Homeಮುಖಪುಟಅರುಂಧತಿ ರಾಯ್: ಕತ್ತಲ ಸೀಳುವ ಮಿಂಚುಹುಳು

ಅರುಂಧತಿ ರಾಯ್: ಕತ್ತಲ ಸೀಳುವ ಮಿಂಚುಹುಳು

- Advertisement -
- Advertisement -

ಅರುಂಧತಿ ರಾಯ್, ಭಾರತದ ಪ್ರಖರ ಬೌದ್ಧಿಕ ಜೀನಿಯಸ್‌ಗಳಲ್ಲಿ ಒಬ್ಬರು. ‘ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಎಂಬ ತಮ್ಮ ಮೊದಲ ಕಾದಂಬರಿಗೆ ರಾಯ್ ಬೂಕರ್ ಪ್ರಶಸ್ತಿ ಪಡೆದರು. ಹೀಗೆ ಬರಿ ಕಾದಂಬರಿಗಳನ್ನು ಬರೆಯುತ್ತ ಪ್ರಶಸ್ತಿಗಳನ್ನು ಪಡೆದು ಪುಣ್ಯಕೋಟಿಯಂತಿದ್ದಲ್ಲಿ ಯಾರಿಗೂ ತಕರಾರುಗಳಿರುತ್ತಿರಲಿಲ್ಲ. ಅರುಂಧತಿ ರಾಯ್ ದೇಶದ ತುಂಬ ಓಡಾಡಿ ಜನಹೋರಾಟಗಳ ಮುಂಚೂಣಿಯಲ್ಲಿ ನಿಂತರು. ಈ ಹೋರಾಟಗಳ ಭಾಗವಾಗಿ ಪ್ರಖರ ವೈಚಾರಿಕ ಬರಹಗಳನ್ನು ಮಾಡಿದರು. ಜನವಿರೋಧಿ ಪ್ರಭುತ್ವದ ನಡೆಗಳನ್ನು ಪ್ರಶ್ನಿಸಿದರು. ನರ್ಮದಾ ಅಣೆಕಟ್ಟಿನಿಂದ ಮುಳುಗಡೆಯಾಗುವ ಜನರ ಬದುಕಿನ ಪರವಾದ ಹೋರಾಟಗಳಲ್ಲಿ ಭಾಗಿಯಾದರು, ದಂತೇವಾಡದ ಆದಿವಾಸಿಗಳ ಹತ್ಯಾಕಾಂಡವನ್ನು ವಿರೋಧಿಸಿ ನಿಂತರು. ಕೇರಳದ ಮತುಂಗಾ ಅರಣ್ಯ ಪ್ರದೇಶದ ಬುಡಕಟ್ಟುಗಳ ಸಂವಿಧಾನಬದ್ಧ ಹಕ್ಕುಗಳಿಗಾಗಿ ದನಿ ಎತ್ತಿದರು. ಆಗ ಇಲ್ಲಿನ ಸರಕಾರಗಳು ಮತ್ತು ಮಾಧ್ಯಮಗಳು ಸೇರಿ ಅರುಂಧತಿ ರಾಯ್ ಅವರನ್ನು ‘ವಿವಾದಾತ್ಮಕ’ ಲೇಖಕಿ ಎಂದು ಕೂಗಿ ಹೇಳಲಾರಂಭಿಸಿದವು. ಲೇಖಕರನ್ನು, ಚಿಂತಕರನ್ನು ‘ವಿವಾದಾತ್ಮಕ’ಗೊಳಿಸುವ ವಿದ್ಯಮಾನ ನಮ್ಮಲ್ಲಿ ಒಂದು ಸಹಜ ಪ್ರಕ್ರಿಯೆಯಾಗಿ ನಡೆದುಬಂದಿದೆ. ಮಾಧ್ಯಮಗಳಂತೂ ಈ ‘ವಿವಾದಾತ್ಮಕ’ ಎಂಬ ಪದವನ್ನು ಅತ್ಯಂತ ಉಲ್ಲಾಸದಿಂದ ಬೇಕಾಬಿಟ್ಟಿಯಾಗಿ ಬಳಸುತ್ತಿವೆ.

