ನಾನು ಎಡಪಂಥೀಯರ ಜೊತೆ ಗುರುತಿಸುಕೊಳ್ಳುವವನು ಎಂದು ಸಂಘಪರಿವಾರ ಮತ್ತು ಬಿಜೆಪಿ ನನ್ನನ್ನು ಟೀಕಿಸುತ್ತದೆ. ನಾನು ರಾಜಕಾರಣಿ ಎಂದು ಶಾಸಕ ಎಚ್.ಡಿ ರೇವಣ್ಣ ಅಸೆಂಬ್ಲಿಯಲ್ಲಿ ಬಾಯಿತಪ್ಪಿ ಹೇಳಿದ್ದರು. ನಾನು ಎಲ್ಲರ ಜೊಎ ಕೈಜೋಡಿಸುವವನೆಂದು ಹೇಳಿಕೊಳ್ಳಲು ನನಗೆ ಅಳುಕಿಲ್ಲ. ನಾನು ರಾಜಕಾರಣಿಯೂ ಹೌದು. ಆದರೆ ನಾನು ಅಧಿಕಾರ ದಾಹಕ್ಕಾಗಿ ರಾಜಕೀಯ ಮಾಡುವವನ್ನಲ್ಲ. ಪಕ್ಷ ರಾಜಕಾರಣದಲ್ಲಿ ನನಗೆ ನಂಬಿಕೆಯೂ ಇಲ್ಲ.
ನಾನು ಎಲ್ಲರೊಡನೆ ಕೂಡಿಕೊಳ್ಳುವ ಸ್ವಭಾವದವನು. ಅದು ದೇಶದ ಒಳಿತಿಗಾಗಿ, ಭದ್ರತೆಗಾಗಿ, ಪ್ರಜಾಪ್ರಭುತ್ವ ಎತ್ತಿ ಹಿಡಿಯುವುದಕ್ಕಾಗಿ. ಕೋಮು ವಿದ್ವೇಷ, ಸರ್ವಾಧಿಕಾರಿ ಮನೋಭಾವವನ್ನು ಕಿತ್ತೆಸೆಯುವುದಕ್ಕಾಗಿ ನಾನು ರಾಜಕೀಯದವರೊಡನೆ ಕೈಜೋಡಿಸಲು ಸೈ. ಸೇಡಿನ ರಾಜಕೀಯ, ಮತೀಯ, ಧಾರ್ಮಿಕ ರಾಜಕೀಯಗಳನ್ನು ನಾನು ಎಂದೆಂದಿಗೂ ವಿರೋಧಿಸುವವನು. ಎಲ್ಲರೊಡನೆ ನಾನು ಬೆರೆತರೂ ನಾನು ಅವರವನಲ್ಲ. ನಾನು ಸರ್ವೋದಯ ಸಿದ್ಧಾಂತವನ್ನು ನಂಬಿದವನು. ಗಾಂಧೀಜಿಯವರ ಮಾರ್ಗಾನುಯಾಯಿ.
ಕೈಗಾ ಚಳವಳಿಯಲ್ಲಿ, ತುರ್ತು ಪರಿಸ್ಥಿತಿಯಲ್ಲಿ ನಾನು ಸಂಘಪರಿವಾರದವರೊಡನೆಯೂ ಕೂಡಿಕೊಂಡವನು. ಸಭೆ, ಸಮ್ಮೇಳನ, ಚರ್ಚಾಕೂಟ, ವಿಚಾರ ಸಂಕಿರಣ, ಚಳವಳಿಗೆ ಯಾರೇ ಕರೆದರೂ ನಾನು ಹೋಗುವವನು. ಆದರೆ ಅವುಗಳಲ್ಲೆಲ್ಲ ಸರ್ವೋದಯ ಛಾಪನ್ನು ಮೂಡಿಸಲು ಪ್ರಯತ್ನಿಸುತ್ತೇನೆ. ನಾಡಿನ ಹಿತದೃಷ್ಠಿಯಿಂದ ಏನು ಹೇಳಬೇಕೋ ಅದನ್ನು ನಿರ್ಭೀಡತಯಿಂದ ಹೇಳುತ್ತೇನೆ. ನಾನು ಯಾವ Ism ಗೂ ದಾಸನಲ್ಲ. ನಾನು ನಂಬುವುದು Humanisam ನಲ್ಲಿ.
