Homeಕರ್ನಾಟಕಅಪರೂಪದ ಕಥೆಗಾರ ಬಸವರಾಜು ಕುಕ್ಕರಹಳ್ಳಿ ಒಡನಾಟದ ಕೆಲವು ನೆನಪುಗಳು

ಅಪರೂಪದ ಕಥೆಗಾರ ಬಸವರಾಜು ಕುಕ್ಕರಹಳ್ಳಿ ಒಡನಾಟದ ಕೆಲವು ನೆನಪುಗಳು

- Advertisement -
- Advertisement -

“ಸರ್ ನಾಲ್ಕು ಕಥಾ ಸಂಕಲನಗಳು ಮತ್ತು ನೀಳ್ಗತೆಯನ್ನೂ ಸೇರಿ ಪುಸ್ತಕ ಮಾಡೋಣ, ನಿಮ್ ಕಥೆಗಳೆಲ್ಲ ಒಟ್ಟಾಗಿ ಸಿಗಬೇಕು ನನಗೆ ಗೊತ್ತಿರುವ ಪ್ರಕಾಶಕರಿದ್ದಾರೆ” ಎಂದು ದೂರವಾಣಿಯಲ್ಲಿ ಹೇಳಿದಾಗ ಒಂದೆರಡು ಸೆಕೆಂಡ್ ಸುಮ್ಮನಿದ್ದು “ಹ್ಞೂಂ ಅಭಿ ’ಸಮಗ್ರ ಕಥೆಗಳು’ ಹೆಸರಿನಲ್ಲಿ ಪ್ರಕಟಿಸೋಣ” ಎಂದರು. “ಸರ್ ನೀವಿನ್ನೂ ಬರೆಯುತ್ತಿರುವುದರಿಂದ ಈವರೆಗಿನ ಕಥೆಗಳು ಎಂಬ ಶೀರ್ಷಿಕೆಯಲ್ಲಿ ತರೋಣ” ಎಂದೆ. ಪ್ರಕಾಶಕರೊಟ್ಟಿಗೆ ಕಾನ್ಪರೆನ್ಸ್ ಕಾಲ್‌ನಲ್ಲಿ ಮಾತನಾಡಿ ಸರಸ್ವತಿಪುರಂನಲ್ಲಿರುವ ತಮ್ಮ ’ನಿಸರ್ಗ’ದಲ್ಲಿ ಕೂತು ಮುಂದಿನ ವಾರ ಮಾತನಾಡೋಣ ಎಂದು ಹೇಳಿ ಫೋನಿಟ್ಟ ಬಸವರಾಜು ಕುಕ್ಕರಹಳ್ಳಿಯವರು ಇಂದು (ನವೆಂಬರ್ 3) ಬಾರದ ಲೋಕಕ್ಕೆ ಹೊರಟಿದ್ದಾರೆ ಎಂದರೆ ನಂಬಲು ಕಷ್ಟವಾಗುತ್ತಿದೆ.

