Homeಅಂತರಾಷ್ಟ್ರೀಯಇಯಾನ್ ಜಾಕ್: ಭಾರತವನ್ನು ವಿಶಿಷ್ಟವಾಗಿ ಗ್ರಹಿಸಿದ ಫಾರಿನ್ ಕರೆಸ್ಪಾಂಡೆಂಟ್

ಇಯಾನ್ ಜಾಕ್: ಭಾರತವನ್ನು ವಿಶಿಷ್ಟವಾಗಿ ಗ್ರಹಿಸಿದ ಫಾರಿನ್ ಕರೆಸ್ಪಾಂಡೆಂಟ್

- Advertisement -
- Advertisement -

ನಮ್ಮ ಊರಿನ ಬಗ್ಗೆ ಕೆಲವೊಮ್ಮೆ ಹೊಸ ಹೊಳಹುಗಳನ್ನು ನೀಡಲು ಹೊರಗಿನವರಿಗೇ ಹೆಚ್ಚು ಸಾಧ್ಯ. ನಮಗೆ ಸಹಜವಾಗಿ ರೂಢಿ ಎನಿಸಿಬಿಟ್ಟಿರುವ, ಕೆಲವೊಮ್ಮೆ ಅಪ್ರಜ್ಞಾಪೂರ್ವಕವಾಗಿರುವ ಸಂಗತಿಗಳು ನಮಗೆ ಕಾಣಿಸುವುದೇ ಇಲ್ಲ. ಅದೇ ಪರ ಊರಿನವರಿಗೆ, ಭಿನ್ನ ಸಂಸ್ಕೃತಿಯಿಂದ ಬಂದವರಿಗೆ ಅವು ಸೋಜಿಗವೆನಿಸಿ, ಅವರು ಕಟ್ಟಿಕೊಡುವ ವಿವರಗಳು ನಮಗೇ ಹೊಸ ಹೊಳಹುಗಳನ್ನು ನೀಡಬಲ್ಲಷ್ಟು ಶಕ್ತವಾಗಿರಬಲ್ಲವು. ಈ ಹಿನ್ನೆಲೆಯಲ್ಲಿ ಫಾರಿನ್ ಕರೆಸ್ಪಾಂಡೆಂಟ್ಸ್‌ಗೆ ಜಗತ್ತಿನೆಲ್ಲೆಡೆ ಒಂದು ವಿಶೇಷ ಸ್ಥಾನಮಾನವಿದೆ. ಪ್ರತಿ ದೇಶದಲ್ಲಿಯೂ ಫಾರಿನ್ ಕರೆಸ್ಪಾಂಡೆಂಟ್‌ಗಳು ಬರೆಯುವ ಬರಹಗಳನ್ನು ಅಲ್ಲಿನ ಸ್ಥಳೀಯರೇ ಓದುವುದು ಹೆಚ್ಚು.

ವಸಾಹತುಶಾಹಿ ದೇಶವಾಗಿದ್ದ ಭಾರತವನ್ನು ಹೆಚ್ಚು ಆಪ್ತವಾಗಿ ಅರ್ಥ ಮಾಡಿಕೊಂಡು ಬರೆದ ವಿದೇಶಿ ಪತ್ರಕರ್ತರಲ್ಲಿ ಸಹಜವಾಗಿಯೇ ಬ್ರಿಟಿಷರು ಹೆಚ್ಚು. ಇದು ಸಮಸ್ಯಾತ್ಮಕವೂ ಹೌದು. ಅವರ ಬರವಣಿಗೆಯಲ್ಲಿ ವಸಾಹತು ಪ್ರಜ್ಞೆ ಎಷ್ಟಿರುತ್ತದೆ ಮತ್ತು ಹೊರಗಿನವರ ಸಹಜ ಸೋಜಿಗವೆಷ್ಟು ಎಂದು ಹೇಳುವುದು ದುಸ್ತರ. ಹಲವರು ಭಾರತದ ಬಗ್ಗೆ ಬಡ ಹಾವಾಡಿಗರ ದೇಶ ಎಂಬ ಸಮಸ್ಯಾತ್ಮಕ ಪೂರ್ವಾಗ್ರಹದಿಂದ ಬರೆದುದೇ ಹೆಚ್ಚು ಎಂಬುದು ದಿಟವೇ. ಆದರೆ ಇದರ ಮಧ್ಯೆ ಕೆಲವರು ಬಹುತೇಕ ಇಲ್ಲಿನವರೇ ಆಗಿ, ಪರಾನುಭೂತಿಯಿಂದ ಇಲ್ಲಿನ ಜನಜೀವನದ ಬಗ್ಗೆ ಆಸ್ಥೆಯಿಂದ ಬರೆದವರು ವಿರಳವೆನಿಸಿದರೂ ಇದ್ದಾರೆ. ಅದರಲ್ಲಿ ಇಬ್ಬರು ಮುಖ್ಯರು- ದಶಕಗಳ ಕಾಲ ಭಾರತದ ಬಿಬಿಸಿ ಕರೆಸ್ಪಾಂಡೆಂಟ್ ಆಗಿದ್ದ ಇಲ್ಲಿನವರೇ ಆಗಿ ಹೋಗಿರುವ ಸರ್ ಮಾರ್ಕ್ ಟಲ್ಲಿ ಮತ್ತು ಸ್ಕಾಂಟ್ಲೆಂಡ್ ಭಾಗದ ಇಯಾನ್ ಜಾಕ್.

