Homeಮುಖಪುಟಕೊರೊನಾ: ತ್ವರಿತ ಲಸಿಕೆ ಹೆಸರಿನಲ್ಲಿ ನಮ್ಮ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿರುವ ICMR‌!

ಕೊರೊನಾ: ತ್ವರಿತ ಲಸಿಕೆ ಹೆಸರಿನಲ್ಲಿ ನಮ್ಮ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿರುವ ICMR‌!

- Advertisement -

ಕೋವಿಡ್-19 ಪಿಡುಗಿನ ಪರಿಣಾಮವಾಗಿ ಯಾವುದೇ ಪೂರ್ವಯೋಜನೆಯಿಲ್ಲದೆ ಹೇರಲಾದ ಲಾಕ್‌ಡೌನ್‌ನಿಂದ ಕುಸಿದುಬಿದ್ದ ಅನೇಕ ಸಂಗತಿಗಳಲ್ಲಿ ನಿರ್ಣಾಯಕವಾದದ್ದು ಎಂದರೆ ಆಡಳಿತ. ಭಾರತದ ಆಡಳಿತ ವ್ಯವಸ್ಥೆ ಎಷ್ಟು ನಿಷ್ಕ್ರಿಯ ಎಂಬುದನ್ನು ಪರಿಗಣಿಸಿದಲ್ಲಿ ಇದು ಅನಿರೀಕ್ಷಿತವೇನಲ್ಲ. ಆದರೆ, ಅದು ಭಾರತದ ವೈಜ್ಞಾನಿಕ ಸಂಸ್ಥೆಗಳನ್ನೂ ಕಾಡಲಿದೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ( ICMR‌ )ಯ ವೈಜ್ಞಾನಿಕ ನಾಯಕತ್ವವೇ ಕುಸಿದುಬೀಳುವುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ.

ಕೇವಲ ಜಂಟಿ ಸಂಸದೀಯ ಸಮಿತಿಯ ತನಿಖೆಯಿಂದ ಮಾತ್ರವೇ ಪ್ರೊಫೆಸರ್ (ಡಾ.) ಬಲರಾಮ್ ಭಾರ್ಗವ, MD, DM, FRCP (Glasg), FRCP (Edin.), FACC, FAHA, FAMS, FNASC, FASc, FNA, DSC (ಇವುಗಳು ಅವರು ಪಡೆದ ಪದವಿಗಳು) ಮತ್ತು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿಯವರು- ICMR ‌ನ ಮಹಾ ನಿರ್ದೇಶಕರಾಗಿ ತಮ್ಮ ಸ್ಥಾನಮಾನದಿಂದ ಇಂತದ್ದೊಂದು ಪತ್ರವನ್ನು- ಅವರೇ ಉಲ್ಲೇಖಿಸಿರುವಂತೆ ತನ್ನ “ಸಹೋದ್ಯೋಗಿಗಳಿಗೆ” ಬರೆದದ್ದು ಏಕೆ ಮತ್ತು ಹೇಗೆ ಎಂಬುದನ್ನು ಬಹಿರಂಗಪಡಿಸಬಲ್ಲದು. ಜುಲೈ 2ರಂದು ಬರೆಯಲಾಗಿರುವ ಈ ಪತ್ರದಲ್ಲಿ ಭಾರತದ ದೇಶೀಯ ಕೋವಿಡ್-19 ಲಸಿಕೆ  (BBV152 COVID Vaccine)ಯ ತ್ವರಿತವಾದ ವೈದ್ಯಕೀಯ ಪರೀಕ್ಷಾ ಪ್ರಯೋಗಕ್ಕಾಗಿ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಎಂಬ ಸಂಸ್ಥೆಯೊಂದಿಗೆ ಐಸಿಎಂಆರ್ ಪಾಲುದಾರಿಕೆ ಮಾಡಿಕೊಂಡಿದೆ ಎಂದು ಅವರು ವಿವರಿಸಿದ್ದರು. “ಮೊತ್ತ ಮೊದಲ ದೇಶೀಯ ಲಸಿಕೆಯನ್ನು ಭಾರತವು ಅಭಿವೃದ್ಧಿಪಡಿಸುತ್ತಿದೆ” ಎಂದು ಪತ್ರದಲ್ಲಿ ಬರೆದಿರುವ ಡಾ. ಭಾರ್ಗವ ಅವರು, “ಇದು ಅತ್ಯುನ್ನತ ಆದ್ಯತೆಯ ಯೋಜನೆಯಾಗಿದ್ದು, ಸರಕಾರದ ಅತ್ಯುನ್ನತ ಮಟ್ಟದದಲ್ಲಿ ಇದರ ಬಗ್ಗೆ ನಿಗಾವಹಿಸಲಾಗಿದೆ” ಎಂಬುದಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಈಗ ಈ “ಅತ್ಯುನ್ನತ ಮಟ್ಟ” ಅಂದರೆ, ಏನು ಮತ್ತು ಯಾರು ಎಂಬುದು ನಮಗೆಲ್ಲರಿಗೂ ಗೊತ್ತಿದೆ.