ಎರಡು ಸಾವಿರದ ಒಂಭತ್ತನೆಯ ಇಸವಿ ಇರಬೇಕು; ಆಗ ನಾನು ಪಿ.ಯು.ಸಿಗೆಂದು ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಗೆ ಸೇರಿದ್ದೆ; ಗ್ರಂಥಾಲಯದಲ್ಲಿ ಒಳಭಾಗದ ಗಾಜಿನ ಚೇಂಬರಿನೊಳಗೆ ಕೂತು ಮೂಗಿನ ತುದಿಯಲ್ಲಿ ಇನ್ನೇನು ಜಾರಿಬೀಳಬಹುದಾದ ಕನ್ನಡಕದೊಳಗಿನಿಂದ ಏನನ್ನೋ ತಿದ್ದುತ್ತಾ ಕೂತಿರುತ್ತಿದ್ದರು ಬಸವರಾಜು. ಕಂಪ್ಯೂಟರ್ ಲ್ಯಾಬಿಗೆ ಹೋಗುವಾಗ ಇವರ ಚೇಂಬರಿನ ಮುಂದೆಯೇ ಹಾದುಹೋಗಬೇಕಾಗಿದ್ದರಿಂದ ನಿತ್ಯ ಅವರನ್ನು ನೋಡಿಯೇ ಹೋಗುತ್ತಿದ್ದೆ. ಹೀಗೆ ಒಂದುದಿನ ಗ್ರಂಥಾಲಯದಲ್ಲಿ ’ಮೊಕಾರ’ ಎಂಬ ಪುಸ್ತಕವು ಸಿಕ್ಕಿತು. ಹಸುವಿನ ಮುಖವನ್ನು ಹೋಲುವ ಅಸ್ಪಷ್ಟ ಚಿತ್ರದ ಮುಖಪುಟದಿಂದಲೇ ಆ ಕೃತಿ ಗಮನ ಸೆಳೆಯಿತು. ಅದರ ಮೇಲೆ 1996ರ ಸಾಲಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ಎಂದು ಅಚ್ಚಾಗಿತ್ತು. ಆ ಪುಸ್ತಕವನ್ನು ಎರವಲು ಪಡೆಯುವಾಗಲೇ ಗೊತ್ತಾದದ್ದು ಈ ಪುಸ್ತಕದ ಕೃತಿಕಾರರಾದ ಬಸವರಾಜು ಕುಕ್ಕರಳ್ಳಿ ಮತ್ತು ಅವರೇ ಈ ಗ್ರಂಥಪಾಲಕರು ಎಂದು. ಅಂದಿನಿಂದ ನಮ್ಮ ಒಡನಾಟ ಪ್ರಾರಂಭವಾಯಿತೆನ್ನಬಹುದು. ಅಷ್ಟರಲ್ಲಾಗಲೇ ’ಪುನುಗ’ ಮತ್ತು ’ಜೀವಾಳ’ ಕಥಾಸಂಕಲನಗಳನ್ನು ಪ್ರಕಟಿಸಿದ್ದರು. ಸಮಯವಿದ್ದಾಗ ನಾನೂ ನನ್ನ ಗೆಳೆಯ ಗಜೇಂದ್ರ ಇಬ್ಬರೂ ಅವರ ಅದೇ ಗಾಜಿನ ಚೇಂಬರಿಗೆ ಹೋಗಿ ಅವರ ಕಾಲದ ಕಥೆಗಳನ್ನು ಕೇಳುತ್ತಿದ್ದವು. ಕೆಲವೊಮ್ಮೆ ತರಗತಿಗಳು ಆರಂಭವಾಗಿದ್ದರೂ ಇವರ ಮಾತುಗಳನ್ನು ಕೇಳುತ್ತಲೇ ನಿಂತುಬಿಡುತ್ತಿದ್ದೆವು. ತರಗತಿಗೆ ತಡವಾಗಿಯೂ ಹೋಗಿ ಎಷ್ಟೋ ಬಾರಿ ಸಬೂಬುಗಳನ್ನು ಹೇಳುತ್ತಿದ್ದವು. ಅಷ್ಟರಲ್ಲಾಗಲೇ ಅವರ ಕಥೆಗಳನ್ನು ಓದಿದ್ದ ನಮಗೆ ಕಥೆಗಾರನನ್ನು ಇಷ್ಟು ಹತ್ತಿರದಲ್ಲೇ ನೋಡುತ್ತಿದ್ದ ಖುಷಿಗೆ ಪಾರವೇ ಇರಲಿಲ್ಲ. ಕುಕ್ಕರಹಳ್ಳಿಯ ಬೀದಿಬೀದಿಯನ್ನೂ ತಿರುಗಿದ್ದ ಬಸವರಾಜು ಅವರು ಅಲ್ಲಿಯೇ ಹುಟ್ಟಿ, ಅಲ್ಲಿನ ಜೀವನಕ್ರಮ, ಬದುಕಿನ ಬವಣೆಗಳನ್ನು ಕಥೆಗಳಲ್ಲಿ ಬರೆದು ಕಥೆಗಾರನಾಗಿ ಬೆಳೆದದ್ದು ಒಂದು ರೀತಿಯ ವಿಸ್ಮಯವೇ ಸರಿ. ಬೆರಗುಗಣ್ಣುಗಳಿಂದ ಜೀವನಾನುಭವಗಳನ್ನು ಅನುಭವಿಸಿದ, ಬಡತನದಲ್ಲೇ ಬಾಳುವ ಅನಿವಾರ್ಯತೆಯನ್ನು ರೂಢಿಸಿಕೊಂಡಿದ್ದ ಬಸವರಾಜು ಕುಕ್ಕರಹಳ್ಳಿಯವರು ಹಸಿದು ಮಲಗಿದ್ದು ಎಷ್ಟೋಸಲ.

