ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಗಲಭೆ ಉಂಟಾಗುತ್ತದೆ ಎಂಬ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿರುದ್ಧ ಕಾಂಗ್ರೆಸ್ ದೂರು ಸಲ್ಲಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಮತ್ತು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾದ ಗೌರವ್ ವಲ್ಲಭ್‌ರವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತೇರದಾಳದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಅಮಿತ್ ಶಾ ”ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿದರೆ ರಾಜ್ಯವು ಗಲಭೆಗಳಿಂದ ತುಂಬಿಹೋಗುತ್ತದೆ. ವಂಶಾಡಳಿತ ಮುನ್ನೆಲೆಗೆ ಬರುತ್ತದೆ” ಎಂದು ಹೇಳಿದ್ದರು.
“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತದೆ ಎಂದು ರಾಜ್ಯದ ಮತದಾರರಿಗೆ ಬೆದರಿಕೆ ಒಡ್ಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ @rssurjewala, ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತದೆ ಎಂದು ರಾಜ್ಯದ ಮತದಾರರಿಗೆ ಬೆದರಿಕೆ ಒಡ್ಡಿರುವ ಕೇಂದ್ರ ಗೃಹ ಸಚಿವ @AmitShah ಅವರ ವಿರುದ್ಧ ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. pic.twitter.com/wi9Z6rzxgL
— Karnataka Congress (@INCKarnataka) April 27, 2023
ಅಮಿತ್ ಶಾ ಹೇಳಿದ್ದರು. ಈ ಹೇಳಿಕೆಯನ್ನು ಖಂಡಿಸಿರುವ ಜೈರಾಮ್ ರಮೇಶ್ ಅವರು, ”ಭಯ ಹುಟ್ಟುಹಾಕುವ ಸಲುವಾಗಿಯೇ ಇಂತಹ ಹೇಳಿಕೆ ನೀಡಲು ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಅಮಿತ್ ಶಾ ಹೇಳಿಕೆಯು ಅತ್ಯಂತ ನಿರ್ಲಜ್ಜತನದ ಮತ್ತು ಬೆದರಿಸುವ ಹೇಳಿಕೆಯಾಗಿದೆ. ಭಾರತದ ಮೊಟ್ಟಮೊದಲ ಗೃಹ ಸಚಿವರಿಂದ ನಿಷೇಧಿಸಲ್ಪಟ್ಟ ಸಂಘಟನೆ(ಆರ್ ಎಸ್ಎಸ್)ಗೆ ನಿಷ್ಠರಾಗಿರುವ ಕೇಂದ್ರ ಗೃಹ ಸಚಿವರು ಈಗ ಚುನಾವಣಾ ಪ್ರಚಾರದ ಸಮಯದಲ್ಲಿ ಸೋಲಿನ ಆತಂಕದಿಂದ ಬೆದರಿಕೆಗಳನ್ನು ಹಾಕುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
”ಕರ್ನಾಟಕ ವಿಧಾನಸಭೆ ಚುನಾವಣೆ ಎಂದರೆ ಕೇವಲ ಶಾಸಕರನ್ನು ಆರಿಸುವುದಲ್ಲ, ಬದಲಾಗಿ ರಾಜ್ಯದ ಭವಿಷ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕೈಗಿಡುವುದು” ಎಂದು ಅಮಿತ್ ಶಾ ಹೇಳಿದ್ದರು. ಈ ಹೇಳಿಕೆಯು 6.5 ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಸಭೆಯಲ್ಲಿ ಶಾ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ”ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಂಗೆಗಳು ಆಗುತ್ತವೆ’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಪ್ರಚೋದನಕಾರಿಯಾಗಿದ್ದು, ಕರ್ನಾಟಕ ರಾಜ್ಯದ ಜನತೆ ಕೆಟ್ಟವರಿದ್ದಾರೆಯೇ? ಕಾಂಗ್ರೆಸ್ ಸರಕಾರ ಆಡಳಿತ ಮಾಡಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
”ಕಾಂಗ್ರೆಸ್ ಚುನಾವಣೆಯನ್ನೇ ಮಾಡಿಲ್ಲವೇ? ಶಾಂತಿ ಪ್ರಿಯ ಕರ್ನಾಟಕದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡುತ್ತಿರುವ ಪ್ರಚೋದನಾತ್ಮಕ ಹೇಳಿಕೆಗಳನ್ನು ಕೂಡಲೇ ನಿಲ್ಲಿಸಬೇಕು” ಎಂದು ಇದೇ ವೇಳೆ ತಾಕೀತು ಮಾಡಿದರು.
”ಪ್ರಧಾನಿ ಮೋದಿ, ಅಮಿತ್ ಶಾ ವಿಧಾನಸಭಾ ಚುನಾವಣೆಯಲ್ಲಿ ಅತಿಹೆಚ್ಚು ಪ್ರಚಾರ ಮಾಡುವುದನ್ನು ಗಮನಿಸಿದರೆ ಅವರು ಹತಾಶರಾಗಿದ್ದು, ಮೋದಿ ಹಾಗೂ ಶಾ ನೋಡಿ ಮತ ನೀಡಿ ಎಂದು ಬಸವರಾಜ ಬೊಮ್ಮಾಯಿ ಕೇಳುತ್ತಿದ್ದಾರೆ. ರಾಜ್ಯದ ಜನರಿಗೆ ಬಿಜೆಪಿ ಮತ್ತು ಬೊಮ್ಮಾಯಿ ನೀವೇನು ಮಾಡಿದ್ದೀರಿ? ಎಂಬುದನ್ನು ಜನ ಕೇಳುತ್ತಿದ್ದಾರೆ” ಎಂದು ಖರ್ಗೆ ವಾಗ್ದಾಳಿ ನಡೆಸಿದರು.
”ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಗಗನಕ್ಕೆ ಏರಿದ್ದು, ಬಿಜೆಪಿ ದುರಾಡಳಿತಕ್ಕೆ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಒಂದು ಕಡೆ ಭ್ರಷ್ಟಾಚಾರ, ಇನ್ನೊಂದು ಕಡೆ ನಿರುದ್ಯೋಗ ತಾಂಡವವಾಡುತ್ತಿದೆ. ರಾಜ್ಯದಲ್ಲಿ ಅನೇಕ ನ್ಯೂನತೆಗಳಿವೆ. ಬಿಜೆಪಿ ಸರಕಾರ ತೆಗೆದು ಹಾಕಲು ಜನರು ತೀರ್ಮಾನ ಮಾಡಿದ್ದಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಇದನ್ನೂ ಓದಿ: ಮೋದಿ ಸರ್ ನೇಮ್ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ


