವನದ ಒಂದು ಪುಟ್ಟ ಭಾಗ ಮಾತ್ರ. ಕ್ರಾಂತಿಕಾರಿಯಾದ ಐದು ಸಂಶೋಧನಾ ಲೇಖನಗಳನ್ನು ಬರೆದು, ಅವರು ವೈಜ್ಞಾನಿಕ ಜಗತ್ತಿನಲ್ಲಿ ತಟಕ್ಕನೆ ಆಕಾಶದಲ್ಲಿ ಬಂದ ತಾರೆಯಂತೆ ಪ್ರಕಾಶಿಸಲು ಪ್ರಾರಂಭಿಸಿದ್ದು 1905ರಲ್ಲಿ; ಇದರ ನಂತರ ಅವರ ಹೊಸ ಸಿದ್ಧಾಂತಕ್ಕೆ ಕೆಲವು ಪುರಾವೆಗಳು ಸಿಕ್ಕಿ ಇಡೀ ಜಗತ್ತಿಗೆ ಅವರ ಅಮೋಘ ವ್ಯಕ್ತಿತ್ವ ಪರಿಚಯವಾದದ್ದು 1919ರಲ್ಲಿ. ಇದಲ್ಲದೆ ಅವರ ಇತರ ಸಂಶೋಧನೆಗಳನ್ನೂ ಸೇರಿಸಿದರೆ, ಹಲವಾರು ವಿಜ್ಞಾನಿಗಳು ಹೇಳಿರುವ ಹಾಗೆ, ಅವರಿಗೆ ಕನಿಷ್ಟ ಏಳು ನೊಬೆಲ್ ಪ್ರಶಸ್ತಿಗಳಾದರೂ ಬರಬೇಕಿತ್ತು! ಇದು ಅವರ ಜೀವನ ಮತ್ತು ವಿಜ್ಞಾನದತ್ತ ಒಂದು ಪುಟ್ಟ ನೋಟ.

ವಿಜ್ಞಾನ

20ನೆಯ ಶತಮಾನದ ಆದಿಯಲ್ಲಿ ವಿಜ್ಞಾನ ಒಂದು ರೀತಿಯ ನಿಂತ ನೀರಾಗಿತ್ತು. ಪರಮಾಣುವಿನ ಗುಣಗಳೆಲ್ಲಾ ತಿಳಿದಿದೆ ಎಂದು ರಸಾಯನ ವಿಜ್ಞಾನಿಗಳೂ, ಗುರುತ್ವ, ಬೆಳಕು, ವಿದ್ಯುತ್ ಶಕ್ತಿ ಇತ್ಯಾದಿ ವಿಷಯಗಳೆಲ್ಲಾ ಚೆನ್ನಾಗಿ ಅರ್ಥವಾಗಿವೆ ಎಂದು ಭೌತ ವಿಜ್ಞಾನಿಗಳೂ ತೃಪ್ತಿಯಿಂದ ಇದ್ದರು. ಆದರೆ ಪರಮಾಣು ಏನು ಎನ್ನುವುದು
ಯಾರಿಗೂ ತಿಳಿದಿರಲಿಲ್ಲ. ಭೌತವಿಜ್ಞಾನದಲ್ಲಿ ನಡೆದ ಹಲವಾರು ಪ್ರಯೋಗಗಳ ಪರಿಣಾಮಗಳು
ಅರ್ಥವಾಗಿರಲಿಲ್ಲವಾದರೂ ಇಂದಲ್ಲ ನಾಳೆ ಗೊತ್ತಾಗುತ್ತದೆ ಎನ್ನುವ ಧೋರಣೆ ಇದ್ದಿತು. ಕ್ರಮೇಣ ಅವು ಅರ್ಥವಾದವು ಎನ್ನುವುದು ನಿಜ. ಆದರೆ ಹಾಗಾಗಲು ಹಳೆಯ ಪರಿಕಲ್ಪನೆಗಳೆಲ್ಲಾ ಪರಿವರ್ತನೆಯಾಗಿ ಒಂದು ಕ್ರಾಂತಿಯಾಗಬೇಕಾಗುತ್ತದೆ ಎಂಬುದನ್ನು ಅಂದಿನ ವಿಜ್ಞಾನಿಗಳು ಗುರುತಿಸಲಿಲ್ಲ. ಆ ಕ್ರಾಂತಿಯ ಹರಿಕಾರರೇ ಮ್ಯಾಕ್ಸ್ ಪ್ಲಾಂಕ್, ಆಲ್ಬರ್ಟ ಐನ್‌ಸ್ಟೈನ್, ನೀಲ್ಸ್ ಬೋರ್ ಇತ್ಯಾದಿ ಮಹಾವಿಜ್ಞಾನಿಗಳು.