ಮಹಾರಾಜ ಕಾಲೇಜಿಗೆ ಸೇರಿದ ಹೊಸತು; ಬಹುಭಾಷಾ ಕವಿಗೋಷ್ಠಿಗೆ ಮುಖ್ಯ ಅತಿಥಿಗಳನ್ನು ಕರೆಸುವ ಜವಾಬ್ದಾರಿಯನ್ನು ನನಗೆ ಮತ್ತು ಗಜೇಂದ್ರನಿಗೆ ವಹಿಸಲಾಗಿತ್ತು. ಆಗ ಸಹಪ್ರಾಧ್ಯಾಪಕರಾಗಿದ್ದ ತಿಮ್ಮಯ್ಯನವರಿಗೆ ನಮ್ಮ ಮೇಲೆ ವಿಶ್ವಾಸವಿತ್ತು. ಬಸವರಾಜು ಕುಕ್ಕರಹಳ್ಳಿಯವರನ್ನು ಒಪ್ಪಿಸಿ ಕರೆದುಕೊಂಡು ಬರುತ್ತೇವೆಂದು ತಿಳಿಸಿದಾಗ ಅನುಮತಿ ಕೊಟ್ಟರು. ಆಗ ಬಸವರಾಜು ಕುಕ್ಕರಹಳ್ಳಿಯವರ ಕುರಿತು ಕೆಲವರು ಕೊಂಕು ನುಡಿದರು. ವಾಸ್ತವವಾಗಿ ಕುಕ್ಕರಹಳ್ಳಿಯವರ ಕಥೆಗಳನ್ನು ಓದಿರದಿದ್ದವರು ಹೀಗೆ ನಮ್ಮ ಉತ್ಸಾಹವನ್ನು ಕುಂದುವಂತೆ ಮಾತನಾಡಿದ್ದರು. ನಾವು ಮರಿಮಲ್ಲಪ್ಪ ಸಂಸ್ಥೆಗೆ ಹೋಗಿ ಬಸವರಾಜು ಅವರನ್ನು ಬಹುಭಾಷಾ ಕವಿಗೋಷ್ಠಿಗೆ ತಾವು ಮುಖ್ಯ ಅತಿಥಿಯಾಗಿ ಬರಬೇಕೆಂದು ಹೇಳಿದಾಗ ಅವರು “ಅಯ್ಯೋ ನಾನ್ ಯಾವ್ ಕವಿ ಅಭಿ? ಮೈಸೂರಲ್ಲಿ ಇನ್ನೂ ಎಷ್ಟ್ ದೊಡ್‌ದೊಡ್ ಕವಿಗಳಿದ್ದಾರೆ, ನಾನ್ಯಾಕೆ? ದಯಮಾಡಿ ಬಿಟ್ಟುಬಿಡ್ರಪ್ಪ” ಎಂದರು. ಸಂಕೋಚದ ಸ್ವಭಾವದವರಾಗಿದ್ದ ಬಸವರಾಜು ಅವರಿಗೆ ನಾನೂ ನನ್ನ ಗೆಳೆಯನೂ ದುಂಬಾಲುಬಿದ್ದು ಒಪ್ಪಿಸಿದೆವು. ನಮ್ಮ ಮೇಲಿನ ’ವಿಶ್ವಾಸ’ ಮತ್ತು ’ಪ್ರೀತಿ’ಗೆ ಅವರು ಸೋತಿದ್ದರು. ಬಹುಭಾಷಾ ಕವಿಗೋಷ್ಠಿಯ ದಿನ ಬಂದೇಬಿಟ್ಟಿತ್ತು. ಹೇಳಿದ ಸಮಯಕ್ಕೆ ಮುಂಚಿತವಾಗಿಯೇ ಕನ್ನಡ ವಿಭಾಗಕ್ಕೆ ಬಂದರು. ಪ್ರಾಂಶುಪಾಲರಾಗಿದ್ದ ಸ.ನ ಗಾಯತ್ರಿಯವರು, ಸಹಪ್ರಾಧ್ಯಾಪಕರಾಗಿದ್ದ ತಿಮ್ಮಯ್ಯನವರು, ಉಳಿದ ಅಧ್ಯಾಪಕರು ಅವರನ್ನು ಸ್ವಾಗತಿಸಿದರು. ಕನ್ನಡ ಮತ್ತು ಜಾನಪದ ಸಂಘದ ಯಾವ ಕಾರ್ಯಕ್ರಮಕ್ಕೆ ಬಂದರೂ ಅತಿಥಿಗಳನ್ನು ಕನ್ನಡ ವಿಭಾಗದಲ್ಲೇ ಸತ್ಕರಿಸುವುದು ಹಿಂದಿನಿಂದಲೂ ನಡೆದುಬಂದಿತ್ತು. ರಾಷ್ಟ್ರಕವಿ ಜಿ.ಎಸ್.ಎಸ್ ಅವರು ಕೂಡ ಯಾವಾಗ ಬಂದರೂ ಮೊದಲು ನೇರವಾಗಿ ಕನ್ನಡ ವಿಭಾಗಕ್ಕೇ ಬರುತ್ತಿದ್ದರು. ಬಸವರಾಜು ಅವರಿಗೆ ಚಹಾ, ಬಿಸ್ಕೆಟ್‌ಗಳನ್ನು ನೀಡಿ ಕಾರ್ಯಕ್ರಮ ಆಯೋಜನೆಯಾಗಿದ್ದ ಸ್ಥಳ ಜೂನಿಯರ್ ಬಿ.ಎ. ಹಾಲಿಗೆ ಕರೆತಂದವು. ಹೊಸದಾಗಿ ಕವಿತೆ ಬರೆಯುತ್ತಿದ್ದ ಹುಡುಗರೂ ಉತ್ಸಾಹದಿಂದ ಕವಿಗೋಷ್ಠಿಗೆ ಬಂದಿದ್ದರು. ಜ್ಯೂನಿಯರ್ ಬಿ.ಎ ಹಾಲ್ ತುಂಬಿತ್ತು. ವಿಶಿಷ್ಟವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಲು ಮುಂಚೆಯೇ ನಾವೆಲ್ಲರೂ ಸೇರಿ ಯೋಜನೆಯನ್ನು ಮಾಡಿದ್ದೆವು. ಕುಕ್ಕರಹಳ್ಳಿಯವರು ತಮ್ಮ ಕವಿತೆಯ ಸಾಲುಗಳನ್ನು ಬರೆಯುವ ಮೂಲಕ ಕವಿಗೋಷ್ಠಿಗೆ ಚಾಲನೆ ನೀಡಲಾಯಿತು.

“ಹಿಟ್ಟು ಮಿದಿಕೆ
ಮುದ್ದು ಮುದ್ದೆಗಾತ್ರ
ಹಸಿವ ಮರೆಸಲು ಹಾಡು ಕಥೆ ಪುರಾಣ
ತಟ್ಟಿ ಮಲಗಿಸುತ್ತಿದ್ದವು ನನ್ನ”
– ಬಸವರಾಜು ಕುಕ್ಕರಹಳ್ಳಿ

