ಪೊಲೀಸರ ಮುಂದೆಯೆ ಬಿಜೆಪಿ ದುಷ್ಕರ್ಮಿಗಳು ಅಂಗಡಿ ಬಂದ್ ಮಾಡುವಂತೆ ವ್ಯಾಪಾರಿಯೊಬ್ಬರಿಗೆ ಬಲವಂತವಾಗಿ ಒತ್ತಾಯಿಸಿ, ಅವರಿಗೆ ನಿಂದಿಸಿ ದಾಳಿಗೆ ಯತ್ನಿಸಿದ ಘಟನೆ ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ದುಷ್ಕರ್ಮಿಗಳ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಶನಿವಾರ ನಾನುಗೌರಿ.ಕಾಮ್‌ಗೆ ತಿಳಿಸಿದ್ದಾರೆ.
ಸಚಿವರಾದ ಲಕ್ಷ್ಮಿ ಹಬ್ಬಾಳ್ಕರ್ ಅವರನ್ನು ಸದನದಲ್ಲೆ ಅಶ್ಲೀಲವಾಗಿ ನಿಂದಿಸಿದ ಕಾರಣಕ್ಕೆ ಪೊಲೀಸರು ರವಿ ಅವರನ್ನು ಬಂಧಿಸಿದ್ದರು. ಇದನ್ನು ವಿರೋಧಿಸಿ ನಗರದಲ್ಲಿ ಗುಂಪುಕಟ್ಟಿಕೊಂಡು ಬಿಜೆಪಿ ಕಾರ್ಯಕರ್ತರು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿದ್ದರು. ಈ ವೇಳೆ ವ್ಯಾಪಾರಿಯೊಬ್ಬರು ಅದನ್ನು ನಿರಾಕರಿಸಿ, ಅಂಗಡಿ ಬಂದ್ ಮಾಡುವುದಿಲ್ಲ, ವರ್ಷದಲ್ಲಿ ಎರಡು ತಿಂಗಳು ಬರಿ ಅಂಗಡಿ ಬಂದ್ ಮಾಡುವುದೆ ಆಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು,”ಅಂಗಡಿ ಬಂದ್ ಮಾಡುವುದಿಲ್ಲ, ವರ್ಷದಲ್ಲಿ ಎರಡು ತಿಂಗಳು ಬರಿ ಅಂಗಡಿ ಬಂದ್ ಮಾಡುವುದೆ ಆಗುತ್ತದೆ. ನನಗೆ ದಿನಕ್ಕೆ 10-15 ಸಾವಿರ ವರೆಗೆ ಖರ್ಚಿದೆ. ಆ ಖರ್ಚನ್ನು ನೀವು ಕೊಡಿ, ಆಗ ನಾನು ಅಂಗಡಿ ಬಂದ್ ಮಾಡುತ್ತೇನೆ.” ಎಂದು ವ್ಯಾಪಾರಿ ಬಿಜೆಪಿ ಕಾರ್ಯಕರ್ತರಿಗೆ ಹೇಳಿದ್ದಾರೆ. ಜೊತೆಗೆ ಈ ಹಿಂದೆ ಬಿಜೆಪಿ ಸರ್ಕಾರದ ಸಮಯದಲ್ಲಿ ಕಳಪೆ ಕಾಮಗಾರಿಯಿಂದ ಅಂಗಡಿಗೆ ನೀರು ತುಂಬಿ 30 ಲಕ್ಷ ನಷ್ಟವಾಗಿದ್ದ ವಿಚಾರವನ್ನು ಅವರು ಹೇಳಿದ್ದು, ಈ ನಷ್ಟವನ್ನು ಕೊಡಿಸಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ವೇಳೆ ಬಿಜೆಪಿ ಕಾರ್ಯಕರ್ತರು, ಮಧ್ಯಾಹ್ನ ತನಕ ಬಂದ್ ಮಾಡಿ, ನಂತರ ಓಪನ್ ಮಾಡಿ ಎಂದು ಕೇಳಿಕೊಂಡಿದ್ದರು. ಅದಕ್ಕೂ ವ್ಯಾಪಾರಿ ನಿರಾಕರಿಸಿ, ನಾನು ಅಂಗಡಿ ಬಂದ್ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಈ ವೇಳೆ, ಬಿಜೆಪಿ ಕಾರ್ಯಕರ್ತನೊಬ್ಬ, ”ನೀವು ಹಿಂದೂ ದೇಶದಲ್ಲಿ ಇಲ್ಲ, ನೀವು ಹಿಂದೂ ಅಲ್ಲ” ಎಂದು ಹೇಳಿದ್ದಾರೆ.