ಆತಂಕಕಾರಿ ವಿಷಯ ಎಂದರೆ, ಈ ಪತ್ರವು ಮುಂದುವರಿದು, “ಎಲ್ಲಾ ವೈದ್ಯಕೀಯ ಪರೀಕ್ಷಾ ಪ್ರಯೋಗಗಳನ್ನು ಮುಗಿಸಿದ ಬಳಿಕ ತಡವಾಗಿ ಎಂದರೆ, ಆಗಸ್ಟ್ 15ರ ಒಳಗೆ ಸಾರ್ವಜನಿಕ ಆರೋಗ್ಯ ಬಳಕೆಗೆ ಬಿಡುಗಡೆಗೊಳಿಸಲು ಉದ್ದೇಶಿಸಲಾಗಿದೆ” ಎಂದು ಹೇಳುತ್ತದೆ. “ಬಿಬಿಐಎಲ್ ಈ ಗುರಿಯನ್ನು ತಲುಪಲು ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿದೆ” ಎಂದೂ ಪತ್ರದಲ್ಲಿ ಹೇಳಲಾಗಿದೆ. “ಆದರೆ’, (ಜವಾಬ್ದಾರಿ ಬೇರೆಯವರ ಹೆಗಲೇರುವುದು ಇಲ್ಲಿಯೇ!) “ಅಂತಿಮ ಫಲಿತಾಂಶವು ಈ ಯೋಜನೆಯಲ್ಲಿ ಭಾಗಿಯಾಗಿರುವ ಎಲ್ಲಾ ವೈದ್ಯಕೀಯ ಪರೀಕ್ಷಾ ಪ್ರಯೋಗ ತಾಣಗಳ ಸಹಕಾರದ ಮೇಲೆ ಅವಲಂಬಿಸಿದೆ” ಎಂದೂ ಈ ಪತ್ರದಲ್ಲಿ ಹೇಳಲಾಗಿದೆ.

ಈ ಪತ್ರವು ಈ ಅಂಶದೊಂದಿಗೆ ನಿಲ್ಲಬಹುದಿತ್ತು. ಯಾಕೆಂದರೆ ಇಲ್ಲಿ ಎರಡು ಸಮಸ್ಯೆಗಳಿವೆ. ಮೊದಲನೆಯದಾಗಿ, ಈ ಬಿಬಿಐಎಲ್ ಒಂದು ಖಾಸಗಿ ಸಂಸ್ಥೆಯಾಗಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮತ್ತು ಬಿಜೆಪಿ ಅಧ್ಯಕ್ಷ ನಡ್ಡಾ ಅವರಿಗಳಿಗೆ ನಿಕಟವಾದದ್ದು. ಇಂತಹ ಕೃಪಾಶ್ರಯವಿರುವಾಗ, ಅನೇಕ ಇತರ ಹೆಚ್ಚು ಅರ್ಹತೆಯಿರುವ ಸಂಸ್ಥೆಗಳು ಇರುವಾಗಲೂ, ಏಕೆ ಐಸಿಎಂಆರ್‌ ಇದೇ ನಿರ್ದಿಷ್ಟ ಸಂಸ್ಥೆಯನ್ನೇ ಈ ಲಸಿಕೆಯ ಸಾಮೂಹಿಕ ಉತ್ಪಾದನೆಗೆ ಆಯ್ಕೆ ಮಾಡಿತು ಎಂಬುದನ್ನು ಊಹಿಸುವುದು ಕಷ್ಟದ ಕೆಲಸವಲ್ಲ. ಅಲ್ಲದೆ ಈ ಪತ್ರ ಈ ನಿರ್ಧಿಷ್ಟ ಖಾಸಗಿ ಸಂಸ್ಥೆಯನ್ನೇ ಆಯ್ಕೆ ಮಾಡಿಕೊಂಡದ್ದು ಏಕೆ ಎಂಬುದನ್ನು ಸಮರ್ಥಿಸಿಕೊಳ್ಳುವುದಕ್ಕೆ ಯಾವುದೇ ಪ್ರಯತ್ನ ಮಾಡುವುದಿಲ್ಲ.