ಹೀಗೆ ಅವರು ಬರೆದ ಸಾಲುಗಳನ್ನು ನೋಡಿ ಸಭಾಂಗಣ ಕರತಾಡನದಿಂದ ತುಂಬಿಹೋಯಿತು. ಆಗತಾನೆ ಕವಿತೆ ಬರೆಯಲು ಆರಂಭಿಸಿದ್ದ ನಾನೂ ಒಂದು ಕವಿತೆಯನ್ನು ವಾಚಿಸಿದೆನು. ಎಲ್ಲರೂ ಕಾಯುತ್ತಿದ್ದ ಮುಖ್ಯ ಅತಿಥಿಗಳ ಭಾಷಣ ಆರಂಭವಾಯಿತು. “ಇದೇ ರೂಮಿನಲ್ಲಿ ನಾನು ಕುಳಿತು ಪಾಠ ಕೇಳಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸೀಟು ತಗೋಬೇಕು ಅಂತ ಹೇಳಿದ್ರೆ ತುಂಬಾ ಕಷ್ಟ ಇರ್ತಿತ್ತು. ಒಳ್ಳೆ ಮಾರ್ಕ್ ಅನ್ನು ಪಡೆದಿದ್ರೆ ಮಾತ್ರ ಸೀಟ್ ಸಿಗುತ್ತೆ, ಅದ್ರಲ್ಲೂ ಆರ್ಟ್ ಸೀಟ್ ತಗೋಬೇಕು ಅಂದ್ರೆ ತುಂಬಾ ಕಷ್ಟ ಇರ್ತಿತ್ತು. ಅಂತಹ ಸಂದರ್ಭದಲ್ಲಿ ಮಹಾರಾಜ ಕಾಲೇಜಲ್ಲಿ ನಾವು ಓದ್ಬೇಕಂತ ಕನಸು ಕಟ್ತಾ ಇದ್ವಿ ಎಂದು ಅಂದಿನ ಕಾಲದ ಸ್ಥಿತಿಯನ್ನು ನೆನಪಿಸಿಕೊಂಡರು. ಬಸವರಾಜು ಅವರು ಮಹಾರಾಜ ಕಾಲೇಜು ಸೇರಿದಾಗ ಕಾಲೇಜಿನ ಭವ್ಯ ಗ್ರಂಥಾಲಯವನ್ನು ಮೊದಲ ಬಾರಿ ನೋಡಿದಾಗ ಅವರಿಗೆ ಪ್ರಾಮಾಣಿಕವಾಗಿ ಹೀಗನ್ನಿಸುತ್ತದೆ: “ನಾನು ಹಳ್ಳಿಯ ಗುಡಿಸಲಿನಿಂದ ಕಾಲೇಜು ಓದಲು ಪಟ್ಟಣಕ್ಕೆ ಬಂದೆ. ಅಲ್ಲಿ ಗ್ರಂಥಾಲಯವೆಂಬ ಭವ್ಯ ಕಟ್ಟಡವನ್ನು ಕಂಡು ಬೆರಗಾದೆ. ಬರೀ ಪುಸ್ತಕಗಳನ್ನಿಡಲು ಇಷ್ಟು ದೊಡ್ಡ ಬಂಗಲೆಯೆ? ಇದು ನಮಗಾದರೂ ಸಿಕ್ಕಿದ್ದರೆ ಊರಿನವರೆಲ್ಲ ದನಕರುಗಳನ್ನು ಕಟ್ಟಿಕೊಂಡು ಗಾಳಿ ಮಳೆಯಿಂದ ರಕ್ಷಿಸಿಕೊಂಡು ಬೆಚ್ಚಗೆ ವಾಸಿಸುತ್ತಿದ್ದವಲ್ಲ. ಎಂಥ ಅನ್ಯಾಯ ಎಂದುಕೊಂಡು ಒಳಕ್ಕೋದೆ. ಒಳಕ್ಕೋದರೆ ಅಲ್ಲಿ ಸಾವಿರಸಾವಿರವಲ್ಲ, ಲಕ್ಷಾಂತರ ಜನರು ವಾಸವಿದ್ದರು. ಅವರೆಲ್ಲ ಸಾಮಾನ್ಯರಲ್ಲ ಅಸಮಾನ್ಯರು. ಜಗತ್ತಿನ ಮೇಧಾವಿಗಳು, ಸಾಹಿತಿಗಳು, ಸಮಾಜೋದ್ಧಾರಕರು, ಇತಿಹಾಸಕಾರರು, ವಿಜ್ಞಾನಿಗಳು, ಕಲಾಕಾರರು, ಸಂಗೀತಗಾರರು, ಶಿಲ್ಪಿಗಳು, ತತ್ವಜ್ಞಾನಿಗಳು- ಅವರೆಲ್ಲರೂ ಪುಸ್ತಕರೂಪ ತಾಳಿ ನನಗಾಗಿ ಕಾಯುತ್ತಿದ್ದರು”. ಮತ್ತೆ ಸಭಾಂಗಣವೆಲ್ಲವೂ ಜೋರಾದ ಚಪ್ಪಾಳೆಗಳಿಂದ ತುಂಬಿಹೋಯಿತು. ಬಸವರಾಜು ಅವರು ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಗೋಹತ್ಯೆ ಕಾನೂನಿಗೆ ಸಂಬಂಧಿಸಿದ ಚಳವಳಿಯಲ್ಲಿ ವಿದ್ಯಾರ್ಥಿಗಳು ಸಾಂಕೇತಿಕವಾಗಿ ಗೋಮಾಂಸವನ್ನು ಬೇಯಿಸಿ ಕೊಟ್ಟಾಗ ಸ್ವತಃ ಅಧ್ಯಾಪಕರೇ ತಿಂದು ಪ್ರತಿಭಟಿಸಿದ ಘಟನೆಯನ್ನು ನೆನಪಿಸಿಕೊಂಡ ಮಾತುಗಳು ಇನ್ನೂ ಕಿವಿಯಲ್ಲಿ ಅನುರಣಿಸುತ್ತಿವೆ. ಬೇಂದ್ರೆಯವರ ’ಮೂಡಲ ಮನೆಯ ಮುತ್ತಿನ ನೀರಿನ’ ಕವಿತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಕೊನೆಯಲ್ಲಿ ತಮ್ಮ ’ಅವ್ವ’ ಕವಿತೆಯನ್ನು ವಾಚಿಸಿ ಮುಗಿಸುವಾಗ ವೇದಿಕೆಯಲ್ಲಿದ್ದವರ ಸಹಿತ ಎಲ್ಲರ ಕಣ್ಣಾಲಿಗಳೂ ತುಂಬಿದ್ದವು. ಕುಕ್ಕರಹಳ್ಳಿಯವರನ್ನು ಮುಖ್ಯ ಅತಿಥಿಯಾಗಿ ಕರೆಸಲು ಹೆಸರು ಪ್ರಸ್ತಾಪವಾದಾಗ ಕೊಂಕು ನುಡಿದಿದ್ದವರೂ ನಮ್ಮನ್ನು ಕರೆದು ಪ್ರಶಂಸಿಸಿದ್ದು ಈಗ ಇತಿಹಾಸ.