ಒಂದು ವಿಚಾರವನ್ನು ಮತ್ತು ಆ ವಿಚಾರವನ್ನು ಪ್ರಚುರಪಡಿಸುವ ಬರಹಗಾರನ/ಳನ್ನು ‘ವಿವಾದಾತ್ಮಕ’ಗೊಳಿಸುವ ಹಿಂದೆ ಒಂದು ಜನಾಂಗೀಯ ಹತ್ಯೆಯ ರಾಜಕಾರಣವು ಸದಾ ಕೆಲಸ ಮಾಡುತ್ತಿರುತ್ತದೆ. ಈ ಫ್ಯಾಸಿಸ್ಟ್ ರಾಜಕಾರಣವು ವೈಚಾರಿಕರನ್ನು ಸಮಾಜದಿಂದ ಬೇರ್ಪಡಿಸಿ, ‘ಬುದ್ಧಿಜೀವಿ’ಗಳು ಎಂಬ ನಾಮಾಂಕಿತ ಕೊಟ್ಟು, ಒಂದು ಹೊಸ ಗುಂಪನ್ನು ರೂಪಿಸಿಬಿಟ್ಟಿದೆ. ‘ವಿಚಾರಕ್ಕೂ, ಬೌದ್ಧಿಕತೆಗೂ ಮತ್ತು ನಿತ್ಯದ ಬದುಕಿಗೂ ಯಾವ ಸಂಬಂಧವೂ ಇರಬೇಕಿಲ್ಲ’ ಎಂಬ ಹೊಸ ತತ್ವಜ್ಞಾನವನ್ನು ಈ ರಾಜಕಾರಣ ಹುಟ್ಟುಹಾಕಿದೆ. ಮನುಷ್ಯ ತನ್ನ ನಿತ್ಯದ ಬದುಕಲ್ಲಿ ಕಂಡುಕೊಳ್ಳುವ, ಅನುಭವಗಳ ಮೂಲಕ ಉತ್ಪನ್ನವಾಗುವ ತಿಳಿವಳಿಕೆಯನ್ನು ಈ ತತ್ವಜ್ಞಾನ ನಗಣ್ಯವಾಗಿಸುತ್ತದೆ. ಹೀಗೆ ಸಾಮುದಾಯಿಕ ಬದುಕಿನ ಅನುಭವಾತ್ಮಕ ತಿಳಿವಳಿಕೆಯನ್ನು ತರ್ಕಬದ್ಧವಾಗಿ ಜನರ ಮುಂದಿಡುವ ವ್ಯಕ್ತಿಗಳನ್ನು ಗ್ರಾಮ್ಷಿ ‘ಸಾವಯವ ಬುದ್ಧಿಜೀವಗಳು’ ಎಂದು ಕರೆಯುತ್ತಾನೆ. ಜನರು ನಿತ್ಯದ ಬದುಕು ಮತ್ತು ಅದನ್ನು ನಿಯಂತ್ರಿಸುವ ಪ್ರಭುತ್ವದ ನಿಲುವುಗಳನ್ನು ಈ ಚಿಂತಕರು ಆಧಾರ ಸಮೇತ ಮಂಡಿಸುತ್ತಾರೆ. ಆಳುವ ಅಲ್ಪಸಂಖ್ಯಾತ ವರ್ಗದ ನಡೆಗಳನ್ನು ತರ್ಕಬದ್ಧವಾಗಿ ಸಮಷ್ಟಿ ಪ್ರಜ್ಞೆಯ ಭಾಗವಾಗಿಸುವ ‘ಸಾವಯವ ಬುದ್ಧಿಜೀವಿ’ಗಳನ್ನು ಪ್ರಭುತ್ವ ಸಹಿಸಿಕೊಳ್ಳುವುದಿಲ್ಲ. ಚಿಂತಕರ ಭಿನ್ನಮತಗಳನ್ನು ಪ್ರಭುತ್ವ ಎಂದಿಗೂ ಜನರ ಬದುಕಿನ ಭಾಗವಾಗಿಸಲು ಇಚ್ಛಿಸುವುದಿಲ್ಲ. ಸಾವಯವ ಚಿಂತನೆಯ ಭಾಗವಾಗಿ ಹುಟ್ಟುವ ಭಿನ್ನಮತಗಳಿಗೆ ಉತ್ತರಿಸಲು ಪ್ರಭುತ್ವದ ಬಳಿ ತರ್ಕಬದ್ಧ ತಿಳಿವಳಿಕೆ ಇರುವುದಿಲ್ಲ. ಜನ ಕೇಳುವ ಪ್ರಶ್ನೆ ಮತ್ತು ಮಂಡಿಸುವ ಸತ್ಯಗಳು ಯಾವತ್ತೂ ನಿಷ್ಠುರವಾಗಿರುತ್ತವೆ. ಒಂದು ಕಾಲದ ಸತ್ಯವು ಆ ಕಾಲಘಟ್ಟದಲ್ಲಿ ಮಂಡಿಸಲ್ಪಡುವ ತರ್ಕಬದ್ಧ ಜ್ಞಾನ. ಅಲ್ಲಿ ಭಿನ್ನಮತಕ್ಕೆ ಮತ್ತು ಚರ್ಚೆಗಳಿಗೆ ಧಾರಾಳ ಅವಕಾಶಗಳಿರುತ್ತವೆ. ಆದರೆ ಸತ್ಯಗಳಿಗೆ ಹೆದರುವ ಪ್ರಭುತ್ವವು ಚರ್ಚೆಗೆ ತನ್ನನ್ನು ಒಡ್ಡಿಕೊಳ್ಳುವುದಿಲ್ಲ. ಪ್ರಶ್ನೆಗಳನ್ನು ಇಷ್ಟಪಡದ ಅದು ಸದಾ ಮುಖೇಡಿಯಾಗಿ ರಂಗಿನ ಆಂಗಿಕ ಅಭಿನಯಗಳ ಮೂಲಕ ಉತ್ತರಕುಮಾರನ ಆವೇಶದಲ್ಲಿ ಮೈಕುಗಳ ಮುಂದೆ ವಿಜೃಂಭಿಸುತ್ತದೆ. ಜೊತೆಗೆ ತನ್ನನ್ನು ಸದಾಕಾಡುವ ಸತ್ಯಗಳನ್ನು ಮತ್ತು ಸುಡುವಾಸ್ತವಗಳನ್ನು ಮುಗಿಸಿ ಹಾಕಲು ಪ್ರಯತ್ನಿಸುತ್ತದೆ. ಹಾಗಾಗಿ ತಾನು ಬದುಕುವ ವರ್ತಮಾನದಲ್ಲಿ ದಕ್ಕಿದ ಸತ್ಯವನ್ನು ಹೇಳಲು ಮುಂದಾಗುವ ಚಿಂತಕರನ್ನು ಪ್ರಭುತ್ವವು ‘ವಿವಾದಾತ್ಮಕ’ ವ್ಯಕ್ತಿತ್ವಗಳನ್ನಾಗಿಸುತ್ತದೆ.

