ಗಂಗಾವತಿ: ಮಾದಿಗ ಸಮುದಾಯದ ಮೇಲೆ ಹಲ್ಲೆ ಪ್ರಕರಣ- ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು ಎಂದ ಕರಿಯಪ್ಪ ಗುಡಿಮನಿ

ಕೊಪ್ಪಳದ ಗಂಗಾವತಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಕಳೆದ ವಾರ ಮಾದಿಗ ಸಮುದಾಯದ ಜನರ ಮೇಲೆ, ಕುರುಬ ಮತ್ತು ನಾಯಕ ಸಮುದಯಗಳ ಜನರು ಗುಂಪು ಕಟ್ಟಿಕೊಂಡು ಬಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು ಎಂದು ದಲಿತಪರ ಹೋರಾಟಗಾರ ಕರಿಯಪ್ಪ ಗುಡಿಮನಿ ಎಚ್ಚರಿಕೆ ನೀಡಿದ್ದಾರೆ.

ಸಿಂಗನಾಳ ಗ್ರಾಮದಲ್ಲಿ ಕಳೆದ ವಾರ ಮೊಹರಂ ಹಬ್ಬದ ದಿನವಾದ ಶುಕ್ರವಾರಂದು ಗೆಜ್ಜೆ ಕುಣಿತದ ಸಮಯದಲ್ಲಿ ಮೈಕೈ ಸ್ಪರ್ಶಿಸಿದ್ದಕ್ಕೆ ಜಗಳಗಳು ಪ್ರಾರಂಭವಾಗಿದೆ. ಇದುವೆ ದೊಡ್ಡದಾಗಿ ಶನಿವಾರ ಕೂಡಾ ಮಾದಿಗರ ಮೇಲೆ ಆಕ್ರಮಣ ನಡೆದಿದೆ. ಶುಕ್ರವಾರ ರಾತ್ರಿ 7 ಗಂಟೆಗೆ ಮಾದಿಗ ಸಮುದಾಯದವರು ಪೋಲಿಸರಿಗೆ ದೂರವಾಣಿ ಮೂಲಕ ಘಟನೆ ಬಗ್ಗೆ ತಿಳಿಸಿದ್ದರು.

ಪೊಲೀಸರಿಗೆ ದೂರು ನೀಡಿದಕ್ಕಾಗಿ ಕುರುಬ ಮತ್ತು ನಾಯಕ ಸಮುದಾಯದವರು ಮತ್ತೆ ಶನಿವಾರದಂದು ಮುಂಜಾನೆ ಗುಂಪು ಕಟ್ಟಿಕೊಂಡು ಮಾದಿಗ ಸಮುದಾಯದ ಮೇಲೆ ಆಕ್ರಮಣ ನಡೆಸಿದ್ದಾರೆ ಎನ್ನಲಾಗಿತ್ತು. ಆಕ್ರಮಣದಿಂದಾಗಿ ನಾಲ್ಕು ಯುವಕರಿಗೆ ಗಂಭೀರ ಗಾಯಗಾಳಾಗಿದ್ದು ಅವರು ಗಂಗಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ಇದನ್ನೂ ಓದಿ: ಗಂಗಾವತಿ: ಮಾದಿಗ ಸಮುದಾಯದ ಮೇಲೆ ಗುಂಪು ಕಟ್ಟಿಕೊಂಡು ಆಕ್ರಮಣ; ನಾಲ್ವರು ಆಸ್ಪತ್ರೆಗೆ ದಾಖಲು

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ್ದ ಗಂಗಾವತಿ ಗ್ರಾಮೀಣ ಪೊಲೀಸ್‌ ಠಾಣೆಯ ಪಿಎಸ್‌ಐ ದೊಡ್ಡಯ್ಯ ಮಾತನಾಡಿ, “ಘಟನೆಯಲ್ಲಿ ಒಂದು ಕಡೆಯಿಂದ 20 ಮತ್ತು ಇನ್ನೊಂದು ಕಡೆಯಿಂದ 21 ಜನರ ಮೇಲೆ ಪ್ರಕರಣ ದಾಖಲಾಗಿದೆ” ಎಂದು ಹೇಳಿದ್ದರು.

