ತನ್ನ ವಿರುದ್ದ ಆಮ್ ಆದ್ಮಿ ಪಕ್ಷ (ಎಎಪಿ) ಮಾಡಿರುವ ಎಲ್ಲಾ ಆರೋಪಗಳನ್ನು ರಾಘವ್ ಚಡ್ಡಾ ಶನಿವಾರ (ಏ.4) ಅಲ್ಲಗಳೆದಿದ್ದು, “ಅವೆಲ್ಲವೂ ಸುಳ್ಳು ಮತ್ತು ಸಂಘಟಿತ ಅಭಿಯಾನದ ಭಾಗ” ಎಂದಿದ್ದಾರೆ. “ಸಂಸತ್ತಿನಲ್ಲಿ ನನ್ನ ಉದ್ದೇಶ ಪ್ರಭಾವ ಬೀರುವುದೇ ಹೊರತು, ಗದ್ದಲ ಸೃಷ್ಟಿಸುವುದಲ್ಲ” ಎಂದು ಅವರು ಹೇಳಿದ್ದಾರೆ.
ವಿಡಿಯೋ ಹೇಳಿಕೆಯಲ್ಲಿ ಚಡ್ಡಾ ಅವರು, ವಿರೋಧ ಪಕ್ಷದ ಸಭಾತ್ಯಾಗಗಳಲ್ಲಿ ತಾನು ಭಾಗವಹಿಸಿಲ್ಲ ಎಂಬ ಆರೋಪಗಳನ್ನು ‘ಸಂಪೂರ್ಣ ಸುಳ್ಳು’ ಎಂದು ತಳ್ಳಿಹಾಕಿದ್ದಾರೆ. ಸಂಸತ್ತಿನ ಕಲಾಪಗಳು ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿರುತ್ತವೆ ಎಂದಿರುವ ಅವರು, ತಾನು ಭಾಗವಹಿಸದ ಒಂದೇ ಒಂದು ಸಂದರ್ಭವನ್ನು ಬೆರಳು ಮಾಡಿ ತೋರಿಸುವಂತೆ ಟೀಕಾಕಾರರಿಗೆ ಸವಾಲು ಹಾಕಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಆಗ್ರಹಿಸಿದ ನಿಲುವಳಿ ನೋಟಿಸ್‌ಗೆ ಸಹಿ ಹಾಕಲು ನಿರಾಕರಿಸಿದ್ದಾರೆ ಎಂಬ ಮತ್ತೊಂದು ಆರೋಪದ ಕುರಿತು ಪ್ರತಿಕ್ರಿಯಿಸಿದ ಚಡ್ಡಾ, ಈ ಬಗ್ಗೆ ಯಾವುದೇ ಪಕ್ಷದ ನಾಯಕರು ತನ್ನನ್ನು ಔಪಚಾರಿಕವಾಗಿಯಾಗಲಿ ಅಥವಾ ಅನೌಪಚಾರಿಕವಾಗಿಯಾಗಲಿ ಎಂದಿಗೂ ಸಂಪರ್ಕಿಸಿಲ್ಲ. ಅಲ್ಲದೆ, ನಮ್ಮ ಪಕ್ಷದ ಇತರ ಹಲವಾರು ಸಂಸದರು ಕೂಡ ಆ ನೋಟಿಸ್‌ಗೆ ಸಹಿ ಹಾಕಿಲ್ಲ ಎಂದು ಹೇಳಿದ್ದಾರೆ.