ಹೆಚ್ಚು ಜನರಿಗೆ ಪರಿಚಿತರಲ್ಲದ ಇಯಾನ್ ಜಾಕ್ ಅಕ್ಟೋಬರ್ 2ರಂದು ತೀರಿಕೊಂಡರು. ಅವರ ಅಗಲಿಕೆಯ ಈ ನೆನಪಿನಲ್ಲಿಯಾದರೂ ಅವರ ಬರವಣಿಗೆಯನ್ನು ಹೆಚ್ಚು ಓದುಗರಿಗೆ ಪರಿಚಯಿಸಬಹುದೆಂಬ ಆಸೆಯಿಂದ ಈ ಲೇಖನ ಬರೆಯುತ್ತಿದ್ದೇನೆ. ಮಾರ್ಕ್ ಟಲ್ಲಿ ಅವರು ನಮ್ಮ ರಸ್ಕಿನ್ ಬಾಂಡ್ ಅವರಂತೆ ವಸಾಹತು ಭಾರತದಲ್ಲಿ ಹುಟ್ಟಿ, ಇಲ್ಲೇ ಉಳಿದವರು, ಹಾಗಾಗಿ ಒಂದು ರೀತಿ ಭಾರತೀಯರೇ ಹೌದು. ಆದರೆ ಇಯಾನ್ ಜಾಕ್ ಹಾಗಲ್ಲ. ಅವರು ಸ್ಕಾಟ್ಲೆಂಡಿನ ಸಹಜ ಕೆಳಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿ ಕಾಲೇಜು ಡಿಗ್ರಿಯನ್ನೂ ಪಡೆಯದೆ ಅಪ್ರೆಂಟಿಸ್ ಆಗಿ ಪತ್ರಿಕೋದ್ಯಮಕ್ಕೆ ಬಂದವರು; ಹಂತಹಂತವಾಗಿ ಬೆಳೆದು ತಮ್ಮ ವಿಶಿಷ್ಟ ಬರವಣಿಗೆಯ ಶೈಲಿಯನ್ನು ರೂಢಿಸಿಕೊಂಡವರು. ಅವರ ಅದೃಷ್ಟವೆಂದರೆ ಅವರು ಸಂಡೇ ಟೈಮ್ಸ್‌ನ ಉಚ್ಛ್ರಾಯ ಕಾಲಘಟ್ಟದಲ್ಲಿ ಹೆರಾಲ್ಡ್ ಇವಾನ್ಸ್ ಅವರ ಸಂಪಾದಕತ್ವದಲ್ಲಿ ಕೆಲಸ ಮಾಡಿದರು. ಅವರು ಎಮರ್ಜೆನ್ಸಿಯ ಕಾಲಘಟ್ಟದಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿಯಿತ್ತರು. ಅದು ಅವರ ಜೀವನದ ದಿಕ್ಕನ್ನೇ ಬದಲಿಸಿತು ಎನ್ನಬೇಕು. ಅಂದಿನಿಂದ ಅವರು ತಮ್ಮ ಜೀವನ ಪರ್ಯಂತ ಭಾರತದ ಬಗ್ಗೆಯೇ ಹೆಚ್ಚು ಬರೆದರು.

