Homeಮುಖಪುಟನಾನೊಂದ ಬುಕ್ಕ ಕಂಡೆ: ಪುಸ್ತಕ ಸಂಗ್ರಹ ಲೋಕದ ಕುರಿತ ಪ್ರಬಂಧ

ನಾನೊಂದ ಬುಕ್ಕ ಕಂಡೆ: ಪುಸ್ತಕ ಸಂಗ್ರಹ ಲೋಕದ ಕುರಿತ ಪ್ರಬಂಧ

ಯಾವ ಇತರ ಗ್ರಂಥದ ಆಧಾರವೂ ಇಲ್ಲದೆ, ಸ್ವಕಪೋಲಕಲ್ಪಿತವಾಗಿಯೇ ಆ ತರದ ಕಥೆಗಳನ್ನು ರಚಿಸುವುದು ಸುಲಭಸಾಧ್ಯವೇ ಅಲ್ಲವೇ, ಎಂಬುದನ್ನು ಪರೀಕ್ಷಿಸಲೋಸುಗ “ಜಯಚಂದ್ರ”ವೆಂಬೀ ಚಿಕ್ಕ ಪುಸ್ತಕವು ಬರೆಯಲ್ಪಟ್ಟಿತು.

- Advertisement -
- Advertisement -

ಈ ಒಂದು ಕಥೆ ಇಂದ ಶುರು ಮಾಡಿದರೆ ಪುಸ್ತಕ ಮಾರಾಟಗಾರ ಮತ್ತು ಗ್ರಾಹಕನ ನಡುವಿನ ನಂಬಿಕೆಯ ಹರಣ ಎಂದೆನ್ನಿಸಬಹುದು. ಅದಕ್ಕಾಗಿ ಮೊದಲೇ ಕ್ಷಮೆ ಕೇಳಿ ಮುಂದುವರೆಯುತ್ತೇನೆ. ನಾನು ನಡೆಸುವ ಪುಸ್ತಕದ ಅಂಗಡಿಗೆ ರೆಗ್ಯಲರ್ ಆಗಿ ಬರುವ ಒಬ್ಬ ಹಿರಿಯರು ಒಂದು ದಿನ ಸಾಕಷ್ಟು ಪುಸ್ತಕಗಳನ್ನು ಕೊಂಡುಕೊಂಡು, ಕೊನೆಗೆ ಸಾರ್ ನೀವು ಸಂಜೆ ನಮ್ಮ ಮನೆಗೆ ಬಂದು ಪುಸ್ತಕಗಳನ್ನು ತಂದುಕೊಡಕ್ಕೆ ಆಗುತ್ತಾ ಅಂದರು. ಬೇರೆಲ್ಲೋ ಹೋಗುತ್ತಿದ್ದಾರೇನೋ ಅಂದುಕೊಂಡು ಆಯ್ತು ಸರ್ ಅಂದೆ. ಸರ್, ಆದರೆ ಮನೆಯಲ್ಲಿ ಇವನ್ನು ನಾನು ಕೊಂಡುಕೊಂಡೆ ಅಂತ ಹೇಳಬೇಡಿ. ನೀವು ಗಿಫ್ಟ್ ಕೊಡ್ತಾ ಇದ್ದೀನಿ ಅಂತ ಹೇಳಿ. ಇಲ್ಲ ಅಂದರೆ ಮನೇಲ್ಲಿ ಬೈತಾರೆ ಅಂದರು. ಇಷ್ಟು ನಯವಾಗಿ ಸುಳ್ಳು ಹೇಳುವುದು ಸಾಧ್ಯ ಇಲ್ಲ ಅಂದುಕೊಂಡು, ಕೊನೆಗೆ ನಾನು ಬೈಸಿಕೊಳ್ಳುವಂತಾದರೆ ಎಂದು ಹೆದರಿ ನಾನು ಅವರ ಮನೆಗೆ ಪುಸ್ತಕಗಳನ್ನು ತಲುಪಿಸುವುದರಿಂದ ಹೇಗೋ ತಪ್ಪಿಸಿಕೊಂಡೆ.