ತನ್ನ ಕೆಲಸವನ್ನು ಎತ್ತಿ ತೋರಿಸಿದ ಚಡ್ಡಾ ಅವರು, ಜಿಎಸ್‍ಟಿ, ಆದಾಯ ತೆರಿಗೆ, ದೆಹಲಿಯ ವಾಯು ಮಾಲಿನ್ಯ, ಪಂಜಾಬ್‌ನ ನೀರಿನ ಸಮಸ್ಯೆಗಳು, ಸಾರ್ವಜನಿಕ ಆರೋಗ್ಯ, ಶಿಕ್ಷಣ, ರೈಲ್ವೆ ಪ್ರಯಾಣಿಕರ ಸಮಸ್ಯೆಗಳು, ಋತುಸ್ರಾವದ ಆರೋಗ್ಯ, ನಿರುದ್ಯೋಗ ಮತ್ತು ಹಣದುಬ್ಬರ ಸೇರಿದಂತೆ ಸಾರ್ವಜನಿಕ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಸತತವಾಗಿ ಪ್ರಸ್ತಾಪಿಸುತ್ತಿರುವುದಾಗಿ ತಿಳಿಸಿದ್ದಾರೆ.
ತನ್ನ ಕೆಲಸದ ಹೊಣೆಗಾರಿಕೆಯನ್ನು ಪುನರುಚ್ಚರಿಸಿದ ಚಡ್ಡಾ, “ಸಂಸತ್ತು ಜನರ ತೆರಿಗೆ ಹಣದಿಂದ ನಡೆಯುತ್ತದೆ. ಜನರ ಸಮಸ್ಯೆಗಳನ್ನು ಪ್ರಸ್ತಾಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದಿದ್ದಾರೆ. “ಪ್ರತಿಯೊಂದು ಸುಳ್ಳು ಕೂಡ ಬಯಲಾಗಲಿದೆ” ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಪಕ್ಷದ ಉಪನಾಯಕನ ಸ್ಥಾನದಿಂದ ಎಎಪಿ ಹಠಾತ್ ತೆಗೆದು ಹಾಕಿದೆ. ಇದು ಚಡ್ಡಾ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಚಡ್ಡಾ ಇತ್ತೀಚಿನ ದಿನಗಳಲ್ಲಿ ರಾಜ್ಯಸಭೆಯಲ್ಲಿ ಜನರ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸುವ ಮೂಲಕ ಗಮನ ಸೆಳೆದಿದ್ದರು. ಅವರು ಪ್ರಸ್ತಾಪಿಸಿದ ವಿಷಯಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಜನರು ಕೂಡ ಈ ಬಗ್ಗೆ ಚರ್ಚೆಗಳನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲೇ ಚಡ್ಡಾ ಅವರ ಸ್ಥಾನ ಕಿತ್ತುಕೊಂಡಿರುವುದು, ಎಎಪಿಯಲ್ಲಿ ಆಂತರಿಕ ಕಲಹಕ್ಕೆ ಕಾರಣವಾಗಿದೆ. ಜನರಲ್ಲೂ ಆಶ್ಚರ್ಯ ಮೂಡಿಸಿದೆ. ಚಡ್ಡಾ ಕೇಜ್ರಿವಾಲ್ ಸೇರಿದಂತೆ ಎಎಪಿ ನಾಯಕ ವಿರುದ್ದವೇ ಅಸಮಾಧಾನ ಹೊರ ಹಾಕಿದ್ದಾರೆ.
ಒಟ್ಟಿನಲ್ಲಿ ಚಡ್ಡಾ ಅವರ ಸ್ಥಾನ ಕಿತ್ತುಕೊಂಡಿರುವುದು ಎಎಪಿಯಲ್ಲಿ ವಾಗ್ಯುದ್ಧವಾಗಿ ಪರಿವರ್ತನೆಗೊಂಡಿದೆ. ಹಿರಿಯ ನಾಯಕರು ಚಡ್ಡಾ ಅವರನ್ನು ಬಹಿರಂಗವಾಗಿ ಟೀಕಿಸುತ್ತಾ ಅವರ ರಾಜಕೀಯ ನಿಲುವನ್ನು ಪ್ರಶ್ನಿಸುತ್ತಿದ್ದರೆ, ಚಡ್ಡಾ ಸಂಸತ್ತಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದರೂ ಸಹ ತಮ್ಮನ್ನು ಗುರಿ ಮಾಡಲಾಗುತ್ತಿದೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.


