Homeಮುಖಪುಟರಕ್ತದಾಹಿ ಟಿವಿ ಮಾಧ್ಯಮ: ಗಲಭೆ ಎಬ್ಬಿಸಿ ಲಾಭಕ್ಕೆ ಯತ್ನಿಸುತ್ತಿವೆಯೇ..!?

ರಕ್ತದಾಹಿ ಟಿವಿ ಮಾಧ್ಯಮ: ಗಲಭೆ ಎಬ್ಬಿಸಿ ಲಾಭಕ್ಕೆ ಯತ್ನಿಸುತ್ತಿವೆಯೇ..!?

ಈಗಾಗಲೇ ಹದಗೆಟ್ಟಿರುವ ಕೋಮು ಸೌಹಾರ್ದದ ಕೊಳದಲ್ಲಿ ಇನ್ನಷ್ಟು ರಾಡಿಯೆಬ್ಬಿಸಿ ಕದಡಿದ ನೀರಿನಲ್ಲಿ ಮೀನು ಹಿಡಿದು, ಲಾಭ ಮಾಡುವ ಯತ್ನದಲ್ಲಿರುವಂತಿದೆ. ಪ್ರೈಂ ಟೈಮ್ ಚರ್ಚೆಗಳು ಇದಕ್ಕೆ ಸಾಕ್ಷಿಯಾಗಿವೆ. 

- Advertisement -
ಅನುವಾದ: ನಿಖಿಲ್ ಕೋಲ್ಪೆ
ಮರು ನಿರೂಪಣೆ: ನಿಖಿಲ್ ಕೋಲ್ಪೆ
ಅಯೋಧ್ಯೆಯ ತೀರ್ಪು ಇನ್ನೇನು ಬರಲಿದೆ ಎನ್ನುವಾಗ ಟಿವಿ ಮಾಧ್ಯಮಗಳು ರಕ್ತದಾಹಿಗಳಂತೆ ವರ್ತಿಸುತ್ತಿವೆ. ಟಿವಿ ನಿರೂಪಕರು ಮತ್ತು ಅವರ ಪ್ರಾಯೋಜಕರು ಏಕಪಕ್ಷೀಯವಾಗಿ ವಿಷಯವನ್ನು ಅತಿಯಾಗಿ ರಂಜಿಸುತ್ತಾ, ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ಈಗಾಗಲೇ ಹದಗೆಟ್ಟಿರುವ ಕೋಮು ಸೌಹಾರ್ದದ ಕೊಳದಲ್ಲಿ ಇನ್ನಷ್ಟು ರಾಡಿಯೆಬ್ಬಿಸಿ ಕದಡಿದ ನೀರಿನಲ್ಲಿ ಮೀನು ಹಿಡಿದು, ಲಾಭ ಮಾಡುವ ಯತ್ನದಲ್ಲಿರುವಂತಿದೆ. ಪ್ರೈಂ ಟೈಮ್ ಚರ್ಚೆಗಳು ಇದಕ್ಕೆ ಸಾಕ್ಷಿಯಾಗಿವೆ.
ಅಯೋಧ್ಯೆಯ ವಿಷಯದಲ್ಲಿ ದಿನ ಬೆಳಗಾದರೆ ಒಂದು ಕೋಮಿನ ವ್ಯಕ್ತಿಯನ್ನು ಮತ್ತೊಂದು ಕೋಮಿನ ವ್ಯಕ್ತಿಯ ಎದುರು ಕೂರಿಸಿ, ಪರಸ್ಪರ ಕಚ್ಚಾಡುವಂತೆ ಪ್ರೇರೇಪಿಸುತ್ತಿವೆ. ರಾಜಕೀಯ ಸಂಘರ್ಷದ ಸೋಗಿನಲ್ಲಿ ಧಾರ್ಮಿಕ ಸಂಘರ್ಷವನ್ನು ಹುಟ್ಟು ಹಾಕಲಾಗುತ್ತಿದೆ. ಈ ಮೂಲಕ ಗಲಭೆಯೆಬ್ಬಿಸುವ ಪ್ರಯತ್ನ ನಡೆಯುತ್ತಿದೆ.
