ಶಾಸಕ ಬಿ.ಸತ್ಯನಾರಾಯಣ್ ಅವರ ನಿಧನದಿಂದ ತೆರವಾಗಿರುವ ಶಿರಾ ಕ್ಷೇತ್ರದ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದೆ. ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪ್ರಚಾರ ಕಾರ್ಯವೂ ಬಿರುಸು ಪಡೆದುಕೊಂಡಿದೆ. ಇದರ ನಡುವೆ ಬಿಜೆಪಿಯ ಒಳಗೆ ಬಣಗಳು ಸೃಷ್ಟಿಯಾಗಿದ್ದು, ಮೂಲ ಮತ್ತು ವಲಸೆ ಬಿಜೆಪಿಗರ ನಡುವೆ ಫೈಟ್ ಆರಂಭವಾಗಿದೆ.

ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ, ಪ್ರತಿಯೊಂದು ಗ್ರಾಮಸ್ಥರನ್ನು ಭೇಟಿ ಮಾರುವ ಕೆಲಸದಲ್ಲಿ ನಿರತರಾಗಿದ್ದಾರೆ. ಕೊನೆಗಳಿಗೆಯಲ್ಲಿ ಬಿ.ಫಾರಂ ಪಡೆದು ನಾಮಪತ್ರ ಸಲ್ಲಿಸಿರುವ ಬಿಜೆಪಿ ಅಥ್ಯರ್ಥಿ ಡಾ.ರಾಜೇಶ್ ಗೌಡ ಈಗಷ್ಟೇ ಪ್ರಚಾರ ನಡೆಸುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಇವರಿಗೆ ಸಾಥ್ ನೀಡಿದ್ದಾರೆ. ರಾಜಕೀಯ ಪಟ್ಟುಗಳೇ ಗೊತ್ತಿಲ್ಲದ ಬಿ.ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಪಕ್ಷದ ಸಾಂಪ್ರದಾಯಿಕ ಬೆಂಬಲಿಗರು ಮತ್ತು ವರಿಷ್ಠರನ್ನು ನಚ್ಚಿಕೊಂಡು ಕೆಲಸ ಮಾಡುತ್ತಿದ್ದಾರೆ.

ಇದೆಲ್ಲವೂ ಒಂದು ಕಡೆಯಾದರೆ, ಬಿಜೆಪಿಯಲ್ಲಿ ಅಸಮಾಧಾನ ಕಡಿಮೆಯಾದಂತೆ ಕಂಡುಬರುತ್ತಿಲ್ಲ. ಸ್ಥಳೀಯರು ಮತ್ತು ಕ್ಷೇತ್ರದಲ್ಲಿ ಬಿಜೆಪಿಯನ್ನು ತಳಹಂತದಲ್ಲಿ ಕಟ್ಟಿಬೆಳೆಸಿದ ಮೂಲ ಬಿಜೆಪಿ ಮುಖಂಡರನ್ನು ಕಡೆಗಣಿಸಿರುವುದು ಅಸಮಾಧಾನ ತೀವ್ರಗೊಳ್ಳಲು ಕಾರಣವಾಗಿದೆ. ಕೊನೆ ಕ್ಷಣದಲ್ಲಿ ಪಕ್ಷದ ಟಿಕೆಟ್ ಗ್ಯಾರೆಂಟಿ ಮಾಡಿಕೊಂಡು ಪಕ್ಷಕ್ಕೆ ಬಂದ ಮಾಜಿ ಸಂಸದ ಮುಡ್ಲಗಿರಿಯಪ್ಪ ಅವರ ಪುತ್ರ ರಾಜೇಶ್ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿರುವುದು ಮೂಲ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಶಿರಾ ಉಪಚುನಾವಣೆ : ಹೊಸ ನಾಣ್ಯ ನಡೆಯೋಲ್ಲ ಅಂತಾರೆ ಜನ

ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಯೊಂದು ನಡೆಯನ್ನು, ಕೆಲಸವನ್ನು ಕಣ್ಣುಮುಚ್ಚಿ ಬೆಂಬಲಿಸುತ್ತಿದ್ದ ಯುವಪಡೆ, ರಾಜೇಶ್ ಗೌಡ ಅವರಿಗೆ ಟಿಕೆಟ್ ನೀಡಿರುವುದನ್ನು ಬಹಿರಂಗವಾಗಿಯೇ ಟೀಕಿಸುತ್ತಿದೆ. ಬಿಜೆಪಿಯ ಪ್ರತಿಯೊಂದು ಕೆಲಸವನ್ನೂ ‘ಸರಿ’ ಎಂದು ಸಮರ್ಥನೆಗೆ ಇಳಿಯುತ್ತಿದ್ದ ಈ ಯುವಪಡೆ, ಅದೇ ಜಾಲತಾಣದಲ್ಲಿ ಅಭ್ಯರ್ಥಿಯ ಸಾಮರ್ಥ್ಯವನ್ನು ಹೀಗಳೆಯುತ್ತಿದೆ. ಟೀಕೆಯನ್ನು ವ್ಯಕ್ತಪಡಿಸುತ್ತಿದೆ. ಗೆಲುವು ಇನ್ನಾರಿಗೋ ಎಂಬಂತೆ ‘ಕೈ’ ತೋರಿಸುತ್ತಿದೆ. ಪಕ್ಷ ಸಮರ್ಥ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ ಎಂದು ಅಸಮಾಧಾನಗೊಂಡಿದೆ. ಹಣದಿಂದ ಗೆಲುವು ಪಡೆಯುವ ಕನಸು ಈಡೇರುವುದಿಲ್ಲ ಎನ್ನುತ್ತಿದೆ ಆ ಯುವಪಡೆ.

ಶಿರಾ ಕ್ಷೇತ್ರದಲ್ಲಿ ಪಕ್ಷವನ್ನು ಬೇರುಮಟ್ಟದಲ್ಲಿ ಕಟ್ಟಲು ಕಾರಣರಾದ ಬಿ.ಕೆ.ಮಂಜುನಾಥ್ ಮತ್ತು ಎಸ್.ಆರ್.ಗೌಡ ಅವರನ್ನು ಕಡೆಗಣಿಸಿ ಬೇರೆಯವರಿಗೆ ಟಿಕೆಟ್ ನೀಡಿರುವುದು ಮೂಲ ಬಿಜೆಪಿಗರನ್ನು ಕೆರಳುವಂತೆ ಮಾಡಿದೆ. ಬಿ.ಕೆ.ಮಂಜುನಾಥ್ ಮತ್ತು ಎಸ್.ಆರ್.ಗೌಡ ಅವರಿಗೆ ಮನದಲ್ಲಿ ನೋವು ಮನೆ ಮಾಡಿದ್ದರೂ ಅದನ್ನು ಹೊರಗೆ ತೋರ್ಪಡಿಸುವ ಹಾಗಿಲ್ಲ. ಹಾಗಾಗಿಯೇ ಜಿಲ್ಲಾ ಬಿಜೆಪಿ ಮುಖಂಡರು ಮತ್ತು ರಾಜ್ಯದ ವರಿಷ್ಟರ ತೀರ್ಮಾನಕ್ಕೆ ತಲೆಬಾಗಿ ಮೌನಕ್ಕೆ ಜಾರಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಶಿರಾ ಉಪಚುನಾವಣೆ: ಜೆಡಿಎಸ್ ತೊರೆದು ’ಕೈ’ ಹಿಡಿದ ಸ್ಥಳೀಯ ಮುಖಂಡರು

