ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ ಬಳಿಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಸಿದ್ದಾರೆ.
ಕಾಂಗ್ರೆಸ್ ಸೋಲಿನ ಆತ್ಮವಲೋಕನದ ಜೊತೆಗೆ, ಪಕ್ಷ ಸಂಘಟನೆಗೆ ಖಡಕ್ ಸೂಚನೆಗಳನ್ನು ನೀಡಿರುವ ಅವರು, ಯುವ ಕಾಂಗ್ರೆಸ್ ಮುಖಂಡರಿಗೆ ಹಲವು ಗುರಿ, ಉದ್ದೇಶಗಳ ಕುರಿತು ತಿಳಿಸಿದ್ದಾರೆ. ರಾಜಕಾರಣದ ಏರಿಳಿತ, ಬಿಜೆಪಿಯೊಳಗಿನ ಭಿನ್ನಮತ, ಕಾಂಗ್ರೆಸ್ ನಡೆಯಬೇಕಾದ ದಾರಿ, ಮೇಕೆದಾಟು ಪಾದಯಾತ್ರೆಗೆ ಬಂದ ಪ್ರತಿಕ್ರಿಯೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ.
“ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ, ಕಾಂಗ್ರೆಸ್ ಕಾರ್ಯಕರ್ತರು ಕುಗ್ಗಿದ್ದಾರೆ ಎಂದು ಅನೇಕರು ಅನೇಕ ರೀತಿಯಲ್ಲಿ ಹೇಳುತ್ತಿದ್ದಾರೆ. ಇಂತಹ ಮಾತುಗಳು ಸಹಜ. ಪಂಜಾಬ್ ನಲ್ಲಿ ನಮ್ಮ ಸರ್ಕಾರ ಇತ್ತು, ನಾವು ಸೋತಿದ್ದೇವೆ. ಬೇರೆ ರಾಜ್ಯಗಳಲ್ಲಿ ಪ್ರಮಾಣ ಕಡಿಮೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಮೇಲೆ ದಾಳಿ ಆದಾಗ ಬಿಜೆಪಿ ಕೊಚ್ಚಿ ಹೋಯ್ತು. ಅದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ” ಎಂದಿದ್ದಾರೆ.
ರಾಜಕೀಯದಲ್ಲಿ ಯಾವುದೂ ಯಾವತ್ತೂ ಶಾಶ್ವತವಲ್ಲ. ಅನೇಕ ನಾಯಕರು ಪಕ್ಷ ಬಿಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರಿಗೆ ಅಧಿಕಾರದಾಹ ಅದಕ್ಕೆ ಪಕ್ಷ ಬಿಡುತ್ತಿದ್ದಾರೆ. ಅವರು ಈ ಮಟ್ಟಕ್ಕೆ ಬೆಳೆಯಲು ಕಾಂಗ್ರೆಸ್ ಪಕ್ಷ ಕಾರಣವೇ ಹೊರತು, ಕಾಂಗ್ರೆಸ್ ಹೊರತಾಗಿ ಅವರು ಬೆಳೆಯಲಿಲ್ಲ. ಕಾಂಗ್ರೆಸ್ ಚಿಹ್ನೆ ಮೇಲೆ ಸ್ಪರ್ಧಿಸಿದ್ದಕ್ಕೆ ಅಲ್ಲವೇ ನಾನು ಮಾಜಿ ಮಂತ್ರಿ, ಶಾಸಕನಾಗಿರುವುದು, ಅಧ್ಯಕ್ಷನಾಗಿರುವುದು. ಈಗ ಪಕ್ಷ ತೊರೆದವರು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಬೆಳೆದಿದ್ದಕ್ಕೆ ಆ ಮಟ್ಟಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ಇಲ್ಲದಿದ್ದರೆ ಇವರನ್ನು ಯಾವ ನಾಯಿಯೂ ಮೂಸುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿರಿ: ವಿಶ್ಲೇಷಣೆ: ಮತ್ತೊಂದು ಆತ್ಮ ವಿಮರ್ಶೆಯ ಹೊಸ್ತಿಲಲ್ಲಿರುವ ಕಾಂಗ್ರೆಸ್ ಸೋತದ್ದೆಲ್ಲಿ?