ಮಾಧ್ಯಮ, ಸಮಾಜದಲ್ಲಿ ಆಳವಾದ ಕಂದರಗಳನ್ನು ಹೇಗೆ ಉಂಟು ಮಾಡುತ್ತದೆ, ಹತ್ಯಾಕಾಂಡಗಳನ್ನು ಹೇಗೆ ಪ್ರಚೋದಿಸುತ್ತದೆ ಎಂಬುದಕ್ಕೆ ಜರ್ಮನಿಯಿಂದ ಹಿಡಿದು ರುವಾಂಡ ತನಕ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ವೀಕ್ಷಕರು ಇಂತಹ ಪ್ರಯತ್ನಗಳನ್ನು ಗುರುತಿಸಿ, ಎಚ್ಚರ-ಸಂಯಮ-ವಿವೇಚನೆಗೆ ಒತ್ತು ನೀಡಬೇಕಾದುದು ಅತ್ಯಗತ್ಯ.
ಇಲ್ಲಿ ರಕ್ತದಾಹಿ ಟಿವಿಗಳ ಇಂತಹ ಕೆಲವು ಕೃತ್ಯಗಳನ್ನು ಗುರುತಿಸಿ, ಸುದ್ದಿ ಪ್ರಸಾರ ಮಾನದಂಡ ಪ್ರಾಧಿಕಾರ (News Broadcasting Standards Authority)ವು ಅಯೋಧ್ಯೆಯ ತೀರ್ಪಿಗೆ ಸಂಬಂಧಿಸಿದಂತೆ ಹೊರಡಿಸಿರುವ ಸಲಹೆಗಳನ್ನು ಉಲ್ಲಂಘಿಸಿದವರನ್ನು ಹೆಸರಿಸಲಾಗಿದೆ. ಅಯೋಧ್ಯೆಯ ತೀರ್ಪಿನಿಂದಾಚೆಗೆ, ಮುಂದೆಯೂ ಮಾಧ್ಯಮ ನೀತಿಸಂಹಿತೆಯನ್ನು ಉಲ್ಲಂಘಿಸುವ, ಕೋಮುಭಾವನೆಯನ್ನು ಪ್ರಚೋದಿಸುವ, ಅಲ್ಪಸಂಖ್ಯಾತರನ್ನು ಗುರಿ ಮಾಡುವ ಮತ್ತು ದ್ವೇಷ ಕಾರುವ ಭಾಷಣಗಳನ್ನು ಪ್ರಸಾರ ಮಾಡುವವರನ್ನು ಹೆಸರಿಸುವ ಯೋಚನೆಯಿದೆ.
ಸುದ್ದಿ ಪ್ರಸಾರ ಮಾನದಂಡ ಪ್ರಾಧಿಕಾರದ ಸಲಹಾ ಸಂಹಿತೆಯ ಮೂಲ ಉದ್ದೇಶವೆಂದರೆ, ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ವಿವಾದದ ಸುದ್ದಿಗಳನ್ನು ದೇಶದ ಜಾತ್ಯತೀತ ಸ್ವರೂಪವನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಪ್ರಸಾರ ಮಾಡುವುದು ಮತ್ತು ಕೋಮುಭಾವನೆಯನ್ನು ಪ್ರಚೋದಿಸದಿರುವುದು.
ಸಲಹಾಸಂಹಿತೆಯಲ್ಲಿರುವ ಎರಡು ಪ್ರಮುಖ ಅಂಶಗಳನ್ನು ಪರಿಗಣಿಸಿ:
* ಪ್ರಚೋದನಕಾರಿ ಮತ್ತು ಬೆಂಕಿ ಹೊತ್ತಿಸುವ ಹಾಗೂ ಸಾರ್ವಜನಿಕರಲ್ಲಿ, ಸಮಾಜದಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡಬಹುದಾದ ಸುದ್ದಿ, ಚರ್ಚೆಗಳನ್ನು ದೂರವಿಡಬೇಕು.
* ಯಾವುದೇ ಕಾರ್ಯಕ್ರಮ/ ಸುದ್ದಿಯ ಪ್ರಸಾರವು ಯಾವುದೇ ಸಮುದಾಯದ ಪರ ಅಥವಾ ವಿರೋಧದ ಪೂರ್ವಾಗ್ರಹದ ಭಾವನೆ ಮೂಡಿಸಬಾರದು. ಇದಲ್ಲದೇ ಸುದ್ದಿ ಚಾನೆಲ್‌ಗಳು ಅಯೋಧ್ಯೆ ತೀರ್ಪನ್ನು ಊಹಿಸಬಾರದು ಮತ್ತು ಯಾವುದೇ ಪಕ್ಷವನ್ನು ವಹಿಸಬಾರದು.
