ದೆಹಲಿ ಚುನಾವಣೆಯಲ್ಲಿ ತಮ್ಮ ಕಲ್ಕಾಜಿ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಗೆದ್ದರೆ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿಯವರ ಕೆನ್ನೆಯಂತೆ ಮಾಡುವುದಾಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಅವರು ಹೇಳಿದ್ದು, ಈ ಹೇಳಿಕೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾಟೆ ಅವರು, ಅವರ ಈ ಹೇಳಿಕೆ ನಾಚಿಕೆಗೇಡಿನದ್ದಾಗಿದ್ದು, ಇದು ಬಿಜೆಪಿಯು ಮಹಿಳಾ ವಿರೋಧಿ ಮನಸ್ಥಿತಿಯನ್ನು ಬೆಳೆಸುತ್ತಿದೆ ಎಂಬುವುದನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.
ದೆಹಲಿಯ ಮಾಜಿ ಸಂಸದರೂ ಆಗಿರುವ ರಮೇಶ್ ಬಿಧುರಿಯ ವಿಡಿಯೊವನ್ನು ಎಎಪಿ ಸಂಸದ ಸಂಜಯ್ ಸಿಂಗ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕ ವಿರುದ್ಧ ಬಿಧುರಿ ನೀಡಿರುವ ಹೇಳಿಕೆ ನಾಚಿಕೆಗೇಡಿನ ಸಂಗತಿ ಮಾತ್ರವಲ್ಲದೆ ಮಹಿಳೆಯರ ಬಗೆಗಿನ ಅವರ ಅಸಹ್ಯಕರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಶ್ರೀನಾಟೆ ಅವರು ಹೇಳಿದ್ದಾರೆ. ಬಿಜೆಪಿ ಗೆದ್ದರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ಹೇಳಿಕೆಗೆ ಬಿಜೆಪಿಯ ಪ್ರತಿಕ್ರಿಯೆಯನ್ನು ಅವರು ಪ್ರಶ್ನಿಸಿದ್ದು, ಬಿಧುರಿ ಅವರು ಈ ಹಿಂದೆ ಕೂಡಾ ಸಂಸದರೊಬ್ಬರ ವಿರುದ್ಧ ಅಸಭ್ಯ ಭಾಷೆ ಬಳಸಿದ್ದರು, ಆದರೆ ಅದಕ್ಕಾಗಿ ಅವರು ಯಾವುದೇ ಶಿಕ್ಷೆಯನ್ನು ಎದುರಿಸಲಿಲ್ಲ ಎಂದು ಶ್ರೀನಾಟೆ ಹೇಳಿದ್ದಾರೆ.
“ಬಿಜೆಪಿ ಅತ್ಯಂತ ಮಹಿಳಾ ವಿರೋಧಿ, ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ರಮೇಶ್ ಬಿಧುರಿ ಹೇಳಿಕೆ ನಾಚಿಕೆಗೇಡಿನ ಸಂಗತಿ ಮಾತ್ರವಲ್ಲದೆ ಮಹಿಳೆಯರ ಬಗ್ಗೆ ಅವರ ಅಸಹ್ಯ ಮನಸ್ಥಿತಿಯನ್ನು ತೋರಿಸುತ್ತದೆ. ಆದರೆ ಸದನದಲ್ಲಿ ತನ್ನ ಸಹ ಸಂಸದರ ವಿರುದ್ಧ ಅಸಭ್ಯ ಭಾಷೆ ಬಳಸಿದ ವ್ಯಕ್ತಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಇದುವೆ ಬಿಜೆಪಿಯ ನಿಜವಾದ ಮುಖವಾಗಿದೆಯೇ?” ಎಂದು ಅವರು ಕೇಳಿದ್ದಾರೆ.