ಚಂದ್ರಬಾಬುನಾಯ್ಡು, ಮಮತಾ ಬ್ಯಾನರ್ಜಿ, ಕೆ.ಸಿ.ಚಂದ್ರಶೇಖರ್ ರಾವ್ ಅವರೆಲ್ಲರೂ ಕಾಂಗ್ರೆಸ್ ನಲ್ಲಿದ್ದವರೇ. ಕೆಲವು ರಾಜಕೀಯ ಭಿನ್ನಾಭಿಪ್ರಾಯಗಳಿಂದ ಬೇರೆಯಾಗಿರಬಹುದು. ತಪ್ಪುಗಳು ಸಹಜ. ಆದರೆ ಅವು ಉದ್ದೇಶಪೂರ್ವಕ ತಪ್ಪುಗಳಲ್ಲ. ಕೆಲವು ಸಂದರ್ಭದಲ್ಲಿ ನಮ್ಮ ತೀರ್ಮಾನ ತಪ್ಪಾಗುವುದು ಉಂಟು ಎಂದು ತಿಳಿಸಿದ್ದಾರೆ.
ಯುವಕರ ಧ್ವನಿ ಕಾಂಗ್ರೆಸ್ ಅಧ್ಯಕ್ಷರ ಧ್ವನಿಯಾಗಬೇಕು, ಹೀಗಾಗಿ ನಾನು ಇಲ್ಲಿ ನಿಮ್ಮ ಮಾತುಗಳನ್ನು ಕೇಳಲು ಬಂದಿದ್ದೇನೆ. ಇಲ್ಲಿ ಅನೇಕರು ನಿರುದ್ಯೋಗ, ಸದಸ್ಯತ್ವ ಹಾಗೂ ಜನರ ಸಮಸ್ಯೆ ಬಗ್ಗೆ ಮಾತನಾಡಿದ್ದೀರಿ. ಬಿಜೆಪಿ ಸರ್ಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದರು. ಆದರೆ ಅವರು ದೀಪ ಹಚ್ಚಿಸಿ, ಚಪ್ಪಾಳೆ ತಟ್ಟಿ ಎಂದು ಭಾವನಾತ್ಮಕವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಭಾವನಾತ್ಮಕ ವಿಚಾರವಾಗಿ ಜನರನ್ನು ಸೆಳೆಯುವುದು ನಮ್ಮ ಉದ್ದೇಶವಲ್ಲ. ಅವರಿಗೆ ಕೇವಲ ಆರ್ಟಿಕಲ್ 370, ಗೋಹತ್ಯೆ, ಮತಾಂತರ ನಿಷೇಧದಂತಹ ವಿಚಾರ ಬಿಟ್ಟು ಅಭಿವೃದ್ಧಿ ಯೋಜನೆಗಳಿವೆಯೇ? ನಾವು ಕೊಟ್ಟ ಶಿಕ್ಷಣ ಹಕ್ಕು, ಆಹಾರ ಭದ್ರತೆ, ಉದ್ಯೋಗ ಭದ್ರತೆಯ ಯೋಜನೆಗಳನ್ನು ಜಾರಿಗೆ ತಂದಿದ್ದಾರಾ? ಕಳೆದ 7 ವರ್ಷಗಳ ಆಡಳಿತದಲ್ಲಿ ಬಿಜೆಪಿ ಸರ್ಕಾರ ಯಾವುದಾದರೂ ಒಂದು ವರ್ಗಕ್ಕೆ ಅನುಕೂಲವಾಗುವಂತಹ ಯೋಜನೆಯನ್ನು ಜಾರಿಗೆ ತಂದಿದೆಯಾ? ಅವರ ಅಜೆಂಡಾ ಬೇರೆ. ದೇವಾಲಯ, ಜಾತಿ, ಧರ್ಮ ವಿಚಾರವಾಗಿ ಸಮಾಜ ಒಡೆಯುವುದು ಅವರ ಅಜೆಂಡಾ ಎಂದು ಹೇಳಿದ್ದಾರೆ.
ಆದರೆ ನಿಮಗೆ ಮೊದಲು ಪಕ್ಷ ನಿಷ್ಠೆ ಇರಬೇಕು. Loyalty will pay Royalty. ನಿಮಗೆ ತಾಳ್ಮೆ ಇದ್ದರೆ ಇವತ್ತಲ್ಲಾ ನಾಳೆ ನೀವು ನಾಯಕನಾಗಿ ಬೆಳೆಯುತ್ತೀರಿ. ನಿಮ್ಮಲ್ಲಿ ಸದಸ್ಯತ್ವ ಮಾಡಿ ಚುನಾವಣೆ ಎದುರಿಸಿದ್ದೀರಿ. ಕೆಲವರು ಗೆದ್ದಿದ್ದೀರಿ. ಕೆಲವರು ಸೋತಿದ್ದೀರಿ. ಈಗ ಸದಸ್ಯತ್ವ ಅಭಿಯಾನ ಆರಂಭವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸದಸ್ಯತ್ವವೇ ಭದ್ರ ಅಡಿಪಾಯ. ನೀವು ಅಧಿಕಾರಕ್ಕೆ ಬರಲು ನೀವು ಸದಸ್ಯತ್ವ ಮಾಡಿದಿರಿ. ಪಕ್ಷ ಅಧಿಕಾರಕ್ಕೆ ಬರಲು ಯಾಕೆ ಸದಸ್ಯತ್ವ ಮಾಡುತ್ತಿಲ್ಲ? ಇದಕ್ಕೆ ನನಗೆ ಉತ್ತರ ಬೇಕು ಎಂದು ಕೇಳಿದ್ದಾರೆ.
ಕಾಲೇಜುಗಳಲ್ಲಿ ಚುನಾವಣೆ ನಿಷೇಧವಾಗಿರುವ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ನಲ್ಲಿ ಹೊಸ ನಾಯಕರನ್ನು ಹುಟ್ಟಿಹಾಕಲು ಚುನಾವಣೆ ನಡೆಸಬೇಕು ಎಂದು ನಿರ್ಧಾರ ಮಾಡಲಾಗಿದೆ. ಹಣವಿರುವವರ ಮಕ್ಕಳು, ರಾಜಕೀಯ ಕುಟುಂಬದ ಹಿನ್ನೆಲೆ ಇರುವವರಿಗೆ ಅನುಕೂಲವಾಗುತ್ತದೆ ಎಂದು ಮಾತನಾಡುತ್ತಾರೆ. ಆದರೆ ನಮ್ಮ ಯೂಥ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಅವರಿಗೆ ಯಾವ ಬೆಂಬಲ, ಹಿನ್ನೆಲೆ ಇತ್ತು? ಪರಿಶ್ರಮ ತಕ್ಕ ಫಲ ನೀಡಲಿದೆ ಎಂದಿದ್ದಾರೆ.
ಇದನ್ನೂ ಓದಿರಿ: Uttar Pradesh Elections Result | ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಕಮಲ; ಹೀನಾಯವಾಗಿ ಸೋತ ಕಾಂಗ್ರೆಸ್ & ಬಿಎಸ್ಪಿ
ಅವಕಾಶ ನಿಮ್ಮ ಮನೆ ಬಾಗಿಲಿಗೆ ಹುಡುಕಿ ಬರುವುದಿಲ್ಲ, ನೀವೇ ಅವಕಾಶಗಳನ್ನು ಹುಡುಕಿಕೊಂಡು ಹೋಗಬೇಕು. ನೀವು ಪಕ್ಷವನ್ನು ಪ್ರೀತಿಸುವುದೇ ಆದರೆ, ನೀವು ಪಕ್ಷಕ್ಕೆ ನಿಷ್ಠೆಯಿಂದಿರಿ, ಪಕ್ಷದ ಸದಸ್ಯತ್ವ ಹೆಚ್ಚಿಸಿ. ಯುವ ಕಾಂಗ್ರೆಸಿಗರು 2 ಸಾವಿರ ಸದಸ್ಯರ ನೇಮಕ ಮಾಡಿರುವುದಾಗಿ ಹೇಳಿದ್ದಾರೆ. ನಿಮ್ಮ ಸಾಮರ್ಥ್ಯಕ್ಕೆ ಈ ಗುರಿ ನಾಚಿಕೆ ತರುವಂತಹದ್ದಾಗಿದೆ. ನೀವು ಪದಾಧಿಕಾರಿಗಳಾಗಲು 80 ಸಾವಿರ, ಲಕ್ಷದವರೆಗೂ ಸದಸ್ಯರನ್ನು ಮಾಡಿದ್ದೀರಿ. ಅದರಲ್ಲಿ ಅರ್ಧದಷ್ಟು ಮಾಡಲು ಸಾಧ್ಯವಿಲ್ಲವೇ? ನಿಮ್ಮಲ್ಲಿ ಯಾರಾದರೂ ನಾಲ್ಕು ಜನ 50 ಸಾವಿರಕ್ಕೂ ಹೆಚ್ಚು ಸದಸ್ಯತ್ವವನ್ನು ಮಾಡಿದರೆ, ಅವರನ್ನು ಕೆಪಿಸಿಸಿ ಕಾರ್ಯದರ್ಶಿಗಳಾಗಿ ನೇಮಕ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ನೀವು ಈಗ ಮಾಡುವ ಸದಸ್ಯತ್ವ ಪಕ್ಷಕ್ಕಾಗಿ ಮಾಡುತ್ತಿರುವುದು. ಖಾಲಿ ಮಾತನಾಡಿದರೆ ನಾನು ಒಪ್ಪುವುದಿಲ್ಲ. ನೀವು ನಾಯಕರಾಗಿ ಬೆಳೆಯಬೇಕಾದರೆ ನಿಮ್ಮ ಪರಿಶ್ರಮ ಹಾಗೂ ಸಾಧನೆ ಮುಖ್ಯ. ಶ್ರೀನಿವಾಸ್ ಅವರಿಗೆ ಕುಟುಂಬ, ಹಣ, ಯಾವ ಬೆಂಬಲವೂ ಇಲ್ಲದಿದ್ದರೂ ನಮ್ಮ ನಾಯಕರು ಅವರನ್ನು ಯಾಕೆ ಗುರುತಿಸಿದ್ದಾರೆ? ನಿಮಗೆ ಅವರಿಗಿಂತಾ ದೊಡ್ಡ ಸ್ಫೂರ್ತಿ ಬೇಕಾ? ಎಂದು ಪ್ರಶ್ನಿಸಿದ್ದಾರೆ.
ನಾನು ಯುವಕರು ಹಾಗೂ ಮಹಿಳೆಯರ ಮೇಲೆ ಅಪಾರ ನಂಬಿಕೆ ಇಟ್ಟಿದ್ದೇನೆ. ಈ ಇಬ್ಬರು ಇಡೀ ದೇಶದ ಚಿತ್ರಣವನ್ನೇ ಬದಲಿಸಬಲ್ಲರು. ಇಂದು ಪ್ರಿಯಾಂಕ ಗಾಂಧಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಗೆದ್ದರೋ ಸೋತರೋ, ಆದರೆ 400 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ತಯಾರು ಮಾಡಿ ಪರಿಶ್ರಮ ಹಾಕಿದರಲ್ಲ ಅದು ಮುಖ್ಯ ಎಂದು ತಿಳಿಸಿದ್ದಾರೆ.
