ಸೆಪ್ಟಂಬರ್ 5ರ ಸಂಜೆ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣ ನಿರೀಕ್ಷೆಗೂ ಮೀರಿ ಭರ್ತಿಯಾಗಿತ್ತು. ಗೌರಿ ನಮ್ಮನ್ನಗಲಿ 5 ವರ್ಷಗಳಾದ ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ’ಗೌರಿ ನೆನಪು’ ಕಾರ್ಯಕ್ರಮಕ್ಕೆ ಮುಖ್ಯ ಉಪನ್ಯಾಸ ನೀಡಲು ಬರಹಗಾರ್ತಿ ಅರುಂಧತಿ ರಾಯ್ ಅವರು ಒಪ್ಪಿ ಬಂದಿದ್ದರು. ಸೆಪ್ಟಂಬರ್ 1ರಂದು ಅರುಂಧತಿ ರಾಯ್ ಅವರು ತಮ್ಮ ತಾಯಿ ಮೇರಿ ರಾಯ್ ಅವರನ್ನು ಕಳೆದುಕೊಂಡಿದ್ದರು. ಆ ಅಗಲಿಕೆಯ ದುಃಖದ ನಡುವೆಯೂ ಬಂದಿದ್ದ ಅವರು, ’ಗೌರಿ ಅವರ ಕಾರ್ಯಕ್ರಮಕ್ಕೆ ಹೋಗದೆ ಇರವುದನ್ನ ನಮ್ಮ ತಾಯಿ ಖಂಡಿತಾ ಒಪ್ಪುತ್ತಿರಲಿಲ್ಲ’ ಎಂಬ ಮನಕಲಕುವ ಮಾತುಗಳೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಹರಿವ ನದಿಯ ನಾದದ ಗುಂಗಿನಂತೆ ತಮ್ಮ ಎಂದಿನ ಶೈಲಿಯಲ್ಲಿ ಸದರಿ ಸರ್ಕಾರ ಮತ್ತದರ ಫ್ಯಾಸಿಸ್ಟ್ ಧೋರಣೆಯನ್ನು ತರಾಟೆಗೆ ತೆಗೆದುಕೊಂಡ ಅವರ ಉಪನ್ಯಾಸ ಪ್ರತಿ ಅಧಿಕಾರ ಕೇಂದ್ರವನ್ನು ಪ್ರಶ್ನಿಸುವ ಲೋಕನಿಷ್ಠುರತೆಯ ಭಾವವನ್ನು ನೆರೆದಿದ್ದ ಸಭಿಕರ ಎದೆಯಲ್ಲಿ ಜಾಗೃತಗೊಳಿಸಿರುವುದರಲ್ಲಿ ಎರಡು ಮಾತಿಲ್ಲ.
’ಎಲ್ಲಾ ಪ್ರತಿರೋಧದ ದಮನಕ್ಕೆ ನಿಂತಿರುವ ಇಂತಹ ಸರ್ಕಾರ ನಿಮಗೆ ಮಾತನಾಡಲು ಕನಿಷ್ಠ ಅವಕಾಶ ನೀಡಿತು ಎಂದಿಟ್ಟುಕೊಳ್ಳಿ; ಆಗ ನೀವು ನಮ್ಮ ನಿಮ್ಮೆಲ್ಲರ ಪರವಾಗಿ ಯಾವ ಮೂರು ಪದಗಳನ್ನು ಮಾತನಾಡಲು ಬಯಸುತ್ತೀರಿ’ ಎಂಬ ಪ್ರೊ. ಜಿ.ಎನ್ ದೇವಿ ಅವರ ಪ್ರಶ್ನೆಗೆ ಅರುಂಧತಿ ಅವರು ಸಮಾನತೆ, ನ್ಯಾಯ ಮತ್ತು ಸೌಂದರ್ಯ ಎಂದರು. ದೇವಿ ಅವರು ತಮ್ಮ ಪ್ರಶ್ನೆಯನ್ನು ಮುಂದುವರೆಸಿ, ’ಅಧಿಕಾರಕ್ಕೆ ಸತ್ಯ ಹೇಳುವ, ಪ್ರತಿರೋಧ ತೋರಿಸುವ ಅರುಂಧತಿ, ತೀಸ್ತಾ, ಗೌರಿ ಅಂತಹವರ ದಿಟ್ಟತೆಯ-ಧೈರ್ಯದ ಸೌಂದರ್ಯದ ಮೂಲ’ ಯಾವುದೆಂದರು. ಅದಕ್ಕೆ ಅರುಂಧತಿ ತಮ್ಮ ’ದ ಎಂಡ್ ಆಫ್ ಇಮ್ಯಾಜಿನೇಷನ್’ ಪ್ರಬಂಧದಲ್ಲಿ (ನ್ಯೂಕ್ಲಿಯರ್ ಪರೀಕ್ಷೆಗಳನ್ನು ವಿರೋಧಿಸಿ ಬರೆದ ಪ್ರಬಂಧ) ದಾಖಲಿಸಿದ್ದ ಮಾತುಗಳನ್ನು ಓದುವ ಮೂಲಕ ಉತ್ತರಿಸಿದರು. ಆ ಮಾತುಗಳ ಕನ್ನಡಾನುವಾದ ಹೀಗಿದೆ: “ಪ್ರೀತಿಸುವುದು. ಪ್ರೀತಿಸಿಕೊಳ್ಳುವುದು. ನನ್ನ ಕೇವಲತೆಯನ್ನು ಎಂದಿಗೂ ಮರೆಯದಿರುವುದು. ವಿವರಿಸಲೂ ಕಷ್ಟವಾಗುವ ಹಿಂಸೆಯ ಮತ್ತು ನನ್ನ ಸುತ್ತಲಿನ ಬದುಕಿನ ಅಸಮಾನತೆಯ ಜೊತೆಗೆ ಎಂದಿಗೂ ಹೊಂದಿಕೊಳ್ಳದಿರುವುದು. ದುಃಖದ ಜಾಗಗಳಲ್ಲಿ ಸಂತೋಷವನ್ನು ಅರಸುವುದು. ಸೌಂದರ್ಯವಿರುವ ಕಡೆಗೆ ಅರಸಿ ನಡೆಯುವುದು. ಯಾವುದು ಸಂಕೀರ್ಣವೋ ಅದನ್ನು ಎಂದಿಗೂ ಸರಳಗೊಳಿಸದಿರುವದು ಅಥವಾ ಯಾವುದು ಸರಳವೋ ಅದನ್ನು ಸಂರ್ಕೀಗೊಳಿಸದಿರುವುದು. ಎಂದಿಗೂ ಅಧಿಕಾರವನ್ನಲ್ಲ ಬದಲಿಗೆ ಗಟ್ಟಿತನವನ್ನು ಗೌರವಿಸುವುದು. ಎಲ್ಲದಕ್ಕೂ ಮುಖ್ಯವಾಗಿ, ಗಮನಿಸುವುದು. ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುವುದು. ಎಂದಿಗೂ ಬೆನ್ನು ತಿರುಗಿಸದೆ ಇರುವುದು. ಮತ್ತು ಎಂದಿಗೂ ಎಂದೆಂದಿಗೂ ಮರೆಯದಿರುವುದು”. ಇದು ತಮ್ಮ ಮ್ಯಾನಿಫೆಸ್ಟೋ ಎಂದು ನುಡಿದರು.

ಈ ಮಾತುಗಳು, ಕೆಲವು ವರ್ಷಗಳಿಂದ ಮತ್ತು ಆ ಕ್ಷಣದಲ್ಲಿ ನಡೆಯುತ್ತಿದ್ದ ಘಟನೆಗಳಿಗೆ ಎಚ್ಚರಿಕೆಯ ಘಂಟೆಯಾಗಿ ಕೇಳಿಸುತ್ತಿದ್ದವು! ಅಂದಿನ ಕಾರ್ಯಕ್ರಮಕ್ಕೆ ಆಲ್ಟ್ ನ್ಯೂಸ್‌ನ ಸಹಸಂಸ್ಥಾಪಕರಾದ ಮೊಹಮದ್ ಝುಬೇರ್ ಕೂಡ ಬರಬೇಕಿತ್ತು. ಬರಲಾಗಲಿಲ್ಲ, ಕಾರಣ: ಅದೇ ದಿನ ಅವರ ಮೇಲೆ ದೆಹಲಿಯಲ್ಲಿ ದೂರೊಂದನ್ನು ದಾಖಲಿಸಲಾಗಿತ್ತು. ಸೆಪ್ಟಂಬರ್ 4ರಂದು ಏಷಿಯಾ ಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಭಾರತ ಕ್ರಿಕೆಟ್ ತಂಡ ಸೋತಿತ್ತು. ಆ ಪಂದ್ಯದಲ್ಲಿ, ಭಾರತೀಯ ಕ್ರಿಕೆಟ್ ತಂಡದ ಬೌಲರ್ ಅರ್ಷದೀಪ್ ಸಿಂಗ್ ಅವರು ಕ್ಯಾಚ್ ಬಿಟ್ಟದ್ದಕ್ಕೆ ಅವರನ್ನು