ಚಿಂತಕರನ್ನು ‘ವಿವಾದಾತ್ಮಕ’ಗೊಳಿಸುವ ಕ್ರಿಯೆಯ ಹಿಂದೆ ಸಮಾಜದ ಸಹಜ ವಿದ್ಯಮಾನಗಳಿಗೆ ಚಿಂತಕರು ಹೊರತಾದವರು ಎಂದು ಜನರನ್ನು ಪ್ರಭುತ್ವವು ನಂಬಿಸುತ್ತದೆ. ಜೊತೆಗೆ ಬುದ್ಧಿಜೀವಿಗಳನ್ನು ಇದೇ ಕಾರಣಕ್ಕಾಗಿ ಪ್ರಭುತ್ವವು ಜನರಿಂದ ಪ್ರತ್ಯೇಕಿಸ(Exclude)ಲಾರಂಭಿಸುತ್ತದೆ. ಈ ಪ್ರತ್ಯೇಕೀಕರಣವು ದಮನದ ಮೊದಲ ಹಂತ. ಹೀಗೆ ಪ್ರತ್ಯೇಕಿಸಲಾದ ಚಿಂತಕನ ಆಲೋಚನೆಗಳು ‘ನಿಷ್ಪ್ರಯೋಜಕ’, ಆ ಚಿಂತನೆಗಳು ರಾಷ್ಟ್ರದ ಹಾಗು ಸಮಾಜದ ಐಕ್ಯತೆಗೆ ಮತ್ತು ಸಮಗ್ರತೆಗೆ ಹಾನಿಕಾರಕ ಎಂಬ ಭ್ರಮೆಗಳನ್ನು ಹರಿಬಿಡಲಾಗುತ್ತದೆ. ಇಂತಹ ಚಿಂತಕರು ವರ್ತಮಾನದ ಸಮಾಜಕ್ಕೆ ಶಾಪದಂತಿದ್ದಾರೆ, ಅವರ ಅಗತ್ಯ ಸಮಾಜಕ್ಕಿಲ್ಲ ಎಂಬುದು ದಮನ ಕ್ರಿಯೆಯ ಅಂತಿಮ ಹಂತ. ಆಗ ಚಿಂತಕರ ಕೊಲೆಗಳು ಎಗ್ಗಿಲ್ಲದೆ ನಡೆಯುತ್ತವೆ. ಫ್ಯಾಸಿಸ್ಟ್ ರಾಜಕಾರಣವು ಆ ಕೊಲೆಗಳನ್ನು ನ್ಯಾಯಬದ್ಧಗೊಳಿಸುವ ವೇದಿಕೆಯನ್ನು ಸಮಷ್ಟಿ ಪ್ರಜ್ಞೆಯಲ್ಲಿ ಅಂತರ್ಗತವಾಗಿಸಿಬಿಟ್ಟಿರುತ್ತದೆ. ಕೊಲೆಗಳನ್ನು ಆಸ್ವಾದಿಸುವ ಮತ್ತು ಅವುಗಳನ್ನು ನ್ಯಾಯಬದ್ಧಗೊಳಿಸುವ ವಿಚ್ಛಿದ್ರಕಾರಿ ಆಲೋಚನೆಗಳು ಫ್ಯಾಸಿಸ್ಟ್ ರಾಜಕಾರಣವನ್ನು ಇನ್ನಿಲ್ಲದಂತೆ ಪೋಷಿಸುತ್ತದೆ. ಇಂತಹ ಸಮಾಜದಲ್ಲಿ ಕೊಲೆಗಳು ಯಾರ ಅಂತರಂಗಗಳನ್ನು ಕಲಕುವುದಿಲ್ಲ. ನಿಧಾನಕ್ಕೆ ಕೇಡು ಮತ್ತು ಹಿಂಸೆಗಳು ಸಮಾಜದ ಸಹಜ ವಿದ್ಯಮಾನಗಳಾಗಿಬಿಡುತ್ತವೆ.

ಜನರ ದೈನಂದಿನ ಬದುಕಿಗೆ ಎಚ್ಚರಗಳ ಅಗತ್ಯವಿಲ್ಲ, ವಾಸ್ತವವನ್ನು ಬದಲಿಸಲು ಪ್ರಶ್ನೆಗಳು ಬೇಕಿಲ್ಲ ಎಂಬ ಪ್ರಚ್ಛನ್ನ ಉದಾಸೀನತೆಯನ್ನು ಸಮುದಾಯಗಳಲ್ಲಿ ಸಂಚಯಿಸಲಾಗಿದೆ. ಈ ಬಗೆಯ ಉದಾಸೀನತೆಯು ಯಾವತ್ತೂ ಸಾಮಾಜಿಕವಾಗಿ ಜಡವಾಗಿರುವುದಿಲ್ಲ. ಈ ಉದಾಸೀನತೆಯು ಜನರಲ್ಲಿ ಕೇಡುಗಳನ್ನು ಆನಂದಿಸುವ ಭಕ್ತತನವನ್ನು ಮೈಗೂಡಿಸುತ್ತದೆ. ಭಕ್ತನಾಗಿ ರೂಪಾಂತರವಾಗುವ ನಾಗರಿಕನು ಮೆದುಳಿಲ್ಲದ ಆಯುಧಧಾರಿಯಾಗುತ್ತಾನಷ್ಟೆ. ಅವನು ಆಜ್ಞೆಗಳನ್ನು ಪಾಲಿಸುವ ಮತ್ತು ಜಾರಿ ಮಾಡುವ ಯಂತ್ರವಾಗುತ್ತಾನೆ. ತನ್ನನ್ನು ಸುತ್ತುವರೆದ ಕೇಡುಗಳು ಅವನ ಸಂವೇದನೆಗಳನ್ನು ಬಾಧಿಸುವುದಿಲ್ಲ. ಕುರುಡು ಹಿಂಸೆಯು ರಕ್ತಪಾತ ಮಾಡುವಾಗ ಅವನು ಯಂತ್ರವಾಗಿರುತ್ತಾನೆ. ತನಗಿರಿವಿಲ್ಲದೆ ತನ್ನವರ ಹತ್ಯಾಕಾಂಡದಲ್ಲಿ ಭಾಗಿಯಾಗುವ ದೌರ್ಭಾಗ್ಯವೂ ಅವನದಾಗುತ್ತದೆ. ಕೊನೆಗೆ ತನ್ನ ಸಾವಿಗೂ ಮುಂದೊಂದು ದಿನ ಹುತಾತ್ಮತೆಯು ಪ್ರಾಪ್ತಿಯಾಗಿಬಿಡುತ್ತದೆ ಎಂಬ ಭ್ರಮೆಯೂ ಅವನನ್ನು ನಿಯಂತ್ರಿಸುತ್ತಲೇ ಇರುತ್ತದೆ. ಹೀಗೆ ಮನುಷ್ಯರ ಚಿಂತನಾಕ್ರಮವನ್ನು