ಕೊಪ್ಪಳದ ಗಂಗಾವತಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಶನಿವಾರದಂದು ಮಾದಿಗ ಸಮುದಾಯದ ಜನರ ಮೇಲೆ, ಕುರುಬ ಮತ್ತು ನಾಯಕ ಸಮುದಯಗಳ ಜನರು ಗುಂಪು ಕಟ್ಟಿಕೊಂಡು ಬಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮೊಹರಂ ಹಬ್ಬದ ದಿನವಾದ ಶುಕ್ರವಾರಂದು ಗೆಜ್ಜೆ ಕುಣಿತದ ಸಮಯದಲ್ಲಿ ಮೈಕೈ ಸ್ಪರ್ಶಿಸಿದ್ದಕ್ಕೆ ಜಗಳಗಳು ಪ್ರಾರಂಭವಾಗಿದೆ. ಇದುವೆ ದೊಡ್ಡದಾಗಿ ಶನಿವಾರ ಕೂಡಾ ಮಾದಿಗರ ಮೇಲೆ ಆಕ್ರಮಣ ನಡೆದಿದೆ ಎಂದು ವ್ಯಕ್ತಿಯೊಬ್ಬರು ‘ನಾನುಗೌರಿ.ಕಾಂ’ಗೆ ತಿಳಿಸಿದ್ದಾರೆ.
ಮೊದಲ ಘಟನೆಯ ಬಗ್ಗೆ ಶುಕ್ರವಾರ ರಾತ್ರಿ 7 ಗಂಟೆಗೆ ಪೋಲಿಸರಿಗೆ ದೂರವಾಣಿ ಮುಖಾಂತರ ತಿಳಿಸಲಾಗಿತ್ತು ಎನ್ನಲಾಗಿದ್ದು, ಆದರೆ ಪೊಲೀಸರು ಶನಿವಾರ ಬೆಳಿಗ್ಗೆ ಎಲ್ಲಾ ಸಮುದಾಯದವರು ಸೇರಿ ಶಾಂತಿ ಸಭೆ ಮಾಡುವ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಅದಾಗ್ಯೂ ಪೊಲೀಸರಿಗೆ ದೂರಿದ್ದಕ್ಕಾಗಿ ಕುರುಬ ಮತ್ತು ನಾಯಕ ಸಮುದಾಯದವರು ಮತ್ತೆ ಶನಿವಾರದಂದು ಮುಂಜಾನೆ ಗುಂಪುಕಟ್ಟಿಕೊಂಡು ಮಾದಿಗ ಸಮುದಾಯದ ಮೇಲೆ ಆಕ್ರಮಣ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಕ್ರಮಣದಿಂದಾಗಿ ನಾಲ್ಕು ಯುವಕರಿಗೆ ಗಂಭೀರ ಗಾಯಗಾಳಾಗಿದ್ದು ಅವರು ಗಂಗಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಗುಂಪುಗಳು ಹೊಡೆದಾಡುತ್ತಿರುವ ದೃಶ್ಯಗಳು ವೈರಲ್ ಆಗಿದೆ.
ಶನಿವಾರ ನಡೆದ ಆಕ್ರಮಣದ ಬಗ್ಗೆ ದೂರು ನೀಡಲು ಅಂದು ಬೆಳಿಗ್ಗೆ ಗಂಗಾವತಿ ಗ್ರಾಮೀಣ ಠಾಣೆಗೆ ತೆರಳಿದರೂ ಮಾದಿಗ ಸಮುದಾಯದಿಂದ ದೂರು ಸ್ವೀಕರಿಸಲು ಆರಂಭದಲ್ಲಿ ಪೊಲೀಸರು ನಿರಾಕರಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರಘು ಆರೋಪಿಸಿದ್ದಾರೆ. ಇದರ ನಂತರ ಮಾದಿಗ ಸಮುದಾಯದ ಜನರು ಠಾಣೆಯ ಮುಂದೆ ಪ್ರತಿಭಟನೆಗೆ ಮುಂದಾದಾಗ ಮಧ್ಯಾಹ್ನದ ನಂತರ ಪೊಲೀಸರು ದೂರು ಸ್ವೀಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಹುಜನ ಭಾರತ; ಈ ಜಾತಿ ದಾಂಧಲೆ ತೆಂಡೂಲ್ಕರ್ ಮನೆ ಮುಂದೆ ನಡೆದಿದ್ದರೆ!
ಘಟನೆಯ ಬಗ್ಗೆಗಿನ ದೃಶ್ಯಾವಳಿಗಳು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ, ಜಾತಿ ಕಾರಣಕ್ಕೆ ಊರಿಗೆ ಬರಬಾರದು ಎಂದು ಮೇಲ್ಜಾತಿಯ ಸಮುದಾಯಗಳು ಹಲ್ಲೆ ನಡೆಸಿವೆ ಎಂದು ಮಹಿಳೆಯರು ದೂರುತ್ತಿರುವುದನ್ನು ನೋಡಬಹುದಾಗಿದೆ.
ಅಲ್ಲದೆ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿರುವ ಯುವಕರ ವಿಡಿಯೊಗಳು ಕೂಡಾ ಹರಿದಾಡುತ್ತಿದೆ. ಅದರಲ್ಲೂ ಮಹಿಳೆಯರು ತಮ್ಮ ಯುವಕರಿಗೆ ಹಲ್ಲೆಗೊಳಗಾಗಿರುವ ಘಟನೆಯನ್ನು ವಿವರಿಸುತ್ತಾರೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ದೊಡ್ಡಯ್ಯ ಮಾತನಾಡಿ, “ಘಟನೆಯಲ್ಲಿ ಒಂದು ಕಡೆಯಿಂದ 20 ಮತ್ತು ಇನ್ನೊಂದು ಕಡೆಯಿಂದ 21 ಜನರ ಮೇಲೆ ಪ್ರಕರಣ ದಾಖಲಾಗಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪರಿಶಿಷ್ಟ ಜಾತಿಯವರನ್ನು ಸಿನಿಮಾ ಉದ್ಯಮದಿಂದ ಹೊರಹಾಕಬೇಕು ಎಂದ ತಮಿಳು ನಟಿ: ಪ್ರಕರಣ ದಾಖಲು
What is the Plaplam in Gangavathi