Homeಚಳವಳಿಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ್ದ ಮಹಿಳಾ ಸಾಧಕಿಯರಿವರು... : ಭಾಗ -2

ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ್ದ ಮಹಿಳಾ ಸಾಧಕಿಯರಿವರು… : ಭಾಗ -2

- Advertisement -
- Advertisement -

ಕೃಪೆ: ಫೆಮಿನಿಸಂ ಇನ್‌ ಇಂಡಿಯಾ

ಅನುವಾದ: ನಿಖಿಲ್ ಕೋಲ್ಪೆ

ಭಾರತದ ಸಂವಿಧಾನವನ್ನು 1949ರ ನವಂಬರ್ 26ರಂದು ಚುನಾಯಿತ ಸಂವಿಧಾನ ಸಭೆಯು ಅಂಗೀಕರಿಸಿತು. ಅದು ಜನವರಿ 26, 1950ರಲ್ಲಿ ಜಾರಿಗೆ ಬಂತು. ಸಂವಿಧಾನ ಸಭೆಯಲ್ಲಿ ಒಟ್ಟು 389 ಸದಸ್ಯರಿದ್ದರು. ಇದರ ನೇತೃತ್ವ ವಹಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನದ ಶಿಲ್ಪಿ ಎಂದು ನೆನಪಿಸಿಕೊಳ್ಳುತ್ತೇವೆ. ಆದರೆ, ಸಂವಿಧಾನ ಸಭೆಯಲ್ಲಿದ್ದ ಆ ಕಾಲದ ಕೇವಲ 15 ಮಹಿಳೆಯರನ್ನು ನಾವು ಸಂಪೂರ್ಣ ಮರೆತುಬಿಟ್ಟಿದ್ದೇವೆ. ಅವರಲ್ಲಿ ಐವರ ಕಿರುಪರಿಚಯವನ್ನು ಈ ಮೊದಲ ಭಾಗದಲ್ಲಿ ನೀಡಲಾಗಿತ್ತು. ಈ ಎರಡನೆಯ ಭಾಗದಲ್ಲಿ ಇನ್ನೂ ಐವರು ಸಾಧಕಿಯರ ಪರಿಚಯ ನೀಡಲಾಗಿದೆ.

ಇದನ್ನೂ ಓದಿ: ನಾವು ಮರೆತಿರುವ ಮಹಿಳೆಯರಿವರು.. ಸಂವಿಧಾನ ರಚನಾ ಸಭೆಯಲ್ಲಿ ಮಹಿಳೆಯರ ಪಾತ್ರ. ಭಾಗ 1

6. ಕಮಲಾ ಚೌಧರಿ

ಕಮಲಾ ಚೌಧರಿಯವರು ಲಕ್ನೋದ ಸಿರಿವಂತ ಕುಟುಂಬದಲ್ಲಿ ಜನಿಸಿದ್ದರೂ, ತನ್ನ ಶಿಕ್ಷಣ ಮುಂದುವರಿಸುವುದು ಅವರಿಗೆ ಒಂದು ಸವಾಲೇ ಆಗಿತ್ತು. ಅದಕ್ಕಾಗಿ ಸಾಮ್ರಾಜ್ಯವಾದಿ ಸರಕಾರಕ್ಕೆ ನಿಷ್ಟವಾಗಿದ್ದ ತನ್ನ ಕುಟುಂಬದಿಂದ ದೂರ ಸರಿದು ಅವರು ರಾಷ್ಟ್ರೀಯವಾದಿ ಕಾಂಗ್ರೆಸ್‌ಗೆ ಸೇರಿದರು. ಅವರು ಗಾಂಧೀಜಿಯವರು 1930ರಲ್ಲಿ ಆರಂಭಿಸಿದ ನಾಗರಿಕ ಕಾನೂನುಭಂಗ ಚಳುವಳಿಯಲ್ಲಿ ಸಕ್ರಿಯ ಪಾಲುದಾರರಾಗಿದ್ದರು.

ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯ 54ನೇ ಅಧಿವೇಶನದಲ್ಲಿ ಉಪಾಧ್ಯಕ್ಷೆಯಾಗಿದ್ದರು. ಎಪ್ಪತ್ತರ ದಶಕದ ಕೊನೆಯ ಭಾಗದಲ್ಲಿ ಸಂಸತ್ ಸದಸ್ಯೆಯಾಗಿ ಚುನಾಯಿತರಾದರು. ಕಮಲಾ ಚೌಧರಿಯವರು ಪ್ರಖ್ಯಾತ ಕತೆಗಾರ್ತಿಯೂ ಹೌದು. ಅವರ ಕತೆಗಳು ಸಾಮಾನ್ಯವಾಗಿ ಮಹಿಳೆಯರ ಆಂತರಿಕ ಲೋಕವನ್ನು ಅಥವಾ ಆಧುನಿಕ ಭಾರತದ ಹುಟ್ಟನ್ನು ಚಿತ್ರಿಸುತ್ತಿದ್ದವು.

