ಬಿಡುಗಡೆಗೂ ಮುನ್ನವೇ ಮಕ್ಕಳ ಕಮರ್ಷಿಯಲ್ ಚಿತ್ರ ‘ಗಿರ್ಮಿಟ್’ ಐಎಂಡಿಬಿ ನೀಡಿದ ಭಾರತದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ 5 ನೇ ಸ್ಥಾನ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ. ಐಎಂಡಿಬಿ ನಿರೀಕ್ಷಿತ ಚಿತ್ರಗಳ ಅಗ್ರಪಟ್ಟಿಯಲ್ಲಿ 5 ನೇ ಸ್ಥಾನ ಪಡೆದ ಗಿರ್ಮಿಟ್, ಭಾರತೀಯ ಚಿತ್ರಗಳ ಬಗೆಗಿನ ನಿರೀಕ್ಷೆ ಹೆಚ್ಚಿಸಿದೆ.
ಭಾರತೀಯ ಚಿತ್ರರಂಗದಲ್ಲೇ ಮೊಟ್ಟ ಮೊದಲ ಮಕ್ಕಳ ವಾಣಿಜ್ಯಾತ್ಮಕ ಚಿತ್ರವೆಂಬ ಕೀರ್ತಿಗೆ ಪಾತ್ರವಾಗಿದೆ. ರವಿ ಬಸ್ರೂರು ಮತ್ತು ತಂಡದ ಪರಿಶ್ರಮದಲ್ಲಿ ನಿರ್ಮಾಣವಾದ ಗಿರ್ಮಿಟ್ ಚಿತ್ರ, ಚಲನಚಿತ್ರಗಳ ಮಾನದಂಡ ಸಂಸ್ಥೆಯಾದ ಐಎಂಡಿಬಿ ಬಹು ನಿರೀಕ್ಷಿತ ಭಾರತೀಯ ಚಿತ್ರಗಳ ಪೈಕಿ 5 ನೇ ಸ್ಥಾನ ಪಡೆದಿದೆ.
ಐಎಂಡಿಬಿ ಪಟ್ಟಿಯಲ್ಲಿ ಬಾಲಿವುಡ್ ನ ‘ಮರ್ಜಾವಾನ್’ ಚಿತ್ರವು ಮೊದಲ ಸ್ಥಾನ ಪಡೆದಿದೆ. ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಈ ಚಿತ್ರವನ್ನು ಶೇ.22.8 ರಷ್ಟು ಮಂದಿ ನೋಡುವ ನಿರೀಕ್ಷೆಯಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್ 3’ ಇದ್ದು, ಶೇ. 21.9 ರಷ್ಟು ಮಂದಿ ನೋಡಲು ಕಾತರರಾಗಿದ್ದಾರೆ. ಮೂರನೇ ಸ್ಥಾನದಲ್ಲಿ ‘ಬಾಲಾ’ ಚಿತ್ರವಿದ್ದು, ಶೇ.20.6 ರಷ್ಟು ಜನರ ಬೇಡಿಕೆ ಚಿತ್ರವಾಗಿದೆ. ನಾಲ್ಕನೇ ಸ್ಥಾನದಲ್ಲಿ ‘ಪಾಗಲ್ ಪಂತಿ’ ಚಿತ್ರವಿದ್ದು, ಶೇ.17 ರಷ್ಟು, 5 ನೇ ಸ್ಥಾನದಲ್ಲಿ ಕನ್ನಡದ ಗಿರ್ಮಿಟ್ ಚಿತ್ರವಿದ್ದು, ಶೇ.11.1 ರಷ್ಟು ಜನರು ನೋಡುವ ನಿರೀಕ್ಷೆಯಲ್ಲಿದ್ದಾರೆ.
ಜಾಲತಾಣ ಮಾನದಂಡ ಸಂಸ್ಥೆಯು ನೀಡುವ ಅಂಕಿ ಅಂಶಗಳ ಮಾಹಿತಿಯು ಕನ್ನಡ ಸಿನಿಮಾಗಳ ಹಿರಿಮೆಯನ್ನು ಹೆಚ್ಚಿಸುತ್ತಿದೆ. ಬಸ್ರೂರು ಅವರ ಹೊಸ ಶೈಲಿಯ ಚಿತ್ರವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರರಾಗಿದ್ದಾರೆ. ಹಾಗಾದ್ರೆ ಜಾಲತಾಣ ಮಾನದಂಡ ಅನ್ನೋದು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ…
ಏನಿದು ಜಾಲತಾಣ ಮಾನದಂಡ..?
ಐಎಂಡಿಬಿ ಎಂದರೆ ಇಂಟರ್ನೆಟ್ ಮೂವಿ ಡೇಟಾ ಬೇಸ್ ಎಂದರ್ಥ. ಅಂದರೆ ಚಲನಚಿತ್ರಗಳ ಬಗ್ಗೆ ಜಾಲತಾಣಿಗರು ವ್ಯಕ್ತಪಡಿಸುವ ಅಭಿಪ್ರಾಯ, ವಿಮರ್ಶಿಸುವ ಒಂದು ಮಾನದಂಡ ಸಂಸ್ಥೆ ಆಗಿದೆ. ಇದು ಚಲನಚಿತ್ರಗಳಿಗೆ ಮಾತ್ರವಲ್ಲದೇ ದೂರದರ್ಶನದ ಕಾರ್ಯಕ್ರಮಗಳು, ವಿಡಿಯೋ ಗೇಮ್ ಗೆ ಸಂಬಂಧಿಸಿದ ಅಭಿಪ್ರಾಯ ಸಂಗ್ರಹಿಸಿ, ದತ್ತಾಂಶ ಕಲೆ ಹಾಕಲು ಸಹಕಾರಿಯಾಗಿದೆ.
ಇನ್ನು ಅಕ್ಟೋವರ್ 26 ರಂದು ಬಿಡುಗಡೆಯಾದ ಗಿರ್ಮಿಟ್ ಚಿತ್ರದ ಟ್ರೇಲರ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ನಿರ್ದೇಶಕ ರವಿ ಬಸ್ರೂರು ಮತ್ತು ತಂಡದ ಪ್ರಯತ್ನದ ಫಲವಾಗಿ ಮೂಡಿ ಬರುತ್ತಿರುವ ನಾಲ್ಕನೇ ಚಿತ್ರ ಇದಾಗಿದ್ದು, ನ.೮ ರಂದು ಪ್ರಪಂಚದಾದ್ಯಂತ ತೆರೆ ಕಾಣಲಿದೆ.
ಚಿತ್ರದಲ್ಲಿ ನಾಯಕ, ನಾಯಕಿ ಪಾತ್ರದಲ್ಲಿ ಮತ್ತು ಮುಖ್ಯ ಭೂಮಿಕೆಯಲ್ಲಿ ಮಕ್ಕಳೇ ಪ್ರಧಾನ ಪಾತ್ರದಲ್ಲಿ ನಟಿಸಿರುವ ವಿಭಿನ್ನ ಚಿತ್ರ ಇದಾಗಿದೆ. ರಾಕಿಂಗ್ ಸ್ಟಾರ್ ಯಶ್, ನಟಿ ರಾಧಿಕಾ ಪಂಡಿತ್ ಸೇರಿದಂತೆ ಹಿರಿಯ ಕಲಾವಿದರು, ಮಕ್ಕಳ ಪಾತ್ರಗಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ.