ಜಡವಾಗಿಸುವ, ತಾನು ಹರಡುವ ಹಿಂಸೆಯನ್ನು ನ್ಯಾಯಬದ್ಧಗೊಳಿಸಲು ಜೀವಂತ ಮನುಷ್ಯರನ್ನು ಯಂತ್ರವನ್ನಾಗಿಸುವ ಹೀನ ರಾಜಕಾರಣಕ್ಕೆ ನಾವು ಆಧುನಿಕ ಪರಿಭಾಷೆಯಲ್ಲಿ ಫ್ಯಾಸಿಸಮ್ ಎಂದು ಕರೆಯುತ್ತೇವೆ. ಫ್ಯಾಸಿಸಮ್, ಹಿಟ್ಲರ್ ಮುಸೋಲಿನಿಯರು ನಡೆಸಿದ ಜನಾಂಗೀಯ ಹತ್ಯೆಗಳ ಮೂಲಕ ಅಸ್ತಿತ್ವಕ್ಕೆ ಬರಲಿಲ್ಲ. ಅಥವಾ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಕಂಡುಕೊಂಡ ರಾಜಕೀಯ ಪರಿಭಾಷೆಯೂ ಅಲ್ಲ. ಜನಾಂಗೀಯ ಮತ್ತು ಬೌದ್ಧಿಕ ಹತ್ಯಾಕಾಂಡಗಳು (Genocide of Doctrine) ಪುರಾಣಕಾಲದಿಂದ ನಡೆದುಕೊಂಡು ಬಂದ ವಿದ್ಯಮಾನಗಳು. ಪ್ರಭುತ್ವವನ್ನು ಪ್ರಶ್ನೆ ಮಾಡಿದ ಚಾರ್ವಾಕನನ್ನು ಇಲ್ಲವಾಗಿಸಿದ್ದು ಜಗತ್ತಿನ ಮೊದಲ ಸಾಮೂಹಿಕ ಹತ್ಯೆ (Mob Lynching). ಏಕಲವ್ಯನ ಬೆರಳು ಕತ್ತರಿಸಿದ್ದು ಮತ್ತು ಶಂಭೂಕ ವಧೆಗಳು ಪುರಾಣಕಾಲದ ಬೌದ್ಧಿಕ ಹತ್ಯಾಕಾಂಡಗಳು (Genocide of Doctrine). ಈ ಹತ್ಯಾಕಾಂಡಗಳನ್ನು ಪುರಾಣಗಳಲ್ಲಿ ಭಯಂಕರವಾಗಿ ಆಧ್ಯಾತ್ಮೀಕರಿಸಲಾಗಿದೆ. ಧರ್ಮ ಸಂಸ್ಥಾಪನೆಗೆ, ಅದರ ಸನಾತನ ಮುಂದುವರಿಕೆಗೆ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮತ್ತು ಸಿಂಹಾಸನಗಳ ಉಳಿವಿಗೆ ಈ ಹತ್ಯಾಕಾಂಡಗಳು ಸಹಜ ಎಂದು ಜನರನ್ನು ನಂಬಿಸಲಾಗಿದೆ.

ಈ ಬಗೆಯ ಜನಾಂಗೀಯ ಮತ್ತು ಬೌದ್ಧಿಕ ಹತ್ಯಾಕಾಂಡಗಳನ್ನು ಯಾವ ಪ್ರಭುತ್ವವೂ ಖಂಡಿಸುವ ಸಾಹಸಕ್ಕೆ ಕೈಹಾಕುವುದಿಲ್ಲ. ಸಮೂಹ ಪ್ರಜ್ಞೆಯ ನಾಶದ ಕ್ರಿಯೆಯನ್ನು ಪ್ರಭುತ್ವವು ಅಂತರಂಗದಲ್ಲಿ ಆಸ್ವಾದಿಸುತ್ತಿರುತ್ತದೆ. ಇಪ್ಪತ್ತನೆ ಶತಮಾನವು ಇಂತಹ ಭೀಕರ ಹತ್ಯಾಕಾಂಡಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಹೀಗಾಗಿ ಅರುಂಧತಿ ರಾಯ್‌ರಂತಹ ಚಿಂತಕರು ಸಹಜವಾಗಿಯೇ ‘ವಿವಾದಾಸ್ಪದ’ ಬರಹಗಾರರಾಗಿಬಿಡುತ್ತಾರೆ. ಸಿನೆಮಾ ಕಲಾವಿದನಾಗಿಯೂ ಸಮಾಜದಲ್ಲಿನ ಅನ್ಯಾಯಗಳನ್ನು ಪ್ರಶ್ನಿಸಿದ ಪ್ರಕಾಶ್ ರೈ ‘ವಿವಾದಾಸ್ಪದ’ ನಟನಾಗಿಬಿಡುತ್ತಾರೆ. ಟ್ವೀಟ್ ಮಾಡಿ ತನ್ನ ಭಿನ್ನಮತವನ್ನು ವ್ಯಕ್ತಪಡಿಸಿದ ಕಲಾವಿದ ಚೇತನ್ ಅಹಿಂಸಾ ಜೈಲು ಕಾಣುತ್ತಾರೆ. ಹೀಗೆ ಪ್ರಭುತ್ವ ಮತ್ತು ಅವರ ಬಾಲಬಡುಕ ಮಾಧ್ಯಮಗಳು ‘ವಿವಾದಾಸ್ಪದ’ಗೊಳಿಸಿದ ಚಿಂತಕರನ್ನು ಅನ್ಯರಂತೆ ಪರಿಗಣಿಸಬೇಕು ಎಂಬ ಒತ್ತಡವನ್ನು ಸಮಾಜದ ಮೇಲೆ ಹೇರುತ್ತವೆ. ಪ್ರಭುತ್ವ ಮತ್ತು ಬಾಲಬಡುಕ ಮಾಧ್ಯಮಗಳಿಂದ ಕರ್ನಾಟಕದಲ್ಲಿ ಹೀಗೆ ‘ವಿವಾದಾತ್ಮಕ’ ಎಂದು ಪರಿಗಣಿಸಲ್ಪಟ್ಟ ಲೇಖಕ ನಟ ಮತ್ತು ಚಿಂತಕರ ಪಟ್ಟಿಯೇ ಇದೆ.