ಎರಡನೆಯದಾಗಿ, ಇದೊಂದು “ಅತ್ಯಂತ ಉನ್ನತ ಆದ್ಯತೆಯ” ಮತ್ತು “ಸರಕಾರದ ಅತ್ಯುನ್ನತ ಮಟ್ಟದಲ್ಲಿ”  ನಿಗಾವಹಿಸಿರುವ ಕಾರ್ಯಕ್ರಮ ಎಂದು ಒಪ್ಪಿಕೊಳ್ಳುವಾಗಲೇ, ಮಹಾ ನಿರ್ದೇಶಕರು ಕೋವಿಡ್ ನಿಯಂತ್ರಿಸಲು ಲಸಿಕೆ ಅಭಿವೃದ್ಧಿಪಡಿಸುವುದರ ತುರ್ತಿಗೆ ಬಹುಶಃ ಹೆಚ್ಚಿನ ಒತ್ತು ನೀಡಿದ್ದಾರೆ ಎನ್ನಬಹುದಿತ್ತು. ಆದರೆ, “ಸಾರ್ವಜನಿಕ ಆರೋಗ್ಯ ಬಳಕೆಗೆ ಬಿಡುಗಡೆ ಮಾಡಲು” ಮತ್ತು ಅದೂ ಕೂಡಾ “ತಡವಾಗಿ ಎಂದರೆ, 2020ರ ಆಗಸ್ಟ್ 15ರ ಒಳಗೆ” ಎಂಬ ಸ್ಪಷ್ಟ ಗಡುವಿನ ಸೂಚನೆ ಕೊಟ್ಟಿರುವುದು ಅದರ ಉದ್ದೇಶವನ್ನು ಊಹಿಸಲು ಹೆಚ್ಚಿನ ಬುದ್ಧಿವಂತಿಕೆ ಬೇಕಾಗಿಲ್ಲ.

ಅಂದು- ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವಾಗ ಭಾರತವು “ಅತ್ಯಂತ ಮಾರಕ”ವಾದ ಪಿಡುಗಿಗೆ ಎಲ್ಲರಿಗಿಂತಲೂ ಮೊದಲಾಗಿ ಲಸಿಕೆಯನ್ನು ಕಂಡುಹಿಡಿದಿದೆ ಎಂದು ಜಗತ್ತಿನ ಮುಂದೆ ಘೋಷಿಸಿ, ಎಲ್ಲಾ ಶ್ರೇಯಸ್ಸನ್ನು ಬಾಚಿಕೊಳ್ಳುವ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಗುವುದಿಲ್ಲವೇ?

ಯಾರಿಗೆ ಗೊತ್ತು?- ಈ ಲಸಿಕೆಯನ್ನು ಭಾರತದಲ್ಲಿ ಸಾಮೂಹಿಕವಾಗಿ ಉತ್ಪಾದಿಸಿ, ಇಡೀ ಪ್ರಪಂಚಕ್ಕೆ ಉಚಿತವಾಗಿ ಹಂಚವುದಾಗಿ ಕೂಡ ಅವರು ಘೋಷಿಸಬಹುದು. ಇದು ಭಾರತದ ಸಹೃದಯತೆಯ ಪ್ರತೀಕ ಎಂದು ಘೋಷಣೆ ಮಾಡಬಹುದು. ಆಗ ಜಾಗತಿಕವಾಗಿ ಭಾರಿ ರಾಜಕೀಯ ಲಾಭ ಗಿಟ್ಟಿಸಬಹುದು ಮತ್ತು ಮೋದಿಯ ಸರ್ವಾಧಿಕಾರಿ ಮತ್ತು ವಿಭಜನಕಾರಿ ಆಡಳಿತ ಶೈಲಿಯ ಬಗೆಗಿನ ಟೀಕೆಗಳು ಬೆಳಕಿನ ವೇಗದಲ್ಲಿ ಕರಗಿ, ಬ್ರಹ್ಮಾಂಡದ ಅಂತರಾತ್ಮದಲ್ಲಿ ಲೀನವಾಗಬಹುದು.