7. ಲೀಲಾ ರಾಯ್

ಲೀಲಾ ರಾಯ್ ಅವರು ಅಸ್ಸಾಂನ ಗೋಪಾಲಪುರದಲ್ಲಿ 1900ರ ಆಕ್ಟೋಬರ್‌ನಲ್ಲಿ ಜನಿಸಿದರು. ಅವರ ತಂದೆ ಉಪ ಮ್ಯಾಜಿಸ್ಟ್ರೇಟ್ (ಆ ಕಾಲದ ಜಿಲ್ಲಾಧಿಕಾರಿ) ಆಗಿದ್ದು ರಾಷ್ಟ್ರೀಯವಾದಿ ಚಳವಳಿಯ ಬಗ್ಗೆ ಸಹಾನುಭೂತಿ ಹೊಂದಿದ್ದರು. ಅವರು 1921ರಲ್ಲಿ ಬೆಥನಿ ಕಾಲೇಜಿನಿಂದ ಪದವಿ ಪಡೆದು ಅಖಿಲ ಭಾರತ ವುಮನ್ಸ್ ಸಫರೇಜ್ (ಮಹಿಳಾ ಮತದಾನ ಹಕ್ಕು) ಕಮಿಟಿಯ ಸಹಾಯಕ ಕಾರ್ಯದರ್ಶಿಯಾದರು ಮತ್ತು ಮಹಿಳೆಯರ ಹಕ್ಕುಗಳ ಬಗ್ಗೆ ಅನೇಕ ಹೋರಾಟಗಳನ್ನು ಸಂಘಟಿಸಿದರು.

1923ರಲ್ಲಿ ತನ್ನ ಗೆಳೆಯರ ಜೊತೆ ಸೇರಿ ‘ದೀಪಾಲಿ ಸಂಘ’ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಅದು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿತು. ಅವು ಸ್ವಾತಂತ್ರ್ಯ ಕುರಿತ ರಾಜಕೀಯ ಚರ್ಚಾ ಕೇಂದ್ರಗಳಾದವು ಮತ್ತು ಅದರಲ್ಲಿ ಅನೇಕ ಪ್ರಸಿದ್ಧ ನಾಯಕರು ಭಾಗವಹಿಸುತ್ತಿದ್ದರು. ನಂತರ 1926ರಲ್ಲಿ ಅವರು ಡಾಕ್ಕಾ ಮತ್ತು ಕೋಲ್ಕತ್ತಾದಲ್ಲಿ ‘ಛಾತ್ರಿ ಸಂಘ’ (ಛಾತ್ರಿ ಎಂದರೆ ಬಂಗಾಳಿ ಮತ್ತು ಅಸ್ಸಾಮಿಯಲ್ಲಿ ವಿದ್ಯಾರ್ಥಿನಿ) ಸ್ಥಾಪಿಸಿದರು. ನಂತರ ಅವರು ಉಪ್ಪಿನ ಸತ್ಯಾಗ್ರಹದಲ್ಲಿ ಸಕ್ರಿಯ ಪಾತ್ರ ವಹಿಸಿದ ‘ಡಾಕ್ಕಾ ಮಹಿಳಾ ಸತ್ಯಾಗ್ರಹ ಸಂಘ’ ಸ್ಥಾಪಿಸಿದರು. ನಂತರ ಅವರು ಕವಿ ರವೀಂದ್ರನಾಥ ಠಾಗೋರ್ ಅವರ ಆಶೀರ್ವಾದ ಪಡೆದಿದ್ದ ‘ಜಯಶ್ರೀ’ ಎಂಬ ಪತ್ರಿಕೆಯ ಸಂಪಾದಕಿಯಾದರು.

