ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಾ ಅವರಿಗೆ ಸಂಬಂಧಪಟ್ಟ ಪ್ರಕರಣದ ವಿಚಾರಣೆ ಅಕ್ಟೋಬರ್ 9ರಂದು ನಡೆಯಲಿದೆ. ಆದರೆ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲು ಸಿಬಿಐ, ದೆಹಲಿ ಹೈಕೋರ್ಟ್ ಬಳಿ ಸಮಯಾವಕಾಶ ಕೇಳಿದೆ.
ಸಿಬಿಐನಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ಒಪ್ಪಿಸುವಂತೆ ಡಿಸೆಂಬರ್ 30ರವರೆಗೆ ಹೈಕೋರ್ಟ್ ಸಮಯ ನೀಡಿತ್ತು. ಆದರೆ ತನಿಖೆಗೆ ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಸಿಬಿಐ ಮನವಿ ಮಾಡಿದೆ. ರಾಕೇಶ್ ಆಸ್ತಾನಾ 2017ರ ಡಿಸೆಂಬರ್ ನಿಂದ 2018ರ ಮಧ್ಯೆ ಐದು ಬಾರಿ ಲಂಚ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಾ ವಿರುದ್ಧ ಲಂಚ ಪಡೆದಿದ್ದಾರೆ ಎಂಬ ಆರೋಪ ಮತ್ತು ಕೇಸ್ ದಾಖಲಾಗಿತ್ತು. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮಾಂಸದ ವ್ಯಾಪಾರಿ ಮೊಯಿನ್ ಖುರೇಷಿಯೊಂದಿಗೆ ಪ್ರಕರಣವನ್ನು ಇತ್ಯರ್ಥಗೊಳಿಸಲು ರಾಕೇಶ್ ಆಸ್ತಾನಾ ಲಂಚ ಪಡೆದು, ಭ್ರಷ್ಟಾಚಾರವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ನಂತರ ಹೈದರಾಬಾದ್ ಮೂಲದ ಸತೀಶ್ ಬಾಬೂ ಎಂಬುವವರು ಸಲ್ಲಿಸಿದ ದೂರಿನ ಮೇರೆಗೆ ರಾಕೇಶ್ ಆಸ್ತಾನಾ, ದೇವೇಂದ್ರ, ಮನೋಜ್ ಪ್ರಸಾದ್, ಸೋಮೇಶ್ವರ್ ಪ್ರಸಾದ್ ಹಾಗೂ ಇತರರ ವಿರುದ್ಧ ಅಕ್ಟೋಬರ್ 15ರಂದು ಎಫ್ ಐಆರ್ ದಾಖಲಿಸಲಾಗಿತ್ತು.