ಇಲ್ಲಿಂದ ಮುಂದೆ ಈ ಪತ್ರ ಇನ್ನಷ್ಟು ದುರುದ್ದೇಶದ ಧ್ವನಿ ಪಡೆದುಕೊಳ್ಳುತ್ತದೆ. “ಕೋವಿಡ್-19 ಕಾರಣದಿಂದ ಉಂಟಾಗಿರುವ ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿಯ ಹಿನ್ನೆಲೆಯಲ್ಲಿ ಲಸಿಕೆಯನ್ನು ತುರ್ತಾಗಿ ಬಿಡುಗಡೆಗೊಳಿಸುವ ಅಗತ್ಯವಿದೆ” (ಒತ್ತು ನೀಡಲಾಗಿದೆ) ಎಂದು ಡಾ. ಭಾರ್ಗವ ಬರೆಯುತ್ತಾರೆ. ಆದುದರಿಂದ ಮಾನವನ ಮೇಲೆ ಪ್ರಯೋಗಕ್ಕೆ ಆಯ್ಕೆ ಮಾಡಲಾಗಿರುವ ಸಂಸ್ಥೆಗಳು ತ್ವರಿತವಾಗಿ ಅಂಗೀಕಾರ ಪಡೆಯಲು ಮುಂದಾಗಬೇಕು ಎಂದು ಕಟ್ಟುನಿಟ್ಟಾಗಿ ಸಲಹೆ ಮಾಡಲಾಗಿದೆ” (ಒತ್ತು ನೀಡಲಾಗಿದೆ). “2020ರ ಜುಲೈ 7ರ ಒಳಗಾಗಿ ಪ್ರಯೋಗಕ್ಕೆ ಒಳಪಡಲಿರುವ ರೋಗಿಗಳ ನೋಂದಣಿಯನ್ನು ಖಾತರಿಪಡಿಸಬೇಕು” ಎಂದೂ ಈ ಪತ್ರದಲ್ಲಿ ಹೇಳಲಾಗಿದೆ. ಈ ನೋಂದಣಿ ಎಂದರೆ, ಆರೋಗ್ಯವಂತ ಸ್ವಯಂಸೇವಕರು ಈ ಪ್ರಯೋಗ ಲಸಿಕೆಯನ್ನು ಚುಚ್ಚಿಸಿಕೊಳ್ಳುವಂತೆ ಕೆಲವು ನಿಯಮಗಳಿಗೆ ಒಳಪಟ್ಟು ನೋಂದಾಯಿಸಿಕೊಳ್ಳುವುದು.

ಆದರೆ, ವರದಿಗಳು ಹೇಳುವಂತೆ ಜುಲೈ 7ರ ಒಳಗೆ- ಭಾಗವಹಿಸುವ ಸಂಸ್ಥೆಗಳಿಗೆ ಸೂಕ್ತವಾದ ಹಾದಿಯಲ್ಲಿ ಈ ಪತ್ರವು ತಲುಪಿಲ್ಲ. ಇನ್ನು ಈ ಪತ್ರವು ಸೋರಿಕೆಯಾಗಿ, ಜಗತ್ತಿನ ಯಾವುದೇ ಒಂದು ವೈಜ್ಞಾನಿಕ ಸಂಸ್ಥೆಗೆ ಹಿಂದೆಂದೂ ಒದಗದಷ್ಟು ಇರಿಸುಮುರುಸನ್ನು ಉಂಟುಮಾಡಿದೆ. ನಂಬಿಕೆ ಉಳಿಸಿಕೊಂಡಿರುವ ಯಾವುದೇ ಪ್ರಮುಖ ಲಸಿಕೆ ಸಂಶೋಧನಾ ಸಂಸ್ಥೆಯಾಗಲೀ, ಈ ತನಕ ಲಸಿಕೆ ತಯಾರಿಕೆಯಲ್ಲಿ ಹಣ ಹೂಡಿರುವ ಯಾವುದೇ ದೇಶವಾಗಲೀ, ಒಂದು ತಿಂಗಳಷ್ಟು ಅಲ್ಪ ಕಾಲಾವಧಿಯನ್ನು ವೈದ್ಯಕೀಯ ಪರೀಕ್ಷಾ ಪ್ರಯೋಗ ಮುಗಿಸಿ ತರಾತುರಿಯಲ್ಲಿ ಸಾಮೂಹಿಕ ಉತ್ಪಾದನೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿದಿರುತ್ತವೆ.

ಒಂದು ಲಸಿಕೆಯ ಸಂಶೋಧನೆಗೆ ಬಹಳಷ್ಟು ಕಾಲ ಬೇಕು. ಬಹಳಷ್ಟು ಪರೀಕ್ಷಾ ಪ್ರಯೋಗಗಳನ್ನು ನಡೆಸಬೇಕು. ಇಷ್ಟು ಮಾಡಿದರೂ ಲಸಿಕೆ ಯಶಸ್ವಿಯಾಗುತ್ತದೆ ಎಂದು ಹೇಳಲಾಗದು. ಯಶಸ್ವಿ ಲಸಿಕೆಯನ್ನು ಕಂಡುಹಿಡಿದರೂ, ಅದನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ವಿಶ್ವಾಸಾರ್ಹ ವೈಜ್ಞಾನಿಕ ಆರೋಗ್ಯ ಸಂಸ್ಥೆಗಳು ಪ್ರಮಾಣೀಕರಿಸಬೇಕಾಗುತ್ತದೆ. ಉದಾಹರಣೆಗೆ ಎಚ್‌ಐವಿ/ ಏಡ್ಸ್ ರೋಗಕ್ಕೆ ಲಸಿಕೆಯನ್ನು ಕಂಡುಹಿಡಿಯಲು ಶ್ರಮಿಸಿದ ಯಾರನ್ನು ಬೇಕಾದರೂ ನೀವು ಕೇಳಿನೋಡಬಹುದು.