ಹೀಗಿದ್ದರೂ, ಸುದ್ದಿ ಪ್ರಸಾರಕರ ಸಂಘ (News Broadcasters Association)ದ ಸದಸ್ಯರಾಗಿರುವ ಹೊರತಾಗಿಯೂ, ಈ ಸಲಹೆಗಳನ್ನು ಬಿಡುಗಡೆ ಮಾಡಿದ ದಿನವೇ ಹೆಚ್ಚಿನ ಎಲ್ಲಾ ಚಾನೆಲ್‌ಗಳು ರಾಜಾರೋಷವಾಗಿ ಅವುಗಳನ್ನು ಕಡೆಗಣಿಸಿದವು. ಬಹುತೇಕ ಎಲ್ಲಾ ಚಾನಲ್‌ಗಳು ತೀರ್ಪಿನ ಕುರಿತು ಊಹಾಪೋಹಗಳ ಬಗ್ಗೆ ಚರ್ಚೆ ನಡೆಸಿದವು.
ಉದಾಹರಣೆಗೆ ಝೀ ನ್ಯೂಸ್ ಸಂಪಾದಕ ಎನ್‌ಬಿಎಸ್‌ಎಯ ಸಲಹಾ ಸಂಹಿತೆಗಳನ್ನು ಓದಿ ಹೇಳುತ್ತಲೇ, ಅಯೋಧ್ಯೆಯ ಸಮಸ್ಯೆಗೆ ಉತ್ತಮ ಪರಿಹಾರ ಎಂದರೆ, ವಿವಾದಿತ ಸ್ಥಳದಲ್ಲಿ ಮಂದಿರ ಕಟ್ಟುವುದು ಎಂದೂ, ಮುಸ್ಲಿಮರು ಇಂತಹಾ ಒಂದು ಪ್ರಸ್ತಾಪವನ್ನು ಒಪ್ಪಬೇಕು ಎಂದು ಸಲಹೆ ನೀಡಿದರು.
ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಶಾಂತಿಗಾಗಿ ಕರೆ ಕೊಡುತ್ತಲೇ ’ಮುಸ್ಲಿಮರ ಪಕ್ಷ’ವನ್ನು ಪ್ರತಿನಿಧಿಸುವ ವಕೀಲರನ್ನು ಮತ್ತೆ ಮತ್ತೆ ಟೀಕಿಸಿ, ಅವರ ಕಾನೂನು ಮನವಿಗಳನ್ನು ’ವಿಚಲಿತಗೊಳಿಸುವ ಕಲೆ’ ಎಂದು ಕರೆದರು. ’ಮುಸ್ಲಿಮರ ಪಕ್ಷ’ದ ವಾದವು ’ವಿಳಂಬ ತಂತ್ರ’ ಎಂದು ಮಾತುಮಾತಿಗೆ ಹೇಳಿದರು.
