ಹೈದರಾಬಾದ್‌ನ ಸರೂರ್‌ನಗರದಲ್ಲಿ ನಡೆದಿರುವ ಮಾರ್ಯಾದೆಹೀನ ಹತ್ಯೆಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ. ಅದು ಸಂವಿಧಾನದ ಪ್ರಕಾರ ಕ್ರಿಮಿನಲ್ ಪ್ರಕರಣವಾದರೆ ಇಸ್ಲಾಂ ಪ್ರಕಾರ ಹೀನ ಕ್ರಿಮಿನಲ್ ಕೃತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೈದರಾಬಾದ್‌ನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ದಲಿತ ಯುವಕನನ್ನು ಮುಸ್ಲಿಂ ಯುವತಿ ಪ್ರೀತಿಸಿ ಮದುವೆಯಾಗಿದ್ದಳು. ಆ ಯುವತಿಯ ಸಹೋದರನಿಗೆ ಕೊಲ್ಲುವ ಯಾವುದೇ ಹಕ್ಕು ಇಲ್ಲ. ಇದು ಕ್ರಿಮಿನಲ್ ಅಪರಾಧವಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಾವು ಕೊಲೆಗಾರರನ್ನು ಎಂದಿಗೂ ಸಮರ್ಥಿಸುವುದಿಲ್ಲ” ಎಂದು ಓವೈಸಿ ಹೇಳಿದ್ದಾರೆ.
ಜಹಾಂಗೀರ್ ಪುರಿ ಮತ್ತು ಖಾರ್ಗೋನ್‌ನಲ್ಲಿನ ಹಿಂಸಾಚಾರದ ಕುರಿತು ಮಾತನಾಡಿದ ಓವೈಸಿ, “ಯಾವುದೇ ಧರ್ಮದ ಮೆರವಣಿಗೆಗಳು ನಡೆದರೂ ಮಸೀದಿ ಸೇರಿದಂತೆ ಆ ರಸ್ತೆಯಲ್ಲಿ ಉತ್ತಮ ರೆಸೂಲೇಷನ್ ಇರುವ ಸಿಸಿಕ್ಯಾಮರಗಳನ್ನು ಅಳವಡಿಸಬೇಕು. ಇಡೀ ಮೆರವಣಿಗೆಯನ್ನು ಫೇಸ್‌ಬುಕ್ ಲೈವ್ ಮಾಡಬೇಕು. ಆಗ ಕಲ್ಲು ತೂರುವವರು ಯಾರೆಂದು ತಿಳಿಯುತ್ತದೆ” ಎಂದಿದ್ದಾರೆ.
ಹೈದರಾಬಾದ್‌ನ ಸರೂರ್‌ನಗರ ಪ್ರದೇಶದಲ್ಲಿ ಮೇ 04 ರಂದು ನಡುರಸ್ತೆಯಲ್ಲಿಯೇ ದಲಿತ ಯುವಕನನ್ನು ಕೊಚ್ಚಿ ಕೊಲ್ಲಲಾದ ಆರೋಪದಲ್ಲಿ ಸಯ್ಯದ್ ಮೊಬಿನ್ ಅಹ್ಮದ್ ಮತ್ತು ಮೊಹಮ್ಮದ್ ಮಸೂದ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
5 ವರ್ಷಗಳಿಂದ ಪ್ರೀತಿಸುತ್ತಿದ್ದ ನಾಗರಾಜು ಮತ್ತು ಅಶ್ರಿನ್ ಸುಲ್ತಾನ ಇದೇ ಜನವರಿ 30 ರಂದು ಹಿಂದೂ ಧರ್ಮದ ಅನುಸಾರ ಮದುವೆಯಾಗಿದ್ದರು. ಆದರೆ ಯುವಕ ಬೇರೆ ಧರ್ಮದವನಾದ ಕಾರಣಕ್ಕೆ ಈ ಮದುವೆಗೆ ಸುಲ್ತಾನ ಕುಟುಂಬ ವಿರೋಧ ವ್ಯಕ್ತಪಡಿಸಿತ್ತು.
ಇದನ್ನೂ ಓದಿ; ದಲಿತ- ಮುಸ್ಲಿಂ ದಂಪತಿ ಪ್ರಕರಣ: ಕೊನೆಯವರೆಗೂ ರಾಜು ನೆನಪಲ್ಲೇ ಬದುಕುವೆ- ಅಶ್ರಿನ್
ಅಶ್ರೀನ್ ಸುಲ್ತಾನನ ಸಹೋದರ ಸಯ್ಯದ್ ಮೊಬಿನ್ ಮತ್ತು ಇತರರು ನಾಗರಾಜುರನ್ನು ಅವರು ಕೆಲಸ ಮಾಡವು ಸ್ಥಳದಲ್ಲಿ ಕೊಲ್ಲಲು ನಿರ್ಧರಿಸಿದ್ದರು. ಅದು ಸಾಧ್ಯವಾಗದಿದ್ದಾಗ ತಮ್ಮ ಸಂಬಂಧಿಗಳ ಮನೆಯಿಂದ ನಾಗರಾಜು ಮತ್ತು ಸುಲ್ತಾನ ಹಿಂತಿರುಗುತ್ತಿದ್ದಾಗ ಸರೂಜ್‌ನಗರದ ನಡುರಸ್ತೆಯಲ್ಲಿ ಹಲ್ಲೆ ನಡೆಸಿ, ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