ಮೂರನೇ ವಿಷಯವು ಹೆಚ್ಚು ಸಮಸ್ಯಾತ್ಮಕವಾಗಿದ್ದರೆ ನಾಲ್ಕನೆಯ ಪ್ರಹಾರ ವಿಜ್ಞಾನ ಮತ್ತು ಮಾನವೀಯತೆಯ ಮೇಲೆ ದಾಳಿ ನಡೆಸಿದೆ. ಮಹಾ ನಿರ್ದೇಶಕರ ಈ ಪತ್ರವು ಈ ನಿರ್ದೇಶನಗಳನ್ನು ಪಾಲಿಸದೇ ಇದ್ದಲ್ಲಿ “ತುಂಬಾ ಗಂಭೀರವಾಗಿ ಪರಿಗಣಿಸಲಾಗುತ್ತದೆ” ಎಂಬ ಪರೋಕ್ಷ ಬೆದರಿಕೆಯನ್ನೂ ಒಡ್ಡಿದ್ದಾರೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಈ ಪರೀಕ್ಷಾ ಪ್ರಯೋಗಗಳಿಗೆ ಆಯ್ಕೆ ಮಾಡಲಾಗಿರುವ 13 ಸಂಸ್ಥೆಗಳ ಮುಖ್ಯಸ್ಥರು, ಸದ್ಯಕ್ಕೆ ಕೋವಿಡ್ ಪಿಡುಗಿನ ಹೋರಾಟದಲ್ಲಿ ಆಡಳಿತ ನಡೆಸುತ್ತಿರುವ ಮತ್ತು ಹಲವು ಕರಾಳ ದಂಡನಾ ಅವಕಾಶಗಳನ್ನೂ ಹೊಂದಿರುವ ವಿಕೋಪ ನಿರ್ವಹಣಾ ಕಾಯಿದೆ, 2005ರ ಉಲ್ಲಂಘನೆಗೆ ಬಾಧ್ಯಸ್ಥರಾಗಿರುತ್ತಾರೆ. ಅವರ ವೈಫಲ್ಯವು ಪ್ರಧಾನಿ ನರೇಂದ್ರ ಮೋದಿಯ ಕೋಪಕ್ಕೆ ಗುರಿಯಾಗುವ ಪರೋಕ್ಷ ಬೆದರಿಕೆಯೂ ಇದೆ. ಮತ್ತೊನ್ಯಾರು? ಈಗ ಅವರು ಅಂದರೆ, ಅಧಿಕಾರಿಗಳು ಇಂತಹಾ ಭಯದಿಂದ ಪರೀಕ್ಷಾ ಪ್ರಯೋಗಕ್ಕೆ ಅಭ್ಯರ್ಥಿಗಳನ್ನು ನೋಂದಾಯಿಸಲು ತುರ್ತಾಗಿ ತೊಡಗಿಸಿಕೊಳ್ಳುತ್ತಾರೆ. ಇದನ್ನವರು ಹೇಗೆ ಮಾಡಬಹುದು ಎಂದು ನಾವೆಲ್ಲರೂ ಊಹಿಸಬಹುದು.

ಮಾನವನ ಮೇಲೆ ನಡೆಸುವ ವೈದ್ಯಕೀಯ ಪರೀಕ್ಷಾ ಪ್ರಯೋಗದಲ್ಲಿ ಬಲಿಪಶುಗಳಾಗುವ ನತದೃಷ್ಟರು ಎಂದರೆ, ತಮ್ಮ “ಸೇವೆ”ಗಾಗಿ ನೀಡಲಾಗುವ ಅತ್ಯಲ್ಪ ಪರಿಹಾರಕ್ಕಾಗಿ ತಹತಹಿಸುವ, ಏನೂ ಇಲ್ಲದ ನಿರ್ಗತಿಕರು. ಅವರು ಅನಕ್ಷರಸ್ಥರಾಗಿದ್ದು, ಗೊತ್ತಿಲ್ಲದಂತೆಯೇ ತಮ್ಮ ಮೇಲಾಗುವ ಪರಿಣಾಮ ಏನು ಎಂದು ತಿಳಿಯದೆಯೇ- ಈ ಪ್ರಯೋಗಗಳಿಗೆ ತಮ್ಮ ದೇಹಗಳನ್ನು ಒಪ್ಪಿಸಲು ಸಹಿ ಅಥವಾ ಹೆಬ್ಬೆಟ್ಟು ಒತ್ತುವ ಅಮಾಯಕರಾಗಿರುವ ಸಾಧ್ಯತೆಗಳು ಹೆಚ್ಚಿವೆ.