’ಬಾಳಾಟ’ ಕಥಾ ಸಂಕಲನವು ನಾನು ಎಂ.ಎ. ವಿದ್ಯಾರ್ಥಿಯಾಗಿದ್ದಾಗ ಬಾಬು ಜಗಜೀವನರಾಂ ಸಭಾಂಗಣದಲ್ಲಿ ಬಿಡುಗಡೆಯಾಯಿತು. ಹಿಂದಿನ ಮೂರೂ ಸಂಕಲನಗಳಿಗಿಂತ ಭಿನ್ನವಾದ ಕಥೆಗಳು ಹೆಚ್ಚು ಜನರನ್ನು ತಲುಪಿದವು. ಈ ಸಂಕಲನದ ’ಗೇಟು’ ಕಥೆಯು ಇವರಿಗೆ ಪ್ರಸಿದ್ಧಿ ತಂದುಕೊಟ್ಟಿತು. ಇವರ ನೀಳ್ಗತೆಗಳ ಸಂಕಲನ ’ಕಾಲನೊದ್ದವರು’ ಬಿಡುಗಡೆಯ ಸಮಾರಂಭಕ್ಕೆ ಗಂಗಾಧರ ಚಿತ್ತಾಲರ ’ಹರಿವ ನೀರಿದು’ ಕವನ ಓದಿಸುವ ಮೂಲಕ ನನ್ನಿಂದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಮುಂದೆ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ನೀಲಗಿರಿ ತಳವಾರ್ ಅವರ ಸಂಪಾದಕತ್ವದಲ್ಲಿ ’ಬಸವರಾಜು ಕುಕ್ಕರಹಳ್ಳಿ ಕಥಾಲೋಕ’ ಎಂಬ ವಿಮರ್ಶಾ ಕೃತಿಯನ್ನು ಪ್ರಕಟಿಸಲಾಯಿತು.

ಇದನ್ನೂ ಓದಿ: ನಿದ್ದೆಯಲ್ಲಿ ಮನುಷ್ಯ…!

ಈ ಹಿಂದಿನಿಂದಲೂ ಕಾವ್ಯ ಬರೆಯಿರಿ ಎಂದು ಪೀಡಿಸುತ್ತದ್ದ ನನಗೆ ಕೊರೊನಾ ಸಂದರ್ಭದಲ್ಲಿ ಕರೆ ಮಾಡಿ ಭೇಟಿ ಮಾಡುವಂತೆ ತಿಳಿಸಿದರು. ಖುಷಿಪಟ್ಟು ರಾಮಕೃಷ್ಣ ನಗರದ ಪಾರ್ಕೊಂದರಲ್ಲಿ ಭೇಟಿಯಾದೆ. ಒಂದು ಟೈಪಿಸಿದ ಹಾಳೆಗಳ ಗುಚ್ಚವನ್ನು ನೀಡುತ್ತಾ “ನೋಡಪ್ಪ ಇವು ಕವಿತೆ ಎನಿಸಿದರೆ ಪ್ರಕಟಿಸೋಣ, ಇಲ್ಲವೆಂದರೆ ಬೇಡ” ಎಂದು ಮೌನವಾದರು. ಬಸವರಾಜು ಅವರ ಕವನಗಳೆಲ್ಲವನ್ನು ಒಂದೇ ಓದಿನಲ್ಲಿ ಓದಿ ರಾತ್ರಿಯೇ ಫೋನಾಯಿಸಿದೆ. ಕವನಗಳನ್ನು ಕುರಿತು ಮಾತನಾಡಿದಾಗ “ಹಾಗಾದ್ರೆ ಪ್ರಕಟಿಸ್ಬೋದಪ್ಪ? ನನ್ ಗೆಳೆಯ ಕೆ.ಜಿ ದೇವದಾಸನಿಗೂ ಕೊಟ್ಟಿದ್ದೆ. ಅವ್ನೂ ಖುಷಿಪಟ್ಟ ಕಣಪ್ಪ. ಹಾಗಾದ್ರೆ ಒಂದಿಷ್ಟು ಏನಾದ್ರೂ ಬರ್‍ಕೊಡು” ಎಂದರು. ಒಂದೆರಡು ದಿನದಲ್ಲೇ ಕವನಸಂಕಲನದ ಕುರಿತು ನನ್ನ ಮಿತಿಯಲ್ಲೇ ಐದಾರು ಪುಟ ವಿಮರ್ಶೆಯನ್ನು ಬರೆದೆ. ಮತ್ತೆ ಅದೇ ಪಾರ್ಕು, ಚರ್ಚೆ. ನನ್ನ ವಿಮರ್ಶೆಯ ಬರಹದಲ್ಲಿ ಒಂದಿಷ್ಟು ಸಾಲುಗಳನ್ನೂ, ದೇವದಾಸರವರ ಒಂದೆರಡು ಸಾಲುಗಳನ್ನು ಬೆನ್ನುಡಿಯಲ್ಲಿ ಅಚ್ಚುಮಾಡಿಸಿ, ಮುನ್ನುಡಿಯಿಲ್ಲದೆಯೇ ತಮ್ಮ ಮಾತುಗಳನ್ನು ’ಕಾವು ಕೂತ ಕೋಳಿಯ ಧ್ಯಾನ’ ಎಂಬ ಶೀರ್ಷಿಕೆಯಲ್ಲಿ ಬರೆದು ಕವನ ಸಂಕಲನಕ್ಕೆ ’ಅತೀತತರು’ ಎಂದು ಹೆಸರಿಟ್ಟಿದ್ದರು. ನಂತರ ಅವರೇ ಎಚ್. ಗೋವಿಂದಯ್ಯನವರ ಸಲಹೆಯಂತೆ ’ಅವ್ವ ಬರಲೇ ಇಲ್ಲ’ ಎಂದು ಬದಲಾಯಿಸಿದರು. ನೃಪತುಂಗ ಕನ್ನಡ ಶಾಲೆಯಲ್ಲಿ ಸಾವಯವ ರೈತ ’ಆಲೂರು ಮೂರ್ತಿ’ಯವರು ಬಿಡುಗಡೆಗೊಳಿಸಿದರು. ಎಚ್. ಗೋವಿಂದಯ್ಯನವರು ಕೃತಿಕುರಿತು ಸಮರ್ಥ ಮಾತುಗಳನ್ನಾಡಿದರು. ಆಗಲೂ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನನಗೆ ವಹಿಸಿದ್ದರು.