ಪುಸ್ತಕ ಮಾರಾಟಗಾರನಾಗಿ ಹೀಗೆ ಹೇಳುವುದು ಎಷ್ಟು ಸರಿಯೋ ಗೊತ್ತಿಲ್ಲ. ಆದರೆ ಈ ಪುಸ್ತಕ ಕೊಳ್ಳುವ ಮತ್ತು ಸಂಗ್ರಹಿಸುವ ಅಂದರೆ ನಾವು ಓದುವ ಸಾಮಥ್ರ್ಯಕ್ಕಿಂತಲೂ ಹೆಚ್ಚು ಸಂಗ್ರಹಿಸಿಡುವ ಗೀಳು ಹುಚ್ಚಾಗಿ ಪರಿವರ್ತನೆ ಆದಮೇಲೆ ಬಹುಶಃ ಅದನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ ಅನ್ನಿಸತ್ತೆ. ಇದಕ್ಕೆ ಜಪಾನಿ ಭಾಷೆಯಲ್ಲಿ “Tsundoku” ಎಂಬ ಪದ ಕೂಡ ಇದೆಯಂತೆ. ಪುಸ್ತಕಗಳನ್ನು ಓದುವುದರಿಂದ ಮಕ್ಕಳಿಗೆ ಹುಚ್ಚು ಹಿಡಿಯತ್ತೆ ಎಂದು ಅವರ ಕಾಮಿಕ್‍ಗಳನ್ನು ಪೋಷಕರು ಸುಟ್ಟುಹಾಕಿರುವ ಕಥೆಗಳನ್ನು ನಾನು ಕೇಳಿದ್ದೀನಿ. ಇಲ್ಲಿ ಹುಚ್ಚು ಯಾರಿಗೋ ಅದು ಬದಿಗಿರಲಿ ಆದರೆ ಪುಸ್ತಕ ಸಂಗ್ರಹದ ಹುಚ್ಚು ಬಿಡಿಸುವ ಮಾಂತ್ರಿಕರಾಗಲೀ, ಅಥವಾ ಅದಕ್ಕಾಗಿ ಕೌನ್ಸೆಲ್ ಮಾಡುವವರ ಬಗ್ಗೆಯಾಗಲೀ ಜಗತ್ತಿನ ಯಾವ ದೇಶದಲ್ಲಾದರು ಇರುವುದರ ಬಗ್ಗೆ ನಾನು ಕೇಳಿಲ್ಲ. ಅಂದ ಹಾಗೆ ಒಂದು ಕಡೆಗೆ ಪುಸ್ತಕ ಮಾರಾಟ ಮಾಡುವ ನನಗೆ ಅವುಗಳನ್ನು ಸಂಗ್ರಹಿಸುವ, ಮನೆಯಲ್ಲಿ ಪೇರಿಸಿ ಇಟ್ಟುಕೊಳ್ಳುವ ಹುಚ್ಚು ಕೂಡ ಇದೆ. ನನ್ನ ಹುಚ್ಚನ್ನ ಪೋಷಿಸುವ ಕುಟುಂಬ ಸದಸ್ಯರೂ ಇರುವುದರಿಂದ ಸದ್ಯಕ್ಕೆ ಎಲ್ಲವೂ ಸುಸೂತ್ರವಾಗಿ ನಡೆದಿದೆ.

ಅಂದ ಹಾಗೆ ಹೇಳಬೇಕಿರುವ ಕಥೆ ಬೇರೆ ಮಗ್ಗುಲಿಗೆ ಹೊರಳಿತು. ಕೊರೊನಾ ದಿನಗಳಲ್ಲಿ ಹೊರ ಬೀಳಲು ಸಾಧ್ಯ ಆಗದೆ ಅಪರೂಪದ ಪ್ರಾಚೀನ ಪುಸ್ತಕಗಳ ಹುಡುಕಾಟ ಮತ್ತು ಸಂಗ್ರಹಕ್ಕೆ ದೊಡ್ಡ ಬ್ರೇಕ್ ಬಿದ್ದಿತ್ತು. ಈ ಮನೋವೇದನೆಗೆ ಪರಿಹಾರವೆಂಬಂತೆ ಕಳೆದ ವಾರ ಪುಸ್ತಕಗಳ ಅನ್ವೇಷಣೆಯಲ್ಲಿ ತೊಡಗಿದ್ದಾಗ ದೊಡ್ಡ ಭಂಡಾರವೇ ದೊರೆಯಿತು. ಹತ್ತುಹಲವು ಅಪರೂಪದ ಪುಸ್ತಕಗಳಲ್ಲಿ ಹೆಚ್ಚು ಗಮನ ಸೆಳೆದಿದ್ದು Jeyachandra ಎಂದು ಇಂಗ್ಲಿಷಿನಲ್ಲೂ ಜಯಚಂದ್ರ ಎಂದು ಕನ್ನಡದಲ್ಲೂ ಶೀರ್ಷಿಕೆಯಿದ್ದ, 1922ರಲ್ಲಿ ಪ್ರಕಟವಾದ ಪುಸ್ತಕ ಕಣ್ಣಿಗೆ ಬಿದ್ದಾಗ. ಪ್ರಕಟವಾಗಿ ಮುಂದಿನ ವರ್ಷಕ್ಕೆ ಶತಕ ಹೊಡೆಯುವ ಈ ಪುಸ್ತಕ ಯಾವುದರ ಬಗ್ಗೆ ಎಂದು ಪುಟತಿರುಗಿಸಿದರೆ ಇದು ಕಲ್ಪನಾ ಕಥಾವಳಿ (Novel) ಪ್ರಕಾರದ್ದು ಎಂದು ‘ಅವತರಿಣಿಕೆ’ ಎಂಬ ಪುಟ್ಟ ಮುನ್ನುಡಿ ರೂಪದ ಬರಹದಲ್ಲಿ ಇದರ ರಚನಕಾರ ಕೋಲಾರದ ಹೈಸ್ಕೂಲ್ ಕರ್ಣಾಟಕೋಪಾಧ್ಯಾಯ ಪಂಡಿತ ಕೆ.ಆರ್.ನರಸಿಂಹಯ್ಯನವರು ನಮೂದಿಸಿದ್ದರು. ಪ್ರಕಟಣಾ ವರ್ಷ ಹಿಂದಕ್ಕೆ ಹೋದಂತೆ ಅಂತಹ ಪುಸ್ತಕದ ಬೆಲೆ ಸಾಕ್ಷೇಪವಾಗಿ ಏರುತ್ತದೆ. ಅಪರೂಪದ-ವಿರಳ ಪುಸ್ತಕದ ಮಾರುಕಟ್ಟೆ ಇರುವುದೇ ಹಾಗೆ! ಪುಸ್ತಕದ ವಿಷಯಕ್ಕಿಂತ ಪುಸ್ತಕದ ಪ್ರಾಚೀನತೆಯೇ ಮುಖ್ಯವಾಗುತ್ತದೆ. ಬೆಲೆ 10 ಆಣೆಯ ಆ ಪುಸ್ತಕಕ್ಕೆ ನಾನು ಕೊಟ್ಟ ಹಣ ಎಷ್ಟು ಎಂಬ ಕುತೂಹಲ ಹಾಗೆಯೇ ಇರಲಿ.