ಅರುಂಧತಿ ರಾಯ್ ಸಹ ಹೀಗೆ ಅಖಿಲ ಭಾರತ ಮಟ್ಟದಲ್ಲಿ ತನ್ನ ರ್‍ಯಾಷನಲ್ ಚಿಂತನೆಗಳ ಕಾರಣಕ್ಕಾಗಿ ‘ವಿವಾದಾತ್ಮಕ’ ಲೇಖಕಿ ಎಂದು ಪರಿಗಣಿಸಲ್ಪಟ್ಟವರು. ಅರುಂಧತಿ ರಾಯ್, ಕೇರಳದ ಸಿರಿಯನ್ ಕ್ರಿಶ್ಚಿಯನ್ ಕುಟುಂಬದ ಮೇರಿ ಮತ್ತು ಬಂಗಾಳಿ ರಾಜೀಬ್ ರಾಯ್ ಅವರ ಮಗಳು. ಮೇಘಾಲಯದ ಶಿಲ್ಲಾಂಗ್‌ನಲ್ಲಿ ನವಂಬರ್ 24, 1961ರಲ್ಲಿ ಜನಿಸುತ್ತಾರೆ. ಕೇರಳ ಮತ್ತು ತಮಿಳುನಾಡಿನ ಊಟಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸುವ ಅರುಂಧತಿ ರಾಯ್ ದೆಹಲಿಯ ಸ್ಕೂಲ್ ಆಫ್ ಪ್ಲಾನಿಂಗ್ ಸಂಸ್ಥೆಯಲ್ಲಿ ವಾಸ್ತುಶಿಲ್ಪವನ್ನು ಅಧ್ಯಯನ ಮಾಡಿದರು. ತನ್ನ ಓದಿಗೆ ವ್ಯತಿರಿಕ್ತವಾದ ಕ್ಷೇತ್ರವನ್ನು ಆಯ್ದುಕೊಂಡ ರಾಯ್ ಅವರು ಕೆಲ ಸಿನೆಮಾಗಳಲ್ಲಿ ಕಲಾವಿದೆಯಾಗಿ ನಟಿಸಿದರು. ನಂತರ ಸಿನೆಮಾ ರಂಗದಿಂದ ದೂರವಾಗಿ 1996ರಲ್ಲಿ ಅವರು ತಮ್ಮ ಚೊಚ್ಚಲ (ಪ್ರಖ್ಯಾತ) ಕಾದಂಬರಿ ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ನ್ನು ಬರೆದರು. ಪೆಂಗ್ವಿನ್ ಸಂಸ್ಥೆಯಿಂದ ಪ್ರಕಟವಾದ ಅವರ ಈ ಕಾದಂಬರಿಗೆ 1997ರಲ್ಲಿ ಬೂಕರ್ ಪ್ರಶಸ್ತಿ ದೊರೆಯಿತು. ಪ್ರಸ್ತುತ ಕಾದಂಬರಿಯು ರಾಯ್ ಅವರಿಗೆ ಖ್ಯಾತಿ ಮತ್ತು ವ್ಯಾಪಕ ಜನಮನ್ನಣೆಯನ್ನು ತಂದುಕೊಟ್ಟಿತು. ತನ್ನ ಬಾಲ್ಯದ ಕೇರಳದ ಆಗುಹೋಗುಗಳನ್ನು ರಾಯ್ ಅವರು ಮಗುವಿನ ಅಬೋಧ ಕಣ್ಣುಗಳ ಮೂಲಕ ಈ ಕಾದಂಬರಿಯಲ್ಲಿ ಚಿತ್ರಿಸಿರುವುದು ಓದುಗರಿಗೆ ವಿಶೇಷ ಅನುಭವವನ್ನು ನೀಡಿತು. ಜೊತೆಗೆ ಕೇರಳದಲ್ಲಿ ಸಹಜವಾಗಿಯೇ ಈ ಕಾದಂಬರಿಯು ವಿವಾದವನ್ನೂ ಹುಟ್ಟುಹಾಕಿತು. ಇದಾದ ನಂತರ 20 ವರ್ಷಗಳ ಕಾಲ ರಾಯ್ ಅವರು ಕಾದಂಬರಿಗಳನ್ನು ಬರೆಯಲಿಲ್ಲ. 2017ರಲ್ಲಿ ‘ದಿ ಮಿನಿಸ್ಟ್ರಿ ಆಫ್ ಅಟ್‌ಮೋಸ್ಟ್ ಹ್ಯಾಪಿನೆಸ್’ ಎಂಬ ಕಾದಂಬರಿಯನ್ನು ರಾಯ್ ಪ್ರಕಟಿಸಿದರು. 1997ರಿಂದ 2017ರವರೆಗೆ ರಾಯ್ ಅವರು ಭಾರತದ ಉದ್ದಗಲಕ್ಕೂ ತಿರುಗಾಡಿದರು. 2002ರಲ್ಲಿ ಕೇರಳ ಸರಕಾರ ಮತುಂಗಾ ಅರಣ್ಯ ಪ್ರದೇಶದ ಆದಿವಾಸಿಗಳನ್ನು ಗೋಲಿಬಾರ್ ಮಾಡಿಕೊಂದು ಹಾಕಿ, ಅನೇಕ ಚಳವಳಿಗಾರರನ್ನು ಜೈಲಿಗೆ ಹಾಕಿದ ವಿದ್ಯಮಾನವು ರಾಯ್ ಅವರನ್ನು ಆಕ್ಟಿವಿಸಮ್‌ಗೆ ಕರೆತಂದಿತು. ತಮ್ಮ ಸಂವಿಧಾನಬದ್ಧ ಹಕ್ಕುಗಳಿಗಾಗಿ ಶಾಂತರೀತಿಯಲ್ಲಿ ಚಳವಳಿಗಳಲ್ಲಿ ಭಾಗಿಯಾಗಿದ್ದ ಆದಿವಾಸಿಗಳನ್ನು ರಾಯ್ ಬೆಂಬಲಿಸಿ ಒಬ್ಬ ಆಕ್ಟಿವಿಸ್ಟ್ ಆಗಿ ಬದಲಾದರು.