ಇನ್ನಿಲ್ಲದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಯಿತು. ಅವರು ’ಖಲಿಸ್ತಾನಿ’ ಎಂದು ಜರಿಯಲಾಯಿತು. (ದೆಹಲಿಯಲ್ಲಿ ರೈತವಿರೋಧಿ ಕಾನೂನುಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಸಿಖ್ ರೈತರನ್ನು ಕೂಡ ಸಂಘ ಪರಿವಾರದವರು ಖಲಿಸ್ತಾನಿಗಳು ಎಂದು ಕರೆದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು). ಈ ರೀತಿ ಟ್ರೋಲಿಂಗ್ ಮಾಡುತ್ತಿರುವವರನ್ನು ಟೀಕಿಸಿ ಟ್ವೀಟ್ ಮಾಡಿದ ಕಾರಣಕ್ಕೆ ಝುಬೇರ್ ವಿರುದ್ಧ ಬಿಜೆಪಿಯ ಮುಖಂಡನೊಬ್ಬ ದೆಹಲಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದ!
ಇಷ್ಟು ವರ್ಷಗಳಲ್ಲಿ ಎಷ್ಟೋ ಸಾವಿರ ಕ್ರಿಕೆಟ್ ಪಂದ್ಯಗಳು ನಡೆದುಹೋಗಿವೆ. ಎಷ್ಟೋ ಬಾರಿ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಫೀಲ್ಡಿಂಗ್‌ನಲ್ಲಿ ಎಡವಿದ್ದಾರೆ. ಸೋತಿದ್ದಾರೆ. ದಯನೀಯವಾಗಿ ಸೋತಿದ್ದಾರೆ. ಇವೆಲ್ಲವನ್ನೂ ನೋಡಿ ಮುಂದೆ ನಡೆಯುತ್ತಿದ್ದವರು ಇಂದು ಒಂದು ಕ್ಯಾಚ್ ಬಿಟ್ಟಿದ್ದಕ್ಕೆ ಆಟಗಾರನೊಬ್ಬನಿಗೆ ಕಳಂಕ ಹೊತ್ತಿಸುವ ಹುನ್ನಾರಕ್ಕೆ ಬಲಿಯಾಗುತ್ತಿದ್ದಾರೆ! ಜನಾಂಗೀಯ ನಿಂದನೆಗೆ ಮುಂದಾಗುತ್ತಿದ್ದಾರೆ. ದ್ವೇಷಕ್ಕೆ ಬಲಿಯಾಗುತ್ತಿದ್ದಾರೆ. ಅದೇ ಸಮಯದಲ್ಲಿ ದ್ವೇಷವನ್ನು ಮೆರೆಸುತ್ತಿದ್ದಾರೆ. ಪ್ರೊಪೋಗಾಂಡ ಮತ್ತು ಸತ್ಯದ ನಡುವಿನ ವ್ಯತ್ಯಾಸ ತಿಳಿಯುವ ವ್ಯಕ್ತಿಯೊಬ್ಬನ ವಿವೇಕದ ’ಸೌಂದರ್ಯ’ಕ್ಕೆ, ಸೋಲು ಗೆಲುವುಗಳನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸುವ ಮನೋ ವೈಶಾಲ್ಯತೆಯ ’ಸೌಂದರ್ಯ’ಕ್ಕೆ, ನೆರೆರಾಷ್ಟ್ರದ ಜನರಿಗೂ ಅಲ್ಲಿನ ಪ್ರಭುತ್ವಕ್ಕೂ ಇರುವ ವ್ಯತ್ಯಾಸ ಮನಗಂಡು ಅಲ್ಲಿನ ಜನ ಸಾಮಾನ್ಯರನ್ನು ದ್ವೇಷಿಸಲು ಯಾವುದೇ ಕಾರಣಗಳಿಲ್ಲ ಎಂಬ ತಿಳಿವಳಿಕೆಯ ’ಸೌಂದರ್ಯ’ಕ್ಕೆ ಇಂತಹ ಕುತ್ತುಬಂದಿದ್ದು ಹೇಗೆ?