ಈ ನಾವೆಲ್ ಪ್ರಕಾರಕ್ಕೆ ಕನ್ನಡದಲ್ಲಿ ಕಾದಂಬರಿ ಎಂಬ ಹೆಸರು ಹೇಗೆ ಬಂತು ಮತ್ತು ಯಾವಾಗ ಬಂತು ಎಂಬುದು ದೊಡ್ಡ ಕುತೂಹಲಕಾರಿ ಸಂಗತಿ. ಅಂದೇ ಸಿಕ್ಕಿದ 1928ರಲ್ಲಿ ಪ್ರಕಟವಾದ ‘ಮುಸುಕು ತೆಗೆಯೇ ಮಾಯಾಂಗನೆ’ ಪುಸ್ತಕದಲ್ಲಿ ಕೂಡ ಅದು ಕಾದಂಬರಿ ಎಂದು ಎಲ್ಲೂ ನಮೂದಿಸಿಲ್ಲ. ನನಗೆ ತಿಳಿದಂತೆ ತೆಲುಗಿನಲ್ಲಿ ಇಂದಿಗೂ ಈ ಪ್ರಕಾರಕ್ಕೆ ‘ನವಲ’ ಅಂತಲೇ ಬಳಕೆ ಇದೆ. ಎಲ್ಲದ್ದಕ್ಕೂ ತಮಿಳು ಭಾಷೆಯ ಪದಗಳನ್ನೆ ನಾಮಕರಣ ಮಾಡಿಕೊಳ್ಳುವ ತಮಿಳುನಾಡಿನಲ್ಲಿಯೂ ‘ನಾವಲ್’ ಅಂತಲೇ ಹೆಚ್ಚು ಜನಪ್ರಿಯ. ಡಾ.ರಹಮತ್ ತರೀಕೆರೆ ಅವರು ‘ಕನ್ನಡ ಸಾಹಿತ್ಯ ವಾಗ್ವಾದಗಳು’ ಪುಸ್ತಕದ ಎರಡನೇ ಅಧ್ಯಾಯ ‘ನಾವಲು’ ವಾಗ್ವಾದದಲ್ಲಿ 20ನೇ ಶತಮಾನದ ಮೊದಲ ಮತ್ತು ಎರಡನೇ ದಶಕದಲ್ಲಿ ನಾವಲುಗಳನ್ನು ಬರೆದ ನಂಜನಗೂಡು ತಿರುಮಲಾಂಬ ಅವರ ಕೃತಿಗಳನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ವಿಮರ್ಶೆ ಮಾಡಿದ ನಂತರ ಹುಟ್ಟಿದ ವಾಗ್ವಾದಗಳ ಬಗ್ಗೆ ಬರೆಯುತ್ತಾ “ನಾವಲು ಪ್ರಕಾರಕ್ಕೆ ‘ಕಾದಂಬರಿ’ ಎಂಬ ಹೆಸರು ಬರಲು ಕಾರಣವಾಗಿದ್ದು, ಬಾಣ ಕವಿಯ ‘ಕಾದಂಬರಿ’ ಎಂಬ ಗದ್ಯಕೃತಿಯ ಕನ್ನಡಾನುವಾದ.” ಎನ್ನುತ್ತಾರಲ್ಲದೆ, ಅನುಬಂಧ ಟಿಪ್ಪಣಿಯಲ್ಲಿ ಗಂಗಾಧರೇಶ್ವರ ಮಡಿವಾಳೇಶ್ವರ ತುರುಮರಿಯವರ ಈ ಅನುವಾದ 1875ರಲ್ಲಿ ಪ್ರಕಟವಾಯಿತು ಎಂದು ತಿಳಿಸುತ್ತಾರೆ. ಮುಂದಿನ ದಿನಗಳಲ್ಲಿ 1875ರಲ್ಲಿ ಪ್ರಕಟವಾದ ಈ ಪುಸ್ತಕವನ್ನು ಹುಡುಕಿ ನನ್ನ ಸಂಗ್ರಹದಲ್ಲಿ ಸೇರಿಸಬೇಕೆಂದು ತರೀಕೆರೆ ಅವರ ಪುಸ್ತಕದ ಮಾರ್ಜಿನ್‍ನಲ್ಲಿ ಬರೆದುಕೊಂಡಿದ್ದೇನೆ.