ಹುಟ್ಟಿದವರೆಲ್ಲ ಬಸವರಾಗಲು ಸಾಧ್ಯವಿಲ್ಲ. ಗಾಂಧಿ ಕುಟುಂಬವಿಲ್ಲದೆ ಕಾಂಗ್ರೆಸ್ ಒಟ್ಟಾಗಿರಲು ಸಾಧ್ಯವಿಲ್ಲ, ಕಾಂಗ್ರೆಸ್ ಇಲ್ಲದೆ ದೇಶ ಒಟ್ಟಾಗಿರಲು ಸಾಧ್ಯವಿಲ್ಲ. ದೇಶದಲ್ಲಿ ಏನಾಗುತ್ತಿದೆ ಎಂದು ಜನರಿಗೆ ಅರಿವು ಮೂಡಿಸಲು ನಾವು ವಿಫಲವಾಗಿದ್ದೇವೆ. ಈ ಹಿಂದೆ ನಮ್ಮ ದೇಶದ ಜತೆ ನೇಪಾಳ, ಶ್ರೀಲಂಕಾ, ಚೀನಾ, ಎಲ್ಲ ದೇಶಗಳು ನಮ್ಮ ಜತೆ ಉತ್ತಮ ಸಂಬಂಧ ಹೊಂದಿದ್ದವು. ಆದರೆ ಈಗ ಯಾವ ದೇಶ ನಮ್ಮ ಜತೆ ಇದೆ. ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಎಂದು ಹೇಗೆ ಹೇಳಿದರು? ಬೇರೆಯವರು ಗೆದ್ದ ಮೇಲೆ ನಮ್ಮ ಜತೆ ಸಂಬಂಧ ಹೇಗೆ ಮುಂದುವರಿಯುತ್ತದೆ? ಎಂದು ಕೇಳಿದ್ದಾರೆ.
ಯುವ ಕಾಂಗ್ರೆಸ್ ಸದಸ್ಯರು ಮೊದಲು ಪಕ್ಷದ ಸದಸ್ಯತ್ವ ಮಾಡಬೇಕು. ಇದರಲ್ಲಿ ಯುವಕರು ಹಾಗೂ ನಿರುದ್ಯೋಗಿಗಳ ವಿಭಾಗವಿದೆ. ನೀವು ಸದಸ್ಯತ್ವ ಮಾಡಲು ಹೋದಾಗ ಅಲ್ಲಿ ಎಷ್ಟು ಜನ ಎಸ್ಎಸ್ಎಲ್ ಯಿಂದ ಪದವಿ ವರೆಗೂ ಓದಿದ್ದಾರೆ, ಅವರಲ್ಲಿ ಎಷ್ಟು ಜನ ನಿರುದ್ಯೋಗಿಗಳು ಎಂಬುದನ್ನು ಪಟ್ಟಿ ಮಾಡಿ. ಇದನ್ನು ಮಾಡಲು ಬೇಕಾದ ಬೆಂಬಲವನ್ನು ನಾನು ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿರಿ: ಪಂಜಾಬ್‌ನಲ್ಲಿ ಅಭೂತಪೂರ್ವ ಜಯ ದಾಖಲಿಸಿದ ಆಪ್: ಕರ್ನಾಟಕದ ಮುಖಂಡರ ಪ್ರತಿಕ್ರಿಯೆ ಹೀಗಿದೆ…
ನೀವು ನಿರುದ್ಯೋಗಿಗಳ ಅಂಕಿ-ಅಂಶ ಪಡೆಯಿರಿ. ನಂತರ ತಾಲೂಕು ಮಟ್ಟದಲ್ಲಿ 5 ಕಿ.ಮೀ. ಪಾದಯಾತ್ರೆ ಮಾಡೋಣ. ಆ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸೋಣ. ತಾಲೂಕಿನಲ್ಲಿ 5 ಸಾವಿರ ನಿರುದ್ಯೋಗಿಗಳು ಸಿಗುವುದಿಲ್ಲವೇ? ಮುಂದಿನ ಒಂದು ತಿಂಗಳು ಇದನ್ನೇ ಮಾಡಿ. ತಾಲೂಕಿಗೆ 5 ಸಾವಿರದಂತೆ 200 ಕ್ಷೇತ್ರಗಳಲ್ಲಿ 10 ಲಕ್ಷ ಜನ ಸಿಗುತ್ತಾರೆ. ಡಿವಿಷನ್ ನಲ್ಲಿ 1 ಲಕ್ಷ ಜನರನ್ನು ಸೇರಿಸಿ ಹೋರಾಟ ಮಾಡಿದರೆ ಒಂದು ಸರ್ಕಾರವನ್ನು ತೆಗೆಯಲು ಆಗುವುದಿಲ್ಲವೇ? ನಾನು ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇನೆ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನಿಮ್ಮಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ಬಿಡಬೇಕು. ಸ್ಪರ್ಧೆ ಇರಬೇಕು. ನೀವು ತ್ಯಾಗದ ಮನಸ್ಥಿತಿ ಇಟ್ಟುಕೊಳ್ಳಲಿಲ್ಲ ಎಂದರೆ ಏನೂ ಮಾಡಲು ಸಾಧ್ಯವಿಲ್ಲ. ಎಲ್ಲರಿಗೂ ಆಸೆ ಇರುತ್ತದೆ, ಅವಕಾಶ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಸದ್ಯ ಬಿಜೆಪಿಯವರು ಬೀಗುತ್ತಿದ್ದಾರೆ, ಬೀಗಲಿ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಎರಡು ಪಾಲಿಕೆ ಸೀಟುಗಳನ್ನು ಸೋತಿದ್ದಾರೆ. ಪಕ್ಕದ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತಿದ್ದಾರೆ. ಯಾರು ಏನೇ ಹೇಳಲಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನ ಅಧಿಕಾರಕ್ಕೆ ತರುತ್ತಾರೆ ಎನ್ನುವ ನಂಬಿಕೆ ಇದೆ. ನನ್ನ ಮೇಲೆ ಕೇಸ್ ಹಾಕಿ ತೊಂದರೆ ಮಾಡಬಹುದು, ಎಲ್ಲ ಪಕ್ಷದವರು ಸೇರಿ ಏನೆಲ್ಲಾ ಮಾಡಬಹುದೋ ಅದನ್ನು ಮಾಡುತ್ತಾರೆ ಎಂದು ಎಚ್ಚರಿಸಿದ್ದಾರೆ.
ನೀವು ನಿಮ್ಮ ವೈಯಕ್ತಿಕ ಹಾಗೂ ಜಾತಿ ಅಜೆಂಡಾವನ್ನು ಬಿಟ್ಟು ಪಕ್ಷದ ಬಗ್ಗೆ ನಿಷ್ಠೆ ಹಾಗೂ ಬದ್ಧತೆ ಹೊಂದಿ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಇವೆ. ನಾವಿದನ್ನು ಜನರಿಗೆ ತಿಳಿಸಬೇಕು. ನಾವು ಪಾದಯಾತ್ರೆ ಮಾಡಿದೆವು, ನೀವು ಇದರಿಂದ ಅನೇಕ ವಿಚಾರ ಕಲಿತಿದ್ದೀರಿ. ಹೋರಾಟ ಹೇಗೆ ಮಾಡಬೇಕು, ವಿಚಾರ ಯಾವ ರೀತಿ ಇರಬೇಕು. ಹೇಗೆ ಸಂಘಟಿಸಬೇಕು, ಹೇಗೆ ಸೌಲಭ್ಯ ಕಲ್ಪಿಸಬೇಕು ಎಂಬುದನ್ನೆಲ್ಲ ಕಲಿತಿರಿ. ನಮ್ಮ ಹೋರಾಟಕ್ಕೆ ಹಳ್ಳಿಯಲ್ಲಿ ಜನ, ಮಕ್ಕಳು, ಮಹಿಳೆಯರು ಯಾವ ರೀತಿ ಪ್ರೀತಿ ತೋರಿಸಿದರು ಎಂಬುದನ್ನು ಕಣ್ಣಾರೆ ನೋಡಿದ್ದೀರಿ. ನಮ್ಮ ಹೋರಾಟದಲ್ಲಿ ಏನಾದರೂ ತಪ್ಪಿದ್ದರೆ ಹೇಳಿ ತಿದ್ದುಕೊಳ್ಳುತ್ತೇವೆ. ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಬಯಲುಸೀಮೆ ಕರ್ನಾಟಕದಲ್ಲಿ ಹೋರಾಟ ಆರಂಭಿಸಲು ಒಂದೊಂದು ವಿಚಾರಗಳನ್ನು ಚರ್ಚಿಸಿ, ಕಾರ್ಯಕ್ರಮ ರೂಪಿಸಿ ಎಂದು ಸೂಚಿಸಿದ್ದಾರೆ.