ಆಗ ಅರ್ಥವಾಗದಿದ್ದ ಭೌತವಿಜ್ಞಾನದ ಒಂದು ಪ್ರಯೋಗದ ಹೆಸರು ದ್ಯುತಿವಿದ್ಯುತ್ (ಫೋಟೋ ಎಲೆಕ್ಟ್ರಿಕ್ ಎಫೆಕ್ಟ್ಟ್) ಪರಿಣಾಮ. ಇದರಲ್ಲಿ, ಬೆಳಕು ಲೋಹಗಳ ಮೇಲೆ ಬಿದ್ದಾಗ ಎಲೆಕ್ಟ್ರಾನ್ ಎಂಬ ಕಣಗಳು ಹೊರಬರುತ್ತಿದ್ದವು. ಇದರಲ್ಲಿ ಮುಖ್ಯ ಸೋಜಿಗವೆಂದರೆ ಹಲವು ಬಣ್ಣಗಳ ಬೆಳಕಿಗೆ ಮಾತ್ರ ಈ ಸಾಮರ್ಥ್ಯವಿದ್ದಿತು. ಉದಾ: ನೀಲಿ ಬೆಳಕಿನಿಂದ ಕಣಗಳು ಹುಟ್ಟುತ್ತಿದ್ದವು, ಆದರೆ ಕೆಂಪಿನಿಂದಲ್ಲ! ಬೆಳಕು ಅಲೆಗಳ ರೂಪದಲ್ಲಿ ಚಲಿಸುತ್ತದೆ ಎಂಬುದು ಅಂದಿನ ಸಿದ್ಧಾಂತವಾಗಿದ್ದು, ಇದರಲ್ಲಿ ತರಂಗಾಂತರ (ಎರಡು ಅಲೆಗಳ ಮಧ್ಯದ ದೂರ) ಬೆಳಕಿನ ಮುಖ್ಯ ಗುಣವೆಂದು ಪರಿಗಣಿಸಲಾಗಿತ್ತು; ನೀಲಿ ಬಣ್ಣದ ಬೆಳಕಿನ ತರಂಗಾತರ (450-495 ನ್ಯಾನೊಮೀಟರು) ಕೆಂಪಿನದ್ದಕ್ಕಿಂತ (620-750 ನ್ಯಾ.ಮೀ) ಕಡಿಮೆ. (ನ್ಯಾ.ಮೀ= ಮೀಟರಿನ ಒಂದು ಬಿಲಿಯದಷ್ಟು). ಆದರೆ ಈ ವ್ಯತ್ಯಾಸಕ್ಕೂ ಕಣಗಳನ್ನು ಹೊರತರುವ ಸಾಮರ್ಥ್ಯಕ್ಕೂ ಏನು ಸಂಬಂಧ?

1900ರಲ್ಲಿ ತಮಗೇ ಗೊತ್ತಿಲ್ಲದಂತೆ ಜರ್ಮನಿಯ ಮಹಾ ವಿಜ್ಞಾನಿಯೊಬ್ಬರು ಭೌತವಿಜ್ಞಾನದಲ್ಲಿ ಕ್ರಾಂತಿಯನ್ನು ಪ್ರಾರಂಭಿಸಿದ್ದರು. ಶಕ್ತಿ ಸತತವಾಗಿ ಪ್ರವಹಿಸುವುದಿಲ್ಲ, ಬಿಡಿ ಬಿಡಿ ತುಣುಕು ರೂಪದಲ್ಲಿ ಚಲಿಸುತ್ತದೆ ಎಂದೂ ಮತ್ತು ಅಂತಹ ತುಣುಕಿಗೆ ಕ್ವಾಂಟಮ್ ಎಂದು ಹೆಸರಿಟ್ಟು ಕ್ವಾಂಟಮ್ ಕ್ರಾಂತಿಗೆ ಬುನಾದಿ ಹಾಕಿದರು. ಐನ್‌ಸ್ಟೈನ್, ಮ್ಯಾಕ್ಸ್ ಪ್ಲಾಂಕರ ಈ ಸಿದ್ಧಾಂತವನ್ನು ಬೆಳಕಿನ ವಿವರಣೆಗೆ ಬಳಸಿಕೊಂಡರು. ಬೆಳಕು ಬಹಳ ಪುಟ್ಟ ಬಿಂದು ಸ್ವರೂಪದ ಕಣಗಳಂತೆ ಚಲಿಸುತ್ತದೆ ಎಂದು ಮಂಡಿಸಿದರು. ಅವಕ್ಕೆ ಮಂದೆ ಫೋಟಾನ್ ಎಂಬ ಹೆಸರು ಬಂದಿತು. ಬೆಳಕಿನ ಕಣದ ಶಕ್ತಿ ಅದರ ಆವರ್ತವನ್ನು (1/ತರಂಗಾಂತರ) ಅವಲಂಬಿಸುತ್ತದೆ; ಆವರ್ತ ಹೆಚ್ಚಿದ್ದಷ್ಟೂ (ತರಂಗಾಂತರ ಕಡಿಮೆ ಇದ್ದಷ್ಟೂ) ಶಕ್ತಿ ಹೆಚ್ಚು. ಆದ್ದರಿಂದ ನೀಲಿ ಬೆಳಕು ಕೆಂಪು ಬೆಳಕಿಗಿಂತ ಹೆಚ್ಚು ಶಕ್ತಿಯನ್ನು ಹೊಂದಿದ್ದು ಅದು ಲೋಹಗಳಿಂದ ಎಲೆಕ್ಟ್ರಾನ್ ಕಣಗಳನ್ನು ಹೊರತರಬಲ್ಲದು! ಹೀಗೆ ಐನ್‌ಸ್ಟೈನ್ ದ್ಯುತಿವಿದ್ಯುತ್ ಪರಿಣಾಮವನ್ನು ವಿವರಿಸಿದ್ದು. ಇದೇ ಅವರಿಗೆ 1921ರಲ್ಲಿ ನೊಬೆಲ್ ಪ್ರಶಸ್ತಿಯನ್ನು ದೊರಕಿಸಿತು. ಹೀಗೆ ಮ್ಯಾಕ್ಸ್ ಪ್ಲಾಂಕ್, ಆಲ್ಬರ್ಟ್ ಐನ್‌ಸ್ಟೈನ್ ಮತ್ತು ಮುಂದೆ ನೀಲ್ಸ್ ಬೋರ್ ಕ್ವಾಂಟಮ್ ಸಿದ್ಧಾಂತದ ಹರಿಕಾರರಾದರು.