ಆದರೆ ನಾನು ಕಾದಂಬರಿ (ಇದೇ ನಾಮಸೂಚಕ ಬಳಸಿ) ಬರೆದಿದ್ದೇನೆ ಎಂದು ಹೇಳಿಕೊಂಡ ಮೊದಲ ಕನ್ನಡದ ಲೇಖಕ ಯಾರು ಎಂಬುದು ನನಗಿನ್ನೂ ಯಕ್ಷಪ್ರಶ್ನೆಯಾಗಿಯೇ ಉಳಿಸಿದೆ. ಕನ್ನಡದ ಮೊದಲ ಕಾದಂಬರಿ ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ’ ಎಂಬುದು ಇಲ್ಲಿಯವರೆಗೂ ಒಪ್ಪಿತ ಅಭಿಮತ. 1899ರಲ್ಲಿ ಈ ಕೃತಿ ಮೊದಲು ಪ್ರಕಟವಾಗಿದೆ. ನೆರೆಯ ಮರಾಠಿ, ದೂರದ ಬೆಂಗಾಳಿ, ಹಿಂದಿ, ಉರ್ದು ಭಾಷೆಗಳಲ್ಲಿ ಈ ಪ್ರಕಾರದಲ್ಲಿ ಮೂಡಿರುವ ಕೃತಿಗಳಿಗೆ ಹೋಲಿಸಿದರೆ, 20-25 ವರ್ಷಗಳ ನಂತರ ಕನ್ನಡದಲ್ಲಿ ಸ್ವತಂತ್ರ ಕಾದಂಬರಿಯೊಂದು ಮೂಡಿಬಂದಿದೆ ಎಂದು ಹಲವು ಪಂಡಿತರ ಅಭಿಪ್ರಾಯ. ಕನ್ನಡದಲ್ಲಿ ಗುಲ್ವಾಡಿ ವೆಂಕಟರಾಯರು, ಗಳಗನಾಥರು (ವೆ.ತಿ.ಕುಲಕರ್ಣಿ), ಎಂ.ಎಸ್.ಪುಟ್ಟಣ್ಣ, ನಂಜನಗೂಡು ತಿರುಮಲಾಂಬ ಮತ್ತು ನನಗೆ ಸಿಕ್ಕ ಪುಸ್ತಕದ ಲೇಖಕ ಕೆ.ಆರ್.ನರಸಿಂಹಯ್ಯ ಕನ್ನಡದ ಆರಂಭದ ಕಾದಂಬರಿಕಾರರಲ್ಲಿ ಕೆಲವರು.

ಈ ‘ಜಯಚಂದ್ರ’ ಏನಿರಬಹುದೆಂದು ಒಳಹೊಕ್ಕಂತೆ ನರಸಿಂಹಯ್ಯನವರು ‘ಅವತರಿಣಿಕೆ’ಯಲ್ಲಿ ನಿವೇದಿಸಿಕೊಂಡ ಮಾತುಗಳು ಗಮನ ಸೆಳೆದವು. “ಈಗ ಸಾಧಾರಣವಾಗಿ ನಾವು ನೋಡುತ್ತಿರುವಂತೆ, ಸಂಸ್ಕೃತ, ಇಂಗ್ಲೀಷ್, ಬಂಗಾಳಿ, ಮಹಾರಾಷ್ಟ್ರ ಮೊದಲಾದ ಭಾಷೆಗಳಲ್ಲಿ ಅಪರಿಮಿತವಾದ ಕಲ್ಪನಾ ಕಥಾವಳಿ (Novels) ರಚಿಸಲ್ಪಟ್ಟು ಇರುವುದಲ್ಲದೆ, ಇವುಗಳಿಂದ ಭಾಷಾಂತರವಾದ ಅನೇಕ ಪುಸ್ತಕಗಳು ಪ್ರಚಾರದಲ್ಲಿವೆ. ಈಗ ಮೈಸೂರು ದೇಶದಲ್ಲಿ ವಾಚಕರ ಮನಸ್ಸನ್ನು ಆಕರ್ಷಿಸುತ್ತಿರುವ ಕನ್ನಡದ ನವನ್ಯಾಸಗಳೆಲ್ಲಾ ಪ್ರಾಯಶಃ ಇಂತಹವೇ ಎಂದೂ, ನಿರ್ಮಾತೃಕೆಗಳಾದ ಈ ಗ್ರಂಥಗಳು ಕೇವಲ ವಿರಳವೆಂದೂ ಅನೇಕರು ಹೇಳುವರು.

