ಸಮಾಜವಾದಿ ಪಕ್ಷದ ಫೈಜಾಬಾದ್ ಸಂಸದ ಅವಧೇಶ್ ಪ್ರಸಾದ್ ಅವರನ್ನು ಲೋಕಸಭೆಯ ಉಪ ಸ್ಪೀಕರ್ ಮಾಡುವಂತೆ ತೃಣಮೂಲ ಕಾಂಗ್ರೆಸ್ ಭಾನುವಾರ ಕೇಂದ್ರವನ್ನು ಒತ್ತಾಯಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ದಲಿತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎಂದು ಇಂಡಿಯಾ ಬ್ಲಾಕ್ ನಾಯಕರು ವಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಅವಧೇಶ್ ಅವರು ಇತ್ತೀಚೆಗೆ ಅಯೋಧ್ಯೆ ದೇವಾಲಯ ಇರುವ ಫೈಜಾಬಾದ್ ಸಾಮಾನ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. 17ನೇ ಲೋಕಸಭೆಯ ಅವಧಿಯಲ್ಲಿ ಖಾಲಿ ಉಳಿದಿದ್ದ ಉಪಸಭಾಪತಿ ಹುದ್ದೆಗೆ ಈವರೆಗೆ ಕೇಂದ್ರವು ಚುನಾವಣಾ ವೇಳಾಪಟ್ಟಿ ಬಿಡುಗಡೆ ಮಾಡಿಲ್ಲ.
ಎನ್‌ಡಿಎ ಸರ್ಕಾರ ಪ್ರತಿಪಕ್ಷಗಳಿಗೆ ಉಪಸಭಾಪತಿ ಸ್ಥಾನ ನೀಡಲು ಒಪ್ಪದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸಿದ್ದವು. ಅವಧೇಶ್ ಅವರ ಹೆಸರಿನೊಂದಿಗೆ ಪ್ರತಿಪಕ್ಷಗಳು ಪ್ರಬಲ ರಾಜಕೀಯ ಮತ್ತು ಸಾಂಕೇತಿಕ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿವೆ.
ಫೈಜಾಬಾದ್‌ನಿಂದ ಚುನಾವಣೆಯಲ್ಲಿ ಗೆದ್ದ ದಲಿತ ಸಮುದಾಯದ ಅವಧೇಶ್ ಪ್ರಸಾದ್ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯ ಲಲ್ಲು ಸಿಂಗ್ ವಿರುದ್ಧ 50,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಅವರು ಜಯಗಳಿಸಿದ್ದು, ರಾಮಮಂದಿರ ಉದ್ಘಾಟನೆ ಮಾಡಿದರೂ ಆ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಪ್ರತಿಪಕ್ಷಗಳು ಬಿಜೆಪಿಯನ್ನು ಕೆಣಕಿದ್ದರಿಂದ ಸುದ್ದಿಯಾಯಿತು. ಅವರು ಲೋಕಸಭೆ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ಹೋರಾಡಿ ಗೆದ್ದ ಪ್ರತಿನಿಧಿಯಾಗಿದ್ದಾರೆ. ಇದು ಅವರಿಗೆ ಉಪ ಸ್ಪೀಕರ್ ಚುನಾವಣೆಯಲ್ಲಿ ಬಲವಾದ ಸಾಂಕೇತಿಕ ಅರ್ಹತೆಗಳನ್ನು ನೀಡುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.
ಡೆಪ್ಯೂಟಿ ಸ್ಪೀಕರ್‌ಗೆ ಸ್ಪೀಕರ್‌ಗೆ ಸಮಾನವಾದ ಶಾಸಕಾಂಗ ಅಧಿಕಾರವಿದೆ. ಸಾವು, ಅನಾರೋಗ್ಯ ಅಥವಾ ಇನ್ನಾವುದೇ ಕಾರಣದಿಂದ ಸ್ಪೀಕರ್ ಗೈರುಹಾಜರಾದಾಗ, ಡೆಪ್ಯೂಟಿ ಸ್ಪೀಕರ್ ಅವರು ಆಡಳಿತಾತ್ಮಕ ಅಧಿಕಾರವನ್ನು ತೆಗೆದುಕೊಳ್ಳುತ್ತಾರೆ. ಜವಾಬ್ದಾರಿಯುತ ಪ್ರಜಾಸತ್ತಾತ್ಮಕ ಸಂಸತ್ತನ್ನು ಖಚಿತಪಡಿಸಿಕೊಳ್ಳಲು ಆಡಳಿತ ಪಕ್ಷವನ್ನು ಹೊರತುಪಡಿಸಿ ಬೇರೆ ಪಕ್ಷದಿಂದ ಲೋಕಸಭೆಯ ಡೆಪ್ಯುಟಿ ಸ್ಪೀಕರ್ ಅನ್ನು ಆಯ್ಕೆ ಮಾಡುವುದು ಸಂಸದೀಯ ರೂಢಿಯಾಗಿದೆ.
ಇದನ್ನೂ ಓದಿ; ‘ಒಬ್ಬ ವ್ಯಕ್ತಿಯ ಮುಖವನ್ನು ನಾವು ನಂಬುವುದಿಲ್ಲ..’; ಶಿವಸೇನೆ ಪ್ರಸ್ತಾವ ತಿರಸ್ಕರಿಸಿದ ಶರದ್ ಪವಾರ್