ಬಿಜೆಪಿಯವರು ಸಾವಿರ ಮಾತನಾಡಲಿ. ನಮ್ಮ ಪಕ್ಷದವರು ರೇಪ್ ಕೇಸಲ್ಲಿ ಸಿಲುಕಿಲ್ಲ, 40 ಪರ್ಸೆಂಟ್ ಲಂಚ ಪಡೆಯುವ ಆರೋಪ ಹೊತ್ತಿಲ್ಲ. ಪೊಲೀಸ್ ಇಲಾಖೆಯಲ್ಲಿ ಇಂತಹ ಹುದ್ದೆಗೆ ಇಷ್ಟು ಹಣ ಎಂದು ಹೋಟೆಲ್ ತಿಂಡಿಗಳಂತೆ ಪಟ್ಟಿ ಹಾಕಿರಲಿಲ್ಲ. ಗುತ್ತಿಗೆದಾರರ ಸಂಘದವರು 40 ಪರ್ಸೆಂಟ್ ಲಂಚದ ಬಗ್ಗೆ ದೂರು ಬರೆದಿದ್ದಾರೆ. ಈ ಎಲ್ಲ ವಿಚಾರವನ್ನು ನಾವು ಜನರಿಗೆ ಮುಟ್ಟಿಸಬೇಕು. ಪ್ರತಿ ಬೂತ್ ನಲ್ಲಿ ಡಿಜಿಟಲ್ ಯೂತ್ ಇರಬೇಕು. ನಾವು ನಮ್ಮ ವಿಚಾರ ಜನರಿಗೆ ತಿಳಿಸಲೇಬೇಕು. ಪಾದಯಾತ್ರೆ ವಿಚಾರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪಿದೆವು. ಪಾದಯಾತ್ರೆ ಬಗ್ಗೆ ಒಬ್ಬೊಬ್ಬರೂ ಒಂದೊಂದು ಮಾತನಾಡಿದ್ದಾರೆ. ನಾವು ಪಾದಯಾತ್ರೆ ಮಾಡಿದ ಪರಿಣಾಮ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಅವರು ಯಾವಾಗ ಮಾಡುತ್ತಾರೋ ಗೊತ್ತಿಲ್ಲ. ಮನಸ್ಸು ಮಾಡಿದರೆ 15 ದಿನಗಳಲ್ಲಿ ಅನುಮತಿ ತೆಗೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಯವರು ನಮ್ಮ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರೆ. ಅವರ ಪಕ್ಷದಲ್ಲಿ ಹುಳುಕುಗಳಿಲ್ಲವೇ? ಈಶ್ವರಪ್ಪ ಈ ಸರ್ಕಾರ ಸರಿಯಿಲ್ಲ ಎಂದು ರಾಜ್ಯಪಾಲರಿಗೆ ಪತ್ರ ಬರೆಯುತ್ತಾರೆ, ಮುಂದಿನ ಮುಖ್ಯಮಂತ್ರಿ ನಿರಾಣಿ ಎಂದು ಹೇಳುತ್ತಾರೆ. ಯತ್ನಾಳ್, ಯೋಗೇಶ್ವರ್ ಎಲ್ಲರೂ ಒಂದೊಂದು ಮಾತನಾಡುತ್ತಾರೆ. ಪಕ್ಷದಲ್ಲೇ ಇಟ್ಟುಕೊಂಡು ಪಕ್ಷದವರನ್ನೇ ಸೋಲಿಸುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಒಗ್ಗಟ್ಟಿನ ಪಕ್ಷ, ಬಿಜೆಪಿ ಒಡೆದ ಪಕ್ಷವಾಗಿದೆ ಎಂದಿದ್ದಾರೆ.