ಅನೇಕ ಮೂಲಭೂತ ವಿಚಾರಗಳಲ್ಲಿ ನನ್ನ ನಿಲುವು, ರಾಜಕೀಯ ಸಂಸ್ಥೆಯ ನಿಲುವುಗಳಿಗಿಂತ ಭಿನ್ನ. ಆದರೂ ನನ್ನನ್ನು ಎಲ್ಲರೂ ಪ್ರೀತಿ ವಿಶ್ವಾಸದಿಂದ ತಮ್ಮ ಕಾರ್ಯಕ್ರಮಗಳಿಗೆ ಕರೆಯುತ್ತಾರೆ.
ಸರ್ವೋದಯ ಸಿದ್ದಾಂತವೇ ಹಾಗೆ. ಗಾಂಧೀಜಿಯವರ ವಿಚಾರಗಳೇ ಹಾಗೆ. ಸರ್ವೋದಯ ಎಲ್ಲರ ಒಳಿತನ್ನು ಬಯಸುತ್ತದೆ. ಸವೇಜನೋ ಸುಖಿನೋಭವಂತು ಎಂದು ದೇವರ ಮುಂದೆ ಕೂತು ಪ್ರತಿದಿನ ಹೇಳಿದರೆ ಸಾಲದು. ಅದನ್ನು ಕಾರ್ಯಗತ ಮಾಡಬೆಕು. ಇದು ಹಿಂದೂ ಧರ್ಮದ ನಿಲುವು. ಭಾಜಪ ಮೊದಲುಗೊಂಡು ಯಾವ ರಾಜಕೀಯ ಪಕ್ಷವೂ ಸರ್ವೋದಯವನ್ನು ತನ್ನ ರಾಜಕೀಯ ಸಿದ್ಧಾಂತವಾಗಿ ಅಂಗೀಕರಿಸಿಲ್ಲ. ಹಿಂದುತ್ವ ಪ್ರತಿಪಾದಕರು ಡೋಂಗಿಗಳು ಎನ್ನುವುದು ಇದೇನಾ?
ಗೋರಕ್ಷಣೆಯ ವಿಷಯಕ್ಕೆ ನನ್ನ ಪೂರ್ಣ ಸಹಮತವಿದೆ. ಆದರೆ ಮತೀಯ ದ್ವೇಷ ಬೆಳೆಸುವ ದೃಷ್ಠಿಯಿಂದ ಗೋಸಂರಕ್ಷಣೆಯ ವಿಷಯ ಕೈಗೆತ್ತಿಕೊಳ್ಳುವುದಕ್ಕೆ ನನ್ನ ಸಹಮತವಿಲ್ಲ. ಗೋವು ಒಂದು ವಿಶೇಷ ಪ್ರಾಣಿ. ಅದನ್ನು ಕೊಲ್ಲದೆ ಅದರ ಹಾಲನ್ನು ಆಹಾರವಾಗಿ ಬಳಸಲುಬರುವ ಏಕೈಕ ಪ್ರಾಣಿ ಗೋವು. ರೈತ ಗೋವನ್ನು ತನ್ನ ಪರಿವಾರದ ಸದಸ್ಯನನ್ನಾಗಿ ಭಾವಿಸುತ್ತಾನೆ. ಆಕಳ ಹಾಲು ಅತ್ಯುತ್ಕ್ರಷ್ಟ ಆಹಾರ. ಹಸುವಿನ ಹಾಲಿನಲ್ಲಿ ದೇಹಪೋಷಣೆಗೆ ಬೇಕಾದ ಎಲ್ಲ ಅಂಸಗಳು ಸಮತೋಲನದಲ್ಲಿರುತ್ತವೆ. ಮಕ್ಕಳಿಗೆ ಅದು ಅಮೃತಸಮಾನ. ಇದಕ್ಕಾಗಿ ಸರ್ವೋದಯದಲ್ಲಿ ಗೋವಿಗೆ ವಿಶಿಷ್ಠ ಸ್ಥಾನಮಾನ ನೀಡಿದೆ. ಗೋವನ್ನು ಕೊಲ್ಲುವುದು ಅನೀತಿ.
ಸ್ವಾತಂತ್ರ್ಯ ಪ್ರಾಪ್ತವಾದ ನಂತರ ಗೋವಧೆ ನಿಷೇಧ ಕಾಯಿದೆ ಅನೇಕ ರಾಜ್ಯಗಳಲ್ಲಿ ಜಾರಿಗೆ ಬಂದಿದೆ. ಯಾವುದೇ ಕಾರಣಕ್ಕೂ ಗೋವನ್ನು, ಅದರ ಕರುವನ್ನು, ಎತ್ತನ್ನು, ಗೂಳಿಯನ್ನು ಕೊಲ್ಲಬಾರದು ಎಂದು ಆ ಕಾನೂನು ಹೇಳುತ್ತದೆ. ಗೋವಧೆ ಮಾಡಿದರೆ 3 ವರ್ಷಗಳ ಸೆರವಾಸ ಎಂದು ಕರ್ನಾಟಕದಲ್ಲಿ ಶಾಸನವಿದೆ.