‘ಇಂಡಿಯಾ ಟುಡೇ’ ವಿಚಾರಣೆಯ ಕೊನೆಯ ದಿನ ಅಯೋಧ್ಯೆಯಿಂದ ಅಲ್ಲಿನ ಪ್ರಸ್ತುತ ಸ್ಥಿತಿಯ ಬಗ್ಗೆ ವರದಿ ಮಾಡಿದಾಗ, ಅದರ ವರದಿಗಾರರು ತೀರ್ಪು ಏನಾಗಬಹುದೆಂದು ಊಹಿಸುವಂತೆ ಮತ್ತೆ ಮತ್ತೆ ಪ್ಯಾನಲಿಸ್ಟ್‌ಗಳನ್ನು ಕೇಳಿದರು. ಈ ಪ್ಯಾನಲಿಸ್ಟ್‌ಗಳಲ್ಲಿ ನಾಲ್ವರು ಸ್ವಯಂಘೋಷಿತ ಸಾಧುಗಳು, ಮುಸ್ಲಿಂ ಪೊಲಿಟಿಕಲ್ ಕೌನ್ಸಿಲ್ ಅಧ್ಯಕ್ಷ ತಸ್ಲೀಮ್ ರೆಹಮಾನಿ, ಕಾಂಗ್ರೆಸ್ ಬೆಂಬಲಿಗ ದೀಪಕ್ ಕುಮಾರ್ ಝಾ, ಇಸ್ಲಾಮಿಕ್ ಪಂಡಿತ ಎಂದು ಕರೆಯಲ್ಪಡುವ ಶೊಯೈಬ್ ಜಮಾಯ್ ಇದ್ದರು. ಪ್ಯಾನಲಿಸ್ಟ್‌ಗಳು ಮತ್ತೆ ಮತ್ತೆ ಪ್ರಚೋದನಕಾರಿ ಮಾತುಗಳನ್ನು ಆಡಿದರು. ಅವರಲ್ಲೊಬ್ಬ ಕಾಲ್‌ಪಟ್ಟಿ ಮಹಾರಾಜ್ ಹೇಳಿದ್ದು: ’ಬಾಬರ್ ಲೂಟಿಕೋರ… ಭಯೋತ್ಪಾದಕ… ಅವನ ಸಮರ್ಥನೆ ಮಾಡುವವರು ಭಯೋತ್ಪಾದಕರಾಗಿರಬಹುದು…’
ಎಲ್ಲಾ ಚಾನೆಲ್‌ಗಳ ಪೈಕಿ ‘ಟೈಮ್ಸ್ ನೌ’ ಸಾರಾಸಗಟು ಪ್ರಚೋದನಕಾರಿಯಾಗಿತ್ತು. ಅದು ವಿಚಾರಣೆಯ ಕೊನೆಯ ದಿನ ಎರಡು ಪ್ರೈಮ್ ಟೈಂ ಶೋಗಳನ್ನು ನಡೆಸಿತು. ರಾಹುಲ್ ಶಿವಶಂಕರ್ ನಡೆಸಿದ ಒಂದು ಕಾರ್ಯಕ್ರಮದ ಶೀರ್ಷಿಕೆಯೇ “ಪುಂಡತನ ತೋರಿದ ಮಸೀದಿ ವಕೀಲ; ಇದುವೇ ಲ್ಯುಟಿಯೆನ್ನರ ಉದಾರವಾದ?” (ಸರ್ ಎಡ್ವಿನ್ ಲ್ಯುಟಿಯೆನ್ ಹೊಸದಿಲ್ಲಿಯನ್ನು ವಿನ್ಯಾಸಗೊಳಿಸಿದ ವಾಸ್ತುಶಿಲ್ಪಿ. ಹೊಸದಿಲ್ಲಿಯ ಪ್ರತಿಷ್ಠಿತರನ್ನು ವ್ಯಂಗ್ಯವಾಗಿ ಲ್ಯುಟಿಯೆನ್ನರು ಎಂದು ಕರೆಯಲಾಗುತ್ತದೆ).
ಈ ಸಂದರ್ಭದಲ್ಲಿ ‘ಲೈವ್ ಲಾ’ ಕಾರ್ಯಕ್ರಮದಲ್ಲಿ ವಿಚಾರಣೆಯ ಕೊನೆಯ ದಿನದ ವರದಿಯ ಒಂದು ಭಾಗ ಇಲ್ಲಿದೆ: “ಕೊನೆಯ ದಿನದ ವಿಚಾರಣೆ ಕೆಲವು ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ರಾಮನ ಜನ್ಮಸ್ಥಾನವೆಂದು ಹಿಂದೂಗಳು ನಂಬಿರುವ ಅಂಶವನ್ನು ತೋರಿಸಲು ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಅವಲಂಬಿಸಿದ್ದ ನಿರ್ದಿಷ್ಟ ನಕ್ಷೆಯೊಂದನ್ನು ವಕೀಲ ಡಾ. ಧವನ್ ನ್ಯಾಯಾಲಯದಲ್ಲಿಯೇ ಹರಿದು ಹಾಕಿದರು. “ನೀವು ಅದನ್ನು ಇನ್ನಷ್ಟು ಹರಿಯಬಹುದು” ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಟಿಪ್ಪಣಿ ಮಾಡಿದರು.”