“ಹೊಸಬ್ರು ಮುಂದ್ ಬರ್‍ಬೇಕು ಅಭಿ, ತಗೋ ನಿನ್ ಗೆಳೆಯರಿಗೆ ಕೊಡು” ಎಂದು ಒಂದಿಷ್ಟು ಪುಸ್ತಕಗಳನ್ನು ಕೊಟ್ಟಿದ್ದರು.

“ಆತ್ಮಕಥೆ ಬರೀರಿ ಸರ್” ಎನ್ನುತ್ತಿದ್ದ ನನಗೆ “ಯಾವ್ ದೊಡ್ ಸಾಹಿತಿ ನಾನು ಬಿಡು ಅಭಿ, ಸದ್ಯಕ್ಕೆ ಒಂದಿಷ್ಟ್ ಕಥೆ ಬರೀತಿದ್ದೀನಿ, ಮನೆ ರಿನೋವೇಷನ್ ಆಗ್ತಿದೆ, ಮುಂದಿನ ಬರವಣಿಗೆ ಮೊದಲ ಓದುಗ ನೀನೇ ಕಣಪ್ಪ” ಎಂದಿದ್ದರು. ಪ್ರತಿ ವಾರವೂ ಕರೆಮಾಡುತ್ತಿದ್ದ ಬಸವರಾಜು ಸರ್ ಮತ್ತು ನನ್ನ ಮಾತುಗಳು ಗಂಟೆಗಟ್ಟಳೆ ಸಾಗುತ್ತಿದ್ದವು. ಅಪರೂಪದ ಕಥೆಗಳನ್ನು ಬರೆಯುತ್ತಿದ್ದ ಈ ಕಥೆಗಾರನಿಗೆ ಸಿಕ್ಕ ಮನ್ನಣೆ ಚಿಕ್ಕದಾದರೂ, ಅವರಿಗೆ ಅದರ ಅವಶ್ಯಕತೆಯಾಗಲಿ, ಅದರ ಬಗ್ಗೆ ಕೊರಗಾಗಲಿ ಇಲ್ಲದಿರುವುದು ಅವರ ಮಾತುಗಳಿಂದಲೇ ಸ್ಪಷ್ಟವಾಗುತ್ತಿತ್ತು. ದಲಿತರಲ್ಲೇ ಎಡ-ಬಲ ಬಣಗಳ ಕಿತ್ತಾಟಗಳನ್ನು ಪ್ರಸ್ತಾಪಿಸುತ್ತಾ ಎಷ್ಟೋಬಾರಿ ನೊಂದುಕೊಳ್ಳುತ್ತಿದ್ದರು. ವಿಮರ್ಶಕರ ತಾರತಮ್ಯ ನೀತಿಗಳಿಗೂ ವಿಷಾದ ವ್ಯಕ್ತಪಡಿಸುತ್ತಿದ್ದರು. ಬದುಕಿನುದ್ದಕ್ಕೂ ಸಂಕೋಚಪಟ್ಟುಕೊಂಡೇ ಹಿಂದೆ ಉಳಿಯುತ್ತಿದ್ದ ಬಸವರಾಜು ಅವರ ಇತ್ತೀಚಿನ ಭಾವಚಿತ್ರಗಳನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದ್ದೆ. ನೋಡಿ ಖುಷಿಪಟ್ಟು ’ಅವ್ವ ಬರಲೇ ಇಲ್ಲ’ ಸಂಕಲನದ ಬೆನ್ನುಡಿಯಲ್ಲಿ ಅಚ್ಚು ಹಾಕಿಸಿದ್ದರು. ತಿಂಗಳ ಹಿಂದೆ “ಸಾವಯವ ಕೃಷಿ ಸಂತೆಗೆ ಬಾಪ್ಪ ಅಭಿ” ಎಂದು ಕರೆಮಾಡಿದ್ದರು. ಆಗಲೂ ಅವರೊಂದಿಗೆ ಒಂದಿಷ್ಟು ಚರ್ಚೆ, ಮಾತುಗಳನ್ನಾಡಿದ್ದೆ. ಮತ್ತೆ ಸಾವಯವ ಬದುಕಿನ ಕಡೆ ಮರಳಬೇಕಾದದ್ದು ಅನಿವಾರ್ಯ ಎಂದಿದ್ದು, ಬರಹದಲ್ಲೂ ಈ “ಸಾವಯವ ಗುಣ” ಇರಬೇಕೆಂಬ ಅವರ ಹೊಸ ಪರಿಕಲ್ಪನೆ ನನ್ನನ್ನು ಬಹಳವಾಗಿ ಕಾಡಿದೆ. ’ಕುಕ್ಕರಹಳ್ಳಿಯವರ ಈವರೆಗಿನ ಕಥೆಗಳು’ ಎಂಬ ನಾನು ಆಸೆಪಟ್ಟ ಪುಸ್ತಕ ಮುಂದೊಂದು ದಿನ ’ಸಮಗ್ರ ಕಥೆಗಳು’ ಎಂಬ ಶೀರ್ಷಿಕೆಯಲ್ಲಿ ಬರಬಹುದು. ಕುಕ್ಕರಹಳ್ಳಿಯವರ ಹುಟ್ಟುಹಬ್ಬದ ದಿನ ಅವರಿಗೆ ಶುಭಾಶಯ ತಿಳಿಸಿದ್ದು, ಅವರು ಉತ್ತರಿಸಿದ್ದು, ಚಾಟ್ ಮಾಡಿದ್ದು, ಮಾತನಾಡಿದ್ದ ಕೆಲವು ವಾಯ್ಸ್ ರೆಕಾರ್ಡಿಂಗ್‌ಗಳು ಎಲ್ಲವೂ ಇದೆ. ಆದರೆ ಇಂದು ಕುಕ್ಕರಹಳ್ಳಿಯವರು ನಮ್ಮೊಂದಿಗಿಲ್ಲ. ಅಣ್ಣನ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಾಟ್ಸಾಪ್‌ನಲ್ಲಿ ಕಳುಹಿಸಿ ಬನ್ನಿ ಸರ್ ಎಂದು ಕಳಿಸಿದ್ದ ಸಂದೇಶ ನೋಡಿ ಕರೆ ಮಾಡಿದ ಅವರು “ಕಣ್ಣಿನ ಆಪರೇಷನ್ ಆಗಿದೆ, ಟ್ರೀಟ್‌ಮೆಂಟ್ ತಗೋತಿದ್ದೀನಿ ಕಣಪ್ಪ, ಗಾಡಿ ಓಡ್ಸಕ್ಕಾಗಲ್ಲ, ಬರಲ್ಲ ಅಂತ ಬೇಜಾರಾಗ್ಬೇಡ ಕಣಪ್ಪ. ನಿನ್ ಮದ್ವೆಗೆ ತೆವ್ಕೊಂಡಾದ್ರೂ ಬತ್ತಿನಿ ಕಣಪ್ಪ.. ನಮ್ ಅಭಿ ಮದ್ವೆಗೆ ಮಿಸ್ ಮಾಡಕ್ಕಾಗುತ್ತಾ” ಎಂದು ಅಂದವ್ರು ನೀವೇನಾ ಸರ್? ಮೋಸ ಮಾಡಿ ಇಷ್ಟ್ ಬೇಗ ಹೋಗ್ಬಾರ್‍ದಿತ್ತು.. ಮಿಸ್ ಯೂ ಸರ್…!