1905ರಲ್ಲಿ ಅವರು ಹೊರತಂದ ಇತರ ಸಂಶೋಧನಾ ಲೇಖನಗಳೂ ಅಷ್ಟೇ ಅಥವಾ ಇನ್ನೂ ಹೆಚ್ಚು ಪ್ರಾಮುಖ್ಯತೆ ಗಳಿಸಿವೆ. ಇವುಗಳಲ್ಲಿ ಒಂದಾದ ವಿಶೇಷ ಸಾಪೇಕ್ಷ ಸಿದ್ಧಾಂತದಲ್ಲಿ (ಸ್ಪೆಷಲ್ ಥಿಯರಿ ಅಫ್ ರಿಲೆಟಿವಿಟಿ) ಅವರು ಬೆಳಕಿನ ಬಗ್ಗೆ ಇನ್ನೊಂದು ಮಹಾ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. ಅದರ ಪ್ರಕಾರ ಬೆಳಕಿನ ವೇಗ (ಸೆಕೆಂಡಿಗೆ ~3 ಲಕ್ಷ ಕಿಮೀಗಳು) ಜಗತ್ತಿನಲ್ಲಿ ಅತಿ ಗರಿಷ್ಠ ವೇಗವೆಂದೂ ಬೇರೆ ಯಾವ ವಸ್ತುವಿಗೂ ಈ ವೆಗವನ್ನು ಗಳಿಸಲಾಗುವುದಿಲ್ಲವೆಂದೂ ಮಂಡಿಸಿದರು; ಇದಲ್ಲದೆ ಚೌಕಟ್ಟು ಯಾವುದಾದರೂ ಬೆಳಕಿನ ವೇಗ ಒಂದೇ ಎಂದೂ ಮಂಡಿಸಿದರು.

ಜಗತ್ತಿನ ವ್ಯವಹಾರಗಳೆಲ್ಲಾ ಸಾಮಾನ್ಯ ವೇಗಗಳಲ್ಲಿ ಸಾಗುತ್ತಿದ್ದು ಈ ಸಿದ್ಧಾಂತ ಅತಿಹೆಚ್ಚು ವೇಗದ ವಸ್ತುಗಳಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಆಗತಾನೇ ಹೊರಬರುತ್ತಿದ್ದ ಭೈಜಿಕ (ನ್ಯೂಕ್ಲಿಯರ್) ಮತ್ತು ಕಣ (ಪಾರ್ಟಿಕಲ್) ವಿಜ್ಞಾನಗಳ ಸರಳ ಪ್ರಯೋಗಗಳನ್ನು ಅರ್ಥಮಾಡಿಕೊಳ್ಳುವುದೂ ಐನ್‌ಸ್ಟೈನ್‌ರ ಸಿದ್ಧಾಂತಗಳಿಲ್ಲದೆ ಅಸಾಧ್ಯವಾಗುತ್ತಿತ್ತು. ಜಗತ್ತಿನ ಮಹಾ ಸಮೀಕರಣ ಎಂದು (ಕು)ಖ್ಯಾತಿ ಗಳಿಸಿರುವ ಇ=ಎಮ್ ಸಿ(ಸ್ಕ್ವೇರ್) ಅದೇ ಸಮಯದಲ್ಲಿಯೇ ಹೊರಬಂದಿತು. (ಇಲ್ಲಿ ಇ ಎಂದರೆ ಶಕ್ತಿ – ಎನರ್ಜಿ, ಎಮ್ ಎಂದರೆ ದ್ರವ್ಯರಾಶಿ – ಮ್ಯಾಟರ್ ಮತ್ತು ಸಿ ಎಂದರೆ ಬೆಳಕಿನ ವೇಗ). ಇಲ್ಲಿಯತನಕ ಶಕ್ತಿಗೂ ದ್ರವ್ಯರಾಶಿಗೂ ಯಾರೂ ಸಂಬಂಧ ತಂದಿರಲಿಲ್ಲ. ಈ ಸಮೀಕರಣ ಇಷ್ಟು ದ್ರವ್ಯರಾಶಿಯಿಂದ ಇಷ್ಟು ಶಕ್ತಿ ಪಡೆಯಬಹುದು ಎಂದು ತೋರಿಸಿತು. ರಾಶಿ ಬೇರೆಯಲ್ಲ, ಶಕ್ತಿ ಬೇರೆಯಲ್ಲ ಎಂಬ ಈ ಪರಿಕಲ್ಪನೆ ಮುಂದೆ ಬಂದ ಎಲ್ಲ ವಿಜ್ಞಾನಗಳಲ್ಲೂ ಹಾಸುಹೊಕ್ಕಾಗಿ ಸೇರಿತು.

ಮೇರು ವಿಜ್ಞಾನಿಗಳನ್ನು ಎರಡು ವಿಷಯಗಳು – ಬೆಳಕು ಮತ್ತು ಗುರುತ್ವ – ಯಾವಾಗಲೂ ಆಕರ್ಷಿಸಿವೆ. 17ನೆಯ ಶತಮಾನದಲ್ಲಿ ನ್ಯೂಟನ್ ಮಂಡಿಸಿದ್ದ ಗುರುತ್ವದ ಸಿದ್ಧಾಂತ ಅನೇಕ ವಿದ್ಯಮಾನಗಳನ್ನು ಅರ್ಥಮಾಡಿಸಿದ್ದರೂ ದೂರ ದೂರ ಇರುವ ರಾಶಿಗಳನ್ನು ಗುರುತ್ವದ ಬಲ ಹೆಗೆ ಬಂಧಿಸುತ್ತದೆ ಎಂಬುದು ಅರ್ಥವಾಗಿರಲಿಲ್ಲ.
ಇದಕ್ಕಾಗಿ ಐನ್‌ಸ್ಟೈನ್ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತವನ್ನು (ಜನರಲ್ ಥಿಯರಿ ಅಫ್ ರಿಲೆಟಿವಿಟಿ) 1915ರಲ್ಲಿ ಪ್ರತಿಪಾದಿಸಿದರು. ಮಾನವನ ಚಿಂತನಾಶಕ್ತಿ ಎಷ್ಟು ಉನ್ನತಮಟ್ಟವನ್ನು ಮುಟ್ಟಿದೆ ಎನ್ನುವುದಕ್ಕೆ ಈ ಸಿದ್ಧಾಂತ ಸೂಕ್ತ ಉದಾಹರಣೆ ಎನ್ನುತ್ತಾರೆ. 1919ರಲ್ಲಿ ಈ ಸಿದ್ಧಾಂತಕ್ಕೆ ಪುರಾವೆ ದೊರಕಿದ ನಂತರ ಐನ್‌ಸ್ಟೈನ್‌ರ ಖ್ಯಾತಿ ಎಲ್ಲೆಲ್ಲೂ ಹರಡಿ ಅವರು ಜಗತ್‌ಪ್ರಸಿದ್ಧರಾದರು. ಅಗಾಧ ದ್ರವ್ಯರಾಶಿಯ ವಸ್ತುಗಳ ಚಲನೆಯಲ್ಲಿ ವೇಗೋತ್ಕರ್ಷ ಉಂಟಾದಾಗ, ಕಂಪನ ಉಂಟಾದಾಗ, ಅದು ತರಂಗ ರೂಪದಲ್ಲಿ ಬೆಳಕಿನ ವೇಗದಲ್ಲಿ ಎಲ್ಲ ಕಡೆಯೂ ಹರಡುತ್ತದೆ. ಈ ಕಂಪನವನ್ನು (ಗ್ರಾವಿಟೇಷನಲ್ ವೇವ್ಸ್) ಕಳೆದ ದಶಕದಲ್ಲಿ ಮೊದಲ ಬಾರಿಗೆ ಪ್ರಯೋಗಶಾಲೆಯಲ್ಲಿ ಕಂಡುಹಿಡಿದಾಗ ಈ ಸಿದ್ಧಾಂತಕ್ಕೆ ಮತ್ತೂ ಪುರಾವೆ ಸಿಕ್ಕಿತು

ಐನ್‌ಸ್ಟೈನ್ ಅವರ ಸಂಶೋಧನೆಗಳು ಆಧುನಿಕ ಜೀವನವನ್ನು ವಿವಿಧ ರೀತಿಯಲ್ಲಿ ಮುಟ್ಟಿವೆ. ನೇರ ಉದಾಹರಣೆಗಳು ಲೇಸರ್, ಜಿ.ಪಿ.ಎಸ್, ಸೌರ ಸೆಲ್, ಎಲೆಕ್ಟ್ರಾನಿಕ್ ಮೈಕ್ರೊ ಚಿಪ್ ಇತ್ಯಾದಿ. ಕ್ವಾಂಟಮ್ ಸಿದ್ಧಾಂತ ಮತ್ತು ಸಾಪೇಕ್ಷ ಸಿದ್ಧಾಂತ ಕಳೆದ ಶತಮಾನದ ಅನೇಕ ಆವಿಷ್ಕಾರಗಳಿಗೆ ಪರೋಕ್ಷವಾಗಿ ಕಾರಣವಾಗಿವೆ. 1905ರಲ್ಲಿ ಅವರು ಪರಮಾಣುಗಳ ಬಗ್ಗೆ ಪ್ರಕಟಿಸಿದ ‘ಬ್ರೌನಿಯನ್ ಚಲನ’ ಲೇಖನದಿಂದ ಸ್ಟಾಕ್ ಮಾರ್ಕೆಟ್‌ನಲ್ಲಾಗುವ ಷೇರುಗಳ ಏರುಪೇರುಗಳ ಬಗ್ಗೆ ತಿಳಿಯಬಹುದಂತೆ! ಯಾರೋ ಹೇಳಿದಂತೆ ಇದು ‘ಆಲ್ಬರ್ಟನ ಪ್ರಪಂಚ’!