“ಯಾವ ಇತರ ಗ್ರಂಥದ ಆಧಾರವೂ ಇಲ್ಲದೆ, ಸ್ವಕಪೋಲಕಲ್ಪಿತವಾಗಿಯೇ ಆ ತರದ ಕಥೆಗಳನ್ನು ರಚಿಸುವುದು ಸುಲಭಸಾಧ್ಯವೇ ಅಲ್ಲವೇ, ಎಂಬುದನ್ನು ಪರೀಕ್ಷಿಸಲೋಸುಗ “ಜಯಚಂದ್ರ”ವೆಂಬೀ ಚಿಕ್ಕ ಪುಸ್ತಕವು ಬರೆಯಲ್ಪಟ್ಟಿತು” ಎನ್ನುತ್ತಾರೆ.

ನಾವೆಲು ರಚಿಸುವುದು ಸುಲಭವೇ ಎಂದು ಪರೀಕ್ಷಿಸಿಕೊಳ್ಳಲು ಬರೆಯಲ್ಪಟ್ಟಿತು ಎಂಬ ಈ ನೇರ ಮಾತುಗಳೇ ಬಹುಶಃ ಈ ಪುಸ್ತಕ ಕೇವಲ ಸಂಗ್ರಹದಲ್ಲಿ ಒಂದಾಗಿ ಬೆರೆತು-ಮರೆತುಹೋಗದಂತೆ ಓದಿಸಿಕೊಳ್ಳಲು ನನಗೆ ಪ್ರೇರೇಪಿಸಿತು ಎನ್ನಬಹುದು. ವಿಮರ್ಶೆಗೆ ಇಳಿಯದೆ ಈ ಕಾದಂಬರಿಯ ಹೂರಣವನ್ನು ತಿಳಿಸದೆ ಮುಂದೆ ಹೋಗುವುದೇಗೆ? ಕಥಾಸರಿತ್ಸಾಗರ – ಅರೇಬಿಯನ್ ನೈಟ್ಸ್ ಕಥೆಯನ್ನು ಹೋಲುವ ಕಥಾಹಂದರವುಳ್ಳ ಜಯಚಂದ್ರನ ಕಥೆಯಲ್ಲಿ ಅಧ್ಯಾಪಕರೂ ಆಗಿರುವ ನರಸಿಂಹಯ್ಯನವರು ಅಂದಿಗೆ ಮೇಲುವರ್ಗ ಜನ ಕಟ್ಟಿಕೊಡಲು ಪ್ರಯತ್ನ ಮಾಡುತ್ತಿದ್ದ ನೀತಿ ಚಿಂತನೆಗಳನ್ನು ಪ್ರಚುರಪಡಿಸಲೋಸುಗ ಬರೆದ ಕಥಾನಕದ ಹಾಗೆ ಭಾಸವಾಗುತ್ತದೆ.