1937ರಲ್ಲಿ ಅವರು ಕಾಂಗ್ರೆಸ್ ಪಕ್ಷ ಸೇರಿ, ಮರುವರ್ಷ ಬಂಗಾಳ ಪ್ರಾಂತ್ಯದ ಕಾಂಗ್ರೆಸ್ ಮಹಿಳಾ ಸಂಘಟನೆ ಸ್ಥಾಪಿಸಿದರು. ಅವರು ಸುಭಾಷ್‌ಚಂದ್ರ ಬೋಸ್ ಅವರು ಸ್ಥಾಪಿಸಿದ್ದ ಮಹಿಳಾ ಉಪಸಮಿತಿಯ ಸದಸ್ಯೆಯಗಿದ್ದು, 1940ರಲ್ಲಿ ಬೋಸ್ ಅವರು ಜೈಲಿಗೆ ಹೋದಾಗ, ಅವರ ‘ಫಾರ್ವರ್ಡ್ ಬ್ಲಾಕ್’ ವಾರಪತ್ರಿಕೆಯ ಸಂಪಾದಕಿಯಾದರು. ಭಾರತವನ್ನು ಬಿಟ್ಟುಬಿಡುವ ಮೊದಲು ಬೋಸ್ ಅವರು ಪಕ್ಷದ ಎಲ್ಲಾ ಚಟುವಟಿಕೆಗಳ ಜವಾಬ್ದಾರಿಯನ್ನು ಲೀಲಾ ಮತ್ತವರ ಗಂಡನಿಗೆ ವಹಿಸಿದ್ದರು.

1947ರಲ್ಲಿ ಅವರು ಪಶ್ಚಿಮ ಬಂಗಾಳದಲ್ಲಿ ‘ಜಾತೀಯ ಮಹಿಳಾ ಸಂಗಾತಿ’ ಎಂಬ ಸಂಘಟನೆಯನ್ನು ಸ್ಥಾಪಿಸಿದರು. 1960ರಲ್ಲಿ ಫಾರ್ವರ್ಡ್ ಬ್ಲಾಕ್ (ನೇತಾಜಿ ಬಣ) ಮತ್ತು ಪ್ರಜಾ ಸೋಷಿಯಲಿಸ್ಟ್ ಪಾರ್ಟಿ (ಪಿಎಸ್ಪಿ) ವಿಲಯನಗೊಂಡು ಹೊಸ ಪಕ್ಷ ಸ್ಥಾಪಿಸಿದಾಗ ಅದರ ಅಧ್ಯಕ್ಷೆಯಾದರು. ಆದರೆ, ಅದರ ಕಾರ್ಯಶೈಲಿಯಿಂದ ಭ್ರಮನಿರಸನಗೊಂಡರು.

8. ಮಾಲತಿ ಚೌಧರಿ

ಮಾಲತಿ ಚೌಧರಿಯವರು 1904ರಲ್ಲಿ ಈಗ ಬಾಂಗ್ಲಾದೇಶ ಎನಿಸಿರುವ ಪೂರ್ವ ಬಂಗಾಳದಲ್ಲಿ ಒಂದು ಪ್ರತಿಷ್ಟಿತ ಕುಟುಂಬದಲ್ಲಿ ಹುಟ್ಟಿದರು. 1921ರಲ್ಲಿ ಹದಿನಾರರ ಹರೆಯದಲ್ಲಿ ಅವರನ್ನು ಶಿಕ್ಷಣಕ್ಕಾಗಿ ರವೀಂದ್ರನಾಥ ಠಾಗೋರ್ ಅವರ ಶಾಂತಿನಿಕೇತನಕ್ಕೆ ಕಳುಹಿಸಲಾಯಿತು. ಅಲ್ಲಿ ಅವರಿಗೆ ‘ವಿಶ್ವಭಾರತಿ’ಯಲ್ಲಿ ಪ್ರವೇಶ ಸಿಕ್ಕಿತು. ಅವರು ನಂತರದಲ್ಲಿ ಒಡಿಶಾದ ಮುಖ್ಯಮಂತ್ರಿಯಾದ ನಭಕೃಷ್ಣ ಚೌಧರಿಯವರನ್ನು ಮದುವೆಯಾಗಿ 1927ರಲ್ಲಿ ಒಡಿಶಾಗೆ ಹೋದರು. ಉಪ್ಪಿನ ಸತ್ಯಾಗ್ರಹದ ವೇಳೆ ಮಾಲತಿ ಚೌಧರಿ ಮತ್ತವರ ಪತಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಅವರಿಬ್ಬರೂ ಸತ್ಯಾಗ್ರಹಕ್ಕೆ ಪೂರಕ ವಾತಾವರಣ ನಿರ್ಮಿಸಲು ಸಾಮಾನ್ಯ ಜನರ ಜೊತೆ ಸಂಪರ್ಕ ಬೆಳೆಸಿ, ಶಿಕ್ಷಣ ನೀಡಿದರು.

ಚಿತ್ರಕೃಪೆ: ವುಮೆನ್‌ ಒಡಿಸ್ಸಾ

1933ರಲ್ಲಿ ಅವರು, ಪತಿಯೊಂದಿಗೆ ಸೇರಿ ‘ಉತ್ಕಲ ಕಾಂಗ್ರೆಸ್ ಸಮಾಜವಾದಿ ಕರ್ಮಿ ಸಂಘ’ ಎಂಬ ಸಂಘಟನೆ ಸ್ಥಾಪಿಸಿದರು. ಮುಂದೆ ಇದು ಅಖಿಲ ಭಾರತ ಕಾಂಗ್ರೆಸ್ ಸೋಷಿಯಲಿಸ್ಟ್ ಪಾರ್ಟಿಯ ಒರಿಸ್ಸಾ ಘಟಕ ಎಂದು ಕರೆಯಲ್ಪಟ್ಟಿತು. 1934ರಲ್ಲಿ ಅವರು ಗಾಂಧೀಜಿಯವರು ಒಡಿಶಾದಲ್ಲಿ ನಡೆಸಿದ ಪ್ರಖ್ಯಾತ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಅವರು ನಂತರ ‘ಬಾಜಿರಾವುತ್ ಛಾತ್ರಾವಾಸ್’ (ಬಾಜಿರಾವುತ್ ಅಂದರೆ ಹಿಂದುಳಿದ, ಬದಿಗೆ ಸರಿಸಲ್ಪಟ್ಟ, ಛಾತ್ರಾವಾಸ್ ಎಂದರೆ ವಿದ್ಯಾರ್ಥಿನಿಲಯ) ಎಂಬ ಸಂಸ್ಥೆ ಸೇರಿದಂತೆ ಕಡೆಗಣಿಸಲ್ಪಟ್ಟ ವರ್ಷಗಳಿಗೆ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದರು.  ಅವರು ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಜೈಲುಪಾಲಾದರು.

9. ಪೂರ್ಣಿಮಾ ಬ್ಯಾನರ್ಜಿ

ಪೂರ್ಣಿಮಾ ಬ್ಯಾನರ್ಜಿಯವರು ಅಲಹಾಬಾದ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿದ್ದರು. 1930 ಮತ್ತು 1940ರ ದಶಕಗಳಲ್ಲಿ ಉತ್ತರ ಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಕ್ರಾಂತಿಕಾರಿ ಮಹಿಳೆಯರ ಜಾಲದಲ್ಲಿ ಅವರೂ ಒಬ್ಬರಾಗಿದ್ದರು.

ಅವರು ಸತ್ಯಾಗ್ರಹ ಮತ್ತು ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಆಂದೋಲನಗಳಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾಗಿದ್ದರು. ಪೂರ್ಣಿಮಾ ಬ್ಯಾನರ್ಜಿ ಅವರಲ್ಲಿ ಎದ್ದು ಕಾಣುವ ವಿಷಯವೆಂದರೆ ಸಂವಿಧಾನ ರಚನಾ ಸಭೆಯಲ್ಲಿ ಅವರು ಮಾಡಿದ ಭಾಷಣಗಳು. ಅವರು ಅವುಗಳಲ್ಲಿ ಸಮಾಜವಾದಕ್ಕೆ ದೃಢವಾದ ನಿಷ್ಟೆ ವ್ಯಕ್ತಪಡಿಸಿದ್ದರು. ಅಲಹಾಬಾದ್ ನಗರ ಸಮಿತಿಯ ಸದಸ್ಯೆಯಾಗಿ ಅವರು ಕಾರ್ಮಿಕ ಮತ್ತು ರೈತ ಸಂಘಗಳನ್ನು ಸಂಘಟಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್ಚುಹೆಚ್ಚಾಗಿ ಗ್ರಾಮೀಣ ಜನತೆಯ ಭಾಗವಹಿಸುವಿಕೆಯನ್ನು ಪ್ರೇರೇಪಿಸುತ್ತಿದ್ದರು.