 
ವಾಸ್ತವಾಂಶ ಹೀಗಿದೆ: ಈ ವಿಷಯ ವ್ಯಾಪಕವಾಗಿ ವರದಿಯಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆದ ಮೇಲೆ ಡಾ. ಧವನ್, ‘ತನಗೆ ಆ ಕಾಗದಗಳನ್ನು (ನಕ್ಷೆ) ಎಸೆಯುವ ಉದ್ದೇಶವಿತ್ತು. ಆದರೆ, ಮುಖ್ಯ ನ್ಯಾಯಾಧೀಶರು ಅದನ್ನು ಹರಿಯಲು ಹೇಳಿದ ಮೇಲೆ ಹರಿದು ಹಾಕಿದೆ. ಅದು ನ್ಯಾಯಾಲಯದ ಅನುಮತಿಯಿಂದಲೇ ನಡೆದದ್ದು’ ಎಂದು ವಿವರಣೆ ನೀಡಿದರು. ಹಿರಿಯ ವಕೀಲರು ಆ ಕಾಗದಗಳನ್ನು ಹರಿಯಬಹುದು ಎಂದು ತಾನು ಹೇಳಿದ್ದು ನಿಜ ಎಂದು ಮುಖ್ಯ ನ್ಯಾಯಾಧೀಶರು ಒಪ್ಪಿಕೊಡಿದ್ದಾರೆ.
ವಿಚಾರಣೆಯನ್ನು ಆ ದಿನವೇ ಕೊನೆಗೊಳಿಸಲು ನ್ಯಾಯಾಲಯ ನಿರ್ಧರಿಸಿತ್ತು. ಆದುದರಿಂದ ಧವನ್ ಅವರು ಈ ನಕ್ಷೆಗಳನ್ನು ಮಂಡಿಸಲು ಬಯಸಿದಾಗ ಅನುಮತಿ ನಿರಾಕರಿಸಿದ ಮುಖ್ಯ ನ್ಯಾಯಾಧೀಶರು, ಅದು ಪ್ರಯೋಜನವಿಲ್ಲವೆಂಬ ಅರ್ಥದಲ್ಲಿ ನೀವದನ್ನು ಹರಿದು ಹಾಕಬಹುದು ಎಂದು ಕಿರಿಕಿರಿಯಿಂದ ಹೇಳಿದ್ದರು. ಅದಕ್ಕಿಂತಲೂ ಹೆಚ್ಚು ಕಿರಿಕಿರಿಗೆ ಒಳಗಾದ ಧವನ್ ನಿಜವಾಗಿಯೂ ಆ ಕಾಗದಗಳನ್ನು ಹರಿದೇ ಬಿಟ್ಟಿದ್ದರು.
ಈ ವಿದ್ಯಮಾನವನ್ನು ಸಂಪೂರ್ಣವಾಗಿ ತಿರುಚಿದ ಶಿವಶಂಕರ್, ಹಿಂದೂ ನಂಬಿಕೆಗೆ ನ್ಯಾಯಾಲಯದಲ್ಲಿ ಅಪಮಾನ ಮಾಡಲಾಗಿದೆ ಎಂದು ಬಣ್ಣಿಸಿದರು. “ನ್ಯಾಯಾಲಯ ಇಂದು ರಣಭೂಮಿಯಾಯಿತು. ಮಸೀದಿ ಕಡೆಯ ವಕೀಲರು, ಹೌದು! ದೈಹಿಕವಾಗಿ ರಾಮಜನ್ಮಭೂಮಿಯ 1810ರ ನಕ್ಷೆಯನ್ನು ಚಿಂದಿ ಮಾಡಿದರು. ಇದರೊಂದಿಗೆ ಮಸೀದಿ ಕಡೆಯ ವಕೀಲರು, ನಿಜವಾಗಿಯೂ ಹಿಂದೂ ಆಸ್ಥೆಯನ್ನು ಹರಿದು ಹಾಕಿದರು!”. ಯಾರೋ ತಯಾರಿಸಿದ ಒಂದು ಹಳೆಯ ನಕ್ಷೆ ಪವಿತ್ರ ಆಗುವುದು ಹೇಗೆ ಎಂದು ಆ ‘ಶಿವಶಂಕರ’ನೇ ಬಲ್ಲ!
