Homeಕರ್ನಾಟಕ‘ರಮೇಶ್‌ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುತ್ತೇನೆ’ - ಸಿಡಿ ಹಗರಣದ ಸಂತ್ರಸ್ತೆ ಯುವತಿ

‘ರಮೇಶ್‌ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುತ್ತೇನೆ’ – ಸಿಡಿ ಹಗರಣದ ಸಂತ್ರಸ್ತೆ ಯುವತಿ

- Advertisement -

ರಾಜ್ಯದಾದ್ಯಂತ ಭಾರಿ ಸುದ್ದಿಯಾಗಿದ್ದ ಸಿಡಿ ಹಗರಣದ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದವರು ಎಂದು ಹೇಳಲಾಗಿರುವ ಯುವತಿ ಇದೀಗ ಶನಿವಾರ ಬೆಳಿಗ್ಗೆ ನಾಲ್ಕನೆ ವಿಡಿಯೊವನ್ನು ಹರಿಬಿಟ್ಟಿದ್ದಾರೆ. ಯುವತಿಯು ಹೊಸ ವಿಡಿಯೊದಲ್ಲಿ, “ರಮೇಶ್ ಜಾರಕಿಹೊಳಿ ಅವರ ಹೆಸರು ಬರೆದಿಟ್ಟು ಸಾಯುವಷ್ಟು ಕಿರುಕುಳ ಆಗುತ್ತಿದೆ” ಎಂದು ಹೇಳಿದ್ದಾರೆ.

ವಿಡಿಯೊದಲ್ಲಿ ಅವರು, “ನನಗೆ ಬದುಕಬೇಕೊ, ಸಾಯಬೇಕೊ ಎಂದು ಒಂದೂ ತಿಳಿಯುತ್ತಿಲ್ಲ. ಯಾವುದೆ ಮಾಹಿತಿ ಸಿಕ್ಕರೂ, ಅದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂದು ಪರಿಗಣಿಸಿ ಆ ನಂತರ ಅದನ್ನು ಸುದ್ದಿ ಮಾಡಬೇಕು” ಎಂದು ಮಾಧ್ಯಮದೊಂದಿಗೆ ವಿನಂತಿ ಮಾಡಿದ್ದಾರೆ.

ಇದನ್ನೂ ಓದಿ: ಸಂತ್ರಸ್ತೆಗೆ ಭಯ ಹುಟ್ಟಿಸುತ್ತಿರುವ ರಮೇಶ್ ಜಾರಕಿಹೊಳಿ ಬಂಧಿಸಿ: ಮಹಿಳಾ ಕಾಂಗ್ರೆಸ್ ಒತ್ತಾಯ

‘‘ಮಾರ್ಚ್ 2 ರಂದು ಸಿ.ಡಿ. ರಿಲೀಸ್ ಆಗುತ್ತಿದ್ದಂತೆ, ನನಗೆ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು, ಇದನ್ನು ಯಾರು, ಯಾಕಾಗಿ ಮಾಡಿದ್ದಾರೆ ಎಂಬುದು ತಿಳಿಯಲಿಲ್ಲ. ಮಾಧ್ಯಮದಲ್ಲಿ ಸುದ್ದಿ ಬರುತ್ತಿದ್ದಂತೆ ಸುದ್ದಿ ವಾಹಿನಿಯಲ್ಲಿದ್ದ ನರೇಶ್ ಅಣ್ಣನನ್ನು ಸಂಪರ್ಕಿಸಿದೆ. ಆಗ ‘ಇದಕ್ಕೆಲ್ಲ ರಾಜಕೀಯ ಬೆಂಬಲ‌ ಬೇಕು. ನಾವು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಜೊತೆ‌ ಮಾತನಾಡೋಣ’ ಎಂದು ಅವರು ಧೈರ್ಯ ಹೇಳಿದ್ದರು’’ ಎಂದು ಯುವತಿ ವಿಡಿಯೊದಲ್ಲಿ ತಿಳಿಸಿದ್ದಾರೆ.