ಐಸಿಎಂಆರ್‌ನ ವೆಬ್‌ಸೈಟಿನಲ್ಲಿ ಈ ಕುರಿತ ಯಾವುದೇ ಒಂದು ಮಾಹಿತಿ ಲಭ್ಯವಿಲ್ಲ. ಈ ಪರೀಕ್ಷೆಗಳು ಐಸಿಎಂಆರ್‌ನ ಸ್ವಂತ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ನಡೆಯುತ್ತವೆ ಎಂಬ ಬಗ್ಗೆ ಚಿಕ್ಕ ಭರವಸೆಯೂ ಇಲ್ಲ. ಇಲ್ಲಿ ಏಳುವ ಪ್ರಶ್ನೆ ಎಂದರೆ, ಬೇಕೆಂದೇ ಮಾರ್ಗದರ್ಶಿ ಸೂತ್ರಗಳನ್ನು ಕಡೆಗಣಿಸಲಾಗುತ್ತಿದೆಯೇ ಎಂಬುದು.

ಜಗತ್ತಿನಾದ್ಯಂತದಿಂದ ಕಠೋರವಾದ ಟೀಕೆಗಳಿಂದ ಚುಚ್ಚಿದಂತಾದ ಐಸಿಎಂಆರ್‌, ಜುಲೈ 4ರಂದು ಒಂದು ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿತು. ಅದರಲ್ಲಿ, “ಐಸಿಎಂಆರ್‌ನ ಪ್ರಕ್ರಿಯೆಯು ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಜಾಗತಿಕವಾಗಿ ಒಪ್ಪಿತವಾದ ತ್ವರಿತ ಲಸಿಕೆ ಅಭಿವೃದ್ಧಿ ನಿಯಮಾವಳಿಗೆ ಅನುಗುಣವಾಗಿದ್ದು, ಮನುಷ್ಯನ ಮೇಲೆ ಮತ್ತು ಪ್ರಾಣಿಗಳ ಮೇಲೆ ನಡೆಯುವ ಪರೀಕ್ಷಾ ಪ್ರಯೋಗಗಳು ಸಮಾನಾಂತರವಾಗಿ ನಡೆಯುತ್ತವೆ” ಎಂದು ಹೇಳಲಾಗಿದೆ. (ಇದು ಪ್ರಕಟಣೆಯಲ್ಲಿಯೇ ಇರುವಂತದ್ದು.) “ಐಸಿಎಂಆರ್ ಮಹಾ ನಿರ್ದೇಶಕ ಎಲ್ಲ ಪ್ರಯೋಗ ಸ್ಥಳಗಳ ಮೇಲ್ವಿಚಾರಕರಿಗೆ ಪತ್ರ ಬರೆದಿದ್ದು, ಅನಗತ್ಯ ನಿಯಾಮಾವಳಿಗಳನ್ನು ಬದಿಗೊತ್ತಿ ಪ್ರಯೋಗಗಳಲ್ಲಿ ಭಾಗಿಯಾಗುವವರನ್ನು ತ್ವರಿತವಾಗಿ ನೊಂದಾಯಿಸಿಕೊಳ್ಳಲು ಅನುವಾಗಲು ಮಾತ್ರವೇ ಹೊರತು ಅಗತ್ಯ ಪ್ರಕ್ರಿಯೆಯನ್ನು ಕೈಬಿಡಲು ಅಲ್ಲ” ಎಂದು ಕೂಡ ಮುಂದುವರೆದು ಸ್ಪಷ್ಟನೆ ನೀಡಿತ್ತು.