ಆತ ಮುಂದುವರಿದು ಹೇಳಿದ್ದೇನೆಂದರೆ: ” ಬಹಳಷ್ಟು ಜನ ಇಂದು ಲ್ಯುಟಿಯೆನ್ ಲಾಬಿಯ ಮುಂಚೂಣಿ ವಕೀಲ ರಾಜೀವ್ ಧವನ್ ಅವರಲ್ಲಿ, ಕುರಾನನ್ನು ಹರಿಯುವ ಧೈರ್ಯವಿದೆಯೇ ಎಂದು ಕೇಳುತ್ತಿದ್ದಾರೆ” (ಎಲ್ಲಿಯ ಒಂದು ನಕ್ಷೆ? ಎಲ್ಲಿಯ ಕುರಾನ್? ಎಂತಹಾ ಅಸಂಬದ್ಧ ಹೋಲಿಕೆ!)
ಚರ್ಚೆಗೆ ಈ ಶಿವಶಂಕರ್ ಮೊದಲೇ ರೂಪುರೇಷೆ ಹಾಕಿದ್ದರು: “ಈ ಪ್ರಶ್ನೆಗೆ ತ್ವರಿತ ಪರಿಹಾರ ತಮ್ಮ ಆಸ್ಥೆ, ತಮ್ಮ ನಂಬಿಕೆ…ತಮ್ಮ ಭಾವನೆಗಳಿಗೆ (ಮತ್ತೆ ಮತ್ತೆ ಒತ್ತುನೀಡಲಾಗಿದೆ) ಅತ್ಯಂತ ಮುಖ್ಯ ಎಂದು ಹಿಂದೂಗಳು ಹೇಳುತ್ತಿರುವಾಗ, ನ್ಯಾಯವು ಇಷ್ಟು ವಿಳಂಬವಾಗುತ್ತಿರುವುದಕ್ಕೆ ಹಿಂದೂ ನಂಬಿಕೆಗಳ ಮೇಲಿನ ಇಂತಹಾ ಬಹಿರಂಗ ದ್ವೇಷವೇ ಕಾರಣವೆ?” (ಸ್ವತಃ ಧವನ್, ಅಥವಾ ನ್ಯಾಯಾಧೀಶರೂ ನಂಬಿಕೆಯಲ್ಲಿ ಹಿಂದೂಗಳಾಗಿರುವಾಗ ಈತ ಯಾವ ಹಿಂದೂಗಳ ಬಗ್ಗೆ ಮಾತನಾಡುತ್ತಿರುವುದು ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ!). ಒಟ್ಟಿನಲ್ಲಿ “ಮಸೀದಿ ಪಕ್ಷ” ಒಂದು “ಹಿಂಸಾತ್ಮಕ ಕೃತ್ಯ”ದಲ್ಲಿ ತೊಡಗಿತ್ತು ಎಂದು ಹೇಳುವ ಮೂಲಕ ಈ ಶಿವಶಂಕರ್ ತಿರುಚಿದ ವರದಿಯನ್ನು ನೀಡಿದರು.
ಅವರು ನ್ಯಾಯಾಲಯದಲ್ಲಿ ಒಂದು ಕಾಗದ ಹರಿಯುವುದಕ್ಕೂ, ಕುರಾನ್ ಹರಿಯುವುದಕ್ಕೂ ಒಂದು ಅಸಂಬದ್ಧ ಸಂಬಂಧ ಕಲ್ಪಿಸಿದರು. ನ್ಯಾಯಾಲಯದಲ್ಲಿ ಹರಿಯಲಾದ ನಕ್ಷೆಯು 2016ರ “ಅಯೋಧ್ಯಾ ರಿವಿಸಿಟೆಡ್” ಎಂಬ ಪುಸ್ತಕದಲ್ಲಿ ಪ್ರಕಟವಾದ ನಕ್ಷೆಯ ನಕಲಾಗಿತ್ತು. ಅದೇನೂ ಭಗವದ್ಗೀತೆಯಂತಹಾ ಯಾವುದೇ ಗ್ರಂಥವಾಗಿರಲಿಲ್ಲ. ಆದರೆ, ಧವನ್‌ರ ಕೃತ್ಯವನ್ನು ಕುರಾನ್ ಹರಿಯುವುದಕ್ಕೆ ಹೋಲಿಸುವುದರ ಮೂಲಕ ಶಿವಶಂಕರ್ ಉದ್ದೇಶಪೂರ್ವಕವಾಗಿ ಕೋಮುಭಾವನೆಯನ್ನು ಪ್ರಚೋದಿಸಿದ್ದಾರೆ ಮಾತ್ರವಲ್ಲ, ಧವನ್ ಅವರನ್ನೂ ಅಪಾಯಕ್ಕೆ ತಳ್ಳಿದ್ದಾರೆ.