ಜೀವನ

ಈ ಸಿದ್ಧಾಂತಗಳನ್ನೆಲ್ಲಾ ಮಂಡಿಸಿದ ಐನ್‌ಸ್ಟೈನ್ ಹುಟ್ಟಿದ್ದು 1919ರಲ್ಲಿ ಜರ್ಮನಿಯ ಉಲ್ಮ್ ಎಂಬ ಊರಿನಲ್ಲಿ. ಮಧ್ಯದರ್ಜೆಯ ಯಹೂದಿ (ಜ್ಯೂ) ವ್ಯಾಪಾರಿ ಮನೆತನದಲ್ಲಿ. 3 ವರ್ಷದವರೆವಿಗೂ ಮಾತೇ ಆಡದೆ ನಂತರವೂ ಏಕಾಂಗಿಯಾಗಿ ಬೆಳೆದ ಬಾಲಕ ಅವರು. ಮ್ಯುನಿಕ್ ನಗರಕ್ಕೆ ಕುಟುಂಬ ವರ್ಗಾವಣೆಯಾದ ನಂತರ ಅಲ್ಲಿಯ ಶಾಲೆಗಳಿಗೆ ಹೋಗಲಾರಂಭಿಸಿದ. ಅಲ್ಲಿಯೂ ಗಣಿತ ಬಿಟ್ಟು ಬೇರೆ ವಿಷಯಗಳಿಗೆ ಗಮನ ಕೊಡಲಿಲ್ಲ. ಹಾಗೆಯೇ ವಯಲಿನ್ ನುಡಿಸಲೂ ಕಲಿತುಕೊಂಡ. ಕಾಲೇಜಿನಲ್ಲಿ ತನಗೆ ಎಲ್ಲಾ ಗೊತ್ತು ಎನ್ನುವ ಮನೋಭಾವವನ್ನು ಪ್ರದರ್ಶಿಸಿ ಅಧ್ಯಾಪಕರಿಂದ ಬೈಗುಳಗಳನ್ನೂ ಪಡೆದಿದ್ದ. ಇದೇ ಸಮಯದಲ್ಲಿ ಜರ್ಮನ್ನರ ರೀತಿನೀತಿಗಳು ಇಷ್ಟವಾಗದೆ ಸ್ವಿಡ್ಜರ್ಲೆಂಡಿನ ನಾಗರಿಕನಾದ.

ವಿಶ್ವವಿದ್ಯಾಲಯ ಸೇರಿದ ಮೇಲೆ ಸರ್ಬಿಯದ ಮಿಲೇವಾ ಎಂಬ ಸಹಪಾಠಿಯೊಬ್ಬಳು ಗೆಳತಿಯಾದಳು, ಅನಂತರ ಪ್ರೇಮಿಯೂ ಆದಳು. ಮನೆಯವರ ಇಷ್ಟಗಳಿಗೆ ವಿರುದ್ಧವಾಗಿ ಆಕೆಯನ್ನು ಮದುವೆಯೂ ಆಗಿ, ಕೆಲಸಕ್ಕಾಗಿ ಹುಡುಕುತ್ತಿದ್ದಾಗ ಸಿಡ್ಜರ್ಲೆಂಡಿನ ಬರ್ನ್ ನಗರದ ಹಕ್ಕುಪತ್ರ ಕಚೇರಿಯಲ್ಲಿ ಗುಮಾಸ್ತ ಮಟ್ಟದ ಕೆಲಸ ಸಿಕ್ಕಿತು. ಇದು ಅವರ ಹೊರಜೀವನ. ಆದರೆ ಒಳಗೆ?

ಭೌತವಿಜ್ಞಾನದ ಕ್ರಾಂತಿಕಾರಿ ಯೋಜನೆಗಳೆಲ್ಲ ಅವರೊಳಗೆ ಹುದುಗಿದ್ದು 1905ರಲ್ಲಿ ಹೊರಬರಲಿದ್ದವು. ಇವುಗಳ ಮಹತ್ವವನ್ನು ವಿಜ್ಞಾನ ಲೋಕ ಕೆಲವೇ ವರ್ಷಗಳಲ್ಲಿ ಗ್ರಹಿಸಿ ಅವರಿಗೆ ಪ್ರಾಧ್ಯಾಪಕ ಪದವಿ ದೊರಕಿತು. 1914ರಲ್ಲಿ ಬರ್ಲಿನ್‌ಗೆ ಹೋದ ನಂತರ ಐನ್‌ಸ್ಟೈನ್ ದಂಪತಿಗಳ ವಿರಸ ಹೆಚ್ಚಾಗುತ್ತ ಹೋಗಿ ಪತ್ನಿ ಮಿಲೇವಾ ಮಕ್ಕಳೊಂದಿಗೆ (ಹಾನ್ಸ್ ಮತ್ತು ಎಡ್ವರ್ಡ್) ಜ್ಯೂರಿಕ್‌ಗೆ ವಾಪಸ್ಸುಹೋಗಿ ಅಲ್ಲಿ ನೆಲಸಿಬಿಟ್ಟರು; ಅನಂತರ 1919ರಲ್ಲಿ ಅವರ ವಿವಾಹ ವಿಚ್ಛೇದನವಾಯಿತು. ಇದಾದನಂತರ ಬಹಳ ವರ್ಷಗಳಿಂದ ಗೆಳತಿಯಾಗಿದ್ದ ಸೋದರ ಸಂಬಂಧಿ ಎಲ್ಸಾಳನ್ನು ವಿವಾಹವಾದರು. ಹಿಟ್ಲರನ ಕಿರುಕುಳಗಳಿಂದಾಗಿ ಅವರು 1932ರಲ್ಲಿ ಜರ್ಮನಿ ಬಿಟ್ಟು ಅಮೆರಿಕಕ್ಕೆ ಹೊರಟುಹೋದರು.

ಅಮೆರಿಕದಲ್ಲಿ ಅವರು ಪ್ರಿನ್‌ಸ್ಟನ್ ವಿಶ್ವವಿದ್ಯಾಲಯದ ಊರಿನಲ್ಲಿ ನೆಲಸಿದರು. ಅವರ ಪತ್ನಿ ಎಲ್ಸಾ 1933ರಲ್ಲಿ ನಿಧನ ಹೊಂದಿದರು. ಕರಳು ಬೇನೆಯಿಂದ ನರಳುತ್ತಿದ್ದು, ಎರಡು ದಶಕಗಳ ನಂತರ ಆಲ್ಬರ್ಟ್ ಐನ್‌ಸ್ಟೈನ್ 1955ರ ಏಪ್ರಿಲ್ 18ರಂದು ನಿಧನರಾದರು. ಅವರ ಮೆದುಳನ್ನು ಆನಂತರ ಪರೀಕ್ಷಿಸಿದಾಗ ಬೇರೆಯ ಮೆದುಳುಗಳಿಗೆ ಹೋಲಿಸಿದರೆ ಮಹತ್ವದ ವ್ಯತ್ಯಾಸವೇನೂ ಕಂಡುಬರಲಿಲ್ಲ!

