ಭೀಮನಗೌಡ ಕಾಶಿರೆಡ್ಡಿ, ಕಂಪ್ಲಿ |
ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತಮತಿಗಳ್ ಎಂದು ಅಮೋಘ ವರ್ಷನಿಂದ ಬಣ್ಣಿಸಲ್ಪಟ್ಟ ಜನಪದವನ್ನೊಳಗೊಂಡ ಹೈದರಾಬಾದ್ ಕರ್ನಾಟಕದ ವಸ್ತುಸ್ಥಿತಿ ತಿಳಿಯಬೇಕೆಂದರೆ ನಂಜುಡಪ್ಪ ವರದಿಯತ್ತ ಒಮ್ಮೆ ಕಣ್ಣಾಡಿಸಬೇಕು. ಈ ವರದಿಯ ಪ್ರಕಾರ ಹೈ.ಕ.ದ ಒಟ್ಟು 31 ತಾಲೂಕುಗಳಲ್ಲಿ 21 ಅತ್ಯಂತ ಹಿಂದುಳಿದ, 5 ಅತಿ ಹಿಂದುಳಿದ, 2 ಹಿಂದುಳಿದ ಹಾಗು ಕೇವಲ 3 ಮುಂದುವರಿದ ತಾಲೂಕುಗಳಿವೆ. ಈ ಹಿಂದೆ ಹೈದರಾಬಾದ್ ನಿಜಾಮರ ಕಾಲದಲ್ಲಿ ಫ್ಯೂಡಲ್ ಲ್ಯಾಂಡ್ ಲಾರ್ಡ್‍ಗಳ ದಬ್ಬಾಳಿಕೆಗೊಳಗಾಗಿದ್ದ ಈ ಭಾಗದ ಜನ ಸ್ವಾತಂತ್ರ್ಯವನ್ನೂ ಒಂದು ವರ್ಷ ತಡವಾಗಿಯೇ ಪಡೆದರು.ನಂತರ1956 ರಲ್ಲಿ ಕರ್ನಾಟಕ ಏಕೀಕರಣದ ಫಲವಾಗಿ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾದರು. ಹೈ.ಕರ್ನಾಟಕದ ಆರ್ಥಿಕತೆ ಮುಖ್ಯವಾಗಿ ಕೃಷಿಯನ್ನು ಅವಲಂಬಿಸಿದೆ. ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ಮಧ್ಯದ ಫಲವತ್ತಾದ ದೋ- ಅಬ್ ಪ್ರದೇಶವನ್ನೊಳಗೊಂಡಿದ್ದರೂ ಮಳೆಯ ಕೊರತೆ, ಸತತ ಬರಗಾಲ ಹಾಗೂ ನೀರಾವರಿ ಯೋಜನೆಗಳ ಕುಂಟುವಿಕೆಯಿಂದಾಗಿ ನಿರೀಕ್ಷಿತ ಪ್ರಮಾಣದ ಕೃಷಿ ಉತ್ಪಾದನೆ ಸಾಧ್ಯವಾಗದೇ ಜನ ಪದೇಪದೇ ಮುಂಬಯಿ, ಪುಣೆ ಹಾಗೂ ಗೋವಾಗಳಿಗೆ ಗುಳೆ ಹೋಗುವಂತಾಗಿದೆ.ಬ್ರಿಟಿಷ್ ಆಳ್ವಿಕೆಯಲ್ಲಿ ಪ್ರಾರಂಭವಾದ ತುಂಗಭದ್ರಾ ಆಣೆಕಟ್ಟು ಹೊರತುಪಡಿಸಿದರೆ ಸ್ವಾತಂತ್ರ್ಯ ಬಂದ ಐದು ದಶಕಗಳಲ್ಲಿ ಒಂದೇ ಒಂದು ನೀರಾವರಿ ಯೋಜನೆಯೂ ಅನುಷ್ಠಾನಕ್ಕೆ ಬರಲಿಲ್ಲ. ಆದರೆ ಹಳೇ ಮೈಸೂರು ಭಾಗದಲ್ಲಿ ಕಬಿನಿ,ಹೇಮಾವತಿಯಂಥಾ ಹಲವಾರು ನೀರಾವರಿ ಯೋಜನೆಗಳು ಯಶಸ್ವಿಯಾಗಿ ಜಾರಿಗೆ ಬಂದವು.ಕಳೆದೆರಡು ದಶಕಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಅಲ್ಪ ಸ್ವಲ್ಪ ಅನುಷ್ಠಾನದಿಂದಾಗಿ ಐದಾರು ತಾಲ್ಲೂಕಿನ ರೈತರು ಇತ್ತೀಚೆಗೆ ನೀರಾವರಿಯ ರುಚಿ ನೋಡುತ್ತಿದ್ದಾರೆ.
ಇನ್ನು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದು , ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಸರ್ಕಾರ ನಿರಾಸಕ್ತಿ ತೋರಿದ ಕಾರಣ ಈ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣಕ್ಕಾಗಿ ಹೈದರಾಬಾದ್, ಧಾರವಾಡ, ಬೆಳಗಾವಿ ಹಾಗೂ ಬೆಂಗಳೂರಿಗೆ ಹೋಗುವ ಪರಿಸ್ಥಿತಿ ಇತ್ತೀಚಿನವರೆಗೂ ಇತ್ತು.
ರಾಜಕೀಯವಾಗಿ ಹೇಳುವುದಾದರೆ ವೀರೇಂದ್ರ ಪಾಟೀಲ್ ಹಾಗೂ ಧರಂಸಿಂಗ್ ಈ ಭಾಗದಿಂದ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿಯೂ ಸಹ ಇಲ್ಲಿನ ಜನ ಪ್ರತಿನಿಧಿಗಳ ಇಚ್ಛಾಶಕ್ತಿ ಮತ್ತು ಬದ್ಧತೆಯ ಕೊರತೆಯಿಂದಾಗಿ ಯಾವುದೇ ಮಹತ್ವದ ಯೋಜನೆಗಳನ್ನು ರೂಪಿಸಲಾಗಲಿಲ್ಲ.
ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂಬ ನಾಮಕಾವಸ್ಥೆ ಸಂಸ್ಥೆಯನ್ನು ಸ್ಥಾಪಿಸಿದರೂ ಸರಿಯಾದ ಮಾರ್ಗಸೂಚಿಗಳಿಲ್ಲದೆ ಕೇವಲ ರಸ್ತೆ, ಕಟ್ಟಡಗಳನ್ನು ನಿರ್ಮಿಸುವ ಇನ್ನೊಂದು ಏಜೆನ್ಸಿಯಾಗಿ ಮಾರ್ಪಾಡಾಯಿತು. ರಾಜ್ಯದಲ್ಲಿರುವ ನಾಲ್ಕು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಎರಡು ಹೈದರಾಬಾದ್ ಕರ್ನಾಟಕದಲ್ಲಿವೆ.(ಬಳ್ಳಾರಿ ಮತ್ತು ರಾಯಚೂರು) ಬೇಸಿಗೆಯಲ್ಲಿ 42 ಡಿಗ್ರಿಗೂ ಅಧಿಕ ತಾಪಮಾನವಿರುವ ಈ ಜಿಲ್ಲೆಗಳಲ್ಲಿ ಇನ್ನೂ ಎರಡು ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿದರೂ ಜನರು ಹಲ್ಲು ಕಚ್ಚಿ ಸಹಿಸಿಕೊಂಡು ಹೋಗುತ್ತಾರೆ.( ಮೈಸೂರಿನ ಚಾಮಲಾಪುರದ ಉಷ್ಣ ವಿದ್ಯುತ್ ಸ್ಥಾವರಕ್ಕೆ ಬಂದ ಪ್ರತಿರೋಧವನ್ನು ನೆನಪಿಸಿಕೊಳ್ಳಿ) ಬಹುಶಃ ಕಲ್ಯಾಣ ಕರ್ನಾಟಕದ ಶರಣರು ಮತ್ತು ತತ್ವಪದಕಾರರ ವಾರಸತ್ವದಿಂದಾಗಿ ಈ ಭಾಗದ ಜನರು ಪಡೆದುಕೊಂಡಿರುವ ಸಹಿಷ್ಣುತೆ ಹಾಗೂ ಸ್ಥಿತಪ್ರಜ್ಞತೆಗಳೇ ಇಲ್ಲಿನ ಜನಪ್ರತಿನಿಧಿಗಳಿಗೆ ವರವಾಗಿ ಪರಿಣಮಿಸಿವೆ. ಹಾಗಾಗಿ ಅವರು ಪರ್ಸೆಂಟೇಜ್ ಅಭಿವೃದ್ಧಿಯಲ್ಲಿ ಮುಳುಗಿ ತಮ್ಮ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳಿಗಾಗುವಷ್ಟು ಸಂಪತ್ತು ಗಳಿಸುವುದರಲ್ಲಿ ತಲ್ಲೀನರಾಗಿ ಜನಹಿತವನ್ನೇ ಮರೆತಿದ್ದಾರೆ.ಶೋಷಿತ ಸಮುದಾಯದಿಂದ ಬಂದ ನಾಯಕರುಗಳು ಕೂಡಾ ತಾವು ಬದುಕಿರುವಾಗಲೇ ಮಕ್ಕಳು ಮರಿಗಳಿಗೆ ಎಮ್.ಎಲ್.ಎ, ಎಂ.ಎಲ್.ಸಿ.ಹಾಗೂ ಮಂತ್ರಿ ಪದವಿಗಳನ್ನು ಕೊಡಿಸುವ ಮೂಲಕ ಅವರಿಗೊಂದು ನೆಲೆ ಕಲ್ಪಿಸುವ ಅತ್ಯವಸರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಒಟ್ಟಾರೆ ಹೇಳುವುದಾದರೆ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ , (ಶಾಸನ ರಚನೆಯ ಅಧಿಕಾರವನ್ನು ಹೊರತುಪಡಿಸಿ ಹಣಕಾಸು, ಕಾರ್ಯ ನಿರ್ವಾಹಕ, ಆಡಳಿತಾತ್ಮಕ ಹೀಗೆ ಎಲ್ಲಾ ಅಧಿಕಾರಗಳನ್ನೊಳಗೊಂಡ) ಸ್ವಾಯತ್ತ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯನ್ನಾಗಿ ಪುನರ್‍ರಚನೆ ಮಾಡುವುದರ ಮೂಲಕ ಮಾತ್ರ ಈ ಭಾಗದ ಸರ್ವಾಂಗೀಣ ಪ್ರಗತಿ ಸಾಧ್ಯ. ಅದುವರೆಗೂ 371ಜೆ ಎಂಬ ಮೂಗಿಗೆ ಸವರಿದ ತುಪ್ಪದ ವಾಸನೆಯಲ್ಲಿಯೇ ತೃಪ್ತಿ ಪಡಬೇಕಷ್ಟೆ.