‘ಟೈಮ್ಸ್ ನೌ’ನ ಎರಡನೇ ಕಾರ್ಯಕ್ರಮ ಇದಕ್ಕಿಂತ ಉತ್ತಮವಾಗಿರಲಿಲ್ಲ. ಕಾರ್ಯಕ್ರಮ ನಿರ್ವಹಿಸಿದ ನವಿಕಾ ಕುಮಾರ್, ಹೆಚ್ಚು ಕಡಿಮೆ ಘಾಟ್‌ಗಳಿಂದ ಕೂಡಿದ ಸರಯೂ ನದಿಯ ದಂಡೆಯಲ್ಲೇ ಕುಳಿತಿದ್ದರು. (ಅಂತಹಾ ಹಿನ್ನೆಲೆ ಹಾಕಲಾಗಿತ್ತು). ಶೀರ್ಷಿಕೆ: ರಾಮಮಂದಿರ ಕ್ಷಣಗಣನೆ. ಇದು ತೀರ್ಪು ರಾಮಮಂದಿರದ ಪರ ಬರುವುದು ಖಂಡಿತ ಎಂದು ಸೂಚಿಸುವಂತಿದೆ. ಕೆಳಗಿನ ಟಿಕ್ಕರ್‌ಗಳಲ್ಲಿ ಕೆಲವು ಈ ರೀತಿ ಪ್ರಚೋದನಕಾರಿಯಾಗಿದ್ದವು: “ನ್ಯಾಯ ವಿಳಂಬಿಸಿ, ಹಿಂದೂವನ್ನು ಅವಗಣಿಸಿ”, “ರೇಖೆ ದಾಟಿದ ಮಸೀದಿ ವಕೀಲ, ಸರ್ವೋಚ್ಛ ನ್ಯಾಯಾಲಯದಲ್ಲಿ ಪುಂಡುವರ್ತನೆ”.
ಒಂದು ಹಂತದಲ್ಲಿ ನವಿಕಾ, ವಿಶ್ವ ಹಿಂದೂ ಪರಿಷತ್‌ನ ವಿನೋದ್ ಬನ್ಸಾಲ್ ಮತ್ತು ಆಕೆ ಇಸ್ಲಾಮಿಕ್ ಪಂಡಿತ ಎಂದು ಪರಿಚಯಿಸಿದ ಮೌಲಾನಾ ರಶೀದಿ ಅವರ ವಾಗ್ವಾದದಲ್ಲಿ ಮಧ್ಯಪ್ರವೇಶ ಮಾಡಿದರು. ಹಿಂದೂ ಸಮಾಜವು ಯಾವುದೇ ಅಗೌರವವನ್ನು ಸಹಿಸದು ಎಂದು ಬನ್ಸಾಲ್, ರಶೀದಿಗೆ ಹೇಳಿದರು. ಅದಕ್ಕೆ ರಶೀದಿ ವಿಹಿಂಪ ತನ್ನ ಸುಳ್ಳುಗಳ ಕಾರಣದಿಂದ ಮುಗಿದುಹೋಗಿದೆ ಎಂದರು.
ವಾಗ್ವಾದದ ಸ್ಯಾಂಪಲ್:
ರಶೀದಿ: ಎಲ್ಲಿದೆ ವಿಶ್ವ ಹಿಂದೂ ಪರಿಷತ್? ವಿಶ್ವ ಹಿಂದೂ ಪರಿಷತ್ ಮುಗಿದು ಹೋಗಿದೆ. ನಿಮ್ಮ ಸುಳ್ಳುಗಳ ಕಾರಣದಿಂದ ಮುಳುಗಿ ಹೋಗಿದೆ.
ಬನ್ಸಾಲ್: ನಾನೊಂದು ಶಬ್ದ ಹೇಳಿದರೆ, ಬೆಂಕಿ ಹೊತ್ತಿಕೊಳ್ಳುತ್ತದೆ ಮೌಲಾನಾ.