ಮಹಾನ್ ಮಾನವತಾವಾದಿ

ಆಲ್ಬರ್ಟ ಐನ್‌ಸ್ಟೈನ್ ವಿಜ್ಞಾನಿ ಮಾತ್ರವಾಗಿದ್ದಲ್ಲಿ ಅವರು ಇಷ್ಟು ಖ್ಯಾತಿ ಗಳಿಸುತ್ತಿರಲಿಲ್ಲ. ಅವರಷ್ಟೇ ಅಥವಾ (ಕೆಲವರ ಪ್ರಕಾರ) ಅವರಿಗಿಂತ ಹೆಚ್ಚು ಖ್ಯಾತಿವಂತರು ಎಂದು ಕರೆಯಬಹುದಾದ 17/18ನೆಯ ಶತಮಾನದ ಐಸಾಕ್ ನ್ಯೂಟನ್ ಅಂದಿನ ಸಮಾಜದ ಮೇಲೆ ಬೇರೆಯ ರೀತಿಯ ಯಾವ ಪ್ರಭಾವವನ್ನೂ ಬೀರಲಿಲ್ಲ. ಕಳೆದ ಶತಮಾನದಲ್ಲೂ ಅನೇಕ ಮೇರು ವಿಜ್ಞಾನಿಗಳಿದ್ದರೂ ಅವರು ಯಾರೂ ಐನ್‌ಸ್ಟೈನರ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಹೊಂದಿರಲಿಲ್ಲ.

ಬಾಲ್ಯದಿಂದಲೇ ಐನ್‌ಸ್ಟೈನ್‌ರಿಗೆ ಅತೀವ ಶಿಸ್ತು ಮತ್ತು ಮಿಲಿಟರಿ ಮನೋಭಾವ ಇಷ್ಟವಾಗಿರಲಿಲ್ಲ. ಇದೇ ಕಾರಣಕ್ಕೆ ಯುವಕನಾಗಿದ್ದಾಗಲೇ ಅವರು ಜರ್ಮನ್ ನಾಗರಿಕತ್ವವನ್ನು ತ್ಯಜಿಸಿದ್ದರು. ನಂತರ ತಮ್ಮ ವಿಜ್ಞಾನಕ್ಕೆ ನೆರವಾಗಬಹುದೆಂಬ ಕಾರಣಕ್ಕೆ ಜರ್ಮನಿಗೆ ವಾಪಸ್ಸುಬಂದು ಅಲ್ಲೇ ಕೆಲಸ ತೆಗೆದುಕೊಂಡಿದ್ದರು. 1914ರಲ್ಲಿ ಮೊದಲನೆಯ ಮಹಾಯುದ್ಧ ಶುರುವಾದಾಗ ಜರ್ಮನಿಗೆ ಬೆಂಬಲ ಸೂಚಿಸಿ ಹಲವಾರು ವಿಜ್ಞಾನಿಗಳು ಸಹಿ ಮಾಡಿದ್ದರೂ ಇವರು ಅದಕ್ಕೆ ಒಪ್ಪಿಗೆ ಕೊಡದೆ ತಾವೇ ಯುದ್ಧದ ವಿರುದ್ಧ ಪ್ರಚಾರ ಮಾಡತೊಡಗಿದರು. ಹಾಗೇ ನಿಧಾನವಾಗಿ ಅವರ ಶಾಂತಿಪ್ರಿಯತೆ ಹೆಚ್ಚಾಗುತ್ತಾ ಹೋಯಿತು.

ಶತಮಾನಗಳಿಂದ ಯಹೂದಿ ಜನರ ಬಗ್ಗೆ ಜರ್ಮನಿಯಲ್ಲಿ ಇದ್ದ ದ್ವೇಷ ಮತ್ತೆ ಭುಗಿಲೆದ್ದಿತು. ಆ ಸಮಯದಲ್ಲಿ ಮೇಲೆದ್ದು ಬಂದು ಜರ್ಮನಿಯ ಅಧ್ಯಕ್ಷನಾದ ಅಡಾಲ್ಫ್ ಹಿಟ್ಲರ್ ಆ ಸಮುದಾಯಕ್ಕೆ ಅತೀವ ಹಿಂಸೆಯನ್ನು ಕೊಡಲಾರಂಭಿಸಿದನು. ಅದರಲ್ಲೂ ಆ ದ್ವೇಷದಿಂದ ನೇರವಾಗಿ ಮತ್ತು ಪರೋಕ್ಷವಾಗಿ ಐನ್‌ಸ್ಟೈನ್ ಕುಟುಂಬ ಬಹಳ ತೊಂದರೆಗಳನ್ನು ಅನುಭವಿಸಬೇಕಾಗಿ ಬಂತು. ಅದರಿಂದ 1932ರ ಕೊನೆಯಲ್ಲಿ ಅವರು ಜರ್ಮನಿಯನ್ನು ತ್ಯಜಿಸಿ ಅಮೆರಿಕಕ್ಕೆ ಹೋಗಬೇಕಾಗಿಬಂದಿತು. ಹಾಗೆಯೇ ಆ ದಶಕದಲ್ಲಿ ನಿಧಾನವಾಗಿ ಅನೇಕ ಯಹೂದಿಗಳು ಶತಮಾನಗಳಿಂದ ಬಾಳಿಬದುಕಿದ್ದ ದೇಶವನ್ನು ಬಿಟ್ಟು ಬೇರೆ ದೇಶಗಳಿಗೆ ವಲಸೆ ಹೋದರು; ಐನ್‌ಸ್ಟೈನ್ ಅಂತಹವರಿಗೆಲ್ಲಾ ಸಹಾಯ ಮಾಡಿದರು. ಅವುಗಳಲ್ಲಿ ಅನೇಕ ಕಲಾವಿದರು, ವಿಜ್ಞಾನಿಗಳು ಇತರ ಬುದ್ಧಿಜೀವಿಗಳೂ ಇದ್ದರು. ಇದರಿಂದ ಪಶ್ಚಿಮ, ಅದರಲ್ಲೂ ಅಮೆರಿಕ ಬಹಳ ಲಾಭಪಡೆಯಿತು. ಇದನ್ನು ಕೆಲವರು ‘ಹಿಟ್ಲರನ ಕೊಡುಗೆ’ ಎಂದಿದ್ದರು.