ವಿಜನವಾದೊಂದು ಅಡವಿಯಲ್ಲಿ ಮನಮೋಹಕವಾಗಿ ವೀಣೆ ನುಡಿಸುತ್ತಿರುವ ಸುಂದರಿ ಚಂದ್ರಪ್ರಭೆಯ ಮತ್ತು ಅದನ್ನು ಕೇಳಿ ಪ್ರಾಣಿಪಕ್ಷಿಗಳೇ ತಲೆದೂಗುತ್ತಿರುವ ವಿವರಣೆಯೊಂದಿಗೆ ಆರಂಭವಾಗುವ ಕಥೆಯು, ಬೇಟೆಗೆ ಹೊರಟು ಸಾರಗದ ಬೆನ್ನುಬಿದ್ದು ದಾರಿ ತಪ್ಪಿಸಿಕೊಂಡು ಅಡವಿ ಸೇರಿ ಈಕೆಯನ್ನು ಸಂಧಿಸುವ ಜಯಚಂದ್ರ –ಇವರ ಪೂರ್ವ ಕಥೆ – ನಂತರ ಅಡವಿಯಿಂದ ಇವರ ಬಿಡುಗಡೆ….. ಹೀಗೆ ರೋಚಕವಾಗಿ ಬೆಳೆಯುತ್ತದೆ. ಈ ಕಥಾನಕವು ಅಂದಿನ ‘ಆದರ್ಶ ಸ್ತ್ರೀ-ಪುರುಷರ’ ನೀತಿ ಕಲ್ಪನೆಗಳನ್ನು ತುಂಬಿಕೊಂಡಿದೆ. ಕೆಲವು ಕಡೆ ಪಾತ್ರಗಳ ಸನ್ನಿವೇಶಕ್ಕೆ ಕಾರ್ಯಕಾರಣ ಸಂಬಂಧಗಳನ್ನು ನಿರೂಪಕನೇ ಹೇಳಿದರೂ, ಕೆಲವೊಮ್ಮೆ ಕಾದಂಬರಿಯ ಪಾತ್ರಗಳು ಅದಕ್ಕಾಗಿ ಪ್ರಯತ್ನಿಸುವ ಕೆಲಸ ಮಾಡಿರುವಂತೆ ನಿರೂಪಿಸುತ್ತಾರೆ. ಉದಾಹರಣೆಗೆ: ಚಂದ್ರಪ್ರಭೆ ಮತ್ತು ಜಯಚಂದ್ರರು, ಚಂದ್ರಪ್ರಭೆಯನ್ನು ಹಿಡಿದಿಟ್ಟಿರುವ ರಾಕ್ಷಸಿಯ ಪೂರ್ವಾಪರಗಳನ್ನು ತಿಳಿಯಲು ತಂತ್ರಹೂಡುವುದು, ಅದು ತಿಳಿದ ನಂತರ ಅವಳನ್ನು (ಇಂದ್ರಸೇನೆ) ರಾಕ್ಷಸ ಜನ್ಮದಿಂದ ಮುಕ್ತಿಗೊಳಿಸಿ ಮನುಷ್ಯಳನ್ನಾಗಿಸುವುದು. ಅಪಾರ ನುಡಿಗಟ್ಟುಗಳನ್ನು, ಗಾದೆಗಳನ್ನು ಒಳಗೊಂಡಿರುವ ಈ ನಾವೆಲು ಪ್ರಾಚೀನ ಶೈಲಿಯಿಂದ ಆಧುನಿಕ ಪಶ್ಚಿಮದ ಮಾದರಿಯ ನಾವೆಲು ಮಾದರಿಗೆ ಮಾರ್ಪಾಡಾಗುತ್ತಿರುವ ಕಠಿಣತೆಯನ್ನು ತನ್ನೊಳಗೆ ಹಿಡಿದುಕೊಂಡಿದೆ.

ಇಂತಹ ಪ್ರಾಚೀನ ಗ್ರಂಥಗಳನ್ನು ಓದುವ ಔಚಿತ್ಯದ ಪ್ರಶ್ನೆ ಎಂದಿಗೂ ಕಾಡುವ ಸಂಗತಿ. ಪ್ರಾಚೀನ ಪುರಾಣ ಕಾವ್ಯಗಳಾದರೋ ಅವುಗಳ ಗೇಯತನ, ಧಾರ್ಮಿಕ ನಂಬಿಕೆಯ ಕಾರಣಗಳಿಗೆ ಮುಖ್ಯವಾದವು. ನಡುಕಾಲೀನದಲ್ಲಿ ಹರಿಹರನ ಬಸವರಾಜ ರಗಳೆಯಂತಹ ಕಾವ್ಯಗಳು ನಮಗೆ ಬಸವಣ್ಣನ ಜೀವನದ ಕೆಲವು ಸಂಗತಿಗಳನ್ನು ಅರಿತುಕೊಳ್ಳಲು ಸಹಕರಿಸಿದವು. ಆದರೆ ಈ ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದ ನಾವೆಲು ಮಾದರಿ ಬರಹಗಳ ಓದು ಒಂದು ದಟ್ಟಡವಿಯನ್ನು ಹೊಕ್ಕಂತೆ. ಅಲ್ಲಿ ಇಂದಿನ ಸಾಮಾಜಿಕ ಪರಿಸರಕ್ಕೆ ಅಥವಾ ನಾವು ಬಯಸುವ ಪ್ರಗತಿಪರ ಪರಿಸರಕ್ಕೆ ಹೋಲಿಸಿದರೆ ಹೆಚ್ಚು ಕಗ್ಗತ್ತಲೇ ಕಾಣಿಸುತ್ತದೆ. ಆದರೂ ಎಲ್ಲೋ ಒಂದು ಕಡೆ ಸಂದಿಗೊಂದಿಗಳಲ್ಲಿ ಬೆಳಕಿನ ಕಿರಣಗಳು ಮೂಡುತ್ತಿರುವುದನ್ನು ನಾವು ಗುರುತಿಸುವುದು ಮುಖ್ಯವಾದೀತೇನೋ! ‘ಜಯಚಂದ್ರ’ ಕಾದಂಬರಿಯಲ್ಲಿ ಚಂದ್ರಪ್ರಭೆ ಅಡವಿಯಲ್ಲಿ ಬಂಧಿಯಾಗಲು ಅವಳಿಗೆ ಇದ್ದ ಅಹಂಕಾರವೇ ಕಾರಣ (ಹೆಣ್ಣಿಗೆ ಇರಬಾರದು ಎಂಬ ಪುರುಷಾಧಿಪತ್ಯ ದೃಷ್ಟಿಕೋನ) ಎಂದು ಲೇಖಕರು ಬರೆಯುವಾಗಲೇ “ಲೋಕದ ಸಾಂಸಾರಿಕರಲ್ಲಿ ವಿವೇಕವುಳ್ಳ ಎಷ್ಟೋ ಮಂದಿ ಯುವತಿಯರು ಮೂಢಶಿಖಾಮಣಿಗಳಾದ ಗಂಡಂದಿರ ಕೈಗೆ ಸಿಕ್ಕಿ ನನಗಿಂತಲೂ ಹೆಚ್ಚಾಗಿ ನರಳುವುದಿಲ್ಲವೆ? ಅವರನ್ನು ರಕ್ಷಿಸುವವರಾರು?” ಎಂಬ ಮಾತುಗಳನ್ನು ಚಂದ್ರಪ್ರಭೆಯ ಬಾಯಲ್ಲಿ ಆಡಿಸುತ್ತಾರೆ. ಇದನ್ನು ಜಯಚಂದ್ರ ಕೇಳಿಸಿಕೊಳ್ಳುವಂತೆ ಮಾಡಿರುವುದು, ಅಡವಿಯ ಕಿಂಡಿಗಳಿಂದ ಸೂಸುತ್ತಿರುವ ಬೆಳಕಿನ ಕಿರಣಗಳಂತೆ, ಸಾಂಪ್ರದಾಯಿಕ ಮನಸ್ಥಿತಿಯಿಂದ ಆಧುನಿಕ ಮತ್ತು ಪ್ರಗತಿಪರ ವಿಚಾರಧಾರೆಗಳಿಗೆ ತೆರೆದುಕೊಳ್ಳುತ್ತಿರುವ ಸೂಚನೆಯಾಗಿ ಕಾಣುತ್ತದೆ.