ಈ ಯೋಜನೆಗೆ ಬೇಕಾದ ಅಗತ್ಯ ರಾಸಾಯನಿಕಗಳನ್ನು ಮತ್ತು ವೈದ್ಯಕೀಯ ಸಲಕರಣೆಗಳಿಗೆ ಕೊಳ್ಳಲು ಅನುಮತಿ ತಡೆಹಿಡಿಯುವ ಅಥವಾ ಬಿಲ್ಲುಗಳನ್ನು ತಡೆಹಿಡಿಯುವ ಯಾವುದೇ ಮಾಮೂಲಿ ಕೆಂಪುಪಟ್ಟಿ ಅಥವಾ ಅಡಚಣೆಗಳನ್ನು ಮಾಡುವ ಧೈರ್ಯವನ್ನು ಯಾವುದೇ ಅಧಿಕಾರಶಾಹಿ ತೋರುವಂತಹ ಸಾಧ್ಯತೆಗಳನ್ನು ಊಹಿಸಲೂ ಸಾಧ್ಯವಿಲ್ಲ. ಯಾಕೆಂದರೆ, ಮೋದಿಯಂತಹಾ ಮೋದಿಯ ಕೋಪಕ್ಕೆ ತಾವು ಗುರಿಯಾಗಬಹುದು ಎಂಬ ಭಯ ಅವರಿಗೆ ಇದ್ದೇ ಇರುತ್ತದೆ. ಆದರೆ, ಈ “ಕೆಂಪು ಪಟ್ಟಿ”ಯನ್ನು ನಿವಾರಿಸಿದ್ದು ಹೇಗಾದರೂ ಮಾಡಿ ವೈದ್ಯಕೀಯ ಪರೀಕ್ಷಾ ಪ್ರಯೋಗಕ್ಕೆ ಎರಡೇ ದಿನಗಳಲ್ಲಿ ಮನುಷ್ಯರನ್ನು ನೇಮಿಸಿಕೊಳ್ಳುವ ಹುನ್ನಾರ ಅಲ್ಲವೇ? ಇದಕ್ಕೆ ಕೆಲವು ತಿಂಗಳುಗಳು ಬೇಡವೆಂದು ಭಾವಿಸಿದರೂ, ಸಾಮಾನ್ಯವಾಗಿ ಕೆಲವು ವಾರಗಳ ಅಗತ್ಯ ಇದ್ದೇ ಇದೆ. ಇಂತಿರುವಾಗ, ಕೋವಿಡ್-19 ಲಸಿಕೆಯ ಪರೀಕ್ಷೆಯಲ್ಲಿ ಐಸಿಎಂಆರ್‌ನ ನಡವಳಿಕೆಯು ಜಾಗತಿಕವಾಗಿ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿರುವುದು ಮಾತ್ರವಲ್ಲ; ಬಲವಾದ ಪ್ರತಿಕ್ರಿಯೆಗಳನ್ನೂ ಪ್ರೇರೇಪಿಸಿದೆ.

ಭಾರತೀಯ ವೈದ್ಯರ ವೃತ್ತಿಪರತೆ ಮತ್ತು ಪ್ರಾಮಾಣಿಕತೆಯ ಬಗ್ಗೆ ಸಾಮಾಜಿಕ ವಲಯಗಳಲ್ಲಿ ಆಗಾಗ ಕೇಳಿಬರುತ್ತಿರುವ ಟೀಕೆಗಳು ಸಲಹೆ ರೂಪದಲ್ಲಿ ಅನುಕೂಲಕರವಾಗಿವೆಯಾದರೂ, ಇಂತಹಾ ಸಂಶಯಗಳನ್ನು ಭಾರತೀಯ ವೈದ್ಯಕೀಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಇರುವವರ ಬಗ್ಗೆ ಹರಿಸಬಾರದು ಎಂದೂ ಡಾ. ಭಾರ್ಗವ ಒತ್ತಿಹೇಳಿದ್ದಾರೆ. ಹೀಗೆ ಹೇಳುವಾಗ- ಅವರು ಐಸಿಎಂಆರ್‌ನ ಮಹಾ ನಿರ್ದೇಶಕರಾಗಿ ಅಲ್ಲ, ಬದಲಾಗಿ ಸರಕಾರದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಯಾಗಿ ಹೇಳಿಕೆ ನೀಡುತ್ತಿದ್ದಾರೆ ಎಂಬುದು ಸುಸ್ಪಷ್ಟ. ಬಹುಶಃ ಅವರೇ ಹೇಳಿರುವಂತೆ “ಸರಕಾರದ ಅತ್ಯುನ್ನತ ಮಟ್ಟದ ಒತ್ತಡ” ಅವರನ್ನು ಹಾಗೆ ಮಾಡಿಸಿರಬಹುದು ಅಥವಾ ಆಡಿಸಿರಬಹುದು. ಅದಕ್ಕಾಗಿಯೇ ಈ ಪತ್ರಕ್ಕೆ ಸಹಿ ಹಾಕುವಾಗ ಅವರು ಎಳ್ಳಷ್ಟೂ ಯೋಚಿಸಲಿಲ್ಲ.

ಪುಣೆಯಲ್ಲಿ ಕೇಂದ್ರವನ್ನು ಹೊಂದಿರುವ ರಾಷ್ಟ್ರೀಯ ವೈರಾಣು ಸಂಶೋಧನಾ ಕೇಂದ್ರ (ಎನ್‌ಐವಿ)ವು ಬಿಬಿಐಎಲ್/ ಐಸಿಎಂಆರ್‌ಗೆ ವಿಶ್ವಾಸಾರ್ಹವಾಗಿಲ್ಲವೆ? ಈ ಯೋಜನೆಗೆ ಸ್ವಯಂಸೇವಕರನ್ನು ಆಯ್ಕೆ ಮಾಡುವಾಗುವಾಗ ಉತ್ತರದಾಯಿತ್ವ ಮತ್ತು ಸಾರ್ವಜನಿಕ ಪಾರದರ್ಶಿಕತೆ ಬಗ್ಗೆ ಭರವಸೆ ನೀಡುವವರು ಯಾರು? ಒಂದು ನಿರ್ದಿಷ್ಟ ಮತ್ತು ಅಸಾಧ್ಯವಾದ ಕಾಲಮಿತಿಯ ಒಳಗೆ ಲಸಿಕೆಯನ್ನು ಅಭಿವೃದ್ಧಿಪಡಿಸಬೇಕು ಎಂಬ ಒತ್ತಡವನ್ನು ಐಸಿಎಂಆರ್‌ನ ಮೇಲೆ ಹೇರಲಾಗುತ್ತಿಲ್ಲವೆ?