 
ಇದು ಸ್ವಲ್ಪ ಸಮಯ ಮುಂದುವರಿದ ಬಳಿಕ ಮಧ್ಯಪ್ರವೇಶ ಮಾಡಿದ ನವಿಕಾ ಹೇಳಿದ್ದು: ಈ ಇಡೀ ಪ್ರಕರಣ ಸುಪ್ರೀಂಕೋರ್ಟಿನಲ್ಲಿದೆ. ನಾವದಕ್ಕೆ ಕಾನೂನು ಪರಿಹಾರ ಹುಡುಕುತ್ತಿದ್ದೇವೆ. ನಮಗೆ ಬೆಂಕಿ ಹಚ್ಚಬೇಕೆಂದಿದ್ದರೆ, ಈ ವಿಷಯದಲ್ಲಿ 100-150 ವರ್ಷಗಳ ಹಿಂದೆಯೇ ಬೆಂಕಿ ಹೊತ್ತಿಕೊಂಡಿರುತ್ತಿತ್ತು. (ಇಲ್ಲಿ ನಮಗೆ ಎಂದರೆ ಯಾರಿಗೆ? 100-150 ವರ್ಷಗಳ ಹಿಂದೆ ಈಕೆ ಇದ್ದರೇ? ಈ ಮೂಲಕ ತಾನು ಮಾನಸಿಕವಾಗಿ ಬೆಂಕಿ ಹಚ್ಚುವವರ ಪರ ಮತ್ತು ಈ ಚರ್ಚೆ ಪಕ್ಷಪಾತದ್ದು ಎಂದು ತೋರಿಸಿಕೊಟ್ಟರು.)
 
ನವಿಕಾ ಮತ್ತೆ ಮತ್ತೆ, ನ್ಯಾಯಾಲಯದಲ್ಲಿ ಕಾಗದ ಹರಿದದ್ದು ‘ಪ್ರಚೋದನೆ’ ಅಲ್ಲವೇ ಎಂದು ಕೇಳುತ್ತಿದ್ದರು. ಆದರೆ, ಯಾರಿಗೆ ಮತ್ತು ಯಾವುದಕ್ಕೆ ಪ್ರಚೋದನೆ ಎಂದು ಹೇಳಲೇ ಇಲ್ಲ.
ಇವರಿಬ್ಬರ ಕಾರ್ಯಕ್ರಮಗಳು ಪ್ರಚೋದನಕಾರಿಯಾಗಿದ್ದರೆ, ‘ಆಜ್‌ ತಕ್’ ತನ್ನ ಶೀರ್ಷಿಕೆಗಳು ಮತ್ತು ಕಾರ್ಯಕ್ರಮಗಳ ಪ್ರಚಾರದಲ್ಲಿ ಅವರಿಗೆ ಸ್ಪರ್ಧೆ ನೀಡಿತು. ಆಗಸ್ಟ್ 15ರಂದು ಅದೊಂದು ಹಿಂದಿ ಟ್ವೀಟ್ ಮಾಡಿತು. ಅದರ ಅನುವಾದ ಹೀಗಿದೆ: “ನಮ್ಮ ಮಾತೃಭೂಮಿ, ನಮ್ಮ ರಾಮ. ಮಸೀದಿಯ ಜನರು ಬಂದಿರುವುದು ಎಲ್ಲಿಂದ?” ಇದೇ ರೀತಿ ಬಿಲ್ಲು ಹಿಡಿದ ರಾಮನ ಚಿತ್ರ ಬಳಸಿ ಇನ್ನೂ ಕೆಲವು ಪ್ರಚೋದನಕಾರಿ ಹೇಳಿಕೆಗಳನ್ನು ಪ್ರಸಾರ ಮಾಡಿತು. ಇವೆರಡು ಚಾನೆಲ್‌ಗಳು ಸುದ್ದಿ ಪ್ರಸಾರಕರ ಸಂಘದ ಸದಸ್ಯರಾಗಿದ್ದರೂ ಎನ್‌ಬಿಎಸ್‌ಎಯ ಸಲಹೆಗಳನ್ನು ಗಾಳಿಗೆ ತೂರಲು ಯಾವ ಹಿಂಜರಿಕೆಯನ್ನೂ ತೋರಲಿಲ್ಲ. ಓದುಗರೂ, ಮಾಧ್ಯಮದ ಇಂತಹ ಕಿಡಿಗೇಡಿ ವರ್ತನೆಯ ಮೇಲೆ ಕಣ್ಣಿಡಬೇಕಾದ ಅಗತ್ಯವಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...