ಹೂರಣದ ಮಾತು ಒತ್ತಟ್ಟಿಗಿರಲಿ. ನೂರು ವರ್ಷಗಳ ಹಿಂದೆ, ಮೊದಲನೇ ವಿಶ್ವಯುದ್ಧ ಮುಗಿದ ಕಾಗದದ ಅಭಾವವಿದ್ದ ಸಮಯದಲ್ಲಿ, ಮುದ್ರಣ ಇಂದಿನಷ್ಟು ಸರಳವಾಗಿದ್ದಿಲ್ಲದ ಸಮಯದಲ್ಲಿ ಬರೆದು, (ಇವತ್ತಿಗೆ ಮುಟ್ಟಿದರೆ ಮುರಿದು ಹೋಗುವಂತೆ ಇರುವ) ಆ ಕಾಗದವನ್ನು ಸಂಪಾದಿಸಿ, ಮೊಳೆ ಜೋಡಿಸುವ ತಂತ್ರಜ್ಞಾನದಲ್ಲಿ ಮುದ್ರಣ ಮಾಡಿ ಪ್ರಸಾರ ಮಾಡಿರುವ ಒಂದು ಪ್ರತಿ ಎಲ್ಲೆಲೋ ಹಾದು ಹೋಗಿ, ಪುಸ್ತಕದ ಮೇಲಿನ ಸೀಲು ಹೇಳುವಂತೆ “ಕೆ.ಆರ್.ಬಾಲಾಜಿ, ಪಿ.ಆರ್.ಶಾಂತಕುಮಾರಿ ರೀಡಿಂಗ್ ರೂಮ್ ಅಂಡ್ ಲೈಬ್ರರಿಯಲ್ಲಿ” ಒಂದಷ್ಟು ವರ್ಷವಾದರೂ ಇದ್ದು, ಬಹುಶಃ ಗುಜರಿ ಅಂಗಡಿ ಪಾಲಾಗಿ, ಅಲ್ಲಿಂದ ಸೆಕಂಡ್ ಹ್ಯಾಂಡ್ ಪುಸ್ತಕ ಅಂಗಡಿಗೆ ಸೇರಿ ಅದು ನನ್ನ ಕೈಸೇರಿರುವುದಕ್ಕೂ ಯಾವುದೋ ಕಾರ್ಯಕಾರಣ ಸಂಬಂಧ ಇಲ್ಲಾ ಅಂತೀರಾ?