ಮಹಿಳಾ ಅಭಿವೃದ್ಧಿ ಸಚಿವೆ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪಕ್ಷದ ಮಹಿಳಾ ಮುಖಂಡರು ಇಂತಹ ಟೀಕೆಗಳ ಬಗ್ಗೆ ಮಾತನಾಡಬೇಕು ಎಂದು ಶ್ರೀನಾಟೆ ಹೇಳಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಈ ಮನಸ್ಥಿತಿ ಮತ್ತು ಭಾಷೆಯ ಜವಾಬ್ದಾರಿ ಬಳಕೆಯನ್ನು ಪಕ್ಷವು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿರುವ ಅವರು, ಇದಕ್ಕಾಗಿ ಬಿಜೆಪಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
ಅದಾಗ್ಯೂ, ರಮೇಶ್ ಬಿಧುರಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಂಡಿಯಾ ಟುಡೇ ಟಿವಿಯೊಂದಿಗೆ ಮಾತನಾಡಿದ ರಮೇಶ್ ಬಿಧುರಿ, ಬಿಹಾರದ ರಸ್ತೆಗಳನ್ನು ನಟಿ-ರಾಜಕಾರಣಿ ಹೇಮಾ ಮಾಲಿನಿ ಅವರ ಕೆನ್ನೆಗೆ ಹೋಲಿಸಿದ ಲಾಲು ಪ್ರಸಾದ್ ಯಾದವ್ ಅವರ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
“ಇಂದು ನನ್ನ ಹೇಳಿಕೆಯಿಂದ ಕಾಂಗ್ರೆಸ್ ನವರಿಗೆ ನೋವಾಗಿದ್ದರೆ, ಹೇಮಾ ಮಾಲಿನಿ ಅವರ ಬಗ್ಗೆ ಏನು ಹೇಳುತ್ತಾರೆ? ಅವರು ತಮ್ಮ ಚಲನಚಿತ್ರಗಳ ಮೂಲಕ ಭಾರತಕ್ಕೆ ಕೀರ್ತಿ ತಂದ ಖ್ಯಾತ ನಟಿ. ಲಾಲು ಯಾದವ್ ಅವರ ಹೇಳಿಕೆಗಳ ಬಗ್ಗೆ ಟೀಕೆ ಮಾಡದ ಅವರು, ನನ್ನ ಬಗ್ಗೆ ಏಕೆ ಪ್ರಶ್ನಿಸಬೇಕು? ” ಬಿಧುರಿ ಹೇಳಿದ್ದಾರೆ. ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿದ ಬಿಧುರಿ, “ಹೇಮಾ ಮಾಲಿನಿ ಮಹಿಳೆ ಅಲ್ಲವೇ? ಸಾಧನೆಗಳ ವಿಷಯದಲ್ಲಿ, ಹೇಮಾ ಮಾಲಿನಿ ಪ್ರಿಯಾಂಕಾ ಗಾಂಧಿಗಿಂತ ಹೆಚ್ಚು ಶ್ರೇಷ್ಠರು” ಎಂದು ಹೇಳಿದ್ದಾರೆ.
ವಿವಾದಾತ್ಮಕ ಹೇಳಿಕೆಗಳಿಗೆ ರಮೇಶ್ ಬಿಧುರಿ ಹಿನ್ನಡೆ ಅನುಭವಿಸುತ್ತಿರುವುದು ಇದೇ ಮೊದಲಲ್ಲ. 2023 ರಲ್ಲಿ, ಅವರು ಲೋಕಸಭೆಯ ಅಧಿವೇಶನದಲ್ಲಿ ಆಗಿನ ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಕೋಮುವಾದಿ ಟೀಕೆಗಳನ್ನು ಮಾಡಿದರು. ಅವರ ಈ ಹೇಳಿಕೆ ಕ್ಯಾಮರಾದಲ್ಲಿ ದಾಖಲಾಗಿದ್ದು, ದೇಶದಾದ್ಯಂತ ರಾಜಕೀಯ ಮುಖಂಡರು ವ್ಯಾಪಕವಾಗಿ ಟೀಕಿಸಿದ್ದರು.
ಇದನ್ನೂ ಓದಿ: ಸಿಂಧೂ ಕಣಿವೆ ಲಿಪಿ ಅರ್ಥೈಸುವವರಿಗೆ $1 ಮಿಲಿಯನ್ ಬಹುಮಾನ – ತಮಿಳುನಾಡು ಸಿಎಂ ಸ್ಟಾಲಿನ್
ಸಿಂಧೂ ಕಣಿವೆ ಲಿಪಿ ಅರ್ಥೈಸುವವರಿಗೆ $1 ಮಿಲಿಯನ್ ಬಹುಮಾನ – ತಮಿಳುನಾಡು ಸಿಎಂ ಸ್ಟಾಲಿನ್