ಈ ವೇಳೆ ವ್ಯಾಪಾರಿ, ”ನಾನು ದೇವಸ್ಥಾನ ಕಟ್ಟಿಸಿದ್ದೇನೆ, ಬನ್ನಿ ನಾನು ತೋರಿಸುತ್ತೇನೆ. ದೇವರಮ್ಮ ಬೆಟ್ಟದಲ್ಲಿ ದೇವಸ್ಥಾನ ಕಟ್ಟಿಸಿದ ನನ್ನನ್ನು ಹಿಂದೂ ಅಲ್ಲ ಎಂದು ಹೇಳಲು ನೀವು ಯಾರು?” ಎಂದು ಹೇಳಿದ್ದಾರೆ. ಈ ವೇಳೆ ಇತರ ಬಿಜೆಪಿ ಕಾರ್ಯಕರ್ತರು ಪೊಲೀಸರ ಮುಂದೆಯೆ ಅವರ ಮೇಲೆ ದಾಳಿಗೆ ಮುಂದಾಗಿದ್ದು, ಪೊಲೀಸರು ಅವರನ್ಜು ಅಲ್ಲಿಂದ ತೆರಳುವಂತೆ ವಿನಂತಿಸುವುದು ವಿಡಿಯೊದಲ್ಲಿ ದಾಖಲಾಗಿದೆ.
ಘಟನೆ ಬಗ್ಗೆ ನಾನುಗೌರಿ.ಕಾಮ್ ಜೊತೆಗೆ ಮಾತನಾಡಿದ ಚಿಕ್ಕಮಗಳೂರು ಡಿವೈಎಸ್‌ಪಿ, ಅರೋಪಿಗಳ ವಿರುದ್ಧ ಬಲವಂತವಾಗಿ ಬಂದ್ ಮಾಡಿಸುತ್ತಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಚಿಕ್ಕಮಗಳೂರು ನಗರ ಠಾಣೆಯ ಪಿಎಸ್‌ಐ ಶಂಭುಲಿಂಗೇಗೌಡ ಮಾತನಾಡಿ,”ಘಟನೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ಆಗಿದೆ. ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಗುರುವಾರ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿದ್ದರು. ಈ ಬಗ್ಗೆ ಸದನದ ಒಳಗೆ ಮತ್ತು ಹೊರಗೆ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದ್ದು, ಸಚಿವರ ಅಭಿಮಾನಿಗಳು ಸುವರ್ಣಸೌಧದ ಮೊಗಸಾಲೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದರು.
ಬಿಜೆಪಿಯ ಸಿ.ಟಿ. ರವಿ ಅವರ ಮಾತು ಕೇಳಿ ಲಕ್ಷ್ಮಿ ಹೆಬ್ಬಾಳ್ಕರ್ ಕೆಂಡಾಮಂಡಲವಾಗಿದ್ದು, ಇದರಿಂದ ತಮಗಾದ ಅವಮಾನ ತಡೆದುಕೊಳ್ಳಲಾಗದೇ ಕಣ್ಣಿರು ಹಾಕುತ್ತಾ ಪರಿಷತ್ತಿನಿಂದ ಹೊರಗೆ ಹೋಗಿದ್ದಾರೆ ಎಂದು ವರದಿಯಾಗಿತ್ತು. ಹೆಬ್ಬಾಳ್ಕರ್ ಮಾತಿಗೆ ಕಾಂಗ್ರೆಸ್ ಸದಸ್ಯರು ಧ್ವನಿ ಗೂಡಿಸಿದ್ದು, ಹತ್ತು ಬಾರಿ ಅಸಂವಿಧಾನಿಕ ಪದ ಬಳಸಿದ್ದಾರೆ ಎಂದು ಹೆಬ್ಬಾಳ್ಕರ್ ಆರೋಪ ಮಾಡಿದ್ದಾರೆ. ಈ ನಡುವೆ ಸಿಟಿ ರವಿ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ಅವರನ್ನು ಬಂಧಿಸಿದ್ದರು.
ಇದನ್ನೂ ಓದಿ: ಸಚಿವೆ ಲಕ್ಷ್ಮಿ ವಿರುದ್ಧ ಅಶ್ಲೀಲ ನಿಂದನೆ ಪ್ರಕರಣ – ಬಿಜೆಪಿಯ ಸಿ.ಟಿ. ರವಿಗೆ ಮಧ್ಯಂತರ ಜಾಮೀನು
ಸಚಿವೆ ಲಕ್ಷ್ಮಿ ವಿರುದ್ಧ ಅಶ್ಲೀಲ ನಿಂದನೆ ಪ್ರಕರಣ – ಬಿಜೆಪಿಯ ಸಿ.ಟಿ. ರವಿಗೆ ಮಧ್ಯಂತರ ಜಾಮೀನು