ಐನ್‌ಸ್ಟೈನ್ ಅಮೆರಿಕಕ್ಕೆ ಹೋದ ನಂತರ ಅಲ್ಲಿಯ ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಹೆಚ್ಚು ಆಸಕ್ತಿ ತಳೆದರು. ಅಲ್ಲಿ ಕಪ್ಪು ಜನರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಯನ್ನು ಖಂಡಿಸುತ್ತಾ ಅವರ ಏಳಿಗೆಗಾಗಿ ಕೈಗೊಂಡ ಹಲವಾರು ಯೋಜನೆಗಳಿಗೆ ಸಹಾಯ ಮಾಡುತ್ದಿದ್ದರು. ಅವರನ್ನು ಸಂಧಿಸಿ ವಿಚಾರವಿನಿಮಯ ಮಾಡಿಕೊಳ್ಳುತ್ತಿದ್ದರು. ಒಂದು ಪುಟ್ಟ ಉದಾಹರಣೆ: ಒಬ್ಬ ಖ್ಯಾತ ಕಪ್ಪು ಸಂಗೀತ ವಿದುಷಿ ಪ್ರಿನ್ಸ್ಟನ್ ಊರಿಗೆ ಬಂದಾಗ ಅವರಿಗೆ ಯಾವ ಹೊಟೇಲಿನವರು ಜಾಗ ಕೊಡಲಿಲ್ಲವಂತೆ; ಅಗ ಐನ್‌ಸ್ಟೈನ್ ಅವರನ್ನು ತಮ್ಮ ಮನೆಯಲ್ಲಿಯೇ ಅತಿಥಿಯಾಗಿ ಇರಿಸಿಕೊಂಡರಂತೆ. 1950ರ ಸಮಯದಲ್ಲಿ ಅಮೆರಿಕದಲ್ಲಿ ಕಮ್ಯುನಿಸ್ಟರ ಬಗ್ಗೆ ಅಪಾರ ಭಯ ಮತ್ತು ದ್ವೇಷಗಳಿದ್ದವು. ಆ ಸಮಯದಲ್ಲಿ ಆ ನಂಬಿಕೆಗಳನ್ನು ಹೊಂದಿದ್ದವರನ್ನೆಲ್ಲ ವಿಚಾರಣೆಮಾಡಿ ಕಿರುಕುಳ ಕೊಡುತ್ತಿದ್ದರು. ಆಗ ಐನ್‌ಸ್ಟೈನರು ಧೈರ್ಯದಿಂದ ಅಂತಹವರ ಪರ ನಿಂತು ಹೋರಾಡಿದರು.

ವಿಶ್ವ ಶಾಂತಿ ಅವರಿಗೆ ಬಹಳ ಮುಖ್ಯವಾಗಿತ್ತು. ಅವರ ಖ್ಯಾತ ಸಮೀಕರಣದಿಂದ ರಾಶಿಯನ್ನು ಶಕ್ತಿಗೆ ಪರಿವರ್ತಿಸಬಹುದು ಎಂದು ತೋರಿಸಿದ್ದರಲ್ಲವೇ? 1930ರ ದಶಕದಲ್ಲಿ ಪರಮಾಣುವಿನಲ್ಲಿನ ಪ್ರಕ್ರಿಯೆಗಳಿಂದ (ಭೈಜಿಕ ವಿದಳನ -ಫಿಷನ್) ಅಗಾಧಶಕ್ತಿಯನ್ನು ಉತ್ಪತ್ತಿಮಾಡಬಹುದು ಎಂದು ತಿಳಿದನಂತರ ಮಾನವ ವಿನಾಶಕಾರಿ ಬಾಂಬುಗಳನ್ನು ತಯಾರುಮಾಡಲು ಶುರುಮಾಡಿಕೊಳ್ಳುತ್ತಿದ್ದ. ಹಿಟ್ಲರನನ್ನು ಮಣಿಸಲು ಇದೊಂದೇ ದಾರಿ ಎಂದು ಐನ್‌ಸ್ಟೈನ್ ಮೊದಲು ಸ್ವಲ್ಪ ಆಸಕ್ತಿ ವಹಿಸಿದ್ದರೂ ಇದು ಬಹಳ ವಿನಾಶಕಾರಿ ಎಂದು ಬೇಗನೇ ಅರಿವಾಗಿ ಅವರು ಆ ಯೋಜನೆಯನ್ನು ವಿರೋಧಿಸತೊಡಗಿದರು. 1945ರಲ್ಲಿ ಅಮೆರಿಕ ಜಪಾನಿನ ಮೇಲೆ ಪರಮಾಣು ಬಾಂಬುಗಳನ್ನು ಹಾಕಿದನಂತರ ಐನ್‌ಸ್ಟೈನ್ ಜಗತ್ತೆಲ್ಲ ಒಟ್ಟಿಗೆ ಬಂದು ಇದನ್ನು ವಿರೋಧಿಸಬೇಕೆಂದು ಪ್ರಚಾರ ಮಾಡಲು ಪ್ರಾರಂಭಿಸಿದರು. ಈ ಉದ್ದೇಶದಿಂದಲೇ ಅನೇಕ ವಿಜ್ಞಾನಿಗಳೂ ಒಪ್ಪಿಗೆ ಸೂಚಿಸಿದ್ದ ಖ್ಯಾತ ರಸೆಲ್-ಐನ್‌ಸ್ಟೈನ್ ಮ್ಯಾನಿಫೆಸ್ಟೊಗೆ ತಮ್ಮ ನಿಧನದ ಕೆಲವೇ ಸಮಯದ ಮುಂಚೆ ಸಹಿಮಾಡಿದ್ದರು.