ಸಾಧಾರಣವಾಗಿ ವಿದೇಶೀ ಪತ್ರಕರ್ತರು ಒಂದು ದೇಶದ ರಾಜಕೀಯ, ಮಿಲಿಟರಿ, ಯುದ್ಧಗಳು ಇಂಥವುಗಳ ಬಗ್ಗೆಯೇ ಬರೆದುದು ಹೆಚ್ಚು. ಭಾರತದ ಬಗೆಗಿನ ಬರೆಹಗಳನ್ನು ನೋಡಿದರೆ, ಅನೇಕ ವಿದೇಶೀ ಬರಹಗಾರರಲ್ಲಿ, ಪತ್ರಕರ್ತರಲ್ಲಿ ಇಲ್ಲಿ ಬಡತನ, ಮೌಢ್ಯದ ಬಗ್ಗೆ ತಾವು ಮೇಲು ಎಂಬ ಭಾವದಲ್ಲಿ ಬರೆದವರೇ ಹೆಚ್ಚು, ಇಲ್ಲ ಇಲ್ಲಿನ ಸಮಾಜ, ಸಂಸ್ಕೃತಿ, ಜನ-ಜೀವನದ ಬಗ್ಗೆ ಅತ್ಯಂತ ತೆಳುವಾದ ಗ್ರಹಿಕೆಯೊಂದಿಗೆ ತೀರಾ ಅಧಿಕಾರಯುತವಾಗಿ ತೀರ್ಪಿತ್ತವರೇ ಹೆಚ್ಚು; ಇನ್ನೂ ಕೆಲವರು ವೇದಕಾಲೀನ ತಥಾಕಥಿತ ಸುವರ್ಣಯುಗಕ್ಕೆ ಮಾರುಹೋದವರೂ ಇದ್ದಾರೆ.

ಆದರೆ ಇಯಾನ್ ಜಾಕ್ ಇವೆಲ್ಲವುಗಳ ಗೊಡವೆಗೆ ಹೋದವರೇ ಅಲ್ಲ. ಅವರು ಹೆಚ್ಚು ಭಾರತದ ಸಣ್ಣಪುಟ್ಟ ನಗರಗಳನ್ನು ಇಲ್ಲಿನ ರೈಲುಗಳಲ್ಲಿ ಸುತ್ತುತ್ತಾ ಸಾಮಾನ್ಯ ಜನರ ಜೀವನದ ಬಗ್ಗೆ ಕಳಕಳಿಯಿಂದ, ಕಕ್ಕುಲಾತಿಯಿಂದ ಬರೆದರು. ಬಿಹಾರದಲ್ಲಿ ಜಾರ್ಜ್ ಆರ್ವೆಲ್ಲಿನ ಹುಟ್ಟಿದೂರು ಹುಡುಕುತ್ತಾ ಹೊರಟರು; ಕಲ್ಕತ್ತೆ, ಬಾಂಬೆಯ ಸಾಮಾನ್ಯ ಜನರ ಬಗ್ಗೆ, ಭಾಗಲ್ಪುರದ ಅಟ್ರಾಸಿಟಿಗಳ ಬಗ್ಗೆ, ಪಟ್ನಾದಲ್ಲಿ ಅಪೆಂಡಿಸೈಟಿಸ್ ಆಪರೇಷನ್ ಮಾಡಿಸಿಕೊಂಡುದರ ಬಗ್ಗೆ ಬರೆದರು.

ಇದನ್ನೂ ಓದಿ: “ಬಹಳ ಹಿಂದೆ ನಾನು ಜನರಿಗಾಗಿ ಹಲವು ಕನಸು ಕಂಡಿದ್ದೆ…”: ಬ್ರೆಜಿಲ್‌ನ ಮುಂದಿನ ಅಧ್ಯಕ್ಷ ಲೂಲಾರ…

