ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್ ಪರ ಪ್ರಚಾರದಲ್ಲಿ ಭಾಗವಹಿಸಿದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್, “ಈ ಚುನಾವಣೆಯ ನಂತರ ಯಡಿಯೂರಪ್ಪನವರನ್ನು ಕೆಳಗಿಳಿಸುತ್ತಾರಂತೆ, ಯಡಿಯೂರಪ್ಪನವರು ಹೋದರೆ ಮುನಿರತ್ನ ಕಥೆ ಗೋವಿಂದ” ಎಂದು ಹೇಳಿದ್ದಾರೆ.
ಪ್ರಚಾರ ಸಬೆಯಲ್ಲಿ ಮಾತನಾಡಿದೆ ಅವರು, ”ಕಳೆದ ಚುನಾವಣೆಯಲ್ಲಿ ನಿಮ್ಮ ಹಾಗೂ ನಮ್ಮ ಶ್ರಮವನ್ನು 50 ಕೋಟಿಗೆ ಮಾರಿಕೊಂಡಿದ್ದಾರೆ. ಮಾತೃ ಪಕ್ಷಕ್ಕೆ ದ್ರೋಹ ಮಾಡುವುದು ಹೆತ್ತ ತಾಯಿಗೆ ದ್ರೋಹ ಮಾಡಿದಂತೆ. ಇದಕ್ಕೆ ಸರಿಯಾಗಿ ಬುದ್ಧಿ ಕಲಿಸಲು ಅವಕಾಶ ಸಿಕ್ಕಿದೆ. ಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಎಲ್ಲವೂ ಒಳ್ಳೆಯದಾಗುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: ಶಿರಾ ಉಪಚುನಾವಣೆ: ಮೂಲ VS ವಲಸೆ ಬಿಜೆಪಿಗರ ನಡುವೆ ಬಿರುಕು! ಯಾರ ಕೈಹಿಡಿಯಲಿದ್ದಾನೆ ಮತದಾರ
“ಬಿಜೆಪಿಯವರೆ ಇದೊಂದು ಬಾರಿ ಅವಕಾಶ ಕೊಡುತ್ತೇವೆ ಎಂದಿದ್ದಾರೆ. ಮುಂದಿನ ಬಾರಿ ಇವರಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇವರನ್ನು ಖಾಲಿ ಮಾಡಿಸಿ ಕ್ಷೇತ್ರಕ್ಕೆ ಮುಕ್ತಿ ತಂದುಕೊಡಬೇಕು” ಎಂದು ಶಿವಕುಮಾರ್ ಹೇಳಿದರು.
“ಈ ಚುನಾವಣೆಗಾಗಿ 25 ಕೋಟಿ ಕೊಟ್ಟಿದ್ದಾರಂತೆ. ಅವರು ದುಡ್ಡು ಕೊಟ್ಟರೆ ಯಾರೊಬ್ಬರೂ ಬೇಡ ಅನ್ನ ಬೇಡಿ. ಎಲ್ಲರೂ ಹಣ ತೆಗೆದುಕೊಳ್ಳಿ. ಬಿಜೆಪಿ ನೋಟು, ಕಾಂಗ್ರೆಸ್ ಗೆ ಓಟು. ಮುನಿರತ್ನನ ನೋಟು ಕುಸುಮಾಗೆ ಓಟು ಇದನ್ನು ಗಮನದಲ್ಲಿಟ್ಟುಕೊಳ್ಳಿ” ಮತದಾರರಿಗೆ ಕರೆ ನೀಡಿದರು.
“ಎಲ್ಲ ಹೆಣ್ಣು ಮಕ್ಕಳು, ಯುವಕರು, ಎಲ್ಲ ವರ್ಗದವರು ಈ ಹೆಣ್ಣು ಮಗಳಿಗೆ ಆಶೀರ್ವಾದ ಮಾಡಿ, ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ. ಈ ಕ್ಷೇತ್ರದಲ್ಲಿರುವ ಕೆಟ್ಟ ಹುಳುವನ್ನು ತೆಗಿಯಬೇಕು. ಬಿಜೆಪಿ ಅಭ್ಯರ್ಥಿ ಸೋತರೆ ಪೊಲೀಸಿನವರಿಗೂ ಖುಷಿಯಾಗುತ್ತದೆ. ಅವರು ಒಳಗೊಳಗೇ ಕಾಯುತ್ತಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: ಉಪಚುನಾವಣೆ: ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದೆ; ಯಾಕೆ?