ಗಾಂಧೀಜಿಯವರನ್ನು ಸಂಧಿಸದಿದ್ದರೂ ಅವರ ಬಗ್ಗೆ ಐನ್‌ಸ್ಟೈನ್ ಅಪಾರ ಗೌರವವನ್ನು ಹೊಂದಿದ್ದರು; ಪ್ರಪಂಚದ ಘರ್ಷಣೆಗಳಿಗೆ ಸತ್ಯಾಗ್ರಹವೇ ಸರಿಯಾದ ವಿಧಾನವೆಂದೂ ಅವರೂ ನಂಬಿದ್ದರು. ಐನ್‌ಸ್ಟೈನ್ ರಬೀಂದ್ರನಾಥ್ ಟಾಗೋರರನ್ನು ಕೆಲವು ಬಾರಿ ಸಂಧಿಸಿದ್ದು ಈ ಇಬ್ಬರು ಬುದ್ಧಿಜೀವಿಗಳು ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಇತ್ಯಾದಿ ವಿಷಯಗಳ ಬಗ್ಗೆ ಸ್ವಾರಸ್ಯಕರ ಚರ್ಚೆಯನ್ನು ನಡೆಸಿದರು. ಜವಾಹರಲಾಲ್ ನೆಹರು ಅವರನ್ನು ಹಲವಾರು ಬಾರಿ ಸಂಪರ್ಕಿಸಿ, ಕೆಲವು ಬಾರಿ ಸಂಧಿಸಿ ವಿಶ್ವಶಾಂತಿಯ ಬಗ್ಗೆ ಚರ್ಚಿಸಿದ್ದರು ಕೂಡ.

(ಆಕರ ಗ್ರಂಥ –‘ಶತಮಾನಪುರುಷ ಐನ್‌ಸ್ಟೈನ್ – ಪಾಲಹಳ್ಳಿ ವಿಶ್ವನಾಥ್ (ಇಂಡಿಗೊ, 2016 )

ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್
ವಿಜ್ಞಾನಿ ವಿಶ್ವನಾಥ್ ಅವರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್, ಅಮೆರಿಕದ ಮೇರಿಲ್ಯಾಂಡ್ ಮತ್ತು ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿ, ಕಾಸ್ಮಿಕ್ ಕಿರಣಗಳು, ಕಣಭೌತ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಪ್ರಯೋಗಗಳನ್ನು ನಡೆಸಿದ್ದಾರೆ. ’ಕಣಕಣ ದೇವಕಣ’, ’ಶತಮಾನಪುರುಷ ಐನ್‌ಸ್ಟೈನ್’ ಮುಂತಾದ ಜನಪ್ರಿಯ ವಿಜ್ಞಾನ ಪುಸ್ತಕಗಳು, ’ಅಲ್ಪಸ್ವಲ್ಪ ವುಡ್‌ಹೌಸ್’ ಕಥಾಸಂಕಲನ, ’ಹೀಗೊಂದು ಕುಟುಂಬದ ಕಥೆ’ ಎಂಬ ತಮ್ಮ ತಂದೆ ತಾಯಿನಾಡು ರಾಮಯ್ಯನವರ ಬಗ್ಗೆ ಪುಸ್ತಕವನ್ನೂ ರಚಿಸಿದ್ದಾರೆ.


ಇದನ್ನೂ ಓದಿ: ಎಂಆರ್‌ಎನ್‌ಎ ಲಸಿಕೆಗಳು; ಸಂಶೋಧನೆ ಮತ್ತು ವಿಜ್ಞಾನ

ಪಾಲಹಳ್ಳಿ ವಿಶ್ವನಾಥ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಮಹಿಳೆಯರಿಗೆ ಕಾಂಗ್ರೆಸ್‌ ಆದ್ಯತೆ; ಉಳಿದ ಪಕ್ಷಗಳ ಕಥೆಯೇನು..?

0
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಬಿಜೆಪಿ ನೇತೃತ್ವದ ಎನ್‌ಡಿಎ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳ ನಡುವಿನ ಸ್ಪರ್ಧೆಯಾಗಿದೆ. ಮಾಯಾವತಿಯವರ ಬಿಎಸ್‌ಪಿ ಪಕ್ಷ ಈ ಬಾರಿ ಇದ್ದು ಇಲ್ಲದಂತಾಗಿದೆ. ಬಿಜೆಪಿಯ...
Wordpress Social Share Plugin powered by Ultimatelysocial