ಮುಸ್ಲಿಮರೆ ಅಧಿಕ ಸಂಖ್ಯೆಯಲ್ಲಿರುವ ಕಾಶ್ಮೀರದಲ್ಲಿ ಷೇಕ್ ಅಬ್ದುಲ್ಲಾ ಅಲ್ಲಿನ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಂಡ ಗೋಹತ್ಯಾ ನಿಷೇಧ ಕಾಯಿದೆಯಲ್ಲಿ ಗೋಹತ್ಯ ಮಾಡಿದವನಿಗೆ 10 ವರ್ಷ ಸೆರೆವಾಸ ಎಂದು ಹೇಳಿದೆ. ಆದ್ದರಿಂದ ಗೋಹತ್ಯೆ ನಿಷೇಧ ಹಿಂದುಗಳಿಗೆ ಮಾತ್ರ ಬೇಕಿದೆ ಎಂಬುದೇನೂ ಇಲ್ಲ. ಇದನ್ನು ಷೇಕ್ ಅಬ್ದುಲ್ಲಾ ಶಾಸನ ತರುವ ಮೂಲಕ ಸಾಬೀತು ಮಾಡಿದ್ದಾರೆ.
ಅದರಂತೆ ಬಡತನ ನೀಗುವ ಕೆಲಸದಲ್ಲಿಯಾವ Ismಗೂ ಅವಕಾಶವಿಲ್ಲ. ಸ್ವತಂತ್ರ ಭಾರತದಲ್ಲಿ ಬಡತನ, ಅಸಮಾನತೆ ಇರಲೇಬಾರದು. ಸರ್ಕಾರಗಳ ಬಂದು ಹೋದವು. 72 ವರ್ಷಗಳು ಕಳೆದರೂ ಬಡತನ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆಯೇ ಹೊರತು, ಕಡಿಮೆಯಾಗುತ್ತಿಲ್ಲ. ಬಡವ ಬಲ್ಲಿದ ಅಂತರ ಹೆಚ್ಚುತ್ತಲೇ ಇದೆ. ಇದರ ವಿರುದ್ಧ ಎಲ್ಲರೂ ಕೂಡಿಕೊಂಡು ಹೋರಾಡಬೇಕಾಗಿದೆ.
ವಿನೋಬಾ ಭಾವೆ ಹಳ್ಳಿಯಲ್ಲಿ ದುಡಿಯುತ್ತಾ ಎಲ್ಲರಿಗೂ 5 ಎಕರೆ ಭೂಮಿ ಹಂಚುತ್ತಾ, ಭೂದಾನ ಯಜ್ಞ ಕಾರ್ಯಕ್ರಮವನ್ನು ಕೈಗೆತ್ತಿಕೊಂಡರು. ಭಾರತದಲ್ಲಿ ಸರ್ವೋದಯ ಪಾದಯಾತ್ರೆ ಕೈಗೊಂಡರು. ಭೂಹೀನರಿಗೆ ತಮ್ಮಲ್ಲಿರುವ ಜಮೀನಿನಲ್ಲಿ ಸ್ವಲ್ಪ ದಾನ ಮಾಡಿ ಎಂದು ಜಮೀನು ಇರುವವರ ಬಳಿ ಬೇಡಿಕೆ ಇಟ್ಟರು. ನಾನು ಭೂಮಿಯ ಭಿಕ್ಷೆ ಬೇಡಲು ಬಂದಿಲ್ಲ, ಬಡವರ ಬದುಕುವ ಹಕ್ಕಿಗಾಗಿ ಭೂದಾನ ಕೇಳಲು ಬಂದಿದ್ದೇನೆ ಎಂದರು. ಅವರಿಗೆ ಉಳ್ಳ ಜನ ಸ್ಪಂದಿಸಿದರು. ಭಾರತದಲ್ಲಿ ಹೊಡೆಯದೆ, ಬಡಿಯದೆ, ಕಾನೂನಿನ ಕತ್ತೆಗೆ ಕಾಯದೆ ಉಳ್ಳವರ ಮನಪರಿವರ್ತನೆ ಮಾಡುವ ಮೂಲಕ 42 ಲಕ್ಷ ಎಕರೆ ಜಮೀನನ್ನು ದಾನವಾಗಿ ಪಡೆದರು. ಭಾರತದಲ್ಲಿ ಗ್ರಾಮೀಣ ಜನರ ಬಡತನ ನೀಗಲು 5 ಕೋಟಿ ಎಕರೆ ಜಮೀನು ಬೇಕು. ಸರ್ಕಾರ ಬಡವರ ಆಶಯವನ್ನು ಪೂರೈಸುವುದು ತಮ್ಮ ಆದ್ಯ ಕರ್ತವ್ಯವೆಂದು ಭಾವಿಸಬೇಕು. ಅದಕ್ಕಾಗಿ ಭೂ ಸುಧಾರಣೆ ಕಾಯ್ದೆಯನ್ನು ಪರಿಶೀಲಿಸಿ ಸರ್ಕಾರ ಭಾರತದ ಎಲ್ಲ ಭೂಹೀನರಿಗೆ ತಲಾ 5 ಎಕರೆ ಜಮೀನು ಹಂಚಬೇಕು.