ಅಲ್ಲಿಂದ ಸರ್ದಾರ್ ಸರೋವರ್ ಅಣೆಕಟ್ಟು ಪ್ರದೇಶದಲ್ಲಿ ‘ನರ್ಮದಾ ಬಚಾವ್’ ಆಂದೋಲನದಲ್ಲಿ ಭಾಗಿಯಾದರು. ಆದಿವಾಸಿಗಳ ಸ್ಥಳಾಂತರದ ವಿರುದ್ಧ ಹೋರಾಡುತ್ತಿದ್ದ ಮೇಧ ಪಾಟ್ಕರ್ ಮತ್ತು ಬುಡಕಟ್ಟು ಸಮುದಾಯಗಳ ಜೊತೆ ಸೇರಿ ಅಲ್ಲಿ ಚಳವಳಿಯನ್ನು ತೀವ್ರಗೊಳಿಸಿದರು. ಈ ಚಳವಳಿಯ ಭಾಗವಾಗಿ ಬರೆದ ಪ್ರಬಂಧಗಳನ್ನು ಸಂಕಲಿಸಿ ‘ದಿ ಗ್ರೇಟರ್ ಕಾಮನ್ ಗುಡ್’ ಎಂಬ ಪುಸ್ತಕವನ್ನು ಪ್ರಕಟಿಸಿದರು. ದಂತೇವಾಡದಲ್ಲಿ ಗಣಿಗಾರಿಕೆಗಾಗಿ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಸರಕಾರದ ವಿರುದ್ಧ ಸಂಘಟಿಸಲ್ಪಟ್ಟ ಹೋರಾಟಗಳಲ್ಲಿ ರಾಯ್ ಸಕ್ರಿಯವಾಗಿ ಪಾಲ್ಗೊಂಡರು. ಒರಿಸ್ಸಾದ ಕಂದಮಾಲ್, ನಿಯಾಮಗಿರಿ ಬೆಟ್ಟ ಪ್ರದೇಶಗಳಲ್ಲಿ ವೇದಾಂತ ಕಂಪನಿಯ ವಿರುದ್ಧ ಆದಿವಾಸಿಗಳು ನಡೆಸಿದ ಹೋರಾಟಗಳಲ್ಲಿ ರಾಯ್ ಜತೆಗೂಡಿದರು. ಈ ಪ್ರದೇಶದಲ್ಲಿ ಆದಿವಾಸಿಗಳ ಪರವಾಗಿ ಅಹಿಂಸಾತ್ಮಕ ಚಳವಳಿಗಳಲ್ಲಿ ಭಾಗಿಯಾಗಿದ್ದ ಸತ್ಯಾಗ್ರಹಿಗಳನ್ನು ಮಾವೋವಾದಿಗಳೆಂದು ಪರಿಗಣಿಸಿ ಜೈಲಿಗೆ ಕಳಿಸಿದ ಸರಕಾರದ ಕ್ರಮದ ವಿರುದ್ಧ ರಾಯ್ ಪ್ರತಿಭಟಿಸಿದರು. ‘ಬ್ರೋಕನ್ ರಿಪಬ್ಲಿಕ್’ ಎಂಬ ಅವರ ಮಹತ್ವದ ಪುಸ್ತಕದಲ್ಲಿ ದಂಡಕಾರಣ್ಯದಲ್ಲಿನ ಆಗುಹೋಗುಗಳನ್ನು ವಿಶ್ಲೇಷಿಸಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳು ಮತ್ತು ಭಾರತದ ಪ್ರಭುತ್ವ ಒಂದಾಗಿ ಅಲ್ಲಿನ ಆದಿವಾಸಿಗಳನ್ನು ಮತ್ತು ನೈಸರ್ಗಿಕ ಸಂಪತ್ತನ್ನು ನಾಶ ಮಾಡಲು ನಡೆಸಿರುವ ಹುನ್ನಾರಗಳನ್ನು ಈ ಕೃತಿಯಲ್ಲಿ ವಿವರವಾಗಿ ಚರ್ಚಿಸಲಾಗಿದೆ. ‘ದಿ ಶೇಪ್‌ಆಫ್ ದಿ ಬೀಸ್ಟ್’ ಅವರ ಸಂದರ್ಶನಗಳನ್ನು ಸಂಕಲಿಸಿದ ಕೃತಿಯು 2008ರಲ್ಲಿ ಪ್ರಕಟವಾಯಿತು. ‘ಆನ್ ಆರ್ಡಿನರಿ ಪರ್ಸನ್ಸ್ ಗೈಡ್ ಟು ಎಂಪೈರ್’ ಕೃತಿಯಲ್ಲಿ ನವವಸಾಹತುಶಾಹಿಯ ರಾಜಕೀಯ ಅರ್ಥಶಾಸ್ತ್ರದ ಅಂತಾರಾಷ್ಟ್ರೀಯ ಆಯಾಮಗಳನ್ನು ಚರ್ಚಿಸಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಆರಂಭಿಸಲು ಉದ್ದೇಶಿಸಲಾಗಿದ್ದ ಅಣು ವಿದ್ಯುತ್ ಮತ್ತು ಬೃಹತ್ ಜಲವಿದ್ಯುತ್ ಸ್ಥಾವರಗಳ ವಿರುದ್ಧದ ಚಳವಳಿಯಲ್ಲಿ ರಾಯ್ ಸಕ್ರಿಯವಾಗಿ ಭಾಗಿಯಾಗಿದ್ದರು. ಈ ಚಳವಳಿಯ ಅನುಭವ ಮತ್ತು ಸುತ್ತಾಟಗಳ ಭಾಗವಾಗಿ ‘ದಿ ಕಾಸ್ಟ್ ಆಫ್ ಲಿವಿಂಗ್’ ಎಂಬ ಕೃತಿಯನ್ನು ಹೊರತಂದರು. ಇದರಲ್ಲಿ ಭಾರತ ಸರಕಾರದ ನ್ಯೂಕ್ಲಿಯರ್ ನೀತಿಯನ್ನು ಮತ್ತು ಪೋಖ್ರಾನ್ ಮತ್ತು ರಾಜಸ್ಥಾನಗಳಲ್ಲಿ ನಡೆಸಿದ ಅಣು ಪರೀಕ್ಷೆಗಳನ್ನು ವಿಶ್ಲೇಷಿಸಲಾಗಿದೆ.

ಸಂಸತ್ತಿನ ಮೇಲೆ ನಡೆದ ದಾಳಿಯಲ್ಲಿ ಅಫಜಲ್ ಗುರುವನ್ನು ಪೊಲೀಸರು ಆರೋಪಿಯನ್ನಾಗಿಸಿದ್ದನ್ನು ಪ್ರಶ್ನಿಸಿದ ಕಾರಣಕ್ಕಾಗಿ ಅರುಂಧತಿ ರಾಯ್ ಹೆಚ್ಚು ಟೀಕೆಗೆ ಒಳಗಾದರು. ‘ಸಂಸತ್ತಿನ ಮೇಲೆ ದಾಳಿ ನಡೆಸಿದವರು ಕ್ಷಮೆಗೆ ಅನರ್ಹರು, ಆದರೆ ಅಫಜಲ್ ಗುರು ಅವರನ್ನು ಈ ವಿಚಾರಣೆಯಲ್ಲಿ ಪೊಲೀಸರು ಮತ್ತು ನ್ಯಾಯಾಲಯಗಳು ಸರಿಯಾಗಿ ವಿಚಾರಣೆ ನಡೆಸಲಿಲ್ಲ. ಅವರನ್ನು ಈ ಪ್ರಕರಣದಲ್ಲಿ ಅನಗತ್ಯವಾಗಿ ಸಿಕ್ಕಿಹಾಕಿಸಲಾಗಿದೆ’ ಎಂದು ರಾಯ್ ತಮ್ಮ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸಿದರು. ರಾಯ್ ಅವರ ಈ ನಿಲುವಿನ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾದವು. ಅವರ ಭಿನ್ನಮತದ ಹಿಂದಿರುವ ಆಶಯಗಳನ್ನು ಗ್ರಹಿಸದೆ, ರಾಯ್ ಅವರ ನಿಲುವುಗಳನ್ನು ದೇಶದ್ರೋಹಿ ಎಂಬರ್ಥದಲ್ಲಿ ಪ್ರಚಾರ ಮಾಡಲಾಯಿತು. 2019ರಲ್ಲಿ ಪ್ರಕಟವಾದ ಅವರ ‘ಮೈ ಸೆಡಿಶಿಯಸ್ ಹಾರ್ಟ್’ (ಅವರ ಅಲ್ಲಿಯವರೆಗಿನ ಪ್ರಬಂಧಗಳ ಸಂಗ್ರಹ) ಕೃತಿಯಲ್ಲೂ ರಾಯ್ ಅವರು ದೇಶವನ್ನು ಆವರಿಸುತ್ತಿರುವ ನವವಸಾಹತುಶಾಹಿ ಆರ್ಥಿಕತೆ ಮತ್ತು ಧಾರ್ಮಿಕ ಮೂಲಭೂತವಾದದ ವರ್ತಮಾನದ ರಾಜಕಾರಣವನ್ನು ವಿಶ್ಲೇಷಿಸಿದ್ದಾರೆ. ಇತ್ತೀಚೆಗೆ ಪ್ರಕಟವಾದ ಅವರ ‘ಆಜಾದಿ’ಯಲ್ಲೂ ರಾಯ್ ಅವರು ಕೊರೊನಾ ಕಾಲದ ಭಾರತದಲ್ಲಿ ವ್ಯಾಪಕವಾಗಿ ಹರಡಿರುವ ಫ್ಯಾಸಿಸ್ಟ್ ರಾಜಕಾರಣಿ ಮತ್ತು ಭಾರತದ ಸಮಕಾಲೀನ ಸಾಂಸ್ಕೃತಿಕ ಕ್ಷೇತ್ರಗಳ ಆಗುಹೋಗುಗಳನ್ನು ವಿಶ್ಲೇಷಿಸಿದ್ದಾರೆ.