ನಿರುದ್ಯೋಗಿಗಳ ಪಟ್ಟಿ ಮಾಡಿ. ಕೋವಿಡ್‌ನಲ್ಲಿ ಸತ್ತವರ ಕುಟುಂಬಕ್ಕೆ ಪರಿಹಾರ ಕೊಡಿಸಲು ಅರ್ಜಿ ಹಾಕಿಸಿ. ಇನ್ನು 18 ವರ್ಷ ಆದವರನ್ನು ಮತದಾರರ ಪಟ್ಟಿಗೆ ಸೇರಿಸುವುದು ನಿಮ್ಮ ಅಜೆಂಡಾ ಆಗಬೇಕು. ನಮ್ಮ ಪಕ್ಷ ಸೇರಿ ಪಕ್ಷದ ಅಜೆಂಡಾ ಒಪ್ಪಿದರೆ ಯಾರೂ ಪಕ್ಷ ಬಿಡುವುದಿಲ್ಲ. ನಿಮ್ಮಲ್ಲಿ ಯಾರು ಕಾರ್ಯಪ್ರವೃತ್ತವಾಗಿರುವುದಿಲ್ವೋ ನೀವು ಚುನಾಯಿತ ಪ್ರತಿನಿಧಿಯಾಗಿದ್ದರೂ ನಿಮ್ಮನ್ನು ಕಿತ್ತುಹಾಕುತ್ತೇವೆ. ನೀವು ಕೆಲಸ ಮಾಡದಿದ್ದರೆ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ದೇಶದಲ್ಲಿ ನಮಗೆ ಈಗ ತಾತ್ಕಾಲಿಕ ಹಿನ್ನಡೆ. ನಮ್ಮ ಇತಿಹಾಸ, ನಮ್ಮ ನಾಯಕತ್ವ, ನಮ್ಮ ಶಕ್ತಿಯಿಂದ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ. ಕಾಂಗ್ರೆಸ್ ಇಲ್ಲದಿದ್ದರೆ ದೇಶ ಛಿದ್ರವಾಗುತ್ತದೆ. ನೀವೆಲ್ಲ ಕನಸು ಕಾಣಬೇಕು, ಕನಸು ನನಸಾಗಿಸಲು ಹಂಬಲಿಸಬೇಕು, ಕನಸಿಗಾಗಿ ಶಿಸ್ತು ಇಟ್ಟುಕೊಳ್ಳಬೇಕು, ಕನಸಿಗೆ ಬದ್ಧತೆ ತೋರಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿರಿ: ಕರ್ನಾಟಕ ಚುನಾವಣಾ ಕ್ಷೇತ್ರಗಳ ಪೂರ್ವ ಸಮೀಕ್ಷೆ; ಹಳಿಯಾಳ-ಜೋಯಿಡಾ: ತಡವಾದ ಅಭಿವೃದ್ಧಿ; ಸಾಮ್ರಾಜ್ಯ ಉಳಿಸಿಕೊಳ್ಳುವರಾ ದೇಶಪಾಂಡೆ?