ಇನ್ನೊಂದು ವಿಷಯ. ಕೊಪ್ಪದಲ್ಲಿ ಹತ್ತಾರು ವರ್ಷಗಳಿಂದ ಗುಡಿಸಲುಗಳಲಿದ್ದವರ ಗುಡಿಸಲು ಕೆಡವುವು ಪ್ರಯತ್ನ ತಹಶೀಲ್ದಾರರಿಂದ ನಡೆದಿತ್ತು. ರವಿಕೃಷ್ಣರೆಡ್ಡಿ ನೇತೃತ್ವದಲ್ಲಿ ಗುಡಿಸಲುವಾಸಿಗಳು, ಹೋರಾಟಗಾರರು ಸೇರಿ ತಹಶೀಲ್ದಾರರ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ಮಾಡಿದೆವು. ತಹಶೀಲ್ದಾರರನ್ನು ಕರೆಸಿ ‘ಜನರ ಗುಡಿಸಲುಗಳನ್ನು ತರೆವು ಮಾಡುವ ಮೊದಲು ಅವರಿಗೆ ಬೇರೆಡೆ ಗುಡಿಸಲುಗಳನ್ನು ಹಾಕಿಸಿಕೊಟ್ಟು ಮರ್ಯಾದೆಯಿಂದ ಅವರನ್ನು ನಡೆಸಿಕೊಳ್ಳಿ. ಭಾರತೀಯ ಪ್ರಜೆಗಳನ್ನು ನೆಲೆ ಇಲ್ಲದಂತೆ ಮಾಡಿ, ಬಿಸಿಲಿನಲ್ಲಿ ನಿಲ್ಲಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ನಾನು ಛೇಡಿಸಿದೆ.
ಅಂದು ರಾತ್ರಿ ಉಳಿದುಕೊಳ್ಳಲು ಒಬ್ಬರ ಮನೆಗೆ ಆಹ್ವಾನಿಸಿದರು. ನಾನು ಹೋಗಿ ಉಳಿದಿದ್ದೆ. ಬೆಳಿಗ್ಗೆ ವಾಪಸ್ ಬರುವಾಗ ಅವರು ನನ್ನೊಡನೆ ಫೋಟೊ ತೆಗೆಸಿಕೊಂಡರು. ನಾನು ಯಾವ ಸಭೆಗೆ ಭಾಗವಹಿಸಲು ಹೋದರೂ, ಸಭೆ ಮುಗಿದ ಮೇಲೆ ಹುಡುಗರು, ಊರಿನಪ್ರಮುಖರು, ಸಭೆಗೆ ಬಂದಿದ್ದವರು, ಹೆಣ್ಣು ಮಕ್ಕಳು ನನ್ನ ಜೊತೆ ಫೋಟೊ ತೆಗಿಸಿಕೊಳ್ಳುವುದು ವಾಡಿಕೆ. ಇಂತಹ ಫೋಟೊಗಳು ಸಾವಿರಾರಿರಬಹುದು.