ಅರುಂಧತಿರಾಯ್, 21ನೇ ಶತಮಾನದ ಭಾರತದ ಸಮಾಜವಾದಿ ಜನತಂತ್ರದ ನೈಜ ಪ್ರತಿಪಾದಕಿ. ಭಾರತದ ಜನತಂತ್ರವನ್ನು ಮತ್ತು ಅದಕ್ಕೆ ಪೂರಕವಾಗಿರುವ ಸಂವಿಧಾನವನ್ನು ಫ್ಯಾಸಿಸಮ್ ನಗಣ್ಯವಾಗಿಸಲು ಹವಣಿಸುತ್ತಿದೆ. ನವಉದಾರವಾದಿ ಪೋಷಾಕಿನಲ್ಲಿ ಜಾಗತೀಕರಣವು ಭಾರತದಂತಹ ದೇಶಗಳ ಸಾಮಾಜಿಕ ಸಾಮರಸ್ಯವನ್ನು ನಾಶ ಮಾಡಲು ಮುಂದಾಗಿದೆ. ಅಮೆರಿಕದ ಕುತಂತ್ರಿ ವಿದೇಶಾಂಗ ನೀತಿಯಿಂದ ಪ್ಯಾಲಿಸ್ಟೇನ್‌ನ್ನೂ ಒಳಗೊಂಡಂತೆ ಮಧ್ಯಪ್ರಾಚ್ಯ ದೇಶಗಳು ಹೊತ್ತಿ ಉರಿಯುತ್ತಿವೆ. ಅರುಂಧತಿ ರಾಯ್, ಅಮೆರಿಕ ಪ್ರಣೀತ ಜಾಗತೀಕರಣ ಮತ್ತು ಭಾರತದ ಮೂಲಭೂತವಾದಿಗಳ ಕೋಮು ಧ್ರುವೀಕರಣದ ವಿರುದ್ಧ ನಿರಂತರ ದನಿ ಎತ್ತುತ್ತಾ ಬಂದಿದ್ದಾರೆ. ದಂತೇವಾಡದ ಆದಿವಾಸಿಗಳಾಗಿರಬಹುದು, ಕಂದಮಾಲ್‌ನ ಬುಡಕಟ್ಟುಗಳಾಗಿರಬಹುದು, ಮಧ್ಯಪ್ರಾಚ್ಯದ ದೇಶಗಳ ಹತಭಾಗ್ಯ ನಾಗರಿಕರಿರಬಹುದು, ಈ ಅಮಾಯಕರ ಮೇಲೆ ಪ್ರಭುತ್ವ ಸಾರಿರುವ ಅಘೋಷಿತ ಯುದ್ಧಗಳನ್ನು ರಾಯ್ ಸೈದ್ಧಾಂತಿಕವಾಗಿ ವಿಶ್ಲೇಷಿಸುತ್ತಾರೆ. ಇದರ ಜೊತೆಗೆ ನೊಂದ ಸಮಾಜಗಳು ಸಂಘಟಿಸುವ ಚಳವಳಿಗಳ ಭಾಗವಾಗಿ ಹೋರಾಟಕ್ಕಿಳಿಯುತ್ತಾರೆ. ನವಉದಾರವಾದಿ ಆರ್ಥಿಕತೆ ಮತ್ತು ಫ್ಯಾಸಿಸಮ್‌ನ ಕತ್ತಲೆಯು ದೇಶವನ್ನು ಆವರಿಸಿದೆ. ಆವರಿಸಿರುವ ಈ ಕತ್ತಲೆಯ ವಿರುದ್ಧ ಅರುಂಧತಿ ರಾಯ್ ಮಿಂಚು ಹುಳುವಾಗಿ ಕದನಕ್ಕಿಳಿದಿದ್ದಾರೆ. ಇಂತಹ ಕೋಟ್ಯಂತರ ಮಿಂಚುಗಳು ಏಕತ್ರಗೊಂಡಾಗ ಮಾತ್ರ ಗಾಡಾಂಧಕಾರದ ಕತ್ತಲೆ ತೊಲಗಬಹುದು.


ಇದನ್ನೂ ಓದಿ: ಹಿರಿಯ ಲೇಖಕಿ ದು.ಸರಸ್ವತಿ ಅನುವಾದಿಸಿರುವ ‘ನಾವೂ ಇತಿಹಾಸ ಕಟ್ಟಿದೆವು’ ಕೃತಿ ಬಿಡುಗಡೆ ಮಾಡಲಿರುವ ಅಂಬೇಡ್ಕರ್‌…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

NDTV ರಾಜೀನಾಮೆ ಬೆನ್ನಲ್ಲೆ ಯೂಟ್ಯೂಬ್ ಚಾನೆಲ್ ತೆರೆದ ರವೀಶ್ ಕುಮಾರ್: ಈಗಾಗಲೇ 10 ಲಕ್ಷದಷ್ಟು...

0
NDTV ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ರಾಜೀನಾಮೆ ಪ್ರಕಟಿಸಿದ ಬೆನ್ನಲ್ಲೆ 'ರವೀಶ್ ಕುಮಾರ್ ಅಫಿಶಿಯಲ್' ಹೆಸರಿನ ಯೂಟ್ಯೂಬ್ ಚಾನೆಲ್‌ ಅನ್ನು ಆರಂಭಿಸಿದ್ದಾರೆ. ತಮ್ಮ ಮೊದಲ ವಿಡಿಯೋದಲ್ಲಿ "ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯಿರುವ...