ಗಣಪತಿ ಮತ್ತು ದಸರಾ ಹಬ್ಬಕ್ಕೆಂದು ತುಮಕೂರು ನಗರದಾದ್ಯಂತ ರಸ್ತೆಗಳಲ್ಲಿ ಅಳವಡಿಸಿದ್ದ ಕೇಸರಿ ಬ್ಯಾನರ್ ಗಳ ಮತ್ತು ಬಂಟಿಂಗ್ ತೆರವುಗೊಳಿಸಲು ಹೋದ ಪೌರ ಕಾರ್ಮಿಕರೊಬ್ಬರು ಮೃತಪ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಹದಿನೈದನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಟೌನ್ ಹಾಲ್ ಸರ್ಕಲ್ ನಲ್ಲಿ ಇಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ಕೇಸರಿ ಬ್ಯಾನರ್ ಮತ್ತು ಬಂಟಿಂಗ್ ಬಿಚ್ಚುವಾಗ ಘಟನೆ ನಡೆದಿದೆ. ವಾರ್ಡ್ ನ ಹೆಲ್ತ್ ಇನ್ಸ್ ಪೆಕ್ಟರ್ ಮತ್ತು ಪರಿಸರ ಇಂಜಿನಿಯರ್ ಸೂಚನೆ ಮೇರೆಗೆ ಪೌರ ಕಾರ್ಮಿಕ ನರಸಿಂಹಯ್ಯ (34)ಗೆ ಬ್ಯಾನರ್ ಬಿಚ್ಚಿಸುವ ವೇಳೆ ವಿದ್ಯುತ್ ಪ್ರವಹಿಸಿ ದುರಂತ ನಡೆದಿದೆ.

ಗಮ್ ಬೂಟ್ ಮತ್ತು ಕೈಗ್ಲೌಸು ನೀಡದೆಯೇ ಕಬ್ಬಿಣದ ಸಲಾಕೆ ನೀಡಿ ಬ್ಯಾನರ್ ಬಿಚ್ಚುವಂತೆ ಹೇಳಲಾಗಿದೆ. ಹೀಗಾಗಿ ನರಸಿಂಹಯ್ಯ ಕಬ್ಬಿಣದ ಸಲಾಕೆಯಿಂದ ಬ್ಯಾನರ್ ಕೀಳುತ್ತಿದ್ದಂತೆಯೇ ಕಬ್ಬಿಣದ ರಾಡು ಹೈಟೆನ್ಷನ್ ವೈರ್ ಗೆ ತಗುಲಿ ವಿದ್ಯುತ್ ಪ್ರವಹಿಸಿ ಪೌರ ಕಾರ್ಮಿಕ ನರಸಿಂಹಯ್ಯ ರಸ್ತೆಗೆ ಬಿದ್ದಿದ್ದಾನೆ. ಅಲ್ಲಿಯೇ ಇದ್ದ ಇತರೆ ಪೌರ ಕಾರ್ಮಿಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗ ಮಧ್ಯೆಯೇ ನರಸಿಂಹಯ್ಯ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಬ್ಯಾನರ್ ಮತ್ತು ಬಂಟಿಂಗ್ ಕಟ್ಟಿದವರೇ ಅವುಗಳನ್ನು ತೆರವುಗೊಳಿಸಬೇಕು ಎಂಬ ನಿಯಮವಿದೆ. ಆದರೆ ಕೇಸರಿ ಬ್ಯಾನರ್ ಮತ್ತು ಕೇಸರಿ ಬಂಟಿಂಗ್ ಅಳವಡಿಸಲೂ ಸಹ ಅನುಮತಿ ಪಡೆದಿರಲಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಹೆಲ್ತ್ ಇನ್ಸ್ ಪೆಕ್ಟರ್ ಮತ್ತು ಪರಿಸರ ಇಂಜಿನಿಯರ್ ಕೇಸರಿ ಬ್ಯಾನರ್ ತೆರವುಗೊಳಿಸುವಂತೆ ನರಸಿಂಹಯ್ಯರಿಗೆ ಹೇಳಿದಾಗ ಈ ಘಟನೆ ನಡೆದಿದ್ದು ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ.
ಯಾವುದೇ ತರಬೇತಿ ನೀಡದೆ ಹಂದಿ ಹಿಡಿಯಲು, ಚರಂಡಿ ಮತ್ತು ಮ್ಯಾನ್ ಹೋಲ್ ಸ್ವಚ್ಛಗೊಳಿಸಲು, ಮರದ ಕೊಂಬೆಗಳನ್ನು ಕತ್ತರಿಸಲು ಮತ್ತು ವಿದ್ಯುತ್ ಕಂಬಕ್ಕೆ ಕಟ್ಟಿರುವ ಬ್ಯಾನರ್ ಗಳನ್ನು ತೆರವುಗೊಳಿಸಲು ಪೌರ ಕಾರ್ಮಿಕರನ್ನು ಬಳಸಿಕೊಳ್ಳುತ್ತಾರೆ ಎಂದು ಕಾರ್ಮಿಕ ಮುಖಂಡರು ಆರೋಪಿಸಿದ್ದಾರೆ. ಕಾಲಿಗೆ ಗಮ್ ಬೂಟ್ ಮತ್ತು ಕೈಗಳಿಗೆ ಕೈಗ್ಲೌಸು ನೀಡಬೇಕು. ಅದರೆ ಯಾವುದೇ ಸುರಕ್ಷತಾ ಸಲಕರಣೆ ನೀಡದೆ ಕೆಲಸ ಮಾಡಿಸುತ್ತಾರೆ. ಸುರಕ್ಷತಾ ಸಲಕರಣೆ ನೀಡುವಂತೆ ಎರಡು ಬಾರಿ ಮನವಿ ಮಾಡಿದ್ದರೂ ಗಮನಹರಿಸಿಲ್ಲ ಎಂದು ಕಾರ್ಮಿಕರು ದೂರಿದ್ದಾರೆ.

ನೇರ ಪಾವತಿಯಡಿ ನರಸಿಂಹಯ್ಯ ಪೌರ ಕಾರ್ಮಿಕರಾಗಿ ನೇಮಕಗೊಂಡಿದ್ದರು. ಅವರು ಮೃತಪಟ್ಟ ಹಿನ್ನೆಲೆ ಕೆಲಸವನ್ನು ಸ್ಥಗಿತಗೊಳಿಸಿದ ಎಲ್ಲಾ ಪೌರ ಕಾರ್ಮಿಕರು ಜಿಲ್ಲಾಸ್ಪತ್ರೆಗೆ ಆಗಮಿಸಿ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಶವ ಎತ್ತದಂತೆ ತಡೆದದ್ದರಿಂದ ಸ್ಥಳಕ್ಕೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ನಗರ ಪಾಲಿಕೆ ಹಂಗಾಮಿ ಆಯುಕ್ತರು, ಮೇಯರ್ ಮತ್ತು ಉಪಮೇಯರ್ ಸ್ಥಳಕ್ಕೆ ಬಂದು ಸಭೆ ನಡೆಸಿದರು. ಮೃತನ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡುವಂತೆ ಪೌರ ಕಾರ್ಮಿಕರು ಪಟ್ಟು ಹಿಡಿದರು. ಹೀಗಾಗಿ ಪಾಲಿಕೆ ಮತ್ತು ಜಿಲ್ಲಾಡಳಿತ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಭರವಸೆ ನೀಡಲಾಯಿತು.
ಮೃತನ ಪತ್ನಿಗೆ ನೇರ ಪಾವತಿಯಡಿ ಉದ್ಯೋಗ ನೀಡುವುದು ಮತ್ತು ದಿಬ್ಬೂರಿನಲ್ಲಿ ಒಂದು ಮನೆ ಕೊಡುವ ಭರವಸೆ ನೀಡಿದ ನಂತರ ಶವ ತೆಗೆಯಲು ಅವಕಾಶ ಮಾಡಿ ಕೊಡಲಾಯಿತು. ತುಮಕೂರಿನಲ್ಲಿ ಇದು ಎರಡನೇ ಘಟನೆಯಾಗಿದ್ದು ಈ ಬಗ್ಗೆ ಪಾಲಿಕೆಯ ಗಮನ ಸೆಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಐಟಿಯು ಪೌರ ಕಾರ್ಮಿಕರ ಸಂಘ ದೂರಿದೆ.



ಈ ನಮ್ಮ ಹೆಮ್ಮೆಯ ದೇಶದಲ್ಲಿ, ಬಡವರ ಜೀವಕ್ಕೆ ಬೆಲೆಯೇ ಇಲ್ಲ. ಇಂತಹ ಪರಿಸ್ಥಿತಿ ಕೊನೆಗೊಳ್ಳಬೇಕು.