“ಜೈಲಿಗೆ ಹೋದರೂ ಸರಿ, ಅರ್ಹರು ಶಾಲಾ ಉದ್ಯೋಗ ಕಳೆದುಕೊಳ್ಳಲು ನಾನು ಬಿಡುವುದಿಲ್ಲ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) 2016ರಲ್ಲಿ ರಾಜ್ಯದ ಶಾಲೆಗಳಿಗೆ ನೇಮಕ ಮಾಡಿದ ಶಿಕ್ಷಕರೂ ಸೇರಿದಂತೆ 25,000ಕ್ಕೂ ಹೆಚ್ಚು ಸಿಬ್ಬಂದಿಯ ನೇಮಕಾತಿಯನ್ನು ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ.
ಈ ಹಿನ್ನೆಲೆ, ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಕೆಲಸ ಕಳೆದುಕೊಂಡವರನ್ನು ಸೋಮವಾರ (ಏ.7) ಭೇಟಿ ಮಾಡಿದ ಸಿಎಂ ಮಮತಾ ಬ್ಯಾನರ್ಜಿ “ನಾವು ಸುಪ್ರೀಂ ಕೋರ್ಟ್ ತೀರ್ಪನ್ನು ಒಪ್ಪಿಕೊಂಡಿದ್ದೇವೆ ಎಂದು ದಯವಿಟ್ಟು ಭಾವಿಸಬೇಡಿ. ಅರ್ಹ ಅಭ್ಯರ್ಥಿಗಳು ಕೆಲಸ ಕಳೆದುಕೊಳ್ಳಲೋ, ವಿರಾಮ ಪಡೆಯಲೋ ನಾನು ಬಿಡುವುದಿಲ್ಲ” ಎಂದಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನಿಂದ ಎದುರಾಗಿರುವ ಸವಾಲುಗಳ ಹೊರತಾಗಿಯೂ, ಸಮಸ್ಯೆಯನ್ನು ನ್ಯಾಯಯುತವಾಗಿ ಮತ್ತು ಕಾಳಜಿಯಿಂದ ಪರಿಹರಿಸಲು ರಾಜ್ಯ ಸರ್ಕಾರದ ಬಳಿ ಪ್ರತ್ಯೇಕ ಯೋಜನೆಯಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಕೆಲಸ ಕಳೆದುಕೊಂಡವರ ಘನತೆಯನ್ನು ಪುನಃಸ್ಥಾಪಿಸುವ ತನ್ನ ಅಚಲ ನಿಲುವನ್ನು ಒತ್ತಿ ಹೇಳಿದ ಮಮತಾ, ಸಮಸ್ಯೆಗೆ ಸಿಲುಕಿದವರ ಪರ ನಿಲ್ಲಲು ಯಾವುದೇ ಕಾನೂನು ಪರಿಣಾಮಗಳನ್ನು ಎದುರಿಸಲು ಸಿದ್ಧ ಎಂದು ಎಂದಿದ್ದಾರೆ.
“ನಾವು ಕಲ್ಲು ಹೃದಯಿಗಳಲ್ಲ… ಇದನ್ನು ಹೇಳಿದ್ದಕ್ಕಾಗಿ ನನ್ನನ್ನು ಜೈಲಿಗೆ ಹಾಕಬಹುದು, ಆದರೆ ನನಗೆ ಅದು ಮುಖ್ಯವಲ್ಲ. ನಾನು ನ್ಯಾಯಾಂಗವನ್ನು ಗೌರವಿಸುತ್ತೇನೆ. ಆದರೆ, ಈ ತೀರ್ಪನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದ ಮಮತಾ ಬ್ಯಾನರ್ಜಿ ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ನಡೆದ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಎಷ್ಟು ಬಿಜೆಪಿ ನಾಯಕರನ್ನು ಬಂಧಿಸಲಾಗಿದೆ? ಬಂಗಾಳವನ್ನು ಏಕೆ ಗುರಿಯಾಗಿಸಿಕೊಂಡಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಮತ್ತು ಕೇಂದ್ರ ಸಂಸ್ಥೆಗಳು ಬಂಗಾಳದ ಶಿಕ್ಷಣ ವ್ಯವಸ್ಥೆಯನ್ನು ಹಾಳುಗಡೆವಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ, ಮಾನವೀಯತೆ ಆಧಾರದಲ್ಲಿ ಕೆಲಸ ಕಳೆದುಕೊಂಡ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ಪುನರುಚ್ಚರಿಸಿದ್ದಾರೆ.
“ನೀವು ಸಿದ್ಧರಿದ್ದರೆ ನನ್ನನ್ನು ಹಿಡಿಯಿರಿ. ನಮ್ಮ ವಕೀಲರು ತೀರ್ಪನ್ನು ಪರಿಶೀಲಿಸುತ್ತಿದ್ದಾರೆ. ನಾನು ಅಭ್ಯರ್ಥಿಗಳೊಂದಿಗಿದ್ದೇನೆ… ಅದಕ್ಕಾಗಿ ಬಿಜೆಪಿ ನನ್ನನ್ನು ಜೈಲಿಗೆ ಹಾಕಲು ಬಯಸಿದರೆ, ಹಾಗೆಯೇ ಆಗಲಿ” ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಸಿಪಿಎಂ ಈ ಬಿಕ್ಕಟ್ಟನ್ನು ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
“ಪ್ರಚೋದಕರು ಮುಖ್ಯಮಂತ್ರಿ ಸಂಕಷ್ಟಕ್ಕೀಡಾದ ಜನರನ್ನು ಭೇಟಿಯಾಗದಂತೆ ತಡೆಯಬಹುದು ಎಂಬ ಮಾಹಿತಿ ಇದೆ. ಇದು ಜನರು ಬಿಕ್ಕಟ್ಟಿನಿಂದ ಹೊರಬರದಂತೆ ತಡೆಯುವ ಪಿತೂರಿಯಾಗಿದೆ” ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ. ಮಮತಾ ಬ್ಯಾನರ್ಜಿಯವರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಭೇಟಿಯ ಸಮಯದಲ್ಲಿ ಇದೇ ರೀತಿಯ ಅಡೆತಡೆಗಳನ್ನು ಉಲ್ಲೇಖಿಸಿ ಘೋಷ್ ಹೇಳಿಕೆ ನೀಡಿದ್ದರು.