ಅದರಂತೆಯೇ ಅಮೂಲ್ಯ ಎನ್ನುವ ಈ ಹುಡುಗಿಯೂ ನನ್ನ ಜೊತೆ ಫೋಟೊ ತೆಗಿಸಿಕೊಂಡಳು ಎಂದು ನಾನು ಭಾವಿಸುತ್ತೇನೆ. ಅವಳು ನಾಲ್ಕು ವರ್ಷಗಳ ಹಿಂದೆ ಚಿಕ್ಕ ವಯಸ್ಸಿನಲ್ಲಿ ನನ್ನೊಡನೆ ತೆಗಿಸಿಕೊಂಡ ಆ ಫೋಟೊವನ್ನು ಎಲ್ಲಿಂದಲೋ ತಂದು ವಿಧಾನಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಾಸನ ಸಭೆಯಲ್ಲಿ ತೋರಿಸಿ ನನ್ನನ್ನು Anti National ಎಂದು ಬಿಂಬಿಸಲು ಹೊರಟರು. ಒಟ್ಟಿನಲ್ಲಿ ನನ್ನ ಚಾರಿತ್ರ್ಯವಧೆ ಮಾಡುವುದು ಅವರ ಉದ್ದೇಶವಾಗಿತ್ತು. ನನ್ನ ಮೇಲೆ ಅವರಿಗಿರಬಹುದಾದ ಸಿಟ್ಟೆಂದರೆ ಜ್ವಾಲಾಮುಖಿ ಪತ್ರಿಕೆಯ ಅಂಕಣಕಾರನಾಗಿ ‘ನಮ್ಮಲ್ಲಿ ಒಬ್ಬ ಹಿರಣ್ಯಾಕ್ಷ ಎಂಬ ಶೀರ್ಷಿಕೆಯ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಈಶ್ವರಪ್ಪನವರು ಶಿವಮೊಗ್ಗದ ಮೂಲೆ ಮೂಲೆಯಲ್ಲಿ ಸೈಟುಗಳನ್ನು , ಮನೆಗಳನ್ನು ಅವರ ಹೆಂಡತಿ, ಮಗ, ಸೋಸೆ, ಮಗಳು, ಅಳಿಯ ಎಲ್ಲರ ಹೆಸರಿನಲ್ಲಿಯೂ ಕೊಂಡಿರುವುದನ್ನು ಬಡಾವಣೆಗಳ ಹೆಸರು, ಕೊಂಡಿರತಕ್ಕ ಮನೆಯ ಅಥವಾ ಸೈಟಿನ ಸರ್ವೇ ನಂಬರ್, ವಿಸ್ತೀರ್ಣಗಳನ್ನೊಳಗೊಂಡ ವಿವರಗಳನ್ನು ದಾಖಲೆ ಸಮೇತ ನಮೂದಿಸಿ ಬರೆದಿದ್ದೆ. ಹಿಂದೆ ಹಿರಣ್ಯಾಕ್ಷ ಎಂಬ ರಾಕ್ಷಸ ಇದ್ದು, ಭೂಮಂಡಲವನ್ನು ತನ್ನದಾಗಿ ಮಾಡಿಕೊಳ್ಳಲು ಭೂಮಿಯನ್ನು ಚಾಪೆಯಂತೆ ಸುತ್ತಿ ತೆಗೆದುಕೊಂಡುಹೋಗಿ ಸಮುದ್ರದ ಒಳಗಡೆ ಬಚ್ಚಿಟ್ಟಿದ್ದ. ವಿಷ್ಣು ಕೂರ್ಮಾವತಾರದಲ್ಲಿ ಬಂದು ಸಮುದ್ರದಾಳದಲ್ಲಿ ಬಚ್ಚಿಟ್ಟಿದ್ದ ಭೂಮಿಯನ್ನು ತೆಗೆದುಕೊಂಡು ಹೋಗಿ ಹರಡಿ ಭೂಮಂಡಲಕ್ಎಕ ಮರುಜೀವ ಕೊಟ್ಟ.
ಅದರಂತೆ ಈಶ್ವರಪ್ಪನವರು ಶಿವಮೊಗ್ಗದ ಭೂಮಿಯನ್ನೆಲ್ಲ ಕೊಂಡುಕೊಂಡು ತಮ್ಮದಾಗಿಸಿಕೊಳ್ಳುತ್ತಾರೋ ಎಂಬ ಭಯ ನನ್ನದು. ಅದಕ್ಕಾಗಿ ಆ ಲೇಖನ ಬರೆದೆ. ಆ ಕಾರಣದಿಂದ ಈಶ್ವರಪ್ಪನವರಿಗೆ ನನ್ನ ಮೇಲೆ ಸಿಟ್ಟಿರಬಹುದು. ಆ ಸಿಟ್ಟನ್ನು ಅಸೆಂಬ್ಲಿಯಲ್ಲಿ ಈ ಫೋಟೊ ತೋರಿಸುವ ಮೂಲಕ ವ್ಯಕ್ತಪಡಿಸಿರಬಹುದೆಂಬುದು ನನ್ನ ಅನಿಸಿಕೆ.


