ಪ್ರಧಾನ ಮಂತ್ರಿಯೋ ಅಥವಾ ಕೇಂದ್ರ ಮಂತ್ರಿಯೋ ಆಗಬೇಕು ಎನ್ನುವ ಆಸೆ ನನಗಿಲ್ಲ ಎಂದು ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಬಾದಾಮಿಯ ಗುಳೇದಗುಡ್ಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ,”ರಾಷ್ಟ್ರ ರಾಜಕಾರಣಕ್ಕೆ ಹೋಗಲು ನನಗೆ ಇಷ್ಟವಿಲ್ಲ. ಮನುಷ್ಯ ತನ್ನ ಶಕ್ತಿ ಮೀರಿ ಯೋಚಿಸಬಾರದು. ಪ್ರಧಾನ ಮಂತ್ರಿ, ಕೇಂದ್ರ ಮಂತ್ರಿ ಆಗಬೇಕು ಅನ್ನೋ ಆಸೆ ನನಗಿಲ್ಲ. ಹೀಗಾಗಿ ದೆಹಲಿ ರಾಜಕಾರಣಕ್ಕೆ ಹೋಗುವುದಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ರೈತರನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ, ನೀವು ಉಪವಾಸ ಕೈಗೊಳ್ಳಿ: ಅರವಿಂದ್ ಕೇಜ್ರಿವಾಲ್ ಕರೆ
ಗ್ರಾಮ ಪಂಚಾಯಿತಿಯ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
“ರಾಜಕಾರಣದಲ್ಲಿ ಜಾತಿ, ದುಡ್ಡು ಯಾವುದೂ ಮುಖ್ಯ ಅಲ್ಲ. ಪ್ರಜಾಪ್ರಭುತ್ವದ ಮೌಲ್ಯ ಅಳವಡಿಸಿಕೊಳ್ಳುವುದು ಮುಖ್ಯ. ತಾಲ್ಲೂಕು ಬೋರ್ಡ್ ಮೆಂಬರ್ ಆಗಿ ಕೆಳಹಂತದಿಂದ ರಾಜಕೀಯಕ್ಕೆ ಬಂದವನು ನಾನು. ಇಲ್ಲಿಗೆ ನನ್ನದು ಕೊನೆಯದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶೂದ್ರರಿಗೆ ಜ್ಞಾನವಿಲ್ಲ, ಹಾಗಾಗಿಯೇ ತಾವು ಶೂದ್ರರು ಎಂದು ಒಪ್ಪಿಕೊಳ್ಳುವುದಿಲ್ಲ: ಪ್ರಗ್ಯಾ ಠಾಕೂರ್
“ಕಾಂಗ್ರೆಸ್ ಮುಕ್ತ ಭಾರತ ಮಾಡ್ತೀವಿ ಎನ್ನುತ್ತಿರುವ ಮೋದಿಯವರೇ, ನೆನಪು ಮಾಡಿಕೊಳ್ಳಿ 1980ರಲ್ಲಿ ನೀವು ಎರಡೇ ಸ್ಥಾನ ಗೆದ್ದಿದ್ರಿ. ಪ್ರಜಾಪ್ರಭುತ್ವದಲ್ಲಿ ಕಾಲಚಕ್ರ ತಿರುಗುತ್ತಿರುತ್ತದೆ. ಮೇಲಿದ್ದವರು ಕೆಳಗೆ ಬರಲೇಬೇಕು. ಕೆಳಗೆ ಇದ್ದವರು ಮೇಲೆ ಹೋಗಲೇಬೇಕು. ರಾಜಕಾರಣ ಅನ್ನೋದು ಗಣಿತ ಅಲ್ಲ” ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯನವರು ರಾಷ್ಟ್ರ ರಾಜಕಾರಣಕ್ಕೆ ಬರಲೇ ಬೇಕು ಎಂದು ಮೊದಲಿನಿಂದಲೂ ಹಲವರು ಒತ್ತಾಯಿಸುತ್ತಿದ್ದಾರೆ. ಆದರೆ ತಾನು ಇದರ ಭಾಗವಾಗುವುದಿಲ್ಲ ಎಂದು ಸಿದ್ದರಾಮಯ್ಯ ಪದೇ ಪದೇ ಸ್ಪಷ್ಟಪಡಿಸುತ್ತಿದ್ದಾರೆ.
ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ಬಿಜೆಪಿಯ ಬೆಳವಣಿಗೆ: ರಥಗಳು ಸ್ತಬ್ಧಗೊಂಡ ಪ್ರದೇಶ