ಕುಕ್ಕರಹಳ್ಳಿಯ ಕಥಾಲೋಕ: ಕನ್ನಡ ಸಾಹಿತ್ಯದ ಗರಿಮೆ

ಕುಕ್ಕರಹಳ್ಳಿ ಬಸವರಾಜು ಅವರ ಕಥಾ ಸಂಕಲನಗಳಾದ ’ಮೊಕಾರ’, ’ಜೀವಾಳ’, ’ಪುನುಗ’, ’ಬಾಳಾಟ’, ’ಕಾಲನೊದ್ದವರು’ ಕನ್ನಡದ ಕಥಾ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಗಳು. ಡಾ. ಶಾಂತಿನಾಥ ದೇಸಾಯಿಯವರು ಇವರ ಮೊದಲ ಕಥಾ ಸಂಕಲನದ ಮುನ್ನುಡಿಯಲ್ಲಿ, “ಬಸವರಾಜು ಕುಕ್ಕರಹಳ್ಳಿಯವರ ವೈಶಿಷ್ಟ್ಯವೆಂದರೆ ಸಣ್ಣ ಕಥೆಯ ನಿಷ್ಠುರ ಬಂಧವನ್ನು ಆದಷ್ಟು ಸಡಿಲಗೊಳಿಸಿ ಅದರಲ್ಲಿ ಸೂಕ್ಮವಾದ ವಿವರಗಳನ್ನು ತುಳುಕುವಷ್ಟು ತುಂಬುವದು. ’ಕಡಜನಗೂಡು’, ’ಆ ಮನೆ’, ’ಹಬ್ಬ’ ಮುಂತಾದ ಕತೆಗಳಲ್ಲಿ ಒಂದು ಜನಾಂಗದ ಶ್ರದ್ಧೆ, ಸಂಸ್ಕಾರ, ಸಂಸ್ಕೃತಿಗಳ ಜೀವ ರೀತಿಯನ್ನು ಅವರ ಸಂವೇದನೆಯ ಪಾತಳಿಯ ಮೇಲೇ ರೂಪುಗೊಳ್ಳಲು ಸಾಧ್ಯವಾದದ್ದು ಬಂಧದ ಸಡಿಲತೆಯ ಮೂಲಕವೇ. ಬಂಧದ ಸಡಿಲತೆಯ ಜೊತೆಗೆ ಕಥೆಗಳ ಗತಿಯೂ ನಿಧಾನವಾಗಿದೆ. ಈ ಕಥೆಗಳನ್ನು ಓದುವ ಸಹೃದಯರು ನಿಧಾನಗತಿಯಲ್ಲಿ ಓದಿದರೇನೇ ಕಥೆಗಳ ಧ್ವನಿಪೂರ್ಣ ಅನುಭವಗಳಿಗೆ ಸ್ಪಂದಿಸಲು ಸಾಧ್ಯ” ಎಂದು ಕುಕ್ಕರಹಳ್ಳಿಯವರ ಕಥೆಗಳ ಎಳೆಗಳನ್ನು ಬಿಡಿಸಿದ್ದಾರೆ.

ಇವರ ಕಥಾಸಂಕಲನಗಳಲ್ಲೇ ಭಿನ್ನವಾದದ್ದು ಬಾಳಾಟ ಕಥಾಸಂಕಲನ. ಈ ಕಥಾಸಂಕಲನದಲ್ಲೂ ಒಂಭತ್ತು ಕಥೆಗಳಿವೆ. ಈ ಪುಸ್ತಕಕ್ಕೆ ಮುನ್ನುಡಿಯಾಗಿ ಕುಕ್ಕರಹಳ್ಳಿ ಬಸವರಾಜು ಅವರು ತಮ್ಮ ಅವ್ವ ಕವಿತೆಯನ್ನೇ ಬಳಸಿಕೊಂಡಿದ್ದಾರೆ. ಲಂಕೇಶರ ಅವ್ವ ಕವಿತೆಯಷ್ಟೇ ಪ್ರಭಾವಶಾಲಿಯಾಗಿದೆ. ಇಬ್ಬರ ಕವಿತೆಯನ್ನೇನಾದರೂ ನಾನು ತೂಗಿ ನೋಡಿದರೆ ನನಗೆ ಎರಡೂ ಸಮವೇ. ಬದುಕಿನ ಬಾಳಾಟಕ್ಕೂ ಸೃಷ್ಟಿಯ ಸೆಲೆ ಅವ್ವನೇ ಆದ್ದರಿಂದ ಮುನ್ನುಡಿಯಾಗಿ ಈ ಕವಿತೆ ಅಡರಿಕೊಂಡಿರುವುದು ಅರ್ಥಪೂರ್ಣ ಎನಿಸುತ್ತದೆ.

ಇದನ್ನೂ ಓದಿ: ಓಶೋ ಕಂಡಂತೆ ವಿವೇಕಾನಂದರು

ಪ್ರತಿ ಕಥೆಯ ಆರಂಭವೂ ಪುಟ್ಟ ಕವಿತೆಯಿಂದಲೇ ಆರಂಭವಾಗುವುದು ಈ ಸಂಕಲನದ ವಿಶೇಷ. ಬಂಗಲೆ ಕಥೆಯಲ್ಲಿ ಕಷ್ಟದಿಂದ ಓದಿ ಬಂಗಲೆಯನ್ನು ಕಟ್ಟಿಸಿದ ರೋಚಕ ಕಥೆ. ನಾಗೇಶ ಓದುವಾಗ ಕುಪ್ಪಿದೀಪ ಅವನೊಟ್ಟಿಗೆ ಮಾತಾಡುತ್ತದೆ. ಕೂತಲ್ಲಿಯೇ ತೊಳಲಾಡುತ್ತದೆ. ದೇವನೂರರ ಕುಸುಮಬಾಲೆಯ ಜ್ಯೋತಮ್ಮದೀರು ನೆನಪಾಗುತ್ತಾರೆ.

’ಅವ್ವ ಬರಲೇ ಇಲ್ಲ’ ಕೃತಿಯಲ್ಲಿ ತಮ್ಮ ಕವನಗಳನ್ನು ಬಸವರಾಜು ಅವರು ದಾಖಲಿಸಿದರು. ಕನ್ನಡ ಸಾಹಿತ್ಯ ಲೋಕವು ಇವರ ಸಾಹಿತ್ಯವನ್ನು ಮರುಪ್ರವೇಶಿಸಿ, ಅಗಲಿದ ಚೇತನವನ್ನು ಅರ್ಥಪೂರ್ಣವಾಗಿ ನೆನೆಯುವ ಅಗತ್ಯವಿದೆ.

ಅಭಿಷೇಕ್ ವೈ.ಎಸ್

ಅಭಿಷೇಕ್ ವೈ.ಎಸ್
ಯುವ ಕವಿ, ಮೈಸೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...