ಮುಂಬೈ ತೀರದಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಚಿತ್ ಕುಮಾರ್‌ಗೆ ಜಾಮೀನು ಮಂಜೂರು ಮಾಡಿರುವ ವಿಶೇಷ ನ್ಯಾಯಾಯಲವು, ವಾಟ್ಸಾಪ್ ಚಾಟ್‌ಗಳ ಆಧಾರದ ಮೇಲೆ ಸಹ ಆರೋಪಿ ಆರ್ಯನ್ ಖಾನ್‌ಗೆ ಡ್ರಗ್ಸ್ ಸರಬರಾಜು ಮಾಡಿದ್ದಾನೆ ಎಂಬುದನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ.
ಈ ಬಗ್ಗೆ ನ್ಯಾಯಾಲಯದ ವಿವರವಾದ ಆದೇಶವು ಭಾನುವಾರ ದೊರೆತ್ತಿದ್ದು, ಅದರಲ್ಲಿ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB) ಪಂಚನಾಮೆ ದಾಖಲೆಗಳ ಸತ್ಯಾಸತ್ಯತೆಯ ಬಗ್ಗೆಯೂ ನ್ಯಾಯಾಲಯವು ಪ್ರಶ್ನಿಸಿದ್ದು, ದಾಖಲೆಗಳನ್ನು ಸೃಷ್ಟಿಸಲಾಗಿದ್ದು ಅವು ಅನುಮಾನಾಸ್ಪದವೆಂದು ತೋರುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.
ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ನಿಯೋಜಿತವಾಗಿರುವ ವಿಶೇಷ ನ್ಯಾಯಾಧೀಶ ವಿ.ವಿ ಪಾಟೀಲ್ ಅವರು ಶನಿವಾರ ಆಚಿತ್ ಕುಮಾರ್‌ಗೆ ಜಾಮೀನು ಮಂಜೂರು ಮಾಡಿದ್ದಾರೆ.
ಆರ್ಯನ್ ಖಾನ್ ಅವರೊಂದಿಗಿನ ವಾಟ್ಸಾಪ್ ಚಾಟ್ ಹೊರತುಪಡಿಸಿ, ಆಚಿತ್ ಅವರು ಇಂತಹ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ತನ್ನ ವಿವರವಾದ ಆದೇಶದಲ್ಲಿ ತಿಳಿಸಿದೆ.
‘ಅರ್ಜಿದಾರ ಆಚಿತ್ ಕುಮಾರ್ ಆರೋಪಿ ನಂ.1 ಆರ್ಯನ್ ಖಾನ್ ಅಥವಾ ಯಾರಿಗಾದರೂ ಡ್ರಗ್ಸ್ ಸರಬರಾಜು ಮಾಡಿದ್ದಾರೆ ಎಂಬುದಕ್ಕೆ ದಾಖಲೆಗಳಲ್ಲಿ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ಅರ್ಜಿದಾರನು ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹನಾಗಿದ್ದಾನೆ’ ಎಂದು ಆದೇಶದಲ್ಲಿ ತಿಳಿಸಿದೆ.
ಡ್ರಗ್ ಕೇಸ್‌ನಲ್ಲಿ ಬಂಧಿಸಲಾಗಿದ್ದ ಆಚಿತ್ ಕುಮಾರ್ ಅವರಿಗೆ ಆರ್ಯನ್ ಖಾನ್ ಹೊರತುಪಡಿಸಿ ಬೇರೆ ಆರೋಪಿಗಳೊಂದಿಗೆ ಸಂಪರ್ಕವಿತ್ತು ಎನ್ನಲು ಯಾವುದೇ ಪುರಾವೆಗಳಿಲ್ಲ ಎಂಬ ಅಂಶವನ್ನು ವಿಶೇಷ ನ್ಯಾಯಾಲಯವು ತಮ್ಮ ಆದೇಶದಲ್ಲಿ ತಿಳಿಸಿದೆ.
ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರಿಗೆ ಬಾಂಬೆ ಹೈಕೋರ್ಟ್ ಕಳೆದ ವಾರ ಜಾಮೀನು ನೀಡಿದ್ದರೆ, ಉಳಿದವರಿಗೆ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯ ಜಾಮೀನು ನೀಡಿದೆ. ಈ ಪ್ರಕರಣದಲ್ಲಿ ಬಂಧಿತರಾದ ಒಟ್ಟು 20 ಜನರ ಪೈಕಿ ಇದುವರೆಗೆ 14 ಮಂದಿಗೆ ಜಾಮೀನು ಮಂಜೂರಾಗಿದೆ.
ಇದನ್ನು ಓದಿ: ಡ್ರಗ್ಸ್ ಪ್ರಕರಣ: ಮೂರು ವಾರಗಳ ಬಳಿಕ ಆರ್ಯನ್ ಖಾನ್‌ಗೆ ಜಾಮೀನು ಮಂಜೂರು