ಕಳೆದ ವರ್ಷವೂ ಇಂತಹುದೇ ಒಂದು ಸಂದರ್ಭದಲ್ಲಿ ಮತ್ತೊಬ್ಬ ಕ್ರಿಕೆಟರ್ ಮೊಹಮದ್ ಶಮಿ ಅವರನ್ನು ಇದೇ ರೀತಿಯ ಟ್ರೋಲ್‌ಗೆ ಒಳಪಡಿಸಲಾಗಿತ್ತು. ಅರ್ಷದೀಪ್ ಅವರಿಗೆ ಬಂದಷ್ಟೂ ಬೆಂಬಲ-ಸಹಾನುಭೂತಿ ಆಗ ಶಮಿಯವರಿಗೆ ವ್ಯಕ್ತವಾಗಿರಲಿಲ್ಲ. ಇದಕ್ಕೆ ಕಾರಣವನ್ನು ಪ್ರತ್ಯೇಕವಾಗಿ ತಿಳಿಸುವ ಅವಶ್ಯಕತೆಯೇನಿಲ್ಲ. ಇದೇ ರೀತಿ ಕಳೆದ ಆಗಸ್ಟ್‌ನಲ್ಲಿ ಆವೇಶ್ ಖಾನ್ ಎಂಬ ಕ್ರಿಕೆಟರ್‌ನ ತಂದೆಯವರನ್ನು ಸಂದರ್ಶಿಸಿದ್ದ ನ್ಯೂಸ್ ಏಜೆನ್ಸಿ ಎಎನ್‌ಐ, ’ಆವೇಶ್ ತಂದೆ ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲಬೇಕೆಂದು ಆಶಿಸುತ್ತಾರೆ’ ಎಂದು ವರದಿ ಮಾಡಿತ್ತು! ಉಳಿದ ಆಟಗಾರರ ಮನೆಯವರನ್ನು ಹೀಗೇಕೆ ಪ್ರಶ್ನಿಸುವುದಿಲ್ಲ? ಅಲ್ಪಸಂಖ್ಯಾತ ಸಮುದಾಯಗಳ ಆಟಗಾರರನ್ನು ರಾಕ್ಷೀಸಿಕರಣಗೊಳಿಸುವ ಸಂಘ ಪರಿವಾರ ಪ್ರಣೀತ ಐಡಿಯಾಲಜಿಯಲ್ಲಿ ಬಿದ್ದುಒದ್ದಾಡುವ ಮಾಧ್ಯಮಗಳ ’ಕುರೂಪ’ ಇಂದು ಈ ದೇಶದಲ್ಲಿ ಅಲ್ಪಸ್ವಲ್ಪ ಉಳಿದುಕೊಂಡಿದ್ದ ಸೌಂದರ್ಯವನ್ನು ಗುಡಿಸಿಹಾಕುತ್ತಿದೆ.
ಜಗತ್ತಿನೆಲ್ಲೆಡೆ ಕ್ರೀಡೆಗಳನ್ನು ಅದರಲ್ಲೂ ಕ್ರಿಕೆಟ್, ಫುಟ್‌ಬಾಲ್‌ನಂತಹ ಆಟಗಳನ್ನು ಹಲವು ದೇಶ-ಪ್ರಭುತ್ವಗಳು ನ್ಯಾಶನಲಿಸಂಅನ್ನು ಉದ್ದೀಪಿಸುವ ತಂತ್ರವಾಗಿ ಬಳಸುತ್ತಲೇ ಇವೆ. ಈ ಕ್ರೀಡಾಕೂಟಗಳು ವಿವಿಧ ದೇಶಗಳಿಗೆ ಸೇರಿದ ಆಟಗಾರರ ನಡುವೆ ಕ್ರೀಡಾಸ್ಫೂರ್ತಿ ಮೆರೆಯುವಂತೆ ಮಾಡಿ, ದೇಶದೇಶಗಳ ನಡುವೆ ಸೇತುವೆ ಕಟ್ಟುವ ’ಸೌಂದರ್ಯ’ಕ್ಕೆ ಕಾರಣವಾಗುವುದಕ್ಕಿಂತ, ಅನ್ಯ ದೇಶಗಳನ್ನು ಶತ್ರುಗಳಂತೆ ಕಾಣುವ ’ಕುರೂಪ’ಕ್ಕೆ ಹೆಚ್ಚು ಎಡೆಮಾಡಿಕೊಟ್ಟಿವೆ. ಭಾರತದಲ್ಲಿ ಕ್ರಿಕೆಟ್ ಬೆಳೆದ ರೀತಿ ಕೂಡ ಇದಕ್ಕೆ ಹೊರತಾದುದಲ್ಲ. ಈ ನ್ಯಾಶನಲಿಸಂ ಎಂಬ ಕುರೂಪತೆ 2014ರಿಂದಲೂ ಯಾರೂ ಊಹಿಸದ ಮಟ್ಟಕ್ಕೆ ಬೆಳೆದಿದ್ದು ಇಲ್ಲಿ ಜನಸಾಮಾನ್ಯರು ಹೊಂದಿದ್ದ ಮತ್ತು ರೂಢಿಸಿಕೊಳ್ಳುತ್ತಿದ್ದ ’ಸೌಂದರ್ಯ’ಕ್ಕೆ ಮಾರಕವಾಗಿದೆ. ಈ ನ್ಯಾಶನಲಿಸಂ ಕುರೂಪತೆ ಇಂದು ಕ್ರೀಡೆಯಷ್ಟೇ ಅಲ್ಲದೆ ಜನರ ಜೀವನದ ವಿವಿಧ ಆಯಾಮಗಳನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ರಾಷ್ಟ್ರೀಯತೆಯ ಹುಚ್ಚಾಟವೇ ಫ್ಯಾಸಿಸಂಗೆ ಮೂಲಧಾತು.
ಗೌರಿ ನೆನಪಿನ ಕಾರ್ಯಕ್ರಮದಲ್ಲಿ, ’ಈಗಿನ ಪ್ರಭುತ್ವ ಫ್ಯಾಸಿಸ್ಟ್ ಆಗಿ ಬೆಳೆದಿದೆಯೇ ಇಲ್ಲವೇ ಅಂದು ಚರ್ಚಿಸುವುದಕ್ಕಾಗಿಯೇ ಸಾಕಷ್ಟು ಸಮಯ ವ್ಯಯಿಸಿದ್ದೇವೆ, ಆದರೆ ಫ್ಯಾಸಿಸ್ಟ್‌ಗಳು ತಮ್ಮ ಕೆಲಸಗಳನ್ನು ಸರಾಗವಾಗಿ ಮುಂದುವರಿಸುತ್ತಲೇ ಇದ್ದಾರೆ’ ಎಂದ ಅರುಂಧತಿ ರಾಯ್ ಅವರು ಹಲವು ಚಳವಳಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗೂಡಬೇಕಾದ ಮತ್ತು “ಯಾವುದನ್ನು ಒಪ್ಪಲಾರೆವು” ಎಂಬುದರ ಬಗ್ಗೆ ಒಂದು ಸಾಮಾನ್ಯ ತಿಳಿವಳಿಕೆಯನ್ನು ಪಡೆದುಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು. ಜಗತ್ತಿನಾದ್ಯಂತ ಜನ ಕಾಲಕಾಲಕ್ಕೆ ಇಂತಹ ದಮನಕಾರಿ ಪ್ರಭುತ್ವಗಳನ್ನು ಹಿಮ್ಮೆಟ್ಟಿಸಿದ್ದಾರೆ ಮತ್ತು ಇಲ್ಲೂ ಕೂಡ ಅದು ಆಗಲಿದೆ ಎಂಬ ಆಶಾವಾದ ಅವರ ಮಾತುಗಳಲ್ಲಿತ್ತು. ಬಹುಷಃ ಜನಸಮಾನ್ಯರಲ್ಲಿರುವ ಪ್ರತಿರೋಧದ “ಸೌಂದರ್ಯ”ವನ್ನು ಜಾಗೃತಗೊಳಿಸುವ ಕಡೆಗೆ ನಾವು ಹೆಜ್ಜೆಹಾಕಿದರೆ ಆ ದಿನಗಳು ಬೇಗನೆ ಬರಬಹುದೆಂದು ಆಶಿಸಬಹುದು!
ಇದನ್ನೂ ಓದಿ: ಅರುಂಧತಿ ರಾಯ್: ಕತ್ತಲ ಸೀಳುವ ಮಿಂಚುಹುಳು