ಪರೀಕ್ಷಾ ಕೇಂದ್ರಗಳಿಗೆ ಅಗತ್ಯವಾದ ಸಲಕರಣೆಗಳನ್ನು ಒದಗಿಸದೇ ಇದ್ದಲ್ಲಿ,   ದಾಖಲೆಗಳನ್ನು ಖಚಿತವಾಗಿ ಮತ್ತು ನಿಖರವಾಗಿ ನಮೂದಿಸಬಲ್ಲ ಮತ್ತು ನಿರ್ಭೀತಿಯಿಂದ ಫಲಿತಾಂಶಗಳನ್ನು ವರದಿ ಮಾಡಬಲ್ಲ ಅರ್ಹತೆಯುಳ್ಳ ಸಿಬ್ಬಂದಿ ಇಲ್ಲದೇ ಇದ್ದಲ್ಲಿ, ಏನಾಗುತ್ತದೆ? ಒಂದು ವೇಳೆ, ಈ ಲಸಿಕೆಯು ರೋಗಕ್ಕಿಂತಲೂ ಹೆಚ್ಚು ಭಯಾನಕವಾಗಿದ್ದರೆ, ಏನು ಮಾಡುತ್ತೀರಿ? ಭಾರತದಂತಹ ಜನ ಬಾಹುಳ್ಯ ಇರುವ ದೇಶದಲ್ಲಿ ಅದರ ಪರಿಣಾಮ ಊಹಿಸಲೂ ಅಸಾಧ್ಯವಾದುದು. ಒಂದು ಕೆಟ್ಟ ಲಸಿಕೆ ಈ ದುಷ್ಪರಿಣಾಮಗಳನ್ನು ಮಾಡಬಲ್ಲದು.

ಯಾರೋ ಒಬ್ಬರು ತಪ್ಪು ಮಾಡಿದರೆಂದು ಹೇಳಬಹುದು. ಆದರೆ ಐಸಿಎಂಆರ್ ಇದನ್ನು ಮಾಡುತ್ತಿಲ್ಲ. ಅದು ತನ್ನ ಭಯಾನಕ ನಿರ್ಧಾರದ ಸಮರ್ಥನೆಯಲ್ಲಿ ತೊಡಗಿದೆ. ಇದನ್ನು ಖಡಾಖಂಡಿತವಾಗಿ ವಿರೋಧಿಸಬೇಕಾದ ಅಗತ್ಯವಿದೆ. ನಮ್ಮ ಜೀವಗಳು ಮತ್ತು ಮುಂದಿನ ಹಲವಾರು ತಲೆಮಾರುಗಳು ಈ ಹೋರಾಟವನ್ನು ಅವಲಂಬಿಸಿವೆ.

  • ಲಿಯೋ ಸಲ್ಡಾನಾ, ಪರಿಸರವಾದಿ ಕಾರ್ಯಕರ್ತ
  • ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಇದನ್ನೂ ಓದಿ: ಕೊರೊನಾ: ವ್ಯಾಕ್ಸೀನ್ ಎಂದರೇನು? ಜಾಗತಿಕ ಸ್ಪರ್ಧೆಯು ಬೇಗ ವ್ಯಾಕ್ಸೀನ್ ಒದಗಿಸುತ್ತದೆಯೇ? 

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ ಚುನಾವಣೆ: ಬಿಜೆಪಿ ಶಾಸಕರನ್ನು ಬೆನ್ನಟ್ಟಿ ಸ್ವಕ್ಷೇತ್ರದಿಂದ ಓಡಿಸಿದ ಜನತೆ

0
ಮುಂಬರುವ ಉತ್ತರ ಪ್ರದೇಶದ ಚುನಾವಣಾ ಕಣ ದಿನ ದಿನಕ್ಕೂ ರಂಗೇರುತ್ತಿದ್ದು, ಪಕ್ಷದ ಪರ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ಶಾಸಕರನ್ನು ಅವರ ಸ್ವಂತ ಕ್ಷೇತ್ರ ಮುಜಾಫರ್‌ನಗರದ ಗ್ರಾಮಸ್ಥರು ಓಡಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್...
Wordpress Social Share Plugin powered by Ultimatelysocial