ಒಂದು ಕಾಲದಲ್ಲಿ ಓದು-ಬರಹ ಒಂದು ಜಾತಿಯ ಜನರ, ಒಂದು ವರ್ಗದ ಸ್ವತ್ತಾಗಿತ್ತು. ಜರ್ಮನಿಯ ಜಾನ್ ಗುಟೇನ್‍ಬರ್ಗ್ ಅವರ ಮುದ್ರಣ ಸಂಶೋಧನೆಯಿಂದ ಮೊದಲಾಗಿ, ಮೆಕ್ಯಾನಿಕಲ್ ರಿಪ್ರೊಡಕ್ಷನ್ (ಯಾಂತ್ರಿಕ ಉತ್ಪಾದನೆ) ಸುಲಭವಾದ ಮೇಲೆ ಕಲೆಯ ಸ್ವರೂಪವೇ ಬದಲಾಗಿ (ಹೆಚ್ಚಿನ ತಿಳಿವಳಿಕೆಗಾಗಿ ವಾಲ್ಟರ್ ಬೆಂಜಮಿನ್ ಅವರ ‘ದ ವರ್ಕ್ ಆಫ್ ಆರ್ಟ್ ಇನ್ ದ ಏಜ್ ಆಫ್ ಮೆಕ್ಯಾನಿಕಲ್ ರಿಪ್ರೊಡಕ್ಷನ್’ ಪ್ರಬಂಧ ಓದಬೇಕು) ಕಲೆಯ ಮೇಲೆ ಒಂದೇ ಸಮುದಾಯಕ್ಕಿದ್ದ ಹಿಡಿತ ಒಂದು ಮಟ್ಟಿಗಾದರೂ ಕಡಿಮೆ ಆಗಿರುವುದನ್ನು ಈ ಪ್ರಾಚೀನ ಪುಸ್ತಕಗಳ ಉತ್ಪಾದನೆಯಿಂದ ಪ್ರಾರಂಭವಾಗಿ ಇಂದಿನವರೆಗೆ ಪುಸ್ತಕ ಪ್ರಕಾಶನ ನಡೆದು ಬಂದಿರುವ ದಾರಿಯ ಅವಲೋಕನ ನೆನಪಿಸುವುದಿಲ್ಲವೇ? ಈ ಡಿಜಿಟಲ್ ಯುಗದಲ್ಲಿ ಆ ಹಿಡಿತ ಇನ್ನೂ ಒಂದು ಮಟ್ಟಕ್ಕೆ ಬಿದ್ದುಹೋಗಿ ಓದು ಬರಹ ಹೆಚ್ಚು ಡೆಮಾಕ್ರಟೈಸ್ ಆಗಿರುವುದಂತೂ ನಿಜ ಅಲ್ಲವೇ? ಪೇಪರ್ ಕಂಡುಹಿಡಿದಿದ್ದು, ಮುದ್ರಣ ಅನ್ವೇಷಣೆಯಾಗಿದ್ದು, ಕಂಪ್ಯೂಟರ್ ಜೊತೆಗೆ ಡೆಸ್ಕ್‍ಟಾಪ್ ಪ್ರಕಟಣೆ ಮೂಡಿಬಂದಿದ್ದು ಇವೆಲ್ಲವೂ ಮನುಕುಲವನ್ನು ಬಹಳವಾಗಿ ಬದಲಾಯಿಸಿವೆ. ಈ ಎಲ್ಲ ತಂತ್ರಜ್ಞಾನದ ಅನ್ವೇಷಣೆಯ ಹೊಸತಿನಲ್ಲಿ ಅವುಗಳನ್ನು ಬಳಸಿಕೊಂಡು ಮೂಡಿದ ಎಲ್ಲ ಉತ್ಪನ್ನಗಳು ಕೂಡ ಮನುಕುಲ ಬದಲಾಗುವುದಕ್ಕೆ ಯಾವುದೋ ಒಂದು ರೀತಿಯಲ್ಲಿ ಕೊಡುಗೆ ನೀಡಿವೆ. ಒಂದೊಂದೇ ಬಿಡಿಯಾಗಿ ಅಲ್ಲದೆ ಇದ್ದರೂ ಒಟ್ಟಾರೆಯಾಗಿ ಆ ವಿದ್ಯಮಾನವನ್ನು ಹಿಡಿದು ಚರ್ಚಿಸಿ ಆ ಹಳೆಯುಗದ ತಿಳುವಳಿಕೆಯ ಹಿನ್ನೆಲೆಯಲ್ಲಿ ಹೊಸ ದಾರಿಗಳನ್ನು ಹುಡುಕಿಕೊಳ್ಳುವುದು ಮುಖ್ಯ. ಅಂತಹ ವಿದ್ಯಮಾನಕ್ಕೆ ‘ಜಯಚಂದ್ರ’ದ್ದೂ ಅಲ್ಪ ಕೊಡುಗೆ ಇದ್ದೀತು.

  • ಆಕೃತಿ ಗುರುಪ್ರಸಾದ್

ಇದನ್ನು ಓದಿ: ಆರ್ಯ-ಅನಾರ್ಯರ ನಡುವಿನ ಕಾಳಗ ಮತ್ತು ಮಿಲನ: ಗೊಂಡಿಯರ ಸಂಭೂ ಶೇಖರ ಶಂಭೋ ಶಂಕರನಾದ ಕಥೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...