ವಂಚನೆಯ ಮೂಲಕ ಉದ್ಯೋಗ ಗಳಿಸಿದ್ದಾರೆಂದು ಸಾಬೀತಾದ ಅಭ್ಯರ್ಥಿಗಳನ್ನು ಮಾತ್ರ ವಜಾಗೊಳಿಸಬೇಕು ಮತ್ತು ಅವರ ಸಂಬಳವನ್ನು ವಾಪಸ್ ಪಡೆಯಬೇಕು. ಆದರೆ, ಕಳಂಕವಿಲ್ಲದವರು ತಮ್ಮ ಸಂಬಳವನ್ನು ಉಳಿಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅರ್ಹ ವ್ಯಕ್ತಿಗಳು ಈ ಹಿಂದಿನ ಸರ್ಕಾರಿ ಹುದ್ದೆಗಳನ್ನು ಹೊಂದಿದ್ದರೆ ಅವುಗಳಿಗೆ ಮರಳಲು ಸಹ ಅವಕಾಶವಿದೆ ಎಂದಿದೆ.
ಬಂಗಾಳ ಸರ್ಕಾರದ್ದು ಸೇರಿದಂತೆ 120ಕ್ಕೂ ಹೆಚ್ಚು ಅರ್ಜಿಗಳನ್ನು ವಿಚಾರಣೆ ನಡೆಸಿದ ನಂತರ ತೀರ್ಪು ಬಂದಿದೆ. ಒಎಂಆರ್ ಹಾಳೆಗಳನ್ನು ತಿರುಚುವುದು, ಮಂಜೂರಾದ ಖಾಲಿ ಹುದ್ದೆಗಳನ್ನು ಮೀರಿದ ನೇಮಕಾತಿಗಳು ಮತ್ತು ಇತರ ಅಕ್ರಮಗಳನ್ನು ನ್ಯಾಯಾಲಯ ಗಮನಿಸಿದೆ. 24,640 ಹುದ್ದೆಗಳಿಗೆ 23 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರೆ, 25,700ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ನೀಡಲಾಗಿದೆ.
ತ್ರಿಪುರಾದಲ್ಲಿ ಸಿಪಿಎಂ ಆಡಳಿತದ ಅವಧಿಯಲ್ಲಿ 10,323 ಶಿಕ್ಷಕರು ಉದ್ಯೋಗ ಕಳೆದುಕೊಂಡಾಗ, ಕೆಲವರ ತಪ್ಪಿಗೆ ಎಲ್ಲರನ್ನೂ ಶಿಕ್ಷಿಸಬೇಡಿ ಎಂದು ಪಕ್ಷವು ನ್ಯಾಯಾಲಯಗಳನ್ನು ಒತ್ತಾಯಿಸಿತ್ತು. ಈಗ ಬಂಗಾಳದಲ್ಲಿ ಅವರು ಇದಕ್ಕೆ ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ. ನಾವು ಅನರ್ಹರನ್ನು ರಕ್ಷಿಸುವುದಿಲ್ಲ, ಆದರೆ ನ್ಯಾಯಯುತವಾಗಿ ನೇಮಕಗೊಂಡ 20,000ಕ್ಕೂ ಹೆಚ್ಚು ಶಿಕ್ಷಕರ ಪರವಾಗಿ ನಾವು ಯಾವಾಗಲೂ ನಿಲ್ಲುತ್ತೇವೆ” ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) 2016 ರಲ್ಲಿ ನೇಮಕ ಮಾಡಿದ್ದ ಸುಮಾರು 25,000 ( 25,753) ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿ ಅಮಾನ್ಯಗೊಳಿಸಿದ ಕಲ್ಕತ್ತಾ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 3ರಂದು ಎತ್ತಿಹಿಡಿದಿದೆ.
ಶಾಲೆಗಳಲ್ಲಿನ ನೇಮಕಾತಿಗಳನ್ನು ರದ್ದುಗೊಳಿಸಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠ ತೀರ್ಪು ಪ್ರಕಟಿಸಿದೆ.
“ಇಡೀ ನೇಮಕಾತಿ ಪ್ರಕ್ರಿಯೆ ಸರಿಪಡಿಸಲಾಗದಷ್ಟು ಕಲುಷಿತಗೊಂಡಿದೆ. ನೇಮಕಾತಿಯಲ್ಲಿ ದೊಡ್ಡ ಮಟ್ಟದ ವಂಚನೆ ನಡೆದಿದೆ. ಅದನ್ನು ಮುಚ್ಚಿ ಹಾಕಲು ಇಡೀ ಆಯ್ಕೆ ಪ್ರಕ್ರಿಯೆಯನ್ನು ಹಾಳುಗೆಡವಲಾಗಿದೆ. ಆಯ್ಕೆ ಪ್ರಕ್ರಿಯೆಯ ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆಯನ್ನು ನಗ್ನಗೊಳಿಸಿದೆ” ಎಂದು ತೀರ್ಪು ಪ್ರಕಟಿಸುತ್ತಾ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹೇಳಿದ್ದಾರೆ.