ಇಲ್ಲಿ ಅವರನ್ನು ಎರಡು ವಿಷಯಗಳು ಸೆಳೆದವು: ಭಾರತೀಯ ರೈಲುಗಳು ಮತ್ತು ಕಲ್ಕತ್ತೆ. ಕಲ್ಕತ್ತೆಯನ್ನು ಅವರು ಕಡೆಯ ಕೈಗಾರಿಕಾ ಕ್ರಾಂತಿಯ ನಗರ ಎಂದು ಬಣ್ಣಿಸುತ್ತಿದ್ದರು ಮತ್ತು ಕಲ್ಕತ್ತೆಯಲ್ಲಿ ತನ್ನ ಬಾಲ್ಯದ ಇಂಗ್ಲೆಂಡನ್ನು ಅವರು ಕಾಣುತ್ತಿದ್ದರು. ಕಲ್ಕತ್ತೆಯಲ್ಲಿ ಅವರು ಸುಮಾರು ವರ್ಷಗಳ ಕಾಲ ನೆಲೆಸಿದ್ದರು ಕೂಡಾ. ಅವರ ಮೊದಲ ಪ್ರೇಮವೂ ಕಲ್ಕತ್ತೆಯಲ್ಲೇ. ಅವರು 1979ರಲ್ಲಿ ಅಪರ್ಣ ಬಾಗ್ಚಿಯವರನ್ನು ಮದುವೆಯಾಗಿ, ಕಲ್ಕತ್ತೆಯ ಅಳಿಯನಾದರು. ಇಯಾನ್ ಮತ್ತು ಅಪರ್ಣ 1992ರಲ್ಲಿ ಬೇರೆಯಾದರು. ಆದರೆ ಕಲ್ಕತ್ತೆಯೊಡನೆ ಅವರ ನಂಟು ಅವರ ಜೀವನದುದ್ದಕ್ಕೂ ಹಸಿರಾಗಿಯೇ ಉಳಿಸಿಕೊಂಡಿತ್ತು. ಇನ್ನೊಂದು ಇಲ್ಲಿನ ರೈಲುಗಳು. ಇಲ್ಲಿನ ರೈಲುಗಳ ಬಗ್ಗೆ ಇನ್ನಿಲ್ಲದಷ್ಟು ಬರೆದರು. ಒಂದು ರೀತಿಯಲ್ಲಿ ಹೇಳುವುದಾದರೆ ಗಾಂಧಿಯಂತೆ ಇಯಾನ್ ಜಾಕ್ ಕೂಡಾ ರೈಲುಗಳಲ್ಲಿಯೇ ಹೆಚ್ಚು ತಿರುಗಿ ಭಾರತವನ್ನು ಕಂಡರು. ಅವರು ಭಾರತದ ರೈಲುಗಳ ಬಗ್ಗೆ ಒಂದು ಪುಸ್ತಕ ಬರೆಯಬೇಕು ಅಂದುಕೊಂಡಿದ್ದರಂತೆ; ಬರೆಯದೇ ಹೋದುದು ದುರಂತ. ಇಂದು ಇಂಗ್ಲೆಂಡಿನ ರೈಲು ಸಂಚಾರ ಖಾಸಗೀಕರಣಗೊಂಡು ಉಳ್ಳವರ ಸ್ವತ್ತಾಗಿರುವ ಕಾಲದಲ್ಲಿ ಭಾರತದ ರೈಲುಗಳು ಇಂದಿಗೂ ಜನರ ನಾಡಿಮಿಡಿತವಾಗಿರುವುದು, ಇಯಾನ್ ಜಾಕ್ ಅವರಿಗೆ ತಮ್ಮ ಬಾಲ್ಯದ ಕೈಗಾರಿಕಾ ಕ್ರಾಂತಿಯ ಇಂಗ್ಲೆಂಡಿನ ರೈಲುಗಳನ್ನು ನೆನಪಿಸುತ್ತಿತ್ತಂತೆ.