10. ರಾಜಕುಮಾರಿ ಅಮೃತಾ ಕೌರ್

ಅಮೃತಾ ಕೌರ್ ಅವರು 1889ರ ಫೆಬ್ರವರಿ 2ರಂದು ಲಕ್ನೋದಲ್ಲಿ ಜನಿಸಿದರು. ಅವರು ಭಾರತದ ಮೊದಲ ಆರೋಗ್ಯ ಮಂತ್ರಿಯಾಗಿದ್ದು, ಮುಂದಿನ ಹತ್ತು ವರ್ಷಗಳ ಕಾಲ ಅದೇ ಹುದ್ದೆಯಲ್ಲಿ ಮುಂದುವರಿದರು. ಕಪೂರ್ತಲಾದ ರಾಜನ ಮಗನಾದ ಹರ್‌ನಾಮ್ ಸಿಂಗ್ ಅವರ ಮಗಳಾದ ಅಮೃತಾ ಕೌರ್, ಇಂಗ್ಲೆಂಡ್‌ನ ಡೋರ್ಸೆಟ್‌ನಲ್ಲಿರುವ ಶೇರ್ಬೋರ್ನ್ ಹೆಣ್ಣುಮಕ್ಕಳ ಶಾಲೆಯಲ್ಲಿ ಕಲಿತವರು. ಆದರೆ, ಎಲ್ಲವನ್ನೂ ಬಿಟ್ಟು ಮಹಾತ್ಮಾ ಗಾಂಧೀಜಿಯವರ ಕಾರ್ಯದರ್ಶಿಯಾಗಿ 16 ವರ್ಷ ದುಡಿದರು.

ಚಿತ್ರಕೃಪೆ: ಇಂಡಿಯಾ ಟುಡೆ

ಜವಾಹರಲಾಲ್ ನೆಹರೂ ಸಂಪುಟದಲ್ಲಿ ಆರೋಗ್ಯ ಮಂತ್ರಿಯಾಗಿದ್ದು, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಯ ಸ್ಥಾಪಕರು ಇವರು ಮತ್ತು ಅದರ ಸ್ವಾಯತ್ತತೆಗಾಗಿ ಹೋರಾಡಿದವರು. ಇಂದು ಎಲ್ಲಾ ಪಕ್ಷಗಳ ರಾಜಕಾರಣಿಗಳು ಚಿಕಿತ್ಸೆ ಪಡೆಯುವ ಈ ಸಂಸ್ಥೆ ನೆಹರೂ ಏನು ಮಾಡಿದರು ಎಂದು ಕೇಳುವವರಿಗೆ ಅರೋಗ್ಯಕರ ಉತ್ತರವಾಗಿ ನಿಂತಿದೆ. ಮಹಿಳಾ ಶಿಕ್ಷಣ, ಆರೋಗ್ಯ ಮತ್ತು ಕ್ರೀಡೆಗಳಲ್ಲಿ ಅವರ ಭಾಗವಹಿಸುವಿಕೆ ಬಗ್ಗೆ ಕೌರ್ ಅತಿಯಾದ ಕಾಳಜಿ ಹೊಂದಿದ್ದರು. ಇಂಡಿಯನ್ ಟ್ಯೂಬರ್‌ಕ್ಯುಲೋಸಿಸ್ ಅಸೋಸಿಯೇಷನ್ ( ಕ್ಷಯರೋಗ ಸಂಸ್ಥೆ) ಮತ್ತು ಕೇಂದ್ರ ಕುಷ್ಠರೋಗ ಸಂಶೋಧನಾ ಸಂಸ್ಥೆಯನ್ನೂ ಅವರ ಅಧಿಕಾರಾವಧಿಯಲ್ಲಿಯೇ ಸ್ಥಾಪಿಸಲಾಯಿತು. ಇವೆರಡೂ ರೋಗಗಳು ಭಾರತೀಯರನ್ನು ಅತ್ಯಂತ ಹೆಚ್ಚು ಕೊಲ್ಲುವ ರೋಗಗಳಾಗಿದ್ದವು. ಅವರು ಲೀಗ್ ಆಫ್ ರೆಡ್‌ಕ್ರಾಸ್ ಸೊಸೈಟೀಸ್ ಉಪಾಧ್ಯಕ್ಷೆ ಮತ್ತು ಸೈಂಟ್ ಜಾನ್ಸ್ ಅಂಬ್ಯುಲೆನ್ಸ್ ಸೊಸೈಟಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷೆಯೂ ಆಗಿದ್ದರು. 1964ರಲ್ಲಿ ಅವರು ನಿಧನ ಹೊಂದಿದಾಗ ದಿ ನ್ಯೂಯಾರ್ಕ್ ಟೈಮ್ಸ್ ಅವರನ್ನು “ತನ್ನ ದೇಶದ ಸೇವೆಯಲ್ಲಿ ತೊಡಗಿದ್ದ ರಾಜಕುಮಾರಿ” ಎಂದು ಬಣ್ಣಿಸಿತ್ತು.

(ಮುಂದುವರೆಯುವುದು)

ಇದನ್ನೂ ಓದಿ: 20ನೆ ಶತಮಾನದ ಭಾರತದ ಮುಸ್ಲಿಂ ಮಹಿಳೆಯರ ಅನನ್ಯ ಸಾಧನೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...