ಈ ಬಗ್ಗೆ ವಿಚಾರಣೆ ನಡೆಸಲು ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತವೇ ಸಿಂಗನಾಳ ಗ್ರಾಮಕ್ಕೆ ಭೇಟಿ ನೀಡಿತ್ತು. ಎರಡು ಸಮುದಾಯದ ಜನರ ನಡುವೆ ಶಾಮತಿಸಭೆ ನಡೆಸಲು ಪ್ರಯತ್ನಿಸಿತ್ತು. ಇಲ್ಲಿಯೂ ಮಾತಿನ ಚಕಮಕಿ ನಡೆದಿದೆ.

PC:gbnewskannada

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿರುವ ಹೋರಾಟಗಾರ ಕರಿಯಪ್ಪ ಗುಡಿಮನಿ, “ಹಲ್ಲೆಯಲ್ಲಿ ಗಾಯಗಳಾಗಿರುವುದು 8 ರಿಂದ 10 ಜನರಿಗೆ. ಆದರೆ, ಎಫ್‌ಐಆರ್‌ನಲ್ಲಿ ಸೇರಿಸಿರುವುದು ಮಾತ್ರ ಒಬ್ಬರ ಹೆಸರು ಮಾತ್ರ. ಹೀಗಾದರೆ ಅವರಿಗೆ ಪರಿಹಾರ ಹೇಗೆ ಸಿಗುತ್ತೆ…? ಅದಕ್ಕೆ ಹೆಸರು ಸೇರಿಸಲು ಒತ್ತಾಯಿಸಿದ್ದೇವೆ. ಈ ಜನರಿಗೆ ನ್ಯಾಯ ಸಿಗುವವರೆಗೆ ನಾವು ಹೋರಾಟ ಮಾಡುತ್ತೇವೆ ಅಂತ ಜಿಲ್ಲಾಧಿಕಾರಿಗೆ ಹೇಳಿದ್ದೇವೆ. ಜಿಲ್ಲಾಧಿಕಾರಿಗಳು ಗಾಯಾಳುಗಳ ಜೊತೆ ಮಾತಾಡಿಲ್ಲ. ಶಾಂತಿ ಸಭೆ ನಡೆಸುತ್ತೇವೆ ಎಂದು ಎಲ್ಲರೂ ಬಂದಿದ್ದರು. ನಾವು ಈ ಘಟನೆ ಬಗ್ಗೆ ಫ್ಯಾಕ್ಟ್ ಫೈಂಡಿಗೆ ಮಾಡುತ್ತೇವೆ” ಎಂದಿದ್ದಾರೆ.

ಮುಂದುವರೆದು… “ಕೊಪ್ಪಳ ಜಿಲ್ಲೆಯ ಅಸ್ಪೃಶ್ಯತೆ, ಜಾತಿ ವ್ಯವಸ್ಥೆಯಿಂದ ಅಮಾಯಕರ ಮೇಲೆ ಪದೇ ಪದೆ ಹಳ್ಳಿಗಳಲ್ಲಿ ಹಲ್ಲೆಗಳಾಗುತ್ತಿರುವ ಬಗ್ಗೆ ಜನ ಹೋರಾಟ ನಡೆಸಲು ನಿರ್ಧರಿಸಿದ್ದೇವೆ. ಕರ್ನಾಟಕ ಜನಶಕ್ತಿ, ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ, ಕರ್ನಾಟಕ ವಿದ್ಯಾರ್ಥಿ ಸಂಘಟನೆ, ದಲಿತ ದಮನಿರ ಒಕ್ಕೂಟದ ಜೊತೆಗೆ ಹೋರಾಟ ನಡೆಸುತ್ತೇವೆ. ಸಿಂಗನಾಳ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ” ಎಂದು ಕರಿಯಪ್ಪ ಗುಡಿಮನಿ ಹೇಳಿದ್ದಾರೆ.


1 COMMENT

  1. ಈ ಜಗಳದಲ್ಲಿ ಬಾಗಿಯಾದವರು ಎಲ್ಲರೂ ವಿದ್ಯಾವಂತರೇ.. ಉನ್ನತಸ್ಥಾನದಲ್ಲಿ ಇರುವವರೇ. ತಪ್ಪು ಮಾಡಿದಾಗ ಊರಿನ ಯುವಕರಿಗೆ ಬುದ್ದಿ ಹೇಳಬೇಕಾದವರೇ, ಊರಿನ ಹಿರಿಯರೇ ಈ ರೀತಿ ನಡೆದುಕೊಂಡಿರುವುದು ಅವರಿಗೆ ಶೋಭೆ ತರುವಂತದ್ದಲ್ಲ.

LEAVE A REPLY

Please enter your comment!
Please enter your name here