ರಾಜೇಶ್ ಗೌಡ ದೊಡ್ಡ ಕುಳವೇ! ಅದರಲ್ಲಿ ಅನುಮಾನವಿಲ್ಲ. ಆದರೆ ಅವರ ಗೆಲುವು ತುಂಬ ಕಷ್ಟ ಎನ್ನುತ್ತಾರೆ ಕಟ್ಟಾ ಬಿಜೆಪಿಗರು. ತುಮಕೂರು ಜಿಲ್ಲೆಯಲ್ಲಿ ಮೂಲ ಮತ್ತು ವಲಸಿಗ ಬಿಜೆಪಿಗರ ನಡುವೆ ಬಹಿರಂಗ ಭಿನ್ನಮತ ಅಂತ್ಯವಾದಂತೆ ಕಂಡುಬಂದರೂ ಆಂತರ್ಯದಲ್ಲಿ ಶೀತಲಸಮರ ಮುಂದುವರಿದಿದೆ. ಶಿರಾ ಕ್ಷೇತ್ರದಲ್ಲಿ ಎಸ್.ಆರ್.ಗೌಡ ಮತ್ತು ಬಿ.ಕೆ.ಮಂಜುನಾಥ್ ಬಣಗಳಿದ್ದುದು ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಈಗ ರಾಜೇಶ್ ಗೌಡರ ಮೂರನೇ ಬಣವೂ ಹುಟ್ಟಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜೇಶ್ ಗೌಡ ಬಿಜೆಪಿ ಪಕ್ಷಕ್ಕೆ ಏನುಕೊಡುಗೆ ಕೊಟ್ಟಿದ್ದಾರೆ ಎಂಬ ಪ್ರಶ್ನೆ ಸ್ಥಳೀಯ ಬಿಜೆಪಿಗರದ್ದು. ಈ ಪ್ರಶ್ನೆಯನ್ನು ಬಿಜೆಪಿ ಕಾರ್ಯಕರ್ತರು ಬಹಿರಂಗವಾಗಿಯೇ ಕೇಳುತ್ತಿದ್ದಾರೆ. ಆದರೆ ಬಿಜೆಪಿಯ ಯಾವುದೇ ಮುಖಂಡರೂ ಸಾಮಾನ್ಯ ಬಿಜೆಪಿ ಕಾರ್ಯಕರ್ತರ ಈ ‘ಮೂಲ’ ಪ್ರಶ್ನೆಗೆ ಉತ್ತರಿಸುವಂತಹ ಗೋಜಿಗೆ ಹೋಗಿಲ್ಲ. ಅಭಿವೃದ್ಧಿಯ ವಿಷಯಗಳು ಬಿಟ್ಟು ಯಾವುದ್ಯಾವುದೋ ವಿಷಯಗಳನ್ನು ಜನರ ಮನದಲ್ಲಿ ತುಂಬುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇದು ವರ್ಕೌಟ್ ಆಗುತ್ತಾ ಎಂಬುದನ್ನು ಶಿರಾ ಮತದಾರನೇ ಬಲ್ಲ.

ಉಪಚುನಾವಣೆಯಲ್ಲಿ ಮೂಲ ಬಿಜೆಪಿ ಕಾರ್ಯಕರ್ತರು ತಟಸ್ಥರಾಗುವ ಸಾಧ್ಯತೆಗಳೇ ಹೆಚ್ಚಾಗಿವೆ. ಬಣದ ಪ್ರಾಬಲ್ಯವೂ ಇಲ್ಲಿ ಕೆಲಸ ಮಾಡಲಿದೆ. ಹೊನ್ನಾಳಿ ಹೊಡೆತ ಕೊಡಲು ಯುವಪಡೆ ಕಾಯುತ್ತಿದೆ ಎಂದು ಪರಿವಾರದ ಮುಖಂಡರೊಬ್ಬರು ತಿಳಿಸಿದ್ದಾರೆ. ಹಾಗಾಗಿ ಶಿರಾ ಕ್ಷೇತ್ರದಲ್ಲಿ ಮೂಲ V/S ವಲಸಿಗ ಬಿಜೆಪಿ ನಡುವೆ ಫೈಟ್ ನಡೆಯುತ್ತಿದೆ. ಕೊಡಲಿಗೆ ಕಾವು “ಮೂಲ”ವಾಗುವುದೇ? ಎಂಬುದು ಫಲಿತಾಂಶದಿಂದ ಹೊರಬೀಳಲಿದೆ.


ಇದನ್ನೂ ಓದಿ: ಶಿರಾ ಉಪಚುನಾವಣೆ: ಪ್ರತಿಷ್ಠೆಯ ಜಿದ್ದಾಜಿದ್ದಿನಲ್ಲಿ ಯಾವ ಪಕ್ಷ ಮುಂದು?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಕೆ.ಇ. ಸಿದ್ದಯ್ಯ
+ posts

LEAVE A REPLY

Please enter your comment!
Please enter your name here