PC: NewsPHH

ಭಾರತೀಯ ಜನತಾ ಪಾರ್ಟಿಯ ಪಂಜಾಬ್‌ನ ಕೆಲವೇ ಕೆಲವು ಸಿಖ್ ಮುಖಂಡರುಗಳಲ್ಲಿ ಒಬ್ಬರಾದ ಪಂಜಾಬ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಲ್ವಿಂದರ್ ಸಿಂಗ್ ಕಾಂಗ್ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಷ್ಟ್ರವ್ಯಾಪಿ ತೀವ್ರ ಟೀಕೆಗೆ ಗುರಿಯಾಗಿರುವ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಲು ಬಿಜೆಪಿಯಲ್ಲಿ ಯಾರೂ ಸಿದ್ಧರಿಲ್ಲ, ಜೊತೆಗೆ ಪಕ್ಷದ ಹಿರಿಯ ನಾಯಕರು ಪಂಜಾಬ್ ಪರ ಮನೋಭಾವವನ್ನು ಹೊಂದಿಲ್ಲ ಎಂದು ಮಾಲ್ವಿಂದರ್ ಸಿಂಗ್ ಕಾಂಗ್ ಹೇಳಿದ್ದಾರೆ.

“ಸುಗ್ರೀವಾಜ್ಞೆಗಳನ್ನು ಅಂಗೀಕರಿಸಿದಾಗ ನಾನು ರೈತರ ಪ್ರತಿಭಟನೆಯ ವಿಷಯವನ್ನು ಎತ್ತಿದ್ದೇನೆ. ಪಕ್ಷದ ಪ್ರಮುಖ ಸಮಿತಿಯ ಸದಸ್ಯನಾಗಿ, ಪ್ರತಿ ಸಭೆಯಲ್ಲೂ ನಾನು ಕೃಷಿ ಮಸೂದೆಗಳ ಬಗ್ಗೆ ಮಾತಾಡುವ ಪ್ರಯತ್ನ ಮಾಡಿದ್ದೇನೆ. ಆದರೆ ಪಕ್ಷದಲ್ಲಿ ನನ್ನನ್ನು ದೂಷಿಸಲಾಯಿತು” ಎಂದಿದ್ದಾರೆ.

“ಕೃಷಿ ಮಸೂದೆಗಳ ಬಗ್ಗೆ ಮಾತಾಡಿದ್ದಕ್ಕಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ನನ್ನನ್ನು ಪಾಕಿಸ್ತಾನಿ ಎಂದು ಕರೆದರು. ಅವರ ಭಾಷಾಪ್ರಯೋಗದ ವಿರುದ್ಧ ನಾನು ಪ್ರತಿಭಟಿಸಿದಾಗ ಅವರು ಕ್ಷಮೆಯಾಚಿಸಬೇಕಾಯಿತು. ರೈತರ ಪರವಾಗಿ ಮಾತನಾಡುವವರ ಬಗ್ಗೆ ಬಿಜೆಪಿ ಈ ರೀತಿಯ ಮನೋಭಾವವನ್ನು ಹೊಂದಿದೆ ”ಎಂದು ಕಾಂಗ್ ಹೇಳಿದ್ದಾರೆ.

ಇದನ್ನೂ ಓದಿ: ’ಮಹಾಘಟಬಂಧನ್’ ಗೆದ್ದರೆ ಕೇಂದ್ರದ ಕೃಷಿ ವಿರೋಧಿ ಕಾನೂನುಗಳು ರದ್ದು!

ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿದ್ದ ಕಾಂಗ್, ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಬಂದವರು. ಕೆಲವೇ ವರ್ಷಗಳಲ್ಲಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರಿದ್ದರು. ಪಂಜಾಬ್‌ನಲ್ಲಿ ಬಿಜೆಪಿ ಹೊಂದಿದ್ದ ಬೆರಳೆಣಿಕೆಯಷ್ಟು ಸಿಖ್ ನಾಯಕರಲ್ಲಿ ಅವರು ಕೂಡ ಒಬ್ಬರು.

“ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಪಕ್ಷದ ಪ್ರಮುಖ ಗುಂಪಿನ ಸದಸ್ಯರಾಗಿ, ಪಕ್ಷದ ವೇದಿಕೆಯಲ್ಲಿ ಪ್ರತಿಭಟನಾ ನಿರತ ರೈತರು, ಸಣ್ಣ ವ್ಯಾಪಾರಿಗಳು ಮತ್ತು ಕಾರ್ಮಿಕ ಸಂಘಟನೆಗಳನ್ನು ಬೆಂಬಲಿಸಿ ನಾನು ಧ್ವನಿ ಎತ್ತಿದೆ. ರೈತರ ಆಂದೋಲನವನ್ನು ಬೆಂಬಲಿಸುವ ಸಲುವಾಗಿ ನಾನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ, ”ಎಂದು ಹೇಳಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಅಶ್ವನಿ ಶರ್ಮಾ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ, “ಕೇಂದ್ರ ಸರ್ಕಾರವು ಅಂಗೀಕರಿಸಿದ ಹೊಸ ಕಾಯಿದೆಗಳ ವಿರುದ್ಧ ರೈತರು, ಸಣ್ಣ ವ್ಯಾಪಾರಿಗಳು ಮತ್ತು ಕಾರ್ಮಿಕ ಸಂಘಟನೆಗಳು ಪ್ರಜಾಸತ್ತಾತ್ಮಕವಾಗಿ ಮತ್ತು ಸರಿಯಾಗಿ ಪ್ರತಿಭಟಿಸುತ್ತಿವೆ” ಎಂದು ಹೇಳಿದ್ದಾರೆ.

ಕಾಂಗ್ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಅಶ್ವನಿ ಶರ್ಮಾ, ತಮ್ಮ ರಾಜಕೀಯ ಮಾರ್ಗವನ್ನು ಆಯ್ಕೆ ಮಾಡುವ ಹಕ್ಕು ಎಲ್ಲರಿಗೂ ಇದೆ ಎಂದು ಹೇಳಿದ್ದಾರೆ. “ಆದರೆ ಅವರ ಹಕ್ಕುಗಳಿಗೆ ಸಂಬಂಧಿಸಿದಂತೆ, ಎಲ್ಲಾ ವೇದಿಕೆಗಳಲ್ಲಿ ಧ್ವನಿ ಎತ್ತಬಹುದಾದ ಏಕೈಕ ಪಕ್ಷ ಬಿಜೆಪಿ. ಆದರೆ ಪಕ್ಷವು ಎಲ್ಲಾ ಧ್ವನಿಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯವಲ್ಲ” ಎಂದಿದ್ದಾರೆ.

ಹೊಸ ಕಾನೂನುಗಳು ರೈತರ ಪರವಾಗಿವೆ ಎಂದು ಮನವರಿಕೆ ಮಾಡಿಕೊಡಲು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಪಂಜಾಬ್‌ನಲ್ಲಿ ಮಾತುಕತೆ ನಡೆಸಲು ತನ್ನ ಹಲವಾರು ಮಂತ್ರಿಗಳನ್ನು ನಿಯೋಜಿಸಿರುವ ಸಮಯದಲ್ಲಿ ಕಾಂಗ್ ರಾಜೀನಾಮೆ ನೀಡಿದ್ದಾರೆ.


ಇದನ್ನೂ ಓದಿ: ರೈತರನ್ನು ಸಭೆಗೆ ಕರೆದ ಕೇಂದ್ರದ ಕೃಷಿ ಸಚಿವರೇ ನಾಪತ್ತೆ: ಮಸೂದೆ ಹರಿದು ರೈತರ ಆಕ್ರೋಶ!

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

1 COMMENT

LEAVE A REPLY

Please enter your comment!
Please enter your name here