1990ರ ದಶಕದಲ್ಲಿ ಇಯಾನ್ ಜಾಕ್ ಇಂಗ್ಲೆಂಡಿನ ಜಗದ್ವಿಖ್ಯಾತ ಸಾಹಿತ್ಯ ಪತ್ರಿಕೆ ಗ್ರಾಂಟಾದ ಸಂಪಾದಕರಾದರು. 1997 ಮತ್ತು 2015ರಲ್ಲಿ ಅವರು ಭಾರತದ ಮೇಲೆ ಎರಡು ವಿಶೇಷ ಸಂಚಿಕೆಗಳನ್ನು ಹೊರತಂದಿದ್ದಾರೆ. ಇವೆರಡೂ ಸಹ ಸಂಗ್ರಹಯೋಗ್ಯವಷ್ಟೇ ಅಲ್ಲ, ಹೊಸ ಬರಹಗಾರರನ್ನು ಜಗತ್ತಿಗೆ ಪರಿಚಯಿಸುವಲ್ಲಿಯೂ ವಿಶಿಷ್ಟ ಸ್ಥಾನ ಹೊಂದಿವೆ. ಈ ಎರಡೂ ಸಂಚಿಕೆಗಳನ್ನು ಪರಿಚಯಿಸುತ್ತಾ ಇಯಾನ್ ಜಾಕ್ ಬರೆದ ಮುನ್ನುಡಿಗಳು ಈ ಕಾಲಘಟ್ಟದಲ್ಲಿ ಭಾರತದಲ್ಲಾಗುತ್ತಿದ್ದ ಪಲ್ಲಟಗಳನ್ನು ಅತ್ಯಂತ ಶಕ್ತವಾಗಿ ಹಿಡಿದಿಡುತ್ತವೆ. ಮೊದಲ ಸಂಚಿಕೆಯಲ್ಲಿ ಭಾರತದ ಬರಹಗಾರರಿಗಿಂತ ವಿದೇಶೀಯರೇ ಹೆಚ್ಚಿರುವುದನ್ನು ಒಪ್ಪುತ್ತಲೇ ಎರಡನೇ ಸಂಚಿಕೆಯ ವೇಳೆಗೆ ಭಾರತೀಯ ಬರಹಗಾರರೇ ಹೆಚ್ಚಿರುವ ಸಂಚಿಕೆಯನ್ನು ರೂಪಿಸುವ ಸೂಕ್ಷ್ಮತೆಯನ್ನು ಇಯಾನ್ ಜಾಕ್ ಹೊಂದಿದ್ದರು. 1997ರ ಸಂಚಿಕೆಯಲ್ಲಿ ಅರುಂಧತಿ ರಾಯ್ ಅವರ ’ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಕೃತಿಯ ಮೊದಲ ಆಯ್ದ ಭಾಗವನ್ನು ಪ್ರಕಟಿಸಿದವರು ಇಯಾನ್ ಜಾಕ್; ಆ ಕೃತಿ ಮುಂದೆ ಬುಕರ್ ಪ್ರಶಸ್ತಿ ಪಡೆದು ಅರುಂಧತಿ ಮನೆಮಾತಾದರು. ಇದೇ ಸಂಚಿಕೆಯಲ್ಲಿ ಊರ್ವಶಿ ಬುಟಿಯಾಲಾ ಅವರು ದೇಶವಿಭಜನೆಯ ಬಗ್ಗೆ, ಸುಕೇತು ಮೆಹ್ತಾ ಅವರು ಮುಂಬೈ ಬಗ್ಗೆ ಬರೆದಿದ್ದಾರೆ. ಇವರೀರ್ವರೂ ಮುಂದೆ ಈ ವಿಷಯಗಳ ಮೇಲೆ ಮೇರುಕೃತಿಗಳನ್ನು ರಚಿಸಿದರು. ಇನ್ನು 2015ರ ಸಂಚಿಕೆಯಲ್ಲಿ ವಿವೇಕ ಶಾನಭಾಗರ ’ಘಾಚರ್ ಘೋಚರ್’ ಕೃತಿಯ ಅನುವಾದದ ಆಯ್ದ ಭಾಗ ಮೊದಲ ಬಾರಿಗೆ ಪ್ರಕಟಗೊಂಡಿತು. ನಂತರ ಅದು ಜಗತ್ತಿನಾದ್ಯಂತ ಪ್ರಶಂಸೆಗೊಳಗಾದ ಕೃತಿಯೆನಿಸಿತು. ಹೀಗೆ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಜಾಗತಿಕ ವೇದಿಕೆಯನ್ನು ಕಲ್ಪಿಸುವ ನುರಿತ ಸಂಪಾದಕನ ಗುಣವೂ ಅವರಲ್ಲಿತ್ತು.

ಇದನ್ನೂ ಓದಿ: ಬ್ರೆಜಿಲ್, ಲುಲಾ ಮತ್ತು ಗುಲಾಬಿ ಅಲೆ 2.0; ಕತ್ತಿಯಂಚಿನ ನಡಿಗೆ

ಮಫ್ಯೂಸಿಲ್ ಜಂಕ್ಷನ್ – ಇಂಡಿಯನ್ ಎನ್ಕೌಂಟರ್ಸ್ 1977-2012 ಎಂಬ ಕೃತಿಯಲ್ಲಿ ಅವರ ಭಾರತದ ಮೇಲಿನ ಬರಹಗಳ ಒಂದು ಸಣ್ಣ ಸಂಗ್ರಹವಿದೆ. ಇನ್ನು 1997, 2015ರ ಅವರ ಸಂಪಾದಕತ್ವದ ಗ್ರಾಂಟಾದ ಭಾರತದ ಮೇಲಿನ ವಿಶೇಷ ಸಂಚಿಕೆಗಳು ಲಭ್ಯವಿವೆ. ಭಾರತದ ಜನಸಾಮಾನ್ಯರ, ಇಲ್ಲಿನ ರೈಲುಗಳ ಗೆಳೆಯನೊಬ್ಬನ ಮಾತುಕತೆಯಂತಿವೆ. ಸಾಧ್ಯವಾದರೆ ಓದಿ.

ಸೂರ್ಯ ಚಿಂತಾಮಣಿ
ಯುವ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...