“ಮನೆಯಿಂದಲೂ ನಿರಂತರವಾಗಿ ಕರೆಗಳು ಬರುತ್ತಿದ್ದವು. ಅವರೆಲ್ಲ ಭಯಗೊಂಡಿದ್ದು, ಅವರನ್ನು ಸಮಾಧಾನ ಮಾಡಿದ್ದೆ. ಆನಂತರ ನಾವು ಡಿ.ಕೆ. ಶಿವಕುಮಾರ್‌ ಅವರ ಮನೆಯ ಬಳಿ ಹೋಗಿದ್ದೆವು. ಆದರೆ ನಮಗೆ ಅವರನ್ನು ಭೇಟಿಯಾಗಲು ಆಗಲಿಲ್ಲ. ಅಷ್ಟೊತ್ತಿಗೆ ಏನೇನೋ ಆಗ್ಬಿಟ್ಟಿತ್ತು. ಆನಂತ ನಾವು ಅಲ್ಲಿಂದ ವಾಪಾಸು ಬಂದೆವು” ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ‘ಮಹಾನ್ ನಾಯಕ ಡಿ.ಕೆ ಶಿವಕುಮಾರ್ ವಿರುದ್ಧ ಕನಕಪುರಕ್ಕೆ ಬಂದು ಹೋರಾಡುತ್ತೇನೆ’: ರಮೇಶ್ ಜಾರಕಿಹೊಳಿ

“ನನ್ನ ತಂದೆ ತಾಯಿ ಸೇರಿದಂತೆ ಕುಟುಂಬ ಅಪಾಯದಲ್ಲಿದೆ ಎಂದು ನನಗೆ ಅನಿಸುತ್ತಿದೆ. ತಂದೆ-ತಾಯಿ, ಸಹೋದರನ ಮೊಬೈಲ್ ಸಂಭಾಷಣೆ ಎಲ್ಲೆಡೆ ಹರಿದಾಡುತ್ತಿದೆ. ಅವರು ಎಲ್ಲಿದ್ದಾರೆ ಎಂದು ನನಗೆ ತಿಳಿದಿಲ್ಲ. ಅವರನ್ನು ಬೆಂಗಳೂರಿಗೆ ಕರೆ ತಂದು ಅವರಿಗೆ ರಕ್ಷಣೆ ನೀಡಬೇಕು. ನಾನು ಸುರಕ್ಷಿತವಾಗಿದ್ದು, ನನ್ನನ್ನು ಯಾರೂ ಕಿಡ್ನಾಪ್‌ ಮಾಡಿಲ್ಲ. ಅವರ ಸಮ್ಮುಖದಲ್ಲೇ ನಾನು ಪೊಲೀಸರಿಗೆ ಹೇಳಿಕೆ ನೀಡುತ್ತೇನೆ” ಎಂದು ಅವರು ತಿಳಿಸಿದ್ದಾರೆ.

“ಕಳೆದ 24 ದಿನದಿಂದ ನನಗೆ ತುಂಬಾ ಕಿರುಕುಳವಾಗುತ್ತಿದೆ. ರಮೇಶ್ ಜಾರಕಿಹೊಳಿ ಅವರು ಎಷ್ಟೇ ದುಡ್ಡು ಖರ್ಚಾದರೂ ಎಲ್ಲರನ್ನೂ ಜೈಲಿಗೆ ಹಾಕಿಸುತ್ತೇನೆ, ನನ್ನ ಬಂಧಿಸಿದರೆ ಸರ್ಕಾರ ಉರುಳಿಸುತ್ತೇನೆ ಎನ್ನುತ್ತಿದ್ದಾರೆ. ಇದರ ಅರ್ಥವೇನು? ನನ್ನ ಅಪ್ಪ-ಅಮ್ಮ ಸೇರಿದಂತೆ ನನ್ನನ್ನೂ ಸಾಯಿಸಬಹುದು. ನನಗೆ ನೀಡುತ್ತಿರುವ ಕಿರುಕುಳಕ್ಕೆ ರಮೇಶ್ ಜಾರಕಿಹೊಳಿ ಅವರ ಹೆಸರು ಬರೆದಿಟ್ಟು ನಾನು ಸತ್ತು ಹೋಗಬೇಕು ಎಂದು ಅನಿಸುತ್ತಿದೆ” ಎಂದು ಯುವತಿಯು ವಿಡಿಯೊದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ ಸಂತ್ರಸ್ತ ಯುವತಿ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

Wordpress Social Share Plugin powered by Ultimatelysocial
Shares